ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ‌ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ಯಾತಕೋ ಗೊತ್ತಿಲ್ಲ ನನ್ನ ಮೌನ ಮಾತಿಗೆ ಇಳಿದಿದೆಏನೊಂದು‌ ಅರಿತಿಲ್ಲ ನನ್ನ ಮಾತು ಮೌನವ ತಳೆದಿದೆ ಪ್ರೀತಿಯಲ್ಲಂತೂ ಮಾತು ಮೌನಗಳದ್ದೇ ಕಾರುಬಾರು  ಮುದ್ದಿಸುವಾಗ ಸದ್ದೇ ಇಲ್ಲದೇ ಸವಿ‌ ಸಲುಗೆ ಬೆಳೆದಿದೆ ಲೋಕದ ಕಣ್ಣಿಗಂತೂ ಪ್ರೇಮಿಗಳೆಂದಿಗೂ ಹುಚ್ಚರೇಇಂದಲ್ಲ ಹಿಂದಿನಿಂದಲೇ ಜಗದ ಹಗೆಯು ಉಳಿದಿದೆ ಮನಸೆರಡು ಒಪ್ಪಿದರೇನು ಕುರುಡರು ಒಪ್ಪಬೇಕಲ್ಲಜಗತ್ತು ಪ್ರೀತಿಯನು ಜಾತಿ ಅಂತಸ್ತಿನಿಂದ ಅಳೆದಿದೆ ಮಹಾಂತ ಭರವಸೆಯ ಬುತ್ತಿ ಹಿಡಿದು ನಿಂತಿರುವನುಬರಿದೆದೆಯ ಬಾಂದಳದಿ ತಾರೆಯೊಂದು ಹೊಳೆದಿದೆ ಎಮ್ಮಾರ್ಕೆ

ಎಮ್ಮಾರ್ಕೆ ಅವರ‌ ಗಜಲ್ Read Post »

