ಧಾರಾವಾಹಿ ಸಂಗಾತಿ-24 ಅರ್ಜುನ ಉವಾಚ ವಿಶ್ವನಾಥ್ ಎನ್ ನೇರಳೆಕಟ್ಟೆ ಸುಧನ್ವ ಗೆದ್ದ…ಕೃಷ್ಹೃ ಹೃದಯವನು ಸುಧನ್ವ ಅಷ್ಟು ಬಲಯುತನಾದದ್ದು ಹೇಗೆ ಎನ್ನುವ ರಹಸ್ಯವನ್ನು ನನಗೆ ತಿಳಿಸಿದ ಶ್ರೀಕೃಷ್ಣ. ಸುಧನ್ವ ಏಕಪತ್ನೀವ್ರತಸ್ಥನಾಗಿದ್ದ. ತಂದೆಯ ಆಜ್ಞೆಯನ್ನು ಅವಗಣಿಸಿದವನಲ್ಲ. ಕೃಷ್ಣಪೂಜೆಗೆ ಉದಾಸೀನ ತೋರಿದವನಲ್ಲ. ಆತನ ಅಂತಃಸ್ಸತ್ವವೇ ಅವನಿಗೆ ಅಂತಹ ಶಕ್ತಿಯನ್ನು ಒದಗಿಸಿತ್ತು. ಇಂದ್ರ ಬ್ರಹ್ಮ ಶಿವಾದಿಗಳಿಗೂ ಯುದ್ಧದಲ್ಲಿ ಮಣಿವವನಲ್ಲ ಇವ ಎಂದ ಶ್ರೀಕೃಷ್ಣ. ಮೂರೂ ಲೋಕಗಳನ್ನು ಅಂಜಿಸುವ ಇವನ ಶೌರ್ಯವನ್ನು ಕಾಣುತ್ತಾ ಇರುವುದಷ್ಟೇ ಇನ್ನು ನಮ್ಮ ಕೆಲಸ ಎಂದ.ಆಗ ಸುಧನ್ವ ಕೃಷ್ಣನನ್ನು ದಿಟ್ಟತನದಿಂದ ಪ್ರಶ್ನಿಸಿದ. “ಅಂದು ಗೋವರ್ಧನ ಗಿರಿಯನ್ನೆತ್ತಿ ಗೋವುಗಳನ್ನು ಕಾಪಾಡಿದ ಹಾಗೆ ಇಂದು ಈ ಪಾರ್ಥನನ್ನು ರಕ್ಷಿಸುವ ತೆರದಲ್ಲಿ ಬಂದೆ. ನಾನೂ ನಿನ್ನ ಭಕ್ತನೇ. ನನ್ನ ಮೇಲೇಕೆ ನೀನು ಕೃಪೆದೋರದಿರುವೆ. ಇರಲಿ. ನಾನಂತೂ ಅನವರತ ನಿನ್ನ ಭಕ್ತನೇ. ಅದರಲ್ಲಿ ಸಂದೇಹವಿಲ್ಲ. ಈ ಯುದ್ಧದಲ್ಲಿ ನನ್ನ ಈ ದೇಹವನ್ನು ನಿನಗೊಪ್ಪಿಸದೆ ಬಿಡೆನು” ಅಂದ.ಸುಧನ್ವ ಎತ್ತಿದ ಆ ಪ್ರಶ್ನೆ ನನ್ನೊಳಗೆ ಯೋಚನೆಯನ್ನು ಮೂಡಿಸಿತು. ನಾನೂ ಕೃಷ್ಣನ ಭಕ್ತ. ಸುಧನ್ವನೂ ಹರಿಭಕ್ತ. ಹಾಗಿರುವಾಗ ಕೃಷ್ಣ ನನ್ನ ಪರವಾಗಿ ಮಾತ್ರವೇ ನಿಂತಿದ್ದಾನೇಕೆ?! ಸಂದರ್ಭಕ್ಕೆ ಹೊಂದುವ ರೀತಿಯಲ್ಲಿ ಕೃಷ್ಣವರ್ತನೆಯಿದೆ ಎನಿಸಿತು ನನಗೆ. ಈಗ ಕೃಷ್ಣ ನನ್ನ ಪರವಾಗಿರದೆ ಸುಧನ್ವನ ಪಕ್ಷ ವಹಿಸಿದರೆ ಯುದ್ಧದ ಗೆಲುವು ನನ್ನದಾಗುವುದಿಲ್ಲ. ಕುದುರೆ ಮುಂದಕ್ಕೆ ಚಲಿಸುವುದಿಲ್ಲ. ನಮ್ಮ ಅಶ್ವಮೇಧ ಯಾಗವದು ಸಂಪೂರ್ಣವಾಗುವುದಿಲ್ಲ. ಈ ಬಗೆಯ ದೂರಾಲೋಚನೆಯನ್ನು ಇರಿಸಿಕೊಂಡೇ ಆ ಕೃಷ್ಣದೇವ ನನಗೆ ನೆರವಾಗಿ ನಿಂತಿರಬೇಕು. ಔಚಿತ್ಯಪೂರ್ಣನಾಗಿದ್ದಾನೆ ಅಚ್ಯುತ ಎನಿಸಿತು ನನಗೆ ಆ ಕ್ಷಣದಲ್ಲಿ.ಆಗಲೇ ಸುಧನ್ವ ಬಿಟ್ಟ ಬಾಣ ನನ್ನ ರಥವನ್ನು ತಾಡಿಸಿತು. ಅದೆಂತಹ ಭೀಕರ ಹೊಡೆತ! ತಿರುಗಿ ತಿರುಗಿತು ರಥ. ಭಯದ ದನಿಯನ್ನೆಬ್ಬಿಸಿದವು ಕುದುರೆಗಳು. ನನಗೂ ಕೃಷ್ಣನಿಗೂ ಕಣ್ಣಿಗೆ ಕತ್ತಲೆ ಕವಿದಂತಾಯಿತು. ತಲೆ ತಿರುಗಿತು. ರಥದ ಚಕ್ರಗಳು ಕಳಚಿ ಬಿದ್ದ ಅನುಭವ. ಹಿಂದುಹಿಂದಕ್ಕೆ ಸರಿದುಹೋಯಿತು ನನ್ನ ರಥ.ನನ್ನ ಕೋಪವೀಗ ಮೇರೆಮೀರಿತು. ಇನ್ನಿವನ ಶೌರ್ಯವನ್ನು ಕೊನೆಗಾಣಿಸದಿದ್ದರೆ ನಮಗೆ ಉಳಿಗಾಲವಿಲ್ಲ ಎಂದು ತೋರಿತು. ಮೂರು ಬಾಣಗಳೊಳಗೆ ಅವನ ಪ್ರಾಣಹರಣ ಮಾಡುವ ಪ್ರತಿಜ್ಞೆಯನ್ನು ನೆನಪಿಸಿಕೊಂಡೆ. ಅತಿಶಕ್ತಿಯುತ ಬಾಣವನ್ನು ಬಿಲ್ಲಿಗೆ ಹೂಡಿದೆ. “ಸುಧನ್ವ ಮರಣವನು ನಿರ್ಣಯಿಸುವ ಬಾಣವಿದು” ಎಂದೆ ಅಸುರಾರಿಯಲ್ಲಿ. ಗೋವರ್ಧನ ಗಿರಿಯನ್ನೆತ್ತಿ ಗೋವುಗಳನ್ನು ಕಾಪಾಡಿ ಸಂಪಾದಿಸಿದ ಪುಣ್ಯವನ್ನು ಆ ಬಾಣಕ್ಕೆ ತುಂಬಿದ ಶ್ರೀಕೃಷ್ಣ. “ಈಗಲೇ ಅವನ ಶಿರವನ್ನು ಗುರಿಮಾಡಿ ಬಾಣ ಪ್ರಯೋಗಿಸು” ಎಂಬ ಸೂಚನೆ ಬಂತು ಕೃಷ್ಣನ ಕಡೆಯಿಂದ. ಬಾಣ ಬಿಟ್ಟೆ. ಅದೆಂತಹ ವೇಗದಲ್ಲಿ ಬಾಣ ಚಲಿಸುತ್ತಾ ಹೋಯಿತೋ ಅದೇ ವೇಗದಲ್ಲಿ ಅದು ತುಂಡಾಗಿ ಕೆಳಗೆ ಬಿತ್ತು. ಪ್ರತಿಬಾಣ ಪ್ರಯೋಗಿಸಿ ಗೆಲುವು ಪಡೆದಿದ್ದ ಸುಧನ್ವನ ಮುಖದಲ್ಲಿ ವೀರಭಾವದ ನಗುವಿತ್ತು.ಮೂರು ಬಾಣಗಳಲ್ಲಿ ಸುಧನ್ವನನ್ನು ಇನ್ನಿಲ್ಲವಾಗಿಸುತ್ತೇನೆ ಎಂದಿದ್ದವ ನಾನು. ಮೊದಲ ಬಾಣವದು ಇನ್ನಿಲ್ಲವಾಗಿತ್ತು. ಇನ್ನೆರಡು ಬಾಣಗಳಲ್ಲಿ ನಾನು ನನ್ನ ಪ್ರತಿಜ್ಞೆಯನ್ನು ಪೂರೈಸಬೇಕಿತ್ತು. ಅಮೋಘ ಶರವನ್ನು ತೆಗೆದೆ ಬತ್ತಳಿಕೆಯಿಂದ. ಹೆದೆಗೆ ಅದನ್ನು ಹೊಂದಿಸಿದೆ. ಆಗಲೇ ಶ್ರೀಕೃಷ್ಣ ಭೂಮಿಯನ್ನು ಕಾಯ್ದ ಪುಣ್ಯಫಲವನ್ನು ನನ್ನ ಆ ಶರದಲ್ಲಿ ತುಂಬಿದ. “ಕೃಷ್ಣ ಪರಮಾತ್ಮ, ನಿನ್ನ ಪುಣ್ಯವನ್ನು ಆ ಬಾಣದಲ್ಲಿ ತುಂಬಿರುವೆ. ಅದನ್ನು ಅರ್ಧಮಾರ್ಗದಲ್ಲಿಯೇ ಪತನಗೊಳಿಸದಿದ್ದರೆ ಪಾತಕಿಗೊದಗುವ ಹೀನಸ್ಥಿತಿ ನನಗೆ ಒದಗಲಿ” ಎಂದು ಪರಾಕ್ರಮದಿಂದ ಆರ್ಭಟಿಸಿದ ಸುಧನ್ವ. ಅವನ ಮಾತು ನಿಜವಾಯಿತು. ಅವನ ಸೇನೆಯಲ್ಲಿ ವಿಜಯದ ನಾದ ಮೊಳಗಿತು. ಗೆಲುವಿನ ಕೇಕೆ ಕೇಳಿಬಂತು.ನಿಷ್ಫಲಗೊಂಡ ಎರಡು ಬಾಣಗಳು ನನ್ನನ್ನು ಚುಚ್ಚತೊಡಗಿದವು. ಇನ್ನೊಂದೇ ಒಂದು ಬಾಣದಲ್ಲಿ ನಾನು ಸುಧನ್ವನ ಶಿರವನ್ನು ಕತ್ತರಿಸಬೇಕಿತ್ತು. ಕೃಷ್ಣ ಧೈರ್ಯ ತುಂಬಿದ. ‘ನನ್ನ ಶಕ್ತಿಯನ್ನೂ, ಯುದ್ಧ ಬದ್ಧತೆಯನ್ನೂ ನಿರ್ಧರಿಸುವ ಬಾಣವಿದು’ ಎಂದುಕೊಳ್ಳುತ್ತಲೇ ಬತ್ತಳಿಕೆಯಿಂದ ಶರವನ್ನು ತೆಗೆದೆ. ಈಗ ಶ್ರೀಕೃಷ್ಣ ಹಿಂದಿಗಿಂತಲೂ ಹೆಚ್ಚಿನ ಶಕ್ತಿಯನ್ನು ಆ ಬಾಣಕ್ಕೆ ತುಂಬುವ ಉಪಾಯ ಹೂಡಿದ. ಬ್ರಹ್ಮದೇವನನ್ನು ಆಹ್ವಾನಿಸಿ ಆ ಬಾಣದ ಒಂದು ತುದಿಯಲ್ಲಿ ಕೂರಿಸಿದ. ಇನ್ನೊಂದು ತುದಿಯಲ್ಲಿ ಶಿವ ಕುಳಿತುಕೊಳ್ಳುವಂತೆ ಮಾಡಿದ. ಬಾಣದ ಮಧ್ಯಭಾಗದಲ್ಲಿ ತಾನೇ ಕುಳಿತ ಶ್ರೀಕೃಷ್ಣ. ತ್ರಿಮೂರ್ತಿಗಳ ಅಸ್ತಿತ್ವದ ಸತ್ವವದು ದೊರಕಿತು ಆ ಬಾಣಕ್ಕೆ. ರಾಮಾವತಾರದಲ್ಲಿ ತಾನು ಸಂಪಾದಿಸಿದ ಪುಣ್ಯವನ್ನು ಆ ಬಾಣದಲ್ಲಿ ತುಂಬಿದ.