ವಿಶೇಷ ಸಂಗಾತಿ
ಜಯಲಕ್ಷ್ಮಿ ಕೆ
“ನೀಲ ಗಗನ ತಿಳಿನೀರ ಸಾಗರಗಳ ಒಡೆತನ ಯಾರದ್ದು?”


ತಮ್ಮ ತಮ್ಮ ಸಾಮ್ರಾಜ್ಯದ ಎಲ್ಲೆಯನ್ನು ವಿಸ್ತರಿಸುವ ಸಲುವಾಗಿ ಯುದ್ಧ ಸಾರುತ್ತ “ಗೆಲುವು ನನ್ನದು ಸೋಲು ಅವನದು ” ಎಂದು ಬೀಗುತ್ತಿದ್ದ ಮಾನವ ಇಂದು ಗಗನ ಸಾಗರಗಳ ಒಡೆತನಕ್ಕಾಗಿ ಸಮರಕ್ಕಿಳಿದಿದ್ದಾನೆ. ಪ್ರಕೃತಿ ಮೊಗೆ ಮೊಗೆದು ಕೊಡುತ್ತಿರುವ ಗಾಳಿ ನೀರು , ಬೆಳಕು,ಪಚ್ಚೆ-ಪೈರುಗಳನ್ನು ಬಳಸಿ, ಉಳಿಸಿ ಹೋಗಬೇಕು ಎನ್ನುವ ಪ್ರಜ್ಞೆ ಇಲ್ಲದೆ ಕಡಲು ಸಾಗರಗಳ ಒಡೆತನಕ್ಕಾಗಿ ರಾಕ್ಷಸೀಯ ಪ್ರವೃತ್ತಿ ಮೆರೆಯುತ್ತಿದ್ದಾನೆ. ಜಗವಷ್ಟೇ ಅಲ್ಲ, ದಿಗ್ದೇವತೆಗಳು ಕೂಡಾ ಬೆರಗಿನಿಂದ ನೋಡುವಂತಹ ಕಾರ್ಯಗಳು ಮನುಜರಿಂದ ನಡೆಯುತ್ತಲೇ ಇವೆ.
ಮುದ್ದು ಮಕ್ಕಳ ಮಾರಣ ಹೋಮ, ಸೈನಿಕರ ಪ್ರಾಣ ಹರಣ, ಅನಾಥ ಜೀವಗಳ ಆಕ್ರಂದನ…. ಉಹುಂ…. ಗೆಲುವಿನ ಬೆನ್ನೇರುವ ಹಠದಲ್ಲಿ ಕುರುಡಾಗಿವೆ ಕಣ್ಣುಗಳು.. ಮರುಭೂಮಿಯಾಗಿದೆ ಮನಸುಗಳು…ಬಾಂಬ್ ಮಿಸ್ಯೈಲು ಗಳ ಹೊಗೆ ಬಾನಂಗಳ ತುಂಬುತ್ತಿದೆ. ಗಗನ ಮುನಿದರೆ ಭುವಿಗೆ ಉಳಿಗಾಲವುಂಟೇ? ಕಣ್ಣಿಗೆ ಕಾಣದ ಸ್ವಂತ ಅಸ್ತಿತ್ವವೇ ಇಲ್ಲದ ವೈರಸ್ ಕಳಿಸಿದ ಪಾಠವನ್ನು ನಾವು ಎಷ್ಟು ಬೇಗ ಮರೆತೆವು!! ಮೊಸಳೆಯಂತೆ ಬಾಯಿ ತೆರೆದು ಕಡಲ ದಡದಲ್ಲಿ ಆನಂದಿಸುತ್ತಿದ್ದ ಜನರನ್ನು ನುಂಗಿ ಮತ್ತೆ ಹೊರಗೆಸೆದ ಜಲ ಪ್ರಳಯಗಳ ಭೀಕರತೆ, ಬದುಕಿನ ನಶ್ವರತೆ ಎಲ್ಲವೂ ಈಗ ಮತ್ತೆ ಅಸ್ಪಷ್ಟವಾಗುತ್ತಾ ಸಾಗಿದೆ.
