ವಿಶೇಷ ಸಂಗಾತಿ
“ರೈತ ನೀಡಿದ ಕೃತಜ್ಞತೆಯ ಪಾಠ”
ವೀಣಾ ಹೇಮಂತ್ ಗೌಡ ಪಾಟೀಲ್


ನಮ್ಮ ಪುಣ್ಯ ಭರತ ಭೂಮಿಯ ಹಳ್ಳಿಯೊಂದರಲ್ಲಿ ಓರ್ವ ರೈತ ವಾಸವಾಗಿದ್ದ. ಆತನ ಕೈಗಳು ಭೂಮಿಯಿಂದ ಆತನನ್ನು ಎಳೆದು ತೆಗೆದಂತೆ ತಿರುಚಿದ್ದವು ಆತನ ಬೆನ್ನು ಬಿಲ್ಲಿನಂತೆ
ಬಾಗಿತ್ತು. ಅತ್ಯಂತ ವಯಸ್ಸಾಗಿದ್ದ ಆತ ಒಬ್ಬನೇ ವಾಸಿಸುತ್ತಿದ್ದ. ತನ್ನವರೆಲ್ಲರನ್ನು ಕಳೆದುಕೊಂಡ ಆತನಿಗೆ ಒಂಟಿ ಜೀವನ ಅಭ್ಯಾಸವಾಗಿತ್ತು.
ಅದೊಂದು ಸುಗ್ಗಿಯ ದಿನ ಸತತವಾಗಿ ಕೆಲಸ ಮಾಡಿ ಮರಳಿಮನೆಗೆ ಬಂದ ಆತನ ದೇಹದಿಂದ ಬೆವರಿನ ವಾಸನೆ ಹಾಗೂ ಆತನ ಬಟ್ಟೆಗೆ ಮೆತ್ತಿದ ಹಸಿ ಮಣ್ಣಿನ ವಾಸನೆ ಇನ್ನಿಲ್ಲದಂತೆ ಅಂಟಿಕೊಂಡಿತ್ತು. ಮನೆಯ ಹಿತ್ತಲಿನ ಬಾವಿಯ ಬಳಿ ಕೈಕಾಲು ಮುಖವನ್ನು ತೊಳೆದ ಆತ ತನ್ನ ಸ್ನೇಹಿತನಿಗೂ ನೀರು ಕೊಟ್ಟು ಉಪಚರಿಸಿದ… ನಂತರ ಸ್ನೇಹಿತನೊಂದಿಗೆ ಅಡುಗೆಮನೆಯ ಮೇಜಿನ ಮೇಲೆ ಕುಳಿತ. ಮುಂಜಾನೆ ತಾನೇ ಮಾಡಿಟ್ಟ ಅಡುಗೆ ಅಲ್ಲಿತ್ತು.ತಟ್ಟೆಯಲ್ಲಿ ಬಡಿಸಿಕೊಂಡ ಆತ ಊಟವನ್ನು ಸೇವಿಸುವ ಮುನ್ನ ಎಂದಿನಂತೆ ತನ್ನ ತಲೆಯನ್ನು ಬಾಗಿಸಿ ಕೆಲ
ಪ್ರಾರ್ಥನೆಯ ಮಂತ್ರಗಳನ್ನು ನಿಧಾನವಾಗಿ ಪಠಿಸಿದ. ನಂತರ ತನ್ನ ಜೊತೆಗೆ ಬಂದಿದ್ದ ಸ್ನೇಹಿತನೊಂದಿಗೆ ಕುಳಿತು ಊಟ ಮಾಡಿದ. ಊಟಕ್ಕೂ ಮುನ್ನ ತಮ್ಮ ರೈತ ಸ್ನೇಹಿತ ತಲೆಬಾಗಿ ಪ್ರಾರ್ಥನೆ ಮಾಡಿದ್ದನ್ನು ನೋಡಿದ ಆತನ ಸ್ನೇಹಿತನಿಗೆ ಇನ್ನು ತಡೆಯಲಾಗಲಿಲ್ಲ..
ಗೆಳೆಯ… ಊಟಕ್ಕೆ ಮುನ್ನ ಪ್ರಾರ್ಥನೆಯ ಅಗತ್ಯ ಇದೆಯೇ? ಇದೆಲ್ಲವನ್ನು ನೀನು ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣದಿಂದ ಪಡೆದದ್ದು ಮತ್ತೇಕೆ ದೇವರನ್ನು ಪ್ರಾರ್ಥಿಸುವೆ ಎಂದು ಗೆಳೆಯನನ್ನು ಪ್ರಶ್ನಿಸಿದ.
