ಲೇಖನ
ನಾ ಮೆಚ್ಚಿದ ನಾಟಕ
ಮಾಲಾ ಮ ಅಕ್ಕಿಶೆಟ್ಟಿ.
ಸುಮಾರು ಒಂದುವರೆ ವರ್ಷದ ಹಿಂದೆ ಬೆಳಗಾವಿಯಲ್ಲಿ ಕುವೆಂಪು ವಿರಚಿತ “ಶ್ರೀರಾಮಾಯಣ ದರ್ಶನಂ” ನ ನಾಟಕ ರೂಪ,
ದೇಹ ಮತ್ತು ಮನಸ್ಸಿಗೆ ಆನಂದ ನೀಡಿತ್ತು. ಅದ್ಭುತವಾದ ನಾಟಕ ಪ್ರದರ್ಶನವನ್ನು ನೋಡಿದ ಕೃತಜ್ಞತಾಭಾವ ಆ ವರ್ಷಕ್ಕೆ ಸಲ್ಲುತ್ತದೆ. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಈ ಕೃತಿ ನಿರ್ಮಾಣಕ್ಕೆ ಸುಮಾರು ಒಂಬತ್ತು ವರ್ಷ ತಗುಲಿದೆ. ಅಂದರೆ ಕುವೆಂಪು ಇದನ್ನು ತಮ್ಮ ಮೂವತ್ತೆರಡನೇ ವಯಸ್ಸಿನಲ್ಲಿ ಪ್ರಾರಂಭಿಸಿ ನಲ್ವತ್ತೋಂದರಲ್ಲಿ ಮುಗಿಸಿದರು. ಈ ಕೃತಿಗೆ ಐವತ್ತು ವರ್ಷಗಳು ತುಂಬಿದ ಸವಿನೆನಪಿಗಾಗಿ ನಾಟಕರೂಪದಲ್ಲಿ ಪ್ರದರ್ಶನ ಮಾಡಲಾಗಿತ್ತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಈ ನಾಟಕವನ್ನು ಪ್ರದರ್ಶಿಸಲಾಗಿತ್ತು. ಮೂಲ ಕೃತಿ ನಡುಗನ್ನಡದಲ್ಲಿ ಇದ್ದು 5 ಸಂಚಿಕೆಗಳು, 22291 ಸಾಲುಗಳು ಹಾಗೂ 877 ಪುಟಗಳನ್ನು ಹೊಂದಿದೆ. ಇಂಥ ಬೃಹತ್ ಕೃತಿಯನ್ನು ಅದೂ ಮೂಲ ನಡುಗನ್ನಡದಲ್ಲಿ ನಾಟಕ ರೂಪಕ್ಕೆ ಇಳಿಸಿರುವುದು ಹೆಮ್ಮೆಯ ವಿಚಾರ. ನಾಟಕ 5 ಗಂಟೆಗೆ ಸೀಮಿತಗೊಂಡು 50 ಕಲಾವಿದರನ್ನು ಪರಿಚಯಿಸುತ್ತದೆ. ಈ ಮೊದಲು ಕುವೆಂಪುರವರ “ಮಲೆಗಳಲ್ಲಿ ಮದುಮಗಳು” 9 ಗಂಟೆಗಳವರೆಗೆ ನಾಟಕ ರೂಪದಲ್ಲಿ ಪ್ರದರ್ಶಿಸಲಾಗಿತ್ತು.ಆದರೆ ರಾಜ್ಯಾದ್ಯಂತ ಆಗಿರಲಿಲ್ಲ. ಆದರೆ ಇದು ರಾಜ್ಯಾದ್ಯಂತ ಪ್ರದರ್ಶನಗೊಂಡಿತು. ವೈಚಾರಿಕತೆಯ ತಳಹದಿಯನ್ನು ಇಲ್ಲಿ ಕಾಣಬಹುದು.
