ಕಥೆ
ವಿಭ್ರಮ
ಮಧುರಾ ಕರ್ಣಮ್
“ಚರಿ, ಇಪ್ಪ ಎನ್ನ ಪಣ್ಣಣು?” ಎಂದು ದುಗುಡ ತುಂಬಿದ ಮುಖದಿಂದ ಕೇಳಿದಳು ಆಂಡಾಳು. “ಏನ್ಮಾಡೋದು? ಇದ್ದುದನ್ನು ಇದ್ದ ಹಾಗೇ ಪ್ರಾಮಾಣಿಕವಾಗಿ ನಿಜ ಹೇಳಿಬಿಡೋದು. ನಮ್ಮ ಮನಸ್ಸಿಗಾದ್ರೂ ನೆಮ್ಮದಿ ಇರುತ್ತೆ. ಎಷ್ಟು ದಿನಾಂತ ಸುಳ್ಳು ಪಳ್ಳು ಹೇಳಿ ಮುಚ್ಚಿಟ್ಕೊಳ್ಳೋಕಾಗುತ್ತೆ?” ಎಂದರು ವರದರಾಜ ಐಯ್ಯಂಗರ‍್ರು. “ಗುರುವಾಯೂರಪ್ಪಾ, ನಾನು ನಿಮ್ಮನ್ ಕೇಳ್ತಿದೀನಲ್ಲ, ನನಗೆ ಬುದ್ಧಿ ಇಲ್ಲ.” ಎಂದು ಕೂಗುತ್ತ ಒಳಗೋಡಿದಳು ಆಂಡಾಳು. ಅವಳಿಗೆ ಸಮಸ್ಯೆ ಎಲ್ಲರಿಗೂ ಗೊತ್ತಾಗುವದು ಬೇಡವಾಗಿತ್ತು. ಹಾವೂ ಸಾಯದಂತೆ ಕೋಲೂ ಮುರಿಯದಂತೆ ಮಧ್ಯದ ದಾರಿ ಹುಡುಕಬೇಕಾಗಿತ್ತು. ಐಯ್ಯಂಗಾರ‍್ರದೋ..ನೇರ ನಡೆ. ಸುಳ್ಳು ಅವರ ಜಾಯಮಾನದಲ್ಲೇ ಇಲ್ಲ.
ಅವರ ಮನೆಯಲ್ಲಿ ಈ ವಾಗ್ಯುದ್ಧ ಆರಂಭವಾಗಿ ತಿಂಗಳುಗಳೇ ಕಳೆದಿದ್ದವು. ಪರಿಹಾರ ಕಂಡಿರಲಿಲ್ಲ. ಕಾಣುವುದು ಅಷ್ಟು ಸುಲಭವೂ ಆಗಿರಲಿಲ್ಲ. ಇಷ್ಟು ದಿನ ನಿತ್ಯವೂ ಬಿಡದೆ ಗುರುವಾಯೂರಪ್ಪನ ದೇವಸ್ಥಾನಕ್ಕೆ ಹೋಗಿ ತಲೆ ಬಾಗದೇ ತುತ್ತು ಬಾಯಿಗಿಟ್ಟವರಲ್ಲ. ಅದರ ಫಲವೋ ಎಂಬಂತೆ ಒಬ್ಬನೇ ಮಗ ವೇಲು ಎಲ್ಲಾ ಪರೀಕ್ಷೆಗಳನ್ನೂ ಉತ್ತಮ ಅಂಕಗಳೊಂದಿಗೆ ಪಾಸು ಮಾಡಿದ್ದ. ಎಂಜಿನಿಯರಿಂಗ್ ಮುಗಿದು ಕ್ಯಾಂಪಸ್ ಸೆಲೆಕ್ಷನ್ ಕೂಡ ಆಗಿತ್ತು. ತಂದೆ ತಾಯಿಗಳ ಮುಖದಲ್ಲಿ ಸಂತೋಷ ಉಕ್ಕಿ ಹರಿದಿತ್ತು. ಆದರೆ ವೇಲು ಮುಂದೆ ಓದಲು ಉತ್ಸುಕನಾಗಿದ್ದ. ಜಿ.ಆರ್.ಇ. ಟೋಫೆಲ್ ಪರೀಕ್ಷೆಯಲ್ಲೂ ಒಳ್ಳೆ ಅಂಕಗಳನ್ನು ಗಳಿಸಿದ. ತಂದೆ ತಾಯಿಗಳ ಕಾಲಿಗೆ ಬಿದ್ದು ಸ್ಕಾಲರ್‌ಶಿಪ್‌ನೊಂದಿಗೆ ಎಜುಕೇಷನ್ ಲೋನೂ ತೆಗೆದುಕೊಂಡು ಅಮೆರಿಕಕ್ಕೆ ರವಾನೆಯಾದ. ಅಲ್ಲಿಂದಲೇ ಆಂಡಾಳುವಿಗೆ ವಿಭ್ರಮ ಆರಂಭವಾಗಿದ್ದು. ಸಂತಸ, ದು:ಖ ಎರಡೂ ಮೇಳೈಸಿದ ಸ್ಥಿತಿ. ಮಗ ಯಶಸ್ವಿಯಾಗಿ ಮುಂದುವರೆಯುತ್ತಿದ್ದಾನೆಂದು ಆನಂದಿಸಬೇಕೆಂದುಕೊಂಡವಳಿಗೆ ಮಗನನ್ನು ಅಗಲಿ ಇರಬೇಕೆನ್ನುವ ದು:ಖ. ಆದರೆ ಅದು ತಾತ್ಕಾಲಿಕವಲ್ಲವೇ? ತಾನೇ ಸಂತೈಸಿಕೊಂಡಳು.
