ಪುಸ್ತಕ ಸಂಗಾತಿ

ಸಮಯಾಂತರ

‘ಮಾನವೀಯ ನೆಲೆ’ಯ ‘ಕಟ್ಟುತ್ತೇವ‌ ಕಟ್ಟುತೇವ ನಾವು ಕಟ್ಟೇ ಕಟ್ಟುತೇವ…’ ಎನ್ನುವ ಸಾಹಿತಿ ಸತೀಶ ಕುಲಕರ್ಣಿಯವರ “ಸಮಯಾಂತರ” ಕವನ ಸಂಕಲನವೂ..!

ಸತೀಶ ಕುಲಕರ್ಣಿ ಕವಿ, ನಾಟಕಕಾರ ಮತ್ತು ಸಂಘಟಕರಾಗಿ ಪ್ರಸಿದ್ಧರು. ಮುಖ್ಯವಾಗಿ ಮಹಾನ್ ಮಾನವತಾವಾದಿ. ಇವರ ‘ಮಾನವತೆ’ಯ ಬಗೆಗೇನೇ ಒಂದು ಲೇಖನ ಬರೆಯಬಹುದು.

ಮುಂದೆ ಎಂದಾರು ಆ ಲೇಖನವನ್ನು ನಾನೇ ಬರೆಯುತ್ತೇನೆ.

ಅಲ್ಲದೇ ಮುಖ್ಯವಾಗಿ ಒಂದು ವಿಷಯ ಹೇಳಬೇಕು. ಅದು ಅಂದರೆ ಇವರು ಕೆಲಸ ಮಾಡುತ್ತಿದ್ದ ಹೆಸ್ಕಾಂನಲ್ಲಿಯ ಕೆಳ ದರ್ಜೆಯ ಅದರಲ್ಲೂ ಈ ಹಗಲಿರುಳು ಎನ್ನದೇ, ಬಿಸಿಲು-ಮಳೆ ಎನ್ನದೇ ಈ ಕರೆಂಟ್ ನೊಂದಿಗೆ ಸರಸವಾಡುವ ಮತ್ತು ದುಡಿಯುವ ‘ಲೈನ್ ಮನ್’ ಗಳೆಂದರೆ ಈ ಸತೀಶ್ ಕುಲಕರ್ಣಿ ಅವರಿಗೆ ಅಪಾರ ಪ್ರೀತಿ ಮತ್ತು ಕಾಳಜಿ.

ನಾನು ಮೊನ್ನೆ ಈ ಹೆಸ್ಕಾಂನ ಅಧಿಕಾರಿಗಳ ಬೇಜವಾಬ್ದಾರಿಯ ಬಗೆಗೆ ಒಂದು ಲೇಖನ ಬರೆದಾಗ, ಅವರು ಕೋಪ ಮಾಡಿಕೊಂಡು ಅಧಿಕಾರಿಗಳು ಇರಲಿ,  ಈ ಸಾವಿನೊಂದಿಗೆ ಸರಸವಾಡುವ ನಮ್ಮ ‘ಲೈನ್ ಮನ್’ ಗಳನ್ನು ಮೊದಲು ಗುರುತಿಸು ಶಿವು ಅಂತ ಹೇಳಿದರು ಇದೇ ಸತೀಶ್ ಕುಲಕರ್ಣಿಯವರು.

ಅಧಿಕಾರಿಗಳನ್ನು ಬಿಡಿ, ಮೊದಲು ಈ ನಮ್ಮ ‘ಲೈನ್ ಮನ್’ಗಳ ಬಗೆಗೆ ಮೊದಲು ಬರೆ ಶಿವು ಅಂತ ಹಕ್ಕಿನಿಂದ ಮತ್ತು ಪ್ರೀತಿಯಿಂದ ಪದೇ ಪದೇ ಹೇಳಿದರು. ಅಂದಂತೆಯೇ ಈ ‘ಲೈನ್ ಮನ್’ಗಳು ಮನೆ-ಮಠವನ್ನೆದೇ, ಚಳಿ-ಮಳೆ ಎನ್ನದೇ ದುಡಿಯುವ ಪರಿಯನ್ನು ನನ್ನಿಂದ ಬರೆಸಿದರು.