ಕೃಷ್ಣನ ಪಾಂಚಜನ್ಯ ಮೊಳಗಿತು, ಕೋಟಿ ಕೋಟಿ ಸಿಡಿಲುಗಳು ಒಮ್ಮೆಯೇ ಸಿಡಿದಂತೆ. ಭೂಮಿಯೇ ಅಲ್ಲೋಲಕಲ್ಲೋಲವಾಯಿತು ಕೃಷ್ಣನೂದಿದ ರಣ ಶಂಖಧ್ವನಿಗೆ.ಆ ಕ್ಷಣವೇ ನನ್ನ ಕರ ಅರಳಿತು. ಶರ ಕೆರಳಿತು. ಶತ್ರುವಿನ ಶಿರವನ್ನು ಗುರಿಯಾಗಿರಿಸಿಕೊಂಡು ಉರಿಉರಿಯಿಂದ ಹೊರಟಿತದೋ ಘನಶರ!ಬಾಣದ ಭೀಕರತೆಯನ್ನು ಕಂಡು ಅಂಜಿದರು, ಅಳುಕಿದರು ಸುಧನ್ವನ ಸಕಲ ಸೈನಿಕರು. ಹಂಸಧ್ವಜಸುತನ ಮುಂಡವದು ರುಂಡದಿಂದ ಬೇರ್ಪಟ್ಟಿತು. ಕತ್ತರಿಸಲ್ಪಟ್ಟ ಶಿರ ಆಕಾಶಮಾರ್ಗದಲ್ಲಿ ಜಿಗಿದು, ಪರಪೀಡೆಯದು ತನ್ನದಲ್ಲ ಎಂಬ ಭಾವದಲ್ಲಿ ಬರುವ ಕಲೆಗಳಿಂದ ಕೂಡಿದ ಚಂದ್ರನಂತೆ ಬಂದುಬಿದ್ದಿತು ಕೃಷ್ಣನ ಪಾದಪದ್ಮಗಳಲ್ಲಿ. ಸಾವನ್ನಪ್ಪಿದ ಆ ಕ್ಷಣದಲ್ಲಿಯೂ ಸುಧನ್ವ ಶಿರವದು ಹರಿನಾಮಸ್ಮರಣೆಯನ್ನು ತೊರೆದಿರಲಿಲ್ಲ.ಸುಧನ್ವನ ತಲೆಯನ್ನು ಹಾಗೆಯೇ ಒಮ್ಮೆ ಎತ್ತಿಕೊಂಡ ಕೃಷ್ಣ ತನ್ನ ಮೂಗಿನ ಬಳಿಗೆ ಒಯ್ದು ಒಮ್ಮೆ ಆಘ್ರಾಣಿಸಿದ. “ನನ್ನ ಹೃದಯವನ್ನು ಗೆದ್ದ ಬಲ್ಮೆಗಾರ ನೀನು” ಎಂಬ ಗುಟ್ಟನ್ನು ಸುಧನ್ವನ ಕಿವಿಯಲ್ಲಿ ಕೃಷ್ಣ ಹೇಳಿದಂತೆ ತೋರಿತೆನಗೆ ಆ ದೃಶ್ಯ. ‘ಈ ವೀರ ಶಿರವದು ಸಂದಿತೆನಗೆ ಇಂದು’ ಎಂಬ ಕೃಷ್ಣಭಾವವೂ ಆ ನಡೆಯಲ್ಲಿ ಇದ್ದಂತೆ ತೋರಿತು.ಮಗನ ಸಾವನ್ನು ಸಹಿಸದಾದ ಹಂಸಧ್ವಜ ಬಗೆಬಗೆಯಲ್ಲಿ ಪ್ರಲಾಪಿಸಿದ. ಹೀಗಿದ್ದಾಗಲೇ ಸುಧನ್ವ ಸಹೋದರ ಎನಿಸಿಕೊಂಡ ಸುರಥ ತಮ್ಮವನ ಸಾವಿಗೆ ಸೇಡನ್ನು ತೀರಿಸಿಕೊಳ್ಳದಿರಲಾರೆ ಎಂಬ ಛಲವನ್ನು ಹೊತ್ತುನಿಂತಿದ್ದ. ಅವನೊಡನೆ ಹೋರಾಡದೆ ನಮ್ಮ ಗೆಲುವು ಪೂರ್ಣಗೊಳ್ಳದು ಎಂಬ ವಿಷಯ ನನಗೆ ಸ್ಪಷ್ಟವಾಯಿತು. ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಧಾರಾವಾಹಿ ಸಂಗಾತಿ-117 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಸುಮತಿಯ ಪರಿಸ್ಥಿತಿಯನ್ನು ಮಗಳಿಗೆ ಹೇಳಿದ ವೈದ್ಯರು ಫಿಸೀಷಿಯನ್ ಹಾಗೆ ಹೇಳಿದಾಗ ಬಹಳ ಮುಖ್ಯವಾದ ವಿಷಯವಿರಬೇಕೆಂದು ಮಗಳಿಗೆ ತಿಳಿಯಿತು… ಅದೇನೇ ಇದ್ದರೂ ನನಗೆ ಹೇಳಿ ಸರ್…. ನನ್ನ ಅಮ್ಮನಿಗೆ ಏನಾಗಿದೆ? ಎಂದು ಕೇಳಿದಾಗ, ವೈದ್ಯರು ಆ ಹುಡುಗಿಯ ಮುಖವನ್ನೇ ತದೇಕಚಿತ್ತವಾಗಿ ನೋಡುತ್ತಾ… ನಿನ್ನ ವಯಸ್ಸೆಷ್ಟು ಮಗು?… ನೀನು ಏನು ಓದುತ್ತಿರುವೆ? ಎಂದು ಕೇಳಿದರು.ವೈದ್ಯರ ಪ್ರಶ್ನೆಗೆ… ನನಗೀಗ ಹದಿನೆಂಟು ವರ್ಷ ವಯಸ್ಸು…. ನಾನು ಬಿ.ಎ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವೆ…. ಎಂದು ಹೇಳಿದಳು. ಆ ಹುಡುಗಿಯ ಮಾತನ್ನು ಆಲಿಸಿದ ವೈದ್ಯರು…. “ಮಗೂ ನಿನ್ನನ್ನು ನೋಡಿದರೆ ತಿಳುವಳಿಕೆ ಇರುವ ಹಾಗೂ ವಯಸ್ಸಿಗಿಂತ ಹೆಚ್ಚು ಪ್ರಬುದ್ಧತೆ ಹೊಂದಿರುವ ಹುಡುಗಿಯ ಹಾಗೆ ತೋರುತ್ತೀಯ… ನಾನು ಹೇಳುವ ವಿಷಯವು ಬಹಳ ಗಂಭೀರವಾದದ್ದು…. ಅದನ್ನು ನೀನು ಹೇಗೆ ತೆಗೆದುಕೊಳ್ಳುತ್ತೀಯ ಎನ್ನುವುದು ನನಗೆ ತಿಳಿಯದು…. ಆದರೂ ಹೇಳಲೇಬೇಕಾದ ಅನಿವಾರ್ಯತೆ ಇದೆ…. ನೀನು ಹೇಳಿದೆ ಮನೆಯಲ್ಲಿ ದೊಡ್ಡವರು ಯಾರು ಇಲ್ಲ ಎಂದು…. ಸುಮತಿಯ ಯೋಗ ಕ್ಷೇಮವನ್ನು ನೀನು ಮತ್ತು ನಿನ್ನ ತಂಗಿ ಈಗ ನೋಡಿಕೊಳ್ಳುತ್ತಿರುವಿರಿ ಎನ್ನುವುದು ನನಗೆ ಅರ್ಥವಾಯಿತು…. ನೋಡು ಮಗು… ನಿನ್ನ ತಾಯಿಯ ಸ್ಥಿತಿ ಸ್ವಲ್ಪ ಹೆಚ್ಚೇ ಗಂಭೀರವಾಗಿದೆ….. ಆಕೆಯ ಹೃದಯ, ಶ್ವಾಸಕೋಶ, ಯಕೃತ್ತು, ಮೂತ್ರಕೋಶ, ಹೇಳಬೇಕೆಂದರೆ ನಿನ್ನ ತಾಯಿಯ ಶರೀರದ ಅಂತರಿಕ ಅಂಗಗಳಲ್ಲಿ ಊತ ಕಾಣಿಸಿಕೊಂಡಿದೆ…. ಬಹುತೇಕ ಎಲ್ಲಾ ಆಂತರಿಕ ಅಂಗಗಳು ವೈಫಲ್ಯವಾಗಿವೆ…. ತೀವ್ರವಾದ ಸಕ್ಕರೆ ಕಾಯಿಲೆಯ ಪರಿಣಾಮ ಹಾಗೂ ರಕ್ತದ ಒತ್ತಡಕ್ಕೆ ಚಿಕಿತ್ಸೆ ಪಡೆಯದೆ ಇರುವ ಕಾರಣದಿಂದ ನಿನ್ನ ತಾಯಿಯು ಈ ಸ್ಥಿತಿಗೆ ತಲುಪಿದ್ದಾರೆ…. ಇನ್ನು ನಾವು ಯಾವುದೇ ಚಿಕಿತ್ಸೆ ಕೊಟ್ಟರೂ ಅದು ಫಲಕಾರಿಯಾಗದು…. ಇಲ್ಲಿ ಈ ತಾಲ್ಲೂಕು ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ಚಿಕಿತ್ಸೆ ದೊರಕಲಾರದು…. ಸ್ವಲ್ಪ ದಿನ ನಾವು ನಿನ್ನ ತಾಯಿಯ ಆರೈಕೆಯನ್ನು ಈ ಆಸ್ಪತ್ರೆಯಲ್ಲಿ ಮಾಡಬಹುದು…. ಹೆಚ್ಚಿನ ಚಿಕಿತ್ಸೆ ಬೇಕೆಂದರೆ ನೀನು ನಿನ್ನ ತಾಯಿಯನ್ನು ಬೆಂಗಳೂರಿನಲ್ಲಿರುವ ಕಿಡ್ನಿ ಫೌಂಡೇಶನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವಾರಕ್ಕೊಮ್ಮೆ ಡಯಾಲಿಸಿಸ್ ಮಾಡಿಸಿದರೆ ಇನ್ನೂ ಸ್ವಲ್ಪ ಕಾಲ ನಿನ್ನ ತಾಯಿ ಬದುಕುಳಿಯಬಹುದು…. ಈಕೆ ಇದೇ ಸ್ಥಿತಿಯಲ್ಲಿದ್ದರೆ ಇನ್ನಾರು ತಿಂಗಳಷ್ಟೇ ಜೀವಂತವಾಗಿ ಬದುಕಿರಲು ಸಾಧ್ಯ…. ಆದರೆ ಮೊದಲಿನಂತೆ ಲವಲವಿಕೆಯಿಂದ ಎದ್ದು ಓಡಾಡಲು ಅವರಿಂದ ಸಾಧ್ಯವಿಲ್ಲ…. ಹಾಸಿಗೆಯಲ್ಲಿಯೇ ದಿನ ಕಳೆಯಬೇಕಾದ ಪರಿಸ್ಥಿತಿ…. ಅವರಿಂದ ಶಿಕ್ಷಕ ವೃತ್ತಿಯನ್ನು ಮುಂದುವರಿಸಲು ಸಾಧ್ಯವಿಲ್ಲ…. ನೀನು ಮತ್ತು ನಿನ್ನ ತಂಗಿ ಸುಮತಿಯ ಆರೈಕೆಯನ್ನು ಮಾಡಬೇಕಾಗುತ್ತದೆ…. ದಿನೇ ದಿನೇ ಅವರ ಆರೋಗ್ಯ ಸ್ಥಿತಿಯು ಗಂಭೀರವಾಗುತ್ತಲೇ ಹೋಗುತ್ತದೆ…. ಯಾವುದೇ ಆಹಾರ ಪಥ್ಯದಿಂದಲೂ ಸುಮತಿಯ ಆರೋಗ್ಯ ಸುಧಾರಿಸುವುದಿಲ್ಲ…. ಆದರೂ ಅವರ ಆರೋಗ್ಯ ಸ್ಥಿತಿ ಇನ್ನೂ ಹದಗೆಡದಂತೆ ನೋಡಿಕೊಳ್ಳಲು ಪಥ್ಯದ ಆಹಾರವನ್ನು