ವೇಲು ಎಂ.ಎಸ್. ಮುಗಿಸಿ ಅಲ್ಲೇ ಕೆಲಸಕ್ಕೆ ಸೇರಿದ. ಸಾಫ್ಟವೇರ್ ಉದ್ಯೋಗ. ಬದುಕು ಹಾರ್ಡೇ. ಎಜುಕೇಷನ್ ಲೋನ್ ತೀರಿಸಬೇಡವೇ? ಆದರೆ ಕೈತುಂಬ ಸಂಬಳ. ‘ಮೂರ‍್ನಾಲ್ಕು ವರ್ಷಗಳಲ್ಲಿ ಎಲ್ಲ ತೀರಿಸಿ ಬಂದ್ಬಿಡ್ತೀನಿ’ ಎಂದು ಭರವಸೆ ನೀಡಿದ. ಎರಡು ದಿನಕ್ಕೊಂದು ಬಾರಿಯಾದರೂ ಫೋನು. ಮಗನೊಡನೆ ಮಾತು, ಹರಟೆ, ನಗು ಎಲ್ಲವೂ ಸರಿಯಾಗಿತ್ತು. ತಂದೆ ತಾಯಿಗಳಿಬ್ಬರೂ ಅಮೆರಿಕಕ್ಕೆ ಬರಬೇಕೆಂದು ಅವನ ಆಸೆ .‘ನಮ್ಮ ಆಚಾರ,ವಿಚಾರಗಳು ಅಲ್ಲಿ ನಡೆಯುವದಿಲ್ಲ. ಬೇಡ.’ ಎಂಬ ಮಾತು ನಡೆಯಲಿಲ್ಲ. ಅವನ ಒತ್ತಾಯಕ್ಕೆ ಮಣಿದು ಹೋಗಿ ಆರು ತಿಂಗಳಿದ್ದು ಅವನಿಗೆ ಪೊಂಗಲ್, ಪುಳಿಯೋಗರೆ ಮಾಡಿ ಬಡಿಸಿ, ಮಾಡಲು ಕಲಿಸಿ ನಯಾಗರ ಜಲಪಾತ ನೋಡಿಕೊಂಡು ಬಂದದ್ದಾಯಿತು. ಬರುವಾಗ ಆಂಡಾಳು ಮೆಲ್ಲನೆ “ಒಂದು ತಿಂಗಳಾದ್ರೂ ರಜ ತೆಗೆದುಕೊಂಡು ಬಾ. ಹುಡುಗಿ ನೋಡಿಟ್ಟಿರ್ತೀನಿ. ಬಂದು ನೋಡಿ ನಿನಗಿಷ್ಟವಾದ ಹುಡುಗೀನ ಮದುವೆ ಮಾಡ್ಕೊಂಡು ಹೋಗು. ಅಂದ್ರೆ ನಮಗೆ ನಿಶ್ಚಿಂತೆ. ನಿನಗೆಷ್ಟು ದಿನ ಬೇಕೋ ಇಲ್ಲಿದ್ದುಕೊಂಡು ಸಾಕೆನಿಸಿದಾಗ ಬಾ”ಎಂದಳು.
ಅಷ್ಟೇ ಮೆತ್ತಗಿನ ಧ್ವನಿಯಲ್ಲಿ ಮಗರಾಯ “ಮಮ್ಮೀ, ಮದುವೇಂದ್ರೆ…ಇಲ್ಲಿ ನಾನೊಂದು ಹುಡುಗೀನ ಇಷ್ಟಪಟ್ಟಿದೀನಿ. ನೀನು ಬೇಜಾರು ಮಾಡ್ಕೋತೀಯಾಂತ ಮೊದಲೇ ಹೇಳಿರಲಿಲ್ಲ. ಮಿನಿ ನನ್ನ ಜೊತೆ ನಮ್ಮಾಫೀಸಿನಲ್ಲೇ ಕೆಲಸ ಮಾಡುತ್ತಾಳೆ. ದೆಹಲಿಯವಳು. ತುಂಬಾ ಜಾಣೆ. ನಮ್ಮಿಬ್ಬರ ಐಡಿಯಾಲಜಿ ಒಂದೇ ರೀತಿ ಇದೆ. ಆದರೆ ಮದುವೆ ಬಗ್ಗೆ ನಾವಿನ್ನೂ ಯೋಚಿಸಿಲ್ಲ. ಸದ್ಯಕ್ಕೆ ಒಳ್ಳೆ ಫ್ರೆಂಡ್ಸ ಅಷ್ಟೇ.” ಎಂದು ಶಾಕ್ ನೀಡಿದ್ದ.
ಆಂಡಾಳು ಒಂದು ಕ್ಷಣ ಗರ ಬಡಿದವರಂತೆ ನಿಂತಿದ್ದವಳು ಸಾವರಿಸಿಕೊಂಡು ಕಣ್ತುಂಬಿಕೊಂಡಳು. “ಅವಳು ನಿನಗಷ್ಟೇ ಹೆಂಡತಿಯಾಗ್ತಾಳೇ ಹೊರತು ನಮಗೆ ಸೊಸೆಯಾಗ್ತಾಳೋ ಇಲ್ಲವೋ ಗೊತ್ತಿಲ್ಲ. ಎಷ್ಟೆಲ್ಲಾ ಆಸೆ ಇಟ್ಕೊಂಡಿದ್ದೆ. ಏನೆಲ್ಲಾ ಕನಸು ಕಟ್ಟಿದ್ದೆ? ಒಳ್ಳೇ ಐಯ್ಯಂಗಾರ್ ಹುಡುಗೀನೇ ತಂದು ಭರ್ಜರಿಯಾಗಿ ಮದುವೆ ಮಾಡಬೇಕು. ಗುರುವಾಯೂರಪ್ಪನ ದೇವಸ್ಥಾನದಲ್ಲಿ ಒಂಬತ್ತು ಮೊಳದ ಮಡಸಾಲು ಸೀರೆ ಉಡಿಸಿ, ನಿಮ್ಮಿಬ್ಬರ ಕೈಲಿ ಪೂಜೆ ಮಾಡಿಸಿ.. ಎಲ್ಲಾ ಅವನಿಚ್ಛೆ. ಈಗಲೂ ಕಾಲ ಮಿಂಚಿಲ್ಲ. ನಿನಗಿಷ್ಟವಾಗೋ ಐಯ್ಯಂಗಾರ‍್ರ ಹುಡುಗೀನೇ ಮದುವೆಯಾಗು. ನಮ್ಮ ಬಗ್ಗೆಯೂ ಯೋಚಿಸು ಕಣ್ಣಾ.” ಎಂದು ಹೇಳಲಷ್ಟೇ ಸಾಧ್ಯವಾಗಿತ್ತು. ದಂಪತಿಗಳಿಬ್ಬರೂ ವಿಷಣ್ಣವದನರಾಗೇ ತಿರುಗಿ ಬಂದಿದ್ದರು.