ಇದನ್ನೇಕೆ ಈ ‘ಸಮಯಾಂತರ’ ಕವನ ಸಂಕಲನದ ಬಗೆಗೆ ನನ್ನ ವಿಮರ್ಶೆ(ತೀರಾ ವಯಕ್ತಿಕ ಅಭಿಪ್ರಾಯ) ಬರೆಯುವ ಮೊದಲು ಹೇಳಿದೆನೆಂದರೆ ಇವರು ತಾವು ಕೆಲಸ ಮಾಡುತ್ತಿದ್ದ ಈ ಹೆಸ್ಕಾಂ ಒಟ್ಟಾರೆ ಕೆಇಬಿಯ ಕೆಳ‌ ದರ್ಜೆಯ ನೌಕರರ ಅದರಲ್ಲೂ ಈ ‘ಲೈನ್ ಮನ್’ಗಳ ಬಗೆಗೆ ಸತೀಶ್ ಕುಲಕರ್ಣಿಯವರಿಗೆ ಎಷ್ಟೊಂದು ಪ್ರೀತಿ, ಕಾಳಯ ಮತ್ತು ತಮ್ಮ ಕೆಲಸದಲ್ಲೂ ಶ್ರದ್ಧೆ ಇತ್ತು ಎಂದು ತಿಳುಸಲು ಈ ಪೀಠೀಕೆ ಹಾಕಿದೆ ಅಷ್ಟೇ.

ಇನ್ನೂ ‘ಸಮಯಾಂತರ’ ‘ಕವನ ಸಂಕಲನ’ದ ಬಗೆಗೆ ನೋಡೋಣ…

ಸಾಹಿತ್ಯಿಕ ದೃಷ್ಟಿಯಿಂದ ತುಂಬಾ ಉತ್ಸಾಹದಾಯಕ ಪರಿಸರ ಹೊಂದಿರುವ ಹಾವೇರಿಯಲ್ಲಿ ದೀರ್ಘ ಕಾಲದಿಂದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ರಾಜ್ಯದ ಸಾಂಸ್ಕೃತಿಕ ಭೂಪಟದಲ್ಲಿ ಹಾವೇರಿಗೆ ತನ್ನದೇ ಆದ ಸ್ಥಾನ ಕೊಡಿಸುವಲ್ಲಿ ಅವಿರತವಾಗಿ ಶ್ರಮಿಸಿದವರಲ್ಲಿ ಸತೀಶ್ ಕುಲಕರ್ಣಿಯವರೂ ಪ್ರಮುಖರು.

ಐದು ದಶಕಗಳಿಗೂ ಹೆಚ್ಚು ಕನ್ನಡದಲ್ಲಿ ಕಾವ್ಯ ರಚನೆ ಮಾಡುತ್ತಿರುವ ಸತೀಶ ಕುಲಕರ್ಣಿ ಅವರು ಸುಮಾರು ಇನ್ನೂರೈವತ್ತಕ್ಕೂ ಅಧಿಕ ಕವಿತೆಗಳನ್ನು ಬರೆದಿದ್ದಾರೆ.

ಅವರ “ಬೆಂಕಿ ಬೇರು”, “ನೆಲದ ನೆರಳು”, “ಒಡಲಾಳ ಕಿಚ್ಚು”, “ವಿಷಾದಯೋಗ”, “ಗಾಂಧೀಗಿಡ” ಮತ್ತು “ಸತೀಶ ಸಮಗ್ರ ಕವಿತೆಗಳು” ಕವನ ಸಂಕಲನಗಳು.

“ಸಮಯಾಂತರ” ಅವರ ಆಯ್ದ ಅರವತ್ತು ಕವಿತೆಗಳ ಸಂಕಲನ. ಮೊಗಸಾಲೆ ಪ್ರಕಾಶನದ ಮೂಲಕ ಸುಂದರವಾಗಿ ಪ್ರಕಟಗೊಂಡಿರುವ ಈ ಕೃತಿಗೆ ಖ್ಯಾತ ವಿಮರ್ಶಕ ಚಂದ್ರಶೇಖರ ನಂಗಲಿ ಅನೇಕ ಒಳನೋಟಗಳಿರುವ ಅಭ್ಯಾಸಪೂರ್ಣ ಮುನ್ನುಡಿ ಬರೆದಿದ್ದಾರೆ.

