ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಥಾಗುಚ್ಛ

“ಹೆತ್ತಪ್ಪನ ಕೂಗು…..” ದಯಾನಂದ ಪಾಟೀಲರ ಸಣ್ಣಕಥೆ

ಕಥಾ ಸಂಗಾತಿ ದಯಾನಂದ ಪಾಟೀಲರ “ಹೆತ್ತಪ್ಪನ ಕೂಗು…..”   ಅದೊಂದು  ಸಣ್ಣ ಹಳ್ಳಿ ಶಿವಳ್ಳಿ ಸುಂದರ ಹಾಗೂ ಹಸಿರು ತುಂಬಿದ  ವನ ಸಿರಿ. ಕೋಗಿಲೆಯ ಇಂಪು ಪಕ್ಷಿಗಳ ಕೂಗು ನವಿಲುಗಳ ಕುಣಿತ ಹೀಗೆ ಹೇಳುತ್ತಾ ಹೋದರೆ ಕೊನೆಯೆ ಇಲ್ಲ. ಶಿವಳ್ಳಿ ಗ್ರಾಮದ ಮುಖಂಡ ಅವನೇ ಶಿವಲಿಂಗ ಹೆಸರಿಗೆ ತಕ್ಕಂತೆ ಇದ್ದ ಯಾವುದೇ ಸಮಸ್ಯೆ ಇರಲಿ ಪರಿಹಾರ  ಸಿಗುವತನಕ  ಹಠ ಬಿಡುತ್ತಿರಲಿಲ್ಲ ಇವನ ನಿಸ್ವಾರ್ಥ ಸೇವೆ ಕಂಡು ದೇವತಾ ಮನುಷ್ಯ ಎಂದು ಕರೆಯುತ್ತಿದ್ದರು. ಜಾತಿ ಧರ್ಮ ನೋಡದೇ ಸಾವು ನೋವು, ಮದುವೆ ಮನೆಯ ವಾಸ್ತು ಶಾಂತಿ ಎಲ್ಲವನ್ನು ಹೆಗಲು ಮೇಲೆ ಇಟ್ಟುಕೊಂಡು ಪೂರ್ಣ ಮಾಡುತ್ತಿದ್ದ ಕೆಲಸದ ವೈಖರಿ ನೋಡಿ ಹತ್ತಳ್ಳಿಗೆ ಜನಪ್ರಿಯನಾಗಿದ್ದ ಶಿವಲಿಂಗನಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಳು ಮಗಳು ಇದ್ದರು. ಇಬ್ಬರು ಮಕ್ಕಳಿಗೆ ತಕ್ಕಮಟ್ಟಿಗೆ ಶಿಕ್ಷಣ ಪಡೆದಿದ್ದರೂ ನೂರಾರು ಏಕರೆ ಗದ್ದೆ ಇರುವುದರಿಂದ ಕೃಷಿಯಲ್ಲಿ ಕೆಲಸ ಮಾಡುತ್ತಿದ್ದರು. ಅದರಲ್ಲಿ ಸಂತೋಷ ಕಂಡಿದ್ದರು. ತಂದೆಗೆ ಮಕ್ಕಳ ದುಡಿಮೆ ನೋಡಿ ಹೆಮ್ಮೆ ಹಾಗೂ ಅಭಿಮಾನ ಪಡುತ್ತಿದ್ದರು. ಮಕ್ಕಳು ದೊಡ್ಡವರಾದರು. ಮಕ್ಕಳಿಗೆ ಮದುವೆ ಮಾಡಿದರು ಕೆಲವು ವರುಷಗಳ ನಂತರ ಮಕ್ಕಳಿಗೆ ಮಕ್ಕಳು ಹುಟ್ಟಿದವು. ಮೊಮ್ಮಕ್ಕಳನ್ನು ಎತ್ತಿಕೊಂಡು ಆನಂದದ ಕ್ಷಣ ಅನುಭವಿಸುತ್ತಿದ್ದ ಶಿವಲಿಂಗ ಒಂದು ಕಡೆ ಗ್ರಾಮಸ್ಥರ ಪ್ರೀತಿ ಮತ್ತೊಂದು ಕಡೆ ಮಕ್ಕಳ ಮಮತೆ ಆಕಾಶಕ್ಕೆ ಎರಡೇ ಎರಡು ಗೇಣು ಎಂಬ ಭಾವನೆ ಅಡಕವಾಗಿತ್ತು. ತನ್ನ ಹೆಂಡತಿ ರಾಮಕ್ಕ ದೈವಭಕ್ತೆ ಗಂಡನಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕೆಲಸವನ್ನು ಮಾಡುತ್ತಿದ್ದಳು. ಮಕ್ಕಳಿಗೆ ತಾಯಿಯಾಗಿ ಮೊಮ್ಮಕ್ಕಳಿಗೆ ಅಜ್ಜಿಯಾಗಿ ಮನೆತನದ ಆಗು ಹೋಗುಗಳನ್ನು ತಾನೇ ಯಜಮಾನಿಯಾಗಿ ತೊಂದರೆಯಾಗದಂತೆ ಸಮಸ್ಯೆಗೆ ಮದ್ದು ನೀಡುವ ಕಲೆ ರಾಮಕ್ಕನಿಗೆ ಒಲಿದು ಬಂದಿತು. ಶಿವಲಿಂಗ ರಾಮಕ್ಕ ಜೋಡಿ ನೋಡಿ ಜನ ಇದ್ದರ ಇಂಗ ಇರಬೇಕ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಆದರೆ ಆ ಸ೦ತೋಷ ಬಹಳ ದಿನ ಉಳಿಯಲಿಲ್ಲ ರಾಮಕ್ಕನ ಆಕಾಲಿಕ ಸಾವು ಶಿವಲಿಂಗನಿಗೆ ಆಘಾತ ಜೊತೆ ಬರಸಿಡಿಲು ಕಂಡು ಎದೆ ಹೊಡೆದು ಹೋಗಿತ್ತು. ನನ್ನ ಬಾಳಿಗೆ ನೆರಳಾಗಿ ಬಂದ ಹೆಂಡತಿ ಸತ್ತು ಹೋದಳು ನಾನು ಇಂದು ಅನಾಥನಾದೆ ಬಿಕ್ಕಿ ಬಿಕ್ಕಿ ಅತ್ತ ಆದರೆ ಏನು? ಮಾಡೋದು ಸತ್ತವರು ಮರಳಿ ಬರುವುದಿಲ್ಲ. ರಾಮಕ್ಕನ ಪ್ರೀತಿ ಮುಗ್ಧತೆ ಕಂಡು ಅದೇ ಗುಂಗಿನಲ್ಲಿ ಕಾಲ ಕಳೆಯುತ್ತಿದ್ದ. ಮಕ್ಕಳು ಸೊಸೆಂದಿರು ಮನೆಗೊಂದು ಮೂರು ಬಾಗಿಲು ಎಂಬಂತೆ ಬೇರೆ ಬೇರೆಯಾದರು ಶಿವಲಿಂಗ ವ್ಯಕ್ತಿಯಾಗಿ ಶಕ್ತಿಯಾಗಿ ಬೆಳೆದ.  ತಾನು ಇಂದು ದಿಕ್ಕು ಇಲ್ಲದ ಬಿಕಾರಿಯಾಗಿ ನಿಂತಿದ್ದಾನೆ. ಸೊಸೆಂದಿರು ಊಟದಲ್ಲಿ ಸಹ ಪಾಲು ಮಾಡಿಕೊಂಡಿದ್ದಾರೆ ಮುಂಜಾನೆ ಒಬ್ಬರು ರಾತ್ರಿ ಒಬ್ಬರು ಮಕ್ಕಳು ಶಿವಲಿಂಗನನ್ನು ಪಾಲು ಮಾಡಿದ್ದರು ಇದೆಂಥ ಪರಿಸ್ಥಿತಿ ಬಂತು ನಾಯಿಕ್ಕಿಂತ ಕಡೆ,  ಆಸ್ತಿ ಪಾಸ್ತಿ ಮಾಡಿ ಮಕ್ಕಳನ್ನು ಮುದ್ದಾಗಿ ಬೆಳೆಸಿ ಇಂದು ಮಕ್ಕಳು ಬೀದಿಗೆ ತಳ್ಳಿದರು ಇಂಥ ನಾಯಿ ಬದುಕು ಯಾರಿಗೂ ಬರುವುದು ಬೇಡ ಆಕಾಶ ಕಡೆಗೆ ನೋಡುತ್ತಾನೆ. ತಂದೆ ತಾಯಿಗಳು ಹತ್ತು ಮಕ್ಕಳನ್ನು ಪೋಷಣೆ ಮಾಡುತ್ತಾರೆ.  ಆದರೆ ಮಕ್ಕಳಿಗೆ ತಂದೆ ತಾಯಿ ಭಾರ ಎಂದು ವೃದ್ಧಾಶ್ರಮಕ್ಕೆ ಹಾಗೂ ಮನೆಯಿಂದ ಹೊರಗೆ ಹಾಕುತ್ತಾರೆ. ಶಿವಲಿಂಗನ ತಲೆಯಲ್ಲಿ ಓಡುವ ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ ತಾನು ನಿಂತ ಭೂಮಿ ಬಾಯಿ ತೆರೆದು ಬಾ…ಬಾ ಎಂದು ಕರೆಯುತ್ತಿದೆ. ತಂದೆಯೆಂದರೆ ಸ್ವಾಭಿಮಾನಿ ತಂದೆಯಂದರೆ ಹಠವಾದಿ ದಯಾಮಾಯಿ ಎಂದು ಕರೆಯುವ ನಾವು ಇದೇ ನಾ ನಾವು ನೀಡುವ ಕೊಡುಗೆ ನಾ ? ಇದ್ದಾಗ  ಆಹಾರ  ಆಶ್ರಯ ನೀಡದೇ ಪ್ರೀತಿ ಮಾನವೀಯತೆ ಮಾಡದೇ ಹಣ ಅಧಿಕಾರ ಗಳಿಕೆ ಮಾಡಿದರೆ ಏನು? ಉಪಯೋಗ ಹೇಳಿ? ಕಾಲ ಚಕ್ರ ಹೀಗೆ ತಿರುಗುತ್ತ ಇರುತ್ತದೆ. ಇಂಥ ಘಟನೆಗಳಿಗೆ ಕೊನೆ ಇಲ್ಲವೆ? ಲೇಖಕರು: ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ

“ಹೆತ್ತಪ್ಪನ ಕೂಗು…..” ದಯಾನಂದ ಪಾಟೀಲರ ಸಣ್ಣಕಥೆ Read Post »

ಕಾವ್ಯಯಾನ

ಲಕ್ಷ್ಮೀದೇವಿ ಪತ್ತಾರ ಅವರ ಕವಿತೆ “ಮುಂದೆ ಹೋಗಲು ದಾರಿ ಬಿಡಿ”

ಕಾವ್ಯ ಸಂಗಾತಿ ಲಕ್ಷ್ಮೀದೇವಿ ಪತ್ತಾರ “ಮುಂದೆ ಹೋಗಲು ದಾರಿ ಬಿಡಿ” ಬಾನಂಗಳದಿ ಸ್ವಚ್ಚಂದವಾಗಿ ಹಾರಲು ಹೊದರೆ ರೆಕ್ಕೆ ಕತ್ತರಿಸಿ ಬಿಡುವಿರಿ ಮನಸಾರೆ ಈಜಲು  ಹೋದರೆಜಲದಾಳದಲ್ಲೆ ಸಿಡಿಮದ್ದು ಸಿಡಿಸುವಿರಿ  ನೆಲೆದಗಲ  ಹಬ್ಬಲು ಹೋದರೆ ಅಡ್ಡ ಬೇಲಿ ಹಾಕಿ ತಡೆಯುವಿರಿ ಬೆಳೆದು ಹೆಮ್ಮರವಾಗಲು ಹೋದರೆಬುಡಕ್ಕೆ ಬೆಂಕಿ ಹಚ್ಚುವಿರಿಅ  ಅಡೆತಡೆಯಿಲ್ಲದೆ ಓಡಬೇಕೆಂದರೆಗಡಿರೇಖೆ ಹಾಕಿ ನಿಲ್ಲಿಸಿಬಿಡುವಿರಿ ಹೀಗಾದರೆ ನಾವು ನೆಲೆ ಕಾಣುವುದು ಹೇಗೆ? ಬದುಕಿನ ಗುರಿ ಸಾಧಿಸುವುದಾದರೂ  ಹೇಗೆ ವಿಶ್ವಮಾನವನಾಗುವದಿರಲಿಮಾನವತೆಯುಳ್ಳ ಮನುಷ್ಯನಾಗಲಾದರೂನಮ್ಮನ್ನು ಬಿಟ್ಟು ಬಿಡಿ ,ಬಿಟ್ಟು ಬಿಡಿ ಲಕ್ಷ್ಮೀದೇವಿ ಪತ್ತಾರ

ಲಕ್ಷ್ಮೀದೇವಿ ಪತ್ತಾರ ಅವರ ಕವಿತೆ “ಮುಂದೆ ಹೋಗಲು ದಾರಿ ಬಿಡಿ” Read Post »