ಕಥಾಗುಚ್ಛ

“ಸರಯೂ ನನ್ನ ಮಗಳೇ..” ಸೌಮ್ಯ ಕೆ.ವಿ.ಅವರ ಸಣ್ಣ ಕಥೆ

ಕಥಾ ಸಂಗಾತಿ ಸೌಮ್ಯ ಕೆ.ವಿ. “ಸರಯೂ ನನ್ನ ಮಗಳೇ..” ಆಯಿ..ನಿನಗೊಬ್ಬ ಮಗಳಿದ್ದಾಳೆ…ನಿನ್ನ ಆಸೆ ಕನಸು ಎಲ್ಲವನ್ನೂಕನಸಾಗೇ ಬಿಟ್ಟವಳು…ನನಸು ಮಾಡುವ ಕಸುವಿಲ್ಲದವಳು… ಸರಯು ಫೇಸ್ಬುಕ್ಕಿನಲ್ಲಿ ಹಾಕಿದ್ದ ಕವನವೇ ಅನ್ನಪೂರ್ಣಳನ್ನು ಕಾಡುತ್ತಿತ್ತು. ನಮ್ಮ ಮಕ್ಕಳು ಯಾವಾಗಲೂ ನಮಗೆ ಸಣ್ಣವರೇ ಎನಿಸುತ್ತಾರೆ. ಆದರೆ ಅವರು ಏನೆಲ್ಲ ಯೋಚಿಸುತ್ತಾರೆಂಬುದು ತಲ್ಲಣ ಮೂಡಿಸುತ್ತದೆ. ಜಿರಿ ಜಿರಿ ಮಳೆ.. ಬೆಳಗು ಜಾವಕ್ಕೇ ಶುರುವಾದದ್ದು.. ಬರಬರಾಂತಲೂ ಬರದೇ, ನಿಂತೂ ಹೋಗದೇ.. ಇದೊಳ್ಳೆ ರಗಳೆ ಆಯಿತು. ಅನ್ನಪೂರ್ಣ ನೆತ್ತಿಗೆ ಸೆರಗು ಹೊದ್ದು ಅಂಗಳಕ್ಕಿಳಿದಳು. ನೆಲತುಂಬ ಚೊಟ್ಟು ಮೇಲಾಗಿ ತೇಲುತ್ತಿದ್ದ ಪಾರಿಜಾತ. ಎಷ್ಟು ಪ್ರೀತಿಯಿಂದ ಬೆಳೆಸಿದ್ದು! ಮೆಟ್ಟಲಾದರೂ ಮನಸ್ಸಾಗುತ್ತದಾ? ಅಯ್ಯೋ, ಈ ಬಟನ್ ಗುಲಾಬಿಯ ಹೆಂಕಲು… ನಿನ್ನೆ ಮಾತ್ರ ನೆಟ್ಟಿದ್ದು, ಬುಡದ ಮಣ್ಣೆಲ್ಲ ಕೊಚ್ಚಿ ಹೋಯಿತು. ಅನ್ನಪೂರ್ಣ ಬಗ್ಗಿ ಬುಡ ಮಾಡುತ್ತಿದ್ದಾಗ, “ಆಯಿ.. ಆಯಿ, ನಿಂಗೆ ತಲೆಸಮ ಇಲ್ವಾ?” ಎಂದು ಸರಯು ಕಿಟಕಿಯಿಂದ ಇಣುಕಿದಳು. “ಈ ಮಳೆಲೂ ಅದೆಂತ ಕಾಮಗಾರಿಯಿದು ನಿಂದು! ಒಂದು ಗಳಿಗೆಯಾದರೂ ನಿನ್ನ ಗಿಡಗಳ ವಸವಂತ ಬಿಟ್ಟಿದ್ದಿದ್ರೆ…” ಸರಯು ರಪ್ಪನೆ ಕಿಟಕಿ ಮುಚ್ಚಿ ಹೋದಳು. ಕೆಸರು ಮಣ್ಣಿನಲ್ಲಿ ಮುಳುಗಿದ್ದ ಅನ್ನಪೂರ್ಣಳ ಬೆರಳುಗಳು ಕ್ಷಣಕಾಲ ಗಲಿಬಿಲಿಗೊಂಡವು. ಎದೆಯೊಳಗಿನ ಕಸಿವಿಸಿಯಂತೆ. ಮನೋಹರನ ಮನೆಗೆ ಇವತ್ತು ಫೋನ್ ಮಾಡ್ತೇವೆ ಅಂತ ಹೇಳಿದ್ದರಲ್ಲವಾ… — ಸರಯು ಕಾಲೇಜು ಮ್ಯಾಗಜೀನ್‌ನಲ್ಲಿದ್ದ ಒಬ್ಬನ ಫೋಟೋಗೆ ಬೆರಳು ಮಾಡಿ ಹೇಳಿದ್ದಳು. “ನಿಂಗೆ ಗೊತ್ತಾ ಆಯಿ, ಇಷ್ಟು ದಿನದಲ್ಲಿ ನನ್ನ ಕಾಲಿಗೆ ಎಂತ ಆಗಿದೆ ಅಂತ ಕೇಳದೇ ಇರುವ ಒಬ್ಬನೇ ಒಬ್ಬ ಅಂದ್ರೆ ಇವ.” ಹೀಗೆ ಪರಿಚಿತನಾದ ಮನೋಹರ ಸರಯುವಿನ ಮಾತಿನಲ್ಲಿ ಆಗಾಗ್ಗೆ ಇಣುಕಲು ಶುರುವಾದ. ಅವಳ ಫೇಸ್ಬುಕ್ಕಿನ ಪ್ರತೀ ಪೋಸ್ಟಿಗೂ ಲೈಕು ಮಾಡುತ್ತಿದ್ದ. ಹುಟ್ಟಿದ ದಿನಕ್ಕೆ ಮನೆಗೂ ಬಂದ. ಬಂದವ ಅನ್ನಪೂರ್ಣಳ ಒಂದೊಂದು ಗಿಡ, ಎಲೆ, ಹೂವು, ಮೊಗ್ಗು, ಚಿಗುರು ಎಲ್ಲವನ್ನೂ ಕಣ್ಣಲ್ಲಿ ತುಂಬಿಕೊಂಡು ಹರಟೆ ಹೊಡೆದಿದ್ದ. ತಾನು ಗಿಡಗಳನ್ನು ಬೆಳೆಸಿದ್ದಕ್ಕಿಂತ ಹೆಚ್ಚು ಮುಚ್ಚಟೆಯಿಂದ ಅವನು ಸರಯುವನ್ನು ಕಾಣುತ್ತಿದ್ದಾಗ ಅನ್ನಪೂರ್ಣಳ ಎದೆಯ ಭಾರ ಇಳಿದಿತ್ತು. ಗಂಡನೊಟ್ಟಿಗೆ ಮನೋಹರನ ಮನೆಗೆ ಮಗಳ ಮದುವೆ ಪ್ರಸ್ತಾಪಕ್ಕೆ ಹೋಗುವವರೆಗೂ. ಮನೋಹರನ ತಾಯಿ ಮಾತಿಗೆ ಮಾತು ಕೂಡಿಸುತ್ತಾ ಪಿಸುಗುಟ್ಟಿದ್ದರು. “ಮನೋಹರನ ಇಷ್ಟವೇ ನಮ್ಮ ಇಷ್ಟ. ಆದ್ರೆ ಈ ಚಪ್ರದಲ್ಲಿ ನಮ್ಮ ಮಗಳ ಮದುವೆಯೂ ಆಗಬೇಕು. ನಿಮ್ಮ ಮಗ ಪುನೀತನಿಗೆ ನಮ್ಮ ಮಧುಮಿತಾಳನ್ನು ಕೊಡೋಣ ಅಂತ…” ಎದೆಯ ಮೇಲೊಂದು ಬಂಡೆಗಲ್ಲನ್ನೇ ಎಸೆದಂತೆ ಅನ್ನಿಸಿತ್ತು. ಹುಟ್ಟಿನಿಂದಲೇ ಬುದ್ಧಿ ಬೆಳವಣಿಗೆ ಸರಿಯಾಗಿರದ ಮಧುಮಿತಾಳನ್ನು ಪುನೀತನಿಗೆ ತಂದುಕೊಳ್ಳುವುದೇ? “ಯೋಚನೆ ಮಾಡಿ ಫೋನ್ ಮಾಡುತ್ತೇವೆ” ಎಂದು ವಾಪಸಾಗಿದ್ದರು. “ಹೇಗಾದರೂ ಅವಳನ್ನು ದಡ ಸೇರಿಸಬೇಕು ಅಂತ ಇರೋದಿಲ್ವಾ ತಂದೆತಾಯಿಗಳಿಗೆ?” ಎಂದು ಗಂಡ ಹೇಳಿದ್ದರೂ ಅನ್ನಪೂರ್ಣಳಿಗೆ ಮನಸ್ಸಿರಲಿಲ್ಲ. “ಮನೋಹರನಿಲ್ಲದೇ ನಾ ಬದುಕೋಲ್ಲ ಆಯಿ,” ಸರಯು ಕಿರುಚಿದ್ದಳು. — ಮೂರರ ಕೂಸು ಸರಯು. ಎರಡು ಚೋಟು ಜಡೆ, ಉಬ್ಬಿದ ಗಲ್ಲ, ಹೊಳಪು ಕಣ್ಣು. ಹಾಳು ತೇವಕ್ಕೆ ಆಲ್ಬಮಿನಲ್ಲಿ ಇಟ್ಟಲ್ಲೇ ಫೋಟೋ ರವಿಸಿ ಹೋಗಿದೆ. ಆದರೂ ಅನ್ನಪೂರ್ಣಳಿಗೆ ಅದನ್ನು ಹೊತಾಕಲಿಕ್ಕೆ ಆಗಿಲ್ಲ. ಅವತ್ತು ಹೀಗೆಯೇ ಮಳೆ. ಸೋನೆ. ಇಡೀ ದಿನ ಅಣ್ಣನ ಹಿಂದೆ ಬಸವನ ಬಾಲದಂತೆ ಆಡುವ ಸರು ಅಂಗಿಪೂರ್ತಿ ಕೆಸರು ಮಾಡಿಕೊಂಡು ಬಂದಿದ್ದಳು. ತೇವಕ್ಕೆ ಜಾರಿರಬೇಕು ಅಂದುಕೊಂಡರೆ ಕೂಸು ದಿನ ದಿನಕ್ಕೂ ಬೀಳತೊಡಗಿತು. ಮನೆಯೊಳಗಿನ ಸಪಾಟಿ ನೆಲದಲ್ಲೂ ನಡೆಯುತ್ತಲೇ ಬೀಳುವುದು. “ಅದರ ಒಂದು ಕಾಲು ಉದ್ದವೇ ಆಯಿ,” ಎಂದು ಪುನೀತ್ ಹೇಳಿದಾಗ ಅನ್ನಪೂರ್ಣ ಕಂಗಾಲಾಗಿದ್ದಳು. ಆಸ್ಪತ್ರೆಗಳ ಹಾದಿ ಸವೆಸಿದ ಮೇಲೆ ‘ಬ್ಲೌನ್ಟ್ಸ್ ಡಿಸೀಸ್’ ಎಂದು ಪಟ್ಟಕೊಟ್ಟರು. ಕಾಲಿನ ಮೂಳೆ ಸೊಟ್ಟಿಗೆ ಬೆಳೆಯುತ್ತಿದೆ. ಆಪರೇಷನ್ ಆಗಬೇಕು ಎಂದರು. ಒಂದಲ್ಲ, ಎರಡಲ್ಲ, ಮೂರು ಸಲ ಆಪರೇಷನ್ ಆಯ್ತು. ಗ್ರಹಚಾರ, ಶಾಂತಿ, ಹರಕೆ ಎಲ್ಲವೂ ಆಯಿತು. ಆದರೂ ಸರಯು ಕುಂಟುತ್ತಲೇ ಬಂದಳು. ಅವಳ ಕಣ್ಣೀರಿನ ಜೊತೆ ಕಣ್ಣಿನ ಹೊಳಪೂ ಇಂಗಿಹೋಯಿತು. ಸರಯು ಬೆಳೆದಂತೆಲ್ಲ ಕಾಂಪ್ಲೆಕ್ಸ್ ಆಗುತ್ತಾ ಹೋದಳು. ವಾರಗಟ್ಟಲೆ ಮಾತಿಲ್ಲ. ಯಾರದ್ದೋ ಕೊಂಕು ಮಾತಿಗೆ ಮನಸ್ಸು ಹುಳಿಯಾದರೆ ಆಯಿಯ ಮೇಲೆ ಕಿರುಚಾಟ. “ನೀನೇ ನನ್ನ ಕುಂಟಿ ಮಾಡಿದ್ದು!” ಅನ್ನಪೂರ್ಣ ರೂಮಲ್ಲಿ ನಿಲ್ಲಲಾಗದೆ ಹೊರಗೋಡಿದ್ದಳು. ಅಂಗಳದ ಬಳ್ಳಿ ಗುಲಾಬಿಯ ಮೊಗ್ಗು ಅರೆಬಿರಿದು ನಗುತ್ತಿತ್ತು. “ಸರಯೂ… ನನ್ನ ಮಗಳೇ…” ಎಂದು ಅದನ್ನು ಸವರಿದವಳು ಮೊಗ್ಗು ಅರಳಿ ಹೂವಾಗುವುದನ್ನು ನೋಡುತ್ತಾ ಕಣ್ಣೀರು ಒರೆಸಿಕೊಂಡಿದ್ದಳು. ಹಾಗೆ ಶುರುವಾಗಿತ್ತು ಅವಳ ಗಿಡಗಳ ಪ್ರಪಂಚ. ಯಾವ ಗಿಡದಲ್ಲಿ ಚಿಗುರು? ಯಾವುದರಲ್ಲಿ ಮೊಗ್ಗು? ಯಾವ ದಿನ ಹೂ ಅರಳಬಹುದು? ಇದೇ ಅವಳ ಬದುಕಾಯಿತು. — ಆದರೆ ಇವತ್ತು ಸಮಸ್ಯೆಗೆ ಪರಿಹಾರ ಹುಡುಕಬೇಕಿತ್ತು. ಒಂದು ಕಡೆ ಮಗಳ ಬದುಕು, ಇನ್ನೊಂದೆಡೆ ಮಗನ ಭವಿಷ್ಯ. ಕಷ್ಟಪಟ್ಟು ಮನಸ್ಸು ಗಟ್ಟಿ ಮಾಡಿಕೊಂಡು ಲ್ಯಾಪ್‌ಟಾಪ್ ಹಿಡಿದು ಕುಳಿತಿದ್ದ ಪುನೀತನ ಬಳಿ ಬಂದಳು. “ಪುನೀತ್…” ಅವಳ ಧ್ವನಿಯಲ್ಲಿ ನಡುಕವಿತ್ತು. ಮನೋಹರನ ತಾಯಿ ಇಟ್ಟ ಷರತ್ತನ್ನು ಒಂದೊಂದಾಗಿ ಬಿಡಿಸಿ ಹೇಳಿದಳು. ಪುನೀತ್ ಮಾತ್ರ ನಿರಾಳವಾಗಿ ನಕ್ಕ. “ಇಷ್ಟಕ್ಕೇನಾ ಆಯಿ ನೀನು ಇಷ್ಟು ಯೋಚನೆ ಮಾಡ್ತಿರೋದು? ನಾನು ಈ ಮದುವೆಗೆ ಸಿದ್ಧ.” ಅನ್ನಪೂರ್ಣ ದಿಗ್ಭ್ರಮೆಯಿಂದ ಅವನ ಮುಖ ನೋಡಿದಳು. “ನನಗೊಂದು ವಿಷಯ ಹೇಳೋದು ಬಾಕಿ ಇತ್ತು. ನಾನು ಬೆಂಗಳೂರಿನಲ್ಲಿ ನನ್ನ ಜೊತೆ ಕೆಲಸ ಮಾಡೋ ಹುಡುಗಿಯ ಜೊತೆ ಲಿವಿಂಗ್ ರಿಲೇಷನ್‌ಷಿಪ್‌ನಲ್ಲಿದ್ದೇನೆ. ಮದುವೆ, ಸಂಸಾರ ಅನ್ನೋದರಲ್ಲಿ ನನಗೆ ನಂಬಿಕೆಯೇ ಇಲ್ಲ. ಆದರೆ ಸರಯುವಿನ ಬದುಕು ಸೆಟ್ ಆಗುತ್ತೆ ಅಂದ್ರೆ ಈ ಮದುವೆಗೆ ಹೂಂ ಅಂತೀನಿ.” ಅನ್ನಪೂರ್ಣಳ ಎದೆಯೊಳಗೆ ಏನೋ ಕುಸಿದಂತಾಯಿತು. “ಮಧುಮಿತಾಳಿಗೆ ಹುಟ್ಟಿನಿಂದ ಸಿಂಡ್ರೋಮ್ ಇದ್ರೆ ಹೆಚ್ಚು ಕಾಲ ಬದುಕೋದು ಸಂಶಯ ಅಂತ ಮೆಡಿಕಲ್ ಸೈನ್ಸ್ ಹೇಳುತ್ತೆ. ನಾನು ಬರಿ ಹೆಸರಿಗೆ ಮದುವೆಯಾಗ್ತೀನಿ. ಅವಳ ಚಾಕರಿಗೊಂದು ಹೋಮ್ ನರ್ಸ್ ಇಟ್ಟರಾಯ್ತು. ಸರಯುವಿಗೆ ಮನೋಹರ ಸಿಗಬೇಕು. ಅಷ್ಟೇ.” ಮಗನ ಮಾತು ಮುಗಿದರೂ ಅನ್ನಪೂರ್ಣಳ ಕಿವಿಯಲ್ಲಿ ಆ ಮಾತುಗಳೇ ಮೊಳಗುತ್ತಿದ್ದವು. ತಂಗಿಯ ಮೇಲಿನ ಪ್ರೀತಿಯಿಂದ ಮಗ ತ್ಯಾಗ ಮಾಡುತ್ತಿದ್ದಾನೋ? ಅಥವಾ ಮದುವೆಯನ್ನೂ, ಮನುಷ್ಯರ ಬದುಕನ್ನೂ ಇಷ್ಟೊಂದು ಲೆಕ್ಕಾಚಾರದ ವ್ಯಾಪಾರವಾಗಿ ನೋಡುತ್ತಿದ್ದಾನೋ? ಮಗಳ ಕಾಲು ಕುಂಟಾಗಿದ್ದರೆ, ಮಗನ ಆಲೋಚನೆ ಮತ್ತು ಮನಸ್ಥಿತಿಯೇ ಹೀಗೆ ಹಾದಿತಪ್ಪಿದೆಯಲ್ಲಾ ಎನ್ನುವ ನೋವು ಅವಳನ್ನು ಸುತ್ತುವರಿಯಿತು. — ಮಳೆಗೆ ಕಾಡು ಗಿಡ, ಕಳೆ, ತಗಟೆ ಸೊಪ್ಪು ದಂಡಿಯಾಗಿ ಬೆಳೆದಿತ್ತು. ಹೂತೋಟಕ್ಕಿಂತ ಇದೇ ಹೆಚ್ಚು ಕಾಣ್ತಿದೆ ಎಂದು ಅನ್ನಪೂರ್ಣ ಸಣ್ಣ ಕತ್ತಿ ಹಿಡಿದು ಬಂದಳು. ಆಗ ಸರಯು ಕಂಗಾಲಾಗಿ ಓಡಿಬಂದಳು. “ಆಯಿ… ಮಧುಮಿತಾ ಮೆತ್ತಿ ಮೇಲಿಂದ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ಲಂತೆ. ಸೀರಿಯಸ್. ಆಸ್ಪತ್ರೆಗೆ ಐಸಿಯುನಲ್ಲಿ ಇಟ್ಟಿದ್ದಾರಂತೆ. ನಾ ಹೋಗಬೇಕು.” ಪುನೀತನೊಡನೆ ಅವಳನ್ನು ಆಸ್ಪತ್ರೆಗೆ ಕಳುಹಿಸಿ ಅನ್ನಪೂರ್ಣ ಮತ್ತೆ ಕಳೆ ಕೀಳತೊಡಗಿದಳು. ಮನಸ್ಸು ಗಿರಗಿಟ್ಲೆ ಆಡುತ್ತಿತ್ತು. ಜೀವನವೆಂದರೆ ಹೀಗೇ ಅಲ್ಲವೇ? ಈ ಕ್ಷಣ ಇದ್ದ ಹಾಗೆ ಇನ್ನೊಂದು ಕ್ಷಣ ಇರುವುದಿಲ್ಲ. ತಲೆಗೆ ಪೆಟ್ಟು ಹೆಚ್ಚಾಗಿಯೇ ಬಿದ್ದಿದೆಯೋ ಏನೋ… ಚಿಕ್ಕ ಮಗುವನ್ನು ನೋಡಿಕೊಳ್ಳುವಂತೆ ನೋಡಿಕೊಂಡರೂ ಬಾನಗಡಿ ಮಾಡಿಕೊಂಡಳಲ್ಲ! ಜೀವಕ್ಕೆ ಅಪಾಯವಾದರೆ? ಬೇಸರಕ್ಕಿಂತ, ವಿಷಾದಕ್ಕಿಂತ ಒಳಗೊಳಗೆ ತಾನು ನಿರಾಳವಾಗುತ್ತಿದ್ದೇನಾ? ಎಲ್ಲ ಸಮಸ್ಯೆಗಳಿಗೂ ಅದು ಒಂದು ಪರಿಹಾರವಾಗಬಹುದಿತ್ತಲ್ಲ… ಅಂದರೆ ಮಧುಮಿತಾಳ ಸಾವನ್ನು ತಾನು ಬಯಸುತ್ತಿದ್ದೇನೆಯೇ? “ಅಯ್ಯೋ ದೇವರೇ! ಎಂಥ ಸಣ್ಣತನ!” ಕೈ ನಡುಗಿ ಕತ್ತಿ ಕೆಳಗೆ ಬಿತ್ತು. ತಾನು ಬೆಳೆಸಿರುವ ಹೂಗಿಡಗಳಿಗೋಸ್ಕರ ನಿಷ್ಕಾರುಣ್ಯವಾಗಿ ಕಳೆಗಿಡಗಳನ್ನು ಸವರಿ ಹಾಕುತ್ತಿದ್ದೇನಲ್ಲ… ಕಳೆಯಾದರೂ ಅದೂ ಗಿಡವೇ ಅಲ್ಲವೇ? ಧಡಕ್ಕನೆದ್ದು ನಿಂತಳು ಅನ್ನಪೂರ್ಣ. — ಡಾ ಸೌಮ್ಯ ಕೆ.ವಿ.ಯಲ್ಲಾಪುರ

“ಸರಯೂ ನನ್ನ ಮಗಳೇ..” ಸೌಮ್ಯ ಕೆ.ವಿ.ಅವರ ಸಣ್ಣ ಕಥೆ Read Post »

ಕಾವ್ಯಯಾನ

ಗಂಗಾ ಚಕ್ರಸಾಲಿ ಅವರ ಹೊಸ ಕವಿತೆ “ಧ್ಯಾನದ ಮಂದಿರ”

