ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ. ದಾನಮ್ಮ ಝಳಕಿ ಅವರ ಕವಿತೆ “ಹೋರಾಡಿ ಸೋತೆ”

ಕಾವ್ಯ ಸಂಗಾತಿ ಡಾ. ದಾನಮ್ಮ ಝಳಕಿ “ಹೋರಾಡಿ ಸೋತೆ” ಹೃದಯದೊಳಗೆ ಸಾವಿರ ಕನಸು ಹೊತ್ತು,ನೋವಿನ ಮುಳ್ಳುಗಳ ಹಾದಿಯಲಿ ನಡೆದು,ಕಣ್ಣೀರ ಹನಿಗಳ ಮೌನದಲಿ ಕರಗಿ,ನನ್ನವರಿಗಾಗಿಯೇ ನನ್ನನ್ನೇ ಮರೆತು ಬಿರುಗಾಳಿಯ ನಡುವೆ ದೀಪವಾಗಿ ಉರಿದೆ, ಬಿದ್ದಾಗಲೆಲ್ಲ ಮತ್ತೆ ಎದ್ದು ನಿಂತೆ,ಸೋಲಿನ ನೆರಳಿಗೂ ಸವಾಲೆಸೆದೆ,ಗೆಲುವಿನ ಕನಸಿಗೆ ಆಯುಷ್ಯವ ಕೊಟ್ಟೆ. ಆದರೆ ಕೊನೆಗೆ ಉಳಿದದ್ದೇನು?ಸುಟ್ಟ ಕನಸುಗಳ ಬೂದಿಯ ಹೊರತುನಂಬಿದ ಕೈಗಳೇ ಕೈಬಿಟ್ಟ ಮೇಲೆ,ಯಾರಲ್ಲಿ ಹುಡುಕಲಿ ಸಾಂತ್ವನದ ಬೆಳಕು? ನೋವು ನುಂಗಿ ನಗುವುದ ಕಲಿತೆ,ಒಳಗಿನ ಬಿರುಗಾಳಿಗೆ ಮೌನದ ಹೊದಿಕೆ ಹೊದೆದೆ,ನನ್ನ ಕಣ್ಣೀರ ಕಥೆಯ ಕೇಳುವವರಿಲ್ಲದೆ,ನಾನೇ ನನಗೆ ಸಮಾಧಾನ ಹೇಳಿಕೊಂಡೆ. ಗೆಲ್ಲಲೇಬೇಕೆಂದು ಹೋರಾಡಿದೆ ನಾನು,ಸೋಲಬಾರದೆಂದು ಎಲ್ಲವನ್ನೂ ಸಹಿಸಿದೆ,ಜಗತ್ತಿನ ಕಣ್ಣಿಗೆ ಸೋತವಳಾದರೂ,ನನ್ನವರಿಗಾಗಿ ನನ್ನ ಬದುಕನ್ನೇ ತೆತ್ತೆ ಇಂದು ದಣಿದಿವೆ ಹೆಜ್ಜೆಗಳು, ಮೌನವಾಗಿವೆ ಮನದ ಮಾತುಗಳು,ಕನಸುಗಳೆಲ್ಲ ಕಣ್ಣೀರಾದರೂ,ಆತ್ಮಗೌರವ ಇನ್ನೂ ತಲೆಬಾಗಿಲ್ಲ ಹೌದು, ಹೋರಾಡಿ ಸೋತೆ ನಾನು,ಆದರೆ ಸೋಲಿಗೆ ಶರಣಾಗಿ ಅಲ್ಲ;ನನ್ನವರ ಸಂತೋಷಕ್ಕಾಗಿ ಹೋರಾಡಿ ಸೋತೆ,ನನ್ನ ನೋವನ್ನು ಯಾರಿಗೂ ಕಾಣದಂತೆ ಮುಚ್ಚಿ ಸೋತೆ ಒಂದು ದಿನ ಈ ಮೌನವೇ ಮಾತಾಡಬಹುದು,ಈ ಕಣ್ಣೀರೇ ನನ್ನ ಕಥೆ ಹೇಳಬಹುದು,ಆಗ ಜಗತ್ತಿಗೆ ಅರ್ಥವಾಗಬಹುದುನಾನು ಸೋತದ್ದು ಬದುಕಿನಲ್ಲಿ ಅಲ್ಲ,  ನನ್ನವರಿಗಾಗಿ ಬದುಕುತ್ತಾ ನನ್ನನ್ನೇ ಕಳೆದುಕೊಂಡೆ ಡಾ. ದಾನಮ್ಮ ಝಳಕಿ

ಡಾ. ದಾನಮ್ಮ ಝಳಕಿ ಅವರ ಕವಿತೆ “ಹೋರಾಡಿ ಸೋತೆ” Read Post »

ನಿಮ್ಮೊಂದಿಗೆ

ಕಿರಣ ಗಣಾಚಾರಿ ಅವರ ಸಣ್ಣ ಕಥೆ “ದಸರಾಗೊಂಬೆ”

ಕಥಾ ಸಂಗಾತಿ ಕಿರಣ ಗಣಾಚಾರಿ ಅವರ ಸಣ್ಣ ಕಥೆ “ದಸರಾಗೊಂಬೆ” ಸಣ್ಣ ಕಥೆ: ದಸರಾ  ಗೊಂಬೆ    “ತ್ರಿವೇಣಿ ಯಾವಾಗವ್ವ ನೀನು ಅಡ್ಡಾಡೋದು?.  ಮೈಸೂರು ದಸರಾ ಬಹಳ ದೊಡ್ಡದು, ಒಂದ್ಸಾರಿ ಆದರೂ ನೋಡಿ ಬರೋಣ ಬಾರೆ” ಎಂದು ಅಪ್ಪ-ಅವ್ವ ಕರೆದಾಗೊಮ್ಮೆ ನಾನು ಸಾಲಿ ಕಲಿತು ದೊಡ್ಡೋಳಾಗಿ ನೌಕರಿ ಹಿಡಿದ ಮೇಲೇನೆ… ನನ್ನ ರೊಕ್ಕದಲ್ಲಿ ಅಡ್ಡಾಡತೀನಿ .ಬಹಳಷ್ಟು ಮೈಸೂರ ದಸರಾ ಗೊಂಬೆಗಳನ್ನು ನನ್ನ ರೊಕ್ಕದಲ್ಲೇ ತಗೋತೀನಿ. ನನ್ನ ಸಾಲೀ ಕಲಿಸ್ತೀರಿ ಅಲ್ಲವಾ ನೀವು ಅಷ್ಟ ಸಾಕು ನನಗ ಅನ್ನೋ ಸ್ವಾಭಿಮಾನದ ಭಾಷಣ ಕೇಳಿ ಕೇಳಿ ಅವರಿಗೂ ಸಾಕಾಗಿ ಹೋಗಿತ್ತು. ನನಗೂ ನನ್ನ ಸ್ವಾಭಿಮಾನದ ಪಿತ್ತ ನೆತ್ತಿಗೇರುತ್ತಲೇ ಇತ್ತು.      ಬೇಗನೆ ನೌಕರಿ ಹಿಡಿದು ಅಲ್ಲಿ ಇಲ್ಲಿ ವರ್ಗಾವಣೆಯಾಗುತ್ತ ಅಪ್ಪನ ನೆರವಿನಿಂದ, ಕೆಲವೊಮ್ಮೆ ಒಬ್ಬಂಟಿಗಳಾಗಿ ಕಾಲಕಳೆಯುತ್ತ ಊರಿನ ಹತ್ತಿರ ವರ್ಗವಾಗಿ ಬರಲು ನಾಲೈದು ವರ್ಷಗಳೇ ಕಳೆದವು. ಆಗಾಗ ಮೈಸೂರು ದಸರಾ ಉತ್ಸವದಲ್ಲಿ ಸೋಗು ಹಾಕಿರುವ ದೊಡ್ಡ ದೊಡ್ಡ ಗೊಂಬೆಗಳು ,ಆಟಿಕೆ ಗೊಂಬೆಗಳು,ನವದುರ್ಗೆಯರ ನಾನಾ ಅವತಾರದ ಗೊಂಬೆಗಳು ಕನಸ್ಸಲ್ಲಿ ಮೂಡಿ ಮರೆಯಾಗುತ್ತ ಕುಟುಂಬ ಸಮೇತರಾಗಿ ನೋಡಬೇಕೆಂಬ ಆಸೆ ಚಿಗುರಿಸುತ್ತಿದ್ದವು. ಹುಟ್ಟಿದಾಗಿಂದ ನೋಡದೆ ಸುಪ್ತವಾಗಿದ್ದ ಆಸೆ ಎಂದು ನೆರವೇರುವುದೋ.    ಅದರೆ ಗಟ್ಟಿಯಾಗಿದ್ದ ತಂದೆ ಅದ್ಯಾವುದೋ ದಾಯಾದಿ ಕಲಹದ ವಿಷಯವೊಂದನ್ನು ಮನಸ್ಸಿಗೆ ಹಚ್ಚಿಕೊಂಡು ಅನಾರೋಗ್ಯಕ್ಕೆ ಒಳಗಾಗಿ ದಿನೇ ದಿನೇ ಕೃಶವಾಗುತ್ತ ಹಾಸಿಗೆ ಹಿಡಿದು ತೀರಿಹೋದರು.      ಕೌಟುಂಬಿಕ ಜವಾವ್ದಾರಿ ಹೊತ್ತ ತ್ರಿವೇಣಿ ಇರಲೊಂದು ಬೆಚ್ಚನೆಯ ಮನೆಕಟ್ಟುವ ಸಾಹಸಕ್ಕೆ ಕೈಹಾಕಿದಳು. ದಸರಾ ಗೊಂಬೆಗಳು ಕನಸ್ಸಲ್ಲಿ ಅಷ್ಟೇ ಅಲ್ಲದೆ ಮನಸ್ಸಲ್ಲೂ ಕೂಡ ಮೂಡದೆ ಮರೆಯೆಲ್ಲೆಲ್ಲೋ ಸರಿದು ನಿಂತವು. ದಸರಾ ಗೊಂಬೆಯಂತೆ ತೆಳ್ಳಗೆ ಬೆಳ್ಳಗೆ ಸ್ಪುರದ್ರೂಪಿಯಾದ ತ್ರಿವೇಣಿಗೆ ತನ್ನ ನೌಕರಿ, ಮನೆ ಹಾಗೂ ಕೌಟುಂಬಿಕ ಜಂಜಡಗಳಲ್ಲಿ ಮುಳುಗಿ ಆಗಲೇ ಮೂವತ್ತು ವರ್ಷದವಳಾಗಿ ಅಲ್ಲಲ್ಲಿ ಬಿಳಿಗೂದಲು ಮೂಡತೊಡಗಿದವು. ಮನೆಯವರು ಹಾಗೂ ಹೀಗೂ ಒತ್ತಾಯಿಸಿ ಮದುವೆಗೆ ಒಪ್ಪಿಸಿದರು.       ಅಂತೂ ಹೆಣ್ಣು ದಸರಾ ಗೊಂಬೆಯಂತ ತ್ರಿವೇಣಿಗೆ ಬ್ಯಾಂಕ ಮ್ಯಾನೇಜರ ಹುದ್ದೆಯಲ್ಲಿದ್ದ ಸ್ಪುರದ್ರೂಪ ಗಂಡು ದಸರಾ ಗೊಂಬೆಯಂತಹ ವರ ಸಿಕ್ಕು ಮದುವೆಯೂ ಆಯಿತು. ಹೃದ್ರಾಬಾದಿನಲ್ಲಿದ್ದ ಗಂಡ ತಿಂಗಳಿಗೊಮ್ಮೆ ಮಾತ್ರ ಊರಿಗೆ ಬರುತ್ತಿದ್ದ. ತ್ರಿವೇಣಿ ನೌಕರಿ ಮಾಡುವ ಜಿಲ್ಲೆಗೆ ವರ್ಗವಾಗದೆ ಒದ್ದಾಡುತ್ತಿದ್ದ. ಎರಡು ಮುದ್ದಾದ ಮಕ್ಕಳು ಏಳೆಂಟು ವರ್ಷದ್ದಾಗಿದ್ದವು. “ಮೈಸೂರು ದಸರಾ ಹೇಗಿರುತ್ತದಮ್ಮ! ಅಕ್ಟೋಬರ್ ರಜೆಯಲ್ಲಿ ಕರೆದುಕೊಂಡು ಹೋಗಮ್ಮ” ಎಂದಾಗ. ತನ್ನಪ್ಪ ತಟ್ಟನೆ ನೆನಪಾದ. ದಸರೆ ನೋಡಲು ಅಪ್ಪ ಅದೆಷ್ಟು ಕರೆದರೂ ಹೋಗದ ನನ್ನ ಸ್ವಾಭಿಮಾನ ಇಂದು ಗಂಡನ ಬಿಡುವಿಗಾಗಿ, ಆತನ ರಜೆಗಾಗಿ, ಅದಕ್ಕೂ ಮೀರಿ ಅತನಿಲ್ಲದೆ ಹೋಗದಂತಹ ಸ್ಥಿತಿ. ಒಂದು ವೇಳೆ ಹೋಗಬೇಕೆಂದರೂ ಆತನ ಅನುಮತಿಗೆ  ಕಾದು ಕಾದು ಸುಸ್ತಾದ ಅಸಹಾಯಕತೆಯನ್ನು ನೆನೆಯುತ್ತ ಅಪ್ಪನನ್ನು ಸ್ಮರಿಸುತ್ತ, ಗಂಡನ ಅಗಮನಕ್ಕೆ ತಹಿತಹಿಸುತ್ತ ತ್ರಿವೇಣಿ ಲೋಡ್ ಶೆಡ್ಡಿಂಗನಿಂದ ಕರೆಂಟು ಇರದ ರೂಮಲಿ ಮಕ್ಕಳನ್ನು ಮಲಗಿಸಿ ದಿಂಬಿಗೊರಗಿದಳು.      “ಗಂಡ ಬೆಳಗಿನ ನಾಲ್ಕರ ಜಾವ ಕಾರಿನ ಸಮೇತ ಮನೆಗೆ ಬಂದು ಲಗುಬಗೆಯಿಂದ ನಮ್ಮನ್ನೆಲ್ಲ ಕರೆದುಕೊಂಡು ಮೈಸೂರಿಗೆ ಹೊರಟ. ಮಲಗಿದ ಮಕ್ಕಳನ್ನು ಎತ್ತಿ ಕಾರಲ್ಲೇ ಮಲಗಿಸಿಕೊಂಡ,ಅರೆನಿದ್ದೆಯಲ್ಲಿದ್ದ ನನ್ನನ್ನು ಕಾರಿನಲ್ಲಿ ಕುಳ್ಳಿರಿಸಿದ. ಕಾರು ಐದುನೂರು ಕಿಲೋ ಮೀಟರ ಪ್ರಯಾಣವನ್ನು ಕಣ್ಣೆವೆ ತೆರೆಯುವಷ್ಟರಲ್ಲೇ ತಲುಪಿ, ಮಕ್ಕಳು ನಾನು ಕಣ್ಣು ಬಿಟ್ಟಾಗ ಭವ್ಯ ಅರಮನೆಯ ದ್ವಾರದಲ್ಲಿದ್ದೆವು. ಈ ಸಾಕಷ್ಟು ಬಾರಿ ಕನಸ್ಸಿನಲ್ಲಿ ಬಂದ ದೊಡ್ಡ ದೊಡ್ಡ ಗೊಂಬೆಗಳು ನಡು ಬಳಕಿಸುತ್ತ ಸೋಗು ಹಾಕಿ ನರ್ತಿಸುತ್ತಿದ್ದವು. ಸಣ್ಣ ಸಣ್ಣ ಅಲಂಕಾರಿಕ ಗೊಂಬೆಗಳು ಕಣ್ಣು ಮಿಟುಕಿಸುತ್ತ, ಕೊರಳು ಕುಣಿಸುತ್ತ ನಮ್ಮನ್ನೆ ನೋಡುತ್ತಿದ್ದಂತೆ  ಅವುಗಳನ್ನು ಎತ್ತಿಕೊಳ್ಳಲು ಮಕ್ಕಳು ಒಬ್ಬರಿಗೊಬ್ಬರು ಜಗಳಕ್ಕೆ ಇಳಿದು ಸುಂದರವಾದ ಗೊಂಬೆಗಳನ್ನೆಲ್ಲ ಕೆಳ ಬೀಳಿಸಿದರು. ರಾಜಬೀದಿಯಲ್ಲಿ ಖಾಸಗಿ ದರ್ಭಾರಿನ ರಾಜ,ಮಂತ್ರಿ, ಅವರ ಕಾಲ್ದಳ, ಅಶ್ವ ಪಡೆ ಪರೇಡ ಮಾಡುತ್ತ ನಮ್ಮ ಕಡೆಗೆ ಬರತೊಡಗಿತು. ಆಳೆತ್ತರದ ಬಿಳಿ ಕುದುರೆಗಳು ನಮ್ಮನ್ನು ಹತ್ತಿಸಿಕೊಂಡು ನಾ ಮುಂದೆ ತಾಮುಂದೆ ಎಂದು ಓಡತೊಡಗಿದವು. ಮಕ್ಕಳು  ಹುಟ್ಟಾ ಕುದುರೆ ಸವಾರಿ ಕಲಿತವರಂತೆ ವೇಗವಾಗಿ ಓಡಿಸತೊಡಗಿದರು. ಅಲಂಕೃತ ರಥವೊಂದು  ನಮ್ಮನ್ನು ಸುತ್ತಾಡಿಸಲು ತಯಾರಾಗಿ ನಿಂತಿತ್ತು. ಅದೆಂತ ಅದೃಷ್ಟ ಎಂದರೆ ಗಂಡನೇ ಸಾರಥಿಯಾಗುವಂತಹ ಅವಕಾಶ ಒದಗಿ ನನ್ನನ್ನು ಮಹಾರಾಣಿಯಂತೆ ರಾಜಬೀದಿಗಳಲ್ಲಿ ಸುತ್ತಾಡಿಸಿದರು. ಗಜ ಪಡೆಗಳು ಚಾಮುಂಡಿ ತಾಯಿಯನ್ನು ಹೊತ್ತು ಹೆಜ್ಜೆ ಇಡುತ್ತಿದ್ದವು. ನಮ್ಮನ್ನು ನೋಡಿದ್ದೆ ತಡ ಸೊಂಡಿಲಿನಿಂದ ಆಶೀರ್ವದಿಸಿದವು. ಝಗಮಗಿಸುವ ಚಿನ್ನದ ಅಂಬಾರಿ ಹೊಳೆಯುತ್ತ, ಮಿಂಚುತ್ತ ಕಣ್ಣುಗಳನ್ನು ಅದೆಷ್ಟು ಕುಕ್ಕುತ್ತಿತ್ತೆಂದರೆ ತ್ರಿವೇಣಿ ತಟ್ಟನೆ ತನ್ನ ಕಣ್ಣುಗಳನ್ನು ಮುಚ್ಚಿಕೊಂಡಳು.  ಅಷ್ಟೊಂದು ಬೆಳಕು ಅವಳ ಕಣ್ಣಿಗೆ ಬಡಿಯಿತು. ಅದರೂ ಅರೆ ಕಣ್ಣು ತೆರೆದು ನೋಡಿದಾಗ ರೂಮಿನೊಳಗೆ ಕರೆಂಟ ಬಂದಿತ್ತು. ಇಲ್ಲಿವರೆಗೆ ಕಂಡಿದ್ದು ಕನಸಾ? ಎಂದು ತ್ರಿವೇಣಿ ಪೆಚ್ಚು ಮೋರೆ ಹಾಕುತ್ತ ಟೈಮ್‌ ನೋಡಿದಳು.  ರಾತ್ರಿ ಹನ್ನೆರಡು ಗಂಟೆ. ಅಷ್ಟರಲ್ಲೆ ಅವಳ ಪೋನ್‌ ರಿಂಗಾಗತೊಡಗಿತು. ಆಕಡೆಯಿಂದ ಗಂಡ “ನನಗೆ ರಜೆ ಸಿಗಲಿಲ್ಲ ಮುಂದಿನ ದಸರಾಕ್ಕೆ ಹೋದರಾಯಿತು ಮಲಕೊ” ಎಂದು ಹೇಳಿ ಪೋನ್ ಕಟ್ ಮಾಡಿದ. -ಕಿರಣ ಗಣಾಚಾರಿ.  ಮುತ್ತಿನಪೆಟ್ಟಿಗಿ

