ಕಬ್ಬಿಗರ ಅಬ್ಬಿ -8
ಬಂಧ ಮತ್ತು ಸ್ವಾತಂತ್ರ್ಯದ ನಡುವೆ
ಹದ ಹುಡುಕುತ್ತಾ.
ಶ್ರೀ ಹರಿ ಕೋಟಾದ ರಾಕೆಟ್ ಉಡ್ಡಯನ ಕೇಂದ್ರವದು. ಭಾರತೀಯ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು ಗಣಕಯಂತ್ರದ ಪರದೆಯೇ ಕಣ್ಣಾಗಿ ಕುಳಿತಿದ್ದಾರೆ. ಮಹಿಳಾ ವಿಜ್ಞಾನಿಯ ಇಂಪಾದ ಮತ್ತು ಅಷ್ಟೇ ಸಾಂದ್ರವಾದ ದನಿಯಿಂದ ನಿಧಾನವಾಗಿ ಮತ್ತು ಖಚಿತವಾಗಿ…ಹತ್ತು..ಒಂಭತ್ತು…ಎಂಟು..
ಹೌದು. ಅದು ಕೌಂಟ್ ಡೌನ್! ಉಪಗ್ರಹದ ಭಾರ ಹೊತ್ತ ರಾಕೆಟ್ ಸಾಕಮ್ಮನ ಮಡಿಲಿಂದ ಎದೆಯುಬ್ಬಿಸಿ ಹಾರಬೇಕು.
ಒಂದು….ಸೊನ್ನೆ!!.
ಅದೋ ಅದೋ..ಅಧೋಮುಖದಿಂದ ಬೆಂಕಿ ಹೊಗೆ ಚಿಮ್ಮಿತು, ರಾಕೆಟ್ಟು ಜಿಗಿಯಿತು ಅನಂತಕ್ಕೆ. ವ್ಯೋಮಗಮನಕ್ಕೆ ಮೊದಲ ಜಿಗಿತ.
ಸಾಕೇ?. ಸಾಲದು!. ಭೂಮಿತಾಯಿಯ ಪ್ರೇಮ ಬಂಧನದಿಂದ ದಾಟಿಹೋಗಲು ಸುಲಭವೇ. ತಾಯಿ ಅವಳು. ಮಗು ಮಡಿಲು ಬಿಟ್ಟು ಹೋಗಲು ಮನಸ್ಸು ಒಪ್ಪಲ್ಲ.
ವೇಗ..ಹೆಚ್ಚಿಸಬೇಕು.. ನೇರವಾಗಿ ಹಾರಿದರೆ ವೇಗ ವೃದ್ಧಿಸಲು ಮಾತೆಯ ಕೊಂಡಿ ಕಳಚಲು ಕಷ್ಟ. ಹಾಗೇ ಪ್ರೀತಿಯಿಂದ ಓಡಿ ಒಂದರ್ಧ ಪ್ರದಕ್ಷಿಣೆ ಹಾಕಿ ಭೂಮಿತಾಯಿಯ ಒಲವಿನ ವೃತ್ತಕ್ಕೆ ಹೊರಮುಖಿಯಾಗಿ ಹಾರುತ್ತಾ, ವಿಮೋಚನಾ ವೇಗ( escape velocity) ಪಡೆದು ಹಾರಿದಾಗ..ಅದು ಕೊನೆಯ ಲಂಘನ. ಭೂತಾಯಿಯ ಆಕರ್ಷಣೆಯಿಂದ ಬಿಡುಗಡೆ!
ವ್ಯೋಮದಲ್ಲಿ, ನಿರ್ವಾತ! ಹಾರಲು ತಡೆಯೇ ಇಲ್ಲ! ಅಂತಹ ಬಿಡುಗಡೆ ಅದು!
ಇನ್ನೊಂದು ಉದಾಹರಣೆ ಕೊಡುವೆ!. ಆಕೆ ಗರ್ಭಿಣಿ. ಅಮ್ಮನಾಗುವ ತವಕ. ದಿನಗಳು ಕಳೆದು ಮಗು ಬೆಳೆದು..ಹೆರಿಗೆ ಆಗದಿದ್ದರೆ?. ಆಗಲೇ ಬೇಕು. ಮಗು ಗರ್ಭದ ಕೋಶದೊಳಗಿಂದ ತಾಯಿ ದೇಹದ ಬಂಧ ಬಿಡಿಸಿ, ಜನ್ಮಿಸಿದಾಗ ಮೊದಲ ಕೆಲಸ, ಹೊಕ್ಕುಳ ಬಳ್ಳಿ ತುಂಡರಿಸುವುದು. ಅದು ಮಗುವಿನ ದೇಹಕ್ಕೆ ಸ್ವತಂತ್ರವಾಗಿ ಎದೆ ಬಡಿಯಲು, ಉಸಿರಾಡಲು ಸಿಗುವ ಸ್ವಾತಂತ್ರ್ಯ. ಸಹಜ ಕ್ರಿಯೆಯಾದರೂ ಸಣ್ಣ ವಿಷಯ ಅಲ್ಲ,ಅದು.
