ಕಬ್ಬಿಗರ ಅಬ್ಬಿ -9
ಕನಸು ಕಲಿಸುವ ಕವಿತೆಗಳು
ಆಫೀಸ್‌ನಲ್ಲಿ ದಿನವಿಡೀ ದುಡಿದು, ಚಿಂತೆಯ ಗೆರೆಗಳು ಹಣೆಯಲ್ಲಿ ಮೂಡಿ ಮನೆಗೆ ಬಂದಾಗ, ಬಿಸಿ ಬಿಸಿ ಕಾಫಿಯ ಜತೆಗೆ ಭಾವ ಗೀತೆ ಕೇಳುತ್ತೇನೆ. ಕುದಿದು ಕೆನೆಗಟ್ಟಿದ ಮನಸ್ಸನ್ನು ತಣಿಸಿ, ತಂಪು ಐಸ್ ಕ್ರೀಂ ಮಾಡುವ ಶಕ್ತಿ ಈ ಕವಿತೆಗಳಿಗೆ. ಹಾಡು ಕೇಳುತ್ತಾ ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ, ಅಂತ ಸ್ಮೃತಿ ಪಟಲದಿಂದ ಅಕ್ಷಿಪಟಲಕ್ಕೆ ಚಿತ್ರಗಳು ಪ್ರೊಜೆಕ್ಟ್ ಆಗಿ, ಕನಸುಗಳಿಗೆ ರೆಕ್ಕೆ ಮೂಡುತ್ತವೆ.
ಬದುಕಿನಲ್ಲಿ ವೈಫಲ್ಯಗಳು ಹಲವು. ಆದರೂ ನೂರರಲ್ಲಿ ತೊಂಭತ್ತೊಂಭತ್ತು ಮಂದಿ ವೈಫಲ್ಯವನ್ನು ಜಿಗಿಹಲಗೆ ಮಾಡಿ ಮುಂದಕ್ಕೆ ಚಿಮ್ಮಿ ಹಾರಲು ಪ್ರಯತ್ನ ಮಾಡುತ್ತಾರೆ. ಅಂತಹ ಒಂದು ಪ್ರಯತ್ನಕ್ಕೆ ಹುಮ್ಮಸ್ಸು ಕೊಡುವ ಶಕ್ತಿ ಹಾಡುಗಳಿಗಿವೆ. ಬೇಸರವಾದಾಗಲೂ ಖುಷಿಯಾದಾಗಲೂ ಮನಸ್ಸಿಗೆ ಸಮತೋಲನ, ಸಮೋಲ್ಲಾಸ ತರುವ ಮ್ಯಾಜಿಕ್ ಕವಿತೆಗಳು ಮಾಡಬಲ್ಲವು.
ಕವಿತೆಗೆ ಗೇಯತೆ ಕೂಡಿದಾಗ ಅದು ಹಾಡಿನ ಸ್ಥಿತಿ ತಲಪುತ್ತದೆ. ತಕ್ಕಮಟ್ಟಿನ ಲಯಗಾರಿಕೆ ಅದಕ್ಕೆ ಬೇಕು, ಪ್ರಾಸಗಳೂ ಗರಿಗರಿ ಚಕ್ಕುಲಿಯನ್ನು ಕುರುಕಿದ ಹಾಗೆ, ಮನಸ್ಸಿಗೆ ಆಹ್ಲಾದಕರ. ಕೆ.ಎಸ್.ನ. ಅವರ ಕವಿತೆಗಳು ಕನ್ನಡದ ಅತ್ಯುತ್ಕೃಷ್ಟ ಗಜಲ್ ಗಳು. ಪ್ರೇಮ ಹೇಗೆ ಸರ್ವಕಾಲಿಕವೋ ಹಾಗೆಯೇ ಈ ಹಾಡುಗಳು ಕೂಡ.
ಕವಿತೆ ಕಟ್ಟುವಾಗ, ಕವಿತೆಗೊಂದು ವಸ್ತು, ವಾಸ್ತು ಮತ್ತು ದೇಹ ಕೊಟ್ಟು ಅದರೊಳಗೆ ಆತ್ಮಾರ್ಥ ಪ್ರತಿಷ್ಠೆ ಮಾಡುತ್ತೇವೆ. ಮೈಸೂರು ಮಲ್ಲಿಗೆಯಲ್ಲಿ ಇದಲ್ಲದೇ ಇನ್ನೊಂದು ಅದ್ಭುತ ಅಂಶವಿದೆ. ಅದು ಕವಿತೆಯ ದನಿ ( ಧ್ವನಿಯಲ್ಲ). ಕವಿತೆಯುದ್ದಕ್ಕೂ, ಈ ದನಿ ನಮ್ಮ ಜೊತೆ ಮಾತಾಡುತ್ತೆ, ಪಿಸುಗುಟ್ಟುತ್ತೆ, ಸಂವೇದನೆಯ ತಂತಿ ಮೀಂಟುತ್ತೆ.