ಭೂಮಿಯ ಒಡಲು ಮುನಿದು ಮನುಷ್ಯನ ಅಸ್ತಿತ್ವವನ್ನೇ ನಡುಗಿಸಿದ , ನಂಬಿಕೆಯನ್ನೇ ಬುಡಮೇಲು ಮಾಡಿದ ಉದಾಹರಣೆಗಳೂ ಮನುಷ್ಯನಿಗೆ ತನ್ನಷ್ಟಕ್ಕೆ ತಾನು ಬದುಕಬೇಕು ಎನ್ನುವ ನೀತಿ ಕಲಿಸಿಲ್ಲ. ಕೇವಲ ದಾಹ!! ಭೂತಳವನ್ನು ಬಗೆದು ನಿಧಿ ಶೋಧ, ಗಣಿಗಾರಿಕೆ, ಅಭಿವೃದ್ಧಿ ಕಾರ್ಯಗಳು… ನೀರಿನ ಮೂಲಗಳನ್ನು ಬರಿದು ಮಾಡುವ, ಮಲಿನಗೊಳಿಸುವ ಕೆಲಸಗಳು,ಕಾರ್ಖಾನೆಗಳ ಮಿತಿ ಮೀರಿದ ಹೊಗೆ, ಸಿಡಿಮದ್ದು,ಬಾಂಬ್ ಇತ್ಯಾದಿಗಳಿಂದ ಆಗಸದೆತ್ತರಕ್ಕೆ ಹೊಗೆ ಚಿಮ್ಮಿಸಿ ಇಡೀ ವಾತಾವರಣ ಕೆಡಿಸುವ, ವಿಜಯ ಸಾಧಿಸುವ, ಇಂಧನ ಮೂಲಗಳಿಗೆಲ್ಲ ಬೆಂಕಿ ಹಾಕಿ ಆ ಹೊಗೆಯಲ್ಲಿಯೇ ಕೇಕೆ ಹಾಕಿ ಬೀಗುವ ಕಾರ್ಯಗಳು ನಡೆಯುತ್ತಲೇ ಇವೆ. ನೈಸರ್ಗಿಕ ಸಂಪನ್ಮೂಲಗಳು ಜಗತ್ತಿನ ಸಕಲ ನಾಗರಿಕ ಚಟುವಟಿಕೆಗಳಿಗೆ ಮೂಲ ಆಧಾರ. ಅವುಗಳನ್ನು ಕಾಪಿಟ್ಟುಕೊಂಡರೆ ಕೊಡು ಕೊಳ್ಳುವಿಕೆಯ ಮೂಲಕ ಜನರು ಬಳಸಿಕೊಳ್ಳಬಹುದು. ಸುಟ್ಟು ಸಾಧಿಸುವುದೇನು?? ಭಾರೀ ಪ್ರಮಾಣದ ಕಟ್ಟಡಗಳನ್ನು ನಿರ್ಮಿಸುವುದು ನಂತರ ಕೆಡಹು ವುದು ಭೂತಾಯಿಯ ಸಹನೆಯನ್ನು ಪರೀಕ್ಷೆ ಮಾಡುವುದು. ಭೂಮಿ ಸಹನಾಮಯಿ, ಹೌದು. ಆದರೆ ಸಹನೆಗೂ ಮಿತಿ ಇದೆ. ಭೂಮಾತೆ ನಮ್ಮನ್ನೆಲ್ಲ ಕ್ಷಮಿಸುವಷ್ಟು ಕಾಲ ಭೂಮಿಯ ಮೇಲ್ಪದರ ಚೆನ್ನಾಗಿಯೇ ಕಾಣುತ್ತದೆ. “ನೆಲದ ಒಡಲಿನೊಳಗೇನು ನಡೆವುದೋ ಎಲ್ಲಿ ಕುಳಿತಿಹನೊ ಕಲಾವಿದ” ಎನ್ನುವ ಚೆನ್ನವೀರ ಕಣವಿಯವರ ಹಾಡಿನ ಸಾಲಿನಂತೆ ಭೂಮಿಯ ಅಂತರಾಳದಲ್ಲಿನ ಒತ್ತಡ ಯಾವ ಮಟ್ಟದಲ್ಲಿದೆ ಎನ್ನುವುದನ್ನು ನಾವು ಯಾರೂ ಅರಿಯೆವು.