ಇತರೆ

“ಗೃಹ ಕೃತ್ಯ ಹಾಗೂ ಕೌಟುಂಬಿಕ ಜವಾಬ್ದಾರಿ… ಕಾನೂನು”ವೀಣಾ ಹೇಮಂತ್‌ ಗೌಡ ಪಾಟೀಲ

ಗೃಹ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ “ಗೃಹ ಕೃತ್ಯ ಹಾಗೂ ಕೌಟುಂಬಿಕ ಜವಾಬ್ದಾರಿ… ಕಾನೂನು” ಮನಸ್ಸಿನಲ್ಲಿ ಅತ್ಯಂತ ಗೊಂದಲವನ್ನು ಮೂಡಿಸಿ ಒಂದು ಬಗೆಯ ವಿಷಣ್ಣತೆಯನ್ನು ತುಂಬಿದ ಒಂದು ಪೋಸ್ಟ್ ಮುಖ ಪುಸ್ತಕದ ಪುಟದಲ್ಲಿ ಓದಿದೆ.ವಿಷಯ ಇಷ್ಟೇ ಕರ್ನಾಟಕದ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಲ್ಲಿ ಒಬ್ಬರಾದ ನ್ಯಾಯಮೂರ್ತಿ ಚಿಲಕೂರು ಸುಮಲತಾ ಅವರು ವಿವಾಹಿತ ಪತ್ನಿಯು ತನ್ನ ಪತಿ ಮತ್ತು ಆತನ ಕುಟುಂಬದವರಿಂದ ಗೃಹ ಕೃತ್ಯಗಳನ್ನು ಮಾಡಲೇಬೇಕು ಎಂಬ ಒತ್ತಾಯವನ್ನು ಹಾಗೂ ಪತಿಯ ತಂದೆ ತಾಯಿ ಹಾಗೂ ಕುಟುಂಬದ ಸರ್ವ ಸದಸ್ಯರ ಎಲ್ಲ ರೀತಿಯ ಕಾಳಜಿ ಮಾಡಬೇಕು ಎಂಬ ವಾದವನ್ನು ತಳ್ಳಿ ಹಾಕಿದೆ.ತಮ್ಮ ಪಾಲಕರ ಕಾಳಜಿಯನ್ನು ಮಾಡುವುದು ಅವರ ಗಂಡು ಹಾಗೂ ಹೆಣ್ಣು ಮಕ್ಕಳ ಮೊದಲ ಕರ್ತವ್ಯವಾಗಿರುತ್ತದೆಯೇ ಹೊರತು ಸೊಸೆ ಇಲ್ಲವೇ ಅಳಿಯನ ಕೆಲಸವಲ್ಲ… ಅಂತಹ ಕಾಳಜಿಯನ್ನು ಅವರು ತಾವೇ ಸ್ವಯಂ ಇಚ್ಛಾ ಪೂರ್ವಕವಾಗಿ ಮಾಡುತ್ತಿದ್ದರೆ ಪರವಾಗಿಲ್ಲ ಆದರೆ ಈ ಕುರಿತು ಅವರ ಮೇಲೆ ಯಾವುದೇ ರೀತಿಯ ನಿಯಂತ್ರಣ ಹೇರುವುದು ತಪ್ಪು ಎಂದು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.ಮುಂದುವರಿಸಿದ ನ್ಯಾಯಮೂರ್ತಿ ಸುಮಲತಾ ಅವರು ವಿವಾಹ ಎಂಬ ಪ್ರಕ್ರಿಯೆಯು ಸಂಗಾತಿಯನ್ನು ನಿಯಂತ್ರಿಸುವ ಅಥವಾ ಅವರ ಮೇಲೆ ಅಧಿಕಾರ ಚಲಾಯಿಸುವ, ಅವರ ವ್ಯಕ್ತಿತ್ವಕ್ಕೆ ಕುಂದು ತರುವ, ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ   ಲೈಸೆನ್ಸ್ ಅಲ್ಲ. ಈ ಕುರಿತು ಯಾರೊಬ್ಬರೂ ತಮ್ಮ ಸಂಗಾತಿಯನ್ನು ಒತ್ತಾಯ ಪಡಿಸಬಾರದು ಎಂದು ತಮ್ಮ ತೀರ್ಪಿನಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.ಹೆಣ್ಣು ಮಕ್ಕಳು ತಮ್ಮ ಪಾಲಕರನ್ನು ಭೇಟಿಯಾಗುವುದಕ್ಕೆ ಪತಿಯ ಇಲ್ಲವೇ ಗಂಡನ ಮನೆಯವರ ಅನುಮತಿಯ ಅವಶ್ಯಕತೆ ಇಲ್ಲ ಎಂದು ಅವರು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ. ತನ್ನಿಂದ ದೂರವಾದ ಪತ್ನಿ ಮತ್ತು ಮಗಳ ಮುಂದಿನ ಬದುಕನ್ನು ನಿರ್ವಹಿಸಲು ಅಗತ್ಯವಾದ ನಿರ್ವಹಣಾ ವೆಚ್ಚವನ್ನು ಕೊಡಲು ನಿರಾಕರಿಸಿ ಆಕೆಯ ಪತಿ ಹಾಕಿದ ಪಿಟಿಶನ್ ಅರ್ಜಿಯನ್ನು ತಿರಸ್ಕರಿಸಿದ ಈ ಮಾತನ್ನು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹೇಳಿದ್ದಾರೆ.ಉಚ್ಚ ನ್ಯಾಯಾಲಯದ ಈ ತೀರ್ಪನ್ನು ಸಾಕಷ್ಟು ಮನನೊಂದ ಮಹಿಳೆಯರು ಸ್ವಾಗತಿಸಿದ್ದಾರೆ. ಆದರೆ ಬಹಳಷ್ಟು ಜನ ಹಿರಿಯ ಜೀವಿಗಳು ಭಾರತೀಯ ಸಂಪ್ರದಾಯಕ್ಕೆ ವಿರೋಧವಾದ ಈ ಮನಸ್ಥಿತಿಯನ್ನು ಖಂಡಿಸಿದ್ದಾರೆ. ಹಾಗಾದರೆ ಮದುವೆಯಾಗುವುದರ ಅವಶ್ಯಕತೆಯಾದರೂ ಏನಿದೆ ಎಂದು ಕೆಲ ಯುವಕರು ಹಾಗೂ ಅವರ ಹೆತ್ತವರು ಪ್ರಶ್ನಿಸಿದ್ದಾರೆ.ಮತ್ತೆ ಕೆಲ ಗಂಡಸರ ಮಾತುಕತೆ ವಾದಗಳನ್ನು ನೋಡಿದಾಗ ಅವರ ವೈವಾಹಿಕ ಬದುಕಿನ ಮುಖ್ಯ ಉದ್ದೇಶ ಓರ್ವ ಪುಕ್ಕಟೆ ಕೆಲಸದ ಹೆಣ್ಣು ಮಗಳನ್ನು ಪಡೆಯುವುದು ಆಗಿದೆ ಎಂಬಂತೆ ತೋರುತ್ತದೆ. ಅವರ ಪ್ರಕಾರ ಮದುವೆ ಎಂದರೆ ಪರಸ್ಪರ ಒಪ್ಪಿ ವಿವಾಹವಾದ ಗಂಡು ಹೆಣ್ಣಿನ ನಡುವಿನ ಸಾಂಗತ್ಯ, ಜೊತೆಗಾರಿಕೆ, ಪರಸ್ಪರ ಗೌರವ ಮತ್ತು ಒಟ್ಟಾಗಿ ಬದುಕನ್ನು ಕಟ್ಟಿಕೊಳ್ಳುವ ಪ್ರಕ್ರಿಯೆ ಎಂಬ ಅರಿವು ಇಲ್ಲವೇ ಇಲ್ಲ. ಹಿರಿಯರು ನೋಡಿ ಮಾಡುವ ಅರೇಂಜ್ಡ್  ಮ್ಯಾರೇಜ್ ನಂತಹ ವೈವಾಹಿಕ ಸಂಬಂಧಗಳಲ್ಲಿ ವಿವಾಹಕ್ಕೆ ಗಳಿಸುವ ವಧು ಮತ್ತು ವರರು ಪರಸ್ಪರ ಭೇಟಿಯಾಗುವುದು, ಅರಿತುಕೊಳ್ಳುವುದು ಹಾಗೂ ತಮ್ಮ ಜೊತೆ ಬದುಕು ಕಟ್ಟಿಕೊಂಡು ಸುಖವಾಗಿ ಸಂಸಾರ ಮಾಡಬೇಕಾದ ಕುರಿತು ಯಾವುದೇ ಮಾತುಕತೆಗಳು ಇರುವುದಿಲ್ಲ.. ಇದರಿಂದಾಗಿ ಗಂಡು ಹುಡುಗರ ಮನದ ಮಾತುಗಳು ಅಲ್ಲಿಯೇ ಮುಚ್ಚಿ ಹೋದರೆ ಹೆಣ್ಣು ಮಕ್ಕಳು ಕೂಡ ಇದರಿಂದ ಹೊರತಾಗುವುದಿಲ್ಲ.ಅಕಸ್ಮಾತ್ ಮೊದಲ ಭೇಟಿಯಲ್ಲಿಯೇ ಮನೆಯ ಎಲ್ಲಾ ಕೆಲಸಗಳನ್ನು ನೀನೆ ಮಾಡಬೇಕು, ನನ್ನ ಪಾಲಕರ ಜವಾಬ್ದಾರಿಯೂ ನಿನ್ನದೇ ಎಂದು ಹುಡುಗನೇನಾದರೂ ಹೇಳಿದರೆ ಖಂಡಿತವಾಗಿಯೂ ಆಕೆ ಒಪ್ಪುವುದಿಲ್ಲ. ಬದಲಾಗಿ ತನ್ನ ಕುಟುಂಬವನ್ನು ಒಪ್ಪವಾಗಿಸುವ ತನ್ನ ಪಾಲಕರನ್ನು ಚೆನ್ನಾಗಿ ನೋಡಿಕೊಳ್ಳುವ ತನ್ನ ಜವಾಬ್ದಾರಿಯಲ್ಲಿ ಒಂದಷ್ಟು ಪಾಲನ್ನು ನೀನು ಹೊತ್ತುಕೋ ಎಂದು ಹೇಳಿದರೆ ಭಾರತೀಯ ಸಮಾಜದ ರೀತಿ ನೀತಿಗಳನ್ನು ಸಹಜವಾಗಿ ಆಕೆ ಒಪ್ಪಿಕೊಳ್ಳುತ್ತಾಳೆ.ಆದರೆ ಅದೇ ಹೆಣ್ಣು ಮಗಳಿಗೆ ಕೊಂಚ ಸ್ವಾತಂತ್ರವಿದ್ದು ಆಕೆ ತನ್ನನ್ನು ಮದುವೆಯಾಗುವ ವ್ಯಕ್ತಿಯೊಂದಿಗೆ ಒಂದಷ್ಟು ಹೊತ್ತು  ಒಡನಾಡುವ ಅವಕಾಶ ದೊರೆತರೆ ಆಕೆ ಸಾಮಾಜಿಕ ಒತ್ತಡದ ಅಡಿಯಲ್ಲಿ ನರಳಲು ಇಚ್ಚಿಸದೆ ವೈಯಕ್ತಿಕ ಸ್ವಾತಂತ್ರ್ಯಕ್ಕಾಗಿ ತನಗೆ ಒದಗಿ ಬಂದ ಸಂಬಂಧವನ್ನು ಒಪ್ಪದೆ ಹೋಗಬಹುದುಸಾಮಾಜಿಕ ಒತ್ತಡ ಇಲ್ಲದ ಹೊರತು ಪಿತೃ ಸತ್ತಾತ್ಮಕವಾಗಿ ನಡೆದು ಬಂದ ಯೋಚನೆಯನ್ನು ಈಗಾಗಲೇ ಬಹುತೇಕ ಹೆಣ್ಣು ಮಕ್ಕಳ ತಿರಸ್ಕರಿಸಿದ್ದಾರೆ. ಇನ್ನೂ ಹೆಚ್ಚಿನ ಸ್ವಾತಂತ್ರ್ಯವನ್ನು ಹೆಣ್ಣು ಮಕ್ಕಳಿಗೆ ಕೊಟ್ಟರೆ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕಾಗುತ್ತದೆ ಹಾಗೂ ತಮ್ಮ ಪಾಲಕರ ಊಟ ಉಪಚಾರ ಆರೋಗ್ಯ ಹೀಗೆ ಎಲ್ಲವನ್ನು ನೋಡಿಕೊಳ್ಳಲು… ಅದೂ 24/7  ರಜೆ ಹಾಕದೆ ಪುಕ್ಕಟೆ ದುಡಿಯುವವರು ಎಲ್ಲಿ ಸಿಕ್ಕಬೇಕು ಎಂಬ ಆತಂಕ ಗಂಡು ಹುಡುಗರಲ್ಲಿ ಇದ್ದರೆ ಅವರ ಪಾಲಕರು ಭಾರತೀಯ ಸಂಸ್ಕೃತಿಯನ್ನು ಜನರು ಮರೆಯುತ್ತಿದ್ದಾರೆ ಎಂದು ಸಾರಾಸಗಟಾಗಿ ಎಲ್ಲರನ್ನು ಬೈಯುತ್ತಿದ್ದಾರೆ. ಪಿತೃಸತ್ತಾತ್ಮಕ ಯೋಚನೆಗಳು ಸದಾ ಪುರುಷ ಅಹಂಕಾರವನ್ನು ಹೆಚ್ಚಿಸುವಲ್ಲಿ ಆತನ ಮೇಲರಿಮೆಯನ್ನು ಪೋಷಿಸುವಲ್ಲಿ ಸಹಾಯಕವಾಗಿವೆ. ಆಧುನಿಕ ಯುಗದಲ್ಲಿ ಹೆಣ್ಣು ಮಕ್ಕಳು ಕೂಡ ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಸಬಲೀಕರಣಗೊಂಡಿದ್ದು ತಮ್ಮ ವೈಯಕ್ತಿಕ ನಿರ್ಧಾರಗಳನ್ನು ತಾವೇ ಕೈಗೊಳ್ಳುವಷ್ಟು ಸದೃಢರಾಗಿದ್ದಾರೆ. ಅಂತೆಯೇ ಇದೀಗ ಅವರ ಮೇಲೆ ಪ್ರೀತಿಯ ಒತ್ತಾಸೆ ಮಾಡಬಹುದೇ ಹೊರತು ಕಡಿವಾಣದ ನಿಯಂತ್ರಣ ಸಾಧ್ಯವಿಲ್ಲ. ಬಹುಶಃ ಇದನ್ನೇ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂದು ಹೇಳಬಹುದು. ಆಲ್ವೇ ಸ್ನೇಹಿತರೆ?  ವೀಣಾ ಹೇಮಂತ್ ಗೌಡ ಪಾಟೀಲ್ 

