ಸ್ಮಿತಾ ಅಮೃತರಾಜ್ ಕವಿತೆಗಳು
ಪುರಾವೆ
ಸಾಬೀತು ಪಡಿಸಲು
ಸೂಜಿ ಕಣ್ಣಿನಿಂದ ಹುಡುಕಿದರೂ
ಕಿತ್ತು ಹೋದ ಒಂದು ಎಳೆ
ನೂಲಿನ ನೇಯ್ಗೆಗೆ ಪುರಾವೆಗಳೇ
ಸಿಗುತ್ತಿಲ್ಲ.
ಎದೆಯ ತಳದಲ್ಲಿ ಸೋಸಿ
ಉಳಿದ ಅಪ್ಪಟ ತಿಳಿ ಸತ್ಯವೊಂದು
ಅಗೋಚರವಾಗಿ ಕದಡಿ ಪ್ರತಿಬಿಂಬ
ಮಸುಕು ಮಸುಕಾದುದ್ದಕ್ಕೆ ಪುರಾವೆಯ
ಕಡತಗಳನ್ನು ಹೇಗೆ ಶೋಧಿಸುವುದು?
ಬೆಳ್ಳಗೆ ಹೊಳೆದದ್ದು
ಕನ್ನಡಿಯಂತೆ ಪ್ರತಿಫಲಿಸಿದ್ದು
ಹಗಲಿನಷ್ಟು ನಿಚ್ಚಳವಾಗಿ ತೋರಿದ್ದು
ಎಲ್ಲವೂ ಕನಸಿನಂತೆ ಕರಗಿರುವಾಗ
ಅರ್ಥವಿರದ ಪುರಾವೆ ಒದಗಿಸುವುದು
ವೃಥಾ ಶ್ರಮವಷ್ಟೆ.
ಕಣ್ಣ ರೆಪ್ಪೆಯೊಳಗೆ ಅಚ್ಚೊತ್ತಿ ನಿಂತ
ಸ್ಪಷ್ಟ ಬಿಂಬವೊಂದನ್ನು ಆಕಾರವೇ ಇಲ್ಲವೆಂದು
ಅಳಿಸಲು ಸಾಧ್ಯವೇ?.
ಪದ್ಯ ಹೊಸೆದು
ರಾಗ ಕಟ್ಟಿ ತೇಲಿ ಬಂದ
ಗಾನ ಗಾಯನದ ಇಂಪು
ಕವಿತೆ ಹುಟ್ಟಿದ ಕ್ಷಣಗಳಿಗೆ
ಕಾಡಿದ ಭಾವವಷ್ಟೇ ಸಾಕ್ಷಿ.
ಸಾಕ್ಷಿಯುಳಿಸದೇ
ಹಕ್ಕಿ ಹಾರಿದ್ದು
ಹೂವು ನಕ್ಕಿದ್ದು
ಗಾಳಿಗಷ್ಟೇ ತಿಳಿದ ಸತ್ಯ
ಸಾಬೀತು ಪಡಿಸುವುದಕ್ಕೆ
ಪುರಾವೆ ಒದಗಿಸುವುದು
ಎಷ್ಟು ಕಷ್ಟ?!
ಭೂಮಿ ತೂಗುವ ಹಕ್ಕಿ
ಈ ಬೆಳ್ಳಾನೆ ಬೆಳಗಿನಲ್ಲಿ
ಮುಂಬಾಗಿಲ ಅಂಗಳದಲ್ಲಿ
ಎಳೆ ಬಿಸಿಲೊಳಗೆ ಬಾಲ ಕುಣಿಸುತ್ತಾ
ಭೂಮಿಯನ್ನೇ ತೂಗುತ್ತಿದೆಯಲ್ಲಾ
ಎಲಾ! ಪುಟಾಣಿ ಚುರುಕು ಹಕ್ಕಿ
ಯಾರಿಟ್ಟರೋ ಹೆಸರು?
ಭೂಮಿ ತೂಗುವ ಹಕ್ಕಿ.
ಮೇಲಕ್ಕೊಮ್ಮೆ ಕೆಳಕ್ಕೊಮ್ಮೆ
ತೂಗಿದಷ್ಟೂ ತೂಗಿದಷ್ಟೂ
ಮೇಲಕ್ಕೂ ಏರುವುದಿಲ್ಲ;ಕೆಳಕ್ಕೂ
ಇಳಿಯುವುದಿಲ್ಲ.
ಸಮತೋಲನದ ಸಮಭಾರವಂತೂ
ಸಧ್ಯಕ್ಕೆ ಸಾಧ್ಯವೇ ಇಲ್ಲವಾ..?
ಅತ್ತೊಮ್ಮೆ ಇತ್ತೊಮ್ಮೆ ಮುಗಿಯದ
ಶತಪಥ.