ಕಿರಣ ಗಣಾಚಾರಿ ಅವರ ಸಣ್ಣ ಕಥೆ “ದಸರಾಗೊಂಬೆ” Read Post »

ಕಾವ್ಯಯಾನ, ಗಝಲ್

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್‌

ಕಾವ್ಯ ಸಂಗಾತಿ ಪ್ರಭಾವತಿ ಎಸ್ ದೇಸಾಯಿ ಗಜಲ್‌ ಅನುರಾಗದ ಬಾಗಿಲು ತೆರೆದಿದ್ದೆ ನಾ ಧ್ಯಾನಸ್ಥನಾಗಿದ್ದ ಅವನುಎದೆಯಲಿ ಮೂತಿ೯ ಇಟ್ಟು ಕುಳಿತಿದ್ದೆ ನಾ ಅಲೆಮಾರಿಯಾಗಿದ್ದ ಅವನು ಮೋಹವ ತೊರೆದು ದೂರಾಗಿ ಕನಸಲಿ ನಿತ್ಯ ಕಾಡಿದವನುವಿರಹ ದಾಹ ತಣಿಯಲು ಅಪ್ಪಲು ಬಯಸಿದ್ದೆ ನಾ ಮಾಯವಾಗಿದ್ದ ಅವನು ತ್ರಿಲೋಕ ಸುಂದರಿ ಎಂಬ ಅಹಂದಲಿ ಜಗವ ಗೆಲ್ಲಲು ಹೋದೆ ನಾಗೆಜ್ಜೆ ಕಟ್ಟಿ ಮೋಹಿನಿಯಾಗಿ ಕುಣಿಯುತ್ತಿದ್ದೆ ನಾ  ನಿರಾಕಾರನಾಗಿದ್ದ ಅವನು ಸಪ್ತ ಪದಿಗಳ ತುಳಿದು ಸಂಸಾರಿಯಾಗಿ ಮಾಯೆಯ ಉಡುಗೆ ತೊಟ್ಟಿದ್ದೆ ನಾಬದುಕಿನ ಸುಳಿಯಲಿ ಬಂಧಿಸಲು ಆಶಿಸಿದ್ದೆ ನಾ  ಜಂಗಮನಾಗಿದ್ದ ಅವನು ಕಾಡು ಮೇಡಲಿ ಸ್ವಚ್ಛಂದವಾಗಿ ತಿರುಗುತ್ತಾ ಸಂತಸದಲಿದ್ದೆ ನಾ ನಶೆಯಲಿ ಸೋಮಾರಿಯಾಗಿದ್ದೆ ನಾ ಕಾಯಕ ಯೋಗಿಯಾಗಿದ್ದ ಅವನು ಚೆಲುವ ಮಾಯೆಯಾಗಿ ನತಿ೯ಸುತಾ ಎಲ್ಲರನು ಮರುಳುಮಾಡಿದ್ದೆ ನಾವಿರಾಗಿಣಿ ಯಾಗಿ ಜಗದ ಬಂಧನ ಕಳಿಚಿದ್ದೆ ನಾ ಅಲ್ಲಮಪ್ರಭುವಾಗಿದ್ದ ಅವನು ಮೌಢ್ಯದ ಕಡಲಲಿ ಜಾರಿ ಮೇಲೇಳಲಾಗದೆ ಚಡಪಡಿಸುತ್ತಿದ್ದೆ ನಾಅಂಧಕಾರ ಹೊದ್ದು ಮಲಗಿದ್ದೆ ನಾ ಅರುವಿನ ಜ್ಞಾನ ಪ್ರಭೆಯಾಗಿದ್ದ ಅವನುಪ್ರಭಾವತಿ ಎಸ್ ದೇಸಾಯಿ

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್‌ Read Post »

ಇತರೆ, ಲಹರಿ

“ನನ್ನ ಹಾಡು ನನ್ನದು” ಡಾ.ಯಲ್ಲಮ್ಮ ಕೆ.