“ಗೃಹ ಕೃತ್ಯ ಹಾಗೂ ಕೌಟುಂಬಿಕ ಜವಾಬ್ದಾರಿ… ಕಾನೂನು”ವೀಣಾ ಹೇಮಂತ್‌ ಗೌಡ ಪಾಟೀಲ Read Post »

ಇತರೆ, ಜೀವನ

“ಅರಿವಿನ ಪರಿಧಿ” ವನಜಾ ಮಹಾಲಿಂಗಯ್ಯ

ಅರಿವಿನ ಸಂಗಾತಿ ವನಜಾ ಮಹಾಲಿಂಗಯ್ಯ “ಅರಿವಿನ ಪರಿಧಿ” ಅರಿವು ಎಂದರೆ ಬೆಳಕಿದ್ದಂತೆ. ಆದರೆ ನಾವು ಸಾಮಾನ್ಯವಾಗಿ ಬೆಳಕಿನಲ್ಲಿ ಕಾಣುವ ವಸ್ತುಗಳನ್ನೇ ನೋಡುತ್ತೇವೆ, ಬೆಳಕಿನ ಮೂಲವನ್ನಲ್ಲ.     ನಮ್ಮ ಬದುಕಿನ ಬಹುಪಾಲು ಭಾಗ ನಾವು “ತಿಳಿದಿದ್ದೇವೆ” ಎಂದುಕೊಂಡಿರುವುದರೊಳಗೇ ನಡೆಯುತ್ತದೆ. ಇದಕ್ಕೆ ನಾವು ಜ್ಞಾನ ಎನ್ನುತ್ತೇವೆ. ಪದವಿ, ಉದ್ಯೋಗ, ಸಂಬಂಧ, ಊರು – ಇವೆಲ್ಲಾ ನಮ್ಮ ಅರಿವಿನ ಕೇಂದ್ರಬಿಂದು.     ಆದರೆ ನಿಜವಾದ ಬೆಳವಣಿಗೆ ನಡೆಯುವುದು ಕೇಂದ್ರದಲ್ಲಲ್ಲ, ಪರಿಧಿಯಲ್ಲಿ.   “ಪರಿಧಿ ಎಂದರೇನು?”1.  ನಮಗೆ ಗೊತ್ತಿಲ್ಲ ಎಂದು ಗೊತ್ತಿರುವುದು:ಇದು ಪರಿಧಿಯ ಮೊದಲ ಹಂತ. “ನನಗೆ ವಚನ ಸಾಹಿತ್ಯದ ಆಳ ಗೊತ್ತಿಲ್ಲ” ಎಂದು ಒಪ್ಪಿಕೊಳ್ಳುವುದು. ಇಲ್ಲಿ ವಿನಯ ಹುಟ್ಟುತ್ತದೆ.2.  ನಮಗೆ ಗೊತ್ತೇ ಇಲ್ಲ ಎಂದು ಗೊತ್ತಿಲ್ಲದಿರುವುದು: ಇದು ಅತಿ ದೊಡ್ಡ ಪರಿಧಿ. ನಮ್ಮ ಅಹಂ, ನಮ್ಮ ಪೂರ್ವಗ್ರಹ, ನಾವು ದಿನಾ ಮಾಡುವ ಸಣ್ಣ ಸುಳ್ಳುಗಳು – ಇವು ನಮಗೆ ಕಾಣುವುದೇ ಇಲ್ಲ. ಆದರೆ ಇವೇ ನಮ್ಮನ್ನು ನಡೆಸುತ್ತಿರುತ್ತವೆ. ಬಸವಣ್ಣನವರು ಇದನ್ನೇ “ಅಂತರಂಗದ ಅರಿವು” ಎಂದರು.ಪರಿಧಿ ವಿಸ್ತಾರವಾದಷ್ಟೂ ಕೇಂದ್ರ ಚಿಕ್ಕದಾಗುತ್ತದೆ. ನಾನು ದೊಡ್ಡವನು ಎನ್ನುವ ಭಾವ ಕರಗುತ್ತದೆ. “ಪರಿಧಿಯನ್ನು ಹೇಗೆ ವಿಸ್ತರಿಸುವುದು?”          ಪುಸ್ತಕ ಓದುವುದರಿಂದ ಮಾತ್ರವಲ್ಲ. ಮೂರು ಅಭ್ಯಾಸಗಳಿಂದ:          1. ಕೇಳುವುದು:   ವಾದ ಮಾಡಲು ಅಲ್ಲ, ಅರ್ಥ ಮಾಡಿಕೊಳ್ಳಲು ಕೇಳುವುದು. ಎದುರಿನವರು ನಮ್ಮ ವಿರೋಧಿಯಲ್ಲ, ನಮ್ಮ ಪರಿಧಿಯನ್ನು ತೋರಿಸುವ ಕನ್ನಡಿ.         2. ಸುಮ್ಮನಿರುವುದು:  ದಿನಕ್ಕೆ 10 ನಿಮಿಷವಾದರೂ ಮಾತು, ಮೊಬೈಲ್, ಆಲೋಚನೆ ಇಲ್ಲದೆ ಸುಮ್ಮನಿರುವುದು. ಆಗ ಪರಿಧಿಯಲ್ಲಿರುವ ಸೂಕ್ಷ್ಮ ಸದ್ದುಗಳು ಕೇಳಿಸುತ್ತವೆ. 3. ಅನುಮಾನಿಸುವುದು:   ನಮ್ಮ ಅತ್ಯಂತ ಖಚಿತವಾದ ನಂಬಿಕೆಯನ್ನೇ ಒಂದು ದಿನ “ಇದು ತಪ್ಪಾಗಿರಬಹುದೇ?” ಎಂದು ಕೇಳಿಕೊಳ್ಳುವುದು. ಇದೇ ಬಸವ ತತ್ವದ ಪೂರ್ಣ ಕ್ರಾಂತಿ. ಬಸವಣ್ಣನವರು ಹೇಳಿದರು – “ಅರಿವೇ ಗುರು”. ಅರಿವು ಎಂದರೆ ಮಾಹಿತಿಯ ರಾಶಿಯಲ್ಲ. ಅದು ನನ್ನ ಮಿತಿಯನ್ನು ನಾನೇ ನೋಡುವ ಬೆಳಕು.ಕೇಂದ್ರದಲ್ಲಿ ಬದುಕುವವನು ಸುರಕ್ಷಿತ. ಪರಿಧಿಯಲ್ಲಿ ಬದುಕುವವನು ಜೀವಂತ. ವನಜಾ ಮಹಾಲಿಂಗಯ್ಯ ಮಾದಾಪುರ.

“ಅರಿವಿನ ಪರಿಧಿ” ವನಜಾ ಮಹಾಲಿಂಗಯ್ಯ Read Post »

ಕಾವ್ಯಯಾನ

ನಿನ್ನನ್ನು ಪ್ರೀತಿಸುವುದಕ್ಕಿಂತ…ಪೃಥ್ವಿರಾಜ್ ಟಿ ಬಿ

ಕಾವ್ಯ ಸಂಗಾತಿ ಪೃಥ್ವಿರಾಜ್ ಟಿ ಬಿ ನಿನ್ನನ್ನು ಪ್ರೀತಿಸುವುದಕ್ಕಿಂತ… ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಎಂದುಪದಗಳಲ್ಲಿ ಹೇಳಲು ನನಗೆ ಬರುವುದಿಲ್ಲ…ಆದರೆ ಒಂದು ಸತ್ಯ ಮಾತ್ರ ಹೇಳಬಲ್ಲೆ—ನಿನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ,ನಿನ್ನನ್ನು ಗೌರವಿಸುತ್ತೇನೆ. ನಿನ್ನ ಕೆನ್ನೆಯನ್ನು ಮುಟ್ಟುವ ಆಸೆಗಿಂತ,ನಿನ್ನ ಮನಸ್ಸನ್ನು ನೋಯಿಸದಿರಬೇಕೆಂಬ ಭಯ ನನಗೆ ಹೆಚ್ಚು… ನಿನ್ನ ಕೈ ಹಿಡಿಯುವ ಹಕ್ಕಿಗಿಂತ,ಆ ಕೈಯನ್ನು ಜೀವನಪೂರ್ತಿಗೌರವದಿಂದ ಹಿಡಿದು ನಡೆಯುವ ಆಸೆ ನನಗೆ ಹೆಚ್ಚು… ನಿನ್ನ ಕಣ್ಣಲ್ಲಿ ಕಣ್ಣಿಟ್ಟು“ನೀನು ನನ್ನವಳು” ಎನ್ನುವುದಕ್ಕಿಂತ,ನಿನ್ನ ಕಣ್ಣಲ್ಲಿ ಒಂದೇ ಒಂದು ಕಣ್ಣೀರು ಬಂದರೂ“ಅದಕ್ಕೆ ಕಾರಣ ನಾನು ಆಗಬಾರದು”ಎಂಬುದೇ ನನ್ನ ಪ್ರಾರ್ಥನೆ… ನಿನ್ನ ಕೆನ್ನೆಗೆ ಮುತ್ತಿಡುವುದುನನ್ನ ಪ್ರೀತಿಯ ಒಂದು ಸಣ್ಣ ಭಾಗ ಮಾತ್ರ…ಆದರೆ ನಿನ್ನ ಪಾದಕ್ಕೆ ಮುತ್ತಿಟ್ಟು“ನನ್ನ ಜೀವನಕ್ಕೆ ಬಂದಿದ್ದಕ್ಕೆ ಧನ್ಯವಾದ”ಎಂದು ಹೇಳಲು ನಾನು ಸಿದ್ಧ. ನಿನ್ನ ಸೌಂದರ್ಯಕ್ಕೆ ಮಾತ್ರ ನಾನು ಮಾರುಹೋಗಿಲ್ಲ…ನಿನ್ನ ನಗು, ನಿನ್ನ ಮಾತು,ನಿನ್ನ ಕೋಪ, ನಿನ್ನ ಮೌನ,ನಿನ್ನ ಒಳ್ಳೆಯತನ, ನಿನ್ನ ಸಣ್ಣ ಸಣ್ಣ ಹಠಗಳು—ಇವೆಲ್ಲವನ್ನೂ ಸೇರಿಸಿಕೊಂಡುನಿನ್ನನ್ನೇ ಪ್ರೀತಿಸಿದ್ದೇನೆ. ನಾಳೆ ನಿನ್ನ ಸೌಂದರ್ಯ ಬದಲಾಗಬಹುದು,ಕಾಲ ನಿನ್ನ ಕೂದಲಲ್ಲಿ ಬೆಳ್ಳಿಯನ್ನು ತುಂಬಬಹುದು…ಆದರೆ ನನ್ನ ಕಣ್ಣಲ್ಲಿನೀನು ಆಗಲೂ ಇದೇ ಹುಡುಗಿ—ನನ್ನ ಹೃದಯಕ್ಕೆ ಒಮ್ಮೆ ಬಂದವಳು,ಮತ್ತೆಂದೂ ಹೊರಗೆ ಹೋಗದವಳು. ನಿನ್ನನ್ನು ಪಡೆಯಬೇಕು ಎಂಬ ಆಸೆಗಿಂತನಿನ್ನನ್ನು ಕಳೆದುಕೊಳ್ಳಬಾರದು ಎಂಬ ಭಯವೇ ಹೆಚ್ಚು… ನಿನ್ನ ಜೊತೆ ಜೀವನ ಕಳೆಯಬೇಕು ಎಂಬ ಕನಸಿಗಿಂತ,ನಿನ್ನ ಜೀವನದಲ್ಲಿಒಳ್ಳೆಯ ಮನುಷ್ಯನಾಗಿ ಉಳಿಯಬೇಕುಎಂಬ ಆಸೆ ನನಗೆ ಹೆಚ್ಚು. ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ…ನನ್ನ ಬದುಕಿನಲ್ಲಿ ನೀನು ಸಿಕ್ಕೆ. ಆದರೆ ಈ ಜನ್ಮದಲ್ಲಿನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಎನ್ನುವುದಕ್ಕಿಂತಒಂದು ಮಾತು ಮಾತ್ರ ನಿನಗೆ ಕೊಡುವೆ— ನಿನ್ನನ್ನು ನನ್ನ ಪ್ರೀತಿಯಿಂದ ಬಂಧಿಸುವುದಿಲ್ಲ,ನನ್ನ ಗೌರವದಿಂದ ಕಾಪಾಡುತ್ತೇನೆ. ನೀನು ನನ್ನ ಕೈ ಹಿಡಿದರೆಅದನ್ನು ಎಂದಿಗೂ ಬಿಡುವುದಿಲ್ಲ…ನೀನು ನನ್ನ ಜೊತೆ ನಡೆದರೆನಿನ್ನ ಹೆಜ್ಜೆಗೆ ಹೆಜ್ಜೆ ಹಾಕುತ್ತೇನೆ…ಒಂದು ದಿನ ನೀನು ಹಿಂದೆ ತಿರುಗಿ ನೋಡಿದಾಗ,“ನನ್ನನ್ನು ಇಷ್ಟು ಪ್ರೀತಿಸಿದವನುನನ್ನ ಜೀವನದಲ್ಲಿ ಇದ್ದ”ಎಂಬ ನೆನಪು ನಿನ್ನ ಕಣ್ಣಂಚಿನಲ್ಲಿಒಂದು ಸಣ್ಣ ಕಣ್ಣೀರಾಗಿಯಾದರೂ ಉಳಿದರೆ… ಅದೇ ನನ್ನ ಪ್ರೀತಿಯ ಗೆಲುವು.  ಪೃಥ್ವಿರಾಜ್ ಟಿ ಬಿ