ನಾಟಕದ ಪ್ರಯೋಗ ಮೂಲ ನಡುಗನ್ನಡದಲ್ಲಾಗುತ್ತೋ ಅಥವಾ ಹೊಸಗನ್ನಡಕ್ಕೆ ರೂಪಾಂತರವಾಗಿರುತ್ತೊ ಎಂಬ ಗೊಂದಲದಲ್ಲಿದ್ದೆವು. ಆದರೆ ಪ್ರದರ್ಶನದ ಮೊದಲ ದೃಶ್ಯದಲ್ಲಿ ಅದು ಮನವರಿಕೆಯಾಯಿತು. ಅದನ್ನು ಮೂಲ ನಡುಗನ್ನಡದಲ್ಲೇ ಇಡಲಾಗಿತ್ತು. ಆದರೆ ಒಂದಂತೂ ನಿಜ ನಾಟಕದ ದೃಶ್ಯ, ನಟನೆ ಹಾಗೂ ಪ್ರದರ್ಶನದ ಶೈಲಿ ಮೂಲ ಕೃತಿಯನ್ನು ಓದದವರಿಗೂ ತಿಳಿಯುವಂತೆ ಪ್ರಸ್ತುತಪಡಿಸಿದರು. ಬಾಲವಿಲ್ಲದ ಹನುಮಾನ, ಬಾಣ ಬಿತ್ತಳೆಗಳಿಲ್ಲದ ರಾಮ ಹಾಗೂ ಇತರರು ಹಾಗೂ ಯುದ್ಧ ಸನ್ನಿವೇಶಗಳು ಅಮೋಘವಾಗಿ ಮೂಡಿಬಂದವು. ಕುಂಭಕರ್ಣನ ಪಾತ್ರವು ಪಾತ್ರಧಾರಿಯಿಲ್ಲದೆ ಯಶಸ್ವಿಯಾಗಿ ಪ್ರೇಕ್ಷಕರಿಗೆ ತಿಳಿಯುವಂತೆ, ಕೇವಲ ಎರಡು ದೊಡ್ಡ ಪಾದಗಳ ಮೂಖಾಂತರ ಮತ್ತು ಸಂಭಾಷಣೆ, ಬೆಳಕಿನ ಟೆಕ್ನಿಕ್ ನ ಸಹಾಯದಿಂದ ಪ್ರಸ್ತುತಪಡಿಸಲಾಗಿತ್ತು.
ಮರಾಠಿ ಭಾಷೆಯ ಪ್ರಭಾವ ಜಾಸ್ತಿನೇ ಇದೆ ಎನ್ನುವ ಬೆಳಗಾವಿಯಲ್ಲಿ ಜೀರಿಗೆ ಹಾಲ್ ತುಂಬಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಕನ್ನಡದ ಉತ್ಕೃಷ್ಟ ಕೃತಿಯ ನಾಟಕದ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದರು. ಸುಮಾರು 5 ಗಂಟೆಗಳಲ್ಲಿ ಸಂಪೂರ್ಣ ಕೃತಿಯನ್ನು ಹಿಡಿದಿಡಲು ಪ್ರಯತ್ನಿಸಲಾಗಿತ್ತು. ಅದೂ ಅಲ್ಲದೆ ಪೂರ್ತಿ 5 ಗಂಟೆಗಳು ಹೇಗೆ ಕಳೆದವು ಎಂದು ಗೊತ್ತಾಗದಷ್ಟು ನಾಟಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು. ಹಿಂದಿನ ಕಾಲದ ಶ್ರೀಲಂಕಾ ಮತ್ತು ಅಯೋಧ್ಯೆಯ ವಸ್ತ್ರಾಲಂಕಾರವನ್ನು ಮರುಸೃಷ್ಟಿಸಲಾಗಿತ್ತು. ವಸ್ತ್ರಾಲಂಕಾರ ವಿಭಿನ್ನವಾಗಿ ಮನಸೂರೆಗೊಂಡು ಜೊತೆಗೆ ಸಂಗೀತದ ರಸಾನುಭವ ತುಂಬಾನೇ ನೂತನವಾದ ಪ್ರಯೋಗವೆನಿಸಿತು.ರಾಮಾಯಣದಲ್ಲಿ ಬರುವ ಆಯಾ ಪ್ರದೇಶಗಳಿಗೆ ಹೋಲುವಂಥ ವಿಶಿಷ್ಟವಾದ ಸಂಗೀತವನ್ನು ಪ್ರಯೋಗಿಸಿದರು. ಅಯೋಧ್ಯೆಯನ್ನು ಯಕ್ಷಗಾನ, ನಗಾರಿ, ಚಂಡೆ ಮಾದರಿಯಲ್ಲಿ, ಲಂಕಾವನ್ನು ನಾಗಾಲ್ಯಾಂಡ್ ಹಾಗೂ ಚಾವು ಮಾದರಿಯಲ್ಲಿ,ಕಿಷ್ಕಿಂದವನ್ನು ಮಿಳಾವ್ ಮತ್ತು ತಮಟೆ ವಾದ್ಯಗಳೊಂದಿಗೆ ವಿಭಿನ್ನವಾಗಿ ಪ್ರಯೋಗಿಸಿದರು.