ಪಾತಾಳಕ್ಕಿಳಿದ ಇಲ್ಲಿಯ ದು:ಖ
ಮುಗಿಲು ಮುಟ್ಟಿರುವಾಗ ಅಲ್ಲಿಯ ರೋದನ
ಕ್ಷಣಕ್ಕೊಮ್ಮೆ ಹತೋಟಿ ತಪ್ಪುವ ಬದುಕ ಸಂತೆಯ
ಭಾರ ವಹಿವಾಟಿನ ನಡುವೆ ಪುಕ್ಕದ ಅಳತೆಗೋಲು
ಹಿಡಿತಕ್ಕೆ ದಕ್ಕುವುದಿಲ್ಲ.
ಹಠಕಟ್ಟಿ ಉಸಿರೊತ್ತಿ
ಬಿರುಸಿನಲ್ಲಿ ಒಯ್ದಷ್ಟೇ
ರಭಸದಲ್ಲಿ ರಪಕ್ಕನೆ ಪ್ರತಿಭಾರಿ
ನೆಲಕ್ಕಾತು ಹೋಗುವ ವಿಫಲ ಪ್ರಯತ್ನ
ನೋಡುತ್ತಾ ನಿಂತ ನೆಲವೂ ನೆಟ್ಟ ಆಗಸವೂ
ಅರೆಗಳಿಗೆ ಕಂಪಿಸಿಕೊಂಡರೂ..
ಹಕ್ಕಿ ಬಾಲ ಕುಣಿಸುತ್ತಲೇ ಇದೆ
ಜಗದ ಭಾರವನ್ನೆಲ್ಲಾ ಹೆಕ್ಕಿ ಹೆಕ್ಕಿ
ಪುಕ್ಕದಲ್ಲಿಟ್ಟು ತೂಗುತ್ತಲೇ ಇದೆ
ನಿರುಕಿಸುತ್ತಾ ನಿಂತ ಅಂಗಳದೆದೆ
ಈ ಗಳಿಗೆಯಲ್ಲಾದರೂ ಹಗುರಗೊಳ್ಳುತ್ತಿದೆ.
ದಕ್ಕಿದ ನಿರಾಳತೆಗೆ
ಅತ್ತ ಇತ್ತ ನುಲಿಯುತ್ತಾ
ಪರ‍್ರನೆ ಹಾರಿದೆ ಹಕ್ಕಿ
ತೂಗಿಕೊಳುವ ಕಾತರತೆಯಲ್ಲಿ
ಮತ್ತೆ ರಚ್ಚೆ ಹಿಡಿದಿದೆ ಭೂಮಿ
ಅರಿಕೆಗಳು
1.
ಅರಳಿ ಸರಿದ ಹಗಲುಗಳೆಷ್ಟೋ
ಆವರಿಸಿ ಕವಿದು ಕನಲಿದ
ಇರುಳುಗಳೆಷ್ಟೋ..
ಒಂದಂತೂ ದಿಟ
ಕವಿತೆಯೇ..ನಿನ್ನ ಅನುಪಸ್ಥಿಯಲ್ಲಿ
ಈ ಎರಡು ಕ್ರಿಯೆಗಳೂ
ಸಂಭವಿಸುತ್ತಿವೆ ನಿರಂತರ
ಹಾಗೂ ಕಾಯುವಿಕೆಯಲ್ಲೇ ನಾ ಕರಗಿ
ಕಳೆದು ಹೋಗುತ್ತಿದ್ದೇನೆ ಸತತ.
ಪ್ರಭುವೇ..
ಹಗಲು ಇರುಳು
ಹಾಗೇ ಬಂದು ಹೋಗುತ್ತಿರಲಿ
ಕಾಯುವಿಕೆಯ ಸುಖ ಹೀಗೇ
ಅನಂತವಾಗಿರಲಿ.
2.
ಪ್ರಭುವೇ..ನನಗೆ
ಪೂರ್ವ ಜನ್ಮದ ಬಗ್ಗೆ ಅರಿವಿಲ್ಲ
ಪುನರ್ಜನ್ಮದ ಬಗ್ಗೆ ನಂಬಿಕೆಯೂ ಇಲ್ಲ
ಅತ್ತ ಇತ್ತ ಸುಳಿದಾಡಿ
ಸತಾಯಿಸುವ ಕವಿತೆಯನ್ನೊಮ್ಮೆ
ಇದೇ ಜನುಮದಲ್ಲಿ ನನ್ನ ಇದಿರು
ಎಳೆದು ತಂದು ನಿಲ್ಲಿಸಿ ಬಿಡು ಸಾಕು.
3.
ಮೊದಲು ಕಣ್ಣು ಬಿಟ್ಟಾಗ ಜೋರಾಗಿ
ಶಬ್ದ ಹೊರಡಿಸಿ ಅತ್ತ ನೆನಪು
ಈಗಲೂ ಹಾಳು ಅಳು ನಿಲ್ಲುವುದಿಲ್ಲ
ಗುದ್ದಿ ಗುದ್ದಿ ಹೊರ ಬಂದರೂ
ಶಬ್ದ ಮಾತ್ರ ಕೇಳಿಸುತ್ತಿಲ್ಲ.
4.
ದಯೆ ತೋರು ಕವಿತೆಯೇ..
