ಅರ್ಧನಾರೀಶ್ವರ ( ಕಾದಂಬರಿ)

ತಮಿಳು ಮೂಲ : ಪೆರುಮಾಳ್ ಮುರುಗನ್ 

ಕನ್ನಡಕ್ಕೆ : ನಲ್ಲತಂಬಿ

ಬದುಕಿನ ಆದಿಮ ಸತ್ಯಗಳಾದ ಕಾಮ, ಹುಟ್ಟು, ತಾಯ್ತನ, ವಂಶಾಭಿವೃದ್ಧಿಯ ಬಯಕೆಗಳು ಮತ್ತು ಸಾಮಾಜಿಕ ವ್ಯವಸ್ಥೆ ಬೆಳೆದು ಬಂದ ಬಗೆಗಳ  ನಡುವಣ ಸಂಘರ್ಷವೇ ಈ ಕಾದಂಬರಿಯ ಕಥಾವಸ್ತು.  ಕಾಮ ಮತ್ತು ತಾಯ್ತನದ ಬಯಕೆಗಳು ನೈಸರ್ಗಿಕವಾಗಿ ಇರುವಂಥವು.  ಆದರೆ ಗಂಡು-ಹೆಣ್ಣುಗಳ ನಡುವಣ ಕಾಮದಾಸೆಯ ಪೂರೈಕೆಗಾಗಿ  ಸಮಾಜವು ರೂಪಿಸಿಕೊಂಡ ವಿವಾಹವೆಂಬ ವ್ಯವಸ್ಥೆಯು ಕೆಲವೊಮ್ಮೆ ವಿಫಲವಾದಾಗ  ವ್ಯವಸ್ಥೆಯನ್ನು ಒಡೆದು  ಬೇರೆ ದಾರಿ ಹಿಡಿಯುವುದು ಹೇಗೆ  ಮತ್ತು ಅದರ ಪರಿಣಾಮಗಳೇನಾಗಬಹುದು ಎಂಬುದರ ಕುರಿತಾದ ಸಂವಾದವನ್ನು  ಈ ಕಾದಂಬರಿ ಅತ್ಯಂತ ಮಾರ್ಮಿಕವಾಗಿ ನಿರೂಪಿಸುತ್ತದೆ.  ಅದರ ಜತೆಗೆ ಜನಪದ ಬದುಕು  ಇಂತಹ ಸಮಸ್ಯೆಗಳ ಪರಿಹಾರಕ್ಕಾಗಿ ವ್ಯವಸ್ಥೆಯೊಳಗೇನೇ ಕಂಡುಕೊಂಡ ಪರಿಹಾರವೂ ಇಲ್ಲಿದೆ. ಗ್ರಾಮೀಣ ಬದುಕಿನ ಚಿತ್ರಣ, ಗಂಡ-ಹೆಂಡಿರ ನಡುವಣ ಆತ್ಮೀಯ ಸಂಬಂಧದ ಅರ್ಧನಾರೀಶ್ವರ ಪರಿಕಲ್ಪನೆಯನ್ನು ಹೋಲುವ ಸುಂದರ ಚಿತ್ರಣವು ಕೃತಿಯ ಸೌಂದರ್ಯಕ್ಕೆ ಮೆರುಗನ್ನಿತ್ತಿದೆ.