ಪಲ್ಲಣ್ಣ ಗಾಳಿಪಟ ಹಾರಿಸ್ತಿದ್ದಾರೆ. ಅದರ ದಾರ ಒಲವು. ಆದರೆ ದಾರವನ್ನು ಗಟ್ಟಿಯಾಗಿ ಹಿಡಿದರೆ ಗಾಳಿಪಟ ಹಾರಲ್ಲ! ದಾರವನ್ನು ಬಿಡಬೇಕು! ಮತ್ತೆ ಹಿಡಿಯಬೇಕು. ಗಾಳಿಪಟ ಒಂದಷ್ಟು ಹಾರಿದಾಗ ಪುನಃ ದಾರವನ್ನು ತನ್ನತ್ತ ಸೆಳೆಯಬೇಕು, ಮತ್ತೆ ಬಿಡಬೇಕು. ಹೀಗೆ ನಿರಂತರವಾಗಿ ಎಳೆದೂ ಬಿಟ್ಟೂ, ಎಳೆದೂ ಬಿಟ್ಟೂ ನೂರಾರು ಬಾರಿ ಮಾಡಿದಾಗ ಗಾಳಿಪಟ ಆಗಸದ ಎತ್ತರದಲ್ಲಿ ಪಟಪಟಿಸಿ ಏರೋಡೈನಮಿಕ್ಸ್ ನ ಪಾಠ ಮಾಡುತ್ತೆ.
ಹಕ್ಕಿ ಗೂಡಲ್ಲಿ ಮರಿಗಳಿಗೆ ರೆಕ್ಕೆ ಪುಕ್ಕ ಬಲಿತು ಹಾರುವ ವರೆಗೆ ಅಮ್ಮ ಹಕ್ಕಿ , ಮರಿಕೊಕ್ಕಿನೊಳಗೆ ಕಾಳಿಕ್ಕುತ್ತೆ. ಒಂದು ದಿನ ಅಚಾನಕ್ಕಾಗಿ ಹಕ್ಕಿ ಮರಿ ರೆಕ್ಕೆ ಬೀಸುತ್ತೆ, ಆಗಸಕ್ಕೆ ಹಾರುತ್ತೆ.ಬಂಧ, ಬಂಧನ ಮತ್ತು ಸ್ವಾತಂತ್ರ್ಯ ಇವುಗಳು ಜೀವ ನಿರ್ಜೀವ ಜಗತ್ತಿನ ಚಲನತತ್ವದ ಸಮೀಕರಣಗಳ ಚರಸಂಖ್ಯೆಗಳು.
ಹಾಗಿದ್ದರೆ ಪ್ರೀತಿ ಬಂಧನವೇ. ಅಗತ್ಯವೇ ಅನಗತ್ಯವೇ?. ಮೀರಾ ಜೋಶಿಯವರ ಕವನ “ಮರಳು ಗೂಡಿಗೆ” ಇಂತಹ ಒಂದು ಹದ ಹುಡುಕುವ ಪ್ರಯತ್ನ. ಕವಿತೆ ಓದಿದಂತೆ ಅದಕ್ಕೆ ಅಧ್ಯಾತ್ಮಿಕ ದೃಷ್ಟಿಕೋನ ಪ್ರಾಪ್ತವಾಗುವುದು ಕವಿತೆಯ ಇನ್ನೊಂದು ಮುಖ. ಮೊದಲು ಕವಿತೆ ನೋಡೋಣ.