ಲಹರಿ ಸಂಗಾತಿ ಡಾ.ಯಲ್ಲಮ್ಮ ಕೆ. “ನನ್ನ ಹಾಡು ನನ್ನದು” ನನ್ನ ಹಾಡು ನನ್ನದು: ನನ್ನ ಬದುಕಿನ ಸ್ವರವನ್ನು ಕಂಡುಕೊಳ್ಳುವ ಗೀತೆ“ನನ್ನ ಹಾಡು ನನ್ನದು” ಕನ್ನಡದ ಜನಪ್ರಿಯ ಹಾಡು. ಇದು ‘ಸುಪ್ರಭಾತ’ (1988) ಚಲನಚಿತ್ರದಲ್ಲಿದೆ.ನಟರು: ಡಾ.ವಿಷ್ಣುವರ್ಧನ್ ಮತ್ತು ಸುಹಾಸಿನಿಅವಧಿ: ಸುಮಾರು 4 ನಿಮಿಷ 37 ಸೆಕೆಂಡುಗಳು 80-90ರ ದಶಕದಲ್ಲಿ ಬಂದ ಸಿನಿಮಾ ಆ ನಡುವೆ  ನಮ್ಮ   ಹುಟ್ಟು. ಜೀವನದ ಅರ್ಥವೇನು, ಸಮಾಜವೆಂದರೆ ಏನು, ವ್ಯಕ್ತಿತ್ವವೆಂದರೆ ಏನು ಎಂಬುದನ್ನು ಅರಿಯದ ಎಳೆಯ ಮನಸ್ಸಿನ ದಿನಗಳು ಅವು. ಆ ದಿನಗಳಲ್ಲಿ ಸುಪ್ರಭಾತ ಚಲನಚಿತ್ರದ ‘ನನ್ನ ಹಾಡು ನನ್ನದು’ ಗೀತೆ ನಮ್ಮ ಕಿವಿಗೆ ಬಿದ್ದಾಗ, ಅದರ ಆಳವಾದ ತಾತ್ವಿಕತೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವಷ್ಟು ಪ್ರೌಢತೆ ನಮ್ಮಲ್ಲಿರಲಿಲ್ಲ. ಆದರೂ ಆ ಹಾಡಿನ ಸ್ವರ, ಅದರ ಲಯ ಮತ್ತು ಅದರ ಸರಳವಾದ ಪದಗಳು ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದವು. ಚಿ. ಉದಯಶಂಕರ್ ಅವರ ಸಾಹಿತ್ಯ, ರಾಜನ್–ನಾಗೇಂದ್ರ ಅವರ ಸಂಗೀತ ಮತ್ತು ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಗಾಯನ ಈ ಗೀತೆಯನ್ನು ಶಾಶ್ವತಗೊಳಿಸಿವೆ.ಕಾಲ ಬದಲಾಯಿತು. ಬಾಲ್ಯದ ಮುಗ್ಧತೆ ಕಳೆದು, ಬದುಕಿನ ಅನೇಕ ಹಂತಗಳನ್ನು ದಾಟುತ್ತಾ ನಾವು ಬೆಳೆದೇವೆ. ಸಂಬಂಧಗಳು, ನಿರೀಕ್ಷೆಗಳು, ಗೆಲುವುಗಳು, ಸೋಲುಗಳು, ನೋವುಗಳು ಮತ್ತು ನಲಿವುಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸಿದವು. ಆಗ ಬಾಲ್ಯದ ದಿನಗಳಲ್ಲಿ ಕೇವಲ ಕೇಳಿದಂತೆ ತೋರುತ್ತಿದ್ದ ಈ ಹಾಡು, ಇಂದು ಬದುಕಿನ ಅನುಭವಗಳ ಬೆಳಕಿನಲ್ಲಿ ಹೊಸ ಅರ್ಥಗಳನ್ನು ನೀಡುತ್ತದೆ. ಒಂದೇ ಹಾಡು ಕಾಲದೊಂದಿಗೆ ಹೇಗೆ ಬೆಳೆಯುತ್ತದೆ ಎಂಬುದಕ್ಕೆ ‘ನನ್ನ ಹಾಡು ನನ್ನದು’ ಅತ್ಯಂತ ಸುಂದರ ಉದಾಹರಣೆ.ನನ್ನ ಹಾಡು, ನನ್ನ ಜೀವನ“ನನ್ನ ಹಾಡು ನನ್ನದು, ನನ್ನ ರಾಗ ನನ್ನದು, ನನ್ನ ತಾಳ ನನ್ನದು, ನನ್ನ ಆಸೆ ನನ್ನದು” ಎಂಬ ಸಾಲುಗಳು ಇಂದು ನನ್ನ ಪಾಲಿಗೆ ಕೇವಲ ಗೀತೆಯ ಸಾಲುಗಳಲ್ಲ; ಅವು ನನ್ನ ಅಸ್ತಿತ್ವದ ಮಾತುಗಳಾಗಿವೆ. ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ಬದುಕಿನ ರಾಗವಿದೆ. ಯಾರದೋ ಬದುಕಿನ ಯಶಸ್ಸನ್ನು ಅನುಕರಿಸಿ, ಯಾರದೋ ಕನಸುಗಳನ್ನು ತನ್ನದಾಗಿಸಿಕೊಂಡು ಬದುಕಿದರೆ, ನಮ್ಮೊಳಗಿನ ಸ್ವಂತ ಸ್ವರ ನಿಧಾನವಾಗಿ ಮೌನವಾಗುತ್ತದೆ.ನನ್ನ ಜೀವನದ ಹಾಡನ್ನು ನಾನು ತಾನೇ ಹಾಡಬೇಕು. ನನ್ನ ಸಂತೋಷಕ್ಕೆ, ನನ್ನ ನೋವಿಗೆ, ನನ್ನ ನಿರ್ಧಾರಗಳಿಗೆ ಮತ್ತು ನನ್ನ ಕನಸುಗಳಿಗೆ ನಾನು ತಾನೇ ಅರ್ಥ ನೀಡಬೇಕು. ಇತರರ ಅಭಿಪ್ರಾಯಗಳು ನನಗೆ ದಾರಿದೀಪವಾಗಬಹುದು; ಆದರೆ ನನ್ನ ಬದುಕಿನ ಅಂತಿಮ ದಿಕ್ಕನ್ನು ನಿರ್ಧರಿಸಬೇಕಾದವನು/ಳು ನಾನೇ.ಬಾಲ್ಯದ ಕೇಳುವಿಕೆ, ಪ್ರೌಢತೆಯ ಅರಿವುಈ ಗೀತೆಯನ್ನು ಮೊದಲ ಬಾರಿಗೆ ಕೇಳಿದಾಗ ನಾವು ಇನ್ನೂ ಎಳೆಯ ಮನಸ್ಸಿನವರಾಗಿದ್ದೆವು. ಹಾಡಿನ ಮಧುರತೆ ಮನಸ್ಸನ್ನು ಸೆಳೆಯುತ್ತಿತ್ತು; ಅದರ ತಾತ್ವಿಕತೆ ನಮ್ಮ ಗಮನಕ್ಕೆ ಸಂಪೂರ್ಣವಾಗಿ ಬಂದಿರಲಿಲ್ಲ. ಆದರೆ ಇಂದು, ಬದುಕಿನ ಏರಿಳಿತಗಳನ್ನು ಕಂಡ ನಂತರ, ಅದರ ಪ್ರತಿಯೊಂದು ಸಾಲಿನಲ್ಲೂ ನಮ್ಮದೇ ಅನುಭವಗಳ ಪ್ರತಿಧ್ವನಿ ಕೇಳಿಸುತ್ತದೆ.ಬಾಲ್ಯದಲ್ಲಿ ಹಾಡು ಮನರಂಜನೆಯಾಗಿತ್ತು. ಯೌವನದಲ್ಲಿ ಅದು ಕನಸುಗಳ ಸ್ವರವಾಗಿ ಅನಿಸಿತು. ಬದುಕಿನ ಪ್ರೌಢ ಹಂತದಲ್ಲಿ ಅದು ಆತ್ಮಪರಿಶೀಲನೆಯ ಗೀತೆಯಾಯಿತು. ಈಗ ಅದನ್ನು ಕೇಳುತ್ತಾ, “ನಾನು ಯಾರು? ಈ ಸಮಾಜದೊಂದಿಗೆ ನನ್ನ ಸಂಬಂಧವೇನು? ನನ್ನ ಬದುಕಿನ ದಾರಿಯನ್ನು ನಾನು ಹೇಗೆ ಆರಿಸಿಕೊಂಡಿದ್ದೇನೆ?” ಎಂಬ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ.ನೋವು ಮತ್ತು ನಲಿವಿಗೆ ಸಾಂತ್ವಾನಇಂದಿಗೂ ಈ ಗೀತೆಯನ್ನು ಕೇಳುತ್ತಾ, ಅರ್ಥೈಸುತ್ತಾ ಹೋದಾಗ ನನ್ನ ಮನಸ್ಸಿನ ನೋವು ಮತ್ತು ನಲಿವುಗಳಿಗೆ ಅದು ಎಲ್ಲೋ ಒಂದು ಕಡೆ ಸಮಾಧಾನ ನೀಡುತ್ತದೆ. ಜೀವನದಲ್ಲಿ ಕೆಲವು ನೋವುಗಳನ್ನು ಯಾರೊಂದಿಗೂ ಸಂಪೂರ್ಣವಾಗಿ ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೆಲವು ಭಾವನೆಗಳಿಗೆ ಪದಗಳು ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ ಸಂಗೀತವು ನಮ್ಮ ಪರವಾಗಿ ಮಾತನಾಡುತ್ತದೆ.ಈ ಹಾಡು ನನ್ನ ನೋವನ್ನು ತಕ್ಷಣವೇ ಅಳಿಸಿಹಾಕುವುದಿಲ್ಲ; ಆದರೆ ಅದನ್ನು ಎದುರಿಸುವ ಮನೋಬಲವನ್ನು ನೀಡುತ್ತದೆ. ನನ್ನ ಏಕಾಂತವನ್ನು ಅದು ಅರ್ಥಮಾಡಿಕೊಳ್ಳುತ್ತದೆ. ನನ್ನೊಳಗಿನ ಗೊಂದಲಗಳಿಗೆ ಮೃದುವಾದ ಸ್ವರ ನೀಡುತ್ತದೆ. ಸಂತೋಷದ ಕ್ಷಣಗಳಲ್ಲಿ ಅದು ನನ್ನ ನಲಿವನ್ನು ಹೆಚ್ಚಿಸುತ್ತದೆ; ದುಃಖದ ಸಮಯದಲ್ಲಿ ನನ್ನ ಮನಸ್ಸನ್ನು ತಬ್ಬಿಕೊಳ್ಳುತ್ತದೆ. ಅದಕ್ಕಾಗಿ ಈ ಹಾಡು ನನಗೆ ಕೇವಲ ನೆನಪು ಅಲ್ಲ—ಒಂದು ಆತ್ಮೀಯ ಸಂಗಾತಿ.ವ್ಯಕ್ತಿತ್ವ ವಿಕಸನದ ಪಯಣ“ನನ್ನಂತೆ ನಾನು ಇರುವೆನು, ನುಡಿವೆನು, ನಡೆಯುವೆನು, ದುಡಿವೆನು” ಎಂಬ ಭಾವ ನನ್ನ ವ್ಯಕ್ತಿತ್ವ ವಿಕಸನದೊಂದಿಗೆ ಆಳವಾಗಿ ಸಂಬಂಧ ಹೊಂದಿದೆ. ಬದುಕಿನ ಆರಂಭದಲ್ಲಿ ನಾವು ಇತರರ ಮೆಚ್ಚುಗೆಯನ್ನು ಬಯಸುತ್ತೇವೆ. ಎಲ್ಲರೂ ನಮ್ಮನ್ನು ಒಪ್ಪಿಕೊಳ್ಳಬೇಕು, ಪ್ರಶಂಸಿಸಬೇಕು, ನಮ್ಮ ಆಯ್ಕೆಗಳನ್ನು ಮೆಚ್ಚಬೇಕು ಎಂದು ನಿರೀಕ್ಷಿಸುತ್ತೇವೆ.ಆದರೆ ಕಾಲಕ್ರಮೇಣ ಒಂದು ಸತ್ಯ ತಿಳಿಯುತ್ತದೆ: ಎಲ್ಲರ ಮೆಚ್ಚುಗೆಯನ್ನು ಪಡೆಯುವುದು ಸಾಧ್ಯವಿಲ್ಲ; ಎಲ್ಲರ ನಿರೀಕ್ಷೆಗಳನ್ನು ಪೂರೈಸುವುದು ಕೂಡ ಸಾಧ್ಯವಿಲ್ಲ. ಆಗ ನಮ್ಮನ್ನು ನಾವು ಅರಿತುಕೊಳ್ಳುವುದು ಮುಖ್ಯವಾಗುತ್ತದೆ. ನಮ್ಮ ಸಾಮರ್ಥ್ಯ, ಮಿತಿಗಳು, ಆಸೆಗಳು ಮತ್ತು ಮೌಲ್ಯಗಳನ್ನು ಒಪ್ಪಿಕೊಂಡು ಬದುಕುವುದು ವ್ಯಕ್ತಿತ್ವದ ಪರಿಪಕ್ವತೆ.ನನ್ನಂತೆ ನಾನು ಇರುವುದೆಂದರೆ ಬದಲಾವಣೆಯನ್ನು ನಿರಾಕರಿಸುವುದಲ್ಲ. ತಪ್ಪುಗಳಿಂದ ಕಲಿತು, ಅನುಭವಗಳಿಂದ ಬೆಳೆದು, ಇನ್ನಷ್ಟು ಉತ್ತಮ ವ್ಯಕ್ತಿಯಾಗಲು ಪ್ರಯತ್ನಿಸುವುದು. ಆದರೆ ಬದಲಾಗುವಾಗಲೂ ನನ್ನ ಮೂಲ ಸ್ವಭಾವ, ಮೌಲ್ಯಗಳು ಮತ್ತು ಆತ್ಮಗೌರವವನ್ನು ಕಳೆದುಕೊಳ್ಳದಿರುವುದು.ಸಮಾಜದೊಂದಿಗೆ ನನ್ನನ್ನು ಕಂಡುಕೊಳ್ಳುವುದುಈ ಸಮಾಜದೊಂದಿಗೆ ನನ್ನನ್ನು ನಾನು ಹೇಗೆ ಕಂಡುಕೊಳ್ಳಬೇಕು ಎಂಬ ಪ್ರಶ್ನೆ ಈ ಹಾಡನ್ನು ಕೇಳುವಾಗ ನನ್ನೊಳಗೆ ಮೂಡುತ್ತದೆ. ಸಮಾಜದಿಂದ ಸಂಪೂರ್ಣವಾಗಿ ದೂರವಾಗಿ ಬದುಕಲು ಸಾಧ್ಯವಿಲ್ಲ. ನಮ್ಮ ಬದುಕು ಸಂಬಂಧಗಳು, ಜವಾಬ್ದಾರಿಗಳು ಮತ್ತು ಪರಸ್ಪರ ಅವಲಂಬನೆಯಿಂದ ಕೂಡಿದೆ. ಆದರೆ ಸಮಾಜದ ಒತ್ತಡಕ್ಕೆ ಒಳಗಾಗಿ ನನ್ನ ಸ್ವಂತಿಕೆಯನ್ನು ಕಳೆದುಕೊಳ್ಳುವುದೂ ಸರಿಯಲ್ಲ.ನನ್ನ ದೃಷ್ಟಿಯಲ್ಲಿ ಸಮಾಜದೊಂದಿಗೆ ಹೊಂದಿಕೊಳ್ಳುವುದು ಎಂದರೆ:ನನ್ನ ವ್ಯಕ್ತಿತ್ವವನ್ನು ಕಾಪಾಡಿಕೊಂಡೇ ಇತರರನ್ನು ಗೌರವಿಸುವುದು.ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಲೇ ಭಿನ್ನಾಭಿಪ್ರಾಯವನ್ನು ಸಹಿಸುವುದು.ನನ್ನ ಹಕ್ಕುಗಳನ್ನು ಅರಿತುಕೊಂಡು ಇತರರ ಹಕ್ಕುಗಳನ್ನೂ ಗೌರವಿಸುವುದು.ಸಮಾಜದ ಅನ್ಯಾಯಗಳನ್ನು ಮೌನವಾಗಿ ಒಪ್ಪಿಕೊಳ್ಳದೆ, ಸಾಧ್ಯವಾದಷ್ಟು ಸತ್ಯದ ಪರ ನಿಲ್ಲುವುದು.ನನ್ನ ಬದುಕಿನ ಸಂತೋಷವನ್ನು ಹುಡುಕುತ್ತಲೇ, ಇತರರ ಬದುಕಿಗೂ ನೋವುಂಟುಮಾಡದಿರುವುದು.ಸಮಾಜದೊಂದಿಗೆ ಬದುಕುವುದು ಎಂದರೆ ಅದರ ಪ್ರತಿಯೊಂದು ನಿಯಮವನ್ನೂ ಪ್ರಶ್ನೆಯಿಲ್ಲದೆ ಅನುಸರಿಸುವುದಲ್ಲ. ಹಾಗೆಯೇ ಎಲ್ಲವನ್ನೂ ತಿರಸ್ಕರಿಸುವುದೂ ಅಲ್ಲ. ಯಾವ ಮೌಲ್ಯಗಳನ್ನು ಸ್ವೀಕರಿಸಬೇಕು, ಯಾವ ಅನ್ಯಾಯಗಳನ್ನು ವಿರೋಧಿಸಬೇಕು ಎಂಬ ವಿವೇಕವನ್ನು ಬೆಳೆಸಿಕೊಳ್ಳುವುದು ನಿಜವಾದ ಸಾಮಾಜಿಕ ಪ್ರಜ್ಞೆ.“ನನಗೆ ನಾನೇ ಸಂಗಾತಿ”ಹಾಡಿನಲ್ಲಿರುವ “ನೂರು ಜನರು ಬಂದರು, ನೂರು ಜನರು ಹೋದರು; ನನಗೆ ನಾನೇ ಸಂಗಾತಿಯು” ಎಂಬ ಭಾವನೆ ನನಗೆ ಅತ್ಯಂತ ಆಪ್ತವಾಗಿದೆ. ಜೀವನದಲ್ಲಿ ಅನೇಕರು ನಮ್ಮ ಜೊತೆ ಬರುತ್ತಾರೆ. ಕೆಲವರು ನಮ್ಮ ಸಂತೋಷಕ್ಕೆ ಕಾರಣರಾಗುತ್ತಾರೆ; ಕೆಲವರು ನಮ್ಮ ನೋವಿಗೆ ಕಾರಣರಾಗುತ್ತಾರೆ; ಕೆಲವರು ಪಾಠ ಕಲಿಸಿ ದೂರವಾಗುತ್ತಾರೆ.ಸಂಬಂಧಗಳು ಜೀವನದ ಅಮೂಲ್ಯ ಭಾಗವಾದರೂ, ನಮ್ಮ ಅಸ್ತಿತ್ವವನ್ನು ಸಂಪೂರ್ಣವಾಗಿ ಇತರರ ಮೇಲೆ ಅವಲಂಬಿಸಬಾರದು. ಯಾರಾದರೂ ನಮ್ಮನ್ನು ಅರ್ಥಮಾಡಿಕೊಳ್ಳದ ಸಂದರ್ಭದಲ್ಲಿ, ನಾವು ನಮ್ಮನ್ನು ನಾವು ಅರ್ಥಮಾಡಿಕೊಳ್ಳಬೇಕು. ಯಾರಾದರೂ ನಮ್ಮನ್ನು ಬಿಟ್ಟುಹೋದಾಗ, ನಮ್ಮೊಳಗಿನ ಆತ್ಮಸ್ಥೈರ್ಯವನ್ನು ನಾವು ಹಿಡಿದುಕೊಳ್ಳಬೇಕು. ತನ್ನ ಮನಸ್ಸಿನೊಂದಿಗೆ ಸ್ನೇಹ ಬೆಳೆಸಿಕೊಂಡವನು ಏಕಾಂತದಲ್ಲಿಯೂ ಕುಸಿಯುವುದಿಲ್ಲ.ಕಾಲವನ್ನು ದಾಟಿದ ಗೀತೆಸಿನಿಮಾ  ಬಂದ ಸಮಯದ ಆಚೀಚೆ ಹುಟ್ಟಿದ ನಮ್ಮ ತಲೆಮಾರಿನ ಬಾಲ್ಯಸ್ಮೃತಿಗಳೊಂದಿಗೆ ಈ ಹಾಡು ಬೆಸೆದುಕೊಂಡಿದೆ. ಅಂದಿನ ದಿನಗಳಲ್ಲಿ ಅದು ಬಹಳ ಜನಪ್ರಿಯತೆ ಗಳಿಸಿತು; ಇಂದಿಗೂ ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ. ಇದಕ್ಕೆ ಕಾರಣ ಅದರ ಸಂಗೀತ ಮಾತ್ರವಲ್ಲ, ಅದರ ಜೀವನಸತ್ಯ.ಕಾಲ ಬದಲಾದರೂ ಮನುಷ್ಯನ ಮೂಲ ಪ್ರಶ್ನೆಗಳು ಬದಲಾಗುವುದಿಲ್ಲ: ನಾನು ಯಾರು? ನನ್ನ ಜೀವನದ ಅರ್ಥವೇನು? ಇತರರ ಮಧ್ಯೆ ನಾನು ಹೇಗೆ ಬದುಕಬೇಕು? ನನ್ನ ನೋವು ಮತ್ತು ಸಂತೋಷಗಳಿಗೆ ಅರ್ಥವನ್ನು ಹೇಗೆ ನೀಡಬೇಕು? ಈ ಪ್ರಶ್ನೆಗಳಿಗೆ ಹಾಡು ನೇರವಾದ ಉಪದೇಶ ನೀಡುವುದಿಲ್ಲ; ಬದಲಾಗಿ, ನಮ್ಮೊಳಗೆ ನಾವು ಉತ್ತರ ಹುಡುಕುವಂತೆ ಮಾಡುತ್ತದೆ. ಅದೇ ಅದರ ಶಾಶ್ವತತೆಯ ರಹಸ್ಯ. ‘ನನ್ನ ಹಾಡು ನನ್ನದು’ ಇಂದು ನನಗೆ ಒಂದು ಹಳೆಯ ಚಲನಚಿತ್ರಗೀತೆ ಮಾತ್ರವಲ್ಲ. ಅದು ನನ್ನ ಬಾಲ್ಯದ ನೆನಪು, ನನ್ನ ಬದುಕಿನ ಸಂಗಾತಿ, ನನ್ನ ನೋವು–ನಲಿವುಗಳ ಪ್ರತಿಧ್ವನಿ ಮತ್ತು ನನ್ನ ವ್ಯಕ್ತಿತ್ವ ವಿಕಸನದ ಮೌನ ಸಾಕ್ಷಿ. ಬಾಲ್ಯದಲ್ಲಿ ಕೇಳಿದ ಈ ಹಾಡು, ಪ್ರೌಢತೆಯಲ್ಲಿ ನನ್ನನ್ನು ನಾನು ಕೇಳಿಕೊಳ್ಳುವಂತೆ ಮಾಡುತ್ತದೆ.ನನ್ನ ಹಾಡು ನನ್ನದೇ ಆಗಿರಬಹುದು; ಆದರೆ ಅದು ಸಮಾಜದಿಂದ ಸಂಪೂರ್ಣವಾಗಿ ಪ್ರತ್ಯೇಕವಾಗಿಲ್ಲ. ನನ್ನ ರಾಗದಲ್ಲಿ ನನ್ನ ಅನುಭವಗಳಿವೆ; ನನ್ನ ತಾಳದಲ್ಲಿ ನನ್ನ ಕಾಲದ ಸ್ಪಂದನವಿದೆ; ನನ್ನ ಆಸೆಯಲ್ಲಿ ನನ್ನ ಸಮಾಜದ ನೆರಳುಗಳಿವೆ. ಆದ್ದರಿಂದ ನನ್ನ ಹಾಡನ್ನು ನಾನು ಹಾಡುತ್ತಾ, ಇತರರ ಹಾಡನ್ನೂ ಕೇಳಬೇಕು. ನನ್ನ ಸ್ವಾತಂತ್ರ್ಯವನ್ನು ಉಳಿಸಿಕೊಂಡೇ ಮಾನವೀಯತೆಯೊಂದಿಗೆ ಬದುಕಬೇಕು.ಇಂದಿಗೂ ಈ ಗೀತೆಯನ್ನು ಕೇಳುವಾಗ ನನ್ನ ಮನಸ್ಸು ಹೇಳುತ್ತದೆ: ಬದುಕಿನ ದಾರಿಯಲ್ಲಿ ಎಷ್ಟೇ ಜನರು ಬಂದುಹೋಗಲಿ, ಎಷ್ಟೇ ನೋವು–ನಲಿವುಗಳು ಎದುರಾಗಲಿ, ನನ್ನೊಳಗಿನ ಸ್ವರವನ್ನು ನಾನು ಕಳೆದುಕೊಳ್ಳಬಾರದು. ನನ್ನ ಬದುಕಿನ ಹಾಡನ್ನು ನಾನೇ ಹಾಡಬೇಕು; ಆದರೆ ಆ ಹಾಡಿನಲ್ಲಿ ಪ್ರೀತಿ, ಸತ್ಯ, ಆತ್ಮಗೌರವ ಮತ್ತು ಸಹಬಾಳ್ವೆಯ ಸ್ವರವೂ ಸದಾ ಮೊಳಗುತ್ತಿರಬೇಕು.        ಡಾ.ಯಲ್ಲಮ್ಮ ಕೆ.                 “

“ನನ್ನ ಹಾಡು ನನ್ನದು” ಡಾ.ಯಲ್ಲಮ್ಮ ಕೆ. Read Post »

ಕಾವ್ಯಯಾನ

ಸಾಯಬಣ್ಣ ಮಾದರ (ಸಲಾದಹಳ್ಳಿ) ಕವಿತೆ “ನಾಚಿಕೆ ಇಲ್ಲವೆ ನಿನಗೆ”