ಆಕಾಶವೇ ತಲೆಮೇಲೆ ಬಿದ್ದಂತೆ ಕುಳಿತ ಹೆಂಡತಿಯನ್ನು ಐಯ್ಯಂಗಾರ‍್ರೇ ಸಮಾಧಾನಿಸಬೇಕಾಗಿ ಬಂತು. “ಏನೋ ಹರಯದ ಆಕರ್ಷಣೆ ಕಣೆ. ಈ ವಯಸ್ಸಿನಲ್ಲಿ ಇವೆಲ್ಲ ಸಹಜ ತಾನೇ. ಏನು ಬರುತ್ತೋ ಅದನ್ನ ಎದುರಿಸೋ ಧೈರ‍್ಯ, ಶಕ್ತಿ ಕೊಡೂಂತ ಗುರುವಾಯೂರಪ್ಪನಲ್ಲಿ ಬೇಡಿಕೊಳ್ಳೋಣ.” ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿದ್ದರು. ಆಂಡಾಳು “ಇವನು ಜಾಣನಾಗಿರದೇ ಇದ್ರೇನೆ ಚೆನ್ನಾಗಿತ್ತು. ಏನೋ ಒದ್ಕೊಂಡು ಇಲ್ಲೇ ಕೆಲಸ ಮಾಡೋನು. ಒಳ್ಳೇ ಹುಡುಗಿ ನೋಡಿ ಮದುವೆ ಮಾಡಿ ಮೊಮ್ಮಕ್ಕಳನ್ನಾಡಿಸ್ಕೊಂಡು ಹಾಯಾಗಿ ಇರ್ತಾ ಇದ್ವಿ. ಇವನು ಸ್ಕಾಲರ್ ಆಗಿದ್ದೇ ನಮಗೆ ಕಷ್ಟವಾಯ್ತಾಂತ?” ಎಳೆಎಳೆಯಾಗಿ ನೋವು ಬಿಡಿಸಿಟ್ಟರು. ಐಯ್ಯಂಗರ‍್ರು “ಛೀ, ಬಿಡ್ತು ಅನ್ನು. ಅವರ ಏಳಿಗೆ ಮುಖ್ಯ ತಾನೇ. ನಮ್ಮ ಹಣೇಲಿ ಏನು ಬರ್ದಿದಾನೋ ಗುರುವಾಯೂರಪ್ಪ? ಸದ್ಯ, ಎಲ್ಲಾ ಚಿಂತೇನೂ ಅವನ ಮೇಲೆ ಹಾಕಿ ನಿಶ್ಚಿಂತರಾಗಿದ್ದು ಬಿಡೋಣ.” ಎಂದು ಸಂತೈಸಿದರು.
ದಿನಗಳು ಓಡುತ್ತಿದ್ದವು. ಪೊಂಗಲ್, ಆಡಿ ಶುಕ್ರವಾರ, ಜನ್ಮಾಷ್ಟಮಿ.. ಹೀಗೆ ಹಬ್ಬಗಳು, ಪೂಜೆಗಳು. ಮಡಸಾಲು ಸೀರೆಯುಟ್ಟು ಉದ್ದ ತಿಲಕವಿಟ್ಟ ಆಂಡಾಳು, ನಾಮ ತೀಡಿ ಮುಗುಟ ಉಟ್ಟ ಐಯ್ಯಂಗರ‍್ರ ಜೊತೆಯಲ್ಲಿ ನಿತ್ಯ ಬೆಳಿಗ್ಗೆ ಗುರುವಾಯೂರಪ್ಪನ ದೇವಸ್ಥಾನಕ್ಕೆ ಹೋಗುವದನ್ನು ತಪ್ಪಿಸಲಿಲ್ಲ. ಮುತ್ದೈದೆ ಸಾವನ್ನೇ ಬಯಸುತ್ತ ಎದುರಿಗಿದ್ದ ಪಾರಿಜಾತ ವೃಕ್ಷದ ಹೂಗಳನ್ನಾಯ್ದು ನಿತ್ಯ ಸ್ವಾಮಿಗಿಟ್ಟು ಬೇಡಿಕೊಳ್ಳುವದನ್ನು ಮರೆಯಲಿಲ್ಲ. ಮೇಲುಕೋಟೆಯ ವೈರಮುಡಿ ಉತ್ಸವಕ್ಕೆ ಹೋಗಿ ತಲೆಬಾಗದೇ ಇರಲಿಲ್ಲ. ವೇಲು ಕೂಡ ವಾರಕ್ಕೆರಡು ಬಾರಿಯಾದರೂ ಫೋನು, ಚಾಟ್ ಮಾಡುವದನ್ನು ತಪ್ಪಿಸಲಿಲ್ಲ. ಗುರುವಾಯೂರಪ್ಪನೂ ಇವರನ್ನು ಕಡೆಗಣಿಸಲಿಲ್ಲ.