ಸತೀಶರ ಕಾವ್ಯವನ್ನು ಸಿಂಹಾವಲೋಕನ ಕ್ರಮದಿಂದ ವಿಮರ್ಶಿಸಿರುವ ನಂಗಲಿಯವರ ಮುನ್ನುಡಿ ಸತೀಶ ಕುಲಕರ್ಣಿಯರ ಕಾವ್ಯಕ್ಕೆ ಉತ್ತಮ ಪ್ರವೇಶ ಒದಗಿಸುತ್ತದೆ.

ಸತೀಶರನ್ನು ಸಾಮಾನ್ಯವಾಗಿ ದಲಿತ–ಬಂಡಾಯ ಚಳುವಳಿಯೊಂದಿಗೆ ಗುರುತಿಸಿಲಾಗುತ್ತದೆ.

ಅವರನ್ನು “ಬಂಡಾಯ ಕವಿ”ಯೆಂದೂ ಕರೆಯುವುದು ಅವರ ಕಾವ್ಯದ ಮಹತ್ವವನ್ನು ಸೀಮಿತಗೊಳಿಸುತ್ತದೆ. ಅವರ ಕವಿತೆಗಳು ಅಪಾರ ಜೀವನಾನುಭವದಿಂದ ಮೂಡಿ ಬಂದಿವೆ. ಅವರ ಕವಿತೆಗಳು ಕೃತಕವಾಗಿರದೇ ಸಹಜವಾಗಿರುವುದರಿಂದ ಅವರನ್ನು ‘ಸಹಜ ಮಾನವತಾವಾದಿ ಕವಿಯೆಂದು ಕರೆಯಬಹುದು.

ಪ್ರಸ್ತುತ “ಸಮಯಾಂತರ” ಸಂಕಲನದಲ್ಲಿ ಅವರ ಒಲವು ನಿಲುವುಗಳನ್ನು ಪ್ರತಿನಿಧಿಸಬಲ್ಲ ವೈವಿಧ್ಯಮಯ ಕವಿತೆಗಳಿವೆ.

“ಅಜ್ಞಾತ ಪರ್ವದಲ್ಲಿ” ಕವಿತೆ ತುರ್ತು ಪರಿಸ್ಥಿತಿ ಉಂಟು ಮಾಡಿದ ಅವಾಂತರಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದೆ.

“ಸ್ಮಶಾನ ಮೌನ

ಬಾಗಿಲುಗಳು ಬಂದಾಗಿದ್ದವು.

ನಾಲಿಗೆಗಳು ಕತ್ತರಿಸಿ ಹೋಗಿದ್ದವು.

ಬೆಳಕಿಲ್ಲ, ಗಾಳಿಯಿಲ್ಲ.

ಭದ್ರ ಕೀಲಿಗಳು.

ಬಾಯಿ ಬಂದು ಮಾಡಿದ ಚಿಲಕಗಳು.

ಜನ ಬರಿ ಸತ್ತ ಜನ……”

# ಅಜ್ಞಾತ ಪರ್ವದಲ್ಲಿ…

ನೂರಾರು ವರ್ಷಗಳಿಂದ ನೊಂದು ಬೆಂದು ಹೋದ ಶೋಷಿತರ ಅಸಹಾಯಕತೆ ಮತ್ತು ಶೋಷಕರ ಅಟ್ಟಹಾಸವನ್ನು “ಒಡಲಾಳ ಕಿಚ್ಚು” ಕವಿತೆ ಸಮರ್ಥವಾಗಿ ಕಟ್ಟಿಕೊಡುತ್ತದೆ.

“ಹಟ್ಟಿಯಲ್ಲಿ ಬಟ್ಟೆ ಬಿಚ್ಚಿ ಸಾಹುಕಾರನಿಗೆ

ಮೈ ಕೊಟ್ಟವರ, ಗದ್ದೆಯಲ್ಲಿ

ಜರತಾರಿ ರುಮಾಲಿನ ರಾಕ್ಷಸರಿಗೆ

ಹಮಾಲರಾಗುವವರ……”

“ಕಿತ್ತು ತಿನ್ನುವವರ

ಕೂತು ತಿನ್ನುವವರ ಕರಾಮತ್ತು

ಉರಿ ಹಚ್ಚಿ ಎಲ್ಲ ಸುಟ್ಟು ಹಾಕಿ

ಹೊಸ ಹಸಿರು ಚಿಗುರುವ ಮುನ್ನ

ದನಿ ಎತ್ತಿ…… ”

