ಇರುವೆ-ಆನೆ ಗಣಪ ಮತ್ತು ಪುಟ್ಟಿ
ವಿಜಯಶ್ರೀ ಹಾಲಾಡಿ
ಗಣಪನ ತಿಂಡಿ ಇರುವೆ ತಿಂದರೆ
ತಪ್ಪು ಏನಮ್ಮ
ಆನೆಮರಿಯೇ ಗಣಪ ಎಂದು
ಅಜ್ಜಿ ಅಂದಿಲ್ವ?
ಆನೆಗೆ ಇರುವೆ ಗೆಳೆಯನು ತಾನೇ
ನಾನೇ ನೋಡಿಲ್ವ
ಕಾಡಿನ ಬಿಲದಲಿ ಹುಲ್ಲಿನ ಬೀಜ
ಕೂಡಿ ಹಾಕಿಲ್ವ?
ಹುಲ್ಲು ಮೊಳೆತು ಮಳೆಯ ಬೆರೆತು
ಆನೆಯು ತಿಂದಿಲ್ವ
ಆನೆಗು ಇರುವೆಗು ಭೇದವೆ ಇಲ್ಲ
ಬೆಲ್ಲ ಕದ್ದಿಲ್ವ?
ಪುಟ್ಟಿಯ ಮಾತು ಸಿಡಿಯೋ ಅರಳು
ತಲೆಯು ಕೆಟ್ಟಿಲ್ವ!!
ಅಮ್ಮ ಅಪ್ಪ ಅಜ್ಜಿ ಅಜ್ಜ
ಬಿದ್ದು ನಕ್ಕಿಲ್ವ?
******************************
ಚನ್ನಾಗಿದೆ ಮೇಡಮ.ಅಭಿನಂದನೆಗಳು.