ಉದಾಹರಣೆಗೆ ಕೆ.ಎಸ್. ನರಸಿಂಹ ಸ್ವಾಮಿಯವರ ಮೈಸೂರು ಮಲ್ಲಿಗೆ ಕವನ ಸಂಕಲನದ ಸಿರಿಗೆರೆಯ ನೀರಲ್ಲಿ ಹಾಡು, ನೋಡಿ.
ಸಿರಿಗೆರೆಯ ನೀರಿನಲಿ ಬಿರಿದ ತಾವರೆಯಲ್ಲಿ
ಕೆಂಪಾಗಿ ನಿನ್ನ ಹೆಸರು
ಗುಡಿಯ ಗೋಪುರಗಳಲ್ಲಿ ಮೆರೆವ ದೀಪಗಳಲ್ಲಿ
ಬೆಳಕಾಗಿ ನಿನ್ನ ಹೆಸರು
ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನ
ಕಣ್ಣಲ್ಲಿ ನಿನ್ನ ಹೆಸರು
ತಾಯ ಮೊಲೆಯಲ್ಲಿ ಕರು ತುಟಿ ಇಟ್ಟು ಚೆಲ್ಲಿಸಿದ
ಹಾಲಲ್ಲಿ ನಿನ್ನ ಹೆಸರು
ಹೂಬನದ ಬಿಸಿಲಲ್ಲಿ ನರ್ತಿಸುವ ನವಿಲಿನ
ದನಿಯಲ್ಲಿ ನಿನ್ನ ಹೆಸರು
ಹೊಂದಾಳೆ ಹೂವಿನಲಿ ಹೊರಟ ಪರಿಮಳದಲ್ಲಿ
ಉಯ್ಯಾಲೆ ನಿನ್ನ ಹೆಸರು
ಮರೆತಾಗ ತುಟಿಗೆ ಬಾರದೆ, ಮೊಡ ಮರೆಯೊಳಗೆ
ಬೆಳದಿಂಗಳು ನಿನ್ನ ಹೆಸರು
ನೆನೆದಾಗ ಕಣ್ಣ ಮುಂದೆಲ್ಲ ಹುಣ್ಣಿಮೆಯೊಳಗೆ
ಹೂಬಾಣ ನಿನ್ನ ಹೆಸರು
ಮೈಸೂರು ಮಲ್ಲಿಗೆ ಸಂಕಲನದ ಹೆಸರಲ್ಲೇ ಮಲ್ಲಿಗೆಯಿದೆ. ಮಲ್ಲಿಗೆಯೊಳಗೆ,ಆಕೆ ಇದ್ದಾಳೆ. ಆಕೆಯ ಪರಿಮಳ ಇದೆ, ಆಕೆಯ ಸೌಂದರ್ಯವಿದೆ, ಹುಡುಗಿಯ ಸೂಕ್ಷ್ಮ ಪ್ರಜ್ಞೆಗಳು, ಹುಡುಗಿಯ ನಿಷ್ಕಲ್ಮಶ ಮನಸ್ಸು, ಮಲ್ಲಿಗೆಯ ಪಕಳೆಗಳೇ ನಾಲ್ಕು ದಿಕ್ಕಿಗೆ ನೋಟ ನೆಟ್ಟ ಆಕೆಯ ಕನಸುಗಳು.
ನಿಷ್ಕಲ್ಮಶ ಮನಸ್ಸು ಎನ್ನುವಾಗ, ಕೆ.ಎಸ್.ನ. ಅವರ ಕವಿತೆಯ ಇನ್ನೊಂದು ಅಂಶವನ್ನು ಸೂಚಿಸಿದ್ದೇನೆ. ಅವರ ಕವಿತೆಯ ಪ್ರೇಮ,ಆದರ್ಶ ಪ್ರೇಮ. ನಿಜ ಜೀವನದಲ್ಲಿ, ಇದು ಅಪೂರ್ವ ,ಅಪರೂಪ. ಈ ಕಾವ್ಯಧ್ವನಿ, ಸಮಾಜದ ಸಂಬಂಧಗಳೊಳಗೆ ಪೊಸಿಟಿವಿಟಿಯನ್ನು ಬಿತ್ತಿ ಬೆಳೆಸುತ್ತದೆ. ಎಷ್ಟು ಚಿಂತೆ, ಒತ್ತಡಗಳ ನಡುವೆಯೂ ಈ ಹಾಡುಗಳನ್ನು ಕೇಳಿದರೆ, ಬದುಕಿಗೆ ಬೆಳಗು ತೆರೆಯುತ್ತದೆ.
ಅದೇ ಹೊತ್ತಿಗೆ, ವಿಮರ್ಶೆಯ ದೃಷ್ಟಿಯಿಂದ, ಇದು ಅವರ ಕಾವ್ಯದ ಸೋಲು ಎಂದರೂ, ಕೆ.ಎಸ್.ನ.ಅವರು ತಲೆಗೆಡಿಸದೆ, ಪ್ರೇಮಿಸಿದರು, ಬದುಕಿದರು, ಕವಿತೆಗಳಿಗೆ ಜೇವ ಕೊಟ್ಟರು.