** *** ***
ಮರಳು ಗೂಡಿನತ್ತ
ಎನ್ನಂಗಳದಲಿ ಮೊಟ್ಟೆಯೊಡೆದು
ಮರಿಯೊಂದು ಹೊರ ಬಂದಿತ್ತು
ಕೋಮಲ ನಿಸ್ಸಹಾಯಕ
ಬಯಸಿದರೂ ಹಾರಲಾರದು
ಹಾಲುಣಿಸಿ ನೀರುಣಿಸಿ
ಕಾಳುಗಳಕ್ಕರದಿ ತಿನಿಸಿ
ಬೆಳೆಯುವದ ನೋಡುತಲಿದ್ದೆ
ನೋಡಿ ನಲಿಯುತಲಿದ್ದೆ
ಪಿಳಿ ಪಿಳಿ ಬಿಡುವ ಕಣ್ಣಿನಲಿ
ಇಣುಕಿದಾ ಮುಗ್ಧತೆ
ಕಂಡಾಗ ಹೃದಯದಲಿ
ಸೂಸಿತು ಮಮತೆ
ಬೆಳೆ ಬೆಳೆದಂತೆ ಗರಿಗೆದರಿ
ನನಗೇನೋ ಭಯ
ಹಾರಿಹೋಗುವದೇನೋ ಎಂಬ
ಕಳವಳ ವ್ಯಾಕುಲ
ಅಂತೆಯೇ ಪಂಜರದಲಿಟ್ಚೆ
ಎಲ್ಲ ಸುಖವ ಕೊಟ್ಟೆ
ಸದಾ ಕಣ್ಣಿನ ಕಾವಲಿಟ್ಟೆ
ಹಾರದೆಂದು ಸಂಭ್ರಮ ಪಟ್ಚೆ
ಒಂದು ದಿನ
ಪ್ರೀತಿಯುಕ್ಕಿ ಅಂಜಲಿಯಲ್ಹಿಡಿದು
ಮುದ್ದು ಮಾಡುತಲಿದ್ದೆ
ಹೃದಯ ಸಮೀಪದಲ್ಲಿಟ್ಟು ಸುಖಿಸುತಿದ್ದೆ
ಭಾವಾವೇಶದಲಿ ಎಲ್ಲಿಯೋ ನೋಡುತಿದ್ದೆ
ಹಕ್ಕಿಯನಿಡಲು ಪಂಜರದಲಿ
ಪ್ರೇಮ ಸೂಸುತ ನೋಡಿದೆ ಕೈಗಳಲಿ
ಅಂಜಲಿ ಯಾವಾಗಲೋ ಸಡಿಲಿಸಿತ್ತು
ಹಕ್ಕಿ ಗರಿಗೆದರಿ ಹಾರಿ ಹೋಗಿತ್ತು
ಅತ್ತಿತ್ತ ಅರಸಿದೆ
ವ್ಯರ್ಥ ನೋಟ ಹರಿಸಿದೆ
ಪಂಜರ ಚಿತೆಯೇರಿತು
ಇನ್ನೂ ನಿಂತೇ ಇದ್ದೇನೆ ನಿರೀಕ್ಷೆಯಲಿ
ಎಂದಾದರೂ ಮರಳಿ ಬರಬಹುದೇನೋ
ಹೊಸದೊಂದು ಗೂಡಿಗೆ
** *** ***
ಈ ಕವಿತೆಯಲ್ಲಿ ಕವಿಯ ಅಂಗಳದಲ್ಲಿ ಅನಾಥ ಮೊಟ್ಟೆ, ಅದು ಮರಿಯಾಗುತ್ತೆ. ಹಕ್ಕಿ ಮರಿ.
ಕವಿ ಆ ಮರಿಯನ್ನು ಸಾಕಿ ಸಲಹುತ್ತಾಳೆ.ಕವಿಗೆ ಹಕ್ಕಿಯತ್ತ ಎಷ್ಟು ಪ್ರೇಮ!. ಹಾರಿ ಹೋದರೆ!
“ಬೆಳೆ ಬೆಳೆದಂತೆ ಗರಿಗೆದರಿ
ನನಗೇನೋ ಭಯ
ಹಾರಿಹೋಗುವದೇನೋ ಎಂಬ
ಕಳವಳ ವ್ಯಾಕುಲ”
ಈ ಕವಿತೆಯಲ್ಲಿ ಕವಿ ಪ್ರಶ್ನಿಸದಿದ್ದರೂ ಮನಕ್ಕೆ ಬರುವ ಪ್ರಶ್ನೆ ..ಹಾರಲು ಬಿಡಬೇಕೇ ಬೇಡವೇ?
ಅಂತೂ ಕವಿ ಒಂದು ಪಂಜರ ತಂದು…..
“ಅಂತೆಯೇ ಪಂಜರದಲಿಟ್ಚೆ
ಎಲ್ಲ ಸುಖವ ಕೊಟ್ಟೆ
ಸದಾ ಕಣ್ಣಿನ ಕಾವಲಿಟ್ಟೆ
ಹಾರದೆಂದು ಸಂಭ್ರಮ ಪಟ್ಚೆ”
ಇಲ್ಲಿರುವ ವಿಪರ್ಯಾಸ ಗಮನಿಸಿ. ಕವಿಗೆ, ಹಕ್ಕಿಯ ಮೇಲೆ ಪ್ರೇಮ. ಹಕ್ಕಿ ಹಾರಿ ಹೋಗುವ,ತನ್ನ ಆಧೀನದಿಂದ ದಾಟಿಹೋಗುವುದನ್ನು ಸುತರಾಂ ಒಪ್ಪಲಾರ. ಆದರೆ ಹಕ್ಕಿ!. ಹಾರಲೇ ಹುಟ್ಟಿದ ಜೀವವದು. ಪಂಜರ ಅದಕ್ಕೆ ಬಂಧನ.
ಹಾಗೊಂದು ದಿನ ಬೊಗಸೆಯಲ್ಲಿ ಹಕ್ಕಿ ಹಿಡಿದು ಪ್ರೇಮದಲ್ಲಿ ಮೈಮರೆತಾಗ ಹಕ್ಕಿ ಹಾರಿ ಹೋಗುತ್ತೆ.