ಕಾವ್ಯ ಸಂಗಾತಿ ಗಂಗಾ ಚಕ್ರಸಾಲಿ “ಧ್ಯಾನದ ಮಂದಿರ” ಅವ್ವನಿಗೆ ಅಡುಗೆ ಮನೆಯೆಂದರೆಸ್ವತಂತ್ರವಾದ  ಧ್ಯಾನ ಮಂದಿರಮನದ ಭಿತ್ತಿಯೊಳಗಿನ ಬುತ್ತಿ ಬಿಚ್ಚಿಮೌನದಿ ಮಾತಿಗಿಳಿವ ಕೋಣೆಯದು | ವಿಧಧ ಬಣ್ಣದ ತರಕಾರಿಗಳಅವರಿಷ್ಟದ ಆಕಾರದಿ ಕತ್ತರಿಸಿಹುರಿದು, ಬೇಯಿಸಿ ಒಗ್ಗರಣೆ ಹಾಕುತ್ತಾಳೆ ಮಕ್ಕಳ ಕನಸುಗಳ ಘಮವ ಹರಡುತ್ತಾಳೆ | ರೊಟ್ಟಿಗಿಟ್ಟ ಹೆಸರು ಕೊತಕೊತನೆಕುದಿವಾಗ, ಮನದ ಕೋಪವಅದರೊಳಗೆ ಎಸೆಯುತ್ತಾಳೆಹಿಟ್ಟು ಕಲೆಸುವಾಗ ತಣಿಯುತ್ತಾಳೆ | ಅವರಿವರು ಹಂಗಿಸಿದ ಮಾತುಗಳನುರೊಟ್ಟಿ ಬಡಿತದ ಸದ್ದಿನಲಿಮೆಲ್ಲ ಮೆಲ್ಲನೆ ಕರಗಿಸುತ್ತಾಳೆತನ್ನ ತಾನೇ ಹಗುರಾಗುತ್ತಾಳೆ | ತವರು ಮನೆಯವರು, ಆತ್ಮೀಯರುಈಗಲೇ, ಎದೆಯೊಳಗೆ  ಬಂದಿಳಿಯುತ್ತಾರೆರೊಟ್ಟಿಯ ಒತ್ತಿ ಒತ್ತಿ ಉಬ್ಬಿಸುವಾಗತುಟಿಗಳಲಿ ನಗೆ ತಂದು ಕೊಳ್ಳುತ್ತಾಳೆ | ಹೌದು, ಮನೆಯೊಳಗೆ ಚೆಂದ ಚೆಂದಕೋಣೆಗಳಿದ್ದರೂ, ಬೇಡವಾದವು ಅವುಅಡುಗೆಮನೆಯ ಸಂತೆಯೊಳಗೆಧ್ಯಾನಿಸುವಿದೇ ಇಷ್ಟ ಅವಳಿಗೆ | ಗಂಗಾ ಚಕ್ರಸಾಲಿ

ಗಂಗಾ ಚಕ್ರಸಾಲಿ ಅವರ ಹೊಸ ಕವಿತೆ “ಧ್ಯಾನದ ಮಂದಿರ” Read Post »

ಕಾವ್ಯಯಾನ

ಸವಿತಾ ದೇಶಮುಖ ಅವರ ಕವಿತೆ “ತಂಪಾಯ್ತು ಮನ”

ಕಾವ್ಯ ಸಂಗಾತಿ ಸವಿತಾ ದೇಶಮುಖ “ತಂಪಾಯ್ತು ಮನ” ನಿಚ್ಚ ನೆಚ್ಚಿನ ನಿರಂತ ಕಾಯಕದೋಳುನಿರ್ವಂಚನೆಯ ನೀತಿ ನಿಯಮದೋಳುಮಗ್ನ ಮೈಮನ ಮರೆತ ಬಾಳಿನೋಳು !!೧!! ನಿತ್ಯ ಸತ್ಯದಿ ಜೀವಿಸುತ್ತಿರುವರಿಗೂಕಾಲುಂಟು, ಶಾಂತಿ ಬಾಳ್ವೆ ಬಾಳುವರಿಗೂಸತ್ಯದ ನಡೆಯ ನಂಬಿ ನಡೆಯುವರಿಗೂ!!೨!! ಬೆಲೆಯ ಕಟ್ಟಲುಂಟು,ಪ್ರಜ್ಞೆಯ ಪ್ರಕಾಶಕ್ರಿಯಾ ನಿಷ್ಠೆಯ ಪರಾಕಾಷ್ಟೆ ತುಂಬ ಕಳಶನಿಷ್ಕಲ್ಮಶ್ಯ.., ಆತ್ಮವೇ ನಿಧಿ  ಕೋಶ !!೩!! ಇದನರಿತವರ ನಡೆ ನುಡಿ ಆಚಾರ ಪರಮಪಥದತ್ತ ಬೆಳೆದು ನಿಂದ ವಿಚಾರ ಚರಮಮನವು  ಹರ್ಷ‌ತುಂಬಿದ ತುಳಕು- ಕರ್ಮ !!೪!! ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲಿಸುಳ್ಳೇನಲ್ಲ ….ಧರ್ಮ ಸಕ್ರಿಯೆಯಲಿನಿತ್ಯ ನಿರತರು ಸು ಪ್ರಶನ್ನ ದುಡಿಮೆಯಲಿ!!೫!!  ಇರುವವರ ಕಂಡ ಮನ ಕುಣಿದಾಡಿತ್ತಚರಿತೆಯ ಪರಿಪೂರ್ಣತೆ ಮಟ್ಟ ತುಂಬಿತ್ತನಯನ ಭಾಷ್ಪ ತನ್ನಿಂದ ತಾನೇ ಜಾರಿತ್ತ!!೬!! ಜಗವು ಬರೀ ವಂಚನೆ ದ್ರೋಹ ಕಂತೆನಲ್ಲಸೋತವರ ‌ ಸುಲಿಗೆ ನಡೆವ ಅಂಗಳವೆನಲ್ಲಬರೀ ಮೋಸ ಸಂಚಿನ ಮನೆಯಲ್ಲ !!೭!! ನೈಜ ಸಹಿಷ್ಣತೆ ಬಾಂಧವ್ಯದ ಜನರಲಿಜಾಗೃತಿಯ ಅರಿವುವಿನ ಧಾರೆ ಎರೆವರಲಿಇನ್ನೂ ಜೀವಂತವಾಗಿದೆಯಲ್ಲ… !!೮!! ಸತ್ಯ ಕಾಯಕದ ನಿಷ್ಠೆ ಇರುವ ಮನಗಳು  ಶುದ್ಧಾತ್ಮಗಳೊಂದಿಗೆ ಜಗವು ಸಾಗುತಿದೆಮುಂದೆಮುಂದೆ ಕಂಡಾತ್ಮವು ತಂಪಾಯತ!!೯!! ಮನ ತಂಪಾಯ್ತ  ನೋಡಾ…. ಸವಿತಾ ದೇಶಮುಖ

ಸವಿತಾ ದೇಶಮುಖ ಅವರ ಕವಿತೆ “ತಂಪಾಯ್ತು ಮನ” Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ-41 ವೃತ್ತಿ ವೃತ್ತಾಂತ ಸುಜಾತಾ ರವೀಶ್ ಹೀಗಿರುವಾಗಲೇ ನಮ್ಮ ನಿಗಮದಲ್ಲಿ ಚೆಕ್ ಕೊಡುವ ಸಂಪ್ರದಾಯವನ್ನು ಕೈ ಬಿಟ್ಟು ಇನ್ನು ಮುಂದೆ ನೇರ ಬ್ಯಾಂಕ್ ಗೆ ಹಣ ವರ್ಗಾಯಿಸುವ ಪದ್ಧತಿ ಬರಲಿದೆ ಎಂಬ ವಿಷಯ ತಿಳಿಯಿತು ಅದು ಸರ್ಕಾರದ ಆಜ್ಞಾನುಸಾರ ಕ್ರಿಯೆಗೆ ಏನ್ ಈ ಎಫ್ ಟಿ(NEFT) ಎಂದು ಕರೆಯುತ್ತಿದ್ದರು. ಏನಿದು ತಿಳಿಯೋಣ ಬನ್ನಿ ಎಲ್‌ಐಸಿಯಲ್ಲಿ (LIC of India) ನೆಫ್ಟ್ (NEFT – National Electronic Funds Transfer) ಸೌಲಭ್ಯವನ್ನು 2011ರಲ್ಲಿ ಅನುಷ್ಠಾನಗೊಳಿಸಲಾಯಿತು.​ಇದರ ಮೂಲಕ ಪಾಲಿಸಿದಾರರ ಮೆಚುರಿಟಿ (Maturity), ಸರೆಂಡರ್ (Surrender), ಸಾಲ (Loan), ಹಾಗೂ ಪೆನ್ಷನ್ ಅಥವಾ ಕ್ಲೈಮ್ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.​ಎಲ್‌ಐಸಿಯಲ್ಲಿ NEFT ನೋಂದಾಯಿಸುವ ಪ್ರಕ್ರಿಯೆಯ ಹಂತಗಳು:​೧. ಅಗತ್ಯ ದಾಖಲೆಗಳನ್ನು ಒಟ್ಟುಗೂಡಿಸುವುದು​NEFT ಮ್ಯಾಂಡೇಟ್ ಫಾರ್ಮ್ (NEFT Mandate Form): ಎಲ್‌ಐಸಿ ಶಾಖೆಯಲ್ಲಿ ಉಚಿತವಾಗಿ ಸಿಗುತ್ತದೆ ಅಥವಾ ಎಲ್‌ಐಸಿ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.​ರದ್ದಾದ ಚೆಕ್ (Cancelled Cheque): ಪಾಲಿಸಿದಾರರ ಹೆಸರು ಮುದ್ರಿತವಾಗಿರುವ ರದ್ದಾದ ಚೆಕ್ ಎಲೆ.(ಹೆಸರು ಮುದ್ರಿತವಿಲ್ಲದಿದ್ದರೆ, ಬ್ಯಾಂಕ್ ಪಾಸ್‌ಬುಕ್‌ನ ಮೊದಲ ಪುಟದ ಪ್ರತಿ ಅಥವಾ ಇತ್ತೀಚಿನ ಬ್ಯಾಂಕ್ સ્ટેಟ್‌ಮೆಂಟ್ ಪ್ರತಿಯನ್ನು ಸ್ವಯಂ ದೃಢೀಕರಿಸಿ ಸಲ್ಲಿಸಬೇಕು).​ಪಾನ್ ಕಾರ್ಡ್ (PAN Card): ಪ್ರತಿಯನ್ನು ಸ್ವಯಂ ದೃಢೀಕರಿಸಿ (Self-attested) ನೀಡಬೇಕು.​೨. ಫಾರ್ಮ್ ಭರ್ತಿ ಮಾಡುವುದು​ಫಾರ್ಮ್‌ನಲ್ಲಿ ಕೆಳಗಿನ ವಿವರಗಳನ್ನು ನಿಖರವಾಗಿ ಭರ್ತಿ ಮಾಡಬೇಕು:​ಪಾಲಿಸಿ ಸಂಖ್ಯೆ (Policy Number)​ಪಾಲಿಸಿದಾರರ ಹೆಸರು (Policyholder Name)​ಬ್ಯಾಂಕ್ ಹೆಸರು ಮತ್ತು ಶಾಖೆ (Bank Name & Branch)​ಬ್ಯಾಂಕ್ ಖಾತೆ ಸಂಖ್ಯೆ (Account Number)​ಖಾತೆಯ ಪ್ರಕಾರ (Savings / Current)​ಬ್ಯಾಂಕ್‌ ಐಎಫ್‌ಎಸ್‌ಸಿ ಕೋಡ್ (IFSC Code – 11 ಅಕ್ಷರಗಳ ಕೋಡ್)​ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆ​೩. ದಾಖಲೆಗಳನ್ನು ಸಲ್ಲಿಸುವುದು​ಭರ್ತಿ ಮಾಡಿದ NEFT ಫಾರ್ಮ್ ಹಾಗೂ ಲಗತ್ತಿಸಿದ ದಾಖಲೆಗಳಿಗೆ (ರದ್ದಾದ ಚೆಕ್ / ಪಾಸ್‌ಬುಕ್ ಪ್ರತಿ) ಸಹಿ ಮಾಡಿ, ನಿಮ್ಮ ಪಾಲಿಸಿ ಇರುವ ಎಲ್‌ಐಸಿ ಸೇವಾ ಶಾಖೆಗೆ (Home Branch) ಅಥವಾ ಯಾವುದೇ ಸಮೀಪದ ಎಲ್‌ಐಸಿ ಶಾಖೆಗೆ ಸಲ್ಲಿಸಬೇಕು.​೪. ದೃಢೀಕರಣ ಮತ್ತು ಸಕ್ರಿಯಗೊಳಿಸುವಿಕೆ (Verification & Activation)​ಎಲ್‌ಐಸಿ ಸಿಬ್ಬಂದಿ ನಿಮ್ಮ ಬ್ಯಾಂಕ್ ವಿವರಗಳನ್ನು ಸಿಸ್ಟಮ್‌ನಲ್ಲಿ ಅಪ್‌ಡೇಟ್ ಮಾಡುತ್ತಾರೆ.​ವಿವರಗಳು ಯಶಸ್ವಿಯಾಗಿ ನೋಂದಣಿಯಾದ ನಂತರ ನಿಮ್ಮ ಮೊಬೈಲ್‌ಗೆ/ಇಮೇಲ್‌‌ಗೆ ಮೆಸೇಜ್ ಬರುತ್ತದೆ.​ಗಮನಿಸಿ: ಆನ್‌ಲೈನ್ ಮೂಲಕ (LIC Customer Portal/App) ಕೂಡ ಪಾಲಿಸಿದಾರರು ಲಾಗಿನ್ হৈ ತಮ್ಮ ಪಾಲಿಸಿಗೆ NEFT ವಿವರಗಳನ್ನು ನೇರವಾಗಿ ಅಪ್‌ಲೋಡ್ ಮಾಡಬಹುದು. ಆದರೆ ಅದು ಇನ್ನೂ ಆರಂಭದ ದಿನಗಳಾಗಿದ್ದರಿಂದ ಬ್ಯಾಂಕಿಗೆ ನೇರವಾಗಿ ಪಾವತಿ ಮಾಡಬೇಕಾಗಿದ್ದು ಫಾಲಿಸಿದಾರರ ಐಚ್ಚಿಕ ಆಪ್ಷನ್ ಆಗಿದ್ದು ಚೆಕ್ ಮೂಲಕ ಸಹ ಪಾವತಿ ಮಾಡುತ್ತಿದ್ದವು. ಆದರೆ ಪಾಲಿಸಿದಾರರ ಬ್ಯಾಂಕ್ ಖಾತೆ ವಿವರಗಳನ್ನು ತೆಗೆದುಕೊಂಡು ರಿಜಿಸ್ಟರ್ ಮಾಡುವ ಕೆಲಸ ನೂರು ಪ್ರತಿಶತ ಆಗಲೇಬೇಕಿತ್ತು. ಆದರೆ ಬಹಳ ಜನ ಇನ್ನೂ ಬ್ಯಾಂಕ್ ವಿವರಗಳನ್ನು ಕೊಡಲು ಇಷ್ಟಪಡುತ್ತಿರಲಿಲ್ಲ. ಇದರಿಂದ ಮತ್ತೊಂದು ಅನುಕೂಲ ಆದದೆಂದರೆ ಆಗ ತಾನೇ ಹೆಚ್ಚಾಗಿ ಜನಪ್ರಿಯವಾಗುತ್ತಿದ್ದ ಮೊಬೈಲ್ ನಂಬರ್ ಗಳನ್ನು ನಮ್ಮ ದಾಖಲೆಗಳಲ್ಲಿ ಅಳವಡಿಸುವುದು ಇದರಿಂದಾಗಿ ನಾವು ಪಾಲಿಸಿದಾರರನ್ನು ಸಂಪರ್ಕಿಸಬೇಕಾದಾಗ ತುಂಬಾ ಅನುಕೂಲ ಆಗುತ್ತಿತ್ತು. ಇದರ ಜೊತೆಗೆ ಇ-ಮೇಲ್ ತೆಗೆದುಕೊಳ್ಳಬೇಕು ಎಂದು ಇದ್ದರೂ ಆಗ ಬಹಳಷ್ಟು ಜನ ಈಮೇಲ್ ಉಪಯೋಗ ಮಾಡದೆ ಇದುದರಿಂದ ಅದು ಬರಿ ನಾಮಕಾವಸ್ತೆ ಕಾಲಂ ಆಗಿದ್ದಂತೂ  ಸುಳ್ಳಲ್ಲ.  ಈ ಮಧ್ಯೆ ಶಾಖೆಯಲ್ಲಿ ಎಲ್ಲರ ವಿಭಾಗದ ಬದಲಾವಣೆಯ ವಿಷಯ ಕೇಳಿ ಬರತೊಡಗಿತ್ತು ಈಗಾಗಲೇ ನಾನು ಪಾಲಿಸಿ ಸೇವಾ ವಿಭಾಗಕ್ಕೆ ಬಂದು ಮೂರು ವರ್ಷಗಳು ಉರುಳಿ ಹೋಗಿದ್ದರಿಂದ ಮತ್ತೆ ಬೇರೆಯ ವಿಭಾಗದಲ್ಲಿ ಕೆಲಸ ಮಾಡಲು ಸಿದ್ದಳಾಗಬೇಕಿತ್ತು. ಆಗಿದ್ದ ಶಾಖಾಧಿಕಾರಿ ಅನುರಾಧ ಅವರು ಸಹ ಇನ್ನೇನು ವರ್ಗವಾಗಿ ಹೋಗುವುದರಿಂದ ಅದಕ್ಕೆ ಮೊದಲು ಶಾಖೆಗಳ ವರ್ಗಾವಣೆ ಮಾಡಿ ಹೋಗಲು ನಿರ್ಧರಿಸಿದ್ದರು.  ನಮಗೆಲ್ಲ ಮೂರು ವಿಭಾಗಗಳನ್ನು ಆಯ್ಕೆ ಮಾಡಿ ಅರ್ಜಿ ಕೊಡಲು ಹೇಳಲಾಯಿತು ಅದರಲ್ಲಿ ನಾನು ವಿಕ್ರಯ ವಿಭಾಗವನ್ನು ಸಹ ಸೇರಿಸಿದೆ ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ ಮಾತ್ರ ನಾನು ವಿಕ್ರಯ ವಿಭಾಗದಲ್ಲಿ ಕೆಲಸ ಮಾಡಿದ್ದು ಈಗ ಕಂಪ್ಯೂಟರಿಕರಣವಾದ ನಂತರ ಅಲ್ಲಿನ ಕೆಲಸ ಮಾಡಲು ಉತ್ಸುಕಳಾಗಿದ್ದೆ. ಅಲ್ಲಿಗೆ ಬೇರೆ ಯಾರು ಹೋಗಲು ಇಷ್ಟಪಡದೆ ಇದ್ದುದರಿಂದ ನನಗೆ ಅಲ್ಲಿಗೆ ವರ್ಗಾವಣೆ ಮಾಡಲು ಒಪ್ಪಿ ಆದೇಶವನ್ನು ಸಹ ಹಾಕಿ ಆಯಿತು. ಆ ಸಮಯಕ್ಕೆ ಶಾಖಾಧಿಕಾರಿಗಳ ವರ್ಗಾವಣೆ ಆದೇಶಗಳು ಆಗಿ ಅನುರಾಧರಿಗೆ ವರ್ಗಾವಣೆ ಸಿಕ್ಕಿತು. ಆದರೆ ನಮ್ಮ ಶಾಖೆಗೆ ವರ್ಗಾವಣೆ ಆಗಿಬಂದದ್ದು ನನ್ನ ತಂಗಿಯ ಪತಿ ಪ್ರಸನ್ನ ಅವರು. ವಿಕ್ರಯ ವಿಭಾಗ ನೇರವಾಗಿ ಶಾಖಾಧಿಕಾರಿಗಳ ಆಡಳಿತಕ್ಕೆ ಒಳಪಡುತ್ತದೆ ಮತ್ತು ಬೇರೆ ಯಾವ ಅಧಿಕಾರಿಗಳು ಅಲ್ಲಿ ಇರುವುದಿಲ್ಲ.‌ ಹಾಗಾಗಿ ನಾವು ಸಂಬಂಧಿಗಳು ಮಾತ್ರ ಆ ವಿಭಾಗದಲ್ಲಿ ಜವಾಬ್ದಾರರಾಗುವುದು ಸರಿ ಹೋಗುವುದಿಲ್ಲ ಎಂದು ಹೇಳಿ ಇನ್ನು ರಿಲೀವ್ ಆಗಿರದ ಅನುರಾಧ ಅವರೊಂದಿಗೆ ಮಾತನಾಡಿದರೆ, ಅವರು ಆ ವಿಷಯಕ್ಕೆ ಸ್ವಲ್ಪವೂ ಪ್ರಾಮುಖ್ಯತೆ ಕೊಡದೆ ಏನು ಆಗುವುದಿಲ್ಲ ಕೊಟ್ಟಿರುವುದನ್ನು ಮಾಡಿ ಎಂದು ಕಟುವಾಗಿ ಹೇಳಿದರು ಮತ್ತು ನಾನು ಬಲವಂತಿಸಿದಾಗ ಬೇರೆ ಯಾರಾದರೂ ಅಲ್ಲಿಗೆ ಬರುವುದಿದ್ದರೆ ಅವರೊಂದಿಗೆ ವಿನಿಮಯ ಮಾಡಿಕೊಳ್ಳಿ ಎಂದರು. ಆದರೆ ಜವಾಬ್ದಾರಿ ಹೆಚ್ಚು ಇರುತ್ತಿದ್ದ ಈ ವಿಭಾಗಕ್ಕೆ ಬಂದು ತಲೆ ಕೊಡಲು ಬೇರೆ ಯಾರು ಸಿದ್ದರಿರಲಿಲ್ಲ. ಹಾಗಾಗಿ ನಾನು ತೆಪ್ಪಗೆ ಅಲ್ಲಿಯೇ ಮುಂದುವರೆಯುವ ನಿರ್ಧಾರ ಮಾಡಬೇಕಾಯಿತು. ಈ ವೇಳೆಗೆ ನನ್ನ ತಂಗಿ ಗರ್ಭಿಣಿಯಾಗಿದ್ದು ಪೂರ ಬೆಡ್ ರೆಸ್ಟ್ ಹೇಳಿದ್ದರಿಂದ ಅವಳು ಕಚೇರಿಗೆ ಹೋಗುತ್ತಿರಲಿಲ್ಲ. ನಮ್ಮ ಶಾಖೆಯ ಬಳಿ ಸರಸ್ವತಿಪುರಂನಲ್ಲೇ ಅವರು ಮನೆ ಮಾಡಿದ್ದಾಯಿತು .