ಮೇಲಿನ ಕವಿತೆ ಕವಿಗೆ ಆತನ ಮನದನ್ನೆಯ ಕಡೆಗಿರುವ ಉತ್ಕಟ ಪ್ರೀತಿಯ ಉಲಿಕೆ. ಈ ಕವಿತೆಯಲ್ಲಿ ಅದ್ಭುತವಾದ ಪ್ರತಿಮೆಗಳು ಇವೆ. ಈ ಕವಿತೆಯಲ್ಲಿ ನನ್ನಅನುಭವಕ್ಕೆ ಎಟುಕಿದ ಹಲವು ಅಂಶಗಳು ಜೀವಮುಖೀ ಚೇತನದ ನಿತ್ಯರೂಪೀ ದರ್ಶನಗಳು.
“ಸಿರಿಗೆರೆಯ ನೀರಲ್ಲಿ, ಬಿರಿದ ತಾವರೆಯಲ್ಲಿ
ಕೆಂಪಾಗಿ ನಿನ್ನ ಹೆಸರು..”
ಕೆರೆ ಎಂಥದ್ದು !! ಸಿರಿಗೆರೆ..
ಅಂದರೆ, ಕೆರೆತುಂಬ, ನೀರಲ್ಲ, ಸಿರಿ.
ಸಿರಿ ಅಂದರೆ, ಶ್ರೀ, ಸಂಪತ್ತು. ಸಂಪತ್ತು ತುಂಬಿದ ಕೆರೆಯಲ್ಲಿ, ಶ್ರೀಮಂತಿಕೆಯ ಉಸುಕಲ್ಲಿ,ಶ್ರೀಮಂತಿಕೆಯ ನೀರ ಮೇಲೆ ಎಲೆಯತ್ತಿ.,ಅದರಿಂದ ಹೊರಗೆ ತಲೆಯೆತ್ತಿ ನಿಂತ ತಾವರೆಯ ಕೆಂಪುಬಣ್ಣದಲ್ಲಿ ಆಕೆಯ ಹೆಸರಿದೆ. ಬಣ್ಣವನ್ನು,ಇಲ್ಲಿ ಸ್ವಭಾವ,ಗುಣ ಅಂತ ತೆಗೆದುಕೊಳ್ಳಬಹುದು. ಅಂತಹ ಶ್ರೀಮಂತಿಕೆಯೊಳಗೆ ( ಆ ಶ್ರೀಮಂತಿಕೆ, ಧನಸಂಪತ್ತೇ ಆಗಬೇಕಿಲ್ಲ, ಅದು,ವಿದ್ಯೆ ಸೌಂದರ್ಯ, ಬುಧ್ದಿ, ಇತ್ಯಾದಿ,ಎಲ್ಲವೂ ಆಗಬಹುದು) ಹುಟ್ಟಿದ ಆ ಹುಡುಗಿ,ಶ್ರೀಮಂತೆ. ತಾವರೆ ಹೂವು, ಮತ್ತು ಎಲೆಗಳ ಮೇಲೆ ನೀರು ಅಂಟಲ್ಲ. ಹೂ,ನೀರನ್ನು ಮೀರಿ ಮೇಲಕ್ಕೆ ತಲೆಯೆತ್ತಿ ನಿಲ್ಲುತ್ತೆ. ಹಾಗೆಯೇ ಕವಿಯ ಮನಸ್ಸು ಕದ್ದ ಗೆಳತಿ, ತನ್ನ ಶ್ರೀಮಂತಿಕೆಯ ಜತೆ ಅಟ್ಯಾಚ್ಮೆಂಟ್ ಇಲ್ಲದೆ, ಶ್ರೀಮಂತಿಕೆಯನ್ನು ಮೀರಿ ನಿಂತ ಗುಣಸ್ವಭಾವವಾಗಿ, ಕವಿಗೆ ಕಾಣುತ್ತಾಳೆ,ಆಪ್ತಳಾಗುತ್ತಾಳೆ.
ಇಲ್ಲಿ,ಸಿರಿ ಅನ್ನುವ ಪದಕ್ಕೆ, ಸೌಂದರ್ಯ ಎಂಬ ಅರ್ಥ ನೀಡಿ ಈ ಮೇಲಿನ ಪ್ಯಾರಾ ಪುನಃ ಓದಿ ಕೊಂಡರೆ, ಆಹಾ, ಎಂತ ಸಿರಿವಂತ ಕವಿತಾ ಸಾಲುಗಳು !!
“ಗುಡಿಯ ಗೋಪುರದಲ್ಲಿ,ಮೆರೆವ ದೀಪಗಳಲ್ಲಿ,ಬೆಳಕಾಗಿ ನಿನ್ನ ಹೆಸರು.”