ಸಮಸ್ಯೆ ಚಿಕ್ಕದಾಗಿ ಕಾಣುವದು ಯಾವಾಗ? ಮೊದಲಿದ್ದ ಸಮಸ್ಯೆಗಿಂತ ದೊಡ್ಡದೇ ಎದುರಾದಾಗ. ಇಲ್ಲೂ ಹಾಗೇ ಆಯಿತು. ಒನ್ ಫೈನ್ ಡೇ ವೇಲು ತಾನು ಮಿನಿಯೊಂದಿಗೆ ‘ಲಿವಿಂಗ್ ಟುಗೆದರ್’ ಸಂಬಂಧ ಹೊಂದಿದ್ದೇನೆಂದು ಹೇಳಿದ. ದಂಪತಿಗಳಿಗೆ ಮತ್ತೊಂದು ಶಾಕ್. ‘ಕಲ್ಲಿಗಿಂತ ಇಟ್ಟಿಗೆಯೇ ಮೆದು’ ಎಂಬಂತೆ ಮದುವೆ ಇಲ್ಲದೇ ಒಟ್ಟಿಗೆ ಬಾಳುವುದಕ್ಕಿಂತ ‘ಮದುವೆಯಾದರೇ ಚೆನ್ನ’ ಎನಿಸಲಾರಂಭಿಸಿತು. ಇವರಿಗೆ ‘ಲಿವಿಂಗ್ ಟುಗೆದರ್’ ನ ಪರಿಕಲ್ಪನೆಯೇ ಭಯಾನಕ. ಭಾರತದಲ್ಲೂ ಆರಂಭವಾಗಿದ್ದರೂ ಚಿತ್ರತಾರೆಯರೂ, ಸೆಲಿಬ್ರಿಟಿಗಳಲ್ಲೇ ಹೆಚ್ಚಾಗಿತ್ತು. ಸಾಮಾನ್ಯರ ಮಟ್ಟಕ್ಕಿನ್ನೂ ದೂರವೇ. ಮಗನ ಜೊತೆ ಚರ್ಚೆ ಮಾಡಿ “ಮದುವೆ ಮಾಡಿಕೊಂಡು ಬಿಡಿ. ಇಲ್ಲವೇ ಇಲ್ಲಿ ಬನ್ನಿ. ನಾವೇ ಮಾಡುತ್ತೇವೆ.” ಎಂಬ ಆಯ್ಕೆಗಳನ್ನೂ ಕೊಟ್ಟರು.
ವೇಲು ಸ್ಪಷ್ಟವಾಗಿ “ನಿನಗೆ ಇಲ್ಲಿನ ಕಾನೂನು ಗೊತ್ತಿಲ್ಲ. ಮದುವೆ ಎಂಬ ಬಂಧನದ ನಂತರ ಸಂಬಂಧ ಸರಿಹೋಗದೇ ವಿಚ್ಛೇದನವಾದರೆ ಕಾಂಪನ್ಸೇಷನ್ ಕೊಡಲು ಜೀವಮಾನದಲ್ಲಿ ಕೂಡಿಟ್ಟದ್ದನ್ನೆಲ್ಲ ಸುರಿಯಬೇಕಾಗುತ್ತದೆ. ಬೀದಿಗೆ ಬಂದು ನಿಲ್ಲುತ್ತೇವೆ. ಆ ವಿಷಯದಲ್ಲಿ ಕಾನೂನು ತುಂಬ ಕಠಿಣ. ಅದಕ್ಕೆ ಇಲ್ಲಿ ಮದುವೆ ಇಲ್ಲದೇ ಒಟ್ಟಿಗೆ ವಾಸಿಸುವದು. ಅವಳಿಗೆ ಬೇಡವಾದರೆ ಅವಳು ‘ಬಾಯ್’ ಹೇಳಿ ಹೊರಡಬಹುದು. ನನಗೆ ಬೇಡವಾದರೆ ನಾನು ದೂರ ಹೋಗಬಹುದು. ಯಾವುದೇ ನಿರ್ಬಂಧವಿಲ್ಲ. ಈಗ ನನಗೆ ಕಂಪನಿ ಹೆಚ್ಚಿನ ಹೊಣೆ ಹೊರಿಸಿದೆ. ವಿಶೇಷ ತರಬೇತಿಗಾಗಿ ಜರ್ಮನಿಗೆ ಹೋಗಬೇಕು. ಮದುವೆಯ ಉರುಳಿಗೆ ಸಿಲುಕುವುದಿಲ್ಲ.”ಎಂದು ಖಡಾ ಖಂಡಿತವಾಗಿ ಹೇಳಿಬಿಟ್ಟ.