ಕೊಡುವುದು ಕೂಡ ಅನಿವಾರ್ಯ…. ನಾನು ಕೊಡುವ ವೈದ್ಯಕೀಯ ಚಿಕಿತ್ಸೆಯಿಂದ ಅವರ ಆರೋಗ್ಯ ಮೊದಲಿನಂತಾಗಲು ಸಾಧ್ಯವಿಲ್ಲ…. ಆದರೆ ತಾತ್ಕಾಲಿಕವಾಗಿ ಉಪಶಮನದ ಚಿಕಿತ್ಸೆಯನ್ನಷ್ಟೇ ನಾವು ಕೊಡಬಹುದು…. ನಿನ್ನ ತಾಯಿಯ ವಯಸ್ಸು ಕೂಡ ಬಹಳ ಚಿಕ್ಕದು…. ಕೇವಲ 54 ವರ್ಷವಷ್ಟೇ! …. ಜೀವನದಲ್ಲಿ ಬಹಳಷ್ಟು ನೋವುಗಳನ್ನು ಉಂಡವಳು, ಏಳುಬೀಳುಗಳನ್ನು ಕಂಡವಳು ನಿನ್ನ ಅಮ್ಮ…. ಬಹಳ ಮಾನಸಿಕ ಸ್ಥೈರ್ಯ ಉಳ್ಳವಳು ಕೂಡಾ…. ಆದರೆ ಈ ಸಕ್ಕರೆ ಕಾಯಿಲೆ ಅವಳನ್ನು ಬಹಳಷ್ಟು ಹೈರಾಣಾಗಿ ಮಾಡಿದ್ದು ಸುಳ್ಳಲ್ಲ…. ಇನ್ನೊಂದು ಮುಖ್ಯವಾದ ವಿಷಯವನ್ನು ನಿನಗೆ ಹೇಳಬೇಕಿದೆ ಮಗು…. ವಯಸ್ಸಿನಲ್ಲಿ ಬಹಳ ಚಿಕ್ಕವಳಾದ ನಿನಗೆ ಈ ವಿಷಯವನ್ನು ಹೇಗೆ ಹೇಳಬೇಕೆಂಬುದು ನನಗೆ ತಿಳಿಯುತ್ತಿಲ್ಲ…. ಆದರೆ ನಾನು ಹೇಳಲೇಬೇಕಾಗಿದೆ”…. ಎಂದು ಅವಳ ಮುಖವನ್ನೇ ಸೂಕ್ಷ್ಮವಾಗಿ ಗಮನಿಸುತ್ತಾ ವೈದ್ಯರು ನುಡಿದರು. ವೈದ್ಯರು ಹೇಳಿದ ಎಲ್ಲಾ ಸಂಗತಿಗಳನ್ನು ಕೇಳಿ ಈಗಾಗಲೇ ಆಘಾತಕ್ಕೆ ಒಳಗಾಗಿದ್ದ ಹುಡುಗಿ ಇನ್ನೂ ಏನು ಹೇಳುವರೋ ಎನ್ನುವ ಭಯ ಹಾಗೂ ಆತಂಕದಿಂದ ವೈದ್ಯರಡೆಗೆ ನೋಡಿದಳು. ಅವಳ ಆ ನೋಟವನ್ನು ಕಂಡು ವೈದ್ಯರ ಮನಸ್ಸು ಮರುಗಿತು. ಆದರೆ ಹೇಳದೆ ಬೇರೆ ಮಾರ್ಗವಿರಲಿಲ್ಲ….. “ಮಗೂ ನಿನ್ನ ಅಮ್ಮ ಮರಣ ಹೊಂದಿದ ಬಳಿಕ ಆಕೆಯ ಶವ ಶರೀರವನ್ನು ಹೆಚ್ಚು ಹೊತ್ತು ಇಟ್ಟುಕೊಳ್ಳುವಂತೆ ಇಲ್ಲ…. ಆಂತರಿಕ ಅಂಗಗಳ ವೈಫಲ್ಯದಿಂದಾಗಿ ಸುಮತಿಯ ಶರೀರದಲ್ಲಿ ದಿನೇ ದಿನೇ ನೀರು ತುಂಬಿಕೊಂಡು ಊತಕ್ಕೆ ಒಳಗಾಗುತ್ತದೆ…. ಕೆಲವೊಮ್ಮೆ ಆಕೆ ಬದುಕಿರುವಾಗಲೇ ಶರೀರದ ಕೆಲವು ಭಾಗಗಳು ಒಡೆದು ನೀರು ಜಿನುಗುವ ಸಾಧ್ಯತೆ ಇರುತ್ತದೆ…. ಅದನ್ನು ತಡೆಯಲು ಕೆಲವು ಮಾತ್ರೆಗಳನ್ನು ನಾನು ಬರೆದುಕೊಡುತ್ತೇನೆ…. ಆದರೆ ಮರಣ ಹೊಂದಿದ ಕೆಲವು ಗಂಟೆಗಳ ಬಳಿಕ ಶರೀರವು ಪೂರ್ತಿ ಊದಿಕೊಂಡು ಅಲ್ಲಲ್ಲಿ ಒಡೆಯುವ ಸಾಧ್ಯತೆಗಳು ಇರುತ್ತದೆ…. ಸೂಕ್ಷ್ಮಾಣುಗಳು ದೇಹದ ಒಳಗೆ ಸೇರಿಕೊಂಡು ದೇಹವು ಬೇಗ ಕೊಳೆಯಲು ಶುರುವಾಗುತ್ತದೆ…. ದುರ್ವಾಸನೆ ಬರುತ್ತದೆ… ಹಾಗಾಗಿ ಸಾಧ್ಯವಾದಷ್ಟು ಬೇಗ ಶವಸಂಸ್ಕಾರ ಮಾಡಬೇಕಾಗುತ್ತದೆ…. ಎಂದರು. ವೈದ್ಯರ ಮಾತನ್ನು ಕೇಳುತ್ತಾ ಕುಳಿತ ಹುಡುಗಿಯು ಕಣ್ಣಾಲಿಗಳು ತುಂಬಿ ಕೊಳಗಳಾದವು. ಗಂಟಲು ಬಿಗಿಯಿತು. ಕೇವಲ ಬಿಕ್ಕುಗಳಲ್ಲದೆ ಅವಳ ಬಾಯಿಂದ ಒಂದು ಪದವೂ ಆಚೆ ಬರಲಿಲ್ಲ. ಅಳುವನ್ನು ತಡೆದುಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಳು. ಅವಳನ್ನು ಕಂಡ ವೈದ್ಯರ ಮನಸ್ಸು ಕರಗಿತು. ಕುಳಿತಲ್ಲಿಂದ ಎದ್ದು ಬಂದು ಅವಳ ತಲೆ ನೇವರಿಸುತ್ತಾ…. ನಿನಗೆ ಯಾವ ರೀತಿಯಲ್ಲಿ ಹೇಗೆ ಸಮಾಧಾನ ಮಾಡಬೇಕು ಎಂದು ನನಗೆ ತಿಳಿಯುತ್ತಿಲ್ಲ ಮಗುವೇ…. ವಿಧಿ ಎನ್ನುವುದು ಬಹಳ ಕ್ರೂರ…. ಇಂತಹಾ ಚಿಕ್ಕ ವಯಸ್ಸಿಗೇ ಅದೆಷ್ಟು ಘೋರವಾದ ಸಂಗತಿಗಳನ್ನು ನೀನು ಕೇಳಬೇಕಾಗಿ ಬಂತು…. ಸಮಾಧಾನ ಮಾಡಿಕೋ…. ನೀನು ಈ ಸ್ಥಿತಿಯಲ್ಲಿ ಸುಮತಿಯ ಬಳಿಗೆ ಹೋದರೆ ಅವಳು ಅಧೀರಳಾಗುವಳು…. ಧೈರ್ಯ ತಂದುಕೋ…. ಈ ಜಟಿಲ ಪರಿಸ್ಥಿತಿಯನ್ನು ಹೇಗಿದ್ದರೂ ನೀನು ಎದುರಿಸಲೇ ಬೇಕಾಗಿದೆ…. ಏನು ಹೇಳಬೇಕೆಂದು ನನಗೆ ತಿಳಿಯುತ್ತಿಲ್ಲ ಮಗುವೇ”…. ಎಂದು ಆ ಹುಡುಗಿಯ ತಲೆ ಸವರುತ್ತಾ ಸಮಾಧಾನ ಮಾಡಿ…. “ಆದಷ್ಟು ಬೇಗ ನಿನ್ನ ತಾಯಿಯ ಸಂಬಂಧಿಕರಿಗೆ ವಿಷಯ ತಿಳಿಸು….. ಬರುವವರು ಯಾರಾದರೂ ಇದ್ದರೆ ಬಂದು ನೋಡಿಕೊಂಡು ಹೋಗಲಿ…. ಈಗ ಕೆಲವು ಔಷಧಿಗಳನ್ನು ಬರೆದುಕೊಡುತ್ತೇನೆ ಅದನ್ನು ಆದಷ್ಟು ಬೇಗ ತಂದು ವಾರ್ಡಿನ ನರ್ಸಿಗೆ ಕೊಡು”…ಎಂದು ಹೇಳಿ, ಸುಮತಿಗೆ ಕೊಡಬೇಕಾದ ಒಂದಿಷ್ಟು ಔಷಧಿಗಳ ಹೆಸರುಗಳನ್ನು ಚೀಟಿಯಲ್ಲಿ ಬರೆದು ಅವಳ ಕೈಗಿತ್ತರು. ಆ ಹುಡುಗಿ ಯಾಂತ್ರಿಕವಾಗಿ ಕುಳಿತಲ್ಲಿಂದ ಎದ್ದು ವೈದ್ಯರು ಕೊಟ್ಟ ಚೀಟಿಯನ್ನು ಪಡೆದುಕೊಂಡು ಅವರಿಗೆ ನಮಸ್ಕರಿಸಿ, ಕೊಠಡಿಯಿಂದ ಆಚೆ ಬಂದಳು. ತನ್ನ ಸುತ್ತಲಿರುವ ಪ್ರತಿಯೊಂದು ವಸ್ತುಗಳು ಅಪರಿಚಿತವಾಗಿ ಅವಳಿಗೆ ಕಂಡಿತು. ಸ್ವಲ್ಪ ಹೊತ್ತು ಅಲ್ಲಿಯೇ ಇದ್ದ ಬೆಂಚಿನ ಮೇಲೆ ಕುಳಿತುಕೊಂಡು ತನ್ನನ್ನು ತಾನು ಸಮಾಧಾನ ಪಡಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡಿದಳು.
ಎಮ್ಮಾರ್ಕೆ ಗಜಲ್
ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ನಾ ನಿನ್ನ ಹಿಂಬಾಲಿಸುತಿರಲು ಹಿಂತಿರುಗಿ ನೋಡಬಾರದೇನೀ ನನ್ನನೇ ಆವರಿಸುತಿರಲು ಒಂಟಿತನವ ದೂಡಬಾರದೇ ಮನೆಯ ದೀಪ ಬೆಳಗುವವಳೇ ಮನದ ತಾಪ ಕಳೆವವಳೇಮನಸೊಳು ಮನೆಯ ಮಾಡಿ ಕನಸಿನಲ್ಲೂ ಕಾಡಬಾರದೇ ಬಾರೆಂದು ಕೂಗುವವಳೇ ಬಾಳ ಜೋಕಾಲಿ ತೂಗುವವಳೇರಾಗ ದ್ವೇಷಗಳ ಮರೆಸುವ ಹಾಡೊಂದನು ಹಾಡಬಾರದೇ ಕಷ್ಟಸುಖದಲಿ ಕೈ ಹಿಡಿವವಳೇ ಜೊತೆಯಾಗಿ ದುಡಿವವಳೇನದಿ ಸಾಗರ ಸೇರುವಂತೆಯೇ ಬಂದೆನ್ನನು ಕೂಡಬಾರದೇ ಐರಾಣಿಯ ಹೊರುವವಳೇ ರಾಣಿಯಾಗಿ ಮೆರೆಯುವಳೇಕಡಿತನ ಕುಂಬಾರನ ಜತೆಗಿರುವ ಆಣೆಯ ಮಾಡಬಾರದೇ ಎಮ್ಮಾರ್ಕೆ
ನಾಗರಾಜ ಬಿ ನಾಯ್ಕ “ರೆಪ್ಪೆಯಾಚೆಯ ಚಿತ್ರಗಳು…….”