ಗುಡಿಯ ಗೋಪುರದಲ್ಲಿ, ಎಂದರೆ,ಎತ್ತರಕ್ಕೆ, ಎಲ್ಲರಿಗೂ ಬೆಳಕು ತಲಪುವ ಹಾಗೆ ಅನ್ನ ಬಹುದೇ?. ಗುಡಿಯೊಳಗೆ ಉರಿಯುವ ದೀಪ, ಗರ್ಭಗುಡಿಯಷ್ಟಕ್ಕೇ ಬೆಳಕು ಚೆಲ್ಲ ಬಹುದು. ಆದರೆ, ಗುಡಿಯ ಗೋಪುರದಲ್ಲಿ ಹಚ್ಚಿದ ದೀಪ,ದೂರ ದೂರಕ್ಕೆ ಬೆಳಕು ಚೆಲ್ಲುತ್ತದೆ.
ಗುಡಿಯ ಗೋಪುರದಲ್ಲಿ ಬೆಳಗುವ ದೀಪಕ್ಕೆ ಗರ್ಭಗುಡಿಯ ತಡೆಗೋಡೆಗಳಿಲ್ಲ. ಸ್ವತಂತ್ರ ಅದು.
ದಿಕ್ಕುಗಳ ಪ್ರತಿಬಂಧವೂ ಅದಕ್ಕಿಲ್ಲ. ಎಲ್ಲಾ ದಿಕ್ಕಿಗೂ ಸಮಪಾಲಿನ ಚೇತನವಿಸ್ತರಣೆ ಅದರದ್ದು.
ಹಾಗೆಯೇ, ಬೆಳಕು ಎಂದರೆ ದಾರಿ ತೋರುವ ಪ್ರಜ್ಞೆ ಎನ್ನೋಣವೇ, ಅರಿವು ಎನ್ನೋಣವೇ.
ಹೇಗಿದ್ದಾಳೆ ಹೇಳಿ! ನಮ್ಮ ಈ ಹುಡುಗಿ. ಸಕಲದಿಕ್ಕಲ್ಲೂ ದಾರಿ ತೋರುತ್ತಾಳೆ. ಎಲ್ಲಾ ನೋಟಗಳ ಅರಿವಿನ ದಾರಿಯಾಗುತ್ತಾಳೆ.
“ಜೋಯಿಸರ ಹೊಲದೊಳಗೆ ಕುಣಿವ
ಕೆಂಗರುವಿನಾ ಕಣ್ಣಲ್ಲಿ ನಿನ್ನ ಹೆಸರು.”
ಕೆ ಎಸ. ನ. ಅವರ ಒಟ್ಟೂ ಕವಿತೆಗಳಲ್ಲಿ, ಹಳ್ಳಿಗಳ ಬೇರೆ ಬೇರೆ ಪಾತ್ರಗಳು, (ಜೋಯಿಸರು, ಶ್ಯಾನುಭಾಗರು, ಹೊಲ,ಬೇಲಿ, ತೊಟ್ಟಿಲು ಇತ್ಯಾದಿ)
ನಮ್ಮ ಕಣ್ಣಿಗೆ ಕಟ್ಟುವಷ್ಟು ಆಪ್ತ, ರಿಯಲ್ ಪಾತ್ರಗಳು. ಚಿಕ್ಕಂದಿನಲ್ಲಿ ಕರುಗಳ ಜತೆ ಆಟವಾಡಿದ ಮಕ್ಕಳಿಗೆ ಅನನ್ಯ ಅನುಭವ ಸಿಗುತ್ತದೆ. ದನಕರು, ಮುಗ್ಧತೆಗೆ ಇನ್ನೊಂದು ಹೆಸರು. ಕರುಗಳಿಗೆ ಅಷ್ಟೇ ತುಂಟತನ. ಅಂತಹಾ ಕರುವಿನ ಕಣ್ಣುಗಳು, ಶುಧ್ದ ದರ್ಪಣಗಳ ಹಾಗೆ. ಆ ಕಣ್ಣೊಳಗೆ ಮೂಡುವ ಸಮಾಜದ ಪ್ರತಿಬಿಂಬಗಳು, ಇದ್ದದ್ದು ಇದ್ದ ಹಾಗೇ, ಚತುರ ಬುಧ್ದಿಯ ಮಾಡಿಫಿಕೇಷನ್ ಇಲ್ಲದೇ, ರೂಪುಗೊಳ್ಳುತ್ತವೆ. ಚುರುಕು ತುಂಟ, ಮುಗ್ಧ ಕಣ್ಣುಗಳಿಗೆ ಜಗತ್ತು ಸುಂದರ, ಜಗತ್ತೇ ಪ್ರೀತಿ. ಅಂತಹ ಕಣ್ಣುಗಳು ಈ ಕವಿಯ,ಹುಡುಗಿಯದ್ದು. ಆ ಕಣ್ಣುಗಳ ಮುಗ್ಧತೆಗೆ ಸ್ಪಟಿಕದ ಸ್ಪಷ್ಟತೆ, ಸೌಂದರ್ಯವೂ ಇದೆ ಅಂತ ಬೇರೆ ಹೇಳ ಬೇಕಿಲ್ಲ ತಾನೇ.
“ತಾಯ ಮೊಲೆಯಲ್ಲಿ ಕರು,ತುಟಿಯಿಟ್ಟು
ಚೆಲ್ಲಿಸಿದ ಹಾಲಲ್ಲಿ,ನಿನ್ನ ಹೆಸರು.”
ನಾನು ಚಿಕ್ಕಹುಡುಗನಾಗಿದ್ದಾಗ, ಅಮ್ಮ ಹಾಲು ಕರೆಯುತ್ತಿದ್ದಳು, ನನಗೆ ಕರು ಬಿಡುವ ಕೆಲಸ. ದನ ತನ್ನ ಮೊಲೆಯಿಂದ ಹಾಲು ಸುಲಭವಾಗಿ ಹರಿಸುವುದಿಲ್ಲ. ಮೊದಲು, ಆ ಗೋಮಾತೆಯ ಕರು, ತನ್ನ ಮುದ್ದಾದ ಮಂಡೆಯಿಂದ ಮೃದುವಾಗಿ ಕೆಚ್ಚಲಿಗೆ ಗುದ್ದುತ್ತದೆ. ಆ ಮೇಲೆ ಕರು ಹಸುವಿನ ಮೊಲೆ ಚೀಪುತ್ತೆ. ಇನ್ನೂ ಹಾಲು ಬಂದಿಲ್ಲ ಅಂದರೆ, ಅದು ತನ್ನ ಮೃದು ತಲೆಯಿಂದ ನವಿರಾಗಿ ತಾಯಿ ಕೆಚ್ಚಲಿಗೆ ಇನ್ನೂ ಗುದ್ದುತ್ತದೆ ( ಇದು ತಾಯಿಗೆ ನೋವಾಗುವಷ್ಟು ಜೋರಾಗಿ ಅಲ್ಲ) ಆಗ ದನ ತನ್ನ ಮೊಲೆಯಿಂದ ಕರುವಿಗೆ ಹಾಲೂಡುತ್ತದೆ. ಹಾಗೆ ಹಾಲು ಕುಡಿಯುವ ಕರುವಿನ ಕಟವಾಯಿಯಿಂದ ಹಾಲು ತೊಟ್ಟಿಕ್ಕುವ ಅಂದವನ್ನು ಕಂಡ ಅದೃಷ್ಟವಂತ ನಾನು. ಆ ಹಾಲು ತಾಯಿಯ, ಮಾತೃತ್ವಕ್ಕೆ, ಮಮತೆಗೆ, ಇನ್ನೊಂದು ಹೆಸರು. ಆ ಕರುವಿನ ಬಾಯಿಯಿಂದ ತೊಟ್ಟಿಕ್ಕುವ ಹಾಲಿನಲ್ಲಿ ಕವಿಗೆ ಆಕೆ ಕಂಡರೆ, ಆ ಹುಡುಗಿಯಲ್ಲಿ, ಎಂತಹ ಮಮತೆ.ಎಂತಹಾ ಮಡಿಲು ತುಂಬಿ ಪ್ರೀತಿ. ಇದಕ್ಕಿಂತ ಉತ್ಕೃಷ್ಟ ರೂಪಕ ಬೇಕೇ.
“ಹೂಬನದ ಬಿಸಿಲಲ್ಲಿ ನರ್ತಿಸುವ
ನವಿಲಿನ ದನಿಯಲ್ಲಿ ನಿನ್ನ ಹೆಸರು”
ಹೂಬನದ ಬಿಸಿಲಿನಲ್ಲಿ ಅನ್ನುವಾಗ ಗಮನಿಸಿ, ಬನತುಂಬಾ ಹೂಗಳು, ಅವುಗಳ ಮೇಲೆ ಚಿಗುರುಕಿರಣಗಳು, ಇದು ವಸಂತ ಭಾವ. ಪ್ರೀತಿ ಹುಟ್ಟಲು, ಪ್ರಕೃತಿಯ ಮಡಿಲು.
ಗಂಡು ನವಿಲು ಸುಮ್ಮನೇ ಕುಣಿಯಲ್ಲ. ಅದು ತನ್ನ ಪ್ರೇಮಿಕೆಯನ್ನು ಪ್ರಣಯಕ್ಕೆ ಕರೆಯುವ ಬಗೆಯಿದು. ಆ ಹೆಣ್ಣು ನವಿಲೇನು ಕಡಿಮೆಯೇ. ಪರಿ ಪರಿಯಾಗಿ ಕರೆದ ಇನಿಯನಿಗೆ ಪರೀಕ್ಷೆ ಹಚ್ಚುವಾಕೆ ಅವಳು.