ಎಲ್ಲೋ ಬಂಡೆ ಬಿರುಕು ಬಿಟ್ಟ ಹಾಗೆ, ತಾವು ನಂಬಿಕೊಂಡು ಬಂದ ಮೌಲ್ಯಗಳು, ಸಂಬಂಧಗಳು ತಮ್ಮ ಮುಂದೆಯೇ ಜಾಳು ಜಾಳಾಗಿ ನೀರಲ್ಲಿ ಕರಗಿ ಹೋದಂತೆ ಭಾಸವಾಯಿತು ಇಬ್ಬರಿಗೂ. ಜನ್ಮ ಜನ್ಮಾಂತರದ ಸಂಬಂಧಕ್ಕೊಳಪಟ್ಟು ಇಬ್ಬರೂ ಹೊಂದಿಕೊಂಡು ಕಷ್ಟಸುಖಗಳಲ್ಲಿ ಸಮಭಾಗಿಯಾಗಿ ಒಬ್ಬರಿಗಾಗೇ ಇನ್ನೊಬ್ಬರು ಬಾಳುವ ಪರಿ ಎಲ್ಲಿ? ಬೇಕೆಂದಾಗ ಜೊತೆಗಿದ್ದು ಬೇಡವಾದಾಗ ದೂರವಾಗುವ ಬಗೆ ಎಲ್ಲಿ? ಅಜಗಜಾಂತರ. ಬೇಕೆಂದಾಗ ತೀಟೆ ತೀರಿಸಿಕೊಂಡು.. … ‘ಪಶುಸಮಾನ’ ಎನ್ನಿಸಿತು ಆಂಡಾಳುವಿಗಂತೂ. ಮಿನಿಯ ಜೊತೆ ಹರಕು ಮುರುಕು ಇಂಗ್ಲೀಷಿನಲ್ಲಿ ಹಿಂದಿ ಸೇರಿಸಿ ಮಾತನಾಡಿದಳು. “ಇಷ್ಟವಿದ್ದರೆ ಬೆಂಗಳೂರಿಗೆ ಬಂದು ಹಾಯಾಗಿರಬಹುದು.” ಎಂಬುದನ್ನು ಒತ್ತಿ ಹೇಳಿದಳು. “ಶಾದಿ ನೌ? ಬುಲ್‌ಶಿಟ್, ಹಮ್ ದೋನೋ ತೀನ ಚಾರ ಸಾಲ ತೊ ಸಾಥ ರೆಹಕೆ ದೋನೋಮೆ ಬನತಾ ಹೈ ಕ್ಯಾ ದೇಖತೆ ಹೈ. ಫಿರ್ ಶಾದಿ ಕೆ ಬಾರೆ ಮೆ ಸೋಚೇಂಗೆ( ಮದುವೆಯೇ? ಈಗಲೇ? ನಾವು ಮೂರ‍್ನಾಲ್ಕು ವರ್ಷಗಳಾದರೂ ಜೊತೆಗಿದ್ದು ಇಬ್ಬರ ಸ್ವಭಾವಗಳು ಹೊಂದಾಣಿಕೆಯಾಗುತ್ತವೋ ನೋಡುತ್ತೇವೆ. ನಂತರ ಮದುವೆಯ ಬಗ್ಗೆ ಯೋಚಿಸುತ್ತೇವೆ).” ಎಂದವಳು ಇವರನ್ನು ಪರಿಹಾಸ್ಯ ಮಾಡುತ್ತಲೇ ಫೋನಿಟ್ಟಳು.
ಎರಡನೇ ಸಮಸ್ಯೆಯೂ ಚಿಕ್ಕದಾಗುತ್ತ ಹೋಯಿತು. ವಾರಕ್ಕೊಮ್ಮೆಯಾದರೂ ವೇಲು ತಂದೆ, ತಾಯಿಗಳೊಂದಿಗೆ ಚಾಟ್ ಮಾಡುತ್ತಿದ್ದ. ಕೆಲವೊಮ್ಮೆ ಮಿನಿ ಕೂಡ ಮಾತನಾಡುತ್ತಿದ್ದಳು. ಎನೋ ಹೇಳಲಾಗದ ಬಂಧ ಮೆಲ್ಲನೆ ಬೆಸೆಯತ್ತಿತ್ತು. ಆಂಡಾಳ್ ‘ಪೊಂಗಲ್’ ಹಬ್ಬಕ್ಕೆ ರೇಷ್ಮೆ ಸೀರೆ ಕಳುಹಿಸಿದಳು. ಮಿನಿ ಅದನ್ನು ಸೊಟ್ಟ ಸೊಟ್ಟಗೇ ಉಟ್ಟು ವೆಬ್‌ಕ್ಯಾಮ್‌ನಲ್ಲಿ ಚಾಟ್ ಮಾಡುವಾಗಲೇ ತೋರಿಸಿದ್ದಳು. ‘ಎಲ್ಲ ಸರಿಯಾಗಿಲ್ಲ’ ಎಂಬ ವ್ಯಥೆಯೊಂದಿಗೆ ‘ಏನೋ ಒಂದು ನಡೆಯುತ್ತಿದೆ.’ ಎಂಬ ತುಸು ಸಮಾಧಾನ ಮಿಳಿತವಾಗಿ ಬದುಕು ಏರಿಳಿಯುತ್ತಿತ್ತು.
ಎರಡನೇ ಸಮಸ್ಯೆಯೂ ಕರಗಿ ಚಿಕ್ಕದಾಗಿದ್ದು ಮೂರನೇ ದೊಡ್ಡ ಸಮಸ್ಯೆ ಬಂದಾಗಲೇ. ಮಿನಿ ಮತ್ತು ವೇಲು ಬೆಂಗಳೂರಿಗೆ ಬರುವ ಯೋಚನೆ ಮಾಡಿದ್ದರು. “ಮಮ್ಮೀ, ಮಿನಿ ಸೌತ್ ಇಂಡಿಯಾನೇ ನೋಡಿಲ್ಲ. ಅವಳು ಹುಟ್ಟಿ ಬೆಳೆದಿದ್ದೆಲ್ಲ ಅಮೆರಿಕದಲ್ಲೇ. ಆಗಾಗ ದೆಹಲಿಗೆ ಹೋಗಿ ಬಂದು ಅಭ್ಯಾಸವಿದೆಯಷ್ಟೇ. ಇಬ್ಬರೂ ಜೊತೆಯಾಗಿ ಬಂದು ಎರಡು ತಿಂಗಳಿದ್ದು ಸೌತ್ ಇಂಡಿಯಾವನ್ನೆಲ್ಲ ಸುತ್ತಿ ಹೋಗುತ್ತೇವೆ.” ಎಂದಿದ್ದ ವೇಲು. ವಿಭ್ರಮ ಕಾಡಿತ್ತು ಆಂಡಾಳುವಿಗೆ. ಮಗ ಬರುತ್ತಾನೆಂದರೆ ಸಂತೋಷ. ಮಿನಿ ಬಂದರೂ ಸಂತಸವೇ. ಆದರೆ ಅವರ ಸಂಬಂಧದ ಬಗ್ಗೆ ಏನು ಹೇಳುವದು? ಗೆಳತಿಯೋ, ಪ್ರಿಯೆಯೋ, ಹೆಂಡತಿಯೋ.. ಅದೇ ಬೃಹತ್ ಸಮಸ್ಯೆಯಾಗಿಬಿಟ್ಟಿತು. ‘ಸೊಸೆ’ ಎನ್ನುವ ಹಾಗಿಲ್ಲ. ‘ಮಗನ ಸಹೋದ್ಯೋಗಿ, ಭಾರತ ನೋಡಲು ಬಂದಿದ್ದಾಳೆ’ ಎಂಬ ಹಸೀ ಸುಳ್ಳು ನಡೆಯಲ್ಲ. ಇಬ್ಬರೂ ಅಂಟಿಕೊಂಡೇ ಇರುವುದನ್ನು ನೋಡಿದರೆ ಯಾರಾದರೂ ಜೋಡಿ ಎಂದು ಹೇಳಿಯಾರು. ‘ಮಗನ ಗರ್ಲಫ್ರೆಂಡ್, ಜೊತೆ ಸಂಬಂಧ ಹೊಂದಿರುವವಳು’ ಎಂಬ ನಿಜವನ್ನು ಇಲ್ಲಿಯ ಸಮಾಜ ಅಷ್ಟು ಸುಲಭವಾಗಿ ಒಪ್ಪಲ್ಲ. ಹಾಗಿರುವಾಗ ನಿತ್ಯ ಹೋಗುವ ದೇವಸ್ಥಾನದಲ್ಲಿನ ಎಷ್ಟೊಂದು ಜನ ಗೆಳತಿಯರಿಗೆ ಏನು ಹೇಳಲಿ? ಸಂಜೆ ಹೋಗುವ ಪಾಠ, ಪ್ರವಚನಗಳಲ್ಲಿನ ಆತ್ಮೀಯರಿಗೆ ಏನು ಹೇಳಬೇಕು? ನೆರೆ ಹೊರೆ ಎಲ್ಲ ಏನು ತಿಳಿಯುತ್ತಾರೆ? ಏನೋ ಹೇಗೋ ಸುಧಾರಿಸಿಕೊಂಡು ಹೋಗಲು ಅದೇನು ಒಂದಿನವೇ? ಒಂದು ವಾರವೇ? ಎರಡು ತಿಂಗಳು, ಎಂದರೆ ಅರವತ್ತು ದಿನಗಳು.
‘ಸೊಸೆ’ ಎನ್ನಲು ಮದುವೆ ಮಾಡಿಲ್ಲ. ಪಾಯಸದೂಟ ಹಾಕಿಲ್ಲ. ಹೋಗಲಿ, ‘ಅಲ್ಲೇ ಮದುವೆಯಾಗಿದ್ದಾರೆ’ಎಂದರೆ ಮಗ, ಮಿನಿ ಒಪ್ಪಬೇಕಲ್ಲ. ಕೊರಳಲ್ಲಿ ತಾಳಿ, ಹಣೆಯಲ್ಲಿ ಕುಂಕುಮ, ಸಿಂಧೂರ ಯಾವುದೂ ಇಲ್ಲ. “ಹೇಗೂ ಬಂದಿರುತ್ತೀರಿ. ಇಲ್ಲೇ ಮದುವೆ ಮಾಡಿ ಬಿಡುತ್ತೇವೆ.”ಎಂದಿದ್ದು ಇಬ್ಬರಿಗೂ ರುಚಿಸಿರಲಿಲ್ಲ. “ನಮಗೀಗ ಆ ಯೋಚನೆಯೇ ಇಲ್ಲ.” ಎಂದಿದ್ದರು. ಅವರು ಬರುವದು ಇನ್ನೂ ಐದು ತಿಂಗಳಿತ್ತು. ಐಯ್ಯಂಗಾರ್ ದಂಪತಿಗಳು ನಿತ್ಯ ಕುಲುಮೆಯಲ್ಲಿ ಬೇಯುತ್ತಿದ್ದರು. ಎರಡು ಸಂಸ್ಕೃತಿಗಳ ನಡುವಿನ ಅಂತರ ಏನೆಲ್ಲಾ ಪೀಕಲಾಟಗಳನ್ನು ಸೃಷ್ಟಿಸಬಲ್ಲುದು ಎಂಬ ಅರಿವಾಗಿತ್ತು ಅವರಿಗೆ. ಗುರುವಾಯೂರಪ್ಪನಿಗೂ ಇವರ ಕಷ್ಟ ಗೊತ್ತು. ಆದರೂ ಸುಮ್ಮನೆ ಮಂದಹಾಸ ಬೀರುತ್ತಿದ್ದ.
ಮೂರನೇ ಸಮಸ್ಯೆಗೆ ಹೊಂದಿಕೊಳ್ಳುವಷ್ಟರಲ್ಲಿ ನಾಲ್ಕನೇ ಸಮಸ್ಯೆ ಬಾಯಿ ತೆರೆದು ಕೂತಿತ್ತು. ವೇಲು ತಾವು ಬರುವ ದಿನಾಂಕವನ್ನು ನಿಶ್ಚಿತವಾಗಿ ತಿಳಿಸಿದ. ಜೊತೆಗೆ “ಮಮ್ಮಿ, ಮಿನಿ ಈಗ ಮೂರು ತಿಂಗಳ ಗರ್ಭಿಣಿ. ಅಲ್ಲಿಗೆ ಬರುವಾಗ ಫೋರ್ ಮಂತ್ಸ್ ಆಗಿರುತ್ತೆ. ವಿಶೇಷ ಆರೈಕೆ ಬೇಕಾಗಬಹುದು”ಎಂದ. ಮತ್ತದೇ ವಿಭ್ರಮ ಆಂಡಾಳ್‌ಗೆ. ಮೊಮ್ಮಗುವಿನ ಬರುವಿಕೆ ಸಂತಸ ತಂದರೂ ನಲಿಯಲಾಗುತ್ತಿಲ್ಲ. ದು:ಖಪಡಲೂ ಆಗುತ್ತಿಲ್ಲ. “ಈಗಲಾದರೂ ಮದುವೆಯಾಗಿ.” ಎಂದು ದಂಪತಿಗಳಿಬ್ಬರೂ ಬುದ್ಧಿವಾದ ಹೇಳಿಯಾಯಿತು. ಐಯ್ಯಂಗಾರ‍್ರು ಕೂಡ ಮಗ ಮತ್ತು ಮೊದಲ ಬಾರಿಗೆ ಮಿನಿಯೊಡನೆ ಒಂದು ಗಂಟೆ ಮಾತಾಡಿ ಬರುವ ಮಗುವಿಗಾಗಿಯಾದರೂ ಮದುವೆಯಾಗಲು ಹೇಳಿದರು. ಕೇಳಿದರೆ ತಾನೇ. ಮತ್ತದೇ ಉಡಾಫೆಯ ನಗು.
