ಕವಿತೆ
ಕವಿಗಿನ್ನೇನು ಬೇಕು?
ಮಾಲತಿ ಶಶಿಧರ್
ಕವಿತೆಯೊಳಗೊಂದು ಭಾವ
ಬೆರೆತು ಹಾಲಿನಲ್ಲಿ ಲೀನವಾದ
ಜೇನಿನಂತೆ ಸವಿಯಾಗಿರಲು
ಕವಿಗಿನ್ನೇನು ಬೇಕು?
ಭಾವ ಭಾಷೆಗಳ ಮಿಲನ
ಪ್ರಸವವಾಗಲು ಕವಿತೆ
ಮಡಿಲಲ್ಲಿ ಕಣ್ದೆರೆಡು
ನಗುವ ಹಾಲುಗಲ್ಲದ
ಕೂಸಿನಂತೆ
ಕವಿಗಿನ್ನೇನು ಬೇಕು?
ಮನ ಭಾವಗಳ ಬಂಧವದು
ಅರಿವಿನೊಳಗಿಟ್ಟ ಗಂಧದ ಕೊರಡು
ಸುಗಂಧ ಎಲ್ಲೆಡೆ ಹಬ್ಬಿ
ಮುದವ ಹಂಚುತಿರಲು
ಕವಿಗಿನ್ನೇನು ಬೇಕು?
ಎದೆಯೊಳಗಿನ ತದ್ಭವಗಳೆಲ್ಲಾ
ಹೆಣೆದುಕೊಂಡು ತತ್ಸಮಗಳ
ಪಂಕ್ತಿಗಳಾಗಿ ಅರಳಿದರೆ
ಮೊಗ್ಗೊಂದು ಬಿರಿದು ಮುಗುಳು
ನಗುವಂತೆ
ಕವಿಗಿನ್ನೇನು ಬೇಕು??
ಕವಿತೆ ಲೋಕದ ಕನ್ನಡಿ
ಎಡಬಲಗಳಾಚೆ ಚಂದ ತೋರುವ
ಪದ ಲಾಸ್ಯ ಮೃದು ಹಾಸ್ಯ
ಜೀವ ಭಾವಗಳ ಜಲದೋಟ
ನಿಲದೆ ಓಡುತ ಲೋಕವ ಶುದ್ಧಿ
ಮಾಡಲು
ಕವಿಗಿನ್ನೇನು ಬೇಕು??
ಕವಿತೆ ಇದ್ದರೆ ಸಾಕು…
***********************
ಹೌದಲ್ಲವೇ? ಕವಿಗಿನ್ನೇನು ಬೇಕು..
ಹೌದು mam.. thank u
ಇದು ಕವಿಗೆ ಮಾತ್ರ ಅಲ್ಲ. ಎಲ್ಲರಿಗೂ ಅನ್ವಯಿಸುವಂಥದು
ಹೌದು
ಸೂಪರ್. ಕವಿಗೆ ಕೇವಲ ಕವನ ಸಾಕು ಉಸಿರಾಡಲು ಜಗದ ಭಾವಕೆ ಮಿಡಿಯಲು ತುಡಿಯಲು.
Thank u so much sir