ಗಂಡುನವಿಲು, ತನ್ನ ಜೀವಿತದಲ್ಲಿ ಸಂಗ್ರಹಿಸಿದ ಗರಿಗಳ ಸಿರಿಹೊರೆಯನ್ನು ಅರ್ಧ ಚಂದ್ರಾಕಾರವಾಗಿ ಅರಳಿಸಿ ಹೆಜ್ಜೆಯಿಡುತ್ತದೆ.
ಆ ಹೆಜ್ಜೆಗಳು ಸಮತೋಲನದ ಹೆಜ್ಜೆ ( ನವಿಲಿನ ದೇಹದ ಹತ್ತು ಪಟ್ಟು ದೊಡ್ಡ ಗರಿಗಳ ಕೊಡೆ), ಗಾಂಭೀರ್ಯದ ಹೆಜ್ಜೆ.
ನಿಸರ್ಗದೊಳಗಿನ ಅನ್ಯೋನ್ಯತೆಯ ಲಯ ಆ ಹೆಜ್ಜೆಗಳಿಗೆ . ಇದು ಸಂಪೂರ್ಣ ಸಮರ್ಪಣೆಯ ನೃತ್ಯ. ನೃತ್ಯಕ್ಕೆ ತನ್ನ ಸೌಂದರ್ಯವನ್ನು, ಜ್ಞಾನವನ್ನು ಜೀವವನ್ನು ಅರ್ಪಿಸಿದ ದನಿ. ಅಂತಹಾ ಸಮತೋಲನದ, ಗಾಂಭೀರ್ಯದ, ಅನ್ಯೋನ್ಯತೆಯ, ಸಮರ್ಪಣಾ ಭಾವದ, ದನಿಯಲ್ಲಿ ಕವಿಗೆ, ಆಕೆ ಕಾಣಿಸುತ್ತಾಳೆ.
“ಹೊಂದಾಳೆ ಹೂವಿನಲಿ,ಹೊರಟ
ಪರಿಮಳದಲ್ಲಿ ಉಯ್ಯಾಲೆ ನಿನ್ನ ಹೆಸರು.”
ಹೂವು ಅಂತಿಂತ ಹೂವಲ್ಲ. ಹೊಂದಾಳೆ ಹೂವು. ಚಿನ್ನದ ಬಣ್ಣ ಅದಕ್ಕೆ !! ಅದರ ಪರಿಮಳ ಹೇಗಿರಬಹುದು, ಆ ಹೂ, ಗಾಳಿಯಲ್ಲಿ ತೊನೆಯುತ್ತಾ ಹರಡುವ ಪರಿಮಳ, ಉಯ್ಯಾಲೆ ಆಡುವ ಕಲ್ಪನೆ ನೋಡಿ. ಹೂವು ಉಯ್ಯಾಲೆ ಆಡುವುದಲ್ಲ, ಪರಿಮಳ ಉಯ್ಯಾಲೆ ಆಡುವುದು. ಪರಿಮಳದ ಅಲೆ ಅದು. ಕೆಲವೊಮ್ಮೆ ಹೆಚ್ಚು, ಕೆಲವೊಮ್ಮೆ ನಾಸಿಕಾಗ್ರಕ್ಕೆ ರುಚಿಸಿಕ್ಕದಷ್ಟು ಕಡಿಮೆ,
ಹೀಗೆ ಪರಿಮಳದ ಅಲೆ,ಅಲೆಅಲೆಯಾಗಿ ಪಸರಿಸುವಾಗ, ರಸಿಕ ನಾಸಿಕದ ಅನುಭೂತಿಯ ಪರಿಕಲ್ಪನೆ. ಆ ಉಯ್ಯಾಲೆ, ರಸ ತರಂಗವಾಗಿ ಆಕೆ ಆಡುವ ರೂಪ ಕವಿಗೆ ಕಂಡದ್ದು, ರವಿಗೆ ಕಾಣಲೇ ಇಲ್ಲ !! ಕವಿ ಅಷ್ಟೂ ರಸಿಕ!!
ಉಯ್ಯಾಲೆ ಪುನಃ ಪುನಃ ಆವರ್ತಿಸುವ, ಆಂದೋಳಿಸುವ ಕ್ರಿಯೆ. ಪ್ರೀತಿ ಎಂಬ ಎತ್ತರ, ಮುನಿಸು ಎಂಬ ತಳಮಟ್ಟ, ಇವೆರಡರ ನಡುವೆ ತೊನೆಯುವ, ಪುನಃ ಪುನಃ ಆವರ್ತಿಸುವ ಈ ಕಗರಿಯೆಯಾಗಿ ಕವಿ,ಪ್ರೇಮಿಕೆಯನ್ನು ಕಾಣುತ್ತಾರೆ.