ಕಾವ್ಯ ಸಂಗಾತಿ ನಾಗರಾಜ ಬಿ ನಾಯ್ಕ “ರೆಪ್ಪೆಯಾಚೆಯ ಚಿತ್ರಗಳು…….” ಎರಡು ಕಣ್ಣುಗಳಕಾಂತಿಯಲ್ಲಿ ಹರಡಿದಚಿತ್ರಗಳ ಹುಡುಕುತ್ತಾಸಾಗಿದರೆ ಕಾಣದ ಮಾತಿನ ಮೌನಓರೆನೋಟದ ಬಿಗುಮಾನರೆಪ್ಪೆಯಾಚೆಗಿನ ಕುಡಿನೋಟದೂರದುತ್ತರದ ಮಾತುಗಳಲ್ಲಿ ಅವಿತ ಒಂದು ಮಾತಿನ ಕಥೆಸಾಲುಗಳಲ್ಲಿ ಹುಡುಕಾಡಿಕೊನೆಯಲ್ಲಿ ಸಿಕ್ಕ ಒಂಟಿ ಪದಮುಖದೊಳಗೆ ಒಲವಿನಒರತೆಯ ಚೆಲ್ಲಿ ನಗುವಾದಮೊಗದ ನಲಿವಿನ ಇರುಳುಕತ್ತಲೆಗೆ ಎಸೆದಬೆಳಕಿನ ಹೊಸ ಸಾಲಿನದೀಪದ ಹಣತೆಯ ಸಮಯದಿಟವಾದ ಹಕ್ಕಿ ಗೂಡಿನಸಂವೇದನೆ ಮತ್ತು ಹೊಸತನಎಲ್ಲವೂ ಅಂಕು ಡೊಂಕುದಾರಿಯ ನಿರಂತರಚಲನೆಯ ಪ್ರಯತ್ನರೆಪ್ಪೆಯೊಗಳಗಿನ ಗತದನಡುವೆ ಕಾಣದೇ ಮೌನವಾಗಿಉಳಿವ ಸಣ್ಣ ಇರುವೆಪಯಣದ ಪರಿಚಯಪ್ರಶ್ನೆ ಪರಿವೀಕ್ಷಣೆಯ ಆಚೆದೃಢವಾಗಿ ನಿಂತ ಪುಟ್ಟ ದೋಣಿರೆಪ್ಪೆಯ ಒಳಗೆ ಕುಳಿತಚಿತ್ರಗಳಲ್ಲಿ ಕಾಣದ ಗೆರೆಗಳಕಾಣುವ ಚಿತ್ರಗಳು ಸುಮ್ಮನೇನಮ್ಮದು ಎಂಬಂತೆ……… ನಾಗರಾಜ ಬಿ ನಾಯ್ಕ.
ನಾಗರಾಜ ಬಿ ನಾಯ್ಕ “ರೆಪ್ಪೆಯಾಚೆಯ ಚಿತ್ರಗಳು…….” Read Post »
ರಾಧಾ ಹನುಮಂತಪ್ಪ ಟಿ ಹರಿಹರ ಅವರ ಕವಿತೆ “ಎ.ಐ. ತಮ್ಮಾ”
ಕಾವ್ಯ ಸಂಗಾತಿ ರಾಧಾ ಹನುಮಂತಪ್ಪ ಟಿ ಹರಿಹರ “ಎ.ಐ. ತಮ್ಮಾ” *ಎಐ ತಮ್ಮ ಎಐ ತಮ್ಮ ನೀನು ಎಲ್ಲಿಂದ ಬಂದೆ ಎಲ್ಲಿಂದ ಬಂದೆ ಹೇಳು ನಿನಗಿಷ್ಟು ಮಾಹಿತಿ ಎಲ್ಲಿಂದ ಬಂತು ಹೇಳು* *ನಿಮಿಷ ಸೆಕೆಂಡ್ ಗಳಲ್ಲಿ ನಮ್ಮಯ ಪ್ರಶ್ನೆಗೆ ಉತ್ತರವ ಹೇಗೆ ಹುಡುಕುವೆಯಾ ತಮ್ಮ ಹೇಗೆ ಹುಡುಕುವೆಯಾ ತಮ್ಮ ಹೇಳು* *ನೆಮ್ಮದಿ ಶಾಂತಿ ಬೇಕು ಎಂದರೂ ಅದಕ್ಕೆ ಪ್ರತಿಯಾಗಿ ಉತ್ತರವ ಕೊಡುವ ನಿನ್ನ ಚಾಣಾಕ್ಷ ಬುದ್ಧಿಗೆ ನಾನು ಸೋತೆನು ತಮ್ಮ ನಾನು ಸೋತೆನು ತಮ್ಮ ನೀ ಎಲ್ಲಿರುವೆ ಹೇಳು* *ಎಲ್ಲ ಕ್ಷೇತ್ರಗಳಲ್ಲೂ ನಿನ್ನದೇ ಹಾವಳಿ ತಮ್ಮ ಈ ಮನುಷ್ಯನೇ ಮಾಡಿದನಂತೆ ನಿನ್ನನು ಇದು ನಿಜವೇ ತಮ್ಮ ಇದು ನಿಜವೇ ತಮ್ಮ ನೀನು ಹೇಳು* *ಎಐ ತಮ್ಮ ನೀನು ಎಲ್ಲಿಂದ ಬಂದೆ ನಿನ್ನಿಂದ ಸಕಲ ಜೀವಿಗಳ ಕುಲಕ್ಕೆ ತೊಂದರೆ ಯಾಗದು ಎಂದು ಹೇಳು ತಮ್ಮ ತೊಂದರೆ ಯಾಗದು ಎಂದು ಹೇಳು ಎಐ ತಮ್ಮ ಹೇಳು* ರಾಧಾ ಹನುಮಂತಪ್ಪ ಟಿ ಹರಿಹರ
ರಾಧಾ ಹನುಮಂತಪ್ಪ ಟಿ ಹರಿಹರ ಅವರ ಕವಿತೆ “ಎ.ಐ. ತಮ್ಮಾ” Read Post »
ಜಿ.ಎಸ್.ಕಲಾವತಿಮಧುಸೂದನ ಅವರ ಕವಿತೆ “ಸಮಾಧಾನ ಸಮಾಧಾನ ಸಮಾಧಾನ”
ಕಾವ್ಯ ಸಂಗಾತಿ ಜಿ.ಎಸ್.ಕಲಾವತಿಮಧುಸೂದನ ಸಮಾಧಾನ ಸಮಾಧಾನ ಸಮಾಧಾನ ಸದಾ ನಿನದೇ ಧ್ಯಾನ..ಎಷ್ಟೆಂದು ಬೇಡಲಿ ನಿನ್ನ ದಾನ..! ಬೇಡಿದಷ್ಟು ನೀಡುತಲೇ ಕಾಯಲು ಹವಣಿಸುವುದೇ ನಿನ್ನ ಸದ್ಗುಣ. ಎಷ್ಟೆಂದು ಪಾಡಿ ಪೊಗಳಲಿ ನಿನ್ನ ಗುಣಗಾನ.. ಗಾನಯಾನದಲಿ ತೇಲುವಲಿ ಯಾರಿಲ್ಲವು ನಿನ್ನ ಸಮಾನ..ಅಗುಳಗುಳ ನುಂಗಲು ಬೇಕು ದಿನದಿನವು ನಿನ್ನ ಅನುಸಂಧಾನ. ಅಣುವಣುವಿಗೂ ಚಣಚಣವು ದಿನದಿನವು ಜಲಜಭವದ ಅವನಿಯೊಳು ಮುಳುಗಿರಲು ಕರಪಿಡಿದೆತ್ತುವೆ ಸಾವಧಾನ.. ನೀನಿರದೇ ಇರಲು ಸಾಧನೆಗೆ ಎಲ್ಲೆಡೆಯು ಮಾನ…ಹರಣ..! ಕುಕೃತ್ಯ ಕುಟಿಲಗಳ ನಿವಾರಿಸಲು ಪ್ರೇರಣ..ನವನವೀನ ನಿತ್ಯ ನೂತನಕೆ ಬೇಕು ಸದಾ ನಿನ್ನ ಕರುಣ..! ನಿನ್ನ ಮರೆತು ನಡೆವ ಪ್ರತಿ ಚಣವು ಪ್ರತಿ ಕಣವು ಜೀವನ್ಮರಣ.. ಬದುಕೇ ಅಶಾಂತಿಯ ರಣಾಂಗಣ…!!ನಿನ್ನ ಮರೆತು ನಡೆಯದಂತೆಬೇಡುವಗೆ ಮಾಣಿಸು ಸದಾ ನಿನ್ನ ಸ್ಮರಣ.. ಸುಂದರ ಸುಮಧುರ ಶಾಂತಿ ನೆಮ್ಮದಿ ಪ್ರೀತಿ ವಾತ್ಸಲ್ಯಗಳ ಬಾಂಧವ್ಯದ ಬದುಕುಗಳ ಸಂಬಾಳಿಸಿ ಉಳಿಸಿ ಬೆಳೆಸಲು ನೀನೇ ಸಾದನ..ದಿನದಿನವೂ ಜೊತೆ ಸಾಗಿ ಹರಸಿ ಹರಿಸು ನಿನ್ನ ಕರುಣ.. ಕಣಕಣದಲಿ ನೆಲೆಯಾಗಲಿ ಶಾಂತಿಯ ಸದನ..! ಜಿ.ಎಸ್.ಕಲಾವತಿ ಮಧುಸೂದನ
ಜಿ.ಎಸ್.ಕಲಾವತಿಮಧುಸೂದನ ಅವರ ಕವಿತೆ “ಸಮಾಧಾನ ಸಮಾಧಾನ ಸಮಾಧಾನ” Read Post »
ಸರಸ್ವತಿ ಕೆ ನಾಗರಾಜ್ ಅವರ ಕವಿತೆ “ಖಾಲಿ ಹಾಳೆಯ ಮೇಲೊಂದು ಕನಸು”
ಕಾವ್ಯ ಸಂಗಾತಿ ಸರಸ್ವತಿ ಕೆ ನಾಗರಾಜ್ “ಖಾಲಿ ಹಾಳೆಯ ಮೇಲೊಂದು ಕನಸು” ಒಮ್ಮೊಮ್ಮೆ ನಾ ಬರೆಯಲು ಕುಳಿತಾಗ,ಪೆನ್ನಿಗಿಂತ ಮೊದಲು ಮೌನವೇ ಹರಿದುಬರುತ್ತದೆ.ಹಾಳೆಯ ಮೇಲಿನ ಖಾಲಿ ಜಾಗದಲ್ಲಿ,ಮನದ ಮಾತುಗಳು ನೆರಳಾಗಿ ನಿಂತುಕೊಳ್ಳುತ್ತವೆ. ಹೇಳದೆ ಉಳಿದ ಕನಸುಗಳು,ಹಾಳೆಯ ಮೇಲೆ ಉಸಿರಾಡುತ್ತವೆ.ಕಳೆದುಹೋದ ಕ್ಷಣಗಳ ನೆರಳು,ಮತ್ತೆ ನೆನಪಾಗಿ ಕುಳಿತುಕೊಳ್ಳುತ್ತದೆ. ಒಮ್ಮೊಮ್ಮೆ ನಾ ಬರೆಯಲು ಕುಳಿತಾಗ,ನಾನು ಕವಿತೆ ಬರೆಯುವುದಿಲ್ಲ…ನನ್ನೊಳಗಿನ ಒಡೆದ ಮೌನವೇ,ತನ್ನ ಕಥೆಯನ್ನು ತಾನೇ ಹೇಳುತ್ತದೆ. ನಾ ಬರೆಯಲು ಕುಳಿತಾಗ,ಹಾಳೆಯೇ ಕನ್ನಡಿ ಆಗಿ ನಿಲ್ಲುತ್ತದೆ.ನನ್ನೊಳಗಿನ ನಿಜ ಮುಖವನ್ನು,ನಿಶ್ಶಬ್ದವಾಗಿ ತೋರಿಸಿಬಿಡುತ್ತದೆ. ಬರೆಯುತ್ತಾ ಬರೆಯುತ್ತಾ ಕೊನೆಯಲ್ಲಿ,ನಾನು ಕವಿತೆ ಮುಗಿಸುವುದಿಲ್ಲ…ನನ್ನೊಳಗಿನ ಬದುಕೇ ಮತ್ತೆ,ಹೊಸ ನಾನಾಗಿ ಆರಂಭವಾಗುತ್ತದೆ. ಬರೆಯುವ ಪ್ರತಿಯೊಂದು ಸಾಲಿನೊಳಗೆ,ಮತ್ತೆ ಹುಟ್ಟುವ ನಾನೇ ಅಡಗಿದ್ದೇನೆ.ನನ್ನನ್ನೆ ನಾ ಮತ್ತೆ ಮತ್ತೆ ಹುಡುಕುತ್ತೇನೆ. ಸರಸ್ವತಿ ಕೆ ನಾಗರಾಜ್.