ನಿನ್ನನ್ನು ಪ್ರೀತಿಸುವುದಕ್ಕಿಂತ…ಪೃಥ್ವಿರಾಜ್ ಟಿ ಬಿ Read Post »

ಕಾವ್ಯಯಾನ, ಗಝಲ್

ಡಾ. ಭಾಗ್ಯವತಿ ಅಮರೇಶ್ವರ ಅವರ ಗಜಲ್

ಕಾವ್ಯ ಸಂಗಾತಿ ಡಾ. ಭಾಗ್ಯವತಿ ಅಮರೇಶ್ವರ ಗಜಲ್ ಉಸಿರು ಅರಸಿ ದಣಿದ ನಿಟ್ಟುಸಿರುಗಳಿವೆ ನನ್ನೊಂದಿಗೆಮನದ ಚೆಲುವ ಕಾಣದೆ ಸೋತ ಕಂಗಳಿವೆ ನನ್ನೊಂದಿಗೆ ಹಾದಿಯ ತುಂಬಾ ಕೆಂಗುಲಾಬಿಗಳಿವೆ ಎಂದು ಭ್ರಮಿಸಿದೆನಡೆದು ನಡೆದು ಕೆಂಪೇರಿದ ಪಾದಗಳಿವೆ ನನ್ನೊಂದಿಗೆ ಆಸೆ ಪಡಬೇಡ ಎಂಬ ಬುದ್ಧನ ಮಾತಿಗೆ ಕಿವಿಗೊಡಲಿಲ್ಲನಾನು ಇಷ್ಟವು ಕೈಗೂಡದೆ ಸಮಾಧಿಯಾದ ಕನಸುಗಳಿವೆ ನನ್ನೊಂದಿಗೆ ಲೋಕದ ಡೊಂಕಿಗೆ ಮನ ಕಳವಳಿಸಿ ತಲ್ಲಣಿಸಿದೆ ದೇವಾಕಣ್ಣಲಿ ಮನೆ ಮಾಡಿದ ಕಣ್ಣೀರ ಮೋಡಗಳಿವೆ ನನ್ನೊಂದಿಗೆ ನನ್ನವರಾರು ಪರರು ಯಾರೆಂದು ತಿಳಿಯುತಿಲ್ಲ ಭಾಗ್ಯಜನಿಸಿದ ಕ್ಷಣದಲ್ಲೆ ಮಸಣ ಸೇರಿದ ಭಾವಗಳಿವೆ ನನ್ನೊಂದಿಗೆ ಡಾ. ಭಾಗ್ಯವತಿ ಅಮರೇಶ್ವರ

ಡಾ. ಭಾಗ್ಯವತಿ ಅಮರೇಶ್ವರ ಅವರ ಗಜಲ್ Read Post »

ಕಾವ್ಯಯಾನ

ಎಸ್.ವಿ.ಹೆಗಡೆ ಅವರ ಕವಿತೆ “ನಂಟು”

ಕಾವ್ಯ ಸಂಗಾತಿ ಎಸ್.ವಿ.ಹೆಗಡೆ “ನಂಟು” ಒಂಟಿಕಾಲಲಿ ನಿಂತು ಬೇಟೆಗೆಕಾದು ಕುಳಿತ ಬಕಪಕ್ಷಿಗೆಯಾವುದೋ ಕೆರೆಯ ನಂಟುಸವೆದು ಹೋದ ಚಪ್ಪಲಿಗೆಬೀದಿನಾಯಿಯ ನಂಟುರೆಕ್ಕೆ ಬಿಚ್ಹಿ ನಲಿದಾಡುವ ನವಿಲಿಗೆಮೂಡಿ ಕಣ್ಮರೆಯಾಗುವಮೋಡದ ಚಿತ್ತಾರದ  ನಂಟುಕೊಕ್ಕು ಪುಕ್ಕವ ಕುಣಿಸಿಇಂಚರ ಹಾಡುವ ಹಕ್ಕಿಗಳಿಗೆವಿದ್ಯುತ್ ಸರಿಗೆಯ ನಂಟು ॥॥ಯಾರದೋ ತೋಟದಲಿ ಯಾರೋಬೆವರು ಸುರಿಸಿ ಬೆಳೆದ ದವಸ ದಾನ್ಯಕ್ಕೆತಂದು ತಿಂದವರ ನಂಟುಬೆಳೆವ ಬಸಲೆ ಬಳ್ಳಿಗೆ ಬೇಲಿ ಚಪ್ಪರದ ನಂಟು ಸುಡುಬಿಸಿಲ ಡಾಂಬರು ರಸ್ತೆಯಲಿಕೊಯ್ದು ಮಡಗಿದ ರಾಗಿಯ ತೆನೆಗಳಿಗೆಯಾರದೋ ವಾಹನದ ಟಾಯರಿನ ನಂಟು॥॥ ಆಡುವ ಮಾತು ಬೇರಾದರೇನು ಉಡುಗೆ ತೊಡುಗೆ ಊಟ ತಿಂಡಿ ಹಲವಾದರೇನುಸೂರ್ಯ ಸಂಜೆ ಸೇರುವ ಸಾಗರದ ತಳವೊ ಮಂಜು ಮುಸುಕಿದ ಕಾಡು ಶಿಖರವೋಯಾವುದೋ  ರೇಕಾಂಶ ಅಕ್ಷಾಂಶದಲಿ ಬಿದ್ದರವಿಯಕಿರಣಗಳ ಆಲಿಂಗನದ ನಂಟು .ರಕ್ತ ಸಂಬಂಧಕ್ಕೂ ಮೀರಿ ನೆರೆಯಾಗುವ ಮರೆಯಲಾಗದ  ಗೆಳೆತನದ ನಂಟು.  ॥॥ ಮದುವೆಯಾರಿದಾದರೇನು ಸತ್ತವರ ಆತ್ಮ ಎಲ್ಲಿ ಹೋದರೇನು. ಮೃಷ್ಠಾನ್ನ ಭೋಜನದನಂಟು ಹೋಗಿ ಉಂಡವರಿಗುಂಟು. ॥॥ ನಿಂತ ನೀರಿನ ಕೆಸರು ಕೊಳದೊಳಗೆ ತಾವರೆಯ  ನಂಟು. ಹರಿದು ಸಾಗರವ ಸೇರುವ ಹೊಳೆ ಹಳ್ಳಕ್ಕೆ ಕಲ್ಲುಬಂಡೆಗಳ ನಂಟು.ನನ್ನೊಳಗೆ ನಾ ಸೇರಿದರೆಜೀವಕ್ಕೆ ಆತ್ಮದ  ನಂಟು. ನಿನ್ನ ನೀ ಮರೆತಾಗ ಸಂಸಾರದ ನಂಟು॥॥ ಎಸ್ ವಿ ಹೆಗಡೆ

ಎಸ್.ವಿ.ಹೆಗಡೆ ಅವರ ಕವಿತೆ “ನಂಟು” Read Post »

ಇತರೆ

“ಸ್ವಾತಂತ್ರ್ಯ ಎಂದರೆ- ಕೇವಲ ಇತಿಹಾಸದ ಪುಟಗಳಲ್ಲಿ ಅವಿಸ್ಮರಣೀಯ ಅಂಗವಾಗಿಬಾರದು.” ವಿಶೇಷ ಲೇಖನ ಸವಿತಾ ಇನಾಮದಾರ್