“ಮರೆತಾಗ ತುಟಿಗೆ ಬಾರದೆ, ಮೋಡ ಮರೆಯೊಳಗೆ, ಬೆಳದಿಂಗಳು ನಿನ್ನ ಹೆಸರು “
ಈ ಎರಡು ಸಾಲುಗಳು, ಮತ್ತು ಮುಂದಿನೆರಡು ಸಾಲುಗಳು ಕವಿಯ ಮನಸ್ಸಿನ ಬಟ್ಟಲಲ್ಲಿ ಮೂಡುವ ಕಲ್ಪನೆಗಳು.
ಬೆಳದಿಂಗಳ ರಾತ್ರಿಯಲ್ಲಿ, ಆಗಸದಲ್ಲಿ ಮೋಡ ಕವಿದರೆ, ಚಂದಿರ ಕಣ್ಣುಮುಚ್ಚಾಲೆ ಆಡುತ್ತಾನೆ. ಬೆಳದಿಂಗಳು, ಅಂದರೆ ಬಿಳೀ ಚಂದಿರ ಅಂತಾನೂ ಹೇಳಬಹುದು ( ತಿಂಗಳು ಎಂದರೆ ಚಂದ್ರ ಎಂಬ ಅರ್ಥ ಇದೆ)
ಕವಿಯ ಪ್ರೇಮಾಗಸಕ್ಕೆ ಆಗಾಗ ಮೋಡ ಕವಿದು ಆಕೆ ಪ್ರೀತಿಯಿಂದ ಕಣ್ಣುಮುಚ್ಚಾಲೆ ಆಡುತ್ತಾಳೆ, ಈಗ ಕಂಡಳು ಅನ್ನುವಾಗ ಮರೆಯಾಗುತ್ತಾಳೆ,
ಸರಿ, ಇನ್ನು ಈಕೆ ದರ್ಶನ ಕೊಡಲ್ಲ ಅಂತ ಕವಿ ನಿರಾಶನಾದಾಗ, ಹೇಯ್ ಇಲ್ಲಿದ್ದೀನಿ ಕಣೋ! ಅಂತ ಕುಣಿಯುತ್ತಾಳೆ !.
“ನೆನೆದಾಗ, ಕಣ್ಣ ಮುಂದೆಲ್ಲ,
ಹುಣ್ಣಿಮೆಯೊಳಗೆ, ಹೂಬಾಣ ನಿನ್ನ ಹೆಸರು.”
ಇದೂ ಕವಿಮಾನಸದಲ್ಲಿ ನಡೆಯುವ ಪ್ರೇಮಕ್ರಿಯೆ. ಕವಿ ಆಕೆಯನ್ನು ಮರೆತರೆ, ಕಾಮದೇವ ಬಿಡುತ್ತಾನೆಯೇ. ಪ್ರೀತಿಭಾವದಿಂದ, ಪ್ರಣಯಭಾವಕ್ಕೆ ದಾಟುವ ಸೂಕ್ಷ್ಮ ದಾರಿಯನ್ನು ಕವಿಗೆ ಮನ್ಮಥನ ಹೂಬಾಣ ಕಲಿಸುತ್ತದೆ. ಆ ಹೂಬಾಣದಲ್ಲಿ ಪ್ರಣಯರೂಪಿಯಾಗಿ ಆಕೆ ತನ್ನ ಇನಿಯ ಕವಿಯನ್ನು ಕಾಡುತ್ತಾಳೆ.
ಹೀಗೆ, ಕೆ.ಎಸ್. ನ ಹಾಡು, ಬರೆಯುವುದಿಲ್ಲ, ಹಾಡೇ ಆಗಿ ಬಿಡುತ್ತಾರೆ. ಪ್ರೇಮದ ಅಕ್ಷರವಾಗುವುದಿಲ್ಲ, ಪ್ರೇಮಕ್ಕೆ ಉಸಿರಾಗುತ್ತಾರೆ. ಅದಕ್ಕೇ ಅವರ ರಚನೆಗಳು ಬರೇ ಕವಿತೆಗಳಲ್ಲ, ಹಾಡುಗಳು. ಸಂಗೀತ ಭಾವದ ಕಾವ್ಯ ಝರಿಗಳು.
ನವ್ಯ ಕವಿತೆಗಳು ಮನಸ್ಸನ್ನು ಚಾಲೆಂಜ್ ಮಾಡಿ, ಚಿಂತನೆಗೆ ಹರಿತ ತರುವ ಕೆಲಸ ಮಾಡಿದರೆ, ಕೆ.ಎಸ್ ನ ಅವರ ಭಾವಗೀತೆಗಳು, ಮನಸ್ಸನ್ನು ನವಿರಾಗಿ ಆವರಿಸಿ, ಕನಸು ಕಟ್ಟಲು ಕಲಿಸುತ್ತವೆ. ಸ್ವಸ್ಥ, ಪ್ರೀತಿತುಂಬಿದ ಸಮಾಜವನ್ನು ಮೌನವಾಗಿ, ನೋವಾಗದ ಹಾಗೆ ಕಟ್ಟಿ ಬದುಕನ್ನು ಸುಂದರವಾದ ಉದ್ಯಾನವನವಾಗಿಸುತ್ತದೆ.