# ಒಡಲಾಳ ಕಿಚ್ಚು’ವಿನಲ್ಲಿ ಕಾಣಬಹುದು…

ಸತೀಶ ಕುಲಕರ್ಣಿ ಅವರ “ಒಂದು ಅತ್ಯಾಚಾರದ ಹಂತಗಳು” ದೈಹಿಕವಾಗಿ ಜರ್ಜರಿತವಾದ ಅತ್ಯಾಚಾರ ಸಂತ್ರಸ್ತೆ ಕಾನೂನಿನ ಮೂಲಕ ಮಾನಸಿಕ ಅತ್ಯಾಚಾರಕ್ಕೊಳಗಾಗುವುದನ್ನು ಮಾರ್ಮಿಕವಾಗಿ ಚಿತ್ರಿಸುತ್ತದೆ.

ಹೀಗೆಯೇ ಮುಂದುವರಿದು…

“ಅವರು ಬಂದು ತಡೆದವರಳನ್ನು

ಮೇಲೆ ಗಿಡಗಳ ದಳದಳ –

ಗಾಳಿಗುಲುಕುವ ಎಲೆಗಳು

ಕೀವು ತುಂಬಿ ಸೋರುವ

ಹುಣ್ಣು ನಕ್ಷತ್ರಗಳು

ಇಷ್ಟು ಅವಳ ಕೊನೆಯ ನೆನಪುಗಳು……”

“ಅತ್ಯಾಚಾರವಾಗಿಲ್ಲ –

ತೀರ್ಪು ಬಂದಿತ್ತು ಒಂದು ದಿನ

ಅವಳು ಹೆರಿಗೆ ನೋವಿಗೆ

ನರಳುತ್ತಿದ್ದಳು……”

# ಒಂದು ಅತ್ಯಾಚಾರದ ಹಂತಗಳು…

“ಕಾಗದ ಕ್ರಾಂತಿಕಾರಿಗಳ ನಡುವೆ”, “ಸಿದ್ಧ ಸವಾರರು” ಹುಸಿ ಕ್ರಾಂತಿಕಾರರ ಕುರಿತ ಕವಿತೆಗಳಾದರೆ, “ಸತ್ತ ಮೇಲೆ” ನಿಜವಾದ ಹೋರಾಟಗಾರರ ಸ್ವಗತದಂತಿದೆ.

“ನಾನು ಬೂದಿಯಾಗಿರುವೆ

ಈ ನೆಲದ ಮಣ್ಣಾಗಿರುವೆ

ನಾನು ಸ್ಮೃತಿಯಾಗಿರುವೆ

ಜೀವನದ ಗತಿಯಾಗಿರುವೆ

ನಿಲ್ಲದ ಸತ್ಯವಾಗಿರುವೆ

ಆಗಿರುವೆ ನಾನು ಬೂದಿ

ಎಲ್ಲರೂ ನಡೆದ ಹಾದಿ… ”

# ನಾನು ಸತ್ತ ಮೇಲೆ…

“ಬಂಡಾಯ” ಮತ್ತು “ಸ್ವಾಭಿಮಾನದ ಹಾಡು” ಬಂಡಾಯ ಚಳುವಳಿಯಿಂದ ಸ್ಫೂರ್ತಿ ಪಡೆದ ಕವಿತೆಗಳು.

“ದಮನಕ್ಕೆ ಉತ್ತರ ಧಿಕ್ಕಾರ

ಬಂಡಾಯ ದಬ್ಬಾಳಿಕೆಗೆ ಉತ್ತರ…”

# ಬಂಡಾಯ…

“ನೀ ಚೆಲ್ಲಿದ ಹಾದಿ ಮುಳ್ಳುಗಳ

ನಿನ್ನೆಂಜಲ ನಿಗಿನಿಗಿ ಕೆಂಡದುಂಡೆಗಳ

ತುಳಿದು ನಾ ದಾಟಬಲ್ಲೆ

ನನ್ನ ಗುರಿ ನಾ ಮುಟ್ಟಬಲ್ಲೆ… ”

# ಸ್ವಾಭಿಮಾನದ ಹಾಡು…

ವಿಷಾದಯೋಗ ಹಿಂಸೆ ಮತ್ತು ಗಲಭೆಯ ದುಷ್ಪರಿಣಾಮದ ಕುರಿತ ಉತ್ತಮ ಕವಿತೆ.