ಕವಿ ಪಂಜರವನ್ನು ಕಳೆದು ಮುಂದೊಂದು ದಿನ ಹಕ್ಕಿ ಬರಬಹುದೇನೋ ಎಂದು ಕಾಯತ್ತಾನೆ.
ಇದಿಷ್ಟು ನೇರವಾದ ಅರ್ಥ.
ಇದರೊಳಗೆ ಅಡಕವಾಗಿರುವ ಧರ್ಮ ಸೂಕ್ಷ್ಮವನ್ನು ಗಮನಿಸಿ. ಕವಿಯ ಪಂಜರದೊಳಗೆ ಹಕ್ಕಿ, ಅದು ಕವಿಯ ಪ್ರೇಮ. ಹಕ್ಕಿಗೆ ಅದು ಬಂಧನ. ಹಾಗಿದ್ದರೆ,ಪ್ರೇಮ ಬಂಧನವೇ, ಪ್ರೇಮವಿರಬಾರದೇ?
ಸಮಾಜದಲ್ಲಿ ಹಲವಾರು ಅಮ್ಮಂದಿರು, ಮಕ್ಕಳನ್ನು ಅತಿಯಾಗಿ ಪ್ರೀತಿಸಿ ( pampered child), ಮಕ್ಕಳ ಬೆಳವಣಿಗೆ ಆಗದಿರುವ ಸಾಮಾಜಿಕ ಸಮಸ್ಯೆಯನ್ನು ಕವಿ ಎಷ್ಟು ಚಂದ ಕಟ್ಟಿ ಕೊಟ್ಟಿದ್ದಾನೆ.
ಹಾಗಿದ್ದರೆ ಪ್ರೇಮ ಎಂದರೆ ಪೂರ್ಣ ಸ್ವಾತಂತ್ರ್ಯವೇ?. ಪೂರ್ಣ ಸ್ವಾತಂತ್ರ್ಯ ಅನುಭವಿಸಿದ ಮಕ್ಕಳು ದಾರಿ ತಪ್ಪಿ ವ್ಯಸನಗಳಿಗೆ ದಾಸರಾದದ್ದೂ ಕಾಣಿಸುತ್ತೆ.
ನಾನು ಮೊದಲೇ ಹೇಳಿದ ಗಾಳಿಪಟದ ಉದಾಹರಣೆಯಲ್ಲಿ ಹೇಳಿದ ಹಾಗೆ,ಹಿಡಿದೂ ಬಿಟ್ಟೂ ಪುನಃ ಪುನಃ ಮಾಡಿದಾಗಲೇ ಗಾಳಿಪಟ ಹಾರುತ್ತೆ ಎತ್ತರದಲ್ಲಿ.
ಭೂಮಿಯ ಗುರುತ್ವಾಕರ್ಷಣ ಶಕ್ತಿ ಇಲ್ಲದಿದ್ದರೆ ನಮಗೆ ನೆಲದಲ್ಲಿ ನೇರವಾಗಿ ಧೃಡವಾಗಿ ನಿಲ್ಲಲು, ನಿಯಂತ್ರಣದಲ್ಲಿ ಚಲಿಸಲು ಆಗಲ್ಲ. ಗುರುತ್ವಾಕರ್ಷಣ ಶಕ್ತಿ ಅಧಿಕವಾದರೆ ಮಲಗಿದಲ್ಲೇ ಬಂದಿಯಾಗುತ್ತೇವೆ.
ಹಾಗೆಯೇ ಪ್ರೇಮದ ಕಾಂತೀಯ ಶಕ್ತಿಯನ್ನು ಅತ್ಯಂತ ವಿವೇಚನೆಯಿಂದ ಪ್ರಯೋಗಿಸುವುದು, ಮಗುವಿನ ಬೆಳವಣಿಗೆಗೆ ಅಗತ್ಯ. ಮಗು ಬೆಳೆದ ಮೇಲೆ ಅದರ ಕಾಲಲ್ಲಿ ನಿಲ್ಲುವ, ರೆಕ್ಕೆ ಬೀಸಿ ಹಾರುವುದರಲ್ಲಿ, ಹಾರಲು ಬಿಡುವುದರಲ್ಲಿ ನಾವೆಲ್ಲರೂ ಸಂಭ್ರಮ ಪಡಬೇಕು ತಾನೇ.
ಈಗ ಕವಿತೆಯ ಎರಡನೆಯ ಅರ್ಥಸಾಧ್ಯತೆಗೆ ಬರೋಣ.