ನನಗೂ ಆಫೀಸಿನಿಂದ ವಾಪಸ್ ಹೋಗುತ್ತಾ ಅವಳನ್ನು ಮಾತನಾಡಿಸಿಕೊಂಡು ಹೋಗಲು ಅಥವಾ ಅವರಲ್ಲಿಗೆ ಅವಶ್ಯಕತೆ ಇದ್ದಾಗ ಹೋಗಲು ಅನುಕೂಲ ಆಯಿತು. ಆಗ ಅಲ್ಲಿ ನನ್ನ ಜೊತೆ ಇದ್ದವರು ವೀಣಾ ಮತ್ತು ರಾಧಿಕಾ.  ಅದುವರೆಗೆ ಇದ್ದ ಪ್ರೋಗ್ರಾಮರ್ ರಾಮಚಂದ್ರ ಅವರು ವರ್ಗವಾಗಿ ರಾಜಲಕ್ಷ್ಮಿ ಅಲ್ಲಿಗೆ ಬಂದಿದ್ದಳು. ಅವಳು ಸಹ ತಮ್ಮದೇ ಯೂನಿಯನ್ ನವಳಾಗಿದ್ದು ಮೊದಲಿನಿಂದಲೂ ಗೆಳತಿ ಆದ್ದರಿಂದ ಕಂಪ್ಯೂಟರ್ಗೆ ಸಂಬಂಧಿಸಿದ ಕೆಲಸಗಳನ್ನು ಕಲಿಯಲು ಹಾಗೂ ಅವರಿಂದ ಮಾಡಿಸಿಕೊಳ್ಳಲು ತುಂಬಾ ಅನುಕೂಲವಾಗಿತ್ತು. ಈ ಮೊದಲೇ ಹೇಳಿದ ಬ್ಯಾಂಕ್ ದಾಖಲೆಗಳ ವಿವರ ಆಗ ಎಲ್ಲಾ ಪ್ರತಿನಿಧಿಗಳಿಗೂ ಕಡ್ಡಾಯ ಎಂದಾಗಿದ್ದರಿಂದ ಆಗ ಇದ್ದ ಎಲ್ಲಾ ಪ್ರತಿನಿಧಿಗಳ ಬ್ಯಾಂಕ್ ವಿವರಗಳನ್ನು ತೆಗೆದುಕೊಂಡು ಕಂಪ್ಯೂಟರ್ಗೆ ತುಂಬಿಸುವ ಒಂದು ದೊಡ್ಡ ಪ್ರಾಜೆಕ್ಟ್ ಆಗಿ ಅದನ್ನು ಒಂದೇ ಸಮ ಕುಳಿತು ಮಾಡಿದ್ದು ನನಗೆ ಈಗಲೂ ತೃಪ್ತಿ ಕೊಡುವ ವಿಷಯ. ಹಾಗೆಯೇ ಪ್ರತಿನಿಧಿಗಳಿಗೆ ಸಂಬಂಧಿಸಿದ ಕ್ಲಬ್ ರೋಸ್ಟರ್ ಕೆಲಸವು ಅಷ್ಟೇ, ಅದೇ ಮೊದಲ ಬಾರಿಗೆ ಸಂಪೂರ್ಣ ಕಂಪ್ಯೂಟರಿ ಕೃತ ಆಗಿದ್ದು ಅದನ್ನು ತುಂಬಾ ಯಶಸ್ವಿಯಾಗಿ ನಮ್ಮ ಶಾಖೆಯಲ್ಲಿಯೇ ಪ್ರಥಮ ಬಾರಿಗೆ ಮಾಡಿದ್ದು ತುಂಬಾ ಖುಷಿ ಕೊಟ್ಟಿತು. ನಾನು ಅಲ್ಲಿ ಕೆಲಸ ಮಾಡಿದ ಮೂರು ವರ್ಷಗಳಲ್ಲೂ ನಮ್ಮ ಶಾಖೆಯೇ ಮೊತ್ತ ಮೊದಲು ಈ ರೀತಿಯ ಕ್ಲಬ್ ರೋಸ್ಟರ್ ಗಳನ್ನು ಸಲ್ಲಿಸಿದ್ದು .‌ನಮ್ಮ ದೂರದ ಸಂಬಂಧಿ ಸ್ವಾಮಿ ಅವರು ಸಹ ವಿಭಾಗಿಯ ಕಚೇರಿಯ ವಿಕ್ರಯ ವಿಭಾಗದಲ್ಲೇ ಆಗ ಕೆಲಸ ಮಾಡುತ್ತಿದ್ದು ನಮಗೆ ಬೇಕಾದಾಗ ಮಾರ್ಗದರ್ಶನ ಹಾಗೂ ಸಹಕಾರ ನೀಡುತ್ತಿದ್ದರು. ಆಡಿಟ್ ಇನ್ಸ್ಪೆಕ್ಷನ್ ಎಲ್ಲದರಲ್ಲೂ ನಮ್ಮ ವಿಭಾಗ ತುಂಬಾ ಹೆಚ್ಚಿನ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಮತ್ತೊಂದು ವಿಶೇಷ. ವಿಭಾಗಿಯ ಮಟ್ಟದ ಕ್ಲಬ್ ಸಮಾವೇಶಗಳನ್ನು ಮೈಸೂರಿನಲ್ಲಿಯೇ  ದಾಸ ಪ್ರಕಾಶ್ ಹೋಟೆಲ್ನಲ್ಲಿಯೇ ಮಾಡುತ್ತಿದ್ದು ಆ ಮೂರು ವರುಷಗಳು ಅದನ್ನು ನಿರೂಪಿಸಿ ಅಲ್ಲಿ ಭಾಗವಹಿಸುವ ಅವಕಾಶ ದೊರೆತಿತ್ತು. ಇನ್ನೊಂದು ಮುಖ್ಯವಾದ ಕೆಲಸ ಅಂದರೆ ಪ್ರತಿನಿಧಿಗಳ ಆದಾಯ ತೆರಿಗೆ ವಿಷಯ. ಎಲ್ಲಾ ಪ್ರತಿನಿಧಿಗಳು ಪ್ಯಾನ್ ಕಾರ್ಡ್ ಹೊಂದಿರದಿದ್ದ ಕಾರಣ ಅವರಿಗೆ ಕಮಿಷನ್ ಬಟವಾಡೆಗೆ ನಿಲುಗಡೆ ಆಗಿತ್ತು ಅವರಿಗೆ ಹೇಳಿ ಪ್ಯಾನ್ ಕಾರ್ಡ್ ಮಾಡಿಸಿ ಆ ವಿವರಗಳನ್ನು ಕಂಪ್ಯೂಟರ್ನಲ್ಲಿ ದಾಖಲಿಸುವ ಕೆಲಸವು ನಾವಿದ್ದ ಸಮಯದಲ್ಲೇ ಆಗಿದ್ದು ಎಂದು ಹೇಳಿಕೊಳ್ಳಲು ಹೆಮ್ಮೆ. ಅಲ್ಲದೆ ಪ್ರತಿನಿಧಿಗಳ ತೆರಿಗೆ ಸಲ್ಲಿಸುವ ಹಾಗೂ ಅವರಿಗೆ ಫಾರ್ಮ್ 21 ಅನ್ನು ಕೊಡುವ ಈ ಎಲ್ಲಾ ಕೆಲಸಗಳನ್ನೂ ಕಲಿತು ಮಾಡಿದ್ದು ಖುಷಿ ಕೊಟ್ಟಿತ್ತು.  ಈ ಹಿಂದೆ ಸರಿಯಾದ ಪ್ಯಾನ್ಗಳು ಇಲ್ಲದೆ ಆದಾಯ ತೆರಿಗೆ ವಿಭಾಗದಿಂದ ಕೆಲವೊಂದು ನೋಟಿಸ್ ಗಳು ಜಾರಿಯಾಗಿತ್ತು . ಅಂತಹ ನೋಟಿಸ್ ಗಳನ್ನು ನೋಡಿ ಅವುಗಳಿಗೆ ಬೇಕಾದ ವಿವರಗಳನ್ನು ಹೊಂದಿಸಿ ಅದನ್ನು ಆದಾಯ ತೆರಿಗೆ ರಿಟರ್ನಸ್ ಮಾಡಿ ಕೊಡುವಂತಹ ಕಠಿಣತರ ಕೆಲಸವನ್ನು ಸಹ ಒಂದು ಏಜೆನ್ಸಿಯ ಮೂಲಕ ತುಂಬಾ ತೃಪ್ತಿಕರವಾಗಿ ಮಾಡಿ ಯಾವುದೇ ನೋಟಿಸ್ ರಾಕಿ ಇಲ್ಲದಂತೆ ನೋಡಿಕೊಂಡಿದ್ದೆ .ಹಾಗಾಗಿ ವಿಭಾಗಿಯ ಕಚೇರಿಯವರು ಸಹ ಬೇರೆ ಯಾವುದಾದರೂ ಶಾಖೆಗೆ ನೋಟಿಸ್ ಬಂದರೆ ನನ್ನ ಮಾರ್ಗದರ್ಶನ ತೆಗೆದುಕೊಳ್ಳಲು ಹೇಳುತ್ತಿದ್ದರು. ಆ ನಾನಿದ್ದ ಸಮಯದ ಅವಧಿಯಲ್ಲಿ ವೀಣಾ ಅವರಿಗೆ ಬೇರೆ ವಿಭಾಗಕ್ಕೆ ಬದಲಾವಣೆ ದೊರಕಿ ನಾಗಮ್ಮ ಅಲ್ಲಿಗೆ ಬಂದರು. ನಾನು ರಾಧಿಕಾ ಮತ್ತು ನಾಗಮ್ಮ ತುಂಬಾ ಒಳ್ಳೆಯ ಟೀಮ್ ಆಗಿ ವರ್ಕ್ ಮಾಡಿದೆವು. ಅಲ್ಲಿ ಏನೆಲ್ಲಾ ವಿಶೇಷ ಸಾಧನೆಗಳು ಆಯಿತು ಅದೆಲ್ಲ ಈ ಟೀಮ್ ವರ್ಕ್ ನ ಫಲವೇ. ನಾನು ಹೋದ ಸ್ವಲ್ಪ ದಿನ ಒಬ್ಬ ಉಪ  ಶಾಖಾಧಿಕಾರಿಗಳು ಇದ್ದಾರಾದರೂ ಅವರಿಗೆ ಬೆಂಗಳೂರಿಗೆ ವರ್ಗ ಸಿಕ್ಕಿದ ನಂತರ ಮತ್ತೆ ಯಾವ ಉಪಶಾಖಾಧಿಕಾರಿಗಳನ್ನು ನಮ್ಮ ಶಾಖೆಗೆ ಪೋಸ್ಟ್ ಮಾಡಲಿಲ್ಲ . ಹಾಗಾಗಿ ವಿಕ್ರಯ ವಿಭಾಗದ ಮುಖ್ಯಸ್ಥೆ ಆಗಿದ್ದ ನನ್ನ ಮೇಲೆ ಸ್ವಲ್ಪ ಹೆಚ್ಚಿನ ಜವಾಬ್ದಾರಿಯೇ ಎಂದು ಹೇಳಬಹುದು. ಆದರೆ ಎಲ್ಲರ ನೆರವು ಹಾಗೂ ಶಾಖಾಧಿಕಾರಿಗಳಾಗಿದ್ದ ನಮ್ಮ ಭಾವ ಪ್ರಸನ್ನ ಅವರ ಸಹಕಾರದಿಂದಾಗಿ ತೃಪ್ತಿಕರ ಸೇವೆ ಸಲ್ಲಿಸುವ ಅವಕಾಶ ದೊರೆಯಿತು. ಆ ವೇಳೆಗೆ ನಮ್ಮ ಎಲ್ಐಸಿನಲ್ಲಿ ಎರಡನೇ ಬಾರಿಗೆ ಮನೆ ಸಾಲ ತೆಗೆದುಕೊಳ್ಳುವ ಯೋಜನೆ ಬಂದಿತ್ತು. ಹಾಗಾಗಿ ನಾನು ಮೊದಲು ಇದ್ದ ಚಿಕ್ಕ ಸೈಟಿನ ಮನೆಯನ್ನು ಮಾರಿ ಆ ಹಣದೊಂದಿಗೆ ಎರಡನೆಯ ಬಾರಿಯ ಸಾಲ ಉಪಯೋಗಿಸಿಕೊಂಡು ಈಗಿರುವ ಮನೆಯನ್ನು ಕೊಂಡುಕೊಂಡಿದ್ದು. ಹೀಗೆ ಇದೇ ಸಮಯದಲ್ಲಿ ನನ್ನ ತಂಗಿಯ ಮಗ ಸುಧನ್ವ ಸಹ ಹುಟ್ಟಿದ್ದು. ನಂತರ ನನ್ನ ತಂಗಿಗೆ ಹುಣಸೂರು ಶಾಖೆಯಿಂದ ಮೈಸೂರಿನ ಶಾಖೆ 4ಕ್ಕೆ ವರ್ಗವಾಯಿತು. ಮೂರು ವರ್ಷ ನಮ್ಮ ಶಾಖೆಯಲ್ಲಿ ಕಾರ್ಯ ನಿರ್ವಹಿಸಿದ ನಂತರ ನನ್ನ ಭಾವ ಪ್ರಸನ್ನ ಅವರಿಗೆ ನಾಗಮಂಗಲ ಶಾಖೆಗೆ ವರ್ಗವಾಗಿತ್ತು.  ಆನಂತರ ಬಂದ ಶಾಖಾಧಿಕಾರಿಗಳೇ ರಾಜಶೇಖರ ಅವರು. ನಮ್ಮ ಶಾಖೆಯ ಪದ್ಧತಿಯಂತೆ ಮೂರು ವರ್ಷ ಮುಗಿದಿದ್ದರಿಂದ ವಿಕ್ರಯ ವಿಭಾಗದಿಂದ ನನಗೆ ಮತ್ತೆ ಪಾಲಿಸಿ ಸೇವಾ ವಿಭಾಗಕ್ಕೆ ಬದಲಾವಣೆ ದೊರಕಿತು. ಈ ಬಾರಿ ಮೊದಲು ಕೆಲಸ ಮಾಡುತ್ತಿದ್ದ ಸಿಂಗಲ್ ವಿಂಡೋ ದ ಬದಲು ಪಿ ಎಸ್ ಜನರಲ್ ಎಂದು ಬೇರೆ ಎಲ್ಲಾ ಇತರೆ ಕೆಲಸಗಳು ಇದ್ದ ವಿಭಾಗ ಅಲ್ಲಿ ನಾನು ಮುಖ್ಯವಾಗಿ ನೋಡಿಕೊಳ್ಳುತ್ತಿದ್ದು ಅಸೈನ್ಮೆಂಟ್ ನಾಮಿನೇಷನ್ ರಿವೈವಲ್ ಆಲ್ಟರೇಷನ್ ಬಾಂಡ್ ರಿಲೀಸ್ ಇತ್ಯಾದಿ ಕೆಲಸಗಳು.   ಈ ವೇಳೆಗೆ ಬ್ಯಾಂಕ್ ವಿವರಗಳ್ನ ಸಲ್ಲಿಸುವಿಕೆ ಕಡ್ಡಾಯವಾಗಿದ್ದು ಚೆಕ್ ನಲ್ಲಿ ಪಾವತಿ ಮಾಡುವುದು ಪೂರ್ತಿ ನಿಂತುಹೋಗಿತ್ತು ಹಾಗಾಗಿ ಬ್ಯಾಂಕ್ ವಿವರಗಳನ್ನು ಎಲ್ಲರೂ ಸಲ್ಲಿಸುತ್ತಿದ್ದರು ಹಾಗೂ ಅದು ಒಂದು ದೊಡ್ಡ ಪ್ರಮುಖ ಕೆಲಸವಾಗಿ ಬಿಟ್ಟಿತ್ತು ಆ ವೇಳೆಗೆ