“ನಲವತ್ತೇಳರ ನರಕದ ನಾಡು

’ಹೇರಾಮ’ ಆರ್ತನದ ನಾಡು

ಪುಡಿ ಪುಡಿಗೊಂಡ ಗೋಪುರದ ನಾಡು… ”

# ವಿಷಾದಯೋಗ…

“ಅಲಿಖಿತ ಕಾದಂಬರಿ ನಾಯಕನ ಕವಿತೆ” ಮತ್ತು “ಲೈನ್ ಮನ್ ಮಡಿವಾಳರ ಭೀಮಪ್ಪನಿಗೆ” ಕವಿತೆಗಳು ಸಾಮಾನ್ಯರ ಅಸಮಾನ್ಯತೆಯನ್ನು ಗುರುತಿಸಿದೆ. ಈ ‘ಲೈನ್ ಮನ್ ಮಡಿವಾಳ ಬೀಮಪ್ಪ’ ಕವಿತೆ ನನಗಂತೂ ಇವರು ತಮ್ಮ ಸಹೋದ್ಯೋಗಿಗಳು ಮತ್ತು ಒಟ್ಟಾರೆ ಕೆಇಬಿಯ ಅಧಿಕಾರ ರಹಿತ ಕೆಲಸಗಾರರ ಬಗೆಗೆ ಸತೀಶ ಕುಲಕರ್ಣಿರಿಗೆ ಇದ್ದ ಮಾನವೀಯ ಮಮಕಾರ ಮತ್ತು ಕೆಇಬಿ ಕೆಲಸಗಾರರ ಮೇಲಿನ ಅಭಿಮಾನವನ್ನು ತೋರಿಸಿತು.

“ಮೂಡಿಲ್ಲ ಅಕ್ಷರಕ್ಷರಗಳಲಿ,

ಬದುಕಿಲ್ಲ, ಸತ್ತಿಲ್ಲ

ಅನನ್ಯದವತಾರವೆ

ಓ ಶ್ರೀ ಸಾಮಾನ್ಯ,

ಸತ್ಯದ ಸೂತ್ರ ನಾಯಕ ನೀನು… ”

# ಅಲಿಖಿತ ಕಾದಂಬರಿಯ ನಾಯಕ…

“ಹಾದಿ ಹೆಣವಾದ

ಬೀದಿ ದೀಪಗಳ ದೊರೆಯೆ

ಬೆಳಕು ಕೊಟ್ಟು, ಕತ್ತಲೆಯ ನೀ ಸೇರಿದಿಯೆ?….. ”

# ಲೈನ್ ಮನ್ ಮಡಿವಾಳರ ಭೀಮಪ್ಪನಿಗೆ…

ಇದು ತಮ್ಮ ಕಾಯಕವನ್ನು ಇಷ್ಟಪಡುವ ಮತ್ತು ಕೆಳಹಂತದ ನೌಕರರ‌ ಬಗೆಗಿನ ಮಾನವೀಯ ಪ್ರೀತಿ, ಕಾಳಜಿ ಮತ್ತು ಸಹಜ ‘ಲೈನ್ ಮನ್’ಗಳ ಕಷ್ಟದ ಕೆಲಸದ ಅನುಕಂಪವನ್ನು ಎತ್ತಿ ತೋರಿಸುತ್ತದೆ.

“ನನ್ನಪ್ಪ”, “ಉಳಿದ ನೆನಪು” ಮತ್ತು “ಗುರುಗಳು ಸತ್ತ ಮುಂಜಾನೆ” ಮಾನವೀಯ ಸಂಬಂಧಗಳ ಕುರಿತ ಕವಿತೆಗಳಾಗಿದ್ದು, ಆ ನೆನಪುಗಳೇ ಕವಿತೆಗಳಾಗಿವೆ.