” ಎನ್ನಂಗಳದಿ ಮೊಟ್ಟೆಯೊಡೆದು ಮರಿಯೊಂದು ಹೊರ ಬಂದಿತ್ತು”
ಅಂಗಳ ಎಂಬ ಪದದ ವ್ಯಾಪ್ತಿ ದೊಡ್ಡದು. ಅದು ಚಿಂತಕನ ಮನದಂಗಳ ಆಗಬಹುದು. ಮನದಂಗಳದಲ್ಲಿ ಮೊಟ್ಟೆಯೊಡೆದು
ಮರಿ ಹೊರಬರುವುದು ಒಂದು ಹೊಸ ಚಿಂತನೆ, ಐಡಿಯಾ, ಭಾವನೆ, ಕವಿತೆ,ಕನಸು ಆಗಬಹುದು.
ಇವಿಷ್ಟನ್ನೂ ಮನಸ್ಸಿನೊಳಗೆ ಬೆಳೆಸುತ್ತೇವೆ.
ನಮ್ಮ ಯೋಚನೆಯನ್ನು, ಅತ್ಯಂತ ಪ್ರೀತಿಸುತ್ತೇವೆ. ಅವುಗಳನ್ನು ಸಿದ್ಧಾಂತ ಎಂಬ ಪಂಜರದೊಳಗೆ ಬಂದಿಯಾಗಿಸಿ ಖುಷಿ ಪಡುತ್ತೇವೆ. ಒಂದು ದಿನ ನಂಬಿದ ಸಿದ್ಧಾಂತ ಮುರಿದಾಗ ಚಿಂತನೆಗೆ ಸ್ವಾತಂತ್ರ್ಯ ಸಿಕ್ಕಿ ಅದು ನಾಲ್ಕೂ ದಿಕ್ಕುಗಳಿಗೆ ಹರಿಯುತ್ತೆ.
ಇಂತಹ ಸ್ವಸಿದ್ಧಾಂತದೊಳಗೆ ಬಂದಿಯಾದ ಹೊರಬರಲಾರದ ಅದೆಷ್ಟು ಚಿಂತಕರು ನಮ್ಮ ಸುತ್ತುಮುತ್ತಲೂ.
ಹಾಗೆ ಬಂದಿಯಾದವರು, ಬೆಳವಣಿಗೆ ಸ್ಶಗಿತವಾಗಿ ಕಾಲಗರ್ಭದೊಳಗೆ ಕಾಣೆಯಾಗುವುದನ್ನೂ ಕಾಣುತ್ತೇವೆ.
ಒಮ್ಮೆ ಚಿಂತನೆ ಕವಿತೆಯಾಗಿಯೋ, ಕಲೆಯಾಗಿಯೋ,ಚಿತ್ರವಾಗಿಯೋ ಹೊರಬಂದರೆ ಹಳೆಯ ಪಂಜರದ ಪಳೆಯುಳಿಕೆಗಳನ್ನು ದಹಿಸಿ ಮನಸ್ಸನ್ನು ಹಸಿಯಾಗಿಸಿ, ಇನ್ನೊಂದು ಚಿಂತನೆಯ ಹಕ್ಕಿ ಗೂಡುಕಟ್ಟಲು ಅನುವು ಮಾಡಿಕೊಡಬೇಕು.
ಇನ್ನು ಮೂರನೆಯ ಅರ್ಥಕ್ಕೆ ಬರೋಣ. ಕವಿತೆಯ ಶೀರ್ಷಿಕೆ ” ಮರಳು ಗೂಡಿಗೆ”
ಮರಳು ಎಂಬುದು ವಾಪಸ್ ಬರುವುದು ಎಂಬ ಸಾಧಾರಣ ಅರ್ಥ, ಮೇಲೆ ಹೇಳಿದ ಎರಡೂ ಇಂಟರ್ಪ್ರಿಟೇಷನ್ ಗಳಿಗೆ ಹೊಂದುತ್ತದೆ.
ಆದರೆ ಮರಳು ಗೂಡಿಗೆ ಎಂಬುದು ಮರಳಿನಿಂದ ಮಾಡಿದ ಗೂಡಿಗೆ ಎಂಬ ಅರ್ಥವೂ ಇದೆ ತಾನೇ.ಮರಳು ಒದ್ದೆಯಾದಾಗ ಗೂಡು ಮಾಡಿದರೆ ನಿಲ್ಲುತ್ತೆ. ಮರಳಿಂದ ನೀರಿನ ಅಂಶ ಒಣಗಿದಾಗ ಅದು ಕುಸಿಯುತ್ತೆ. ಅಷ್ಟೂ ತಾತ್ಕಾಲಿಕ ಅದು. ನಶ್ವರ ಅದು.
ಪುರಂದರ ದಾಸರ ಗಿಳಿಯು ಪಂಜರದೊಳಗಿಲ್ಲ ಎಂಬ ಪದ್ಯದಲ್ಲಿ, ಒಂಭತ್ತು ಬಾಗಿಲ ಮನೆ ಅಂತ ಈ ಪಂಜರವನ್ನು ವರ್ಣಿಸುತ್ತಾರೆ. ಈ ಮರಳು ಮನೆ ಅದೇ ಪಂಜರವೇ?
