ಪ್ರೇಕ್ಷಕ ಪರಂಪರೆಯ ಅನ್ನದಾತರು

ಲೇಖನ

ಪ್ರೇಕ್ಷಕ ಪರಂಪರೆಯ ಅನ್ನದಾತರು

Century-old Telugu drama troupe, known for bringing alive mythology, may be  revived | The News Minute

ಮಲ್ಲಿಕಾರ್ಜುನ ಕಡಕೋಳ

ಯಶಸ್ವಿ ನಾಟಕವೊಂದರ ಕುರಿತು ಮಾತಾಡುವಾಗ ಎಂಥವರಿಗೂ ಆಧುನಿಕ ರಂಗಭೂಮಿ ಸಂದರ್ಭದಲ್ಲಿ ನಿರ್ದೇಶಕ ಪರಂಪರೆಯತ್ತ ಆದ್ಯಗಮನ. ಹಾಗೇನೆ ವೃತ್ತಿರಂಗಭೂಮಿ ಸಂದರ್ಭದಲ್ಲಿ ನಟನ ಪರಂಪರೆಯದು ಧುತ್ತನೆ ನೆರವಿಗೆ ನಿಲ್ಲುವ ನಿಲುವು. ನಮ್ಮ ಪ್ರೊಸಿನಿಯಮ್ ಥಿಯೇಟರ್ ಪ್ರದರ್ಶನಗಳು ಪ್ರೇಕ್ಷಕರೆಂಬ ಐಕಾನ್ ಗಳ ಮೂಲಕವೇ ಸಾಂಸ್ಕೃತಿಕ ಮೌಲ್ಯ ಗಳಿಸಿವೆಯೆಂಬ ದ್ಯಾಸವೇ ಇರಲ್ಲ.

ಅಷ್ಟು ಮಾತ್ರವಲ್ಲದೇ ರಂಗಸಂಸ್ಕೃತಿಯ ಅಭಿವೃದ್ಧಿ ಹಾಗೂ ವಿಕಾಸದ ಸಾಧ್ಯತೆಯ ಕ್ಷಿತಿಜ ವಿಸ್ತಾರಗೊಳ್ಳುವುದೇ ಪ್ರೇಕ್ಷಕ ಪ್ರಭುಗಳಿಂದ. ಇಂತಹ ಮಹತ್ತರ ಸಂಗತಿಗಳನ್ನೇ ನೇಪಥ್ಯಕ್ಕೆ ಜರುಗಿಸುವ ಜಾಣ ಕೆಲಸ ಕೆಲವು ರಂಗಪಂಡಿತರು ಎಸಗುತ್ತಾರೆ. ಅಷ್ಟೇಯಾಕೆ ಕೆಲವೊಮ್ಮೆ ಹ್ಯಾವಕ್ಕೆ ಬಿದ್ದಂತೆ ನಿರ್ದೇಶಕ ಹಾಗೂ ನಟನಾ ಪರಂಪರೆ ಕುರಿತೇ ಹೆಚ್ಚು ಹೆಚ್ಚು ಚರ್ಚೆಯ ಒಣಪಾಂಡಿತ್ಯ ಮೆರೆಯುತ್ತಾರೆ.

ಸಿನೆಮಾ, ನಾಟಕ, ಭಾಷಣ, ಪುಸ್ತಕ ಇತರೆ ಎಲ್ಲ ಸಾಂಸ್ಕೃತಿಕ ಜ್ಞಾನಶಿಸ್ತು ಪ್ರದರ್ಶನಗಳ ಕುರಿತು ನಿಕಷದ ಚಿಂತನೆಗಳು ಅಭಿವ್ಯಕ್ತಿಯ ಸ್ವರೂಪ ಪಡೆದುಕೊಳ್ಳುವಾಗ ಪ್ರೇಕ್ಷಕ, ಕೇಳುಗ, ಓದುಗ ಸಹೃದಯತೆಯ ಮಹತ್ವದ ಸ್ಥಾನವನ್ನು ಅಲಂಕರಿಸುತ್ತಾನೆಂಬುದು ಮರೆಯಲಾಗದು. ನಮ್ಮ ಪರಂಪರಾಗತ ಸಂಕಥನ ಪಾಠ್ಯಗಳಲ್ಲಿ ಇದೆಲ್ಲ ಉಲ್ಲೇಖನೀಯ ವಿಷಯ .