ತಾನು ಕುಳಿತುಕೊಂಡಿದ್ದ ಸಾಕಷ್ಟು ಶಿಥಿಲವಾಗಿದ್ದ ಕುರ್ಚಿಯಿಂದ ತುಸು ಮುಂದಕ್ಕೆ ಬಾಗಿದ ಆ ರೈತ ನಿಧಾನವಾಗಿ ಎದ್ದು ನಿಂತನು. ಕಿಟಕಿಯ ಬಳಿ ತೆರಳಿ ತನ್ನ ಎರಡು ಕೈಗಳನ್ನು ಬಳಸಿ ಕಿಟಕಿಯ ಕಂಬಿಯನ್ನು ಗಟ್ಟಿಯಾಗಿ ಹಿಡಿದನು. ಮುಖದಲ್ಲಿ ಪುಟ್ಟದಾದ ನಗುವೊಂದನ್ನು ಹೊತ್ತು ದೂರದಲ್ಲಿ ಕಾಣುತ್ತಿದ್ದ ತನ್ನ ಹೊಲವನ್ನು ಸ್ನೇಹಿತನಿಗೆ ತೋರಿಸಿ ಅತ್ಯಂತ ಶಾಂತವಾಗಿ ಹೇಳಿದ.
ಗೆಳೆಯ…ನಾನು ಹೊಲದಲ್ಲಿ ಕೆಲಸ ಮಾಡಲು ಸಾಧ್ಯ, ಆದರೆ ಮಳೆ ಬರಿಸಲು ನನ್ನಿಂದ ಸಾಧ್ಯವಿಲ್ಲ. ನನಗೆ ಬೀಜವನ್ನು ಬಿತ್ತಲು ಸಾಧ್ಯ ಆದರೆ ಆ ಬೀಜಕ್ಕೆ ಮೊಳೆತು ಬೆಳೆ ಎಂದು ಅಜ್ಞಾಪಿಸಲು ಸಾಧ್ಯವಿಲ್ಲ. ನನ್ನ ಕೈಗಳು ಕೆಲಸವನ್ನು ನಿರ್ವಹಿಸುತ್ತದೆ ಎಂಬುದೇನೋ ಖಂಡಿತವಾಗಿಯೂ ನಿಜ, ಆದರೆ ಚಮತ್ಕಾರವನ್ನು ಮಾಡಲು ಅಗೋಚರ ಶಕ್ತಿಗೆ ಮಾತ್ರ ಸಾಧ್ಯ ಎಂದು ಹೇಳಿ ದೀರ್ಘವಾದ ಉಸಿರನ್ನು ತೆಗೆದುಕೊಂಡ.
ಆತನ ಕಣ್ಣುಗಳಲ್ಲಿ ಪ್ರಶಾಂತತೆ ತುಂಬಿ ತುಳುಕುತ್ತಿತ್ತು.
ಒಂದೆರಡು ಕ್ಷಣಗಳ ವಿರಾಮವನ್ನು ತೆಗೆದುಕೊಂಡ ಆತ ಇದೆಲ್ಲ ಚಮತ್ಕಾರವನ್ನು ಬೇರೊಬ್ಬರು ಮಾಡುತ್ತಿದ್ದಾರೆ…. ಪ್ರಾರ್ಥಿಸುವ ಮೂಲಕ ನಾನು ನನ್ನ ಕೆಲಸ ಯಾವುದು ಎಂಬುದನ್ನು ಅರಿತುಕೊಳ್ಳುತ್ತೇನೆ. ಉಪಕಾರ ಸ್ಮರಣೆ ಮಾಡುವುದರ ಮೂಲಕ ನನ್ನ ಮೇಲೆ ಕೃಪೆಯನ್ನು ತೋರುವ ಆ ಭಗವಂತನನ್ನು ನಾನು ನೆನೆಯದಿದ್ದರೆ ಹೇಗೆ ? ಆದ್ದರಿಂದಲೇ ಆ ಕಾಣದ ಕೈಗಳಿಗೆ, ಅಗೋಚರ ಶಕ್ತಿಗೆ ಪ್ರಾರ್ಥನೆಯ ಮಾಡುವ ಮೂಲಕ ನಾನು ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಇದು ನನ್ನ ಆದ್ಯ ಕರ್ತವ್ಯ ಎಂದು ತನ್ನ ಮಾತನ್ನು ಪೂರ್ಣಗೊಳಿಸಿದನು.