ಪದ್ಯದ ಅಷ್ಟೂ ಸಾಲುಗಳೂ ದೇಹ,ಆತ್ಮವನ್ನು ಸಲಹುವಂತೆಯೇ ಇದೆ.
ಕೊನೆಯ ಪ್ಯಾರಾದಲ್ಲಿ, ಗಮನಿಸಿ.
“ಪಂಜರ ಚಿತೆಯೇರಿತು
ಇನ್ನೂ ನಿಂತೇ ಇದ್ದೇನೆ ನಿರೀಕ್ಷೆಯಲಿ
ಎಂದಾದರೂ ಮರಳಿ ಬರಬಹುದೇನೋ
ಹೊಸದೊಂದು ಗೂಡಿಗೆ”
ಅಸ್ತಿಪಂಜರ, ಆತ್ಮದ ಹಕ್ಕಿ ಬಿಟ್ಟು ಹೋದಾಗ ಚಿತೆಯೇರುತ್ತೆ. ಆತ್ಮ ಪುನಃ ಹೊಸ ಗೂಡು ಹುಡುಕಿ ಮರಳಿ ಬರುವುದೇ.
“ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೇ ಜಠರೇ ಶಯನಂ”
ಎಂಬ ಶಂಕರಾಚಾರ್ಯರ ಗೀತೆಯ ಸಾಲುಗಳ ಹಾಗೆ ಆತ್ಮ ಗೂಡಲ್ಲಿ ವಾಸ ಹೂಡುತ್ತೆ. ಗೂಡು ಬಿಟ್ಟು ಹೊಸ ಗೂಡಿಗೆ ವಾಪಸ್ಸಾಗುತ್ತೆ.
ಇಲ್ಲಿನ ಗೂಡು,ಮರಳು ಗೂಡು.
ನಶ್ವರವೂ ಹೌದು. ಪುನಃ ಪುನಃ ಮರಳಬೇಕಾದ ಗೂಡೂ ಹೌದು.
***********************************************
ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ
ಸೂಕ್ತ ಉದಾಹರಣೆಗಳೊಂದಿಗೆ ಮಾಡಿದ ವಿಶ್ಲೇಷಣೆ, ವಿಮರ್ಶಕರ ಭಿನ್ನ ಕ್ಷೇತ್ರಗಳಲ್ಲಿಯ ಅವರ ಪರಿಣತಿಯ ಪರಿಚಯ ಮಾಡಿಕೊಡುತ್ತದೆ.
ಕವಿತೆ ಮನಸ್ಸೊಳಗೆ ಸ್ಫುರಿಸುವ ಚಿಂತನೆಗಳ ಹೊಳಹು ಹಿಡಿದ ನಡೆಯ ಸತ್ಯಾವತಾರ ಸರ್,ಅದು
ಧನ್ಯವಾದಗಳು
ಇಂದಿನ ಕಬ್ಬಿಗರ ಅಬ್ಬಿ’ ಯಲ್ಲಿ ಮೀರಾ ಜೋಷಿ ಮೇಡಂ ಅವರ ಕವನ’ ಮರಳು ಗೂಡಿನತ್ತ’ ಕವನದ ವಿಶ್ಲೇಷಣೆ ಮಾಡಿದ್ದಾರೆ. ಕಾವ್ಯಾತ್ಮಕವಾಗಿ ವಿಷಯದ ಅಂತರಾತ್ಮದ ಶೋಧ ಮಾಡುವುದು ಮಹಾದೇವ ಅವರ ಚಿಂತನಾ ಕ್ರಮ ದ ವೈಶಿಷ್ಟ್ಯ- ಹಾಲ್ ಮಾರ್ಕ್. ಪ್ರೀತಿ- ಒಲವುಗಳ ಮೂಲಭೂತ ರಚನೆಯಲ್ಲಿ ಆಕರ್ಷಣೆಯ ಅಂಶವಿದೆ. ಹೀಗಾಗಿ, ಒಲವು ಒಂದು ರೀತಿಯ ಬಂಧನವೆಂದು ಬಹಳಷ್ಟು ಉದಾಹರಣೆಗಳನ್ನು ಇತ್ತು, ವಿಷಯವನ್ನು ಪ್ರಸ್ತುತ ಪಡಿಸಿದ್ದಾರೆ, ಮಹಾದೇವ ಅವರು. ಒಂದು ಕ್ಷಿಪಣಿ ಭೂಮಿಯ ಗುರುತ್ವಾಕರ್ಷಣ ಶಕ್ತಿಯ ಕಕ್ಷೆಯನ್ನು ದಾಟಿ ಹೋಗುವ ಪರಿ, ಅದನ್ನು ಭೂಮಿ ತಾಯಿಯ ಮಮತೆಯ ಶಕ್ತಿಗೆ ಹೋಲಿಕೆ ಕೊಟ್ಟು ನೀಡಿದ ವಿವರಣೆ ಬಹಳ ಅನನ್ಯವಾಗಿದೆ. ಇದೇ ರೀತಿ, ತಾಯಿಯ ಕರುಳ ಬಳ್ಳಿಯಿಂದ ಬಿಡಿಸಿಕೊಳ್ಳದೆ ಮಗುವಿಗೆ ಸ್ವತಂತ್ರ ಅಸ್ತಿತ್ವ ಇಲ್ಲ, ಅವುಗಳನ್ನು ಬೇರ್ಪಡಿಸುವದೇ ಪ್ರಕೃತಿ ಸಹಜವಾದ ಕ್ರಿಯೆ. ಹೀಗಿದ್ದರೂ, ಕಾಣದ ಕರುಳ ಬಳ್ಳಿ ಯ ಬಂಧನ ಇದ್ದೇ ಇರುತ್ತದೆ ಎಂಬ ವಿಚಾರವನ್ನು, ಹಾರುವ ಗಾಳಿ ಪಟ ಮತ್ತು ಅದನ್ನು ನಿಯಂತ್ರಿಸುವ ಸೂತ್ರದ ಸ್ವಾಮ್ಯವನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಮಮತೆ ಮತ್ತು ಒಲವು ಗಳು ಇದ್ದಲ್ಲಿ, ಪ್ರೀತಿಸುವ ವಸ್ತು ತನ್ನ ಅಧೀನ ಎಂಬ ಭ್ರಮೆ ಹುಟ್ಟಿಸುತ್ತದೆ. ಆಗ ವಸ್ತುವನ್ನು ನಿಯಂತ್ರಿಸುವ ಬಯಕೆಯಾಗುವದು ಮಾನವ ಸಹಜ ಪ್ರವೃತ್ತಿ. ಕವಿತೆಯನ್ನು ಈ ಕೋನದಿಂದ ಅವಲೋಕನ ಮಾಡುತ್ತ, ನಿಯಂತ್ರಣ ಹಿತಮಿತವಾಗಿ ಇದ್ದು, ಸೂತ್ರ ಹರಿಯದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಾಣಿ ಸಂಕುಲದ ಎಲ್ಲ ಪ್ರಾಣಿಗಳು, ಮಾನವ ಕುಲವೂ ಸೇರಿದಂತೆ, ಲಾಲನೆ ಪಾಲನೆ ಪೋಷಣೆಗಳು , ರೆಕ್ಕೆ ಪುಕ್ಕ ಬಲಿತು ಮರಿಗಳು – ಮಕ್ಕಳು ಸ್ವತಂತ್ರವಾಗಲಿ ಎಂಬ ಉದ್ದೇಶದಿಂದ ಅಲ್ಲವೇ. ಆದರೆ, ಅದು ಆಗುವಾಗ, ನಮ್ಮ ಪ್ರೀತಿಯ ವಸ್ತು ನಮ್ಮಿಂದ ದೂರವಾಗುವುದು ಅನಿವಾರ್ಯ. ಈ ಕಟು ವಾಸ್ತವವನ್ನು ನಾವು ನಿರಾಕರಿಸಲಾಗದು.
ಮಹಾದೇವ ಅವರು, ಕವನದಲ್ಲಿ ಬರುವ ‘ ಅಂಗಳ’ ರೂಪಕದ ವ್ಯಾಪ್ತಿಯನ್ನು ಕುರಿತು ಬಹಳ ಸಮರ್ಥವಾಗಿ ಚಿತ್ರಿಸಿದ್ದಾರೆ. ಇನ್ನು ಕವನದಲ್ಲಿ ಬರುವ ಮರಳು( ಉಸುಕು) ಮತ್ತು ಪಂಜರ ( ಅಸ್ತಿ ಪಂಜರ) ಶಬ್ದಗಳ ವಿವಿಧ ಧ್ವನ್ಯಾರ್ಥಗಳನ್ನು ಗುರುತಿಸಿದ್ದಾರೆ.
ಮಹಾದೇವ ಅವರು ಕವನದ ವಿವಿಧ ಆಯಾಮಗಳನ್ನು ಅನಾವರಣ ಮಾಡುತ್ತ, ಕವನವನ್ನು ಅನೇಕ ನೆಲೆಗಳಲ್ಲಿ ಅವಲೋಕನ ಮಾಡಿ, ನಮ್ಮ ಮುಂದೆ ಸಮಗ್ರ ಚಿತ್ರಣವನ್ನು ಇಟ್ಟಿದ್ದಾರೆ. ಕವಿತೆಯಲ್ಲಿ ಅಂತಃಸತ್ವ ಇದ್ದಾಗ ಮಾತ್ರ ಈ ರೀತಿಯ ವಿಶ್ಲೇಷಣೆಗೆ ಎಡೆ ಇರುತ್ತದೆ. ಅಂತಹ ಉತ್ತಮ ಕವಿತೆಯನ್ನು ರಚಿಸಿ ‘ ಕಬ್ಬಿಗರ ಅಬ್ಬಿ’ ಗೆ ಗ್ರಾಸ ಒದಗಿಸಿದ ಮೀರಾ ಜೋಷಿ ಮೇಡಂ ಅವರು ಅಭಿನಂದನಾರ್ಹರು.