ವಿಶೇಷ ಸಂಗಾತಿ ಸವಿತಾ ಇನಾಮದಾರ್ “ಸ್ವಾತಂತ್ರ್ಯ ಎಂದರೆ- ಕೇವಲ ಇತಿಹಾಸದ ಪುಟಗಳಲ್ಲಿ ಸ್ವಾತಂತ್ರ್ಯ ಎಂದರೆ ಕೇವಲ ಆಗಸ್ಟ್ ೧೫ರಂದು ಧ್ವಜಾರೋಹಣ ಮಾಡುವುದು, ರಾಷ್ಟ್ರಗೀತೆ ಹಾಡುವುದು ಅಥವಾ ಇತಿಹಾಸದ ಪುಸ್ತಕಗಳಲ್ಲಿ ಬರೆದಿರುವ ಘಟನೆಗಳನ್ನು ನೆನಪಿಸಿಕೊಳ್ಳುವುದು ಮಾತ್ರವಲ್ಲ. ಅದು ನಮ್ಮ ರಕ್ತದಲ್ಲಿ, ನಮ್ಮ ಉಸಿರಿನಲ್ಲಿ, ನಮ್ಮ ಪ್ರತಿದಿನದ ನಡವಳಿಕೆಯಲ್ಲಿ ಜೀವಂತವಾಗಿರಬೇಕು. ಸ್ವತಂತ್ರ ಭಾರತದಲ್ಲಿ ನಾವೆಲ್ಲರೂ ಯಾವುದೇ ರೀತಿಯ ಚಿಂತೆಯಿಲ್ಲದೆ ಆರಾಮವಾಗಿ ಉಸಿರಾಡಲು, ಮನಸಿಗೆ ಬಂದದ್ದನ್ನು ಮಾಡಲು ಕಾರಣ ದೇಶಾದ್ಯಂತ ಲಕ್ಷಾನುಗಟ್ಟಲೇ ಜನರು ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿ, ಅದೆಷ್ಟೋ ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ನಡೆಸಿದ ಸತತ ಹೋರಾಟ. ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯನ್ನು ಕೊನೆಗೊಳಿಸುವ ಅಹಿಂಸಾ ಸಂಗ್ರಾಮ. ಆ ಹೋರಾಟದಲ್ಲಿ ಅಸಂಖ್ಯಾತ ಜನರು ತಮ್ಮ ಜೀವವನ್ನೇ ಅರ್ಪಿಸಿದರು. ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ನಡೆದ ಸತ್ಯಾಗ್ರಹ, ಅಸಹಕಾರ ಚಳುವಳಿ ಮತ್ತು ಕ್ವಿಟ್ ಇಂಡಿಯಾ ಚಳುವಳಿಗಳು ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟವು. ಆ ತ್ಯಾಗವನ್ನು ನಾವು ಎಂದಿಗೂ ಮರೆಯಬಾರದು. ಆ ಎಲ್ಲಾ ಸ್ವಾತಂತ್ರ್ಯ ಯೋಧರಿಗೆ ಶತ ಶತ ನಮನಗಳು. ನನ್ನ ಮಾವನವರಾದ ದಿ. ಶ್ರೀ. ಗುರುರಾವ್ ರಂಗರಾವ್ ಇನಾಮದಾರರು ಸಹ ಈ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದರು. ಅವರ ತಾಯಿ ತಮ್ಮ ಹಿರಿಯ ಮಗನ ಜೊತೆಗೆ ಪ್ರೌಢಶಾಲಾ ಶಿಕ್ಷಣಕ್ಕಾಗಿ ಇವರನ್ನೂ ಸಹ ವಿಜಯಾಪುರ ಜಿಲ್ಲೆಯ ನಮ್ಮ ಹಳ್ಳಿ ಗೊಣಶಿಗಿಯ ಸಮೀಪವಿರುವ ಅಥಣಿ ಎಂಬ ಸಣ್ಣ ಪಟ್ಟಣಕ್ಕೆ ಕಳಿಸಿದ್ದರು. ಸ್ವಾತಂತ್ರ್ಯ ಚಳುವಳಿ ಪ್ರಾರಂಭವಾದಾಗ ನಮ್ಮ ಮಾವನವರ ವಯಸ್ಸು ಕೇವಲ 10 ವರ್ಷ.ಒಂದು ದಿನ ಸಂಜೆ ಕೆಲವು ಸ್ವಾತಂತ್ರ್ಯ ಚಳುವಳಿಯ ನಾಯಕರಿಂದ ಹತ್ತಿರದ ಬಯಲು ಪ್ರದೇಶದಲ್ಲಿ ಸ್ವಾತಂತ್ರ್ಯ ಚಳುವಳಿಯ ಸಭೆ ನಡೆಸುವವರಿದ್ದಾರೆ ಎಂದು ಈ ಇನಾಮದಾರ ಬಂಧುಗಳಿಗೆ ಗೊತ್ತಾಯಿತು. ಯಾವ ಹೆದರಿಕೆ ಅಥವಾ ಹಿಂಜರಿಕೆ ಇಲ್ಲದೆ ತಮ್ಮ ಅಣ್ಣನ ಜೊತೆ ಅವರೂ ಸಹ ಭಾಗವಹಿಸಲು ಒಂದು ನಿಗದಿತ ಸ್ಥಳಕ್ಕೆ ಹೋದರು. ಸಭೆಯ ನಡುವೆ ಪೊಲೀಸ್ ಪಡೆ ನುಗ್ಗಿತು. ಲಾಠಿ ಚಾರ್ಜ್ ಮಾಡಲಾಯಿತು. ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗುವ ಮೊದಲ ಅಲ್ಲಿದ್ದವರನ್ನೆಲ್ಲ ಹಿಡಿದು ಹಿಂದೆ ಮುಂದೆ ನೋಡದೆ, ಪ್ರಾಣಿಗಳ ಹಾಗೆ ಪೋಲಿಸ್ ಗಾಡಿಗಳಲ್ಲಿ ತುಂಬಿಕೊಂಡು ಬೆಳಗಾವಿಯ ಹಿಂಡಲ್ಗಾ ಕೇಂದ್ರ ಕಾರಾಗೃಹದಲ್ಲಿ ಸೆರೆ ಹಾಕಿದರು. ಅಲ್ಲಿ 6 ತಿಂಗಳ ವರೆಗೆ ಬಂಧನದಲ್ಲಿ ಇದ್ದರು. ನಂತರ ಅಲ್ಲಿಂದ ಪುಣೆಯ ಯೆರವಡಾ ಜೈಲಿಗೆ ಸ್ಥಳಾಂತರಿಸಲಾಯಿತು. ಅಲ್ಲಿ 8ತಿಂಗಳ ಕಾಲ ಅವರನ್ನು ಇಟ್ಟಿದ್ದರಂತೆ.ಬಳಿಕ ಅಣ್ಣಾ- ತಮ್ಮ ಅಥಣಿಗೆ ಬಂದು ವಿದ್ಯಾಭ್ಯಾಸ ಮುಂದುವರೆಸಿ, ನಂತರ ಧಾರವಾಡದ ಕರ್ನಾಟಕ ಕಾಲೇಜಿನಗೆ MSc ಮುಗಿಸಿ, ಭಾರತ ಸರಕಾರದ ಉದ್ಯೋಗ ಸಚಿವಾಲಯದಲ್ಲಿ ಮುಖ್ಯ ಸಲಹೆಗರಾಗಿ (Chief Industrial Advisor) ದೆಹಲಿಯಲ್ಲಿ ಅನೇಕ ವರ್ಷಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಈ ನಡುವೆ ದೆಹಲಿ ಕರ್ನಾಟಕ ಸಂಘದ ಏಳಿಗೆಗೆ ಎಲೆಮರೆಯ ಕಾಯಿಯಂತೆ ಅನೇಕ ವರ್ಷಗಳವರೆಗೆ ಎಲ್ಲರೊಂದಿಗೆ ಬೆರೆತು ಸೇವೆ ಸಲ್ಲಿಸಿದ್ದಾರೆ. ಅವರಿಗೆ ತಾವು ನೀಡಿದ ಸೇವೆಗಳ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಳ್ಳಲು ಸುತಾರಾಂ ಇಷ್ಟವಿರಲಿಲ್ಲ. ಹಾಗಾಗಿ ಅವರ ಫೋಟೋ ಹಳೆಯ ದಾಖಲೆಗಳಲ್ಲಿ ಕಂಡು ಬರುವುದಿಲ್ಲ. ಆದರೆ ಅದೇನೋ ಅಂತಾರಲ್ಲ – ಒಳಿತನ್ನು ಮಾಡಿದವರು ಹೆಸರು ಅಳಿಸಲು ಸಾಧ್ಯವಿಲ್ಲ ಎಂಬಂತೆ ಅವರ ಈ ನಿಸ್ವಾರ್ಥ ಸೇವೆಗಳನ್ನು ನೆನೆದು, ದೆಹಲಿ ಕರ್ನಾಟಕ ಸಂಘದಲ್ಲಿ ದಿ. ನಾಗರಾಜ್ ಅವರ ಅಧ್ಯಕ್ಷತೆ ಮತ್ತು ಶ್ರೀ ಕೃಷ್ಣ ಭಟ್ ಅವರು ಕಾರ್ಯದರ್ಶಿಗಳಾಗಿದ್ದ ಅವಧಿಯಲ್ಲಿ ನಮ್ಮ ಮಾನವರಿಗೆ ಮಾನ್ಯ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರಿಂದ ಸನ್ಮಾನ ಮಾಡಲಾಗಿದೆ ಎಂದು ತಿಳಿಸಲು ತುಂಬಾ ಹೆಮ್ಮೆ ಎನಿಸುತ್ತದೆ.ಈ ಸಾಮಾಜಿಕ ಕಾರ್ಯಗಳ ಜೊತೆಗೆ ನಮ್ಮ ಹಳ್ಳಿಯ ಸುಧಾರಣೆಗಾಗಿಯೂ ದಾದಾ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ. ತಮ್ಮ ಮೊಮ್ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟ ಮತ್ತು ಜೈಲಿನಲ್ಲಿ ಕಳೆದ ಆ ದಿನಗಳನ್ನು ನೆನೆಯುತ್ತ, – “ನಿಮ್ಮ ಹಕ್ಕಿಗಾಗಿ ನೀವು ಹೋರಾಡಲೇ ಬೇಕು. ಯಾವತ್ತೂ ಯಾವುದಕ್ಕೂ ಹೆದರಬಾರದು. ಬಲಶಾಲಿಯಾಗಿರಿ, ಧೈರ್ಯಶಾಲಿಯಾಗಿರಿ, ಜನರಿಗೆ ಸಹಾಯ ಮಾಡಿರಿ ಮತ್ತು ನಮ್ಮ ಮನೆತನದ ಹೆಸರನ್ನು ಉಳಿಸಿರಿ” ಅಂತ ಹೇಳ್ತಾ ಇದ್ದದ್ದು ಇನ್ನೂ ನನಗೆ ನೆನಪಿದೆ.ಪ್ರೀತಿಯ ದಾದಾ ನಿಮ್ಮ ಬಗ್ಗೆ ನಮಗೆಲ್ಲಾ ತುಂಬಾ ಅಭಿಮಾನವಿದೆ. ನಿಮ್ಮ ಮಾರ್ಗದರ್ಶನ ಮತ್ತು ಹಿತವಚನಗಳು ನನ್ನ ಮಕ್ಕಳಿಗೆ ಶ್ರೀರಕ್ಷೆ ಇದ್ದಂತೆ.ಸ್ನೇಹಿತರೇ..ನಮ್ಮ ಮಾವನವರು, ಅಜ್ಜ-ಅಜ್ಜಿಯರು, ಸ್ವಾತಂತ್ರ್ಯ ಹೋರಾಟಗಾರರು ಕೇವಲ ಸಂಕಟವನ್ನು ಅನುಭವಿಸಿ, ಜೀವವನ್ನು ಅರ್ಪಿಸಿ ನಮಗೆ ಈ ಸ್ವಾತಂತ್ರ್ಯವನ್ನು ಉಡುಗೊರೆಯಾಗಿ ನೀಡಿದರು. ಅವರು ಕೇವಲ ಇತಿಹಾಸದ ಪುಟಗಳಲ್ಲಿ ಹೆಸರುಗಳಾಗಿ ಉಳಿಯಬಾರದು; ಅವರ ತ್ಯಾಗವು ನಮ್ಮ ಜೀವನದಲ್ಲಿ ಮುಂದುವರಿಯಬೇಕು.ಸ್ವಾತಂತ್ರ್ಯವೆಂದರೆ ನಮ್ಮ ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ಘನತೆ ಮತ್ತು ಸುರಕ್ಷತೆ ಇರುವುದು. ಅದು ಮಹಿಳೆಯರು ರಾತ್ರಿ ಹೊರಗೆ ಹೋಗುವಾಗ ಭಯವಿಲ್ಲದಿರುವುದು, ಮಕ್ಕಳು ಶಾಲೆಗೆ ಹೋಗುವಾಗ ಸುರಕ್ಷಿತರಾಗಿರುವುದು, ಬಡವರು ನ್ಯಾಯ ಪಡೆಯುವುದು, ಮತ್ತು ಪ್ರತಿಯೊಬ್ಬರೂ ತಮ್ಮ ಕನಸುಗಳನ್ನು ನನಸಾಗಿಸುವ ಸ್ವಾತಂತ್ರ್ಯವನ್ನು ಹೊಂದಿರುವುದು. ಇಂದು ನಾವು ನೋಡುತ್ತಿರುವ ಅನೇಕ ಘಟನೆಗಳು—ಅನ್ಯಾಯ, ಶೋಷಣೆ, ಹಿಂಸೆ—ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ಕಳೆದುಕೊಳ್ಳುತ್ತಿರುವುದನ್ನು ತೋರಿಸುತ್ತವೆ. ಸ್ವಾತಂತ್ರ್ಯವು ಕಾಗದದ ಮೇಲಿನ ಹಕ್ಕು ಮಾತ್ರವಾಗಿ ಉಳಿದರೆ, ಅದು ಅರ್ಥಹೀನವಾಗುತ್ತದೆ.ನಮ್ಮ ಹಿರಿಯರು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡಿದ್ದು ಕೇವಲ ವಿದೇಶಿ ಆಳ್ವಿಕೆಯನ್ನು ಕೊನೆಗೊಳಿಸಲು ಮಾತ್ರವಲ್ಲ. ಅವರು ನ್ಯಾಯ, ಸಮಾನತೆ ಮತ್ತು ಮಾನವೀಯತೆಯನ್ನು ಸ್ಥಾಪಿಸಲು ಹೋರಾಡಿದರು. ಆದ್ದರಿಂದ ನಾವು ಅವರನ್ನು ನೆನಪಿಸಿಕೊಳ್ಳುವಾಗ, ಕೇವಲ ಅವರ ಹೆಸರುಗಳನ್ನು ಪುಸ್ತಕಗಳಲ್ಲಿ ಓದುವುದಲ್ಲದೆ, ಅವರ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅನುಷ್ಠಾನಗೊಳಿಸಬೇಕು. ಅನ್ಯಾಯವನ್ನು ನೋಡಿದಾಗ ಮೌನವಾಗಿರುವುದು, ಭ್ರಷ್ಟಾಚಾರವನ್ನು ಸಹಿಸಿಕೊಳ್ಳುವುದು, ಮಹಿಳೆ-ಮಕ್ಕಳ ಮೇಲಿನ ಹಿಂಸೆಯನ್ನು ನಿರ್ಲಕ್ಷಿಸುವುದು—ಇವೆಲ್ಲವೂ ಸ್ವಾತಂತ್ರ್ಯದ ಮೇಲಿನ ದ್ರೋಹ.ನಿಜವಾದ ಸ್ವಾತಂತ್ರ್ಯವು ನಮ್ಮಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯನ್ನು ಹೊರುವಾಗ ಮಾತ್ರ ಸಾಧ್ಯ. ಅದು ನಮ್ಮ ಮತದಾನದಲ್ಲಿ, ನಮ್ಮ ಕೆಲಸದಲ್ಲಿ, ನಮ್ಮ ಮಾತುಗಳಲ್ಲಿ ಮತ್ತು ನಮ್ಮ ಕ್ರಿಯೆಗಳಲ್ಲಿ ಕಾಣಬೇಕು. ಇತಿಹಾಸವು ನಮಗೆ ಪಾಠ ಕಲಿಸುತ್ತದೆ, ಆದರೆ ಭವಿಷ್ಯವನ್ನು ನಿರ್ಮಿಸುವುದು ನಮ್ಮ ಕೆಲಸ. ಸ್ವಾತಂತ್ರ್ಯವನ್ನು ಕೇವಲ ನೆನಪಿನಲ್ಲಿ ಇಡದೆ, ಅದನ್ನು ಪ್ರತಿದಿನ ಜೀವಂತವಾಗಿ ಇರಿಸೋಣ. ನಮ್ಮ ಮಕ್ಕಳು ಸ್ವಾತಂತ್ರ್ಯವನ್ನು ಇತಿಹಾಸದ ಪುಟಗಳಲ್ಲಿ ಮಾತ್ರವಲ್ಲ, ತಮ್ಮ ಜೀವನದಲ್ಲಿ ಅನುಭವಿಸುವಂತೆ ಮಾಡೋಣ. ನಮ್ಮ ಜೀವನದಲ್ಲಿ ಇಂತಹ ವಿಶೇಷ ವ್ಯಕ್ತಿಗಳೊಂದಿಗೆ ಹಂಚಿಕೊಂಡ ಸುಂದರಸವಿ ನೆನಪುಗಳು ಎಂದಿಗೂ ಮಾಸುವುದಿಲ್ಲ. ತಮ್ಮ ದೇಶಕ್ಕೆ ಮತ್ತು ತಮ್ಮ ಮುಂದಿನಪೀಳಿಗೆಗೆ ಸ್ವಾತಂತ್ರ್ಯವನ್ನು ತರಲು ಹಿಂಜರಿಯದೇ ಹೋರಾಡಿದ ಆ ಎಲ್ಲಾ ವೀರಚೇತನಗಳಿಗೆ ಹೃದಯಾಳದಿಂದ ನಮನಗಳು. ಜೈ ಹಿಂದ್ ಸವಿತಾ ಇನಾಮದಾರ್

“ಸ್ವಾತಂತ್ರ್ಯ ಎಂದರೆ- ಕೇವಲ ಇತಿಹಾಸದ ಪುಟಗಳಲ್ಲಿ ಅವಿಸ್ಮರಣೀಯ ಅಂಗವಾಗಿಬಾರದು.” ವಿಶೇಷ ಲೇಖನ ಸವಿತಾ ಇನಾಮದಾರ್ Read Post »

ಕಾವ್ಯಯಾನ

ಶ್ರೀ ಕಿರಣ ಗಣಾಚಾರಿ ಅವರ ಕೃತಿ “ಬೆಳಕಿನ ಹೊಳೆಯ ಪ್ರವಾಹ” ಅವಲೋಕನ ಗಂಗಾ ಚಕ್ರಸಾಲಿ

ಪುಸ್ತಕ ಸಂಗಾತಿ ಗಂಗಾ ಚಕ್ರಸಾಲಿ ಶ್ರೀ ಕಿರಣ ಗಣಾಚಾರಿ ಬೆಳಕಿನ ಹೊಳೆಯ ಪ್ರವಾಹ ಬದುಕಿನಪ್ರವಾಹದಲ್ಲಿಮಿಂದೆದ್ದ ಕವಿತೆಗಳು ಪುಸ್ತಕ: ಬೆಳಕಿನ ಹೊಳೆಯ ಪ್ರವಾಹಲೇಖಕರು: ಶ್ರೀ ಕಿರಣ ಗಣಾಚಾರಿಬೆಲೆ:೧೦೦ ರೂಪ್ರಕಾಶನ: ಸಂಭ್ರಮ ಫೌಂಡೇಶನ್ ಶ್ರೀ ಕಿರಣ ಗಣಾಚಾರಿಯವರ ಎರಡನೇ ಕವನ ಸಂಕಲನ ಬೆಳಕಿನ ಹೊಳೆಯ ಪ್ರವಾಹ. ಕವಿಯಾದವನು ತನ್ನ ಸುತ್ತಮುತ್ತಲಿನ ಘಟನೆಗಳಿಗೆ ಕಿವಿಯಾಗುತ್ತಾನೆ, ಕಣ್ಣಾಗುತ್ತಾನೆ ಕೊನೆಗೆ ವಿಮರ್ಶಕನೂ ಆಗುತ್ತಾನೆ. ಈ ಹಿನ್ನೆಲೆಯಲ್ಲಿ ಮೂಡಿಬಂದ ಐವತ್ತು ಕವಿತೆಗಳು ಪ್ರಸ್ತುತ ಸಮಾಜ, ರಾಜಕೀಯ, ಶೈಕ್ಷಣಿಕ, ಮಾನವೀಯ ಸಂಬಂಧಗಳ ನೆಲೆಯೊಳಗೆ ಓದುಗನಿಗೆ ಭಾವನಾತ್ಮಕವಾಗಿ ಪ್ರವಾಹವನ್ನೇ ಹರಿಸುತ್ತವೆ.ಹುಲಿಜೊತೆ ಚಿಗುರೆಯೊಂದು ಸಂವಾದಿಸಿದಂತೆಅಪ್ಪನೆಂದರೆ ಭಯದ ಬಕಾಸುರನಂತೆನಿಸಿದ್ದೇ ಹೆಚ್ಚುಅಪ್ಪನ ಕುರಿತಾದ ಭಯ, ನಡುಕ ೮೦- ೯೦ ರ ದಶಕದಲ್ಲಿ ತುಸು ಹೆಚ್ಚಾಗಿಯೇ ಇತ್ತು. ಅಪ್ಪನೆಂದರೆ ಅರ್ಥವಾಗದವನಾಗಿದ್ದನು. ಪ್ರತಿಯೊಂದು ಜವಾಬ್ದಾರಿಯೊಳಗೆ ಮುಳುಗೆದ್ದ ಅಪ್ಪ ಮೌನದ ಪರ್ವತವೇ ಆಗಿದ್ದ. ಆಗಾಗ ಒಂದೆರೆಡು ಮಾತುಗಳು ಗುಡುಗಿನಂತೆ ಸದ್ದಾದರೂ , ಅವನ ಹೃದಯದಲಿ ಪ್ರೀತಿ ಕಾಳಜಿಯ ತೊರೆಯು ಮಾತ್ರ ಬತ್ತುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೂಡಿಬಂದ ಈ ಕವಿತೆ ಓದುಗನನ್ನು ತನ್ನ ಬಾಲ್ಯಾವಸ್ಥೆಗೆ ಕರೆದೊಯ್ದು ಕಣ್ಣಹನಿ ಜಾರಿಸುತ್ತದೆ. ಹೀಗೆ ಒಬ್ಬ ವ್ಯಕ್ತಿಯ ಬದುಕಿನಲ್ಲಿ ಪ್ರಭಾವಿಸುವವರೆಂದರೆ ಅಮ್ಮ, ಅಪ್ಪ, ಗೆಳೆಯ. ಈ ನೆಲೆಯೊಳಗೆ ಅಪ್ಪನೆಂಬ ಪ್ರಶ್ನೆಗಳ ಹುತ್ತ, ಪ್ಲೀಸ್…ಅಮ್ಮ, ಮುದ್ದು ಕಂದ, ಅವ್ವ ಮತ್ತು ಧೂಳು, ಗೆಳೆಯ ಬದಲಾಗಿದ್ದಾನೆ ಕವಿತೆಗಳು ಮನವನ್ನು ಕದಡುತ್ತವೆ.ವರ್ತಮಾನದಲ್ಲಿ ಬದುಕುತ್ತಿರುವ ನಾವುಗಳು ಅಂದು ಇಂದು ಎಂಬ ಪದಗಳ ಜರಡಿಯೊಳಗೆ ಸಮಾಜವನ್ನು ನೋಡುತ್ತೇವೆ. ಕವಿಯಾದವನು ತುಸು ಹೆಚ್ಚೇ ಈ ಬದಲಾವಣೆಗಳನ್ನು ಗಮನಿಸುತ್ತಾನೆ. ಈ ಬದಲಾವಣೆಯ ಪರದೆಯೊಳಗೆ ಹಲವು ಕವಿತೆಗಳು ಮೂಡಿಬಂದಿವೆ. ಎಂದಿನಂತೆ ನಾನಿಲ್ಲ, ಒಪ್ಪಿಕೊಳ್ಳಲಾರದ ವಾಸ್ತವ, ಬೆಳಕಿನ ಹೊಳೆಯ ಪ್ರವಾಹ, ಅಮವಾಸ್ಯೆ ಹೊದ್ದವರು, ಇಶಾರೆ, ಸೆರೆಯಾಗದ ಭಾವಚಿತ್ರ, ಹೇ! ಸಮಯವೇ…, ಕೊಡು ಕೊಳ್ಳುವಾಟ ಹೀಗೆ ಹಲವು ಕವಿತೆಗಳು ಇಂದಿನ ವಾಸ್ತವದ ಚಿತ್ರಣವನ್ನು ಕಟ್ಟಿಕೊಡುತ್ತಾ ನಮ್ಮೊಳಗಿನ ನಮ್ಮತನವನ್ನು ಬಡಿದೆಬ್ಬಿಸುತ್ತವೆ. ಬೆಳಕಿನ ಹೊಳೆ ಹರಿಸುತ್ತಿದ್ದೇವೆಂದುಅದೆಷ್ಟು ಕಲ್ಲು ಮಣ್ಣು ಕಸ ಕಡ್ಡಿಹಾಕುತ್ತಿದ್ದೇವೆನೀವೇ ಹೇಳಿ…ನೋಡೋಣ ! ಈ ಪುಸ್ತಕದ ಶೀರ್ಷಿಕೆಯ ಈ ಕವಿತೆ ಇಂದಿನ ಮಾನವರ ಅತಿಯಾದ ಬಯಕೆ, ಅಹಮ್ಮಿನ ಫಲಶೃತಿಯನ್ನು ಕಣ್ಣಮುಂದೆ ತೆರೆದಿಡುತ್ತದೆ. ಇಲ್ಲಿನ ಬಹುತೇಕ ಕವಿತೆಗಳು ಸವೆದುಹೋದ, ಕ್ಲೀಷೆಗೊಳಗಾದ, ಜೀರ್ಣಗೊಂಡ, ಶಿಥಿಲಗೊಂಡ, ಸಡಿಲವಾದ ಬದುಕಿನ ಸಾಮಾನ್ಯ ಸಹಜ ನಿಯಮಗಳು ತನ್ನ ಉದ್ದೇಶಗಳನ್ನು ಈಡೇರಿಸಿಕೊಳ್ಳದೆ, ಹೊಸ ಜಗತ್ತನ್ನು ಧ್ಯೇನಿಸುತ್ತಿರುವ ಸತ್ಯವನ್ನು ಹೊರಹೊಮ್ಮಿಸುತ್ತವೆ ಎಂಬ ಪ್ರೊ. ಎಸ್‌ ಎಂ ಗಂಗಾಧರಯ್ಯನವರ ಮುನ್ನುಡಿ ಮಾತು ಅರ್ಥಪೂರ್ಣವಾಗಿದೆ. ಹಳತಾದ ಬಣ್ಣಗೆಟ್ಟ ಗೋಡೆಗಳುನಮ್ಮ ಬದುಕ ಬಣ್ಣವಾಗಿಸಿವೆಹರಕಲು ಮುರುಕಲು ಮಾಳಿಗೆನಮ್ಮ ಬಾಳ ನೆಟ್ಟಗಾಗಿಸಿವೆ ಸರಕಾರಿ ಶಾಲೆ ಕವಿತೆಯಲ್ಲಿ ಮೂಡಿಬಂದ ಈ ಸಾಲುಗಳು ಸರ್ಕಾರಿ ಶಾಲೆಯ ಮಹತ್ವವನ್ನು ಸಾರುತ್ತವೆ. ಬಹುತೇಕರು ಆಗ ಸರ್ಕಾರಿ ಶಾಲೆಯಲ್ಲಿಯೇ ಓದಿ ಈಗ ಬಹಳಷ್ಟು ಉನ್ನತ ಹುದ್ದೆಗಳನ್ನು ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ಸರ್ಕಾರಿ ಶಾಲೆಗಳು ಮುಚ್ಚುತ್ತಿರುವಂತಹ ಈ ಸಂದರ್ಭದಲ್ಲಿ ಅದರ ಮಹತ್ವ ಸಾರುವ ಈ ಕವನ ಸಕಾಲಿಕವಾಗಿದೆ. ಇದೇ ರೀತಿ ಶಾಲೆಗೆ ಸಂಬಂಧಿಸಿದಂತೆ ಬರೆದ ಇನ್ನಷ್ಟು ಕವಿತೆಗಳೆಂದರೆ ಪಾಟಿ ಚೀಲ , ಪುಸ್ತಕ ಮತ್ತು ನಿನಗೆ ಕಲಿಸಿದ ಮಾಸ್ತರ ಯಾರು? ಕವಿತೆಗಳು.ಇಂದು ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಪರಿಸರದಲ್ಲಿಯೂ ಹಲವು ಬದಲಾವಣೆಗಳಾಗುತ್ತಿವೆ. ಪ್ರಕೃತಿಯಲ್ಲಿಯ ಹಸಿರು ನಾಶವಾಗಿ, ಜೀವಸಂಕುಲಗಳು ತೊಂದರೆಗೊಳಗಾಗಿವೆ. ಇಂತಹ ನೋಡಿದ ಕೇಳಿದ ಘಟನೆಗಳ ಹಿನ್ನೆಲೆಯಲ್ಲಿ ಹಲವು ಕವಿತೆಗಳು ಮೂಡಿಬಂದಿವೆ. ಈ ಜಾಗ ನಂದೈತಿ, ನಂಬಿಕೆ ಪಟ್ಟ ಕಟ್ಟಿದವರಾರು? , ಸಹಿಸಿಕೊಂಡಿರುವೆ ಕವನಗಳು ಆ ಚಿತ್ರಣವನ್ನು ಕಟ್ಟಿಕೊಡುತ್ತವೆ. ಸಖ್ಯ ಬೆಳೆಸಿಕೊ, ಸುಖ ನೀಡುವೆನಂಬು, ಇಂಬನೀಯುವೆಕಡೆಗಣಿಸಿದರೆ ನಡುಗಣ್ಣ ತೆರಯುವೆ .. ಇಂತಹ ಸಾಲುಗಳು ಮಾನವನಿಗೆ ತಿಳುವಳಿಕೆ ನೀಡುವ ಜೊತೆಗೆ ಮುಂದೆ ಆಗುವ ಆನಾಹುತವನ್ನು ತಿಳಿಸಿಕೊಡುತ್ತವೆ. ಕವಿಗಿರುವ ಪರಿಸರ ಪ್ರೇಮವನ್ನು ಅರಿಯಬಹುದಾಗಿದೆ. ಇಷ್ಟೇ ಅಲ್ಲದೇ ಕನ್ನಡ ನಾಡು ನುಡಿಗೆ ಸಂಬಂಧಿಸಿದಂತಹ ಕವಿತೆಗಳು ಕನ್ನಡತನವನ್ನು ಜಾಗೃತಿಗೊಳಿಸುತ್ತವೆ. “ ಕನ್ನಡ ಭಾಷೆ ನಾಲಿಗೆಯಲಿ ಉಲಿಯದೆ ಗಂಟಲಲ್ಲಿ ಸಿಕ್ಕಾಕಿಕೊಂಡಂತಿರುವ ಭಯ “ ಈ ಸಾಲು ಅನ್ಯಭಾಷೆಯ ಹಾವಳಿಯನ್ನು ಸೂಚ್ಯವಾಗಿ ಹೇಳುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟ, ಹಬ್ಬಗಳು ಇವುಗಳನ್ನು ದೃಷ್ಠಿಯಲ್ಲಿಟ್ಟುಕೊಂಡು ಬರೆದ ಹಲವು ಕವಿತೆಗಳು ಭೂತ ವರ್ತಮಾನದ ಸಂಗತಿಗಳನ್ನು ಕಟ್ಟಿಕೊಡುತ್ತವೆ.ಕವಿ ಎಂದರೆ ಭಾವತೀವ್ರ ವೇದನೆಗಳನು ಹೊರುವ, ಹೆರುವ ಸೃಜನಶೀಲ ಗರ್ಭಸ್ಥ ಸ್ಥಿತ ಪ್ರಜ್ಞ ಎಂದು ಹೇಳುವ ಕಿರಣ ಅವರ ಮಾತಿಗೆ ಪೂರಕವಾಗಿಯೇ ಹಲವು ಕವಿತೆಗಳು ಭಾವನೆಗಳನ್ನು ಹೊದ್ದು ನಿಂತಿವೆ. ಪ್ರತಿಯೊಂದು ಕವನಗಳನ್ನು ಓದುವಾಗಲೂ ಇಂದಿನ ನೋವು, ವೇದನೆಗಳ ಚಿತ್ರಣ ಕಣ್ಮುಂದೆ ಸುಳಿದು ಬದಲಾದ ಮನುಷ್ಯನ ವ್ಯಕ್ತಿತ್ವಗಳನ್ನು ತೋರಿಸುತ್ತವೆ. ಇವರ ಮೊದಲ ಕವನ ಸಂಕಲನಕ್ಕಿಂತ ಈ ಕವನ ಸಂಕಲನ ಸಂಪೂರ್ಣವಾಗಿ ಭಿನ್ನ ಸಂಗತಿಗಳನ್ನು ಓದುಗರಿಗೆ ತರೆದಿಡುತ್ತದೆ. ಕಾಲದ ಸುಳಿಯಲ್ಲಿ ಮಾಗಿದ ಕವಿತೆಗಳು ಈ ಬೆಳಕಿನ ಪ್ರವಾಹದಲ್ಲಿ ಮಿಂದೆದ್ದಿವೆ. ಇವರಿಂದ ಮತ್ತಷ್ಟು ಮತ್ತಷ್ಟು ಕವನಸಂಕಲನಗಳು ಹೊರ ಬರಲೆಂದು ಆಶಿಸುವೆ. ಗಂಗಾ ಚಕ್ರಸಾಲಿ