ಸರಸ್ವತಿ ಕೆ ನಾಗರಾಜ್ ಅವರ ಕವಿತೆ “ಖಾಲಿ ಹಾಳೆಯ ಮೇಲೊಂದು ಕನಸು” Read Post »
ಶುಭಲಕ್ಷ್ಮಿ ಆರ್ ನಾಯಕ ಅವರ ಕವಿತೆ”ಏನಿದು ಯುದ್ದ?
ಕಾವ್ಯ ಸಂಗಾತಿ ಶುಭಲಕ್ಷ್ಮಿ ಆರ್ ನಾಯಕ “ಏನಿದು ಯುದ್ದ? ಏನಿದು ಯುದ್ದ ಎಲ್ಲಡೆ ನಾಶಸುಡುತಲಿ ಬಂದಿದೆ ಜಗವನ್ನು//ಪ//ಬೇಕಿದೆ ಶಾಂತಿಯ ಹರಡುವ ಹಣತೆಯುತೊಡೆಯಲು ಕವಿದಿಹ ತಮವನ್ನು //ಅ.ಪ// ಉಗುಳುತ ಕೆಂಡವ ಕಾರುತ ದ್ವೇಷವದಹಿಸಿದೆ ಬುವಿಯನು ಮದದಲ್ಲಿನಾನು ನನ್ನದು ಎಂಬುವ ಸ್ವಾರ್ಥವುಉರಿಸಿದೆ ಮತ್ಸರ ಸೊಕ್ಕಿನಲಿ//ಪ// ಪ್ರಕೃತಿ ನಾಶದ ಅರಿವೇ ಇರದೆನಡೆದಿದೆ ಮನುಜನ ಕಾದಾಟಗಾಳಿಯು ತುಂಬಿದ ಬಲೂನಿನ ತೆರದಲಿನಡೆದಿದೆ ಇವನ ಹಾರಾಟ// ಸುಡುವುದೆ ಸಾಧನೆ ಎಂಬುವ ಮನಸಲಿಎಲ್ಲವ ದಹಿಸುತ ಸಾಗಿಹರುಧ್ವಂಸವ ಮಾಡಿ ಬೀಗುತ ಸೊಕ್ಕಲಿತಾವೇ ಉತ್ತಮರು ಎನ್ನುವರು//ಪ// ಯುದ್ಧದ ದಾಹಕೆ ಸಂಕುಲವೆಲ್ಲರೋಧಿಸಿ ಪ್ರಾಣವ ಬಿಟ್ಟಿಹುದುಸುಂದರ ಲೋಕಕೆ ಎಂದೂ ಭರಿಸದನಷ್ಟವೆ ಇಂದಿಗೆ ಆಗಿಹುದು// ಯುದ್ಧವ ನಿಲ್ಲಿಸಿ ಶಾಂತಿಯ ಬದುಕನುಸಾಗಿರಿ ಜಗದಲಿ ಒಲವಿನಲಿಶಾಂತಿಗೆ ದೊರೆಯುವ ಮನ್ನಣೆ ಇಳೆಯಲಿಎಲ್ಲಿಯೂ ಇಲ್ಲ ಅರಿವಿರಲಿ// ಶುಭಲಕ್ಷ್ಮಿ ಆರ್ ನಾಯಕ
ಶುಭಲಕ್ಷ್ಮಿ ಆರ್ ನಾಯಕ ಅವರ ಕವಿತೆ”ಏನಿದು ಯುದ್ದ? Read Post »
ಧಾರಾವಾಹಿ ಸಂಗಾತಿ-17 ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ಸಲ್ಲಿಸಿದ ಮಹಾನ್ ಚೇತನ ಸವಿತಾ ದೇಶಮುಖ ರಜಾಕರರ ಹಾವಳಿಯಿಂದ ಮನೆಬಿಟ್ಟು ಓಡಿಬಂದ ನಿರಾಶ್ರಿತರ ದುಃಖವ ನೋಡಿ.,.., ತಾಯಿಯವರ ಹೃದಯದಲ್ಲಿ ಮೂಡಿದ ಕರುಣೆ.. ತಾಯಿತನದ ಕರೆಯಾಗಿ ಮೂಡಿದ ತ್ರಿಪದಿ…. *ಬಡ ಮಕ್ಕಳಿಗೆ ಹಾಲು|ತಾಯಿಗೆ ಸೀರೆಒಡಲ ತುಂಬ ಅನ್ನ ನೀಡುತ-ರೋಗಗಳಓಡಿಸ ಬೇಕಯ್ಯಾ ಸಿದ್ದೇಶ|| ಈ ಕವನದಲ್ಲಿ ಹಾಲಿಲ್ಲದೆ ಅಳುವ ಮಕ್ಕಳನ್ನು ನೋಡಿ ಅವರ ಮನಸು ಕರಗುತ್ತದೆ.ಬಟ್ಟೆಯಿಲ್ಲದೆ ನಾಚಿಕೆಪಡುವ ತಾಯಂದಿರ ನೋವ ಕಂಡು ಕಳವಳ ಗೊಂಡರು.ಹಸಿವಿನಿಂದ ಕಂಗೆಟ್ಟ ಜನರಿಗೆ ಅನ್ನ ಕೊಡಬೇಕೆಂಬ ಹಂಬಲ……“ಸೀರೆ ಒಡಲ ತುಂಬ” …. ತಾಯಂದಿರ ಗೌರವ, ಮಾನವನ್ನು ಕಾಪಾಡುವ ಕಾಳಜಿ.“ಅನ್ನ ನೀಡುತ” “ರೋಗಗಳ ಓಡಿಸಬೇಕಯ್ಯಾ” ಆರೋಗ್ಯ ಮತ್ತು ಸುರಕ್ಷತೆ ಕೂಡ ಅಗತ್ಯವೆಂಬ ಅರಿವು.ಕೊನೆಯಲ್ಲಿ “ಸಿದ್ದೇಶ” ಎಂದು ಕರೆಯುವ ತಾಯಿಯವರು, ತಮ್ಮ ಕರ್ತವ್ಯವನ್ನು ದೈವಿಕ ಶಕ್ತಿಗೆ ಅರ್ಪಿಸುತ್ತಿದ್ದಾರೆ. ಇದು ಅವರ ಭಕ್ತಿ, ವಿಶ್ವಾಸ ಮತ್ತು ಮಾನವೀಯತೆಯ ಸಂಕಲನ. ಈ ಕವನದ ಹಿನ್ನಲೆಯಲ್ಲಿ ಇರುವ ದೃಶ್ಯ ತುಂಬ ಹೃದಯವಿದ್ರಾವಕ….!!!ರಜಾಕರರ ಹಿಂಸೆಯಿಂದ ಓಡಿಬಂದ ಜನರು… ಭಯ, ಹಸಿವು, ನಿರಾಶ್ರಿತ ಜೀವನಕ್ಕೆ ತಾಯಿಯವರಂತಹ ಮಹಾನ್ ಹೃದಯಿ ಆಶ್ರಯ, ಆಹಾರ ಮತ್ತು ಆಶೆಯನ್ನು ನೀಡಿದರು. *ಸಿದ್ದನ ಛತ್ತರಕ್ಕ ಬೆಂದು ಬಂದ ಮಕ್ಕಳಎದ್ದು ಕಂಣ್ಣೀರ ಒರೆಸುವ ,ಭಾಗ್ಯವಸಿದ್ದ ನನಗೆ ನೀಡಿ ದುಡಿಸಿದಿ* ತಾಯಿಯವರಲಿದ್ದ ದಯೆ, ಕರುಣೆ ಮತ್ತು ಸೇವಾಭಾವ ತುಂಬ ಸ್ಪಷ್ಟವಾಗಿ ಕಾಣಿಸುತ್ತದೆ.ನಿಜಾಮನ ದಬ್ಬಾಳಿಕೆಯಿಂದ ಸಂಕಷ್ಟಕ್ಕೊಳಗಾದ ನಿರಾಶ್ರಿತರು ತಮ್ಮ ಊರುಗಳನ್ನು ಬಿಟ್ಟು, ಕಣ್ಣೀರನ್ನು ಹೊತ್ತುಕೊಂಡು ಸೊಲ್ಲಾಪುರಕ್ಕೆ ಬಂದಾಗ, ಅವರ ಪರಿಸ್ಥಿತಿ ತುಂಬ ದಯನೀಯವಾಗಿತ್ತು. ಮನೆ ಇಲ್ಲ, ಊರು ಇಲ್ಲ, ಬದುಕಿನ ಭರವಸೆ ಇಲ್ಲ….!! “ಬೆಂದು ಬಂದ ಮಕ್ಕಳ” ಎನ್ನುವ ಪದ ಬಹಳ ಗಂಭೀರ. ಇದು ಅವರ ನೋವನ್ನು ತಾಯಿಯವರು ಎಷ್ಟು ಆಳವಾಗಿ ಅನುಭವಿಸಿದ್ದಾರೆ ಎಂಬುದನ್ನು ತೋರಿಸುತ್ತದೆ. ತಾಯಿಗೆ ಮಕ್ಕಳಂತೆ ಅವರು…..“ಎದ್ದು ಕಣ್ಣೀರ ಒರೆಸುವ ಭಾಗ್ಯ” — ಇಲ್ಲಿ ತಾಯಿಯವರು ಸೇವೆಯನ್ನು ಕರ್ತವ್ಯವಾಗಿ ಮಾತ್ರ ನೋಡುತ್ತಿಲ್ಲ. ಅದನ್ನು “ಭಾಗ್ಯ” ಎಂದುಕೊಂಡಿದ್ದಾರೆ. “ಸಿದ್ದ ನನಗೆ ನೀಡಿ ದುಡಿಸಿದಿ” ದೇವರು ನನಗೆ ಈ ಕೆಲಸ ಕೊಟ್ಟಿದ್ದಾನೆ, ಈ ಜನರ ಸೇವೆ ಮಾಡುವ ಅವಕಾಶ ನೀಡಿದ್ದಾನೆ ಎಂದು ತಾಯಿಯವರು ಕೃತಜ್ಞತೆಯಿಂದ ಹೇಳುತ್ತಾರ. ತಾಯಿಯವರಲ್ಲಿ ಇರುವ ಮಾನವೀಯತೆ ಮತ್ತು ದೈವಭಕ್ತಿ ತೊರುವದು. ಅವರ ಸೇವೆಯನ್ನು ತಮ್ಮ ಕರ್ತವ್ಯ ತಮ್ಮ ಧರ್ಮದಂತೆ ಸ್ವೀಕರಿಸಿದ್ದು ಇಲ್ಲಿ ಗೋಚರಿಸುತ್ತದೆ. ಆಗಿನ ಕಾಲದಲ್ಲಿಶ್ರೀ ಚಂಡರಕಿ (ಬೆನಕೊಪ್ಪ) ಉರ್ದು ಭಾಷೆಯ ಕವಿಯೊಬ್ಬನು ವೀರಗಾಸೆ ಕುಣಿತದಲ್ಲಿ ಪ್ರಸಿದ್ಧರಾದವರು. ಸೊಲ್ಲಾಪುರಕ್ಕೆ ಬಂದ ನಿರಾಶ್ರಿತರಿಗೆ ಆಶ್ರಿತರಾಗಿ ನಿಂತ ತಾಯಿಯವರ ಬಗ್ಗೆ ಉರ್ದುನಲ್ಲಿ ಕವಿತೆ ಬರ್ತಾನೆ ಅದನ್ನು ಕನ್ನಡಕ್ಕೆ ತರ್ಜುಮೆ ಮಾಡಿದವರು ಡಾ. ಶಂಕರ. ಮೂಗಿ(ನನ್ನ ತಂದೆ)*ತಾಯಿ ನಿನಗೆ ಸಲಾಮು ನಿನಗೆ ಸಲಾಮು * ಅಟ್ಟಿ ಜಡಿಸಿದ ಕಾಸೀಮ ಗಜನಿಕಟ್ಟಿಕೊಂಡು ರಜಾಕಾರರ ದಂಡುಓಡಿ ಬಂದೆವು ನಾವಂದುತೋಳ ಕಂಡ ಕುರಿಯ ಹಿಂಡು ಉಟ್ಟಿದ ಸೀರೆ ತೊಟ್ಟಿದ್ದವಲ್ಲಬೆನ್ನು ಬಿರಿವ ಬಿಸಿಲಿನಲ್ಲಿಸೊನ್ನಲಿಗೆ ಭೂಮಿಗೆ ಬಂದುನಿಂದೆವು ಸಿದ್ದನ ಛತ್ರದಲ್ಲಿ….., ಅಂತ ತಾಯಿಯವರ ಬಗ್ಗೆ ಬರಿತಾನೆ…… ಸೊಲ್ಲಾಪುರ ರೈಲ್ವೆ ನಿಲ್ದಾಣಕ್ಕೆ ಒಲಸಿ ಬಂದ ಜನರ ಜಾತಿಭೇದ ಲೆಕ್ಕಿಸದೆ ಜಯದೇವಿ ತಾಯಿಯವರು ವಸತಿ ವ್ಯವಸ್ಥೆ ,ಆಹಾರ ಸೌಲಭ್ಯ ,ಮೂಲ ಸೌಕರ್ಯಗಳ ವ್ಯವಸ್ಥೆಯನ್ನು ಸಿದ್ಧ ಮಾಡಿದರು. ಇದರಿಂದ ಸ್ಥಳೀಯ ಸಂಘ-ಸಂಸ್ಥೆಗಳು ಅದರಲ್ಲೂ ಮಹಿಳಾ ಜ್ಞಾನ ಮಂದಿರ ,ಶ್ರಾವಿಕಾಶ್ರಮ, ಸರಸ್ವತಿ ಸದನಗಳ ಕಾರ್ಯಕರ್ತರು ಸೇರಿ ನಿರಾಶ್ರಿತರಿಗೆ ಊಟದ ಪಟ್ಟಣಗಳನ್ನು, ನೀರು, ಹಾಲು,. ನಿತ್ಯ ಉಪಯೋಗವಾಗುವ ವಸ್ತುಗಳನ್ನು ವಿತರಿಸಲಾರಂಭಿಸಿದರು .