ಗಾಳಿಯಲ್ಲಿ ಹೆಚ್ಚುತ್ತಿರುವ ಹಾನಿಕಾರಕ ಪದಾರ್ಥಗಳಿಂದ ಈಗಾಗಲೇ ಮನುಷ್ಯ ಅನೇಕ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಅದಕ್ಕೆ ಮತ್ತಷ್ಟು ವಿಷ ಅನಿಲಗಳು ಸೇರಿಕೊಳ್ಳುತ್ತಲೇ ಇವೆ. ವಿಜ್ಞಾನಿಗಳು, ಪರಿಸರ ತಜ್ಞರು ಎಚ್ಚರಿಕೆ ಕೊಡುತ್ತಲೇ ಇದ್ದಾರೆ. ವಾಹನದ ಹೊಗೆ, ಕಾರ್ಖಾನೆ ವಿದ್ಯುತ್ ಸ್ಥಾವರಗಳ ಹೊಗೆ, ಕಲ್ಲಿದ್ದಲು ಪೆಟ್ರೋಲಿಯಂ ಉತ್ಪನ್ನಗಳನ್ನು ಉರಿಸುವುದರಿಂದ ಬಿಡುಗಡೆಯಾಗುವ ಧೂಳು, ( ಏರೋಸಾಲ್ ) ಪ್ಲಾಸ್ಟಿಕ್, ಕಸ, ಕೃಷಿ ತ್ಯಾಜ್ಯಗಳನ್ನು ಸುಡುವ ಸಂದರ್ಭ ಉಂಟಾಗುವ ಹೊಗೆ, ಕಾಡ್ಗಿಚ್ಚಿನ ಹೊಗೆ, ರೆಫ್ರಿಜರೇಟರ್ ಮತ್ತು ಏರ್ ಕಂಡೀಷನರ್ ಗಳಿಂದ ಹೊರಹೊಮ್ಮುವ ಕ್ಲೋರೋಫ್ಲೋರೋ ಕಾರ್ಬನ್ ಗಳು ಇವೆಲ್ಲವುಗಳಿಂದ ಮಲಿನಗೊಂಡ ಗಾಳಿ -ಗಗನಕ್ಕೆ ಯುದ್ಧ ಎನ್ನುವ ಸ್ವಯಂಕೃತ ಅಪರಾಧಗಳಿಂದ ಮನುಷ್ಯ ಮತ್ತಷ್ಟು ವಿಷಾನಿಲಗಳನ್ನು ಸೇರ್ಪಡೆಗೊಳಿಸುತ್ತಿದ್ದಾನೆ. ಯುದ್ಧದಿಂದ ಮನುಷ್ಯರು ಎದುರಿಸುತ್ತಿರುವ ಸಮಸ್ಯೆಗಳು, ಇಂಧನ ಸಮಸ್ಯೆಯ ಗೋಳು ದಿನ ನಿತ್ಯದ ವರದಿಯೇ ಆಗಿದೆ. ಭೂಮಿಯ ಮೇಲಿನ ಮನುಷ್ಯನ ಎಲ್ಲ ಚಟುವಟಿಕೆಗಳೂ ಇಂಧನದ ಮೇಲೆ ಅವಲಂಬಿತವಾಗಿದೆ. ಇಂಧನವಿಲ್ಲದ ನಮ್ಮ ಬದುಕಿನ ಪಥ ಹೇಗಿರಬಹುದು ಎನ್ನುವುದನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಯುದ್ಧ ತಂದಿತ್ತ ಇಂಧನ ಸಮಸ್ಯೆ ಕಣ್ಮುಂದೆ ಕಾಣುತ್ತಿದೆ.. ನಾವು ಮನುಜರು ಇದರ ಬಗ್ಗೆ ದನಿ ಎತ್ತುತ್ತಿದ್ದೇವೆ. ಪ್ರಕೃತಿಯ ಮೇಲೆ ಎಂಥ ದುಷ್ಪರಿಣಾಮ ಬೀರುತ್ತಿದೆ ಈ ಯುದ್ಧ!! ಮೌನವಾಗಿದೆ ಗಗನ.. ಮೌನವಾಗಿದೆ ಕಡಲು!!