“ನಾಲ್ಕು ಮಕ್ಕಳಿಗೆ ನೂರು ಕನಸು ಕೊಟ್ಟ

ಸಾವು ಬರುವತನಕ ಬಿಳಿ ಅಂಗಿ ಪೈಜಾಮು ತೊಟ್ಟ

ನನ್ನ ಆ ಬಡ ಅಪ್ಪ…”

# ನನ್ನಪ್ಪ…

“ಕೆಂಬೆಂಕಿ,

ಸುಡುವ ಒಲೆಯ ಮುಂದೆ

ಕೂತ ಅವ್ವನ, ಅದೆಷ್ಟು ಕನಸುಗಳು ಹಾಗೆಯೆ

ಉರಿದು ಬೂದಿಯಾಗಿ ಹೋಗಿರಲಿಕ್ಕಿಲ್ಲ…… ”

# ಉಳಿದ ನೆನಪು…

“ಛಡಿ ಏಟಕೊಟ್ಟ ಮಾಸ್ತರು,

ಹೊಸ ಮಾತು ಕಲಿಸಿ ಕೊಟ್ಟ ಮಾಸ್ತರು,

ಸಾಲಿ ಗ್ರೌಂಡಿನ್ಯಾಗ

ಮೂಲಿಗೆ ನಿಂತು

ನಮ್ಮಾಟಾ ನೋಡಿದ ಮಾಸ್ತರು,

ಅಕ್ಷರ ಏಣಿ ಹತ್ತಿಸಿ

ಜೀವನದ ದೂರ ತೋರಿಸಿದ ಮಾಸ್ತರು,

ಮನಿ ಮರ್ತು, ಮಕ್ಕಳ ಮರತು

ನಮ್ಮನ್ನ ಮಕ್ಕಳಂತ ತಿಳಕೊಂಡ ಮಾಸ್ತರು

ಎಲ್ಲಾ ನೆನಪಾದವು

ದೂರದಿಂದ ನೋಡಿದೆ.

ಮಾಸ್ತರ ಮನಿ ತುಂಬ ಮಂದಿ ಬಾಳಿತ್ತು,

ನನ್ನ ಕಣ್ಣ ಬಾಗಲದಾಗ ನೀರು ತುಂಬಿ ನಿಂತಿತ್ತು…”

# ಗುರುಗಳು ಸತ್ತ ಮುಂಜಾನೆ…

“ನಗರ ಮೈ ಮುರಿಯುತ್ತಿದೆ” ನಗರೀಕರಣದ ಪೈಶಾಚಿಕತೆ ಯಾವ ಮಟ್ಟಕ್ಕೆ ಬದುಕನ್ನು ದುಸ್ತರ ಮಾಡಿದೆಯೆಂಬುದರ ಕುರಿತ ಕವಿತೆ. “ಅಮೇರಿಕಾ” ಬಂಡವಾಳಶಾಹಿ ರಾಷ್ಟ್ರಗಳ ದುರಾಸೆಯನ್ನು ಅಭಿವ್ಯಕ್ತಿಸಿದೆ. “ಕಂಪನಿ ಸವಾಲ್”, “ಎಲ್ಲಿಯೋ ದೂರದಲ್ಲಿ”, “ಮತ್ತೊಂದು ಬೆಳಕು”, “ಬೆಳ್ತನಕಾ” ಮತ್ತು “ಯುದ್ಧ ಶುರು ಆತೇನು? ಇವು ಸತೀಶ ಕುಲಕರ್ಣಿಯವರ ವಿಶಿಷ್ಟವಾದ ಮಾನವೀಯ ಸಹಜ ಕವಿತೆಗಳು.

“ಮಹಾಭಾರತದ ಆ ಹಕ್ಕಿ ”ಬಹುಹಿಂದಿನಿಂದ ಬಂದ ಅರ್ಜುನ, ಏಕಲವ್ಯರ ರೂಪಕದೊಂದಿಗೆ ಗೆದ್ದವರ ಕಥೆಯನ್ನು ಸಂಭ್ರಮದಿಂದ ಹೇಳುವುದನ್ನು ಪ್ರಶ್ನಿಸುತ್ತದೆ.

“ಕವಿಯಾಗಿ ನಾನೇಕೆ ಒಂದು ಪ್ರಶ್ನೆ ಕೇಳಬಾರದು

ಯಾಕೆ, ಆ ಪುಟ್ಟ ಹಕ್ಕಿ ಆಕಾಶಕ್ಕೆ ಗಕ್ಕನೆ ಹಾರಿಹೋಗಬಾರದು

ಯಾಕೆ, ಆ ಬಾಣದ ಗುರಿ ತಪ್ಪಬಾರದು

ಹೇಳಿ ನೀವೇ ಹೇಳಿ…”

# ಮಹಾಭಾರತದ ಆ ಹಕ್ಕಿ…

“ಕಟ್ಟತೇವ ನಾವು” ಮತ್ತು “ಗಾಂಧೀಗಿಡ” ಕವಿತೆಗಳಲ್ಲಿ “ಕಟ್ಟತೇವ ನಾವು” ಬಂಡಾಯದ ಕ್ರಾಂತಿಗೀತೆಯಾಗಿದೆ. ಅದರಂತೆಯೇ ಆ ಕ್ರಾಂತಿಯಯನ್ನು ಬಯಸುವ ಕವನವಾಗಿದೆ.