ಇಡೀ ಸೊಲ್ಲಾಪುರದ ಜನತೆ ಅವರ ಸಹಾಯಕ್ಕೆ ನಿಂತರು.ಇಲ್ಲಿ ವಾರದ ಬಾಬಾ ಸಾಹೇಬರು, ಕಾಡಾದಿ ನಾಗಪ್ಪನವರು ,ಜಯದೇವಿ ತಾಯಿಯವರು ನಿರಾಶ್ರಿತರಿಗೆ ಆಶ್ರಯ ಕೊಟ್ಟರು. ಹಾಗೂ ಭಾಲ್ಕಿ ಪಟ್ಟ ದೇವರನ್ನು ಕಂಡು ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ನಿರಾಶ್ರಿತ ಮಕ್ಕಳ ಜೊತೆ ಎಲ್ಲರನ್ನೂ ನೋಡಿಕೊಳ್ಳುವಂತೆ ಭರವಸೆ ಕೊಟ್ಟು ವಸತಿ ವ್ಯವಸ್ಥೆಯನ್ನು ಮಾಡಿದರು. *ಹೊಲದಲ್ಲಿ ಮನೆ ಕಟ್ಟಿಕೊಟ್ಟೀರಿಕೊಯ್ದಿರಿ ನಿಂತ ಫಸಲುಆ ವರುಷ ನಿಮಗಾಗಲಿಲ್ಲಬೆಳೆಯಲ್ಲಿ ಏನು ಅಸಲು ಕೂಸು ಕಂಡಿರಲಿಲ್ಲ ನೆತ್ತಿಗೆಣ್ಣೆಹೊಟ್ಟೆಗಿರಲಿಲ್ಲ ಹಾಲು ತೊಟ್ಟುಹೊದಿಕೆ ಹಾಸಿ, ಹಾಸು ಇರಲಿಲ್ಲತಂದು ಒಗಿಸಿದಿರಿ ಚಾದರದ ಕಟ್ಟು* ತಾಯಿಯವರು ತಮ್ಮ ನಲವತ್ತು ಎಕರೆ ಭೂಮಿಯಲ್ಲಿ ಬೆಳೆದು ನಿಂತ ಬೆಳೆಯನ್ನು ತೆಗೆಸಿ…ಸೆಡ್ ಹಾಕಿ ನಿರಾಶ್ರಿತರಿಗೆ ಇರಲು ಹೊಸ ವೆವ್ಯಸ್ತೆಯನ್ನು ಮಾಡಿದರು. ತಮ್ಮ ಮನೆಯಾದ ಜೈನಿಕೇತನದಿಂದಲೇ ನಿರಾಶ್ರಿತ ಜನರಿಗೆ ಬಟ್ಟೆಯನ್ನು ದಾನ ಮಾಡುತ್ತಿದ್ದರು ಇಷ್ಟೇ ಅಲ್ಲದೆ ಜಯದೇವಿ ತಾಯಿಯವರು ಶಿಬಿರಕ್ಕೆ ಆಗಾಗ ಭೇಟಿ ಕೊಟ್ಟು ಅವರ ಸಮಸ್ಯೆಗಳನ್ನು ಕೇಳುತ್ತಿದ್ದರು … ಬಡವರು ದಲಿತರು ನಿರಾಶ್ರಿತರು ಅದು ಯಾವುದೇ ಮತ ಕುಲಕ್ಕೆ ಸಂಬಂಧಿಸಿದ್ದರು ಎಲ್ಲರಿಗೂ ತಾಯಿ ಮಕ್ಕಳನ್ನು ನೋಡುವಂತೆ ನೋಡಿಕೊಂಡರು. *ಹಡೆದ ನಾರಿಯರ ಕರೆದುತಂದು ಮಾಡಿದಿರಿ ಆರೈಕೆತವರಿಗೆ ಕಡಿಮೆ ಅಲ್ಲದಂತೆಪಡೆದೆವು ಅಮ್ಮ ನಿನ್ನ ಹರಿಕೆ * ನಿರಾಶ್ರಿತ್ರಿರಗೆ ಆಶ್ರಯ ಕೊಡುವದು ಅಂಥ ಸುಲಭದ ಕೆಲಸವೇನು ಆಗಿರಲಿಲ್ಲ ಅದರಲ್ಲಿ ಬಾಣಂತಿಯರು ಗರ್ಭಿಣಿಯರಂಥ ಸ್ತ್ರೀಯರು ಕೂಡ ಇದ್ದರು ಅವರೆಲ್ಲರಿಗೂ ಕರೆದು ಬಾಣಂತನವನ್ನು ಮಾಡಿಸಿ ನವಜಾತ ಶಿಶುಗಳ ಆರೈಕೆ ಮಾಡಿಸಿದರು. ಗರ್ಭಿಣಿಯರಿಗೆ ವೈದ್ಯಕೀಯ ವ್ಯವಸ್ಥೆಯನ್ನು ಒದಗಿಸಿದರು.ವಿವಿಧ ಸಂಸ್ಥಾನಗಳ ವಿಲೀನಿಕರಣ ಸಂದರ್ಭದಲ್ಲಿ ದೇಶದ ಏಕೀಕರಣಕ್ಕಾಗಿ ಶಕ್ತಿಯಾಗಿ ನಿಂತ ನಾಯಕ ಸರ್ದಾರ್ ವಲ್ಲಭಾಯಿ ಪಟೇಲರು.ಸ್ಥಿತಿ ಹಿಡಿತದಿಂದ ತಪ್ಪುತ್ತಿರುವುದು ಕಂಡಾಗ, ಪಟೇಲರು ತಕ್ಷಣವೇ ಶೀಘ್ರ ಹಾಗೂ ದೃಢ ಕ್ರಮ ಕೈಗೊಂಡರು. ಅವರ ದೃಷ್ಟಿಯಲ್ಲಿ ದೇಶದ ಏಕತೆ ಮತ್ತು ಭದ್ರತೆ ಅತ್ಯಂತ ಮುಖ್ಯವಾಗಿತ್ತು.ಶೀಘ್ರ ಕಾರ್ಯಾಚರಣೆಯಲಿ(ಕ್ವಕ ಆಕ್ಷನ್)ಪಟೇಲರ ದೃಢ ನಿಲುವು ತೆಗೆದುಕೊಂಡರು.ಈ ಸಂದರ್ಭದಲ್ಲಿ ಪಟೇಲರು ಮಾತುಕತೆ ಜೊತೆಗೆ ಅಗತ್ಯವಾದರೆ ಶಕ್ತಿಯನ್ನೂ ಬಳಸಬೇಕು ಎಂಬ ನಿಲುವನ್ನು ತಾಳಿದರು.ಹೈದರಾಬಾದ್ ಸಂಸ್ಥಾನದಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ, ಅವರು “ಪೊಲೀಸ್ ಆಕ್ಷನ್” ಸೈನಿಕ ಕ್ರಮವನ್ನು ಜಾರಿಗೊಳಿಸಿದರು. ಇದನ್ನು *ಆಪರೇಷನ್ ಪೋಲೋ*ಎಂದು ಕರೆಯಲಾಗುತ್ತದೆ. ಈ ಕಾರ್ಯಾಚರಣೆಯ ಮೂಲಕ ಕೇವಲ ಐದು ದಿನಗಳಲ್ಲಿ ಹೈದರಾಬಾದ್ ಸಂಸ್ಥಾನವನ್ನು ಭಾರತದ ಭಾಗವನ್ನಾಗಿ ಮಾಡಲಾಯಿತು.ಪಟೇಲರ ನಾಯಕತ್ವದ ವೈಶಿಷ್ಟ್ಯದೃಢ ನಿರ್ಧಾರ ಶಕ್ತಿ,ತ್ವರಿತ ಕಾರ್ಯಾಚರಣೆ,ದೇಶದ ಏಕತೆಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧತೆಯಲಿ ಇದ್ದರು ಪಟೇಲರು….. ಈ ಶೀಘ್ರ ಮತ್ತು ದೃಢ ಕ್ರಮಗಳ ಫಲವಾಗಿ, ಭಾರತ ಒಂದು ಏಕೀಕೃತ ರಾಷ್ಟ್ರವಾಗಿ ರೂಪುಗೊಂಡಿತು. *” ದೇಶದ ಏಕತೆಯ ಕಗ್ಗತ್ತಲಲ್ಲಿ ಬೆಳಕಾಗಿ ಕಾಣಿಸಿಕೊಂಡವರು ಸರ್ದಾರ್ ವಲ್ಲಭಾಯಿ ಪಟೇಲರು…..“ಭಾರತದ ಕಬ್ಬಿಣ ಮನುಷ್ಯನು” ಎಂದು ಜಯದೇವಿ ತಾಯಿಯವರು ಬಹಳ ಹೆಮ್ಮೆಯಿಂದ ಎಲ್ಲ ಭಾಷಣಗಳಲ್ಲಿ ಹೇಳಿಕೊಳ್ಳುತ್ತಿದ್ದರು. ಕೊನೆಗೊಮ್ಮೆ… ಅನುಭವಿಸಿದ ನೋವು, ನಿರಾಶೆ, ಅಲೆಮಾರಿ ಜೀವನದ ನಂತರ, ನಿರಾಶ್ರಿತರು ಮತ್ತೆ ತಮ್ಮ ಆಶ್ರಯದ ನೆಲೆಗೆ ಹಿಂದಿರುಗುವ ಕ್ಷಣ ಬಂದಾಗ, ಅದು ಅವರ ಬದುಕಿನ ಪುನರ್ಜನ್ಮದಂತಿತ್ತು. ಆ ಸಂತಸದ ದಿನ ಬಂದು ಒದಗಿದ್ದು ೩೦-೯-೪೮ ರಂದು. ನಿರಾಶ್ರಿತರು ತಮ್ಮ ಆಶ್ರಿತ ಸ್ಥಾನಕ್ಕೆ ಹೊರಟು ನಿಂತರು….. ಸ್ವಸ್ಥಾನಕ್ಕೆ ಹಿಂದುತ್ತಿರುವಾಗ ಅವರಲ್ಲಿ ಇದ್ದ ಆನಂದ ಉತ್ಸಾಹ ಹೇಳುತೀರದಾಗಿತ್ತು ….. ಅವರಿಗೆ ನಿಜವಾದ ಸ್ವಾತಂತ್ರ ಈಗ ಬಂದಾಗಿತ್ತು ..,!!!.ಎಲ್ಲರೂ ತಾಯಿಯವರಿಗೆ ತುಂಬು ಹೃದಯದ ಧನ್ಯವಾದಗಳು ತಿಳಿಸ್ತಾ ಹಾಡಿ ಹರಿಸಿ ಹೊಗಳಿ ಅಲ್ಲಿಂದ ತೆರಳಿದರು. ತಮ್ಮ ಮನೆಗಳ ಬಾಗಿಲುಗಳನ್ನು ಮತ್ತೆ ತೆರೆಯುವ ತವಕ …ಕಣ್ಣಲ್ಲಿ ಆನಂದದ ಕಣ್ಣೀರು ತುಂಬಿಕೊಂಡವು…. ಆಸರೆ ಕೊಟ್ಟ ನೆಲವನ್ನು ಬಿಟ್ಟು ಹೋಗುವಾಗ. ..