ರೇಖಾಭಟ್ ಕಾವ್ಯಗುಚ್ಛ
ಮರುಹುಟ್ಟು
ಇಳಿಯಬೇಕು ನೆನಪಿನಾಳಕೆ
ಮುದಗೊಳ್ಳಬೇಕು
ಎದುರಿಗೆ ಹಾಸಿ ಹರವಿಕೊಂಡು
ಚೆನ್ನ ನೆನಪುಗಳ
ಆಯಸ್ಸು ಹೆಚ್ಚಿಸಬೇಕು
ಮೆತ್ತಗಾದ ಹಪ್ಪಳ ಸಂಡಿಗೆಗಳು
ಬಿಸಿಲಿಗೆ ಮೈಯೊಡ್ಡಿ
ಗರಿಗರಿಯಾಗಿ ಡಬ್ಬಿ ಸೇರುವಂತೆ
ನೆನಪುಗಳು ಸದಾ ಬೆಚ್ಚಗಿರಬೇಕು
ಒತ್ತಿ ತಡೆ ಹಿಡಿದ ನೋವಿಗೂ
ಆಗಾಗ ಬಿಕ್ಕಲು
ರಂಗ ಸಜ್ಜಿಕೆ ಬೇಕು
ತುಂಬಿಕೊಂಡ ಮಂಜು ನಂಜು
ಪೂರ್ತಿ ಹೊರಹೋಗಬೇಕು
ಬಾಚಿ ಕರೆಯಬೇಕು
ನೆನಪೆಂಬ ನೆಂಟನನ್ನು
ನಿನ್ನೆಯ ನಂಟಿನ ಗಂಟುಗಳ
ಬಿಡಿಸುತ್ತ ಹರಟಬೇಕು
ಅಂಟಿಯೂ ಅಂಟದಿರುವ
ನೆನಪಿಗೆ ಮೀಸಲಾದ
ಸಾಕ್ಷ್ಯಗಳ
ಹೊರಗೆಳೆದು ಹೊದೆಯಬೇಕು
ಇರಬೇಕು ನಿನ್ನೆಗಳಿಗೂ
ನೆನಪುಗಳೆಂಬ ಮರುಹುಟ್ಟು
ಆಗಾಗ ಹಾಯುತಿರಲಿ
ಇಲ್ಲಸಲ್ಲದ ನೆಪವಿಟ್ಟು..
ಅರ್ಥವಾಗದಿದ್ದರೆ ಹೇಳಿ
ಅವನು ನನ್ನ ಕಂಗಳಲ್ಲಿ
ಹೊಳೆಯುತ್ತಾನೆ
ಹೊಳೆಯೂ ಆಗುತ್ತಾನೆ
ಇಷ್ಟು ಸಾಕಲ್ಲವೇ ನಿಮಗೆ
ಅವನು ನನಗೇನೆಂದು ತಿಳಿಯಲು
ಅವನ ನಗುವ ಕಂಡು ನಾನು
ಪೂರ್ತಿ ಖಾಲಿಯಾಗುತ್ತೇನೆ
ಆ ನಗು ನನ್ನ ಸಂಧಿಸಿದಾಗ
ಮತ್ತೆ ತುಂಬಿಕೊಳ್ಳುತ್ತೇನೆ
ನಮ್ಮ ನಡುವಿನ ಸಣ್ಣ ಮೌನ
ಆಕಾಶದ ತಾರೆಗಳು
ಸದ್ದಿಲ್ಲದೆ ಮಿನುಗಿದಂತೆ ತೋರುತ್ತದೆ
ನಾನು ಅವುಗಳ ಬೊಗಸೆಗೆ ತಂದು
ಸಂಭ್ರಮಿಸುತ್ತೇನೆ
ಒಲವರಾಗ ಸಮ್ಮೋಹಗಳೆಲ್ಲ
ತುಟಿಯ ಖಾಯಂ ರಹವಾಸಿಗಳಾಗಿ
ಅವ ಮಾತಿಗಳಿದರೆ
ಮಾಂತ್ರಿಕ ಲೋಕ ತೆರೆದುಕೊಂಡು
ನಾ ಕಳೆದೇ ಹೋಗುತ್ತೇನೆ
ಅವನಲ್ಲಿ ಅವತರಿಸಲು ಬಿಡದೇ
ಹವಣಿಸುತ್ತೇನೆ