ಅದರಲ್ಲೂ ವಿಶೇಷವಾಗಿ ವೃತ್ತಿರಂಗಭೂಮಿಯಲ್ಲಿ ಹಲವು ಸಾಂಸ್ಕೃತಿಕ ಪರಂಪರೆಗಳು ಶಿಖರಪ್ರಾಯದ ಉಲ್ಲೇಖಿತ ಮಟ್ಟದಲ್ಲಿವೆ. ಅಲ್ಲಿ ಪ್ರಮುಖವಾಗಿ ನಟನಾ ಪರಂಪರೆ, ರಂಗ ಸಂಗೀತ ಪರಂಪರೆ, ರಂಗಸಜ್ಜಿಕೆಗಳ ಪರಂಪರೆಗಳು ಆಕರ ಸ್ಥಾನ ಪಡಕೊಂಡಿವೆ. ಅಷ್ಟೇ ಮಹತ್ವದ ಮತ್ತೊಂದು ಪರಂಪರೆ ಅಲ್ಲಿದೆ. ಅದುವೇ ಸಹೃದಯ ಪ್ರೇಕ್ಷಕ ಪರಂಪರೆ.

ಎಷ್ಟೋ ಬಾರಿ ವೃತ್ತಿರಂಗಭೂಮಿಯ ನಾಟಕಗಳಲ್ಲಿ ಪ್ರೇಕ್ಷಕ ಅದೆಂತಹ ಮಹತ್ವ ಪಡೆದುಕೊಳ್ಳುತ್ತಾನೆಂದರೆ, ಕಲಾವಿದರು ನಾಟಕದ ನಡುವೆಯೇ ಪ್ರೇಕ್ಷಕರೊಂದಿಗೆ ಸಂಭಾಷಣೆಗೆ ಇಳಿಯುವ ಸನ್ನಿವೇಶಗಳು ಸ್ವಾಭಾವಿಕವಾಗಿ ಸೃಷ್ಟಿಯಾಗುತ್ತವೆ. ವೃತ್ತಿ ರಂಗದ ನಟನಟಿಯರು ಯಾವುದೇ ಮಡಿವಂತಿಕೆ ಇಲ್ಲದೇ ಕಾಕಾ, ಅಣ್ಣಾ, ಮಾಮಾ ಅಂತ ಪ್ರೇಕ್ಷಕರೊಂದಿಗೆ ಸಂಬೋಧನೆಗೆ ತೊಡಗುವ ಸಂದರ್ಭೋಚಿತ ಸನ್ನಿವೇಶಗಳು ನಗೆಗಡಲ ಜಳಕ ಮಾಡಿಸುತ್ತವೆ.

