ಕವಿತೆ
ಹಂಗೇಕೆ..?
ವೀಣಾ ಪಿ.
ಹಂಗೇಕೆ..?
ಇಹದ ಅಂಗೈಯ
ಹುಣ್ಣಿಗೆ
ಕನ್ನಡಿಯ ಹಂಗೇಕೆ..?
ಮೆರುಗು ಮೌನದ
ಮಂದಿರಕೆ
ಮಾತಿನ ಹಂಗೇಕೆ..?
ಶುದ್ಧ ಶ್ವೇತದ
ಒನಪಿಗೆ
ರಂಗಿನ ಹಂಗೇಕೆ..?
ಗತಿಯ ಗಮ್ಯದ
ನಡುಗೆಗೆ
ಗತದ ಹಂಗೇಕೆ..?
ಅಗ್ನಿಗೆದೆಯೊಡ್ಡಿ ಗೆದ್ದ
ಪಾವನೆಗೆ
ಪತಿತತೆಯ ಹಂಗೇಕೆ..?
ರಾಗ-ದ್ವೇಷಗಳಳಿದ
ವಿರಕ್ತೆಗೆ
ಅನುರಕ್ತಿಯ ಹಂಗೇಕೆ..?
ಬಂಧನವ ಕಳಚಿಟ್ಟ ದಿಟ್ಟ
ಪರಿವ್ರಾಜೆಗೆ
ಸಂಘದ ಹಂಗೇಕೆ..?
ಬದ್ಧ ಬದುಕ ಧನ್ಯಾತ್ಮ
ಭಾವಕ್ಕೆ
ಸಾವಿನಾಚಿನ ಮುಕ್ತಿಯ ಹಂಗೇಕೆ..?
***********************************