ಅನುವಾದಿತ ಕವಿತೆ
ದ್ವೇಷ
ಇಂಗ್ಲೀಷ್ ಮೂಲ: ಸ್ಟೀಫನ್ಸ್
ಕನ್ನಡಕ್ಕೆ: ವಿ.ಗಣೇಶ್
ಕಗ್ಗತ್ತಲ ಆ ಕರಾಳ ರಾತ್ರಿಯಲಿ ಬಂದು
ಎದುರಿಗೆ ನಿಂತ ಆ ನನ್ನ ಕಡುವೈರಿ
ದುರುದುರುಗುಟ್ಟಿ ನನ್ನ ನೋಡುತ್ತಿದ್ದಾಗ
ತುಟಿಯದುರುತ್ತಿತ್ತು, ತನು ನಡುಗುತ್ತಿತ್ತು.
ಹರಿದು ತಿನ್ನುವ ತೆರದಿ ವೈರಿಯ ನೋಡುತ
ದೂರ್ವಾಸನಂತೆ ಉರಿಗಣ್ಣು ಬಿಟ್ಟಾಗ
ನನ್ನ ಎರಡು ಕಣ್ಣುಗಳು ಕಾದ ಕಬ್ಬಿಣದಂತೆ
ಕೆಂಪಾಗಿ ಕೆಂಡ ಕಾರುತ್ತಾ ಉರಿಯುತ್ತಲಿದ್ದವು
ಶಾಂತಿಸಹನೆಯ ಮೂರ್ತಿಯಾದ ನನ್ನ ವೈರಿ
ನಸುನಗುತ “ಗೆಳೆಯಾ, ಏಕಿಷ್ಟು ಉಗ್ರನಾಗಿರುವೆ?
ಬಾಲ್ಯದಿಂದಲೂ ಕೂಡಿ ಕಳೆದ ಆ ಸಿಹಿ ದಿನಗಳನ್ನು
ಅದಾಗಲೇ ಮರೆತುಬಿಟ್ಟೆಯಾ?” ಎನ್ನ ಬೇಕೇ?
“ಏನೋ ನಡೆಯ ಬಾರದ ಕಹಿ ಘಟನೆ ನಡೆದು
ನಮ್ಮಿಬ್ಬರ ಹಾದಿಯಲ್ಲಿ ಒಡಕಾದ ಮಾತ್ರಕ್ಕೆ
ನಮ್ಮಿಬ್ಬರ ಪ್ರೀತಿಯ ತೊರೆ ಬತ್ತಿ ಬರಡಾಗಿ
ಬದುಕು ಇಲ್ಲಿಗೇ ಮುಗಿದು ಹೋಯಿತೆನ್ನುವೆಯಾ?”
“ನಿನ್ನ ಬತ್ತಳಿಕೆಯ ವಿಷಪೂರಿತ ಮೊನಚಾದ
ಬಾಣಗಳೆಲ್ಲಾ ಬರಿದಾದಾಗ, ‘ನಾವೇಕೆ ಹೀಗೆ
ದ್ವೇಷಿಸುತ್ತಿದ್ದೆವು?’ ಎಂಬುದಕ್ಕೆ ಉತ್ತರಿಸಬಲ್ಲೆಯಾ?
ಅರ್ಥವಿಲ್ಲದ ಈ ದ್ವೇಷಕ್ಕೆ ಕೊನೆಯಿಲ್ಲವೇ?” ಎಂದಾಗ
ಆ ವೈರಿಯ ಮುಂದೆ ತುಂಬಾ ಚಿಕ್ಕವನಾಗಿ
ಮಾತೇ ಹೊರಡದೆ ಮೂಕನಾಗಿಬಿಟ್ಟೆ
ತಗ್ಗಿಸಿದ ತಲೆಯನಾಗ ಮೇಲೆತ್ತಲಾರದೇ
ಅದಾಗಲೇ ತಣ್ಣಗಾಗಿ ಕುಸಿಯ ತೊಡಗಿದೆ
ಪ್ರೀತಿಯ ಸಿಹಿ ಕೋಪದ ಕಹಿಯ ಕರಗಿಸಿದಾಗ
ನಾಚಿ ನೀರಾಗುತ್ತ ಅವನತ್ತ ನೋಡಿದೆ
ನಮ್ಮಿಬ್ಬರ ದೃಷ್ಟಿ ಮತ್ತೆ ಕಲೆತಾಗ, ಬಾಲ್ಯದ
ನೆನಪು ಮನದಾಳದಿಂದ ಚಿಮ್ಮತೊಡಗಿತು
ಆಗ ನಾನೇನು ಹೇಳುವೆನೋ ಎಂದು ಕಾತರದಿ
ನನ್ನೆಡೆಗೆ ನೋಡುತ್ತಿದ್ದವನ ಎದುರಿಸಲಾಗದೇ
ಎಲ್ಲಿ ಹಿಡಿದು ಮುತ್ತಿಡುವೆನೋ ಏನೋ ಎಂದು
ಮುಖನೋಡಲಾಗದೇ ಹಾಗೇ ಒಳಕ್ಕೆ ಓಡಿದೆ.
ಬಾಡಿ ಮುದುಡಿದ ಗೆಳೆತನದ ಸಸಿ ಅಂದು
ಚಿಗುರೊಡೆದು ಹಸಿರಾಗಿ ಬೆಳೆಯತೊಡಗಿದಾಗ
ನನ್ನ ಕೋಪದ ಬಂಡೆ ಅದಾಗಲೇ ಕರಗಿ ನೀರಾಗಿ
ಚಿಗುರುತಿಹ ಆ ಸಸಿಗೆ ನೀರೆರೆಯತೊಡಗಿತ್ತು.
********************************