ಕಾವ್ಯ ಸಂಗಾತಿ ಸಾಯಬಣ್ಣ ಮಾದರ ನಾಚಿಕೆ ಇಲ್ಲವೇ ನಿನಗೆ ದಸರಾನಾಚಿಗೆ ಇಲ್ಲವೆ ನಿನಗೆನಿನ್ನ ಬಾ ಎಂದವರು ಯಾರು? ಬರ ಸಿಡಿಲಿನಂತ ಬರಉತ್ತರವೇ ತತ್ತರಕಾಣುವುದಿಲ್ಲವೇ ನನ್ನವರು ಹಸಿವಿನ ಹಾವುಸುತ್ತಿಕೊಂಡವರುಕಣ್ಣೀರು ಬಸೆದುಮಂಜಾದ ನೋಟದಿಂದ ಅನ್ನದ ಹಂಬಲಿಸುವರುಪುಟ್ಟ ಮಕ್ಕಳಹೊಟ್ಟೆ ಬೆನ್ನು ಕೂಡಿ ಬಿಲ್ಲಿನಂತೆ ಬಾಗಿವೆಹಸಿವುವೆ ಶಾಪನಾವುದೇವರ ಜೊತೆ ಜಿದ್ದಿಗೆ ಬಿದ್ದಿದ್ದೇವೆ ನೀ ಬಾ ಎಂದು ಹೇಳಿದವರು ಯಾರು?ನಾ ಹೇಳಿದನಾಇಲ್ಲನೀವೂ ಹೇಳಿದೀರಾ? ಓ ನನಗೇಯಾರೆಂದು ಗೊತ್ತಾಯಿತು ಹೊಗಳಿಕೆ ಧೂಪ ಹಣ್ಣು ಕಾಯಿಗೆಆಸೆ ಬುರುಕ ನೀ ಸಿರಿವಂತರ ಸರ್ಗದಲ್ಲಿನವ ದಿನ ನವ ಬಣ್ಣದವರುಹಸಿದವರಿಗೆ ಅನ್ನ ಇಕ್ಕದವರುನಿನ್ನವರು ಹಾಳಾದ ಹಳ್ಳಿಗಳುಬತ್ತಿದ ಹಳ್ಳ ಕೊಳಗಳುಸ್ಪರ್ಧೆಗೆ ಬಿದ್ದಿದ್ದಾರೆ ಇಬ್ಬರುನಿತ್ಯ ಸುಡುವ ಸೂರ್ಯಹೊಟ್ಟೆ ಶುರುವ ಹಸಿವುಬದುಕು ಜಾಲಿ ಗಿಡ ಹೇಗಿದ್ದರೂ ಬಂದಿರುವೆಮತಿ ಹೀನರ ಮನೆಯಲ್ಲಿರು ಉತ್ಪಾದಗಳ ಮೇಲೆಹೊಟ್ಟೆಗೆ ತಣ್ಣೀರು ಬಟ್ಟೆಸುತ್ತಿಕೊಂಡುಮಲಗಿದ್ದಾರೆ ನನ್ನವರು ಶ್!!ಸದ್ದು ಮಾಡದೇ ಹೊರಟು ಹೋಗು ನಾಚಿಕೆ ಇಲ್ಲವೇ ನಿನಗೆ ದಸರಾನಾಚಿಗೆ ಇಲ್ಲವೆ ನಿನಗೆನಿನ್ನ ಬಾ ಎಂದವರು ಯಾರು? ಬರ ಸಿಡಿಲಿನಂತ ಬರಉತ್ತರವೇ ತತ್ತರಕಾಣುವುದಿಲ್ಲವೇ ನನ್ನವರು ಹಸಿವಿನ ಹಾವುಸುತ್ತಿಕೊಂಡವರುಕಣ್ಣೀರು ಬಸೆದುಮಂಜಾದ ನೋಟದಿಂದ ಅನ್ನದ ಹಂಬಲಿಸುವರುಪುಟ್ಟ ಮಕ್ಕಳಹೊಟ್ಟೆ ಬೆನ್ನು ಕೂಡಿ ಬಿಲ್ಲಿನಂತೆ ಬಾಗಿವೆಹಸಿವುವೆ ಶಾಪನಾವುದೇವರ ಜೊತೆ ಜಿದ್ದಿಗೆ ಬಿದ್ದಿದ್ದೇವೆ ನೀ ಬಾ ಎಂದು ಹೇಳಿದವರು ಯಾರು?ನಾ ಹೇಳಿದನಾಇಲ್ಲನೀವೂ ಹೇಳಿದೀರಾ? ಓ ನನಗೇಯಾರೆಂದು ಗೊತ್ತಾಯಿತು ಹೊಗಳಿಕೆ ಧೂಪ ಹಣ್ಣು ಕಾಯಿಗೆಆಸೆ ಬುರುಕ ನೀ ಸಿರಿವಂತರ ಸರ್ಗದಲ್ಲಿನವ ದಿನ ನವ ಬಣ್ಣದವರುಹಸಿದವರಿಗೆ ಅನ್ನ ಇಕ್ಕದವರುನಿನ್ನವರು ಹಾಳಾದ ಹಳ್ಳಿಗಳುಬತ್ತಿದ ಹಳ್ಳ ಕೊಳಗಳುಸ್ಪರ್ಧೆಗೆ ಬಿದ್ದಿದ್ದಾರೆ ಇಬ್ಬರುನಿತ್ಯ ಸುಡುವ ಸೂರ್ಯಹೊಟ್ಟೆ ಶುರುವ ಹಸಿವುಬದುಕು ಜಾಲಿ ಗಿಡ ಹೇಗಿದ್ದರೂ ಬಂದಿರುವೆಮತಿ ಹೀನರ ಮನೆಯಲ್ಲಿರು ಉತ್ಪಾದಗಳ ಮೇಲೆಹೊಟ್ಟೆಗೆ ತಣ್ಣೀರು ಬಟ್ಟೆಸುತ್ತಿಕೊಂಡುಮಲಗಿದ್ದಾರೆ ನನ್ನವರು ಶ್!!ಸದ್ದು ಮಾಡದೇ ಹೊರಟು ಹೋಗುಸಾಯಬಣ್ಣ ಮಾದರ (ಸಲಾದಹಳ್ಳಿ)

ಸಾಯಬಣ್ಣ ಮಾದರ (ಸಲಾದಹಳ್ಳಿ) ಕವಿತೆ “ನಾಚಿಕೆ ಇಲ್ಲವೆ ನಿನಗೆ” Read Post »

ಇತರೆ

“ಹೆಂಗಸರ ಕಷ್ಟ ಗಂಡಿಗೆ ಗೊತ್ತೇ??” ವೀಣಾ ಹೇಮಂತ್‌ ಗೌಡ ಪಾಟೀಲ

ಮಹಿಳಾ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ “ಹೆಂಗಸರ ಕಷ್ಟ ಗಂಡಿಗೆ ಗೊತ್ತೇ??” ಮನೆಯ ಎಲ್ಲಾ ಕೆಲಸಗಳನ್ನು ಆಕೆ ತಲೆಯ ಮೇಲೆ ಹೊತ್ತು ಮಾಡುತ್ತಿದ್ದಳು. ಮನೆಯ ಪ್ರತಿಯೊಬ್ಬರ ಅಗತ್ಯಗಳು ಆಕೆಗೆ ಗೊತ್ತಿತ್ತು. ಕಳೆದ ಮೂರು ದಶಕಗಳಿಂದ ಗಂಡನ ಮನೆಯನ್ನು ತನ್ನದೇ ಎಂದು ಭಾವಿಸಿ ಆಕೆ  ಅತ್ತೆ ಮಾವ ಬದುಕಿ ಇರುವವರೆಗೂ ಊಟ-ಉಪಚಾರ, ಔಷಧಿ, ಆರೋಗ್ಯ ಎಂದು ಎಲ್ಲ ರೀತಿಯಿಂದ ಕಾರ್ಯನಿರ್ವಹಿಸಿದಳು.ಗಂಡನ ಹಿಂದೆ ಮುಂದೆ ಸುತ್ತಾಡಿ ಆತನ ಬೇಕು ಬೇಡಗಳನ್ನು ಪೂರೈಸಿದಳು. ಮನೆಯವರ ಅಗತ್ಯಕ್ಕೆ ತಕ್ಕಂತೆ ಎಲ್ಲ ಬಗೆಯ ಅಡುಗೆಗಳನ್ನು ಹೊತ್ತು ಹೊತ್ತಿಗೆ ಮಾಡಿ ಬಡಿಸಿದಳು. ಮನೆಯ ಸಂಪ್ರದಾಯ ರೀತಿ ನೀತಿಗಳನ್ನು ತನ್ನದಾಗಿಸಿಕೊಂಡು ನಡೆಸಿಕೊಂಡು ಬರುತ್ತಿದ್ದಾಳೆ.ಖುದ್ದು ತನ್ನ ಮಕ್ಕಳ ಊಟ, ಉಪಚಾರ, ಓದು, ಮನೆಪಾಠ ಎಲ್ಲವನ್ನು ಆಕೆಯೇ ನಿರ್ವಹಿಸಿದಳು. ಅವರ ಸುಸ್ಥಿರ ಆರೋಗ್ಯಕ್ಕೆ ಅವಶ್ಯಕವಾದ ಎಲ್ಲವನ್ನು ಆಕೆ ನಿರ್ವಂಚನೆಯಿಂದ ಮಾಡಿದಳು. ಮಕ್ಕಳನ್ನು ಸ್ವಾವಲಂಬಿಯನ್ನಾಗಿ ಬೆಳೆಸಿದಳು.ಊರಿನ ಪ್ರತಿಷ್ಠಿತ ಮನೆತನವಾದ ಕಾರಣ ಅವರ ಮನೆಗೆ ಬರುವ ಹೋಗುವ ಅತಿಥಿಗಳ ಸಂಖ್ಯೆ ಕೂಡ ಹೆಚ್ಚಾಗಿತ್ತು ಅಂತೆಯೇ ಆಕೆ ಅವರೆಲ್ಲದ ಚಹಾ ತಿಂಡಿಗಳ ಸರಬರಾಜು ಎಂದು ಎಲ್ಲವನ್ನು ಮಾಡುತ್ತಿದ್ದಳು. ಭಾರತೀಯ ಸಂಸ್ಕೃತಿಯಲ್ಲಿ.ಸಾಂಪ್ರದಾಯಿಕವಾಗಿ ನಡೆದು ಬಂದ ಎಲ್ಲ ಪದ್ಧತಿಗಳನ್ನು ಅನೂಚಾನವಾಗಿ ನಡೆಸಿಕೊಂಡು ಬರುತ್ತಿದ್ದ ಆಕೆಗೆ ಓರ್ವ ಪರಿಪೂರ್ಣ ಗೃಹಿಣಿ, ಕರ್ತವ್ಯನಿಷ್ಠ ವ್ಯಕ್ತಿ ಎಂಬ ತೃಪ್ತಿ ದೊರಕಿತ್ತು…. ಆದರೆ ಆಕೆಗೆ ದೊರೆಯಬೇಕಾದ ಗೌರವ ಸಮ್ಮಾನಗಳು ?? ಇಂದಿಗೂ ಆಕೆ ಅವುಗಳನ್ನು ನಿರೀಕ್ಷಿಸುತ್ತಿದ್ದಾಳೆ.ಇದೀಗ ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ. ತಮ್ಮ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ ಎಂಬುದು ನಿಜ. ಆದರೆ ವೈಯುಕ್ತಿಕ ನೆಲೆಯಲ್ಲಿ ಆಕೆಗೆ ಮಾತ್ರ ಮಕ್ಕಳಿಂದ ಯಾವುದೇ ರೀತಿಯ ಸಹಾಯ ಸಹಕಾರ ದೊರೆಯುತ್ತಿಲ್ಲ.ಇನ್ನು ಪತಿಯನ್ನಂತೂ ಕೇಳಲೇಬೇಡಿ.ಮಾಡೋಕೆ ಆಗದಿದ್ದರೆ ಹೊರಗಿನಿಂದ ತರಿಸಿ ಇಡು. ಅಷ್ಟಕ್ಕೂ ಇರೋ ನಾಲ್ಕು ಜನರಿಗೆ ಅಡುಗೆ ಮಾಡೋದು ಕೂಡ ಒಂದು ಕಷ್ಟದ ಕೆಲಸವೇ? ಎಂದು ಹೀಗಳೆಯುತ್ತಾರೆ . ಇಂತಹ ಗಂಡಸರು ಅಡುಗೆ ಮನೆಯ ಕೆಲಸ ಎಂದರೆ ಕೇವಲ ಅಡುಗೆ ಮಾಡುವುದು ಮಾತ್ರ ಎಂದು ಭಾವಿಸಿರುತ್ತಾರೆ.ಅಡುಗೆ ಮನೆಯಲ್ಲಿ ಗ್ಯಾಸ್ ಕಟ್ಟೆಯನ್ನು ಒರೆಸುವುದರಿಂದ ಹಿಡಿದು ಪಾತ್ರೆ ತೊಳೆಯುವ, ಎಲ್ಲವನ್ನು ನೀಟಾಗಿ ಜೋಡಿಸಿಡುವ, ತರಕಾರಿಗಳನ್ನು ತೊಳೆದು ಹೆಚ್ಚಿ ಒಗ್ಗರಣೆ ಹಾಕಿ ಪಲ್ಯ ಮಾಡುವ ಅದಕ್ಕೆ ಜೊತೆಯಾಗಿ ಅನ್ನ ಸಾರು ಚಪಾತಿ ರೊಟ್ಟಿ ಮಾಡುವ ಕೆಲಸ ಒಂದೇ, ಎರಡೇ? ಇನ್ನು ಇದರ ಜೊತೆಗೆ ಸಾರಿಗೆ, ಪಲ್ಯಗಳಿಗೆ ಹಾಕುವ ಮಸಾಲೆ ಪುಡಿ ಮತ್ತಿತರ ಪುಡಿಗಳ ತಯಾರಿ ಸುಮ್ಮನೆ ಆಗುತ್ತದೆಯೇ?