ಆತ ಹೇಳಿದ ಮಾತುಗಳನ್ನು ನಾವೆಂದೂ ಮರೆಯಬಾರದು. ಎಲ್ಲರ ಬದುಕು ಅಷ್ಟೇ ಸರಳವಾಗಿ ಇರುವುದಿಲ್ಲ. ಅದರಲ್ಲೂ ಬಿರುಗಾಳಿ, ನೆರೆ, ಭೀಕರ ಕ್ಷಾಮ ಇದ್ದೇ ಇರುತ್ತವೆ. ರೈತನ ಬದುಕಂತೂ ಅನಿಶ್ಚಿತತೆಯ ಹಾದಿಯಲ್ಲಿ ಸಾಗುತ್ತದೆ. ಬಿತ್ತಿದ ಬೆಳೆಗೆ ಸಾಕಷ್ಟು ಮಳೆ ಬೀಳದೆ ಹೋಗಬಹುದು ಫಸಲು ಕೈಗೆ ಬರುವುದರಲ್ಲಿಯೇ ಹಾಳಾಗಿ ಹೋಗಬಹುದು ಫಸಲಿಗೆ ಒಳ್ಳೆಯ ಬೆಲೆ ಸಿಕ್ಕದೆ ಹೋಗಬಹುದು. ಆತನ ಹೊರೆಗಳು ಮತ್ತಷ್ಟು ಹೆಚ್ಚಾಗುತ್ತವೆಯೇ ಹೊರತು ಕಡಿಮೆಯಾಗುವುದು ಸಾಧ್ಯವಿಲ್ಲ…ಆದರೂ ಕೂಡ ಪ್ರತಿದಿನ ಮುಂಜಾನೆ ಆತ ಬೇಗನೆ ಏಳುವುದನ್ನು ತಪ್ಪಿಸುವುದಿಲ್ಲ. ತನ್ನ ಅನಿಶ್ಚಿತ ಬದುಕಿನ ಕುರಿತು ಆತನಿಗೆ ಬೇಸರವಿಲ್ಲ… ಆದರೂ ಆತ ದೇವರಿಗೆ ಸದಾ ಕೃತಜ್ಞನಾಗಿರುತ್ತಾನೆ. ತನಗೆ ಉಸಿರು ಕೊಟ್ಟದ್ದಕ್ಕಾಗಿ, ತನ್ನಲ್ಲಿ ಸಾಮರ್ಥ್ಯವನ್ನು ತುಂಬಿದ್ದಕ್ಕಾಗಿ ಮತ್ತೆ ತನ್ನ ಹೊಲದಲ್ಲಿ ತಾನು ನಡೆದು ಓಡಾಡಲು ಅವಕಾಶವನ್ನು ಕಲ್ಪಿಸಿದ್ದಕ್ಕಾಗಿ ಆತ ದೇವರಿಗೆ ಸದಾ ಕೃತಜ್ಞನಾಗಿರುತ್ತಾನೆ. ಅಂತಹ ಒಂದು ಶಾಂತವಾದ, ಸಂತೃಪ್ತವಾದ, ಕೃತಜ್ಞತಾ ಭಾವದ ಮನಸ್ಥಿತಿಯಲ್ಲಿ ಆತ ತನ್ನ ಬದುಕಿನಲ್ಲಿ ಅದೆಷ್ಟೇ ದೊಡ್ಡ ಪ್ರಮಾಣದ ಬಿರುಗಾಳಿ ಬೀಸಿದರೂ ಅಚಲವಾಗಿ ನಿಲ್ಲುವ ಸಾಮರ್ಥ್ಯವನ್ನು ಹೊಂದುತ್ತಾನೆ.
ಸ್ನೇಹಿತರೆ, ಕೃತಜ್ಞತೆ ಎನ್ನುವುದು ನಮಗೆ ಬಲಹೀನತೆಯಾಗಿ ತೋರಬೇಕಾಗಿಲ್ಲ ಕೃತಜ್ಞತೆಯನ್ನು ತೋರುವುದು ಅಂಧ ವಿಶ್ವಾಸವಂತೂ ಖಂಡಿತವಾಗಿ ಅಲ್ಲ. ಎಲ್ಲಾ ಆಶಾಶ್ವತತೆಗಳ ನಡುವೆ ಅತ್ಯಂತ ವಿನಮ್ರತೆಯಿಂದ ರೂಪುಗೊಂಡ ಶಕ್ತಿ ಹಾಗೂ ಸಾಮರ್ಥ್ಯವೇ ಕೃತಜ್ಞತೆಯಾಗಿರುತ್ತದೆ. ಬದುಕಿನ ಅನಿಶ್ಚಿತತೆಗಳ ನಡುವೆಯೂ ಕೂಡ ನಮಗೆ ಬದುಕು ಕೊಟ್ಟ ಎಲ್ಲ ಅವಕಾಶಗಳನ್ನು ಗೌರವ ಪೂರ್ವಕವಾಗಿ ನೆನೆಯಲು ನಾವು ಆಯ್ದುಕೊಳ್ಳುವ ಒಂದು ವಿಧಾನವಾಗಿರುತ್ತದೆ. ಏನಂತೀರಾ ಸ್ನೇಹಿತರೆ ?
ವೀಣಾ ಹೇಮಂತ್ ಗೌಡ ಪಾಟೀಲ್