Read Post »

ಇತರೆ

“ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಾಹಿತಿಗಳು ಆಯ್ಕೆಯಾಗಲಿ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಪದವಿ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ “ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಾಹಿತಿಗಳು ಆಯ್ಕೆಯಾಗಲಿ” ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದವನ್ನು ರಕ್ಷಿಸಲು ಮತ್ತು ಉತ್ತೇಜಿಸಲು ಸ್ಥಾಪಿತವಾಗಿರುವ ಒಂದು ಪ್ರಮುಖ ಹಾಗೂ ಸ್ವಾಯತ್ತ ಸಂಸ್ಥೆಯಾಗಿದೆ. ಇದರ ಪ್ರಧಾನ ಕಛೇರಿಯು ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿದೆ. ಇತಿಹಾಸ ಮತ್ತು ಹಿನ್ನೆಲೆ• ಸ್ಥಾಪನೆ: ಈ ಸಂಸ್ಥೆಯು ೧೯೧೫ರ ಮೇ ೫ ರಂದು ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಸ್ಥಾಪನೆಯಾಯಿತು. • ಮೂಲ ಹೆಸರು: ಆರಂಭದಲ್ಲಿ ಇದನ್ನು ‘ಕರ್ನಾಟಕ ಸಾಹಿತ್ಯ ಪರಿಷತ್ತು’ ಎಂದು ಕರೆಯಲಾಗುತ್ತಿತ್ತು. ನಂತರ ೧೯೩೫ರಲ್ಲಿ (ಬಳ್ಳಾರಿ ಸಮ್ಮೇಳನದಲ್ಲಿ) ಇದರ ಹೆಸರನ್ನು ‘ಕನ್ನಡ ಸಾಹಿತ್ಯ ಪರಿಷತ್ತು’ ಎಂದು ಮರುನಾಮಕರಣ ಮಾಡಲಾಯಿತು. • ಸಂಸ್ಥಾಪಕರು: ಮೈಸೂರಿನ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಪ್ರಮುಖ ಕಾರಣಕರ್ತರಾಗಿದ್ದರು. ಇವರೊಂದಿಗೆ ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಅವರಂತಹ ಮಹನೀಯರ ಸಹಕಾರ ಮತ್ತು ಹೆಚ್.ವಿ. ನಂಜುಂಡಯ್ಯ (ಮೊದಲ ಅಧ್ಯಕ್ಷರು) ಅವರ ಶ್ರಮದಿಂದಾಗಿ ಈ ಸಂಸ್ಥೆ ಅಸ್ತಿತ್ವಕ್ಕೆ ಬಂದಿತು. ಇಂತಹ ಐತಿಹಾಸಿಕ ಸಾಹಿತಿಕ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ವಿವಾದ ಅವ್ಯವಹಾರ ಬ್ರಷ್ಟಾಚಾರ ಅನೇಕ ಕೆಟ್ಟ ಕಾರ್ಯಗಳಿಗೆಹೆಸರುವಾಸಿಯಾಗಿದೆ.ಹಿಂದಿನ ಅಧ್ಯಕ್ಷರಾದ ಶ್ರೀ ಮಹೇಶ್ ಜೋಶಿ ಅವರು ಎಲ್ಲಾ ನಿಯಮ ಉಲ್ಲಂಘನೆ ಮಾಡಿ ತಮ್ಮದೇ ಆದ ರೀತಿಯಲ್ಲಿ ಅತ್ಯಂತ ದರ್ಪ ಸರ್ವಾಧಿಕಾರ ಮನೋಭೂಮಿಕೆಯಿಂದ ಅತ್ಯಂತ ಹೆಚ್ಚು ಹೆಚ್ಚು ಬಾಡಿ ನಲ್ಲಿ ವಿವಾದಕ್ಕೆ ಗುರಿಯಾಗಿ ಶತಮಾನದ  ಸಂಸ್ಥೆಗೆ ಕೆಟ್ಟ ಕಳಂಕವನ್ನು ತಂದರು. ಈಗ ಮತ್ತೆ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ ನಡೆಯಲಿದೆ. ಸಾಹಿತ್ಯ ಪ್ರೇಮಿಗಳು ಕನ್ನಡ ಸಾಹಿತ್ಯ ಸಂಘಟನೆ ನಾಡು ನುಡಿ ಭಾಷೆ ನೆಲ ಜಲಗಳ ಬಗ್ಗೆ ಕಾಳಜಿ ಇರುವ ಸಾಹಿತಿಗಳನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು. ನಿವೃತ್ತ ಅಧಿಕಾರಿಗಳು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪದವಿಯ ಮೇಲೆ ಕಣ್ಣಿಟ್ಟುಕುರ್ಚಿ ಪಡೆಯಲು ಹೊಂಚು ಮಾಡಿದ್ದಾರೆ ಕಾರಣ ಇದು ಸಾಹಿತಿಕ ಸಾಂಸ್ಕೃತಿಕ ಸಂಸ್ಥೆ ಇಲ್ಲಿ ರಾಜಕಾರಣ ಜಾತಿ ಧರ್ಮಗಳ ಲಾಬಿ ಮಾಡದೆಕರ್ನಾಟಕದ ಅಸ್ಮಿತೆಯನ್ನುಕಾಪಾಡುವ ಯೋಗ್ಯ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಕೋರಲಾಗಿದೆ. *ಡಾ ಶಶಿಕಾಂತ ಪಟ್ಟಣ 9552002338 ರಾಮದುರ್ಗ ಬೆಳಗಾವಿ ಜಿಲ್ಲೆ*

“ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಾಹಿತಿಗಳು ಆಯ್ಕೆಯಾಗಲಿ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಕಾವ್ಯಯಾನ

ವಾಣಿಶ್ರೀ ಎ ಹುಬ್ಬಳ್ಳಿ ಅವರ ಕವಿತೆ “ನೊಂದವಳು”

ಕಾವ್ಯ ಸಂಗಾತಿ ವಾಣಿಶ್ರೀ ಎ ಹುಬ್ಬಳ್ಳಿ “ನೊಂದವಳು” ಏನೋ ಸಾಧಿಸಬೇಕೆಂಬಹಠ ಹಂಬಲ ಚಪಲ,ಬಿಡುತ್ತಿಲ್ಲ ಈ ಜಗವೆಂಬ ವಿಷವರ್ತುಲ;ಪ್ರಯತ್ನಗಳಲ್ಲಾಗುತ್ತಿವೆ ವಿಫಲ,ಹೋಗಲಿ ಬಿಡು—ಏನು ಸಾಧಿಸಿ, ಏನು ಫಲ?ಈ ಮಾನವ ಜನ್ಮ ಬಹುದೊಡ್ಡದು, ಜೀವನ ಬಹು ಚಿಕ್ಕದು; ಕ್ರೂರ ಪ್ರಾಣಿಗಳಂತೆ ವರ್ತಿಸಲು ಬಾರದು,ಮಾನವೀಯತೆಯನ್ನು ಕಳೆದುಕೊಳ್ಳಲು ಆಗದು.ಏನೇನೋ ಮಾಡಬೇಕೆಂದು ಹೊರಟರೆ,“ಬೇಡ, ಬಾ ಹಿಂದಕ್ಕೆ” ಎಂಬ ಕರೆ;ಈ ಕರೆಯಿರುವುದು ತೆರೆಯ ಮರೆಹಾಕಿಹುದು ಮನಸ್ಸಿನ ಮೇಲೆ ಬರೆ. ಮೌನದಲಿ ಮರುಗುತ್ತಿರುವೆನೊಂದವಳು ನಾನು ವಾಣಿಶ್ರೀ ಎ ಹುಬ್ಬಳ್ಳಿ

ವಾಣಿಶ್ರೀ ಎ ಹುಬ್ಬಳ್ಳಿ ಅವರ ಕವಿತೆ “ನೊಂದವಳು” Read Post »

ಕಾವ್ಯಯಾನ

ಸುಮತಿ ನಿರಂಜನ ಅವರ ಕವಿತೆ “ಚರಿತ್ರೆಯ ಕಸದ ಬುಟ್ಟಿ”

ಕಾವ್ಯ ಸಂಗಾತಿ ಸುಮತಿ ನಿರಂಜನ “ಚರಿತ್ರೆಯ ಕಸದ ಬುಟ್ಟಿ” ಯಾವುದು ಸತ್ಯಯಾವುದು ಮಿಥ್ಯಯಾರು ಮಹಾತ್ಮರುಯಾರು ಪಾಪಾತ್ಮರು ?ಕಸದ ಬುಟ್ಟಿ ಕೆದಕಿದಾಗಸಿಕ್ಕ ಚೂರು ಚೂರುಒಟ್ಟು ಮಾಡಿಭೂತಗನ್ನಡಿ ಹಿಡಿದುನೋಡಿದಾಗ…ರಕ್ತಸಿಕ್ತದೇಹದ ತಲೆತೂಗಾಡುತ್ತಿದೆ ಮೇಲೆಅದು ಯಾರದೂ ಅಲ್ಲ –ಮುಂದೆ ಯಾರೋನಿರ್ಧರಿಸುವ‌ ತನಕ…ಇದ್ದದ್ದೇ ಕಚ್ಚಾಟಕೊಲೆ ಸುಲಿಗೆ ಹಿಂಸಾಚಾರ ತುಂಡು ಬಿಳಿ ಖಾದಿಯತುಂಬ ಕಲೆ ತೊಳೆಯಲುಹರಿವ ನೆತ್ತರ ಹೊಳೆ.. ಸು,ಮತಿ ನಿರಂಜನ

ಸುಮತಿ ನಿರಂಜನ ಅವರ ಕವಿತೆ “ಚರಿತ್ರೆಯ ಕಸದ ಬುಟ್ಟಿ” Read Post »

ಕಾವ್ಯಯಾನ

ಟಿ. ದಾದಾಪೀರ್ ತರೀಕೆರೆ ಅವರ ಕವಿತೆ “ನಾನು ಸಂಭ್ರಮಿಸುತ್ತೇನೆ”

ಕಾವ್ಯ ಸಂಗಾತಿ ಟಿ. ದಾದಾಪೀರ್ ತರೀಕೆರೆ “ನಾನು ಸಂಭ್ರಮಿಸುತ್ತೇನೆ” ಬರಗಾಲದ  ತತ್ತರಕ್ಕೆಹಸಿರು ಒಣಗಿ ಬಣ್ಣ ಕಳೆದುಕೊಳ್ಳುವ ಟೈಮಿನಲ್ಲಿನಿನ್ನ ಸೀರೆಯೊಳಗೆ ಬೆರೆತ ನಿನ್ನ ನಗುವಿನ ಬಣ್ಣಒಂದಷ್ಟು ನೆಮ್ಮದಿ, ಭರವಸೆ ಮೂಡಿಸುವಂತಿದ್ದರೆನಾನು ಸಂಭ್ರಮಿಸುತ್ತೇನೆ ಮಳೆ ಹೋಯ್ತು ಅನ್ನೊ ನೋವು ಆಕಾಶಕ್ಕೆ ಮುಖ ಮಾಡಿರುವಾಗದುತ್ತನೆ ಎದುರಾಗುವ ನಿನ್ನಕಂಡ ಕೂಡಲೆ ಮನಸು ತೇವ ಆಗುವುದಾದರೆನಾನು ಸಂಭ್ರಮಿಸುತ್ತೇನೆ ಕವಿತೆ ಯಾಗುವ ಜುಮುಕಿಗಳ ಝಲಕ್,ಬಳೆಗಳ ಮಧುರ ರಾಗಮಿಸುಕಾಡದ ನೆರಿಗೆಗಳ ಮೌನ ಸಲ್ಲಾಪಗಾಳಿ ಬೀಸುವ ಸೆರಗುಮೋಡಗಳ ಸೀಳಿ ಬರುವ ನಿನ್ನ ಉತ್ಸಾಹ ಕಂಡುಕ್ಯಾಲೆಂಡರ್ ನಲ್ಲಿ ಮಳೆ ನಕ್ಷತ್ರಗಳು ಕಾಣುವುದಾದರೆನಾನು ಸಂಭ್ರಮಿಸುತ್ತೇನೆ ಕಡುಗಪ್ಪು ಹೆರಳುಬೆಳ್ಳಿ ಮಿಂಚೊಂದು ಮೂಡುವಂತ ಮಲ್ಲಿಗೆ ಹೂ ಸರಕತ್ತರಿಗೆ ಸಿಕ್ಕಿ ಹೋಳಾದನಿನ್ನ ಹುಬ್ಬುಗಳುಕಾಮನ ಬಿಲ್ಲಿನ ಆಸೆಬಿತ್ತುವುದಾದರೆಬರಡು ನೆಲದ ಮೇಲೆ ನಿಂತು ನಿನ್ನ ಸಂಭ್ರಮಿಸುತ್ತೇನೆ ಟಿ. ದಾದಾಪೀರ್ ತರೀಕೆರೆ