ಇನ್ನು ಕಲಾವಿದರಿಂದ ಸುಪರ್ ಹಿಟ್ ಡೈಲಾಗ್ ಕೇಳಿದೊಡನೆ, ಅಂತಹದ್ದೇ ಮನಮೆಚ್ಚುಗೆಯ ರಂಗಸಂಗೀತ ಕೇಳಿದಾಗ ಸಂತುಷ್ಟರಾದ ಪ್ರೇಕ್ಷಕರು ಸಿಳ್ಳು, ಚಪ್ಪಾಳೆಗಳ ಸುರಿಮಳೆಗೈಯ್ಯುತ್ತಾರೆ. ಅದು ಅಷ್ಟಕ್ಕೆ ತಮಣಿಯಾಗದೇ ಪ್ರೇಕ್ಷಕಾಂಗಣದ ಸಂತಸ ಸಂಭ್ರಮದ ಎಲ್ಲೆ ಮೀರಿ ಒನ್ಸ್ ಮೋರ್ ಎಂದು ಭಾವ ಪರವಶರಾಗಿ ಜೋರಾಗಿ ಕೂಗುತ್ತಾರೆ. ಅವರ ಮೆಚ್ಚುಗೆಯ ಕೂಗಿಗೆ ಗೌರವತೋರಿ ಮತ್ತದೇ ಹಾಡು, ಡೈಲಾಗ್ ಮರುಕಳಿಸುತ್ತವೆ. ಹೀಗೆ ಕಲಾವಿದರು ಮತ್ತು ಪ್ರೇಕ್ಷಕರ ನಡುವೆ ಅಪರೂಪದ ರಂಗಸಂಸ್ಕೃತಿಯೊಂದರ ಸಂಪ್ರೀತಿಯ ಸಂವಾದ, ಸಂವಹನವೇ ಏರ್ಪಡುತ್ತದೆ.

ವರನಟ ಡಾ. ರಾಜಕುಮಾರ ಅವರು ವೃತ್ತಿರಂಗಭೂಮಿಯ ರಂಗಮೌಲ್ಯ ಮೆರೆದ ಪ್ರಾತಃಸ್ಮರಣೀಯರು. ಅಂತೆಯೇ ಅವರು ಪ್ರೇಕ್ಷಕ ಪ್ರಭುಗಳಿಗೆ ಅಭಿಮಾನಿ ದೇವರುಗಳೆಂತಲೇ ಕರೆದು ಗೌರವ ತೋರುತ್ತಿದ್ದರು. ಮಾಸ್ಟರ್ ಹಿರಣ್ಣಯ್ಯನವರು ಯಾವತ್ತೂ ಪ್ರೇಕ್ಷಕರನ್ನು ಅನ್ನದಾತರೆಂದೇ ಬಾಯ್ತುಂಬಾ ಅಂತಃಕರಣ ತುಂಬಿ ಪ್ರೀತ್ಯಾದರ ತೋರುತ್ತಿದ್ದರು. ಏಣಗಿ ಬಾಳಪ್ಪ ಹಾಗೂ ಇನ್ನು ಕೆಲವು ಕಂಪನಿಗಳಲ್ಲಿ ಪ್ರೇಕ್ಷಕರಿಗೆ ಶರಣು ಹೇಳುವ ಸನ್ನಿವೇಶಗಳು ರಂಗಪ್ರಯೋಗದಂತೆ ಮಹತ್ವದ ಸ್ಥಾನ ಗಳಿಸಿದ್ದವು. ಕ್ಯಾಂಪ್ ಮಾಡಿದ ಊರುಗಳಲ್ಲಿ ಆಯ್ದ ಪ್ರೇಕ್ಷಕರಿಗೆ ಗೌರವಪಾಸ್ ನೀಡಿ ನಾಟಕಕ್ಕೆ ಆಮಂತ್ರಿಸುವ ಪದ್ಧತಿಯೇ ಇತ್ತು.

ವೃತ್ತಿ ರಂಗಭೂಮಿಯ ಆರಂಭದ ಅಂದಿನಿಂದ ಇಂದಿನವರೆಗೂ ಒಂದೂವರೆ ಶತಮಾನ ಕಳೆದರೂ ಪ್ರೇಕ್ಷಕ ಮಹಾಶಯರ ಮೇಲಿನ ಗೌರವ, ಪ್ರೀತಿ, ವಿಶ್ವಾಸ ದಿನೇ ದಿನೇ ಹೆಚ್ಚುತ್ತಲೇ ಬಂದಿದೆ. ಅದೊಂದು ಅಮೂಲ್ಯ ಪರಂಪರೆ ಮಾತ್ರವಾಗಿ ಬೆಳೆಯದೇ ರಂಗಸಂಸ್ಕೃತಿಯ ಅನನ್ಯತೆಯಾಗಿ ಬೆಳೆಯುತ್ತಲೇ ಮುನ್ನಡೆ ಸಾಧಿಸಿದೆ. ಇಂತಹ ಸಹೃದಯ ಪರಂಪರೆ ಆಧುನಿಕತೆಯ ಬೇರೊಂದು ರಂಗಪ್ರಕಾರಗಳಲ್ಲಿ ಹುಡುಕಿದರೂ ನಮಗೆ ಕಾಣಸಿಗುವುದಿಲ್ಲ.