“ಕಟ್ಟತೇವ ನಾವು

ಕಟ್ಟತೇವ ನಾವು

ಕಟ್ಟೇ ಕಟ್ಟತೇವ.

ಒಡೆದ ಮನಸುಗಳ

ಕಂಡ ಕನಸುಗಳ

ಕಟ್ಟೇ ಕಟ್ಟತೇವ

ನಾವು ಕನಸ ಕಟ್ಟತೇವ

ನಾವು ಮನಸು ಕಟ್ಟತೇವ…”

# ಕಟ್ಟತೇವ ನಾವು…

“ಈಗ

ನೆರಳಿಲ್ಲ ನೆಲಕ್ಕೆ

ಅರಳಿಲ್ಲ ಹೂವುಗಳು

ಸತ್ತ ನೆಲದ

ಸತ್ವ ಕುಡಿದ ಗಿಡ

ಹಣ್ಣು ಕೊಟ್ಟಿಲ್ಲ

ಮೂಕ ಕಾವ್ಯದ

ಪ್ರತೀಕದ ಗಿಡ

ನಿತ್ಯ ಕೊಡಲಿಗೆ

ಬಡವರಿಗೆ ಚಕ್ಕೆ

ಕೊಡುವ ಗಾಂಧೀಗಿಡ

ಬೇರು ಸತ್ತಿಲ್ಲ

ಮತ್ತೊಮ್ಮೆ ಈ

ನೆಲದ ಮಾತಾಗುಹುದೆ

ಹೇಳು ಗಾಂಧೀಗಿಡ…”

# ‘ಗಾಂಧೀಗಿಡ’…

ಆಧುನಿಕ ಕನ್ನಡ ಕಾವ್ಯಕ್ಕೆ ಅನೇಕ ವಿಶಿಷ್ಟ ಕವಿತೆಗಳನ್ನು ನೀಡಿರುವ ಸತೀಶ ಕುಲಕರ್ಣಿಯವರ ಕಾವ್ಯಕ್ಕೆ ಈ ವರೆಗೂ ಸೂಕ್ತ ವಿಮರ್ಶೆ ಸಂದಿಲ್ಲ. ಆದರೂ ಅವರ ಕಾವ್ಯ ಜನಮನದಲ್ಲಿ ಹಾಸುಹೊಕ್ಕಾಗಿಯೇ ಇದೆ. ಖ್ಯಾತ ವಿಮರ್ಶಕ ಚಂದ್ರಶೇಖರ ನಂಗಲಿ ತಮ್ಮ ಮುನ್ನುಡಿಯ ಮೂಲಕ ಒಟ್ಟಾರೆ ಈ ಕವನ ಸಂಕಲನವಾದ ‘ಸಮಯಾಂತರ’ ನ್ಯಾಯ ಒದಗಿಸಿದ್ದಾರೆ.

ನಂಗಲಿಯವರು ಹೇಳಿದಂತೆ ಸತೀಶ ಕುಲಕರ್ಣಿಯವರು ಹಾವೇರಿಯ ಹೊಕ್ಕುಳಲ್ಲಿ ಅರಳಿದ ಹೂವೇ ಸರಿಯೆಂಬುದು ನನ್ನದೂ ಅಭಿಪ್ರಾಯ..!

*********************

ಕೆ.ಶಿವು.ಲಕ್ಕಣ್ಣವರ

One thought on “ಪುಸ್ತಕ ಸಂಗಾತಿ

  1. Sariyaada vimarshe
    Satish kulkarni shabhakke nilukada karyasadhakaru
    Kavite
    Nataka
    Chalananachitra
    Sanghatane
    idakkondu kalashavittante
    Parara ondillondu kelasadondige nitya Usiraat
    Namste Satish Kulkarni sir

Leave a Reply

Back To Top