ಅದರಲ್ಲೂ ದಿನದ ಮೂರು ಹೊತ್ತು ಕಡ್ಡಾಯವಾಗಿ ಅಡುಗೆ ತಿಂಡಿ ಮಾಡಲೇಬೇಕಿರುತ್ತದೆ. ಇದರ ಜೊತೆಗೆ ಅಡುಗೆ ಮನೆಯ ರಂಪವನ್ನು ಸ್ವಚ್ಛ ಮಾಡುವುದು. ಮತ್ತೆ ಮನೆಯ ಸದಸ್ಯರಿಗೆ ಹೊತ್ತು ಹೊತ್ತಿಗೆ ಚಹಾ, ಕಾಫಿ, ತಿಂಡಿಯನ್ನು ಅವರು ಇದ್ದ ಜಾಗಕ್ಕೆ ಸರಬರಾಜು ಮಾಡುವುದು. ಅವರು ತಿಂದು ಕುಡಿದು ಅಲ್ಲಲ್ಲಿ ಇಟ್ಟ ತಟ್ಟೆ ಲೋಟಗಳನ್ನು ಅಡುಗೆ ಮನೆಗೆ ತಂದು ತೊಳೆದು ಸ್ವಸ್ತಾನಕ್ಕೆ ಸೇರಿಸುವುದು ಸುಮ್ಮನೆ ಮಾತಲ್ಲ ಅಲ್ವೇ? ಇದೆಲ್ಲಾ ಗಂಡಸರಿಗೆ  ಗೊತ್ತಾಗುತ್ತದೆಯೇ?ಇಂತಹ ನೂರಾರು ಸಾವಿರಾರು ಹೆಣ್ಣು ಮಕ್ಕಳ ಗೋಳಿನ ಬಾಳನ್ನು ಗಂಡಸರು ಅರಿತಿದ್ದಾರೆಯೇ?ಮುಂಜಾನೆಯಿಂದ ಸಾಯಂಕಾಲದವರೆಗೂ ಎಡಬಿಡದೇ ಕೆಲಸ ಮಾಡುವ ಆಕೆ ಒಂದೊಮ್ಮೆ ಎಲ್ಲಾದರೂ ಹೊರಗೆ ಸುತ್ತಾಡಿ ಬರುವ ಆಶಯವನ್ನು ವ್ಯಕ್ತಪಡಿಸಿದಾಗ ನಮ್ಮ ಹಾಗೆ ಹೊರಗೆ ಹೋಗಿ ದುಡಿದರೆ ಗೊತ್ತಾಗುತ್ತದೆ ! ಎಷ್ಟು ಕಷ್ಟ ಇದೆ ಅಂತ.ತಣ್ಣಗೆ ಫ್ಯಾನಿನ ಕೆಳಗೆ ನೆರಳಲ್ಲಿ ಇರ್ತಿ ನೋಡು.. ನಿನಗೇನು ಗೊತ್ತು ನಮ್ಮ ಕಷ್ಟ! ಎಂದು ಹಂಗಿಸುತ್ತಾರೆ ಮತ್ತೆಕೆಲವೊಮ್ಮೆ ಗಿಡದಲ್ಲಿ ದುಡ್ಡು ಬಿಡುತ್ತಾ ಹೇಗೆ? ಹಾಗೇನಾದರೂ ಬಿಟ್ಟಿದ್ದರೆ ಹರಿದುಕೊಂಡು ಬಾ…ಬೇರೆ ದೇಶಕ್ಕೂ ಹೋಗಿ ತಿರುಗಾಡಿ ಬರೋಣಂತೆ ಎಂಬ ವ್ಯಂಗ್ಯದ ಮಾತುಗಳು ಬರುತ್ತವೆ.ಇನ್ನು ಕೆಲವೊಮ್ಮೆ ಈ ವ್ಯಂಗ್ಯ ತುಸು ಅತಿರೇಕಕ್ಕೆ ಹೋಗಿ ಮನೆಯ ಹಿತ್ತಲಿನ ಕರಿಬೇವಿನ ಗಿಡ ಸುತ್ತುವ ನಡಿ ಎಂದುಎಲ್ಲರಿಗೂ ಹಂಗಿಸಿ ತಮಾಷೆ ಮಾಡಿ ಆಕೆ ತನ್ನ ಸುತ್ತಾಡುವ ಆಸೆಗೆ ಎಳ್ಳು ನೀರು ಬಿಡುವಂತೆ ಮಾಡುತ್ತಾರೆ.ಮತ್ತೆ ಒಂಚೂರು ಆಸೆಯಿಂದ ಸ್ನೇಹಿತೆಯರ ಜೊತೆಗೆ ಕಿಟ್ಟಿ ಪಾರ್ಟಿ, ಚೀಟಿ ಹಾಕೋದು ಅಂತ ಮಾಡುವ ಆಶಯವನ್ನು ಹೇಳಿದಾಗ ಹು ಇದೊಂದು ಕಡಿಮೆ ಇತ್ತು. ಅದೇನು ಹೆಣ್ಣು  ಮಕ್ಕಳೋ ಏನೋ? ಪ್ರತಿ ತಿಂಗಳು ಕಿಟ್ಟಿ ಪಾರ್ಟಿಯಂತೆ. ವೈವಿಧ್ಯಮಯ ಬಟ್ಟೆಗಳಂತೆ, ಹುಚ್ಚುಚ್ಚಾರ ಅಲಂಕಾರಗಳಂತೆ, ಫ್ಯಾನ್ಸಿ ಡ್ರೆಸ್ ಅಂತೆ… ಇವರಿಗೆಲ್ಲ ಮಾಡೋದಿಕ್ಕೆ ಬೇರೆ ಕೆಲಸ ಇಲ್ಲ ನೋಡಿ .ಗಂಡಸರು ಕಷ್ಟಪಟ್ಟು ದುಡಿದು ತರ್ತಾರೆ ಇವ್ರು ಚಿತ್ರವಿಚಿತ್ರವಾಗಿ ಡ್ರೆಸ್ ಮಾಡಿಕೊಂಡು ಮಜಾ ಮಾಡಿ ಫೋಟೋ ತಕ್ಕೊಂಡು ಸ್ಟೇಟಸ್ ಗೆ ಇಡುವುದರಲ್ಲಿ ಆಯ್ತು… ಹೀಗಾದ್ರೆ ಗಂಡ ಉದ್ದಾರ ಆದಹಾಗೆ ಎಂಬ ಮಾತುಗಳು ಅವರ ಬಾಯಿಂದ ಸಲೀಸಾಗಿ ಬರುತ್ತವೆ.ಇನ್ನು ಹೆಣ್ಣು ಮಕ್ಕಳೇ ಸೇರಿ ಟ್ರಿಪ್ ಹೋಗ್ತೀವಿ ಅಂತ ಹೇಳಿದಾಗ ಇನ್ನು ಇದೊಂದು ಕಡಿಮೆ ಇತ್ತು ನೋಡು. ಹೆಣ್ಣು ಮಕ್ಕಳೆಲ್ಲ ತಾವು ತಾವೇ ಹೊರಟು ನಿಂತು ಬಿಟ್ಟರು. ಮನೆ ಮಕ್ಕಳು ಎಲ್ಲವನ್ನು ಮರೆತಿದ್ದಾರೆ. ಸರ್ಕಾರದವರು ಇವರಿಗೆ ಬಸ್ ಫ್ರೀ ಮಾಡಿ ನಮಗೆ ಸಂಕಷ್ಟ ತಂದಿಟ್ಟರು ಎಂದು ಅವರನ್ನು ಹಂಗಿಸುತ್ತಾರೆ.ಒಂದೊಮ್ಮೆ ರಾತ್ರಿಯ ಊಟಕ್ಕೆ ಬೇಗನೇ ಗಂಡ ಮನೆಗೆ ಬರದೇ ಹೋದಾಗ ಆಕೆ ಪದೇ ಪದೇ ಕರೆ ಮಾಡಿದರೆ, ಇಡೀ ದಿನ ಮನೆಯಿಂದ ಹೊರಗೆ ಇದ್ದು ಈಗಲೂ ಕೂಡ ಸ್ನೇಹಿತರ ಜೊತೆ ಹರಟೆ ಹೊಡೆಯುತ್ತಾ ಪಾರ್ಟಿ ಮಾಡುವಾಗ ಗಂಡಸರು ಕೂಡ ತಮ್ಮ ಹೆಂಡಂದಿರನ್ನು ಕುರಿತು  ರಾತ್ರಿ 8 ಘಂಟೆ ಆಯ್ತು ಅಂದ್ರೆ ಶುರುವಾಯಿತು ನೋಡಪ್ಪ ಈ ಹೆಣ್ಣು ಮಕ್ಕಳ ಕಿರಿಕಿರಿ. ಅಲ್ಲ ಇವರಿಗೇನು ಕಡಿಮೆ ಮಾಡಿದ್ದೀವಿ ಅಂತ ಈ ರೀತಿ ವರ್ತಿಸ್ತಾರೋ ಗೊತ್ತಿಲ್ಲ ಎಂದು ಸ್ನೇಹಿತರೆಲ್ಲ ಸೇರಿ ಆಡಿಕೊಳ್ಳುತ್ತಾರೆ.ಹೆಣ್ಣುಮಕ್ಕಳೇನಾದರೂ ಮನೆಯಿಂದ ಹೊರಗೆ ಹೋಗಿ ನಾಲ್ಕು ಕಾಸು ಸಂಪಾದಿಸುವ ನಿಟ್ಟಿನಲ್ಲಿ ದುಡಿಯುವ ಆಸೆಯನ್ನು ವ್ಯಕ್ತಪಡಿಸಿದರೆ ನಿನಗಾರು ಕೊಡ್ತಾರಪ್ಪ ನೌಕರಿ? ಅಷ್ಟಕ್ಕೂ ನೀವು ಓದಿರೋದಾದ್ರೂ ಏನು? ದೊಡ್ಡ ದೊಡ್ಡ ಡಿಗ್ರಿ ಮಾಡಿದವರು ತಲೆ ಮೇಲೆ ಮಣ್ಣು ಹೊತ್ತು ನಿಂತಿದ್ದಾರೆ ಅಂತದ್ದರಲ್ಲಿ ನಿಮ್ಮಂಥವರಿಗೆ ನೌಕರಿ ಕೊಟ್ಟರೆ ಅವರು ಅಂಗಡಿ ಬಾಗಿಲು ಹಾಕಿಕೊಂಡು ಹೋಗಬೇಕು ಅಷ್ಟೇ ! ಎಂದು ಹಂಗಿಸುತ್ತಾರೆ.ಅದಾಗ್ಯೂ ಅವರು ಹಠ ಬಿಡದೆ ಹೋದಾಗ ಮನೆ ಮತ್ತು ಮಕ್ಕಳ ಜವಾಬ್ದಾರಿ ನಿನ್ನದೇ …ನಂತರ ಇಲ್ಲದ ತಗಾದೆ ತಗೀಬಾರದು ಅಂತ ಹೆಂಡತಿಗೆ ತಾಕೀತು ಮಾಡುತ್ತಾರೆ. ಇನ್ನು ಮುಂದೆ ನಾನು ನಿನಗೆ ಯಾವುದಕ್ಕೂ ಹಣ ಕೊಡೋದಿಲ್ಲ ನಿನ್ನ ದುಡಿಮೆಯಲ್ಲೇ ನಿನ್ನ ಖರ್ಚು ವೆಚ್ಚಗಳನ್ನು ನಿಭಾಯಿಸಿಕೊಳ್ಳಬೇಕು ಎಂದು ಮೊದಲೇ ಆಕೆಗೆ ಎಚ್ಚರಿಸುತ್ತಾರೆ.ಇನ್ನು ಆಕೆ ಒಳ್ಳೆಯ ಉದ್ಯೋಗದಲ್ಲಿ ಇದ್ದರೆ ದುಡಿತೀನಿ ಅಂತ ಧಿಮಾಕು ತೋರಿಸಬೇಡ. ಅದೆಷ್ಟೇ ಇದ್ದರೂ ಮಕ್ಕಳ ಅಂಡುತೊಳೆಯೋದು ತಪ್ಪೋದಿಲ್ಲ ಎಂದು ಕಿಚಾಯಿಸುತ್ತಾರೆ.ದುಡಿಯುತ್ತಿರುವ ಆಕೆ ಕೆಲಸದ ಒತ್ತಡದಲ್ಲಿ ತುಸು ಜೋರಾಗಿ ಮಾತನಾಡಿದರೆ ನಾನು ಮೊದಲೇ ಹೇಳಿದ್ದೆ ನಿನಗೆ ನಿನ್ನ ಕೈಲಿ ಆಗುವ ಕೆಲಸ ಅಲ್ಲ ಇದು ಎಂದು. ನೀನೇನು ದುಡಿದು ಮನೆ ಮತ್ತು ಮಕ್ಕಳನ್ನು ಸಾಕಬೇಕಾಗಿಲ್ಲ ಬಿಟ್ಟುಬಿಡು ಎಂದು ಆರಾಮಾಗಿ ಹೇಳುತ್ತಾರೆ.ಅಕಸ್ಮಾತ್ ಆಕೆ ಏನಾದರೂ ಒಳ್ಳೆಯ ಸಂಬಳದ ನೌಕರಿಯಲ್ಲಿದ್ದರೆ ಬೇರೊಂದು ರೀತಿಯಲ್ಲಿ ಆಕೆಯನ್ನು ಶೋಷಿಸುತ್ತಾರೆ…… ಹಾಗಾದರೆ ಹೆಣ್ಣು ಮಕ್ಕಳ ಕಷ್ಟ ಗಂಡಸರಿಗೆ ಗೊತ್ತಾಗುತ್ತಿಲ್ಲವೇ?ಖಂಡಿತವಾಗಿಯೂ ಗೊತ್ತಾಗುತ್ತದೆ ಆದರೆ ಅವರದ್ದು ಧೃತರಾಷ್ಟ್ರನ ಕುರುಡು. ಗೊತ್ತಿಲ್ಲದವರಿಗೆ ತಿಳಿಸಿ ಹೇಳಬಹುದು ಗೊತ್ತಿದ್ದು ಗೊತ್ತಿಲ್ಲದವರಂತೆ ಇದ್ದರೆ ?ಖಂಡಿತವಾಗಿಯೂ ಹೆಣ್ಣು ಮಕ್ಕಳ ಬದುಕನ್ನು ಕೇವಲ ಒಂದು ದಿನ ಬದುಕಲು ಗಂಡಸರಿಗೆ ಸಾಧ್ಯವಿಲ್ಲ. ಆದರೆ ಇದನ್ನು ಒಪ್ಪಿಕೊಳ್ಳಲು ಅವರ ಸೋ ಕಾಲ್ಡ್ ಪುರುಷಾಹಂಕಾರ ಸಮ್ಮತಿ ನೀಡುವುದಿಲ್ಲ. ಹೆಂಗಸರು ಇರುವುದೇ ತಮ್ಮ ಚಾತರಿಗೆ ತಾವು ಇರುವುದೇ ಅವರನ್ನು ಆಳಲು ಎಂಬ ಭಾವ ಎಲ್ಲಿಯವರೆಗೂ ಪುರುಷರನ್ನು ಹಿಡಿದಿಡುತ್ತದೆಯೋ ಅಲ್ಲಿಯವರೆಗೂ ಪುರುಷರು ಖಂಡಿತವಾಗಿಯೂ ಸುಧಾರಿಸುವುದಿಲ್ಲ.ಅರ್ಥವಾದರೂ ಸಹಾಯ ಮಾಡಲಾಗದೇ ಇರುವುದು ಕೈಲಾಗದತನವೋ, ಅವಜ್ಞೆಯೋ ನೀವೇ ಹೇಳಿ ? ವೀಣಾ ಹೇಮಂತ್ ಗೌಡ ಪಾಟೀಲ್