ನಾಟಕದ ಸಂಭಾಷಣೆ ಎಲ್ಲಿಯೂ ಬೋರ್ ಅನಿಸಲಿಲ್ಲ ಜೊತೆಗೆ ಮಧ್ಯಮಧ್ಯದಲ್ಲಿ ಬರುವ ಸಂಗೀತ ಪ್ರೇಕ್ಷಕರನ್ನು ಮನರಂಜಿಸಿತು. ಅದರಲ್ಲಂತೂ ನಾಗಾಲ್ಯಾಂಡ್ನ ಮಾದರಿಯ ಸಂಗೀತ ಮನಸೂರೆಗೊಂಡಿತು. ಪ್ರತಿ ಹಂತವನ್ನು ಬೆಳಗಾವಿ ಪ್ರೇಕ್ಷಕರು ಆನಂದಿಸಿದರು. ನಾಟಕದ ಕೊನೆಯವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದು ಇಂಥ ನಾಟಕಗಳ ಪ್ರದರ್ಶನ ಹೆಚ್ಚೆಚ್ಚು ನಡೆಯಬೇಕೆಂಬುದನ್ನು ಪರೋಕ್ಷವಾಗಿ ಒತ್ತಾಯಿಸದಂತೆ ಕಂಡು ಬಂತು.
ಸಿನಿಮಾರಂಗವಂತೂ ಅತ್ಯಂತ ಜನಪ್ರಿಯ. ಸಮಾಜಮುಖಿ ವಿಚಾರಗಳನ್ನು ಸಿನಿಮಾದ ಮುಖಾಂತರ ಹೇಳುವುದು ತುಂಬಾನೇ ಸುಲಭ. ಎಲ್ಲ ವರ್ಗದವರು ಹಾಗೂ ಶಿಕ್ಷಣದ ವ್ಯತ್ಯಾಸಗಳಿದ್ದರೂ ಸಿನಿಮಾ ಎಲ್ಲರನ್ನು ರಂಜಿಸಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತದೆ. ಇದಕ್ಕೆ ಹೋಲಿಸಿದರೆ ನಾಟಕ ಪ್ರದರ್ಶನಕ್ಕೆ ಪ್ರೇಕ್ಷಕರ ಸಂಖ್ಯೆ ಕಡಿಮೆಯೇ. ಜೊತೆಗೇ ಓದುವ ಹವ್ಯಾಸವೂ ಜನರಲ್ಲಿ ಕಡಿಮೆ.
ಸಿನಿಮಾದಲ್ಲಿ ನಟಿಸುವ ನಟರ ನಟನೆ ತುಂಬಾನೇ ಸ್ವಾಭಾವಿಕ ಅಥವಾ ನೈಸರ್ಗಿಕ ಎಂದೆನಿಸುತ್ತದೆ. ಆದರೆ ಜನ ನಾಟಕವನ್ನು ನಾಟಕವಾಗಿಯೇ ಸ್ವೀಕರಿಸುತ್ತಾರೆ.ಬಹುಶಃ ಅದು ಸಿನಿಮಾದಂಥ ಸ್ವಾಭಾವಿಕತೆಯನ್ನು ತಂದು ಕೊಡಲ್ಲ. ಹಾಗೆಯೇ ಯೋಚಿಸಿದಾಗ ನಟರ ಅಭಿನಯ ಅಷ್ಟೊಂದು ಪ್ರತಿಭಾನ್ವಿತವಾಗಿರಬಹುದು ಜೊತೆಗೆ ಸಿನಿಮಾದ ಆಧುನಿಕ ತಂತ್ರಜ್ಞಾನ ಇದಕ್ಕೆ ಸಾಥ್ ನೀಡುತ್ತದೆ. ಪಾತ್ರಧಾರಿಗಳ ನಟನೆ ಪ್ರಶಂಸಾ ಅರ್ಹತೆಯನ್ನು ಪಡೆದಾಗೂ ಅದು ಕೇವಲ ನಾಟಕವೆಂದೇ ಪರಿಗಣಿಸಲಾಗುತ್ತದೆ. ಆದರೆ ಒಂದೊಂದು ನಿಜ ಸಿನಿಮಾದಲ್ಲಿರುವ ಹಾಗೆ ಬಹಳ ಟೆಕ್ಸ್ ಗಳಿಗೆ ನಾಟಕದಲ್ಲಿ ಅವಕಾಶವೇ ಇಲ್ಲ. ಎಲ್ಲವೂ ಒಂದೇ ಟೇಕ್ನಲ್ಲಿ ಅತ್ಯದ್ಭುತವಾಗಿ ಮೂಡಿಬರಲು ಪಾತ್ರಧಾರಿಗಳು ಶ್ರಮಪಡಬೇಕು. ವಿಪರ್ಯಾಸವೆಂದರೆ ಈ ಶ್ರಮ ಬಹಳಷ್ಟು ಸಿನಿಮಾ ಪ್ರಿಯರಿಗೆ ಕಂಡು ಬರುವುದೇ ಇಲ್ಲ. “ಶ್ರೀರಾಮಾಯಣ ದರ್ಶನಂ” ನಾಟಕದಲ್ಲಿ ಆಶ್ಚರ್ಯವನ್ನುಂಟು ಮಾಡಿದ್ದು ನಡುಗನ್ನಡ. ಹೈಸ್ಕೂಲ್ ಹಂತದಲ್ಲಿ ಯಾವುದಾದರೂ ಪದ್ಯ ಹಳಗನ್ನಡ ಅಥವಾ ನಡುಗನ್ನಡದಲ್ಲಿದ್ದಾಗ ಬಾಯಿಪಾಠ ಮಾಡುವುದು, ಕಡ್ಡಾಯವಾದಾಗ ಪಟ್ಟ ಕಷ್ಟಗಳು ಮಾಡಿದವರಿಗೇನೇ ಗೊತ್ತು. ಅಂಥದ್ರಲ್ಲಿ ಸಂಪೂರ್ಣ ಐದು ಗಂಟೆಗಳ ಕಾಲ ನಡೆಯುವ ಎಲ್ಲಾ ಸಂಭಾಷಣೆಯೂ ಅಪ್ಪಟ ನಡುಗನ್ನಡದಲ್ಲಿ ಪ್ರಸ್ತುತಪಡಿಸಲಾಗಿದೆ. ಇಷ್ಟೊಂದನ್ನು ನೆನಪಿಟ್ಟುಕೊಂಡು ದೃಶ್ಯಕ್ಕೆ ತಕ್ಕಂತೆ ಪ್ರದರ್ಶಿಸುವುದು ಶ್ಲಾಘನೀಯ. ಕನ್ನಡದ ಮತ್ತಷ್ಟು ಕೃತಿಗಳು ಹೀಗೆಯೇ ನಾಟಕದ ರೂಪ ಪಡೆದರೆ ಅನುಕೂಲ ಜಾಸ್ತಿ.ಜೊತೆಗೆ ಅತ್ಯುತ್ತಮ ಕೃತಿಗಳನ್ನು ಓದದವರು ಇದರ ಮುಖೇನ ಕೃತಿಗಳನ್ನು ಅರ್ಥಮಾಡಿಕೊಳ್ಳಬಹುದು ಹಾಗು ಪರೋಕ್ಷವಾದ ಓದನ್ನು ಆಸ್ವಾದಿಸಬಹುದು. ಇದಕ್ಕೆ “ಶ್ರೀರಾಮಾಯಣ ದರ್ಶನಂ” ಒಂದು ಉತ್ತಮ ಉದಾಹರಣೆಯಾಗಿದೆ.ನಾಟಕ ಬಹಳಷ್ಟು ಪ್ರದರ್ಶನಗಳನ್ನು ರಾಜ್ಯಾದ್ಯಂತ ಕಂಡಿತು. ನಾಟಕವನ್ನು ನೋಡಿ ಆನಂದಿಸಿದ ನನಗೆ ಇಂಥ ಹೆಚ್ಚೆಚ್ಚು ಪ್ರಯೋಗಗಳು ಕನ್ನಡದಲ್ಲಿ ಆಗಬೇಕೆಂದೆನಿಸಿತು.
***************************************************