‘ ಹಕ್ಕಿ ಹಾರುತಿದೆ ನೋಡಿದಿರಾ’ – ವರಕವಿ ಬೇಂದ್ರೆ ಅವರ ಕವಿತೆಯಲ್ಲಿ, ಹಕ್ಕಿ ಸಮಯದ ಪ್ರತೀಕ. ಹಕ್ಕಿಯ ಪ್ರಸ್ತಾಪದಿಂದ ಆ ಋಷಿ ಕವಿಗಳ ಕವನ ನೆನಪಾಯ್ತು.
ಮಹಾದೇವ ಅವರು ಕವನದ ಆಳಕ್ಕೆ ಹೋಗಿ, ಅದ್ಭುತವಾದ ವಿಶ್ಲೇಷಣೆ ಮಾಡಿ,ಕವನದ ಒಳನೋಟ ತೋರುವ ರೀತಿ ಅನನ್ಯವಾದದ್ದು. ಅವರಿಗೆ ಹಾಗೂ ಮೀರಾ ಜೋಷಿ ಅವರಿಗೆ ಹಾರ್ದಿಕ ಅಭಿನಂದನೆಗಳು.
ಕವಿಗಳಾದ ಪ್ರಹ್ಲಾದ ಜೋಶಿ ಅವರೇ.
ಈ ಕವಿತೆ ಪ್ರೇಮದ ಬೇರೆಯೇ ನೆಲೆಯನ್ನು ಅರಸುವ ಅನುಭವ ಕೊಟ್ಟಿತು. ನಿಮ್ಮ ವಿಸ್ತೃತ ಪ್ರತಿಕ್ರಿಯೆ ಕವಿ ಹೃದಯಕ್ಕೆ ಸಂಭವಿಸುವ ಮೋಡಬಿತ್ತನೆಯೇ. ತುಂಬಾ ಧನ್ಯವಾದಗಳು
ಕವಿತೆಯ ಆತ್ಮವ ಸ್ಪರ್ಶಿಸಿ ಮಾತನಾಡಿಸುವ ಬರಹ..ಇಷ್ಟವಾಯಿತು.
ಪೂರ್ಣಿಮಾ ಅವರೇ, ನಿಮ್ಮಂತಹ ಕವಯಿತ್ರಿಗೆ ನನ್ನ ಬರಹ ಮೆಚ್ಚುಗೆಯಾದರೆ, ಅದು ನನಗೆ ನೀವು ಕೊಟ್ಟ ಪ್ರೋತ್ಸಾಹ. ಕವಿತೆಯನ್ನು ಅನುಭವಿಸುವ ಒಂದೇ ವಿಧಾನ, ಕವಿತೆಯ ವೀಣೆಗೆ ತಂತಿಯಾಗಿ ಮಿಡಿಯುವುದು. ಉಳಿದ ಕೆಲಸ ವೀಣೆಯೇ ನೋಡಿಕೊಳ್ಳುತ್ತೆ. ಅಲ್ಲವೇ.
ತುಂಬಾ ಧನ್ಯವಾದಗಳು
ನೀವು ವಿಮರ್ಶೆಗೆ ತೆಗೆದುಕೊಂಡ ಕವಿತೆಯ ಪ್ರತಿ ಶಬ್ದ,ಅರ್ಥ,ಧ್ವನಿ ಗುರುತಿಸಿ ಅದಕ್ಕೆ ಸಂಬಂಧಪಟ್ಟಂತೆ ವೈಜ್ಞಾನಿಕ, ಸಾಮಾಜಿಕ ಆಧ್ಯಾತ್ಮಿಕ ಹಾಗೂ ಬೇರೆ ಕವಿತೆಗಳ ಉದಾಹರಣೆಗಳಿಂದ ಬಿಡಿಸಿ ಮುಂದಿಡುವ ಪರಿ ಅನನ್ಯ.ನಿಮ್ಮ ವಿಶ್ಲೇಷಣೆ ನನ್ನ ಕವಿತೆಯ ಸ್ತರವನ್ನು ಎತ್ತರಿಸಿದೆ.ಧನ್ಯವಾದಗಳು.
ಮೀರಾ ಜೋಶಿ ಅವರೇ.
ಕವಿತೆಯನ್ನು ಓದುವಾಗ, ಅನುಭವಜಿಹ್ವೆಗೆ ನಿಲುಕುವ, ರಸವನ್ನು
ಆಸ್ವಾದಿಸಿದ ಹಾಗೆಯೇ ಬರೆದಿದ್ದೇನೆ.
ಕವಿತೆ ಕೈಹಿಡಿಯುತ್ತೆ.
ಧನ್ಯವಾದಗಳು