“ಹೆಂಗಸರ ಕಷ್ಟ ಗಂಡಿಗೆ ಗೊತ್ತೇ??” ವೀಣಾ ಹೇಮಂತ್‌ ಗೌಡ ಪಾಟೀಲ Read Post »

ಇತರೆ

“ಸಮಕಾಲೀನ ಸಾಹಿತ್ಯಿಕ ಚಟುವಟಿಕೆಗಳಿಗೆ ಹೊಸದೊಂದು ದಾರಿದೀಪವಾದ‘ಹೊಲದಂಬಾರಿ” ಬಯಲು ಕವಿಗೋಷ್ಠಿ

ಇತರೆ ಸಂಗಾತಿ “ಸಮಕಾಲೀನ ಸಾಹಿತ್ಯಿಕ ಚಟುವಟಿಕೆಗಳಿಗೆ ಹೊಸದೊಂದು ದಾರಿದೀಪವಾದ ‘ಹೊಲದಂಬಾರಿ” ಬಯಲು ಕವಿಗೋಷ್ಠಿ ​ರಾಣೇಬೆನ್ನೂರಿನ ಕೂನಬೇವು ಗ್ರಾಮದ  ಚಂಸು ಪಾಟೀಲ್ ರವರ ಹೊಲದ ಮಣ್ಣಿನ ಮಡಿಲೊಳಗೆ ಜರುಗಿದ ” ಹೊಲದಂಬಾರಿ”  ಅಪರೂಪದ ಬಯಲು ಕವಿಗೋಷ್ಠಿಯು ಯಶಸ್ವಿಯಾಗಿ ನಡೆಯಿತು. ​ ರಾಣೇಬೆನ್ನೂರಿನ ‘ಕಾಗದ ಸಾಂಗತ್ಯ ಸಾಂಸ್ಕೃತಿಕ ವೇದಿಕೆ’. ದಸರಾ ಹಬ್ಬದ ಸಾಂಪ್ರದಾಯಿಕ ಸಂಭ್ರಮಕ್ಕೆ ಮಣ್ಣಿನ ತೇವಾಂಶ ತುಂಬಲು ರೂಪುಗೊಂಡ ಪರಿಕಲ್ಪನೆಯ “ಹೊಲದಂಬಾರಿ”. ನಗರದ ಸದ್ದು-ಗದ್ದಲದಿಂದ ಆಚೆ ಬಂದು, ಕೂನಬೇವು ಗ್ರಾಮದ ರೈತನ ಹಸಿರು ಹೊಲದಂಗಳದಲ್ಲಿ ನಡೆದ ಈ ಬಯಲು ಕವಿಗೋಷ್ಠಿ ಸಮಕಾಲೀನ ಸಾಹಿತ್ಯ ವಲಯದಲ್ಲಿ ಹೊಸದೊಂದು ಚಿಂತನೆಯ ಕದ ತಟ್ಟಿದೆ. ​ವಿಸ್ಮಯದ ಚಾಲನೆ: ​ಕಾರ್ಯಕ್ರಮದ ಆರಂಭವೇ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗು ಮಾಡಿತ್ತು. ಯಾವುದೇ ರಾಜಕಾರಣಿಯ ಕೈಯಿಂದ ರಿಬ್ಬನ್ ಕತ್ತರಿಸುವ ಅಥವಾ ಗಣ್ಯರ ಸಮ್ಮುಖದಲ್ಲಿ ದೀಪ ಬೆಳಗಿಸುವ ಜಡ ಸಂಪ್ರದಾಯ ಇಲ್ಲಿರಲಿಲ್ಲ. ಬದಲಿಗೆ, ವೃತ್ತಿಯಿಂದ ಕೃಷಿಕರಾಗಿದ್ದು, ಪ್ರವೃತ್ತಿಯಿಂದ ಸಂವೇದನಾಶೀಲ ಕವಿಯಾಗಿ ಹಲವು ಕವನ ಸಂಕಲನಗಳನ್ನು ನಾಡಿಗೆ ಕಟ್ಟಿಕೊಟ್ಟಿರುವ ಹಿರಿಯ ಕೃಷಿ ಕವಿ ಚಂ.ಸು. ಪಾಟೀಲ್ ಅವರು ಹೊಲದಂಗಳಕ್ಕೆ ನೇಗಿಲೊಡನೆ ಬಂದಿಳಿದರು.​ಅವರು ಕಪ್ಪು ಮಣ್ಣಿನ ನೆಲದ  ಮೇಲೆ ನೇಗಿಲಿನಿಂದ ಪ್ರೀತಿಯ ಒಂದು ಸಾಲು (ಗೆರೆ) ಎಳೆದಾಗ, ಅಲ್ಲಿ ನೆರೆದಿದ್ದ ಸಾಹಿತ್ಯಾಸಕ್ತರ ಕಣ್ಣುಗಳಲ್ಲಿ ಬೆರಗು ಮೂಡಿತ್ತು. ಬಿದಿರಿನ ತಟ್ಟೆಯಲ್ಲಿದ್ದ ನವಧಾನ್ಯಗಳ ಜೊತೆಗೆ, ಭಾಗವಹಿಸಿದ ಪ್ರತಿಯೊಬ್ಬ ಕವಿಯೂ ತಾವು ಕೈಬರಹದಲ್ಲಿ ಬರೆದು ತಂದಿದ್ದ ಕವಿತೆಯ ಸಾಲುಗಳ ಚೀಟಿಗಳನ್ನು ಆ ನೇಗಿಲ ಸಾಲಿಗೆ ಭಕ್ತಿಯಿಂದ ಬಿತ್ತಿದರು. ನಂತರ ಕೃಷಿಕರ ಒರಟು ಕೈಗಳು ಆ ಅಕ್ಷರ-ಧಾನ್ಯಗಳ ಮೇಲೆ ಮಣ್ಣು ಮುಚ್ಚಿದವು; ಮಣ್ಣಿನ ಕೊಡದಿಂದ ಹನಿ ನೀರೆರೆದು, “ಅಕ್ಷರ ಬಿತ್ತಿದ್ದೇವೆ, ಭಾವದ ಫಸಲು ತೆಗೆಯಲಿದ್ದೇವೆ” ಎಂದು ಘೋಷಿಸಿದಾಗ ಇಡೀ ಹೊಲದಂಗಳದಲ್ಲಿ ಅಪ್ಪಟ ಪ್ರಕೃತಿಯ ಚಪ್ಪಾಳೆ ಮೊಳಗಿತು. ​ಚಾಲನೆ ನೀಡಿ  ಮಾತನಾಡಿದ ಚಂ.ಸು. ಪಾಟೀಲ್, “ರೈತ ಹೊಲದಲ್ಲಿ ಕಾಳು ಬಿತ್ತಿದರೆ ಜಗತ್ತಿಗೆ ಅನ್ನವಾಗುತ್ತದೆ; ಅದೇ ನೆಲದ ಮೇಲೆ ಭಾವ ಬಿತ್ತಿದರೆ ಬದುಕಿಗೆ ಕಾವ್ಯವಾಗುತ್ತದೆ. ಅನ್ನ ಕೊಡುವ ಮಣ್ಣು ಮತ್ತು ಅರಿವು ಕೊಡುವ ಅಕ್ಷರ ಬೇರೆ ಬೇರೆಯಲ್ಲ. ಇವತ್ತು ಕವಿಗಳು ಎಸಿ ಹಾಲ್ ಬಿಟ್ಟು ನಮ್ಮ ಹೊಲದ ಬದುವಿಗೆ ಬಂದಿರುವುದು ಈ ನೆಲದ ಸಂಸ್ಕೃತಿಗೆ ಸಂದ ಬಹುದೊಡ್ಡ ಗೌರವ. ಕಾವ್ಯ ಮತ್ತು ಕೃಷಿ ಎರಡೂ ಸಮ್ಮಿಲನಗೊಂಡಿದೆ. ಒಬ್ಬ ಸೂಕ್ಷ್ಮ ಸಂವೇದನೆಯ ಕಲಾವಿದನ ಕಣ್ಣೋಟ ಮತ್ತು ಅಂಕಣಕಾರನ ಸಾಮಾಜಿಕ ಕಾಳಜಿ ಒಟ್ಟಾಗಿ ಬೆರೆತಾಗ ಇಂತಹದೊಂದು ನೈಸರ್ಗಿಕ, ಕಲಾತ್ಮಕ ಕಲ್ಪನೆ ಮೈದಳೆಯಲು ಸಾಧ್ಯ ಎಂಬುದನ್ನು ನಾಮದೇವ ಕಾಗದಗಾರರು ಸಾಬೀತುಪಡಿಸಿದ್ದಾರೆ. ಎಂದು ನುಡಿದರು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಲೇಖಕ, ಕಲಾವಿದ ನಾಮದೇವ ಕಾಗದಗಾರರು ಮಾತನಾಡುತ್ತಾ“ನಮ್ಮ ಬಹುತೇಕ ಸಾಹಿತ್ಯಿಕ ಚಟುವಟಿಕೆಗಳು ನಗರಕೇಂದ್ರಿತವಾಗುತ್ತಾ, ಜೀವಂತಿಕೆಯನ್ನು ಕಳೆದುಕೊಳ್ಳುತ್ತಿವೆ. ಕಾವ್ಯ ಹುಟ್ಟುವುದೇ ಮಣ್ಣಿನ ತೃಷೆಯಿಂದ, ಹಸಿರಿನ ಕಂಪಿನಿಂದ. ಆ ಕಾವ್ಯವನ್ನು ಮತ್ತೆ ಅದರ ಹುಟ್ಟೂರಾದ ನೆಲದ ಮಡಿಲಿಗೇ ಕರೆದೊಯ್ಯುವ ಹಂಬಲವೇ ‘ಹೊಲದಂಬಾರಿ’. ಕೃಷಿಕನ ಬೆವರು ಸುರಿಯುವ ಜಾಗದಲ್ಲಿ ಕವಿಯ ಸಾಲುಗಳು ಮೊಳೆಯಬೇಕು; ಆಗ ಮಾತ್ರ ಅಕ್ಷರಕ್ಕೆ ಪ್ರಾಮಾಣಿಕ ತೂಕ ಬರುತ್ತದೆ. ಯಾವುದೇ ಕೃತಕ ಚೌಕಟ್ಟುಗಳಿಲ್ಲದೆ ಮಣ್ಣಿನ ಮೇಲೆ ಕುಳಿತು ಕಾವ್ಯ ಸಂಭ್ರಮಿಸುವುದು ಬದುಕಿನ ಪರಮ ಸತ್ಯಕ್ಕೆ ಮುಖಾಮುಖಿಯಾದಂತೆ ಎಂದು ಹೇಳಿದರು.ಪತ್ರಕರ್ತರಾದ ನಿಂಗರಾಜ ಗುದಗೇರ, ಕೆ.ಎಸ್ ನಾಗರಾಜ  ಇತರರು ಉಪಸ್ಥಿತರಿದ್ದರು ಈ ಗೋಷ್ಠಿಯಲ್ಲಿ ಹಿರಿಯ ಕವಿಮನಗಳ ಅನುಭವದ ಜೊತೆಗೆ ಕಾಲೇಜು ಯುವ ಕವಯಿತ್ರಿಯರ ಹೊಸ ಸಂವೇದನೆಗಳು ಮುಖಾಮುಖಿಯಾದರು. ​ಭಾವದ ಫಸಲು ಎಂಬ ವಿಭಾಗದಲ್ಲಿ ಹಿರಿಯ ಕವಿಮನಗಳಾದ ಸಾಹಿತಿ ಡಾ. ಎಂ.ಈ.ಶಿವಕುಮಾರ ಹೊನ್ನಾಳಿ,ಡಾ. ಲಕ್ಷ್ಮೀಕಾಂತ ಮಿರಜಕರ ಶಿಗ್ಗಾಂವಿ, ನಾಗರಾಜ ಹುಡೇದ ಹಾವೇರಿ, ರಮೇಶ ಬಡಿಗೇರ ಹಲಗೇರಿ, ಎಸ್.ಹೆಚ್.ಪಾಟೀಲ್ ರಾಣೇಬೆನ್ನೂರ, ದಾಕ್ಷಾಯಣಿ ಉದಗಟ್ಟಿ ರಾಣೇಬೆನ್ನೂರ  ಅವರು ಭಾಗವಹಿಸಿ ಕವನ ವಾಚಿಸಿದರು.  ಹಾಗೂ​ಕಾವ್ಯದ ನವ ಚಿಗುರು ವಿಭಾಗದಲ್ಲಿ ಯುವ ಕವಯಿತ್ರಿಯರುಸ್ಥಳೀಯ ಕೆ.ಎಲ್.ಇ.ಸಂಸ್ಥೆಯ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎ. ವಿದ್ಯಾರ್ಥಿನಿಯರಾದ ಜಾಸ್ಮಿನ್.ಬಿ.ದೊಡ್ಡಮನಿ, ಅನುಪಾ ಕೋಗಿಲೇ, ಚೈತ್ರಾ ಪೂಜಾರ ಚಿಕ್ಕಕುರುವತ್ತಿ, ಸುಮಾ ರಾಮಣ್ಣನವರ ಚಿಕ್ಕಕುರುವತ್ತಿ ಹಾಗೂ ನಮ್ರತಾ ಚಂದ್ರಪ್ಪ ಭಂಗೇರ್, ವರ್ಷಾ ಬೆಳಕೇರಿ  ಅವರು ಕವಿತೆಗಳನ್ನು ವಾಚಿಸಿದರು. ​ಬದುವಿನ ಮೇಲೆ ಅರಳಿದ ಕಾವ್ಯದ ಮೆರುಗು​ಕಾರ್ಯಕ್ರಮಕ್ಕೆ ಯಾವುದೇ ಕೃತಕ ವೇದಿಕೆ ಇರಲಿಲ್ಲ, ಬದಲಿಗೆ ಹೊಲದ ಮಣ್ಣೇ ರಂಗಮಂಟಪವಾಗಿತ್ತು. ಮರದ ನೆರಳಿನಲ್ಲಿ, ಹೊಲದ ಒಡ್ಡು-ಬದುಗಳ ಮೇಲೆ ಆಸೀನರಾಗಿದ್ದರು.​ಕವಿಗಳು ಒಬ್ಬೊಬ್ಬರಾಗಿ ಬಯಲು ಗಾಳಿಯ ಲಯಕ್ಕೆ ತಕ್ಕಂತೆ ತಮ್ಮ ಕವನಗಳನ್ನು ವಾಚಿಸಿದರು. ಕೆಲವರು ಹಸಿರು ಜೋಳದ ಸಾಲುಗಳ ನಡುವೆ ಹೆಜ್ಜೆ ಹಾಕುತ್ತಾ ಕವಿತೆ ಓದಿದರೆ, ಇನ್ನು ಕೆಲವರು ಮಣ್ಣಿನ ಹೆಂಟೆಯ ಮೇಲೆ ಕುಳಿತು ರೈತನ ಬದುಕಿನ ಬವಣೆ, ಮಳೆ-ಬೆಳೆಯ ಸಂಕಷ್ಟ ಮತ್ತು ದಸರೆಯ ನೈಜ ಸಡಗರವನ್ನು ಕಾವ್ಯರೂಪದಲ್ಲಿ ಬಿಚ್ಚಿಟ್ಟರು. ಗಾಳಿಗೆ ತಲೆಯಾಡಿಸುತ್ತಿದ್ದ ಹಸಿರು ಪೈರುಗಳು, ತಂಪೆರೆಯುವ ಅಕ್ಟೋಬರ್ ಗಾಳಿ ಮತ್ತು ಹಿನ್ನೆಲೆಯಲ್ಲಿ ಕೇಳಿಬರುತ್ತಿದ್ದ ಪಕ್ಷಿಗಳ ಚಿಲಿಪಿಲಿ ಧ್ವನಿಗಳು ಕಾವ್ಯವಾಚನಕ್ಕೆ ನೈಸರ್ಗಿಕ ಸಂಗೀತದಂತೆ ಸಾಥ್ ನೀಡಿದವು. ಕಾವ್ಯವು ಕಾಗದದಿಂದ ನೇರವಾಗಿ ಗಾಳಿಯ ತರಂಗಗಳಿಗೆ, ಅಲ್ಲಿಂದ ಮಣ್ಣಿನ ಕಣಗಳಿಗೆ ಪ್ರವಹಿಸುವಂತಿತ್ತು ಆ ವಾತಾವರಣ ಹೊಸ ದಿಕ್ಕಿನ ಮುನ್ನುಡಿ. ​ದಸರಾ ಹಬ್ಬವೆಂದರೆ ಕೇವಲ ಅರಮನೆಯ ವೈಭವವಷ್ಟೇ ಅಲ್ಲ; ಅದು ರೈತನ ಕಣಜ ತುಂಬುವ, ಭೂತಾಯಿಗೆ ಕೃತಜ್ಞತೆ ಸಲ್ಲಿಸುವ ಕೃಷಿ ಸಂಸ್ಕೃತಿಯ ಹಬ್ಬವೂ ಹೌದು ಎಂಬುದನ್ನು ‘ಹೊಲದಂಬಾರಿ’ ಅತ್ಯಂತ ಅರ್ಥಪೂರ್ಣವಾಗಿ ನೆನಪಿಸಿಕೊಟ್ಟಿದೆ.​ ವಿನೂತನ ಪರಿಕಲ್ಪನೆ ಮತ್ತು ಕಾಗದ ಸಾಂಗತ್ಯದ ಈ ಪ್ರಯತ್ನವು, ಕೇವಲ ಸಭಾಂಗಣಗಳಿಗೆ ಸೀಮಿತವಾಗುತ್ತಿದ್ದ ಸಮಕಾಲೀನ ಸಾಹಿತ್ಯಿಕ ಚಟುವಟಿಕೆಗಳಿಗೆ ಹೊಸದೊಂದು ದಾರಿದೀಪವಾಗಿದೆ. ನೇಗಿಲಿನ ಗೆರೆಯಲ್ಲಿ ಬಿತ್ತಿದ ಆ ಅಕ್ಷರಗಳು ಕೇವಲ ಮಣ್ಣಿನೊಳಗೆ ಮಾತ್ರವಲ್ಲ, ಸಾಹಿತ್ಯಾಸಕ್ತರ ಎದೆಯಾಳದಲ್ಲೂ ಹೊಸ ಆಲೋಚನೆಗಳಾಗಿ ಮೊಳಕೆಯೊಡೆದಿವೆ. ಕಾವ್ಯವೆಂಬುದು ಬದುಕಿನಿಂದ ಪ್ರತ್ಯೇಕವಲ್ಲ, ಅದು ಮಣ್ಣಿನ ಗುಣ ಮತ್ತು ಬೆವರಿನ ಧ್ವನಿ ಎಂಬುದನ್ನು ‘ಹೊಲದಂಬಾರಿ’ ಸಾರಿತು.  ಡಾ. ಎಂ. ಈ. ಶಿವಕುಮಾರ್ ಹೊನ್ನಾಳಿ.

“ಸಮಕಾಲೀನ ಸಾಹಿತ್ಯಿಕ ಚಟುವಟಿಕೆಗಳಿಗೆ ಹೊಸದೊಂದು ದಾರಿದೀಪವಾದ‘ಹೊಲದಂಬಾರಿ” ಬಯಲು ಕವಿಗೋಷ್ಠಿ Read Post »

ಕಾವ್ಯಯಾನ

ಪರಿಮಳ ಐವರ್ನಾಡು ಹೊಂಬೆಳಕು “ಖಳನಾಯಕನಾರು?”

ಕಾವ್ಯ ಸಂಗಾತಿ ಪರಿಮಳ ಐವರ್ನಾಡು ಹೊಂಬೆಳಕು “ಖಳನಾಯಕನಾರು?” ಚಿಗುರೊಡೆದ ಒಲವ ಕುಡಿಯನುಮುಚ್ಚಿಟ್ಟು ಬಚ್ಚಿಟ್ಟು ಹೃದಯದಲೇ ಕಾಪಿಟ್ಟುಪೂಜಿಸಿ ಆರಾದಿಸಿ ಮನದಲೇ ಶೃಂಗರಿಸಿಪ್ರೀತಿಸಿದರೂ ಹೇಳಲು ಅಡ್ಡಗೋಡೆಯಾದುದೇನುಭಯವೋ? ತಂಗಾಳಿಯಂದದಿ ತಂಪೆರೆದೊಲವು ಕಣ್ಣೋಟದಲೇ ನಾಚಿಸಿದೊಲವು ಕಿರುನಗೆಯಲಿ ಕೆನ್ನೆ ಕೆಂಪಾಗಿಸಿದೊಲವುಮೌನದಲ್ಲಿ ಮಾತಾಡಿಸಿದೊಲವುಒಲವು ಒಂದಾಗಲು ತಡೆಯಾದುದೇನುಪರಿಸ್ಥಿತಿಯೋ?  ತನ್ನವರ ಸಂತಸಕ್ಕೆಮನೆತನದ ಗೌರವಕ್ಕೆತನ್ನಾಸೆಯ ಬಲಿ ಕೊಟ್ಟುನಗುವ ಮುಖವಾಡ ಹೊತ್ತು ಒಲವ ದೂರ ತಳ್ಳಿದ್ದೇನುಹಣೆಬರಹವೋ?  ಕೈಗೆಟುಕಿ ಜಾರಿದಕನಸಿನ ದೋಣಿಯನುದಡಸೇರುವ ಮುನ್ನವೇಮುಳುಗಿಸಿದ ಕ್ರೂರತೆಯೇನುಇಬ್ಬರ ನಡುವೆ ಬೆಳೆಸಿದ ಗೋಡೆಯೇನುದುರಾದೃಷ್ಟವೋ?  ನನ್ನದಾಗಬೇಕಿದ್ದ ನಿನ್ನನುನಿನ್ನದಾಗಬೇಕಿದ್ದ ನನ್ನನ್ನುಪರರ ಪಾಲಿಗಿಟ್ಟುನಗುತ ಅಳುವ ಕಲಿಸಿದಒಲವಿಗಿಂತ ದೊಡ್ಡದಾದುದೇನುತ್ಯಾಗವೋ?  ಖಳನಾಯಕ ಯಾರಿಲ್ಲಿ ಹೇಳುಭಯವೋ,ಪರಿಸ್ಥಿತಿಯೋಹಣೆಬರಹವೋ,ದುರಾದೃಷ್ಟವೋತ್ಯಾಗವೋ ಸರಿಯಾದ  ಸಮಯಕ್ಕೆ ಹೇಳದುಳಿದಪ್ರೀತಿಯೋ? ಖಳನಾಯಕನಾರು? ಪರಿಮಳ ಐವರ್ನಾಡು ಹೊಂಬೆಳಕು

ಪರಿಮಳ ಐವರ್ನಾಡು ಹೊಂಬೆಳಕು “ಖಳನಾಯಕನಾರು?” Read Post »