ಈಗಂತೂ ತೊಂದರೆ ಉಲ್ಬಣಿಸಿ ತಾಪತ್ರಯವಾಯಿತು. ಮಗನ ಜೊತೆ ಕೈಯಲ್ಲಿ ಕೈಸೇರಿಸಿಕೊಂಡು ಬರುವ ಗರ್ಭಿಣಿ ಹೆಂಗಸನ್ನು ಯಾರೆಂದು ಹೇಳಬೇಕು? ಹೇಗೆ ಪರಿಚಯಿಸಬೇಕು? ಚರ್ಚೆಗಳು ವಾಗ್ಯುದ್ಧಗಳಾದರೂ ಫಲಿತಾಂಶ ಮಾತ್ರ ಸೊನ್ನೆ. ಕೊನೆಗೂ ಗೆದ್ದದ್ದು ಐಯ್ಯಂಅರ‍್ರೇ. “ಈಗ ವಿದೇಶಗಳಲ್ಲೆಲ್ಲ ಸಾಮಾನ್ಯವಾಗಿದೆ. ನಮ್ಮಲ್ಲಿ ಮೇಲ್ವರ್ಗದಲ್ಲಿ ವಿರಳವಾಗಿ ಕಾಣಿಸಿಕೊಂಡದ್ದು ಮುಂದೆ ಎಲ್ಲ ವರ್ಗಗಳಲ್ಲೂ ಸಹಜವಾಗಬಹುದು. ಈಗಲೇ ಹೇಳಿದರೇನು ತಪ್ಪು? ಸತ್ಯವನ್ನೇ ಹೇಳಿಬಿಡುವದು. ನಂತರ ಅವರನ್ನು ಬಲವಂತವಾಗಿ ಒಪ್ಪಿಸಿಯಾದರೂ ದೇವಸ್ಥಾನದಲ್ಲಿ ಎಲ್ಲರೆದುರಿಗೆ ಮದುವೆ ಮಾಡುವದು. ದೇವರಿಗೆ ಕಲ್ಯಾಣೋತ್ಸವ ಮಾಡಿಸಿ, ಎಲ್ಲರಿಗೂ ಭೂರಿ ಭೋಜನ ಹಾಕಿಸಿ…” ಆಂಡಾಳ್ ಕೂಡ ಇದಕ್ಕೊಪ್ಪಿದಳು. ಕಾರಣ ಬರುತ್ತಿರುವ ಮೊಮ್ಮಗು ಅವಳಿಗೆ ಆಪ್ಯಾಯಮಾನವಾಗಿತ್ತು. ಕಣ್ಮುಚ್ಚಿದರೂ ಕಣ್ತೆಗೆದರೂ ಅವಳಿಗೆ ಬಾಲಗೋಪಾಲ, ಬಾಲಕೃಷ್ಣನ ಲೀಲೆಗಳೇ ಕಾಣತೊಡಗಿದ್ದವು. ‘ದಡ ಕಾಣಿಸು ಗುರುವಾಯೂರಪ್ಪಾ’ ಎನ್ನುತ್ತ ಕನಸುಗಳಲ್ಲಿ ತೇಲಿ ಹೋದಳು.
ನಿರ್ಧರಿಸಿಕೊಂಡಂತೆ ದಂಪತಿಗಳಿಬ್ಬರೂ ಮೊದಲು ನೆಂಟರಿಗೆ ನಿಜವಾದ ಸಮಾಚಾರ ತಿಳಿಸಿದರು. ನಂತರ ಆತ್ಮೀಯರಿಗೆ.. ಪರಿಚಿತರಿಗೆ. ಅವರು ಬೆರಗಾಗಿ ಬಾಯ್ತೆರೆದಾಗ “ಏನು ಮಾಡೋದು? ಇದು ನಮ್ಮನೆಯಲ್ಲೇ ನಡೆದಿದೆ. ಹುಡುಗಿ ಗರ್ಭಿಣಿ ಕೂಡ. ಗುರುವಾಯೂರಪ್ಪನೇ ಕಾಯಬೇಕು.” ಎಂದು ಅಲವತ್ತುಕೊಂಡರು. ಸುದ್ದಿ ಎಲ್ಲೆಡೆ ಹಬ್ಬಿ ಹೊಳೆಯಾಗಿ ಹರಿದು ಹೋಯಿತು. “ಹಾಗಂತೆ.. ಹೀಗಂತೆ.. ಪಾಪ, ಆಂಡಾಳಮ್ಮ ವರದರಾಜ ಐಯ್ಯಂಗಾರ‍್ರು ಎಷ್ಟು ನಿಷ್ಠೆಯಿಂದ ಗುರುವಾಯೂರಪ್ಪನಿಗೆ ನಡೆದುಕೊಳ್ಳೋರು. ಈ ಪರಿಸ್ಥಿತಿ ಬರಬಾರದಾಗಿತ್ತು.” ಎಂದವರೆಷ್ಟೋ ಜನ. “ಜಗತ್ತಿನಲ್ಲೆಲ್ಲ ತನ್ನ ಮಗನೇ ಜಾಣ’ ಎಂದು ಬೀಗಿದ್ದಕ್ಕೆ ತಕ್ಕ ಶಾಸ್ತಿಯಾಯಿತು.” ಎಂದವರೂ ಇದ್ದರು. ಅಂತೂ ಎಲ್ಲರಿಗೂ ಹೇಳಿ ಐಯ್ಯಂಗರ‍್ರು ನಿರಾಳವಾದರು. ಆಂಡಾಳಮ್ಮ ತಲೆ ತಗ್ಗಿಸಿದರು.
