ಕಾಪಿಟ್ಟು ಕಾಯುತ್ತಾಳೆ

ಕವಿತೆ

ಕಾಪಿಟ್ಟು ಕಾಯುತ್ತಾಳೆ

ಶ್ರೀವಲ್ಲಿ ಶೇಷಾದ್ರಿ

ಋತು ಋತುವಿಗೊಂದೊಂದು ಹೊಸತು
ಹೆಚ್ಚುಗಾರಿಕೆಯ ಬಿಚ್ಚಿಡುತ್ತಾಳೆ,
ಅಚ್ಚರಿ ಹುಟ್ಟಿಸಿಬೆಚ್ಚಿಸುವ ಈಹುಚ್ಚಿ
ಪೆಚ್ಚಾಗಿಸುತ್ತಾಳೆ ಹುಚ್ಚುಗಳ ಹೆಚ್ಚಿಸಿ
ಮನದಿಚ್ಚೆಗಳ ಅಚ್ಚು ಹಾಕಿಸಿಟ್ಟು
ರಚ್ಚೆ ಹಿಡಿದು ಅಚ್ಚು ಮೆಚ್ಚಾಗಿ
ಕೊಚ್ಚಿ ಹೋಗದ ಹಾಗೆ ಬಚ್ಚಿಟ್ಟು
ಕಾಪಿಟ್ಟು ಕಾಯುತ್ತಾಳೆ ಬೆಚ್ಚಗೆ

ಕಳಚಿಟ್ಟ ಪೊರೆ ಮತ್ತೆ ಹಸಿರು ಕೊನರಿ
ಹಸಿ ಕರಗ ಮಣ ಭಾರ ಹೊತ್ತು
ಚೀರಿ ಹಾರಿ ಮೇಲೆರಗೊ ಹನಿಯ
ರಭಸ ಭರಿಸಿ ಝಾಡಿಸಿ ತೂರಿ
ಎಲ್ಲೆ ಇರದೆಡೆ ಹರಿದು ಬರಿಯ
ರಾಡಿಯನ್ನಪ್ಪಿ ಒಪ್ಪಿ ಮುತ್ತಿಕ್ಕಿ ದಿನ ರಾತ್ರಿಯಾಟಕ್ಕೆ ಅದರಿ ಬೆದರಿ
ಗರಿ ಕೆದರಿ ಮತ್ತೊಮ್ಮೆ ಹೂವಾಗುತ್ತಾಳೆ

ಬಟ್ಟ ಬಯಲಿನಲಿ ದೃಷ್ಟಿ ತಾಗುವ ಹಾಗೆ
ಪರಿಪರಿಯ ನಿಲುವಾಭರಣ ಪೇರಿಸಿ
ಹೆಜ್ಜೆಗೊಂದು ಗೆಜ್ಜೆ ಎದೆ ಛಲ್ಲೆನ್ನಿಸಿ
ಬೆಳಕು ಬೆಳದಿಂಗಳ ಕಲಕಿ ಕುಲುಕಿ
ತಿಂಗಳ ತಿಳಿಗೊಳವ ಮುಳುಗಿ ತೇಲಿಸಿ
ಅಳುವ ಕಡಲಿಗೆ ನಗೆ ದೋಣಿ ಹಾಯಿಸಿ
ಏನೂ ಅರಿಯದೆ ಮಂಜು ಮುಸುಕಿನಲಿ
ಎಲ್ಲೊ ದಿಟ್ಟೆ ನೆಟ್ಟು ನಿಲ್ಲುವ ಈ ಹುಚ್ಚಿ.

*******************************

Leave a Reply

Back To Top