ಪುಸ್ತಕ ಸಂಗಾತಿ

“ಗೊರೂರು ಅನಂತರಾಜು ಅವರ ಕೃತಿ ಮುಳುಗಡೆ ಹಳ್ಳಿಯ ಬದುಕಿನ ತಲ್ಲಣಗಳು” ಕೆ.ಎನ್.ಚಿದಾನಂದ

ಪುಸ್ತಕಸಂಗಾತಿ ಕೆ.ಎನ್.ಚಿದಾನಂದ “ಗೊರೂರು ಅನಂತರಾಜು ಅವರ ಕೃತಿ ಮುಳುಗಡೆ ಹಳ್ಳಿಯ ಬದುಕಿನ ತಲ್ಲಣಗಳು” ಗೊರೂರು ಅನಂತರಾಜು ಅವರ ಕೃತಿ ಮುಳುಗಡೆ ಹಳ್ಳಿಯ ಬದುಕಿನ ತಲ್ಲಣಗಳು ಅಭಿವೃದ್ಧಿ ಎಂಬ ಬೃಹತ್ ಯೋಜನೆಗಳ ಹೆಸರಿನಲ್ಲಿ ತಮ್ಮ ಹುಟ್ಟೂರನ್ನು, ಬಾಲ್ಯದ ಸವಿನೆನಪುಗಳನ್ನು ಹಾಗೂ ತಲೆತಲಾಂತರದ ಮಣ್ಣಿನ ಬಂಧವನ್ನು ಜಲಸಮಾಧಿ ಮಾಡಿಕೊಂಡ ದುರಂತ ನೈಜತೆಯೇ ಗೊರೂರು ಅನಂತರಾಜು ಅವರ ವಿಮರ್ಶಾ ಲೇಖನಗಳ ಸಂಗ್ರಹ ಕೃತಿ ಮುಳುಗಡೆ ಹಳ್ಳಿಯ ಬದುಕಿನ ತಲ್ಲಣಗಳು, ಹೇಮಾವತಿ ನದಿಗೆ ಗೊರೂರು ಬಳಿ ಅಣೆಕಟ್ಟು ಕಟ್ಟುವಾಗ ಮುಳುಗಡೆಯಾದ ಗ್ರಾಮ ಉಲಿವಾಲ. ಆ ಗ್ರಾಮದ ಲೇಖಕರು ಮೋಹನ್ ಕುಮಾರ್ ವಿಸ್ತೃತವಾಗಿ ಮುಳುಗಡೆಯಾದ ಗ್ರಾಮದ ಸಂತ್ರಸ್ತ ಜನರ ಮಾನಸಿಕ ವೇದನೆ, ಆರ್ಥಿಕ ಸಂಕಷ್ಟ  ಮರುಜೀವನಕ್ಕಾಗಿ  ನಡೆಸಿದ  ಹೋರಾಟವನ್ನು  ಮಾನವೀಯ ಸಂವೇದನೆಯಿಂದ ಕಾದಂಬರಿಯಲ್ಲಿ ಕಟ್ಟಿಕೊಡುತ್ತಾರೆ.   ಗೊರೂರು ಅನಂತರಾಜುರವರು ಈ ಕೃತಿಯಲ್ಲಿ ಪ್ರಕೃತಿ ಮತ್ತು ಮಾನವ ಸಂಬಂಧಗಳ ಮೌಲ್ಯವನ್ನು ಮರುಚಿಂತನೆಗೆ ಒಳಪಡಿಸುವ ಕಾದಂಬರಿ ಕೇವಲ ನಷ್ಟದ ಕಥೆಯನ್ನು ಹೇಳದೆ, ಸಂಕಷ್ಟಗಳ ನಡುವೆಯೂ ಮನುಷ್ಯ ಕಟ್ಟಿ ಬೆಳೆಸಿಕೊಳ್ಳುವ ಅಪ್ರತಿಮ ಸಹನಶೀಲತೆಯನ್ನು ಎತ್ತಿಹಿಡಿಯುತ್ತದೆ.ಕಾದಂಬರಿ ಕೇವಲ ಮುಳುಗಡೆಯಾದ ಒಂದು ಭೂಭಾಗದ ಕಥೆಯಲ್ಲ; ಅದು ತಮ್ಮ ಬೇರುಗಳನ್ನು ಕಳೆದುಕೊಂಡ ಅಸಂಖ್ಯಾತ ಜನರ ಮೌನ ಆಕ್ರಂದನ, ಅಸಹಾಯಕತೆ ಮತ್ತು ತೀವ್ರ ಮಾನವೀಯ ಸಂವೇದನೆಗಳ ಜೀವಂತ ಸಾಕ್ಷಿ. ತಮ್ಮ ಕಣ್ಣೆದುರೇ ಹುಟ್ಟಿದೂರು ಜಲಸಮಾಧಿಯಾಗುವುದನ್ನು ಕಂಡ ಜನರ ಆತಂಕ, ಸ್ಥಳಾಂತರದ ನಂತರ ಅನುಭವಿಸಿದ ಸಾಮಾಜಿಕ ಹಾಗೂ ಆರ್ಥಿಕ ಆಘಾತಗಳು ಮತ್ತು ಬದುಕನ್ನು ಮತ್ತೆ ಮೊದಲಿನಿಂದ ಕಟ್ಟಿಕೊಳ್ಳಲು ಅವರು ನಡೆಸಿದ ಕಠಿಣ ಹೋರಾಟವನ್ನು ಲೇಖಕರು ತಮ್ಮ ವಿಮರ್ಶಾ ಲೇಖನದಲ್ಲಿ  ಪ್ರಾಮಾಣಿಕವಾಗಿ ದಾಖಲಿಸಿದ್ದಾರೆ. ನಮ್ಮಲ್ಲಿ ಬೃಹತ್ ಆಣೆಕಟ್ಟುಗಳು, ಮಾನವ ನಾಗರಿಕತೆಗೆ ಬೆಳಕು ನೀಡಿದ್ದರೂ, ಸಾವಿರಾರು ಕುಟುಂಬಗಳನ್ನು ಸ್ವಂತ ನೆಲದಿಂದ ನಿರ್ದಯವಾಗಿ ಕಿತ್ತೆಸೆದಿವೆ. ಆ ಮನೆಗಳ ಒಲೆಗಳು ಆರಿಹೋಗಿವೆ; ಮಣ್ಣಿನೊಂದಿಗಿನ ತಲೆ ತಲಾಂತರದ ಬಂಧ ಕಡಿದುಬಿದ್ದಿದೆ. ವಿಮರ್ಶೆಯ ಸೂಕ್ಷ್ಮತೆ ವಿಶ್ಲೇಷಣಾತ್ಮಕ ದೃಷ್ಟಿಕೋನದಿಂದ ಮೂಡಿಬಂದ ಲೇಖನ ಓದುಗನ ಅಂತರಂಗ ಕಲಕುತ್ತದೆ. ಆಡಳಿತ ವ್ಯವಸ್ಥೆಯ ನೀತಿಗಳು ಮತ್ತು ವಿಪರ್ಯಾಸಗಳನ್ನು ಪ್ರಶ್ನಿಸುತ್ತಲೇ, ಸಂಕಷ್ಟದ ಸಮಯದಲ್ಲೂ ಮನುಷ್ಯನ ಸಹನಶೀಲತೆ ಹಾಗೂ ಮರುಜೀವ ಪಡೆಯುವ ಅಪಾರ ಜೀವದಂಡದ ಶಕ್ತಿಯನ್ನು  ಪ್ರಕಟಪಡಿಸುತ್ತದೆ. ಹಾಸನದ ಮಣ್ಣು ಕೇವಲ ಇತಿಹಾಸದ ಕಥೆ ಹೇಳುವುದಿಲ್ಲ; ಸಂಸ್ಕೃತಿ ಮತ್ತು ಜನಪದ ಐತಿಹ್ಯಗಳ ಮಹಾಕಾವ್ಯವನ್ನೇ ಉಸಿರಾಡಿಸುತ್ತದೆ. ಜಾನಪದ ಸಾಹಿತ್ಯ ಬೆಳೆದ ರೀತಿಯನ್ನು ಗೊರೂರು ಅನಂತರಾಜು ಅವರು ಹೇಳುತ್ತ, ಉಪನ್ಯಾಸಕರಾದ ಡಾ. ಬಿ. ಡಿ. ಕುಮಾರ್ ರವರ  ಕೃತಿ ಹಾಸನ ಸೀಮೆಯ ಐತಿಹ್ಯಗಳು ಕೃತಿಯ ಕುರಿತಂತೆ ಇಲ್ಲಿನ ಪರಂಪರೆಯ ವೈಭವ, ಗ್ರಾಮೀಣ ಸೊಗಡು ಹಾಗೂ ಸ್ಥಳೀಯ ನಂಬಿಕೆಗಳನ್ನು ತೀಕ್ಷ್ಣ ವಿಮರ್ಶಾತ್ಮಕ ದೃಷ್ಟಿಯಲ್ಲಿ ತೆರೆದಿಡುತ್ತದೆ. ನಮ್ಮ ಸಾಂಸ್ಕೃತಿಕ ಬೇರುಗಳ ನೆನಪುಗಳನ್ನು ಜಾಗೃತಗೊಳಿಸಿ, ನಾಡಿನ ಚರಿತ್ರೆಯನ್ನು ಹೊಸ ಬೆಳಕಿನಲ್ಲಿ ಗೌರವಿಸಲು ಈ ಲೇಖನವು ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ. ಮಂಟೇಸ್ವಾಮಿ ಕಾವ್ಯದ ಪವಾಡ ಸಾದೃಶ್ಯ, ಸಾಮಾಜಿಕ ಸಮಾನತೆಯ ಸಂದೇಶ ಹಾಗೂ ಜಾನಪದ ಧ್ವನಿಯನ್ನು ರಂಗಭೂಮಿಯ ಸನ್ನಿವೇಶಗಳಲ್ಲಿ ಅತ್ಯಂತ ಜೀವಂತವಾಗಿ ತೆರೆದಿಡುವ ಕೃತಿಯಿದು. ಗೊರೂರು ಅನಂತರಾಜು ಅವರು ಪಿ. ನಾಗರತ್ನಮ್ಮ ಮಳವಳ್ಳಿ ಅವರ ಸಂಪಾದಿತ ಕೃತಿಯನ್ನು ಓದಿ ಅದರ ಕುರಿತು ಬಹಳಷ್ಟು ಮಾಹಿತಿಯನ್ನು ಸ್ಮರಿಸಿಕೊಳ್ಳುತ್ತಾರೆ. ಮಂಟೇಸ್ವಾಮಿ ಅವರ ಜನಪದ ಸಾಹಿತ್ಯವು ನಿಕೃಷ್ಟರ ಉದ್ಧಾರ, ಭಕ್ತಿ ಮತ್ತು ಸಾಂಸ್ಕೃತಿಕ ಪ್ರತಿರೋಧದ ಆಳವಾದ ಅರ್ಥಗಳನ್ನು ವಿಶ್ಲೇಷಿಸುತ್ತದೆ. ನಮ್ಮ ನೆಲದ ಮೂಲ ಜನಪದ ಚೇತನವನ್ನು ಜಾಗೃತಗೊಳಿಸಿ, ಸಮಾನತೆಯ ಹಾದಿಯಲ್ಲಿ ಮುನ್ನಡೆಯಲು ಇದು ಓದುಗರಿಗೆ ಸ್ಪೂರ್ತಿ ನೀಡುತ್ತದೆ. ಉತ್ತರ ಕರ್ನಾಟಕದ ಜಾನಪದವು ಅಪ್ಪಟ ಮಣ್ಣಿನ ವಾಸನೆ ಹಾಗೂ ಹಳ್ಳಿಯ ಬದುಕಿನ ನವಿರು ಭಾವನೆಗಳನ್ನು ತನ್ಮಯತೆಯಿಂದ ಹಿಡಿದಿಟ್ಟು ನಾವು ಮನೆಗೆ ತಂದ ಕನ್ನಡಿ ಹೇಗೆ ನಮ್ಮನ್ನು ನೋಡುತ್ತದೆ ಎಂಬ ವಿಚಾರವನ್ನು ಗೊರೂರು ಅನಂತರಾಜು ಅವರ ನಾ ತಂದೀನಿ ನಿನ್ನ ನನ್ನನ್ಯಾಕ ನೋಡತಿ ಹೊಳ್ಳೊಳ್ಳಿ ಲೇಖನವು ತಿಳಿಸುತ್ತದೆ. ಈ ಕೃತಿಯ ಕರ್ತೃ ಡಾ. ಪ್ರಕಾಶ್ ಗ. ಖಾಡೆಯವರೊಂದಿಗಿನ ಪ್ರವಾಸದ ಅನುಭವಗಳನ್ನು ತಿಳಿಸುತ್ತದೆ. ಗ್ರಾಮೀಣ ಜೀವನದ ಪ್ರೀತಿ, ಹಾಸ್ಯ, ಸೌಹಾರ್ದ ಹಾಗೂ ಜನಪದ ಸಾಹಿತ್ಯದ ತೀವ್ರತೆಯನ್ನು ತೀಕ್ಷ್ಣವಾಗಿ ವಿಶ್ಲೇಷಿಸುತ್ತದೆ. ನಮ್ಮ ನೆಲದ ಮೂಲ ಸಂಸ್ಕೃತಿ ಮತ್ತು ನೈಜ ಮನುಷ್ಯ ಸಂಬಂಧಗಳ ಸೌಂದರ್ಯವನ್ನು ಮರು ಶೋಧಿಸಲು ಇದು ಓದುಗರಿಗೆ ಪ್ರೇರಣೆಯಾಗಿದೆ. ಕವಿ ಎಲ್.ಎನ್.ಮುಕುಂದರಾಜ್ ಅವರ   ಕವಿತೆ ಹದ್ದು ಮತ್ತು ಜೀಮೂತ ವಿಮರ್ಶಿಸುತ್ತಾ ಈ ಕಾವ್ಯದ ವಸ್ತು ಸಂಸ್ಕೃತದಲ್ಲಿ ಸುಪ್ರಸಿದ್ಧವಾದ ಶ್ರೀಹರ್ಷನ ನಾಗನಂದ ನಾಟಕದ್ದು. ಪುರಾಣ ಕೇಂದ್ರಿತ ಪ್ರಜ್ಞೆಯನ್ನು ವರ್ತಮಾನದ ಸ್ಥಿತಿಗೆ ತರುವ ಕವಿ ಈ ವಸ್ತುವನ್ನು ನಮ್ಮ ಸಮಕಾಲೀನತೆಯಲ್ಲಿ ಇರಿಸಿ ಈ ಹೊತ್ತಿನ ಹದ್ದುಗಳು ನಮ್ಮ ಪರಿಸರದ ಜೀಮೂತವಾಹನ ರಂತಹ ಮುಗ್ಧರನ್ನು ಕುಕ್ಕಿ ತಿನ್ನುವ ಕರಾಳತೆಯನ್ನು ಚಿತ್ರಿಸಲು ಬಳಸುತ್ತಾರೆ. ಗರುಡನಿಗೆ ಸರದಿಯ ಪ್ರಕಾರ ಆಹಾರ ವಾಗಬೇಕಿದ್ದ ಶಂಖಚೂಡನೆಂಬ ನಾಗನನ್ನು ಉಳಿಸಲು ತಾನೇ ಗರುಡನಿಗೆ ಆಹಾರವಾಗುವ ಜೀಮೂತವಾಹನನ ತ್ಯಾಗಶೀಲತೆ ಉದಾತ್ತವಾದದ್ದು. ಆತನ ತ್ಯಾಗ ಪುರಾಣ ಪ್ರಜ್ಞೆಯೊಳಗೆ ಮೌಲ್ಯಾಧಾರಿತವಾದದ್ದೇ ಆಗಿದೆ.  ಹದ್ದು ಮತ್ತು ಜೀಮೂತ ಕವಿತೆ ಜೀವನದ ಎತ್ತರದ ಧ್ಯೇಯಗಳು, ತ್ಯಾಗ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ತೀಕ್ಷ್ಣ ವಿಮರ್ಶಾತ್ಮಕವಾಗಿ ವಿಶ್ಲೇಷಿಸುತ್ತದೆ. ಬದುಕಿನ ಧ್ಯೇಯಗಳನ್ನು ಎತ್ತರಕ್ಕೇರಿಸಿಕೊಂಡು, ಸಮಾಜಕ್ಕೆ ಕರುಣಾ ಭಾವವನ್ನು ಪ್ರೇರೇಪಿಸುವ ಅದ್ಭುತ ಚಿಂತನೆಗಳ ಕವನವಿದು. ರಾಷ್ಟ್ರಕೂಟರ ಚಕ್ರವರ್ತಿ ಅಮೋಘವರ್ಷ ನೃಪತುಂಗನ ಶಾಂತಿ, ಸಾಹಿತ್ಯ ಪ್ರೀತಿ ಮತ್ತು ಉದಾರತೆಯನ್ನು ರಂಗಭೂಮಿಯ ಕನ್ನಡಿಯಲ್ಲಿ ಕಟ್ಟಿಕೊಡುವ ಅಪೂರ್ವ ಯತ್ನವನ್ನು ಬಶೀರ್ ರವರು ಮಾಡಿದ್ದಾರೆ. ಗೊರೂರು ಅನಂತರಾಜು ಅವರು ಬಶೀರರ ನಾಟಕ  ಕೃತಿಯನ್ನು ಸೊಗಸಾಗಿ ಪರಿಚಯಿಸಿದ್ದಾರೆ. ಈ ಲೇಖನವು ರಂಗಪಠ್ಯದ ತೀವ್ರತೆ, ರಾಜಧರ್ಮ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ವಿಶ್ಲೇಷಿಸುತ್ತದೆ. ನಾಡಿನ ಇತಿಹಾಸದ ಹಿರಿಮೆಯನ್ನು ನೆನಪಿಸುತ್ತಾ, ಪ್ರತಿಯೊಬ್ಬರಲ್ಲೂ ಉನ್ನತ ಆದರ್ಶ ಮತ್ತು ಸಾಂಸ್ಕೃತಿಕ ಅಭಿಮಾನವನ್ನು ಜಾಗೃತಗೊಳಿಸುವ ಪ್ರೇರಣಾದಾಯಿ ನಾಟಕ ಇದು. ಅರಸಿಕೆರೆಯ ಲೇಖಕಿ ಸಾವಿತ್ರಮ್ಮ ಓಂಕಾರ್ ರವರ ಕೃತಿ ಸುಂದರ ನವಿಲಿಗೆ ಚೆಂದನ ಗರಿ  ಕೃತಿಯಲ್ಲಿ ಒಟ್ಟು ಎಪ್ಪತ್ನಾಲ್ಕು  ಜೀವನಗಾಥೆಗಳನ್ನು ಕ್ರೋಡೀಕರಿಸಿ ಬರೆದ ಕೃತಿ. ಇದನ್ನು ಗೊರೂರು ಅನಂತರಾಜು ಬಹಳ ಚೆಂದರ ಚೌಕಟ್ಟಿನಲ್ಲಿ ಪರಿಚಯಿಸಿದ್ದಾರೆ. ಮಹಾತ್ಮ ಗಾಂಧೀಜಿಯವರ ನೆರಳಾಗಿ ಅಲ್ಲ, ಸ್ವತಂತ್ರ ವ್ಯಕ್ತಿತ್ವದ ಭದ್ರ ಬನಿಯಾಗಿ ನಿಂತ ಕಸ್ತೂರ್ಬಾ  ಅವರ ತ್ಯಾಗಮಯ ಬದುಕು ಸದಾ ಆದರ್ಶಪ್ರಾಯ. ಎಂ.ವಿ.ತ್ಯಾಗರಾಜು ಅವರು ಕಸ್ತೂರ್ಬಾ ಗಾಂಧಿಯವರನ್ನು ಕೇಂದ್ರೀಕರಿಸಿ ಬರೆದ ಕೃತಿಯಿದು. ಇದನ್ನು ಗೊರೂರು ಅನಂತರಾಜು  ಪರಿಚಯಿಸಿದ್ದು ಆ ಕೃತಿಯಲ್ಲಿನ ಕಸ್ತೂರ್ಬಾ ಅವರ ಧೈರ್ಯ ಮತ್ತು ಮೌನ ಸಮರ್ಪಣೆಯನ್ನು ತೀಕ್ಷ್ಣವಾಗಿ ಬಿಂಬಿಸುತ್ತದೆ. ಭಾರತೀಯ ನಾರಿಶಕ್ತಿಯ ಅಪೂರ್ವ ಸಾಹಸ ಗಾಥೆಯನ್ನು ನೆನಪಿಸಿ, ತತ್ವ ಬದುಕಿಗೆ ಪ್ರೇರಣೆ ನೀಡುವ ಸಾಂಸ್ಕೃತಿಕ ಕೈಗನ್ನಡಿಯಿದು. ಬಾಳು ಎಂಬುದು ಸೋಲು ಗೆಲುವು, ಲಾಭ ನಷ್ಟಗಳ ನಿರಂತರ ಪಗಡೆಯಾಟ. ಭೇರ್ಯ ರಾಮ ಕುಮಾರ್ ಅವರ ಬಾಳೆಂಬ ಪಗಡೆಯಾಟ ಕವಿತೆಯು ಜೀವನದ ಸಂಕೀರ್ಣತೆ, ಚಂಚಲತೆ ಮತ್ತು ಅನುಭವದ ವೈವಿಧ್ಯಗಳನ್ನು ಆಳವಾದ ವಿಮರ್ಶಾತ್ಮಕ ದೃಷ್ಟಿಯಿಂದ ವಿಶ್ಲೇಷಿಸುತ್ತದೆ ಎಂದು ಗೊರೂರು ಅನಂತರಾಜು ಕವಿ ಕವಿತೆಯನ್ನು ಪರಿಚಯಿಸುತ್ತಾರೆ. ಅನಿಶ್ಚಿತತೆಯ ನಡುವೆಯೂ ಬದುಕಿನ ಮೌಲ್ಯವನ್ನು ಹುಡುಕುತ್ತಾ, ವಿವೇಕ ಮತ್ತು ಆಶಾವಾದದಿಂದ ಮುನ್ನಡೆಯಲು ಪ್ರೇರೇಪಿಸುವ ಜಾಣ್ಮೆಯ ವಿಚಾರಪೂರ್ಣ ಚಿಂತನೆಗಳ ಅಮೂಲ್ಯ ಕವಿತೆಯಿದು. ಮುಟ್ಟನಹಳ್ಳಿಯ ತ್ಯಾಗರಾಜ್ ಅವರ ಚಾರಣದ ಸಾಹಸ ಕಥನ ಒಂದು ಪುಟ್ಟ ಮಾರ್ಗದರ್ಶಿ ಗೈಡ್ ನಂತಿದ್ದು ಪುಷ್ಪಗಿರಿಯ ಬೆಟ್ಟದಲ್ಲಿ ಚಾರಣ ಪ್ರಿಯರಿಗೆ ಅನುಕೂಲವಾಗಿದೆ ಎನ್ನುತ್ತಾರೆ ಗೊರೂರು ಅನಂತರಾಜು. ಸಾಗುವ ಹಾದಿ ಕೇವಲ ದಾರಿಯಲ್ಲ. ಅದು ಆತ್ಮಶೋಧನೆಯ ಮಹಾ ಸಾಹಸ. ಈ ಕೃತಿಯು ಪುಷ್ಪಗಿರಿಯ ಚಾರಣವ ಕಠಿಣ ಹಾದಿ, ನಿಸರ್ಗದ ಸವಾಲುಗಳು ಮತ್ತು ಮನಸ್ಸಿನ ಸಂಕಲ್ಪ ಶಕ್ತಿಯನ್ನು  ಅನಾವರಣಗೊಳಿಸಿದೆ ಶ್ರಮ ಸಾಹಸ ಹಾಗೂ ಪ್ರಕೃತಿ ಪ್ರೇಮದ ಮಹತ್ವವನ್ನು ಸಾರಿದೆ. ಪ್ರತಿಯೊಬ್ಬರಲ್ಲೂ ನಿರಂತರ ಮುನ್ನಡೆಯುವ ಚೈತನ್ಯ ಮತ್ತು ಜಯಿಸುವ ಆತ್ಮವಿಶ್ವಾಸ ತುಂಬುವ ಸಾಹಸಿ ಕಥನ ಇದು. ರುದ್ರಪಟ್ಟಣದ ಶಿಕ್ಷಕ ಸಾಹಿತಿ ಹೊ.ರಾ.ಪರಮೇಶ್ ಅವರ ಕೃತಿ ಸಾವಿರದ ಸಾಸಿವೆ ಇದರಲ್ಲಿ ಹೈಕುಗಳು ಎಂಬ ವಿಶಿಷ್ಟ ಕಾವ್ಯ ಸಾಹಿತ್ಯ ವಿಧಾನದಲ್ಲಿ  ರಚಿಸಲಾಗಿದೆ. ಕನ್ನಡ ಸಾಹಿತ್ಯದಲ್ಲಿ ಇದೊಂದು ವಿಭಿನ್ನ ವಿಧಾನವಾಗಿದ್ದು ಜೀವನ ಮೌಲ್ಯ ತಿಳಿಸುವ ಕೃತಿ. ಈ ಲೇಖನವು ಸಣ್ಣ ಸಣ್ಣ ವಿಚಾರಗಳ ಆಳಕ್ಕೆ ಇಳಿದು, ಸಾಹಿತ್ಯಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಹೊಸ ದೃಷ್ಟಿಕೋನದಲ್ಲಿ ವಿಶ್ಲೇಷಿಸುತ್ತದೆ. ಬದುಕಿನ ಸೂಕ್ಷ್ಮ ಸಂವೇದನೆಗಳನ್ನು ಎಚ್ಚರಿಸಿ, ಚಿಂತನೆಗಳಿಗೆ ಹೊಸ ದಾರಿ ತೋರಿಸುವ ಪ್ರೇರಣಾದಾಯಿ ಬರಹಗಳ ಸಂಗ್ರಹವಿದು. ಒಟ್ಟಾರೆ ಈ ಕೃತಿಯು ವಿವಿಧ ಪ್ರತಿಭಾನ್ವಿತ ಲೇಖಕರ  ಐವತ್ತೆರಡು ಪುಸ್ತಕ ಪರಿಚಯದ ಲೇಖನಗಳಿಂದ ಕೂಡಿದ್ದು ಬದುಕಿನ ಮಹಾ ಸಂಘರ್ಷದ ನಡುವೆಯೂ ಭರವಸೆಯನ್ನು ಕಂಡುಕೊಳ್ಳುವ ಈ ತಲ್ಲಣಗಳ ಸಂದರ್ಭವು, ನೆಲ ಜಲ ಮತ್ತು ಮನುಷ್ಯ ಸಂಬಂಧಗಳ ಮೌಲ್ಯವನ್ನು ಮರುಚಿಂತನೆ ಮಾಡಲು ಪ್ರತಿಯೊಬ್ಬ ಓದುಗನಿಗೂ ಪ್ರೇರಣೆ ನೀಡುತ್ತದೆ. ಕಾಲದ ಕನ್ನಡಿಯಂತೆ ನಿಲ್ಲುವ ಈ ಕೃತಿಯು, ಸಾಹಿತ್ಯಾಸಕ್ತರಿಗೂ ಮತ್ತು ಸಾಮಾಜಿಕ ಚಿಂತಕರಿಗೂ ಒಂದು ಅಮೂಲ್ಯವಾದ ದಿಕ್ಸೂಚಿಯಂತಿದ್ದು ಲೇಖಕರಾದ ಗೊರೂರು ಅನಂತರಾಜುರವರಿಗೆ ಶ್ರೇಯೋವೃದ್ಧಿಯನ್ನು ತರಲಿ ಎಂದು ಹಾರೈಸುವೆ. ಕೆ.ಎನ್. ಚಿದಾನಂದ (ನಾನಂಚಿ)ಶಿಕ್ಷಕರು ಮತ್ತು ಸಾಹಿತಿ,ಸಂಸ್ಕೃತಿ ಚಿಂತಕರು, ಹಾಸನ.

