ಕವಿತೆ
ನನ್ನ ಬೆರಳುಗಳು
ಡಾ.ಕಾತ್ಯಾಯಿನಿ ಕುಂಜಿಬೆಟ್ಟು.
ನನ್ನ ಬೆರಳುಗಳು
ಗಿಡಗಳಲ್ಲಿ ಚಿಗುರುತ್ತವೆ
ಹವಳದಂತೆ ಕೆಂಪು ಕೆಂಪು
ಅರಳುತ್ತವೆ ತಾವರೆಯ ಎಸಳುಗಳಂತೆ
ಕೊಳದಲ್ಲಿ ಮೀನುಗಳಾಗಿ
ಉಗುರುಗಳು ಕಣ್ಣುಗಳಾಗಿ
ಕಣ್ಣು ಮಿಟುಕಿಸದೆ ದೇವರಾಗುತ್ತವೆ
ಮಿಂಚಿನ ಗತಿಯಲ್ಲಿ ಚಲಿಸುತ್ತವೆ
ನಾನು ಗಾಳ ಹಾಕುತ್ತೇನೆ
ನನ್ನದೇ ಬೆರಳುಗಳಿಗೆ
ಕವಿತೆಯ ಎರೆಹುಳ ತುಂಡುಪದ ಸಿಕ್ಕಿಸಿ
ಮೀನುಗಳು ನೀರು ಬಿಟ್ಟೊಡನೆ
ಮರಳಿ ಬೆರಳುಗಳಾಗುತ್ತವೆ
ಹವಳ ಚಿಗುರುಗಳಾದ
ತಾವರೆ ಎಸಳುಗಳಾದ
ಕೊಳದೊಳಗೆ ಮೀನುಗಳಾದ
ಅನುಭವಗಳನ್ನು ಬರೆಯುತ್ತವೆ
ದೇವರಾದದ್ದನ್ನೆ ಮರೆತು
ಇನ್ನೇನೋ ಹೊಸತು ಆಗಲು
ರೆಕ್ಕೆ ಬಿಚ್ಚಿಕೊಂಡು ಹೊರಟುಬಿಡುತ್ತವೆ
ಹೊಸತು ಆದಾಗೆಲ್ಲ ದೇವರಾದ್ದನ್ನು
ಬೆರಳಾದಾಗೆಲ್ಲ ಮರೆಯುತ್ತ
ಮರಳಿ ಹೊರಡುತ್ತವೆ
ಅದಕೇ…
ನನ್ನ ಕವನಗಳು ದೇವರನ್ನು
ಮುಟ್ಟುವುದೇ ಇಲ್ಲ
ಇನ್ನೇನು ಬೆರಳು ಆತನನ್ನು
ಮುಟ್ಟಿತು ಎಂಬಷ್ಟರಲ್ಲಿ
ಅದಕ್ಕೆ ಮುಟ್ಟು ಆಗಿರುತ್ತದೆ
ಕವನಗಳು ಹಾಳೆಗಳಲ್ಲೇ
ಹಳತಾಗುತ್ತವೆ
ನನ್ನ ಹೃದಯ
ಒಂದು ಮೀನಾಗಿಬಿಟ್ಟಿದೆ
ಗಾಳ ಅವನ ಕೈಯಲ್ಲಿದೆ
ಕವಿತೆಯ ಎರೆಹುಳ ತುಂಡುಪದ ಸಿಕ್ಕಿಸಿಕೊಂಡು
**********************
ಡಾ ಕಾತ್ಯಾಯಿನಿ ಕುಂಜಿಬೆಟ್ಟು ಅವರ ಕವಿತೆ ಪ್ರತಿಮಾತ್ಮಕವಾಗಿ ಬೆಳೆದು ತನ್ನಲ್ಲಿ ಹುದುಗಿಸಿಕೊಂಡಿರುವ ತಾತ್ವಿಕತೆಯನ್ನು ಓದುನಿಗೆ ದಟ್ಟವಾದ ಅನುಭವವನ್ನು ಉಂಟುಮಾಡುವಲ್ಲಿ ಯಶಸ್ವಿಯಾಗುತ್ತದೆ ಉತ್ತಮ ಕವಿತೆಗಾಗಿ ಅವರಿಗೆ ಅಭಿನಂದನೆಗಳು
ಸೂಪರ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಕಾತ್ಯಾಯಿನಿ ಅವರೆ ಅಭಿನಂದನೆಗಳು