********************************************************
ಮಹಾದೇವ ಕಾನತ್ತಿಲ್
ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ
ಕೆಎಸ್ ನ ರ ಕವಿತೆಯಷ್ಟೇ ಆಪ್ತವಾಗಿದೆ ನಿಮ್ಮ ಬರಹ.
ಸರ್. ಕೆ ಎಸ್ ನ ಅವರ ಕವಿತೆಗಳ ಪ್ರೇರಣೆಯೇ ಹಾಗೆ!
ಧನ್ಯವಾದಗಳು
ಬಹಳ ಆಪ್ತವೆನಿಸುವ ನವಿರು ಬರಹ
ಪೂರ್ಣಿಮಾ ಅವರೇ
ಚಿರಂಜೀವಿ, ನಿತ್ಯನೂತನ ಕವಿತೆಗಳವು. ಬರೆಯುವುದೇ ಖುಷಿ.
ತುಂಬಾ ಧನ್ಯವಾದಗಳು
ಕೆಸ್ಎನ್ ಅವರ ಕಾವ್ಯದ ಪರಿಮಳದ ಉಯ್ಯಾಲೆಯಲ್ಲಿ ನಾವೂ ಜೀಕಿದೆವು. ಅವರ ಕವನದಲ್ಲಿಯ ಸೌಂದರ್ಯ ದರ್ಶನವಾಯಿತು. ಹಾರ್ದಿಕ ಅಭಿನಂದನೆಗಳು
ಪ್ರಹ್ಲಾದ ಜೋಶಿ ಸರ್
ಅಮರತ್ವ ಪಡೆದ ಹಾಡುಗಳು ಅವು.
ತುಂಬಾ ಧನ್ಯವಾದಗಳು
ಕೆ ಎಸ್ ಎನ್ ರವರ ಕವನಗಳು positivity ಬೀರುತ್ತವೆ ಎಮದು ಹೇಳಿ ವಾಸ್ತವಿಕತೆಯನ್ನೂ, (ಗೋಪುರದ ಮೇಲಿನ ದೀಪ ,)ಎಲ್ಲ ದಿಕ್ಕುಗಳಲ್ಲಿ ಬೆಳಕನ್ನು ಬೀರುತ್ತಾಳೆಂದು ಅರ್ಥೈಸಿ ಕಾರ್ಯೇಷು ದಾಸಿ
ಕರನೇಶು ಮಂತ್ರಿ ,ರೂಪೇಷು ಲಕ್ಷ್ಮಿ ,ಭೋಜೆಶು ಮಾತಾ,
ಶಯನೇಶು ರಂಭಾ ಕ್ಷಮಯಾ ಧರಿತ್ರಿ
ಷಡ್ ಗುಣ ಸಂಪನ್ನ ಕುಲ ಧರ್ಮ ಪತ್ನಿ ಎಂಬುದನ್ನು ಹೇಳಿದ್ದೀರಿ.ತುಂಬಾ ಆಳಕ್ಕಿಳಿದು ಮಾಡಿದ ವಿಮರ್ಶೆ.
ಮೀರಾ ಮ್ಯಾಡಂ.
ನಿಮ್ಮ ಪ್ರತಿಕ್ರಿಯೆ, ಲೇಖನಕ್ಕೆ ಹೊಸ ಆಯಾಮ.
ಧನ್ಯವಾದಗಳು
ಅಣ್ಣಾ.
ಪ್ರೇಮ ಕವಿ ಎಂದು ಕರೆಯಿಸಿಕೊಂಡ ಕೆ ಎಸ್ ನರಸಿಂಹ ಸ್ವಾಮಿ ಅವರ ಕವಿಹೃದಯ ಅವರ ಕವಿತಾ ಕಾವ್ಯಲಹರಿಗೆ ನಿಮ್ಮ ಅದ್ಬುತ ವಿಶ್ಲೇಷಣೆ ರಂಜಿಸಿತು… ಅಭಿನಂದನೆಗಳು
ಮಲ್ಲಿಗೆ ಯಾಕೆ ಅರಳುತ್ತೆ!.
ಅರಳುವುದು ಅದೇ..ಅರಳುವುದೇ..
ಅಷ್ಟೇ ಸಹಜ, ಆಕರ್ಷಕ ಅವರ ಕವಿತೆಗಳು.
ನಿಮ್ಮ ನಲ್ನುಡಿಗಳು ಕೆ ಎಸ್ ನ ಅವರ ಪಾದಗಳಿಗೆ ಅರ್ಪಣೆ.
ತುಂಬಾ ಧನ್ಯವಾದಗಳು ತಂಗೀ