 ಕಾಳಿ ಮತ್ತು ಪೊನ್ನಿಯರ ದಾಂಪತ್ಯ ಜೀವನವು ‘ಸ್ವರ್ಗಕ್ಕೆ ಕಿಚ್ಚು ಹಚ್ಚುವಷ್ಟು’ ಆನಂದಮಯವಾಗಿತ್ತು. ಗಂಡ-ಹೆಂಡಿರು ಒಬ್ಬರನ್ನೊಬ್ಬರು ಎಂದೂ ಬಿಟ್ಟಿರಲಾರದವರೂ ಬಿಟ್ಟು ಕೊಡಲಾರದವರೂ ಆಗಿದ್ದರು.  ಅವರಿಬ್ಬರ ನಡುವಣ ಲೈಂಗಿಕ ಸಂಬಂಧದ ಬಿಸುಪು ಹತ್ತು ವರ್ಷ ಕಳೆದರೂ  ಒಂದಿಷ್ಟೂ ಕಡಿಮೆಯಾಗಿರಲಿಲ್ಲ. ಆದರೆ ಒಂದೇ ಒಂದು ಕೊರತೆಯೆಂದರೆ ಅವರಿಗೆ ಮಕ್ಕಳಾಗಿರಲಿಲ್ಲ. ಹೆಣ್ಣು ತನ್ನ ವ್ಯಕ್ತಿತ್ವದ ಮೂಲಕ ಎಷ್ಟೇ ಯಶಸ್ವಿಯಾದರೂ  ಆಕೆ ತಾಯಿಯಾಗದಿದ್ದರೆ ಸಮಾಜವು ಆಕೆಯನ್ನು ಸದಾ ಚುಚ್ಚಿ ನೋಯಿಸುತ್ತಿರುತ್ತದೆ.  ಕಾಳಿ-ಪೊನ್ನಿಯರಿಬ್ಬರೂ ಈ ದುಃಖವನ್ನು ಎದುರಿಸುತ್ತಾರೆ.  ಕೊನೆಗೆ ಕಾಳಿಯ ಅಮ್ಮ ಮತ್ತು ಪೊನ್ನಿಯ ಅಮ್ಮ ಇಬ್ಬರೂ ಅವಳನ್ನು ತಿರುಚೆಂಗೋಡು ಜಾತ್ರೆಯ  ಹದಿನಾಲ್ಕನೇ ದಿವಸದಂದು ಊರಿನ ಪದ್ಧತಿಯಂತೆ  ಮದುವೆಯಾದ ಹೆಣ್ಣು ಮಕ್ಕಳನ್ನು ಅವರು ಇಷ್ಟಪಟ್ಟವರ ಜತೆ ಕೂಡಲು ಕಳುಹಿಸುವ ಯೋಜನೆ ಹಾಕುತ್ತಾರೆ. 

ತನ್ನ ಪೊನ್ನಿ ತನ್ನ ಕೈಜಾರಿ ಹೋಗುತ್ತಾಳೆಂಬ ಭಯದಿಂದ ಕಾಳಿ ಇದಕ್ಕೆ ಸಮ್ಮತಿಸುವುದಿಲ್ಲ. ಆದರೆ ತಾಯ್ತನದ ಸಹಜ ಬಯಕೆ ಪೊನ್ನಿಯಲಿ ಎಷ್ಟು ಬಲವಾಗುತ್ತದೆ ಅಂದರೆ  ತಾನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಕಾಳಿಯ ವಿರೋಧವನ್ನು ಲೆಕ್ಕಿಸದೆ ಬೇರೊಬ್ಬ ಯುವಕನನ್ನು ಆರಿಸಿಕೊಂಡು ಪೊನ್ನಿ ಹೋಗುತ್ತಾಳೆ. ಕೊನೆಯಲಿ ಕಾಳಿ ಅವಳ ಮೇಲೆ ಸಿಟ್ಟಾಗುವುದರೊಂದಿಗೆ ಕಾದಂಬರಿ ಮುಗಿಯುತ್ತದೆ. ಪುರುಷ ಕೇಂದ್ರಿತ ವ್ಯವಸ್ಥೆಯಲ್ಲಿ ಒಬ್ಬ ಹೆಣ್ಣು ಹೇಗೆ ಸ್ವಾರ್ಥಿ ಪುರುಷನ ಸ್ವಂತ ಸೊತ್ತಾಗಿ ಶೋಷಣೆಗೊಳಗಾಗುತ್ತಾಳೆ ಎಂಬುದನ್ನು ಕಾದಂಬರಿ ನಿರೂಪಿಸುತ್ತದೆ.ಅನುವಾದದ ಭಾಷೆ ಚೆನ್ನಾಗಿದೆ. ಮೂಲದಲ್ಲಿರುವ ಆಡುಭಾಷೆಗೆ ಪರ್ಯಾಯವನ್ನು ಕೊಡಲು ಅನುವಾದಕರು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ ಮತ್ತು ಯಶಶ್ವಿಯಾಗಿದ್ದಾರೆ

************************************

ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

3 thoughts on “

  1. ಪರಿಚಯ ಕಾದಂಬರಿ ಓದಲು ಪ್ರೇರೇಪಿಸುತ್ತದೆ. ವಂದನೆಗಳು.

  2. ಕಾದಂಬರಿಯನ್ನು ನಾನು ಸಹ ಓದಿ ನನ್ನದೇ ಆದ ವಿಮರ್ಶೆಯನ್ನು ನಲ್ಲತಂಬಿಯವರಿಗೆ ಕಳಿಸಿದ್ದೆ.

Leave a Reply

Back To Top