ಈಗ ನಿಮಗೆ ಖಂಡಿತ
ಅರ್ಥವಾಗಿದೆ ಬಿಡಿ
ಅವನು ನನಗೇನೆಂದು
ಅರ್ಥವಾಗದಿದ್ದರೆ
ನೀವು ನಿಮ್ಮವನ ಒಮ್ಮೆ
ನೆನಪು ಮಾಡಿಕೊಳ್ಳಿ
ಆಮೇಲೆ ಅರ್ಥವಾಗದಿದ್ದರೆ ಹೇಳಿ
ಬೆಂಬಲಿಸುವ ಬನ್ನಿ
ನಾವು ನದಿಯಾಗಿ ಹರಿಯಬಲ್ಲೆವು
ಸಾಧ್ಯವಾದರೆ ಮಳೆಯಾಗಿ ಜೊತೆಯಾಗಿ
ಆಣೆಕಟ್ಟು ಕಟ್ಟಿ ಬಳಸಿಕೊಳ್ಳಿ
ಆದರೆ ನಮ್ಮ ಗಮ್ಯದೆಡೆಗಿನ
ಒಂದೆರಡು ಬಾಗಿಲುಗಳನು ತೆರೆದೇ ಇಡಿ
ನಾವೂ ಹಕ್ಕಿಯಾಗಿ ಹಾರಬಲ್ಲೆವು
ನಿಮ್ಮ ಬಾನ ವಿಸರ ನಮಗೂ ಸಲ್ಲಲಿ
ಗಿಡುಗ ಹದ್ದುಗಳನ್ನು ಛೂ ಬಿಡಬೇಡಿ
ನಮ್ಮ ನೆಲೆಗಳನ್ನು ಜೋಪಾನವಾಗಿಡಿ
ಮತ್ತೆ ನಮ್ಮ ಗೂಡು ಒಂದೇ ಆಗಿರಲಿ
ಹೊಗಳಿ ಅಟ್ಟದಲ್ಲೇ ಬಂಧಿಸದಿರಿ
ದೇವರ ಪಟ್ಟ ಕಟ್ಟಿ
ತಾಯಿ ಬೇರುಗಳು ಆಳಕ್ಕಿಳಿಯಲು
ನೆಲದಲ್ಲಿ ಪಾಲು ನೀಡಿ
ಹಸಿರಾಗಿ ಎದ್ದು ನಿಂತಾಗ
ಕೊಡಲಿ ಮಸೆಯದಿರಿ
ಮರೆಯಲ್ಲೇ ಇರಿಸದಿರಿ
ನಿಮ್ಮರ್ಧವಾದ ನಾವು ಕಾಣದಂತಿದ್ದರೆ ಹೇಗೆ ಪೂರ್ಣವಾಗುವಿರಿ ನೀವು
ನಮಗಾಗಿ ಬೇಡಿಕೆಯಲ್ಲ ಇದು
ಪೂರ್ಣತೆಗಾಗಿ
ಪರಸ್ಪರ ಬೆಂಬಲಿಸುವ ಬನ್ನಿ
ಹೊಸ ಕನಸನು ಹಂಬಲಿಸುವ ಬನ್ನಿ
*****************************************
ಆಪ್ತವೆನಿಸುವ ಕವಿತೆಗಳು..
ನವಿರು ನವಿರು ಕವಿತೆಗಳು
ಸುಕೋಮಲ ಭಾವಗುಚ್ಛ
ಚೆಂದದ ಕವನಗಳು
ಚೆನ್ನಾಗಿವೆ ಕವಿತೆಗಳು ಗೆಳತಿ..
ನವಿರಾದ ಭಾವಗಳು
ಅದ್ಭುತ ಮನ ಮುಟ್ಟಿದ ಸಾಲುಗಳು ಗೆಳತಿ..ಶುಭವಾಗಲಿ..
Sarala sundara
ಬಹಳ ಸುಂದರವಾಗಿ ಮೂಡಿ ಬಂದಿದೆ
ಜೀವ ತಳೆದ ಅಕ್ಷರಗಳು..
ಚೆನ್ನಾಗಿ ಒಳಗಿಳಿದವು