ಆ ಮಣ್ಣನ್ನು ಸ್ಪರ್ಶಿಸಿದಾಗ ಅವರ ಹೃದಯ ತುಂಬ ಒಂದು ಶಾಂತಿಯ ಅಲೆ ಹರಡಿತು.ಭೂಮಿಗೆ ನಮಿಸಿದರು.ಮಕ್ಕಳು ಸಂತೋಷದಿಂದ ಓಡಾಡುತ್ತಿದ್ದರು, .ಪ್ರತಿ ಹೆಜ್ಜೆ ಪ್ರತಿ ಉಸಿರು ಒಂದು ಕಥೆ ಹೇಳುವಂತೆ ಇತ್ತು…..ಆ ಕ್ಷಣದಲ್ಲಿ ಅವರು ತಮ್ಮ ಕಷ್ಟಕಾಲದಲ್ಲಿ ತಾಯಿಯಂತೆ ನೆರವಾದ ಆ ಮಹಾನ್ ವ್ಯಕ್ತಿಯ ಜಯದೇವಿ ತಾಯಿಯವರನ್ನು ನೆನೆಸಿಕೊಂಡರು“ತಾಯಿ… ನಮ್ಮ ಜೀವ ಉಳಿಸಿದವಳು ನೀವು… ನಾವು ಕಳೆದುಕೊಂಡ ವಿಶ್ವಾಸವನ್ನು ಮತ್ತೆ ನಮ್ಮೊಳಗೆ ತುಂಬಿದವಳು ನೀವು… ನಮ್ಮ ನೆರಳಿಲ್ಲದ ಬದುಕಿಗೆ ಆಶ್ರಯವಾದವಳು ನೀವು… ಇಂದು ನಾವು ಮತ್ತೆ ನಮ್ಮ ನೆಲಕ್ಕಹಿಂದಿರುಗುತ್ತಿದ್ದೇವೆಆದರೆ ಈ ಸಂತೋಷದ ಪ್ರತಿಯೊಂದು ಹನಿ ನಿಮ್ಮ ಆಶೀರ್ವಾದವೇ…ನಾವು ನಿಮ್ಮ ಋಣವನ್ನು ಯಾವತ್ತೂ ತೀರಿಸಲಾರೆವು… ನಮ್ಮ ಹೃದಯದ ತುಂಬು ಕೃತಜ್ಞತೆಗಳನ್ನು ನಿಮಗೆ ಅರ್ಪಿಸುತ್ತೇವೆ ಎನ್ನುತ ಹಾಡಿ ಹರಸಿದರು……. *ಹೇಗೆ ತೀರಿಸಬೇಕು ತಾಯಿನಿನ್ನ ಋಣವ ಒಟ್ಟುನೆನೆವೆವು ಹಡೆದ ಮಕ್ಕಳಿಗೆ*ನಿನ್ನ ಹೆಸರು ಇಟ್ಟು,*….!!! ಜಯಭೇರಿ ಕೇಳಿ ಕುಣಿದೆವುಆಯಿತು ರಜಾಕರರ ಹೋಮಮಕ್ಕಳು ಮರಿ ಹೋಗಿ ಬರುವೆವುತಾಯಿ ನಿನಗೆ ಸಲಾಂ.. ನಿನಗೆ ಸಲಾಮ* (ಚಂಡರಕಿ ಉರ್ದು ಕವಿ) ಅವರ ಮುಖದಲ್ಲಿ ಕಂಡ ಆ ಸಂತಸ ಅವರ ಹೃದಯದಲ್ಲಿ ಮೂಡಿದ ಆ ಶಾಂತಿ—ಅದು ತಾಯಿಯ ಸೇವೆಗೆ ದೊರಕಿದ ಅತ್ಯಂತ ಮಹತ್ತರ ಗೌರವ.ಈ ದೃಶ್ಯ… ನೋವಿನಿಂದ ಆರಂಭವಾಗಿ, ಕೃತಜ್ಞತೆಯಲ್ಲಿ ಮುಗಿಯುವ ಒಂದು ಬದುಕಿನ ಪಯಣ.ಮುಂದುವರಿಯುವುದು ಸವಿತಾ ದೇಶಮುಖ
ಅಂಕಣ ಸಂಗಾತಿ ಮನದ ಮಾತುಗಳು ಜ್ಯೋತಿ ಡಿ ಬೊಮ್ಮಾ ತಮ್ಮ ತಾನರಿಯದವರು ನಿಮ್ಮನ್ನೆತ್ತ ಬಲ್ಲರಯ್ಯ…. ನಾಳಿಗಿ ಬಸೋಜಂತಿ ಅದರೀ ಮನಿ ತೊಳಿಬೇಕು , ಅಂತ ಬಾಜು ಮನಿ ಅಕ್ಕೋರು ಅಂದಾಗ ನಮ್ಮ ಜಗಜ್ಯೋತಿ ಬಸವಣ್ಣನೂ ಒಬ್ಬ ದೇವರಾಗಿ ಕುಂತ ಅಂತನಸ್ತು.ಅವನೆಲ್ಲಿ ದೇವರಾದ , ನಾವು ದೇವ್ರು ಮಾಡಿಬಿಟ್ಟೆವು.ಅವನಿಗೊಂದು ಗುಡಿ ಕಟ್ಟಿ ಅದರೊಳಗ ಕೂಡ್ಸಿ ಕುಂಕುಮ ಅರಶಿಣದಿಂದ ಪೂಜಾ ಮಾಡಿ ಹೋಳಿಗಿ ನೌದಿ ತೋರಿಸಿ ಹಬ್ಬ ಮುಗಸತೀವಿ. ಬ್ಯಾಸಗಿದಾಗ ಬರೊ ಈ ಬಸೊಜಂತಿ ನಾವು ಸಣ್ಣವರಿದ್ದಾಗ ಹೋಳಗಿ ಮಾನಕಾಯಿ ರಸ ನೆನಪಿಸತಿತ್ತು.ಅವತ್ತು ಎಲ್ಲರ ಮನ್ಯಾಗ ಹೂರಣದ ಹೋಳಗಿ ಮಾನಕಾಯಿ ಸಿಕರಣಿ. ಬಸವಜಯಂತಿ ಅಂದ್ರ ಇದರ ಹೊರತಾಗಿ ಮತ್ತಾವದೂ ತಿಳಿದಿರಲಿಲ್ಲ.ವಚನ ಸಾಹಿತ್ಯ ಓದಿ ತಿಳಿದ ಮ್ಯಾಲ ಗೊತ್ತಾಗಿದ್ದು ಬಸವಣ್ಣ ನಮ್ಮಂಗ ಒಬ್ಬ ಮನುಷ್ಯ, ಆದ್ರಾ ಅವನ ವಿಚಾರಗಳಿಂದ ಅವನೊಬ್ಬ ಅಸಾಮಾನ್ಯ ಮಾನವನೆನೆಸಿಕೊಂಡ.ಅವನಂತೆ ಅವನ ಜೊತೆಗೆ ಎಳನೂರರ ಮ್ಯಾಲ ಶರಣರು ಇದ್ದರು , ಎಲ್ಲರೂ ಮನುಷ್ಯ ರೆ. ಆದ್ರ ಈಗ ಅವ್ರೆಲ್ಲರಿಗೂ ನಮ್ಮ ಸಮಾಜ ದೇವ್ರು ಮಾಡಿ ಕೂಡಿಸಿ ಬಿಟ್ಟಾರ.ಒಂದೊಂದು ಕಾಯಕಕ್ಕ ಒಂದೊಂದು ಜಾತಿ ಹೆಸರು ಕೊಟ್ಟು ಆಯಾ ಕಾಯಕದ ಒಬ್ಬೊಬ್ಬ ಶರಣರನ್ನ ತಮ್ಮ ಜಾತಿಯ ರಾಯಭಾರಿ ಮಾಡಿಕೊಂಡು ವರ್ಷಕ್ಕೊಮ್ಮೆ ಜಯಂತಿ ಮಾಡ್ತಾರ. ಜಯಂತಿ ಆಚರಣೆ ಮಾಡೋದು ತಪ್ಪಂತ ಹೇಳಲ್ಲ.ಅವರ ಜೀವನ ಚರಿತ್ರೆ , ಅವರ ಸಾಧನೆ , ಅವರು ಸಮಾಜಕ್ಕೆ ಕೊಟ್ಟ ಮಾರ್ಗದರ್ಶನ , ಇವೆಲ್ಲ ಮುಂದಿನ ಪಿಳಿಗಿಗಿ ನೆನಪಿರಬೇಕಾದ್ರ ಮಾಹಾ ನಾಯಕರ ಹುಟ್ಟು ಸಾವಿನ ಕುರಿತು ಪ್ರತಿಯೊಬ್ಬರಿಗೂ ತಿಳದಿರಬೇಕು , ಮತ್ತೊಬ್ಬರಿಗೆ ತಿಳಿಸಿ ಹೇಳಬೇಕು. ಇಂತಹ ಜಯಂತಿಗಳ ಆಚರಣೆಯಿಂದ ಮುಂದಿನ ಪೀಳಿಗೆ ಗಳಿಗೆ ನಾವು ಅವರು ಸಮಾಜದ ಉದ್ದಾರಕ್ಕಾಗಿ ಎನೇನು ಮಾಡಿದರು ಅನ್ನೊದು ತಿಳಿಸಿ ಹೆಳತಿಬೇಕು. ಆದ್ರ ಈಗೀನ ಮಹಾನಾಯಕರ ಜಯಂತಿ ಗಳೆಲ್ಲ ಆಯಾ ಜನಾಂಗಗಳ ಜನಬಲ ತೋರಿಸಿಕೊಳ್ಳಕ್ಕೆ ಸೀಮಿತ ಆಗತಿದ್ದಾವ.ಮಡಿವಾಳ ಮಾಚೀದೇವನ ಜಯಂತಿ ಕ್ಕಿಂತ ಅಂಬಿಗರ ಚೌಡಯ್ಯ ನ ಜಯಂತಿ ದೊಡ್ಡ ದಾಗಿ ಮಾಡಬೇಕು.ಬಸವಣ್ಣನ ಜಯಂತಿಗಿಂತ ಅಂಬೇಡ್ಕರ್ ಜಯಂತಿ ಭಾರಿ ಮಾಬೇಕು.ಅವ್ರು ಅಷ್ಟೇ ಜನ ಇದ್ರು.ನಾವು ಅವರಿಗಿಂತ ಹೆಚ್ಚು ಜನ ಸೇರಬೇಕು.ಅವರು ಹಾಕಿದ್ದ ಟೆಂಟ್ ಸಣ್ಣದಿತ್ತು.ನಾವು ಹಾಕೋ ಟೆಂಟ್ ನೋಡಿ ಜನ ದಂಗಾಗಬೇಕು. ಇದಕ್ಕೆಲ್ಲ ರೊಕ್ಕ ..! ಚಂದಾ ಎತ್ತಿದ್ರಾಯ್ತು.ತಮ್ಮ ತಮ್ಮ ಜಾತಿ ಬಲ ತೋರಸಿಕೊಳ್ಳಕ ಯಾರು ಹಿಂದ ಬಿಳಲ್ಲ.ಇನ್ನೂ ಸರ್ಕಾರಿ ಅಧಿಕಾರಿಗಳು ಯಾತಕ್ಕ ಇರತಾರ , ಅಂಜಿಸಿಯಾದ್ರೂ ಜಯಂತಿ ಗಳಿಗಿ ದುಡ್ಡು ವಸೂಲಿ ಮಾಡೋದೇ , ಇವೆಲ್ಲದರ ಮುಂದಾಳತ್ವ ವಹಿಸುವವರು ಎಷ್ಟು ಬಸವಣ್ಣನ ತತ್ವಗಳನ್ನು ಅರಿತಿರತಾರ…!ಎಷ್ಟು ಅಂಬೇಡ್ಕರ್ ಅವರ ಬಗ್ಗೆ ತಿಳಿದಿರತಾರ..! ಚಂದಾ ವಸೂಲಿ ಮಾಡಿ ಈ ಜಯಂತಿ ಗಳಲ್ಲಿ ಕುಣಿಯುವವರು ಹೆಚ್ಚಾಗಿ ಯುವಕರು.ಕುಡಿದು ಡಿ ಜೆ ಸದ್ದಿಗೆ ಎರ್ರಾಬಿರ್ರಿ ಕುಣಿಯುತ್ತ ಅದರ ಅವಾಜಕ್ಕ ಉರವರೆಲ್ಲ ಹೈರಾಣ ಆಗಬೇಕು. ಅದಕ್ಕ ಜಯಂತಿ ಅಂತಾರ.