“ಗೊರೂರು ಅನಂತರಾಜು ಅವರ ಕೃತಿ ಮುಳುಗಡೆ ಹಳ್ಳಿಯ ಬದುಕಿನ ತಲ್ಲಣಗಳು” ಕೆ.ಎನ್.ಚಿದಾನಂದ Read Post »

ಕಾವ್ಯಯಾನ

ಡಾ.ಸರಸ್ವತಿ ಕಳಸದ ಅವರ ಕವಿತೆ “ಮರುಜನ್ಮವೆತ್ತಿ ಬಾರಯ್ಯಾ”

ಕಾವ್ಯ ಸಂಗಾತಿ ಡಾ.ಸರಸ್ವತಿ ಕಳಸದ “ಮರುಜನ್ಮವೆತ್ತಿ ಬಾರಯ್ಯಾ” ಮರುಜನ್ಮವೆತ್ತಿ  ಬಾರಯ್ಯ ಬಸವಬಿಳಿಬಣ್ಣ ಹೊರಗಿನ ಬದುಕೆಂಬುವರಯ್ಯಾಕರಿಬಣ್ಣ ಒಳಗಿನ ಬದುಕೆಂಬುವರಯ್ಯಾಭಿಕ್ಷೆಯೇ ನಮ್ಮೊಳಗಿನ ಬದುಕೆಂಬುವರಯ್ಯಾಇಂತಿಪ್ಪ ಲೋಕದಲ್ಲಿ ಬಯಸಿ ಬಾರಯ್ಯಾಬಸವ ಬಸವಳಿದವರ ಅಪ್ಪಿ  ಸಂತೈಸಯ್ಯಾಬಯಲಿನ ಬದುಕೆ ನಮ್ಮದೆಂದು  ಸಾರಾಯ್ಯಾ //ಹೆಣ್ಣು ಹೊನ್ನು ಮಣ್ಣು ನನ್ನ ದೆಂಬುವರಯ್ಯಾಹೆಬ್ಬುಲಿಯ ಗರ್ಭದಲಿ ಧರ್ಮ ಅಧರ್ಮವಾಗಿಹುದಯ್ಯಾದರ್ಪ ದೌರ್ಜನ್ಯ ಹೆಡೆಮುರಿ ಕಟ್ಟಿಹುದಯ್ಯಾಹಾಳಾದ ಗಂಗೆ ಹಾಲಾಹಲವಾಗಿಹಾಳಯ್ಯಾಪರಧನ -ಸತಿನೊಲ್ಲೆಯೆಂದು  ಮತ್ತೆ ಸಾರಯ್ಯಾ //ಇಂತಿಪ್ಪ ಲೋಕದಲ್ಲಿ ಬಯಸಿ ಬಾರಯ್ಯಾಬೆತ್ತಲಾಗುವುದೇ ಬಯಲಿನ ಬದುಕೆಂಬುವರಯ್ಯಾಕತ್ತಲಾಗುವುದೇ ನರಮೇಧವೆಂಬುವರಯ್ಯಾಶೀಲ-ಸಾಲ-ಶೂಲ ನಿತ್ಯ ಸತ್ಯವೆಂಬುವರಯ್ಯಾಇಂತಿಪ್ಪ ಲೋಕದಲ್ಲಿ ಬಯಸಿ ಬಾರಯ್ಯಾಬಸವ ಬಸವಳಿದವರ ಅಪ್ಪಿ  ಸಂತೈಸಯ್ಯಾಅಳಬೇಡ ಕೊಲಬೇಡವೆಂದು ಮತ್ತೆ ಸಾರಯ್ಯ //ಚಿನ್ನದ ಚೂರಿಗೆ  ಹೂ ಮುಡಿಸಿಹರಯ್ಯಾರಾಮನಲಿ ರಾವಣನ ಕೂಡಿಸಿಹರಯ್ಯಾಹೆತ್ತವರಲ್ಲಿ ಹುತ್ತ ಹುಡುಕಿಹರಯ್ಯಾಇಂತಿಪ್ಪ ಲೋಕದಲ್ಲಿ ಬಯಸಿ ಬಾರಯ್ಯಾಬಸವ ಬಸವಳಿದವರ ಅಪ್ಪಿ  ಸಂತೈಸಯ್ಯಾಕಾಲೇ ಕಂಬ ದೇಹವೇ ದೇಗುಲವೆಂದು ಸಾರಯ್ಯ//ಬೆತ್ತಲಾಗುವುದೇ ಬಯಲಿನ ಬದುಕೆಂಬುವರಯ್ಯಾಕತ್ತಲಾಗುವುದೇ ನರಮೇಧವೆಂಬುವರಯ್ಯಾಶೀಲ- ಶೂಲ -ಸಾಲ ನಿತ್ಯ ಸತ್ಯವೆಂಬುವರಯ್ಯಾಇಂತಿಪ್ಪ ಲೋಕದಲ್ಲಿ ಬಯಸಿ ಬಾರಯ್ಯಾಬಸವ ಬಸವಳಿದವರ ಅಪ್ಪಿ  ಸಂತೈಸಯ್ಯಾಕಳಬೇಡ ಕೊಲಬೇಡವೆಂದು ಮತ್ತೆ ಸಾರಯ್ಯ //ಚಿನ್ನದ ಚೂರಿಗೆ  ಹೂ ಮುಡಿಸಿಹರಯ್ಯಾರಾಮನಲಿ ರಾವಣನ ಕೂಡಿಸಿಹರಯ್ಯಾಹೆತ್ತವರಲ್ಲಿ ಹುತ್ತ ಹುಡುಕಿಹರಯ್ಯಾಇಂತಿಪ್ಪ ಲೋಕದಲ್ಲಿ ಬಯಸಿ ಬಾರಯ್ಯಾಬಸವ ಬಸವಳಿದವರ ಅಪ್ಪಿ  ಸಂತೈಸಯ್ಯಾಕಾಲೇ ಕಂಬ ದೇಹವೇ ದೇಗುಲವೆಂದು ಡಾ.ಸರಸ್ವತಿ ಕಳಸದ

ಡಾ.ಸರಸ್ವತಿ ಕಳಸದ ಅವರ ಕವಿತೆ “ಮರುಜನ್ಮವೆತ್ತಿ ಬಾರಯ್ಯಾ” Read Post »

You cannot copy content of this page

Scroll to Top