ಕವಿತೆ
ಅಂದುಕೊಳ್ಳುತ್ತಾಳೆ
ಪ್ರೇಮಾ ಟಿ.ಎಂ.ಆರ್.
ಏನೆಲ್ಲ ಮಾಡಬೇಕೆಂದುಕೊಳ್ಳುತ್ತಾಳೆ ಅವಳು ನಗಿಸಬೇಕು ನಗಬೇಕು
ನೋವುಗಳಿಗೆಲ್ಲ ಸಾಂತ್ವನವಾಗಬೇಕು
ಕಲ್ಲೆದೆಗಳ ಮೇಲೆ ನಿತ್ಯ
ನೀರೆರೆದು ಮೆತ್ಗಾಗಿಸಿ ನಾದಬೇಕು
ತನ್ನೊಳಗಿನ ಕೊರತೆಗಳನ್ನೆಲ್ಲ
ಪಟ್ಟಿಮಾಡಿ ಒಪ್ಪಿಕೊಂಡು
ಬಿಡಬೇಕೆಂದುಕೊಳ್ಳುತ್ತಾಳೆ
ನೀರವ ಇರುಳಲ್ಲಿ ತಾರೆಗಳ
ಎಣಿಸುತ್ತ ಹೊಳೆದಂಡೆ
ಮರದಡಿಗೆ ಕೂತಲ್ಲೇ ಅಡ್ಡಾಗಿ
ನಿದ್ದೆಹೋಗಬೇಕು
ಕಪ್ಪು ಕಲ್ಲರೆಮೇಲೆ ಬೆಳ್ನೊರೆಯ
ಕಡಲಾಗೋ ಮಳೆಹನಿಯ
ಜೊತೆಗೊಮ್ಮೆ ಜಾರಬೇಕು
ಹಿಂದೆಹಿಂದಕೆ ಹಿಂತಿರುಗುವಂತಿದ್ದರೆ
ಕುಂಟಾಬಿಲ್ಲೆ ಕಣ್ಣಾಕಟ್ಟೆ
ಮತ್ತೊಮ್ಮೆ ಆಡಬೇಕು
ಬಿಸಿಲುಕೋಲುಗಳೆಲ್ಲ ಸಾರ್ಕೆ
ಹೊರೆಮಾಡಿ ಹೊರಬೇಕು
ಮರದಡಿಯ ನೆರಳುಗಳ
ಬರಗಿ ಬುತ್ತಿಯ ಕಟ್ಟಿ
ತಲೆಮೇಲೆ ಹೊತ್ತು ಬಿಸಿಲಡಿಯ
ಜೀವಗಳಿಗೆ ಹೊದೆಸಬೇಕು
ಅದೆಷ್ಟು ಸಾಲಗಳಿವೆ
ತೀರುವದಕ್ಕೆ
ಬಿಡಿಸಿಕೊಳ್ಳಬೇಕಿತ್ತು
ಗೋಜಲುಗಳ ಗಂಟುಗಳ
ಅಂದುಕೊಳ್ಳುತ್ತಾಳೆ
ಸದ್ದಿಲ್ಲದೇ ನಿದ್ದೆಹೋದ ಹಾದಿಯಮೇಲೆ ಒಬ್ಬಂಟಿಯಾಗಿ ನಡೆಯುತ್ತಲೇ
ಇರಬೇಕು ಯಾರೂ
ಅತಿಕ್ರಮಿಸದ ಗ್ರಹವೊಂದಕ್ಕೆ
ಒಮ್ಮೆ ಗುಳೆಹೋಗಬೇಕು ತನ್ನ
ಉಸಿರನ್ನೊಮ್ಮೆ ತಾನೇ ಕೇಳಿಸಿಕೊಳ್ಳಬೇಕು
ಅಂದುಕೊಳ್ಳುತ್ತಾಳೆ
***************************