ಟಿ. ದಾದಾಪೀರ್ ತರೀಕೆರೆ ಅವರ ಕವಿತೆ “ನಾನು ಸಂಭ್ರಮಿಸುತ್ತೇನೆ” Read Post »

ಪುಸ್ತಕ ಸಂಗಾತಿ

ತಮ್ಮಣ್ಣ ಬೀಗಾರ ಅವರ ಮಕ್ಕಳ ಕಾದಂಬರಿ “ಬಾವಲಿ ಗುಹೆ” ವಿಮರ್ಶಾಲೇಖನ, ಶ್ರೀಧರ ಗಸ್ತಿ

ಪುಸ್ತಕ ಸಂಗಾತಿ ಶ್ರೀಧರ ಗಸ್ತಿ ತಮ್ಮಣ್ಣ ಬೀಗಾರ ಅವರ ಮಕ್ಕಳ ಕಾದಂಬರಿ “ಬಾವಲಿ ಗುಹೆ” ವಿಮರ್ಶಾಲೇಖನ, ಸಾಹಸ, ರಹಸ್ಯ ಮತ್ತು ಪರಿಸರ ಕಾಳಜಿಯ ಕಾದಂಬರಿ ‘ಬಾವಲಿ ಗುಹೆ’ ಪುಸ್ತಕ: ಬಾವಲಿ ಗುಹೆಲೇಖಕ:ತಮ್ಮಣ್ಣ ಬೀಗಾರಪ್ರಕಾರ: ಮಕ್ಕಳ ಕಾದಂಬರಿಪ್ರಕಾಶನ: ಅಭಿನವ ಪ್ರಕಾಶನದರ:70ಪುಟಗಳು:76                ಮಕ್ಕಳಿಗಾಗಿ ಬರೆಯುವ ಕಾದಂಬರಿಯಲ್ಲಿ ಸರಳವಾದ ಕಥಾವಸ್ತುವಿನ ಜೊತೆಗೆ ಕುತೂಹಲ, ಸಾಹಸ, ರಹಸ್ಯ ಮತ್ತು ಮನರಂಜನೆ ಇರಬೇಕು. ಅದಕ್ಕಿಂತ ಮುಖ್ಯವಾಗಿ, ಕಥೆಯ ಮೂಲಕ ಮಕ್ಕಳಲ್ಲಿ ಬದುಕಿನ ಮೌಲ್ಯಗಳು, ಪರಿಸರ ಪ್ರಜ್ಞೆ, ಧೈರ್ಯ ಮತ್ತು ಸಮಸ್ಯೆಗಳನ್ನು ಎದುರಿಸುವ ಮನೋಭಾವ ಬೆಳೆಸುವಂತಿರಬೇಕು. ಈ ದೃಷ್ಟಿಯಿಂದ ಬಾವಲಿ ಗುಹೆ ಗಮನ ಸೆಳೆಯುವ ಮಕ್ಕಳ ಕಾದಂಬರಿಯಾಗಿದೆ.            ಕಾದಂಬರಿಯ ಆರಂಭದಿಂದಲೇ ಮಕ್ಕಳ ಕುತೂಹಲವನ್ನು ಕಥೆಯ ಪ್ರಮುಖ ಚಾಲಕಶಕ್ತಿಯನ್ನಾಗಿ ಮಾಡಲಾಗಿದೆ. ಕಥೆ ಮುಂದುವರಿದಂತೆ “ಮುಂದೇನು?” ಎಂಬ ಪ್ರಶ್ನೆ ಓದುಗರಲ್ಲಿ ಮೂಡುತ್ತಲೇ ಇರುತ್ತದೆ. ರಹಸ್ಯವನ್ನು ಒಂದೇ ಬಾರಿಗೆ ಬಿಚ್ಚಿಡದೆ ಹಂತಹಂತವಾಗಿ ತೆರೆದಿಡುವ ಮೂಲಕ ಲೇಖಕರು ಮಕ್ಕಳ ಓದುವ ಆಸಕ್ತಿಯನ್ನು ಕೊನೆಯವರೆಗೂ ಹಿಡಿದಿಟ್ಟುಕೊಂಡಿದ್ದಾರೆ. ರಹಸ್ಯವನ್ನು ಕಾಪಾಡಿಕೊಂಡು ಹೋಗಿರುವುದು ಕಾದಂಬರಿಯ ಪ್ರಮುಖ ಕಥನತಂತ್ರ.           ಕೃತಿಯ ಮತ್ತೊಂದು ಮುಖ್ಯ ಆಯಾಮ ಪರಿಸರ ಪ್ರಜ್ಞೆ. ಗಣಿಗಾರಿಕೆ ಇಂದಿನ ಸಂದರ್ಭದಲ್ಲಿ ಸಾಮಾನ್ಯ ಚಟುವಟಿಕೆಯಾಗಿ ಕಂಡರೂ, ಅದರ ಪರಿಣಾಮ ಪ್ರಕೃತಿ, ಪ್ರಾಣಿ-ಪಕ್ಷಿಗಳು ಮತ್ತು ಪರಿಸರದ ಮೇಲೆ ಗಂಭೀರವಾಗಿರಬಹುದು. ಈ ಸಮಸ್ಯೆಯನ್ನು ಕೇವಲ ಉಪದೇಶದ ರೂಪದಲ್ಲಿ ಹೇಳದೆ, ಮಕ್ಕಳನ್ನೇ ಪರಿಸರ ಸಂರಕ್ಷಣೆಯ ಹೋರಾಟದೊಳಗೆ ತಂದುಕೊಂಡಿರುವುದು ಕಾದಂಬರಿಯ ವಿಶೇಷತೆ. ಹೀಗಾಗಿ ಪರಿಸರ ಸಂರಕ್ಷಣೆ ಇಲ್ಲಿ ಒಂದು ಭಾಷಣದ ವಿಷಯವಾಗದೆ, ಮಕ್ಕಳು ಎದುರಿಸುವ ನೈಜ ಸಮಸ್ಯೆಯಾಗಿ ರೂಪುಗೊಂಡಿದೆ.           ಶಂಕರ್ ಮತ್ತು ಜಾನುವಿನಂತಹ ಮಕ್ಕಳ ಪಾತ್ರಗಳು ಕಥೆಗೆ ಜೀವ ತುಂಬುತ್ತವೆ. ತಮ್ಮ ಸುತ್ತಲಿನ ಸಮಸ್ಯೆಗಳನ್ನು ಗಮನಿಸುವುದು, ಪ್ರಶ್ನಿಸುವುದು, ಉತ್ತರಗಳನ್ನು ಹುಡುಕುವುದು ಮತ್ತು ಅಗತ್ಯವಿದ್ದಾಗ ಹಿರಿಯರಿಗೆ ನೆರವಾಗುವುದು ಇವರ ಗುಣಗಳು. ಮಕ್ಕಳನ್ನು ಕೇವಲ ಘಟನೆಗಳನ್ನು ನೋಡುವ ಪ್ರೇಕ್ಷಕರನ್ನಾಗಿ ಮಾಡದೆ, ಸಮಸ್ಯೆಯ ಪರಿಹಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರನ್ನಾಗಿ ಮಾಡಿರುವುದು ಗಮನಾರ್ಹ.           ಈ ಪಾತ್ರಗಳ ಮೂಲಕ ಧೈರ್ಯ, ಆತ್ಮವಿಶ್ವಾಸ, ಪರಸ್ಪರ ನಂಬಿಕೆ, ಒಗ್ಗಟ್ಟು ಮತ್ತು ಸಮಸ್ಯೆಗಳನ್ನು ಎದುರಿಸುವ ಮನೋಭಾವಗಳನ್ನು ಲೇಖಕರು ಮೂಡಿಸುತ್ತಾರೆ. ಜೊತೆಗೆ ಪ್ರಾಣಿ-ಪಕ್ಷಿಗಳ ಬಗ್ಗೆ ಪ್ರೀತಿ ಮತ್ತು ದಯೆಯಂತಹ ಮಾನವೀಯ ಗುಣಗಳನ್ನೂ ಕಥೆಯೊಳಗೆ ಸಹಜವಾಗಿ ಬೆರೆಸಿದ್ದಾರೆ.               ಗಣಿಗಾರಿಕೆಯನ್ನು ತಡೆಯಲು ಕಾರಣಗಳನ್ನು ಹುಡುಕುವ ಸಂದರ್ಭದಲ್ಲಿ ಮಕ್ಕಳಿಗೆ ಪುರಾತನ ಸ್ಮಾರಕವೊಂದರ ಸುಳಿವು ದೊರೆಯುತ್ತದೆ. ಆ ಸುಳಿವು ಅವರನ್ನು ಬಾವಲಿ ಗುಹೆಯತ್ತ ಕರೆದೊಯ್ಯುತ್ತದೆ. ಇಲ್ಲಿಂದ ಕಥೆಯ ಕುತೂಹಲ ಮತ್ತಷ್ಟು ಗಟ್ಟಿಯಾಗುತ್ತದೆ. ‘ಬಾವಲಿ ಗುಹೆ’ ಎಂಬ ಹೆಸರು ಕೇಳಿದ ತಕ್ಷಣ ಬಾವಲಿಗಳು ವಾಸಿಸುವ ಗುಹೆಯ ಚಿತ್ರವೇ ಓದುಗರ ಮನಸ್ಸಿನಲ್ಲಿ ಮೂಡುತ್ತದೆ. ಆದರೆ ಕಥೆ ಮುಂದುವರಿದಂತೆ ಆ ಹೆಸರಿನ ಹಿಂದೆ ಬೇರೆಯೇ ಒಂದು ಇತಿಹಾಸ ಅಡಗಿರುವುದು ತಿಳಿಯುತ್ತದೆ.              ಕೊನೆಯ ಹಂತದಲ್ಲಿ ‘ಬಾವಲಿ ಗುಹೆ’ ಎಂಬುದು ಬಾವಲಿಗಳ ಗುಹೆಯಲ್ಲ, ಬಾಹುಬಲಿಗೆ ಸಂಬಂಧಿಸಿದ ಪುರಾತನ ಸ್ಮಾರಕ ಎಂಬ ಸಂಗತಿ ಬಯಲಾಗುತ್ತದೆ. ಜನರ ರೂಢಿ ಮತ್ತು ಮಾತಿನ ಬಳಕೆಯಿಂದ ಆ ಸ್ಮಾರಕ ‘ಬಾವಲಿ ಗುಹೆ’ ಎಂಬ ಹೆಸರಿನಿಂದ ಪರಿಚಿತವಾಗಿರುವುದು ಕಥೆಗೆ ಕುತೂಹಲಕರ ತಿರುವನ್ನು ನೀಡುತ್ತದೆ. ಹೆಸರಿನ ಮೂಲಕವೇ ಓದುಗರಲ್ಲಿ ಒಂದು ಕಲ್ಪನೆ ಮೂಡಿಸಿ, ನಂತರ ಅದನ್ನು ಬದಲಿಸುವ ಕಥನತಂತ್ರ ಪರಿಣಾಮಕಾರಿಯಾಗಿದೆ.             ಈ ರಹಸ್ಯವನ್ನು ಲೇಖಕರು ಆರಂಭದಲ್ಲೇ ಬಿಚ್ಚಿಡದೆ ಕೊನೆಯವರೆಗೂ ಕಾಪಾಡಿಕೊಂಡಿರುವುದು ಕಾದಂಬರಿಯ ಪ್ರಮುಖ ಶಕ್ತಿ. ‘ಬಾವಲಿ ಗುಹೆ ಎಂದರೇನು?’, ‘ಅದರೊಳಗೆ ಏನಿದೆ?’, ‘ಮಕ್ಕಳಿಗೆ ಅದು ಹೇಗೆ ಸಿಕ್ಕಿತು?’, ‘ಅದಕ್ಕೂ ಗಣಿಗಾರಿಕೆಗೂ ಏನು ಸಂಬಂಧ?’ ಎಂಬ ಪ್ರಶ್ನೆಗಳು ಓದುಗರನ್ನು ಕಥೆಯೊಳಗೆ ಹಿಡಿದಿಡುತ್ತವೆ. ರಹಸ್ಯವನ್ನು ದೀರ್ಘಕಾಲ ಉಳಿಸಿಕೊಳ್ಳುವುದು ಕಥೆಯ ಬಲವಾದರೂ, ಅದರ ನಡುವೆ ಮಕ್ಕಳ ಸ್ವಂತ ಊಹೆ, ತಪ್ಪು ನಿರ್ಧಾರ ಮತ್ತು ಹುಡುಕಾಟಗಳಿಗೆ ಇನ್ನಷ್ಟು ಅವಕಾಶ ನೀಡಿದ್ದರೆ ಕಥೆಯ ಬಲ ಹೆಚ್ಚಬಹುದಾಗಿತ್ತು. ಕೆಲವು ಸಂದರ್ಭಗಳಲ್ಲಿ ರಹಸ್ಯದ ಅನ್ವೇಷಣೆಯಲ್ಲಿ ಮಕ್ಕಳಿಗಿಂತ ಕಥೆಯ ಘಟನೆಗಳೇ ಹೆಚ್ಚು ಮುನ್ನಡೆದಂತೆ ಅನಿಸಿದರೆ, ಮಕ್ಕಳ ಪಾತ್ರದ ಸಕ್ರಿಯತೆ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ.               ಅದೇ ರೀತಿ ಗಣಿಗಾರಿಕೆ ಮತ್ತು ಪುರಾತನ ಸ್ಮಾರಕ ಸಂರಕ್ಷಣೆಯಂತಹ ಗಂಭೀರ ವಿಚಾರಗಳನ್ನು ಮಕ್ಕಳ ಕಥೆಯೊಳಗೆ ತಂದಿರುವುದು ಪ್ರಶಂಸನೀಯ. ಆದರೆ ಇಂತಹ ವೈಚಾರಿಕ ವಿಷಯಗಳನ್ನು ಕೆಲವೆಡೆ ನೇರವಾದ ಸಂದೇಶದ ಬದಲು ಪಾತ್ರಗಳ ಅನುಭವ ಮತ್ತು ಸಂಘರ್ಷಗಳ ಮೂಲಕ ಇನ್ನಷ್ಟು ಸಹಜವಾಗಿ ವ್ಯಕ್ತಪಡಿಸಿದ್ದರೆ ಕೃತಿಯ ಕಲಾತ್ಮಕತೆ ಮತ್ತಷ್ಟು ಹೆಚ್ಚಬಹುದಿತ್ತು. ಮಕ್ಕಳು ಕಥೆಯಿಂದ ತಾವೇ ಸಂದೇಶವನ್ನು ಕಂಡುಕೊಳ್ಳುವ ಅವಕಾಶ ನೀಡುವುದು ಮಕ್ಕಳ ಸಾಹಿತ್ಯಕ್ಕೆ ಇನ್ನಷ್ಟು ಪರಿಣಾಮಕಾರಿ.             ಕಾದಂಬರಿಯ ತಿರುಳು ಕೇವಲ ಒಂದು ಪುರಾತನ ಸ್ಮಾರಕವನ್ನು ಪತ್ತೆಹಚ್ಚುವುದಲ್ಲ. ಪ್ರಕೃತಿ, ಪರಿಸರ ಮತ್ತು ಪಾರಂಪರಿಕ ಸ್ಮಾರಕಗಳನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂಬ ಅರಿವನ್ನು ಮೂಡಿಸುವುದೇ ಇದರ ಮುಖ್ಯ ಆಶಯ. ದೊಡ್ಡವರು ಮಾತ್ರ ಸಮಾಜದಲ್ಲಿ ಬದಲಾವಣೆ ತರಬಲ್ಲರು ಎಂಬ ಸಾಮಾನ್ಯ ಕಲ್ಪನೆಯನ್ನು ಪ್ರಶ್ನಿಸಿ, ಮಕ್ಕಳಿಗೂ ಬದಲಾವಣೆಯ ಪ್ರಕ್ರಿಯೆಯಲ್ಲಿ ತಮ್ಮದೇ ಆದ ಪಾತ್ರವಿದೆ ಎಂಬ ವಿಶ್ವಾಸವನ್ನು ಕೃತಿ ಮೂಡಿಸುತ್ತದೆ.            ಕೃತಿಯ ಮತ್ತೊಂದು ಬಲ ಮಕ್ಕಳನ್ನು ಸಮಸ್ಯೆಯ ಎದುರು ನಿಲ್ಲಿಸಿರುವ ರೀತಿ. ಅವರು ಹೆದರಿ ಹಿಂದೆ ಸರಿಯುವುದಿಲ್ಲ; ಬದಲಾಗಿ ಪ್ರಶ್ನಿಸುತ್ತಾರೆ, ಹುಡುಕುತ್ತಾರೆ, ಅಪಾಯಗಳನ್ನು ಎದುರಿಸುತ್ತಾರೆ ಮತ್ತು ಒಟ್ಟಾಗಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಈ ಮೂಲಕ ಸಾಹಸಪ್ರಜ್ಞೆಯ ಜೊತೆಗೆ ತಂಡದ ಕೆಲಸ ಮತ್ತು ಸಹಕಾರದ ಮಹತ್ವವೂ ಮೂಡಿಬರುತ್ತದೆ.         ಆದರೆ ಮಕ್ಕಳ ಪಾತ್ರಗಳಿಗೆ ಇನ್ನಷ್ಟು ಆಂತರಿಕ ಬೆಳವಣಿಗೆ ನೀಡುವ ಅವಕಾಶವೂ ಇತ್ತು. ಶಂಕರ್ ಮತ್ತು ಜಾನುವಿನ ಧೈರ್ಯ ಹಾಗೂ ಕಾರ್ಯಚಟುವಟಿಕೆಗಳ ಜೊತೆಗೆ ಅವರೊಳಗೆ ಮೂಡುವ ಭಯ, ಗೊಂದಲ, ಅನುಮಾನ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಂದರ್ಭಗಳನ್ನು ಇನ್ನಷ್ಟು ಆಳವಾಗಿ ಚಿತ್ರಿಸಿದ್ದರೆ ಪಾತ್ರಗಳು ಇನ್ನಷ್ಟು ಜೀವಂತವಾಗಬಹುದಾಗಿತ್ತು. ಹಾಗೆಯೇ ಕಥೆಯ ಕೆಲವು ಘಟನೆಗಳನ್ನು ಸ್ವಲ್ಪ ಹೆಚ್ಚು ದೃಶ್ಯಾತ್ಮಕವಾಗಿ ಕಟ್ಟಿಕೊಟ್ಟಿದ್ದರೆ ಸಾಹಸ ಮತ್ತು ರಹಸ್ಯದ ಅನುಭವ ಓದುಗರಿಗೆ ಇನ್ನಷ್ಟು ತೀವ್ರವಾಗಿ ತಲುಪುತ್ತಿತ್ತು. ಭಾಷೆ ಮತ್ತು ಕಥನದ ದೃಷ್ಟಿಯಿಂದ ಮಕ್ಕಳಿಗೆ ಸುಲಭವಾಗಿ ಓದಿಕೊಳ್ಳಬಹುದಾದ ಸರಳತೆ ಕೃತಿಯಲ್ಲಿದೆ. ಕಠಿಣವಾದ ಪರಿಸರ ಮತ್ತು ಇತಿಹಾಸದ ವಿಚಾರಗಳನ್ನು ಮಕ್ಕಳಿಗೆ ಅರ್ಥವಾಗುವ ಕಥೆಯ ರೂಪದಲ್ಲಿ ನೀಡಿರುವುದು ಲೇಖಕರ ಯಶಸ್ಸು. ರಹಸ್ಯದ ಎಳೆ ಮತ್ತು ಸಾಹಸದ ಅಂಶಗಳು ಓದಿನ ವೇಗವನ್ನು ಹೆಚ್ಚಿಸುತ್ತವೆ.             ಒಟ್ಟಿನಲ್ಲಿ ಬಾವಲಿ ಗುಹೆ ಕೇವಲ ಮನರಂಜನೆ ನೀಡುವ ಮಕ್ಕಳ ಕಾದಂಬರಿಯಲ್ಲ. ಕುತೂಹಲ, ಸಾಹಸ, ಪರಿಸರ ಪ್ರಜ್ಞೆ ಮತ್ತು ಪಾರಂಪರಿಕ ಪರಂಪರೆಯ ಸಂರಕ್ಷಣೆಯನ್ನು ಒಂದೇ ಕಥಾವಸ್ತುವಿನೊಳಗೆ ಬೆಸೆಯುವ ಪ್ರಯತ್ನ ಇಲ್ಲಿ ಕಾಣುತ್ತದೆ. ಕಾದಂಬರಿಯ ದೊಡ್ಡ ಬಲ ಅದರ ರಹಸ್ಯಮಯ ಕಥಾವಸ್ತು ಮತ್ತು ಮಕ್ಕಳನ್ನು ಸಕ್ರಿಯ ಪಾತ್ರಗಳನ್ನಾಗಿ ಮಾಡಿರುವುದರಲ್ಲಿ ಇದೆ. ಅದರ ಮಿತಿಗಳು ಕೆಲವು ಕಡೆ ಸಂದೇಶದ ನೇರ ನಿರೂಪಣೆ, ಮಕ್ಕಳ ಪಾತ್ರಗಳ ಇನ್ನಷ್ಟು ಆಳವಾದ ಮನೋವಿಕಾಸಕ್ಕೆ ಇರುವ ಅವಕಾಶ ಮತ್ತು ಕೆಲವು ಘಟನೆಗಳನ್ನು ಇನ್ನಷ್ಟು ವಿಸ್ತರಿಸಬಹುದಾದ ಸಾಧ್ಯತೆಯಲ್ಲಿ ಕಾಣುತ್ತವೆ.           ಆದರೂ ಮಕ್ಕಳಿಗೆ ಒಂದು ಕಥೆಯನ್ನು ಓದಿಸುತ್ತಲೇ ಅವರ ಸುತ್ತಲಿನ ಪ್ರಕೃತಿಯನ್ನು ಹೊಸ ದಿಕ್ಕಿನಲ್ಲಿ ನೋಡುವಂತೆ ಮಾಡುವುದು, ಪ್ರಶ್ನಿಸುವಂತೆ ಮಾಡುವುದು ಮತ್ತು ಅದನ್ನು ಉಳಿಸುವ ಜವಾಬ್ದಾರಿಯ ಅರಿವು ಮೂಡಿಸುವುದು ಕೃತಿಯ ಮಹತ್ವದ ಸಾಧನೆ.ಮಕ್ಕಳು ರಹಸ್ಯವನ್ನು ಬಿಚ್ಚಿಡುವಷ್ಟೇ ಅಲ್ಲ; ಆ ರಹಸ್ಯದ ಮೂಲಕ ತಮ್ಮ ಸುತ್ತಲಿನ ಪ್ರಕೃತಿ ಮತ್ತು ಪರಂಪರೆಯನ್ನು ಕಾಪಾಡುವ ಜವಾಬ್ದಾರಿಯನ್ನೂ ಅರಿಯುತ್ತಾರೆ. ಕುತೂಹಲದಿಂದ ಆರಂಭವಾಗಿ ಪರಿಸರ ಪ್ರಜ್ಞೆಯಲ್ಲಿ ಕೊನೆಗೊಳ್ಳುವ ಈ ಪಯಣವೇ ‘ಬಾವಲಿ ಗುಹೆ’ಯ ನಿಜವಾದ ಗೆಲುವು. ಶ್ರೀಧರ ಗಸ್ತಿ

ತಮ್ಮಣ್ಣ ಬೀಗಾರ ಅವರ ಮಕ್ಕಳ ಕಾದಂಬರಿ “ಬಾವಲಿ ಗುಹೆ” ವಿಮರ್ಶಾಲೇಖನ, ಶ್ರೀಧರ ಗಸ್ತಿ Read Post »

You cannot copy content of this page

Scroll to Top