ಬದುಕು ನಾವಂದುಕೊಂಡಂತೆ ಸರಳರೇಖೆ ಅಲ್ಲವಲ್ಲ. ಹಾಗೆ ನಡೆಯಲು ಭಗವಂತ ಬಿಡುವದೂ ಇಲ್ಲ. ನಮ್ಮ ಯೋಚನೆಯೇ ಬೇರೆ. ಅವನು ಹೂಡುವ ಆಟವೇ ಬೇರೆ. ವೇಲು ಹೇಳಿದ ದಿನವೇ ಬಂದ. ಆದರೆ ಒಬ್ಬನೇ. ಏರ್‌ಪೋರ್ಟಿನಲ್ಲಿ ಕಾಯುತ್ತಿದ್ದ ದಂಪತಿಗಳ ಕಣ್ಣುಗಳಿಗೆ ನಿರಾಸೆಯಾಯಿತು. “ಎಲ್ಲಿ ಮಿನಿ?” ಎಂದಾಗ “ಮನೆಗೆ ಹೋಗಿ ಆರಾಮವಾಗಿ ಮಾತನಾಡೋಣ”ಎಂದ. ಕುತೂಹಲವನ್ನು ಹತ್ತಿಕ್ಕಿಕೊಂಡು ಮನೆಗೆ ಬಂದು ಮಗನ ಮುಂದೆ ಸ್ಟಾçಂಗ್ ಕಾಫಿ ಇಟ್ಟು ಕುಳಿತರು. “ಅವಳು.. ಎಂದರೆ ಮಿನಿ ನನಗಿಂತ ಮೊದಲು ಮೂವರು ಗೆಳೆಯರೊಂದಿಗೆ ಲಿವಿಂಗ್ ಟುಗೆದರ್‌ನ ಸಂಬಂಧದಲ್ಲಿದ್ದಳಂತೆ. ನಾನು ಜರ್ಮನಿಗೆ ಮೂರು ತಿಂಗಳು ಹೋದಾಗ ಅವಳು ಮತ್ತೆ ಹಳೆಯ ಗೆಳೆಯನಲ್ಲಿಗೆ ಹೋಗಿದ್ದಳಂತೆ. ಆ ಮಗು ಅವನದೇಂತ ಅವಳೇ ಹೇಳಿದಳು. ಅವನ ಜೊತೆಯೇ ಇರ್ತೀನೀಂತ ಹೊರಟು ಹೋದಳು. ನನಗೂ ತುಂಬಾ ನೋವಾಯಿತು. ಆ ಡಿಪ್ರೆಷನ್‌ನಿಂದ ಹೊರಬರಬೇಕೂಂತ್ಲೆ ನಾನು ಮೊದಲೇ ಹೇಳಿದಂತೆ ನಿಮ್ಮಗಳ ಕಡೆಗೆ ಹೊರಟು ಬಂದೆ. ಆ ಲೈಫ್ ಸಾಕಾಗಿದೆ ಮಮ್ಮಿ. ಎಂಜಲೆಲೆಯಲ್ಲಿ ಉಂಡೂ ಉಂಡೂ ನಾನೂ ಎಂಜಲಾಗಿಬಿಟ್ಟೆ. ಈಗ ನೀನು ಹೇಳುವಂತೆ ನೀನು ತೋರಿಸಿದ ಹುಡುಗಿಯನ್ನು ಮದುವೆಯಾಗಿ ನಿಮ್ಮೊಂದಿಗೇ ಬಾಳುತ್ತೇನೆ.” ಎನ್ನುತ್ತ ಹನಿಗಣ್ಣಾಗಿ ಆಂಡಾಳಮ್ಮನ ಕೈಹಿಡಿದ.
ದಂಪತಿಗಳು ಅವಾಕ್ಕಾದರು. ಮತ್ತದೇ ವಿಭ್ರಮೆಯಲ್ಲಿ ತೇಲಿ ಹೋದರು. ತಮ್ಮಾಸೆಯಂತೆ ಮಗ ತಿರುಗಿ ಬಂದು ತಮ್ಮಿಷ್ಟದ ಹುಡುಗಿಯನ್ನು ಮದುವೆಯಾಗುತ್ತೇನೆಂದು ಹೇಳಿದ್ದಕ್ಕೆ ಸಂತೋಷಿಸಬೇಕೋ, ಮೊಮ್ಮಗುವಿನ ಕನಸು ಚೂರಾಗಿದ್ದುದಕ್ಕೆ ದು:ಖಿಸಬೇಕೋ ತಿಳಿಯದ ಮನ:ಸ್ಥಿತಿ. ನೆಂಟರಿಷ್ಟರೆಲ್ಲರಲ್ಲೂ ಇವನ ಸಂಬಂಧದ ಬಗ್ಗೆ ಹೇಳಿಯಾಯಿತು. ವಧುಗಳಿಗೆ ವಿಪರೀತ ಬೇಡಿಕೆ ಇರೋ ಈ ಸಮಯದಲ್ಲಿ ಇಷ್ಟೆಲ್ಲ ಕೇಳಿ ಹೆಣ್ಣು ಕೊಡೋರ‍್ಯಾರು?.. ..ಹೇಗೆ ಮಾಡೋದು?… ಎಪ್ಪಡಿ ಪಂಡ್ರದು? ಗುರುವಾಯೂರಪ್ಪಾ.. .. ..
**************************************************