ಶ್ರೀ ಕಿರಣ ಗಣಾಚಾರಿ ಅವರ ಕೃತಿ “ಬೆಳಕಿನ ಹೊಳೆಯ ಪ್ರವಾಹ” ಅವಲೋಕನ ಗಂಗಾ ಚಕ್ರಸಾಲಿ Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-36 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯಕೊಡುಗೆ ನೀಡಿದ ಮಹಾನ್‌ ಚೇತನ ಅಖಂಡ ಕರ್ನಾಟಕ ಹೋರಾಟ ಅಖಂಡ ಕರ್ನಾಟಕದ ಕನಸಿನ ತುಡಿತ ಹೆಚ್ಚುತಿದ್ದಂತಕನ್ನಡದ ಅಭಿಮಾನಿಗಳು, ಕನ್ನಡದ ಸಾಹಿತಿಗಳು, ಕನ್ನಡಪರ ಸಂಘಟನೆಗಳು ಒಂದಾಗಿ ಎತ್ತಿಕೊಂಡಿದ್ದ ಹೋರಾಟದ ಧ್ವನಿ ನಿಧಾನವಾಗಿ ರಾಜಕೀಯದ ಗಾಳಿಯಲ್ಲಿ ಸಿಲುಕಿ ದಿಕ್ಕು ತಪ್ಪಿದುದನ್ನು ಕಣ್ಣಾರೆ ಕಂಡರೂ, ಅದನ್ನು ತಡೆಯಲಾಗದ ಅಸಹಾಯಕ ಸ್ಥಿತಿಗೆ ಸಾಹಿತಿಗಳು, ಕನ್ನಡ ಸಂಘಟನೆಗಳು ಮತ್ತು ಕನ್ನಡಾಭಿಮಾನಿಗಳು ಬಂದು ತಲುಪಿದ್ದರು. ಅಖಂಡ ಕರ್ನಾಟಕ ಹೋರಾಟವು ಒಂದು ಭೌಗೋಳಿಕ ಪ್ರದೇಶವನ್ನು ಒಂದಾಗಿಸುವುದರ ಜೊತೆಗೆ ಕನ್ನಡಿಗರ ಹೃದಯಗಳನ್ನು ಒಂದಾಗಿಸುವ ಕನಸಾಗಿತ್ತು. ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕದವರೆಗೆ, ಕರಾವಳಿಯಿಂದ ಮಲೆನಾಡಿನವರೆಗೆ……ಕನ್ನಡದ ಒಂದೇ ಭಾಷೆ, ಒಂದೇ ಸಂಸ್ಕೃತಿ, ಒಂದೇ ಭಾವನೆ ನಮ್ಮನ್ನು ಒಂದೇ ನಾಡಿನ ಮಕ್ಕಳನ್ನಾಗಿ ಮಾಡಬೇಕು ಎಂಬುದು ಕನ್ನಡಿಗರ ಬಹುದಿನಗಳ ಕನಸಾಗಿತ್ತು….. ಆದರೆ ಅಖಂಡ ಕರ್ನಾಟಕದ ಬದಲಾಗಿ ಕರ್ನಾಟಕವನ್ನು ವಿಭಜಿಸುವ ಮಾತುಗಳು ಬಲ ಪಡೆಯತೊಡಗಿದವು. ಜನರ ಮನದಾಳದಲ್ಲಿ ಬೆಳೆದಿದ್ದ ಏಕೀಕರಣದ ಆಶಯಕ್ಕಿಂತ ರಾಜಕೀಯ ಲೆಕ್ಕಾಚಾರಗಳು ಮೇಲುಗೈ ಸಾಧಿಸಿದವು. ಭಾಷಾವಾರು ರಾಜ್ಯಗಳ ರಚನೆಯ ಪರವಾಗಿ ದೇಶದ ರಾಷ್ಟ್ರೀಯ ನಾಯಕರು ಮುಂದುವರಿದಿದ್ದರೂ, ಕರ್ನಾಟಕ ಒಂದಾಗಬೇಕು ಎಂಬ ಜನಮನದ ಬಯಕೆಯನ್ನು ರಾಜಕೀಯ ನಾಯಕತ್ವ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ವಿಫಲವಾಯಿತು. ಕೇಂದ್ರ ರಾಜಕಾರಣದ ಒತ್ತಡಗಳಿಗೆ ಕರ್ನಾಟಕದ ಅನೇಕ ರಾಜಕಾರಣಿಗಳು ಮಣಿದರು. ಹಿಂದೆ ಜನರಿಗೆ ನೀಡಿದ್ದ ಭರವಸೆಗಳು, ಆಡಿದ್ದ ಮಾತುಗಳು ಬದಲಾಗತೊಡಗಿದವು. ರಾಜಕೀಯ ಪಕ್ಷಗಳ ಹಿತಾಸಕ್ತಿಗಳು ಕನ್ನಡ ನಾಡಿನ ಒಗ್ಗಟ್ಟಿನ ಕನಸಿಗಿಂತ ದೊಡ್ಡದಾಗಿ ಕಾಣಿಸಿಕೊಂಡವು. ಹೋರಾಟದ ಉತ್ಸಾಹವೂ ಕ್ರಮೇಣ ಕುಗ್ಗತೊಡಗಿತು. ಇದನ್ನೆಲ್ಲ ಕಂಡ ಕನ್ನಡ ಅಭಿಮಾನಿಗಳು, ಕನ್ನಡ ಸಾಹಿತಿಗಳ ಮನಸ್ಸಿನಲ್ಲಿ ನೋವು ಮಡುಗಟ್ಟಿತು. ಕನ್ನಡಕ್ಕಾಗಿ ಎತ್ತಿದ ಧ್ವನಿ ರಾಜಕೀಯದ ಗದ್ದಲದಲ್ಲಿ ಕೇಳಿಸದಂತಾಯಿತು. ಕನ್ನಡಿಗರ ಭಾವೈಕ್ಯತೆಯ ಕನಸು ಕಣ್ಣೆದುರೇ ಮಸುಕಾಗುತ್ತಿರುವುದನ್ನು ಕಂಡರೂ, ಕೈಕಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಯಿತು. ….. ಎಲ್ಲೆಲ್ಲಿ ಕನ್ನಡದ ನುಡಿ ಕೇಳಿಸುತ್ತದೆಯೋ, ಅಲ್ಲೆಲ್ಲ ಕನ್ನಡಿಗರ ಹೃದಯ ಒಂದೇ ಬಡಿತದಲ್ಲಿ ಮಿಡಿಯಬೇಕು. ಪ್ರಾದೇಶಿಕ ಭಿನ್ನತೆಗಳನ್ನು ಮೀರಿ, ರಾಜಕೀಯ ಗಡಿಗಳನ್ನು ದಾಟಿ, ಕನ್ನಡದ ಹೆಸರಿನಲ್ಲಿ ಎಲ್ಲರೂ ಒಂದಾಗಬೇಕು….ಎನ್ನುವ ಕರೆ ಕೊಟ್ಟರು  ಜಯದೇವಿ ತಾಯಿಯವರು ಜನತೆಗೆ ಕರೆಕೊಟ್ಟರು. ಕನ್ನಡದ ನೆಲ-ನುಡಿ-ಸಂಸ್ಕೃತಿಯ ಭಾವೈಕ್ಯತೆಯನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕಾಗಿತ್ತು….ಅಖಂಡ ಕರ್ನಾಟಕವೆಂದರೆ ಒಂದು ನಾಡಿನ  ಕೋಟ್ಯಂತರ ಕನ್ನಡಿಗರ ಹೃದಯದ ಕನಸು. ಆ ಕನಸು ಉಳಿಯುವವರೆಗೂ ಕನ್ನಡದ ಏಕತೆಯ ಜ್ಯೋತಿ ಎಂದಿಗೂ ಆರದಂತೆ ಜಯದೇವಿ ತಾಯಿಯವರು ಸತತವಾಗಿ ಹೋರಾಟಕ್ಕಿ ನಿಂತು ಕೊಂಡರು.ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಜಯದೇವಿ ತಾಯಿಯವರು ಹೆಜ್ಜೆ ಸೊಲ್ಲಾಪುರ ಸಹಿತ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಮಾಡುವದಾಗಿತ್ತು.    ೧೯೫೩ರಲ್ಲಿ ಆರ್ ವಿ ಬೀಡಪ್ಪ ,ಭೀಮಣ್ಣ ಖಂಡ್ರೆ, ಪ್ರಭುರಾಜ ಕಂಬಳಿವಾಲೆ ಮೊದಲಾದವರು ಸೇರಿ *ಪ್ರಜಾ ಸೋಶಿಯಾಲಿಸ್ಟಿಕ*ಪಾರ್ಟಿಯನ್ನು ಸ್ಥಾಪಿಸಿದ್ದರು…… ಜಮದೇವಿ ತಾಯಿಯವರು ಅವರೊಂದಿಗೆ ಪಕ್ಷ ಸಂಘಟನೆ ತೊಡಗಿಕೊಂಡಿದ್ದರು. ಇವರ ಒಡನಾಟದೊಂದಿಗೆ ಲೋಹಿಯಾ, ಜಯಪ್ರಕಾಶ ನಾರಾಯಣ, ಶಾಂತವೇರಿ ಗೋಪಾಲಗೌಡರ ಪ್ರಭಾವಕ್ಕೆ ಒಳಗಾಗಿದ್ದರು. ಈ ಮೂಲಕ ಒಬ್ಬ ಸಮಾಜವಾದಿಯಾಗಿ ಗುರುತಿಸಿಕೊಂಡರು ಮುಂದೆ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ(ಅ.ಕ.ರಾ.ನಿ) ಉಪಾಧ್ಯಕ್ಷವಾಗಿ ಕೆಲಸ ನಿರ್ವಹಿಸಿದರು. ೧೯-೪-೧೯೫೨ರಂದು ಹುಬ್ಬಳ್ಳಿಯ ಪುರಸಭಾ ಭವನದಲ್ಲಿ ನಡೆದ ಕೆಪಿಸಿಸಿ ಕಾರ್ಯಕಾರಿ ಸಭೆಯ ಕಾಂಗ್ರೆಸ್ಸಿನ ಎಲ್ಲ ಮುಖಂಡರು ಪಾಲ್ಗೊಳ್ಳುತ್ತಿದ್ದು ಅಂದೆ ಗಲಭೆಯು ನಡೆಯಿತು ಇದೆ ಹುಬ್ಬಳ್ಳಿಯ ಗಲಭೆ ಎಂದು ಹೆಸರಾಯಿತು. ಆಂಧ್ರದ ಹೋರಾಟಗಾರರಾದ ಪೊಟ್ಟು ಶ್ರೀರಾಮುಲು ಅವರ ಪ್ರೇರಣೆಯಿಂದ…. ಕರ್ನಾಟಕದ ಏಕೀಕರಣ ಆಗಲೇಬೇಕೆಂದು ಶಂಕರ ಗೌಡ ಪಾಟೀಲರು ಆ ಮರಣ ಉಪವಾಸ ಕುಳಿತದ್ದು ಈ ಉಪವಾಸವನ್ನು ನಿಲ್ಲಿಸಿ ಏಕೀಕರಣದ ಆಶಯವನ್ನು ಈಡೇರಿಸುವ ಕನಸು ಕಂಡಿದ್ದ ಜನತೆಗೆ ನಿರಾಸೆಗೊಳಿಸಿದ್ದು ಜಯದೇವಿ ತಾಯಿಯವರು ಮನನೋಯಿತು…. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಜಯದೇವಿ ತಾಯಿಯವರ ರಾಜಕೀಯ ಬದುಕಿನಲ್ಲಿ ಮಹತ್ವದ ತಿರುವು ಕಾಣಿಸಿಕೊಂಡಿತು. ಕಾಂಗ್ರೆಸಿನ ಸಾಂಪ್ರದಾಯಿಕ ರಾಜಕಾರಣದಿಂದ ಹೊರಬಂದು, ಜನಪರವಾದ ಹಾಗೂ ಸಮಾಜಮುಖಿ ಚಿಂತನೆಗಳಿಗೆ ಅವರು ಹೆಚ್ಚು ಒತ್ತು ನೀಡತೊಡಗಿದರು. ಇದೇ ಸಂದರ್ಭದಲ್ಲಿ ಸೊಲ್ಲಾಪುರ ಸೇರಿದಂತೆ ಕನ್ನಡ ಭಾಷಿಕ ಪ್ರದೇಶಗಳನ್ನು ಒಳಗೊಂಡ ಅಖಂಡ ಕರ್ನಾಟಕ ರಾಜ್ಯದ ನಿರ್ಮಾಣದ ಆಶಯ ಅವರ ರಾಜಕೀಯ ಚಟುವಟಿಕೆಗಳಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿತು.. ಈ ಹೊಸ ರಾಜಕೀಯ ವೇದಿಕೆ ಕಾಂಗ್ರೆಸ್‌ಗೆ ಪರ್ಯಾಯವಾಗಿ ಜನಪರ ಆಡಳಿತ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಆಶಯಗಳನ್ನು ಮುಂದಿಟ್ಟುಕೊಂಡು ಕಾರ್ಯನಿರ್ವಹಿಸಿತು.ಜಯದೇವಿ ತಾಯಿಯವರು ಈ ನಾಯಕರೊಂದಿಗೆ ನಿಕಟವಾಗಿ ಸಂಪರ್ಕ ಬೆಳೆಸಿಕೊಂಡು ಪಕ್ಷ ಸಂಘಟನೆಯ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ಗ್ರಾಮೀಣ ಪ್ರದೇಶಗಳ ಜನರು, ಮಹಿಳೆಯರು ಹಾಗೂ ಸಾಮಾನ್ಯ ಕಾರ್ಯಕರ್ತರೊಂದಿಗೆ ಸಂಪರ್ಕ ಸಾಧಿಸಿ ಪಕ್ಷದ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದರು  ಸಮಾಜವಾದಿ ನಾಯಕರ ಪ್ರಭಾವಪ್ರಜಾ ಸೋಶಿಯಲಿಸ್ಟ್ ಪಕ್ಷದ ಸಂಘಟನಾ ಕಾರ್ಯದ ಸಂದರ್ಭದಲ್ಲಿ ಜಯದೇವಿ ತಾಯಿಯವರಿಗೆ ದೇಶದ ಪ್ರಮುಖ ಸಮಾಜವಾದಿ ನಾಯಕರ ಚಿಂತನೆಗಳನ್ನು ಹತ್ತಿರದಿಂದ ಅರಿಯುವ ಅವಕಾಶ ದೊರೆಯಿತು.ವಿಶೇಷವಾಗಿ ಡಾ. ರಾಮಮನೋಹರ ಲೋಹಿಯಾ, ಜಯಪ್ರಕಾಶ ನಾರಾಯಣ ಮತ್ತು ಶಾಂತವೇರಿ ಗೋಪಾಲಗೌಡ ಅವರ ವಿಚಾರಗಳು ಅವರ ಮೇಲೆ ಗಾಢವಾದ ಪ್ರಭಾವ ಬೀರಿದವು.ಲೋಹಿಯಾ ಅವರ ಸಾಮಾಜಿಕ ಸಮಾನತೆ, ಹಿಂದುಳಿದ ವರ್ಗಗಳ ಪ್ರಗತಿ ಮತ್ತು ಅಧಿಕಾರದ ಕೇಂದ್ರೀಕರಣದ ವಿರೋಧದ ಚಿಂತನೆಗಳು ಜಯದೇವಿ ತಾಯಿಯವರನ್ನು ಆಕರ್ಷಿಸಿದವು. ಜಯಪ್ರಕಾಶ ನಾರಾಯಣ ಅವರ ಜನಪರ ರಾಜಕಾರಣ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳು ಅವರ ರಾಜಕೀಯ ದೃಷ್ಟಿಕೋನವನ್ನು ಮತ್ತಷ್ಟು ವಿಸ್ತರಿಸಿದವು.ಅದೇ ರೀತಿ ಶಾಂತವೇರಿ ಗೋಪಾಲಗೌಡರ ಸರಳ ಜೀವನ, ರೈತಪರ ನಿಲುವು, ಸಮಾಜವಾದಿ ಬದ್ಧತೆ ಮತ್ತು ಜನರೊಂದಿಗೆ ಬೆರೆತು ಹೋರಾಟ ನಡೆಸುವ ಗುಣಗಳು ಜಯದೇವಿ ತಾಯಿಯವರ ಮೇಲೆ ಪರಿಣಾಮ ಬೀರಿದವು. ಸಮಾಜವಾದಿಯಾಗಿ ರೂಪುಗೊಂಡ ಜಯದೇವಿ ತಾಯಿಯವರು ಸಮಾಜವಾದಿ ನಾಯಕರ ಒಡನಾಟ ಮತ್ತು ಅವರ ವಿಚಾರಧಾರೆಯ ಅಧ್ಯಯನದಿಂದ ಜಯದೇವಿ ತಾಯಿಯವರ ರಾಜಕೀಯ ವ್ಯಕ್ತಿತ್ವ ಹೊಸ ರೂಪ ಪಡೆದುಕೊಂಡಿತು. ರಾಜಕೀಯವೆಂದರೆ  ಸಾಮಾನ್ಯ ಜನರ ಬದುಕಿನಲ್ಲಿ ಬದಲಾವಣೆ ತರುವ ಸಾಧನ ಎಂಬ ನಂಬಿಕೆ ಅವರಲ್ಲಿ ಗಟ್ಟಿಯಾಯಿತು. ಸಾಮಾಜಿಕ ಅಸಮಾನತೆ, ಶೋಷಣೆ, ಬಡತನ, ಮಹಿಳೆಯರ ಸಮಸ್ಯೆಗಳು ಮತ್ತು ಹಿಂದುಳಿದ ಜನಸಮುದಾಯಗಳ ಹಕ್ಕುಗಳಂತಹ ವಿಚಾರಗಳ ಬಗ್ಗೆ ಅವರು ಹೆಚ್ಚು ಕಾಳಜಿ ವಹಿಸಿದರು. ಈ ಹಂತದಲ್ಲಿ ಅವರು ಒಬ್ಬ ಬದ್ಧ ಸಮಾಜವಾದಿ ನಾಯಕಿಯಾಗಿ ತಮ್ಮದೇ ಆದ ಗುರುತನ್ನು ರೂಪಿಸಿಕೊಂಡರು.ಅಖಂಡ ಕರ್ನಾಟಕದ ಆಶಯದೊಂದಿಗೆ ಸಮಾಜವಾದಿ ಚಿಂತನೆಜಯದೇವಿ ತಾಯಿಯವರ ರಾಜಕೀಯ ಚಿಂತನೆಗಳಲ್ಲಿ ಸಮಾಜವಾದ ಮತ್ತು ಅಖಂಡ ಕರ್ನಾಟಕದ ಹೋರಾಟ ಪರಸ್ಪರ ಬೆಸೆದುಕೊಂಡಿದ್ದವು. ಕರ್ನಾಟಕದ ವಿವಿಧ ಭಾಗಗಳಲ್ಲಿ ಚದುರಿಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳು ಒಂದೇ ಆಡಳಿತಾತ್ಮಕ ಘಟಕವಾಗಿ ಸೇರಬೇಕು ಎಂಬುದು ಅವರ ಪ್ರಮುಖ ಆಶಯವಾಗಿತ್ತು.ಅವರ ದೃಷ್ಟಿಯಲ್ಲಿ ಕರ್ನಾಟಕ ಏಕೀಕರಣವೆಂದರೆ ಕರ್ನಾಟಕದ ಪ್ರತಿಯೊಂದು ಭಾಗದ ಜನರಿಗೂ ಸಮಾನ ಅವಕಾಶ, ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ದೊರೆಯಬೇಕು ಎಂಬುದೂ ಅದರ ಭಾಗವಾಗಿತ್ತು. ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನಲ್ಲಿ ಜವಾಬ್ದಾರಿ ಹಂತದಲ್ಲಿ ಜಯದೇವಿ ತಾಯಿಯವರು ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ (ಅ.ಕ.ರಾ.ನಿ.) ಉಪಾಧ್ಯಕ್ಷೆಯಾಗಿ ಜವಾಬ್ದಾರಿ ವಹಿಸಿಕೊಂಡರು. ಇಂಥ ಸ್ಥಾನವು ಅವರ ರಾಜಕೀಯ ಜೀವನದ ಮಹತ್ವದ ಘಟ್ಟವಾಗಿತ್ತು. ಈ ಹುದ್ದೆಯ ಮೂಲಕ ಅವರು ಅಖಂಡ ಕರ್ನಾಟಕದ ವಿಚಾರವನ್ನು ಜನರ ಮುಂದೆ ನಿರಂತರವಾಗಿ ಪ್ರಸ್ತಾಪಿಸಿದರು. ಕನ್ನಡ ಭಾಷಿಕ ಪ್ರದೇಶಗಳ ಏಕೀಕರಣ, ಕನ್ನಡಿಗರ ಹಕ್ಕುಗಳು ಮತ್ತು ಕರ್ನಾಟಕದ ಸಮಗ್ರ ಅಭಿವೃದ್ಧಿಯ ಪರವಾಗಿ ಧ್ವನಿ ಎತ್ತಿದರು. ಹೋರಾಟ ಮತ್ತು ವಿಚಾರಧಾರೆಯ ಸಂಗಮಜಯದೇವಿ ತಾಯಿಯವರ ರಾಜಕೀಯ ಪಯಣವನ್ನು ಗಮನಿಸಿದಾಗ, ಅವರ ಬದುಕಿನಲ್ಲಿ ಕನ್ನಡದ ಮೇಲಿನ ಅಭಿಮಾನ, ಅಖಂಡ ಕರ್ನಾಟಕದ ಕನಸು ಮತ್ತು ಸಮಾಜವಾದಿ ವಿಚಾರಧಾರೆ ಒಂದಕ್ಕೊಂದು ಪೂರಕವಾಗಿ ಬೆಳೆದಿರುವುದು ಕಾಣಿಸುತ್ತದೆ.ಕಾಂಗ್ರೆಸ್‌ನಿಂದ ಹೊರಬಂದ ನಂತರ ಅವರು ಆಯ್ದುಕೊಂಡ ದಾರಿ ಸುಲಭವಾದದ್ದಾಗಿರಲಿಲ್ಲ. ಆದರೆ ಅಧಿಕಾರದ ರಾಜಕಾರಣಕ್ಕಿಂತ ತತ್ವ, ಜನಪರತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿದ  ಬದುಕನ್ನು ಅವರು ಕಟ್ಟಿಕೊಂಡರು.ಹೀಗಾಗಿ ಜಯದೇವಿ ತಾಯಿಯವರು ಅಖಂಡ ಕರ್ನಾಟಕದ ಕನಸನ್ನು ಹೊತ್ತ ಕನ್ನಡತಿ, ಸಮಾಜವಾದಿ ಚಿಂತನೆಯ ಹೋರಾಟಗಾರ್ತಿ ಮತ್ತು ಜನಪರ  ಪ್ರತಿನಿಧಿಯಾಗಿ ಗುರುತಿಸುವುದು ಹೆಚ್ಚು ಸೂಕ್ತವಾಗಿದೆ. ಸವಿತಾ ದೇಶಮುಖ

Read Post »

You cannot copy content of this page

Scroll to Top