ಮಾನವನ ಬದುಕಿಗೆ ಅನಿವಾರ್ಯವಾದ ಕೆಲಸ – ಕಾರ್ಯಗಳಿಂದ ಪರಿಸರ ಮಲಿನ ಗೊಳ್ಳುವುದನ್ನು ತಡೆಯಲು ಕಷ್ಟ ಸಾಧ್ಯ. ಪರ್ಯಾಯ ವ್ಯವಸ್ಥೆಗಳೂ ಇಲ್ಲ ಎನ್ನಬಹುದು. ಆದರೆ ಒಬ್ಬ ವ್ಯಕ್ತಿಯ ಅಥವಾ ಒಂದು ದೇಶದ ಪ್ರತಿಷ್ಠೆಗಾಗಿ ಇಡೀ ಮನುಕುಲ ನರಳುವ ಸ್ಥಿತಿಗೆ ಬರುವ ಪರಿಸ್ಥಿತಿಯನ್ನು ಇಂದಿನ ಯುದ್ಧ ಸನ್ನಿವೇಶಗಳು ನಿರ್ಮಾಣ ಮಾಡುತ್ತಿವೆ. ಧನದಾಹ, ಹೆಸರು, ಕೀರ್ತಿಯ ಹಂಬಲ, ಅಧಿಕಾರದ ಅಮಲು ಇವೆಲ್ಲವುಗಳಿಂದ ಪ್ರಕೃತಿಯನ್ನು ಅಲ್ಲಗಳೆವ ಮನುಷ್ಯರನ್ನು ಪಂಚಭೂತಗಳೇ ತಮ್ಮ ತಮ್ಮ ಕ್ರಿಯೆಗಳ ಮೂಲಕ ” ನಮ್ಮ ಒಡೆತನ ನಿಮ್ಮ ಮುಷ್ಟಿಯಲ್ಲಿಲ್ಲ ” ಎಂದು ಹೇಳುವ ದಿನಗಳು ದೂರವಿಲ್ಲ. ಚರಾಚರಗಳಲ್ಲಿ ಜೀವ ಅರಳಿಸಿ ನಗುತ್ತಿರುವ ಭೂಮಿಯ ಸಹನಾ ಗುಣವನ್ನು, ತಂಗಾಳಿಯ ಮೂಲಕ ಮುದಗೊಳಿಸುವ ವಾತಾವರಣದ ಹೃದಯವಂತಿಕೆಯನ್ನು, ಸಕಾಲದಲ್ಲಿ ಮೋಡ ಕಟ್ಟಿ ಮಳೆ ಸುರಿಸಿ ಬೆಳೆಯನ್ನು ಹಸಿರಾಗಿಸುವ ಆಗಸದ ಹಿರಿತನವನ್ನು ನಿರ್ಲಕ್ಷಿಸುವ ನಮಗೆ ಮುಂದಿನ ಬವಣೆಯ ದಿನಗಳ ಅರಿವಿಲ್ಲ. ಪ್ರಕೃತಿಯ ಸವಾಲುಗಳನ್ನು ಎದುರಿಸಲು ಸಿದ್ಧರಾಗುವ ಅನಿವಾರ್ಯ ಸ್ಥಿತಿ ಬರುವ ಮುನ್ನ ಮನುಕುಲ ಜಾಗೃತಗೊಳ್ಳಬೇಕಿದೆ. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?? ಯುದ್ಧದಾಹಿಗಳಿಗೆ ತಿಳಿ ಹೇಳುವವರು ಯಾರು?
ಜಯಲಕ್ಷ್ಮಿ ಕೆ,