ಎಲ್ಲಾ ಭಾರವನ್ನು ನಿನ್ನ ಹೆಗಲಿಗೇರಿಸಿರುವೆ
ಶಬ್ದವನ್ನು ನಿಶ್ಯಬ್ದವಾಗಿ ಇಳಿಸಿಬಿಡು
ಶಬ್ದ ಸ್ಪೋಟದ ಅನಾಹುತಕ್ಕೆ ನೀನೂ ಕೂಡ
ಕಾರಣವಾಗುವುದ ತಪ್ಪಿಸಿಕೋ..
ಅತ್ತಷ್ಟು ಬಾರಿ ನಗಲಿಲ್ಲ
ಆದರೂ ಅತ್ತದ್ದು ಸುದ್ದಿಯಾಗಲೇ ಇಲ್ಲ
ನಕ್ಕಿದ್ದು ಗುಲ್ಲೋ ಗುಲ್ಲು
ಕವಿತೆಯೇ..ನೀ ಎಚ್ಚರವಾಗಿರುವುದಷ್ಟೇ
ಮುಖ್ಯ ಇಲ್ಲಿ
ಆಗ ನಾನೂ ನಿಶ್ಚಿಂತೆಯಾಗಿರಬಲ್ಲೆ
****************************************
ಸ್ಮಿತಾ ಬಹಳ ಚಂದದ ಕವಿತೆಗಳು..ಇಷ್ಟವಾದುವು ಎಲ್ಲವೂ
ಚಂದದ ಕವಿತೆಗಳು
ಎದೆ ಮುಟ್ಟಿತು ಕವಿತೆ……
ಮನ ಮುಟ್ಟುವ ಕವಿತೆಗಳು
ಚೆಂದದ ಕವಿತೆಗಳು ಸ್ಮಿತಾ.. ಬಹಳ ಹಿಡಿಸಿದವು
ಆತ್ಮೀಯತೆ ಸೂಸುವ ಸುಂದರ ಕವಿತೆಗಳು
ಸದಾ ಪ್ರೋತ್ಸಾಹಿಸುವ ಸಂಗಾತಿ ಪತ್ರಿಕೆಗೂ,ಓದಿ ಬೆನ್ತಟ್ಟುವ ನಿಮ್ಮೆಲ್ಲರ ಸಹೃದಯತೆಗೂ ನಾ ಅಭಾರಿ.
ಓಹ್ ಸ್ಮಿತಾ.. ತುಂಬಾ ಇಷ್ಟವಾದವು ಕವಿತೆಗಳು. ಅಭಿನಂದನೆಗಳು
ಎಲ್ಲವು ಚೆಂದ..ಸ್ಮಿತಾ
ಕಾಡುವ ಕವಿತೆಗಳು ಕನಸನ್ನು ಹುಟ್ಟು ಹಾಕಿ ಹೊಸಬರವಸೆಯ ಬದುಕಿನತ್ತದಾರಿ ತೋರಿಸುವ ರೀತಿಯಲ್ಲಿ ಇದೆ ನಿಮ್ಮ ಕವಿತೆಗಳು. ಅಭಿನಂದನೆಗಳು.
ಪ್ರಭುವೇ..ನನಗೆ
ಪೂರ್ವ ಜನ್ಮದ ಬಗ್ಗೆ ಅರಿವಿಲ್ಲ
ಪುನರ್ಜನ್ಮದ ಬಗ್ಗೆ ನಂಬಿಕೆಯೂ ಇಲ್ಲ
ಅತ್ತ ಇತ್ತ ಸುಳಿದಾಡಿ
ಸತಾಯಿಸುವ ಕವಿತೆಯನ್ನೊಮ್ಮೆ
ಇದೇ ಜನುಮದಲ್ಲಿ ನನ್ನ ಇದಿರು
ಎಳೆದು ತಂದು ನಿಲ್ಲಿಸಿ ಬಿಡು ಸಾಕು
…….ಇದು ಹೆಚ್ಚು ಇಷ್ಟವಾಯಿತು. ಇಂತಹ ಪ್ರತಿರೋಧವನ್ನು ಕನ್ನಡದ ಮಹಿಳಾ ಕಾವ್ಯ ಇನ್ನಷ್ಟು ಗಟ್ಟಿ ಗೊಳಿಸಿಕೊಳ್ಳಬೇಕು. ಪುನರ್ಜನ್ಮದಲ್ಲಿ ನಂಬಿಕೆಯಿಲ್ಲ ಎಂಬುದು ಬಹುದೊಡ್ಡ ನಿಲುವು. ಅದು ವಚನಕಾರರ ನಿಲುವು. ಸಂಪ್ರದಾಯದ ವಿರುದ್ಧದ ನಿಲುವು…
ಚಂದದ ಕವಿತೆಗಳು
ಎಲ್ಲಾ ಕವಿತೆಗಳೂ ಚೆನ್ನಾಗಿವೆ. ಭೂಮಿ ತೂಗುವ ಹಕ್ಕಿ ಸೂಪರ್.