ಪ್ರಾರಂಭಿಸಲ್ಪಟ್ಟ ನಾಟಕ ಇನ್ನೊಂದು ಮಹತ್ವದ ಸನ್ನಿವೇಶದೊಂದಿಗೆ ಮಂಗಲ ಹಾಡುತ್ತದೆ. ಯಾವತ್ತೂ ನಮ್ಮನ್ನು ಪ್ರೋತ್ಸಾಹಿಸಿ ನಮಗೆ ಅನ್ನ ನೀಡುತ್ತಿರುವ ತಂದೆ ತಾಯಿ ಸ್ವರೂಪಿ ಅನ್ನದಾತ ಪ್ರೇಕ್ಷಕ ಮಹಾಪ್ರಭುಗಳ ಅಡಿದಾವರೆಗಳಿಗೆ ಪೊಡಮೊಟ್ಟು…. ಎಂಬ ಸವಿನಯ ಪ್ರಾರ್ಥನೆಯ ಮಾತುಗಳು ಲೆಕ್ಚರ್ ಸೀನ್ ಎಂಬ ನುಡಿಗಟ್ಟಿನೊಂದಿಗೆ ಇವತ್ತಿಗೂ ಎಲ್ಲಾ ನಾಟಕ ಕಂಪನಿಗಳು ಪ್ರೇಕ್ಷಕ ಪರಂಪರೆಗೆ ಗೌರವಿಸುವ ಪರಿಪಾಠಗಳನ್ನು ತಪ್ಪದೇ ಪರಿಪಾಲಿಸುತ್ತಾ ಬಂದಿವೆ. ಇದು ರಂಗಸಂಸ್ಕೃತಿಯ ಮಹೋನ್ನತ ಪ್ರೇಕ್ಷಕ ಪರಂಪರೆಗೆ ಸಲ್ಲುವ ಗೌರವ

**************************

One thought on “ಪ್ರೇಕ್ಷಕ ಪರಂಪರೆಯ ಅನ್ನದಾತರು

  1. ಸರ್
    ಈ ಪ್ರೇಕ್ಷಕ ಪ್ರಾತಿನಿಧ್ಯ ಹವ್ಯಾಸಿ, ಕಂಪನಿ ನಾಟಕಗಳಲ್ಲಿ ಎಷ್ಟು ಆಪ್ಯಾಯಮಾನ ವಾಗಿರುತ್ತದೆ ಎಂದರೆ ಪ್ರದರ್ಶನದ ನಡುವೆ ಬಕ್ಷಿಸು ಕೊಡಲು ಬಂದ ಉದ್ಘೋಷಕ ಕೂಡ ತನ್ನ ಮಾತುಗಾರಿಕೆಯಿಂದ ಪ್ರೇಕ್ಷಕರನ್ನು ರಂಜಿಸುತ್ತಾ ನೆ.”ಕನ್ನಡದ ಕಲೆಯನ್ನು ಕಂಡು
    ಕುಲು ಕುಲು ನಗುತ್ತಿರುವ ಕನ್ನಡದ ಕಲಾಭಿಮಾನಿಗಳಿೆ” ಎಂದು ಹೇಳಿದ್ರೆ ಪ್ರೇಕ್ಷಕರಲ್ಲಿ ಚಪ್ಪಾಳೆಯ ಸುರಿಮಳೆ ಆಗುತ್ತಿತ್ತು.
    D.M.Nadaf. ಅಫಜಲಪುರ.

Leave a Reply

Back To Top