ನಮ್ಮ ನಡೆ ನುಡಿ ಆಚರಣೆಗಳಲ್ಲಿ ಶರಣರ ಮಹಾನಾಯಕರ ಆದರ್ಶ ಆಳವಡಿಸಿಕೊಳ್ಳುವದಕ್ಕ ಜಯಂತಿ ಅನ್ನಲ್ಲ ಅಂತ ಇಂತವರ ವಾದ ಇರಬಹುದು. ಅಷ್ಟಕ್ಕೂ ಸಾರ್ವಜನಿಕ ವಾಗಿ ಜಯಂತಿ ಆಚರಿಸುವ ಅವಶ್ಯಕತೆ ಅಷ್ಟು ಇದೆಯಾ..! ಸ್ಕೂಲ್ ಕಾಲೇಜ್ ಗಳಲ್ಲಿ ಆಚರಿಸಿದರೆ ಮಕ್ಕಳಿಗೆ ಅವರ ಬಗ್ಗೆ ತಿಳಿತದ.ಪಠ್ಯ ಪುಸ್ತಕಗಳದಾಗ ಅವ್ರ ಜೀವನ ಚರಿತ್ರೆಗಳು ಇರಲಿ. ಶಾಲಾ ಕಾಲೇಜುಗಳು ಮಕ್ಕಳಲ್ಲಿ ವೈಚಾರಿಕ ನಡೆಗಳ ಮಹತ್ವ ತಿಳಿಸಲಿ.ಎಲ್ಲರೂ ತಮ್ಮ ತಮ್ಮ ಜಾತಿಯ ನಾಯಕರ ಜಯಂತಿ ಆಚರಿಸ್ತಾರ , ಟಿಪ್ಪು ಸುಲ್ತಾನ ನ ಜಯಂತಿಗೆ ಯಾಕ ವಿರೋಧಿಸಬೇಕು..! ಇತಿಹಾಸ ತಮ್ಮ ಮನಸ್ಸಿಗಿ ಬಂದಂಗ ತಿರುಚಿ ತಮ್ಮ ವಾದಕ್ಕೆ ಕಟ್ಟುಬಿಳುವದರಿಂದ ಸತ್ಯ ಸುಳ್ಳಾಗಲ್ಲ , ಸುಳ್ಳು ಸತ್ಯ ಆಗಲ್ಲ.ಟಿಪ್ಪು ಸುಲ್ತಾನ್ ಕೂಡ ನಮ್ಮ ದೇಶದ ಸ್ವತಂತ್ರ ಕ್ಕಾಗಿ ಬ್ರಿಟಿಷ್ ರೊಂದಿಗೆ ಹೊರಾಡಿದವನೆ , ಇಷ್ಟು ಸಾಕು ಅವನನ್ನು ನೆನಪಿಸಿಕೊಳ್ಳುವದಕ್ಕ. ಬಸವಾದಿ ಶರಣರ ಆಶಯಗಳು , ಅಂಬೇಡ್ಕರ್ ಅವರ ವೈಚಾರಿಕ ನಿಲುವುಗಳು , ಇವೆಲ್ಲ ನಾವು ಅವ್ರ ಪೋಟಕ್ಕ ಹೂವಿನ ಹಾರ ಹಾಕಿ ತೆಂಗು ಒಡೆದು ಮೆರವಣಿಗೆ ಮಾಡ್ಕೊಂತ ಕುಣ್ಣಕೊಂತ ಹೋಗಿದ್ರಿಂದ ನಮ್ಮಲ್ಲಿ ಆಳವಡಿಸಿಕೊಳ್ಳಕ್ಕ ಆಗುವದಿಲ್ಲ.ತನು ಶುಧ , ಮನ ಶುಧ್ದ ಎಂಬ ನಿಲುವು ನಮ್ಮಲ್ಲಿ ಬರಬೇಕಾದ್ರ ಮೊದಲು ಶರಣರ ನ್ನು ಅರಿಬೇಕು.ಅವರ ನಿಲುವುಗಳನ್ನು ನಮ್ಮ ಜೀವನದಾಗ ಆಳವಡಿಸಿಕೊಳ್ಳಬೇಕು. ಮೈಕ್ ನಲ್ಲಿ ಜೋರಾಗಿ ಭಾಷಣ ಮಾಡ್ತ ಅವರು ನಮ್ಮ ಜಾತಿಗಿ ಹಂಗ ಮಾಡಿದ್ರು ಹಿಂಗ್ ಮಾಡುದ್ರೂ ಅಂತ ಅರಚಾಡುವದು ಬಿಟ್ಟು ಈಗ ಅವರು ಹಾಕಿದ ಮಾರ್ಗದರ್ಶನ ದಾಗ ನಾವು ಹ್ಯಾಂಗ್ ಬದುಕಬೇಕು ಅನ್ನೊದು ತಿಳಕೋಬೇಕು.ಅದು ನಮ್ಮ ಜೀವನದಾಗ ಅಳವಡಿಸಿಕೊಳ್ಳಬೇಕು. ಶಾಲೆಗಳಲ್ಲಿ ಮಕ್ಕಳಿಗೆ ವಚನಗಳ ಸಾರ , ಅಂಬೇಡ್ಕರ್ ಅವರ ವೈಚಾರಿಕ ನಿಲುವುಗಳು ತಿಳಿಸುವ ಪ್ರಯತ್ನಕ್ಕೆ ಶಿಕ್ಷಕರು ಹೆಚ್ಚಿನ ಮಹತ್ವ ಕೊಡಬೇಕು. ಬಸವಣ್ಣ ಲಿಂಗಾಯತರಿಗೆ ಮಾತ್ರ ಸೀಮಿತ , ಅಂಬೇಡ್ಕರ್ ದಲಿತರಿಗೆ ಮಾತ್ರ ಸೀಮಿತ ಎಂಬ ಸಿದ್ದಾಂತ ಕ್ಕೆ ಯುವಜನ ಒಳಪಡುತಿರೋದು ಶೋಚನೀಯ. ಇನ್ನೂ ಒಂದು ಮುಖ್ಯ ವಿಷಯ. ದಲಿತರು ಬಸವಣ್ಣ ನನ್ನು ಒಪ್ಪಿಕೊಂಡಷ್ಟು ದಲಿತೇತರು ಅಂಬೇಡ್ಕರ್ ಅವರನ್ನು ಒಪ್ಪಿಕೊಂಡಿದ್ದೆವಾ..! ದಲಿತರು ಅಂಬೇಡ್ಕರ್ ಭಾವ ಚಿತ್ರದ ಜೊತೆ ಬಸವಣ್ಣ ಬುದ್ಧನ ಭಾವಚಿತ್ರ ಗಳಿಗೆ ಪೂಜಿಸೋದು ನೋಡಿದ್ದೆವೆ.ಎಷ್ಟು ಜನ ದಲಿತೇತರು ಲಿಂಗಾಯತರು ಅಂಬೇಡ್ಕರ್ ಭಾವ ಚಿತ್ರಕ್ಕೆ ಪೂಜಿಸ್ತೆವೆ..!ಪೂಜೆ ಅನ್ನೊದು ಒಂದು ಆಚರಣೆ ಅಷ್ಟೆ. ಗೌರವದಿಂದ ಒಪ್ಪಿಕೊಳ್ಳುವದು ಮುಖ್ಯ. ಶರಣರ ತತ್ವ ಗಳು , ಅಂಬೇಡ್ಕರ್ ರ ಆಶಯಗಳು ಎಂದಿಗೂ ಪ್ರಸ್ತುತ. ಬಸವೇಶ್ವರ ಅಂಬೇಡ್ಕರ್ ಇನ್ನೂ ಅನೇಕ ಮಹಾನಾಯಕರು ಮನುಕುಲದ ಉದ್ದಾರಕ್ಕಾಗಿ ಜೀವ ತೇದವರು.ಅವರೂ ಮನುಷ್ಯರೆ.ಅವ್ರಲ್ಲೂ ಪರಿಪೂರ್ಣ ತೆ ಹುಡುಕುವ ಕೆಲಸ ನಾವು ಮಾಡಬಾರದು.ಆದ್ರ ಅವರ ಮಾರ್ಗದರ್ಶನ ನಮ್ಮ ಜೀವನ ಮಟ್ಟ ಎಷ್ಟು ಬದಲಾಯಿಸ್ತದ ಅನ್ನುವದು ಅವರ ದಾರಿಯಲ್ಲಿ ಸಾಗಿದಾಗ ಮಾತ್ರ ತಿಳಿತದ. ಶರಣರ ಮಹಾನಾಯಕರ ಜಯಂತಿ ಗಳು ಸರ್ಕಾರಿ ಕಚೇರಿಗಳಲ್ಲಿ ಕಾಟಾಚಾರಕ್ಕಾಗಿ ಆಚರಿಸುವದನ್ನು ನೋಡ್ತೆವೆ.ಒಂದು ಪೋಟೋ ಇಟ್ಟು ಹೂವಿನ ಸರ ಹಾಕಿ ತೆಂಗಿನ ಕಾಯಿ ಒಡೆದು ಇಟ್ರ ಜಯಂತಿ ಮುಗಿತು.ಕಚೇರಿ ಮುಚ್ಚಿ ಮನಿಗಿ ಹೋದ್ರ ಆಯ್ತು . ಇನ್ನೂ ಡಿ ಜೆ ಹಚ್ಚಿ ಕುಣಿಯುವವರು ಪಟಾಕಿ ಹಚ್ಚೊರು , ಉರಾಗೆಲ್ಲ ಮೆರವಣಿಗಿ ಮಾಡೊರ ಹಾವಳಿ ಶುರು ಆಗತದ. ಇದರಿಂದ ನಮ್ಮ ಮುಂದಿನ ಪೀಳಿಗೆ ಏನು ಕಲಿತಾರ..! ನಮ್ಮ ನಮ್ಮ ಜಾತಿ ಅಥವಾ ಜನ ಬೆಂಬಲ ತೊರಿಸಬೇಕಾದ್ರ ಅದ್ದೂರಿ ಜಯಂತಿಗಳು ಆಚರಿಸಬೇಕು.ಅಂತ.ಇದರಿಂದಾಗುವ ಉಪಯೋಗ ಅನುಪಯೋಗ ಯಾರಿಗೂ ಬೇಕಾಗಿಲ್ಲ.ವಚನ ಸಾಹಿತ್ಯ ವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಶರಣರ ಸಮಬಾಳು ಸಮಪಾಲು ಆಶಯಗಳು , ಕಾಯಕದ ಮಹಿಮೆ , ಬಹುತ್ವ ಆಚರಣೆಗಳನ್ನು ಗೌರವಿಸುವದು , ದಯೆ ಕರುಣೆಗಳ ಸಾರ , ಎಲ್ಲರನ್ನೂ ಒಳಗೊಂಡ ಸರ್ವಜನಾಂಗಗಳ ಸಾಮರಸ್ಯ..ಇವೆಲ್ಲವೂ ಬರಿ ಬಸವಣ್ಣಗ ಅಂಬೇಡ್ಕರ್ ಅವರಿಗೆ ಮೆರೆಸಿದರಾಗಲಿ , ವಚನ ಸಾಹಿತ್ಯ ತಲೆ ಮೇಲೆ ಹೊತ್ತು ತಿರುಗಿದರಾಗಲಿ ಸಿಗಬಹುದೇ..! ಇಲ್ಲ. ಆದರೂ ಮೆರವಣಿಗೆಯಂತ ಆಚರಣೆಗಳು ಅದ್ದೂರಿಯಾಗಿ ಯಾಕ ಜರುಗತಾವ.ಉತ್ತರ ಒಂದೇ , ಬರಿ ಪ್ರತಿಷ್ಟೆಗಾಗಿ ಮಾತ್ರ.ಪ್ರತಿಷ್ಟೆ ನಮಗ ವಿಕಾಸದ ದಾರಿಗೆ ಒಯ್ಯುವದಿಲ್ಲ.ಅಧಪತನದೆಡೆ ಒಯ್ಯುತ್ತದೆ.ಜಯಂತಿಯ ಆಚರಣೆಗಳು ಬರಿ ಪ್ರತಿಷ್ಟೆಗಳಾಗದೆ ಸರ್ವಜನರ ಮಾನಸಿಕ ವಿಕಾಸಕ್ಕಾಗಿ ಆಚರಿಸಲ್ಪಡಬೇಕು. ಜ್ಯೋತಿ , ಡಿ .ಬೊಮ್ಮಾ. ಜ್ಯೋತಿ ಡಿ ಬೊಮ್ಮಾ ಅವರು ಕಲಬುರಗಿ ಜಿಲ್ಲೆಯವರು.ಇವರು ಇದುವರೆಗುನಾಲ್ಕು ಕವನ ಸಂಕಲನಗಳನ್ನು,ಎರಡು ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪ್ರತಿ ತಿಂಗಳೂ ಸಂಗಾತಿ ಪತ್ರಿಕೆಗಾಗಿ ದೇಸಿನುಡಿಗಟ್ಟಿನಲ್ಲಿ ವಿಶೇಷವಾದ ವಿಷಯಗಳ ಬಗ್ಗೆ ಬರೆಯುತ್ತಿದ್ದಾರೆ








