ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನನ್ನ ತವರೂರು ದಿವ್ಯ ಭವ್ಯ ಇತಿಹಾಸದ ಸುಂದರ ಚಿತ್ರದುರ್ಗ
ಕೋಟೆ, ಕಣಿವೆ‌, ಕೊತ್ತಳಗಳಿಂದ ಆವೃತ
ಭುವಿಯ ಮೇಲಿನ ಸ್ವರ್ಗ..

ಕಲ್ಲುಬಂಡೆಗಳ‌, ಗಂಡುಗಲಿಗಳು ಆಳಿದ
ವೀರರ ನಾಡು
ಬಯಲುಸೀಮೆಯ‌ ಬಿಸಿಲಿನಲೂ ತಂಪು
ನೀಡುವ ಬೀಡು..

ವೀರ ಮದಕರಿನಾಯಕರಾಳಿದ ಬಲಿಷ್ಠ
ಉಕ್ಕಿನ ಕೋಟೆ
ರಣಚಂಡಿ ಒನಕೆಓಬವ್ವ ರಕ್ಷಿಸಿದಳು ಆಡಿ ವೈರಿಗಳ ಬೇಟೆ

ಮನ ಸೆಳೆವುದು ಇಲ್ಲಿನ ಆಡುಮಲ್ಲೇಶ್ವರ, ಚಂದ್ರವಳ್ಳಿಯ ತೋಟ
ಅಪ್ರತಿಮವೆನಿಸುವುದು ಜೋಗಿಮಟ್ಟಿಯ ಮೇಲಿನ ರಮ್ಯನೋಟ..

ಮತ್ತೇರಿಸುವದು ಬೆಟ್ಟದ ಮೇಲಿನ ಕೆಂಡ ಸಂಪಿಗೆಯ ಕಂಪು
ಅದ್ಭುತವದು ಕಲ್ಲಿನ ತಣ್ಣೀರದೋಣಿಯ
ಸಿಹಿನೀರ ತಂಪು..

ಉರುಮೆ, ತಮಟೆ, ಡೊಳ್ಳು, ಸೋಮ, ಮರಗಾಲಿನ ಕುಣಿತ
ಬೇರೆಲ್ಲೂ ಕಾಣಸಿಗದು ಇಂತಹ ಅದ್ಭುತ ಜಾನಪದ ತುಡಿತ..

ಸಾಹಿತಿ ವೆಂಕಣ್ಣಯ್ಯ,ಕೃಷ್ಣಶರ್ಮ ತರಾಸು ಅವರಿಗೆ ಸರಿಸಾಟಿಯುಂಟೇ
ಮನಗೆದ್ದ ಜನನಾಯಕ ನಿಜಲಿಂಗಪ್ಪನವರ
ಅರಿಯದವರುಂಟೇ..

ವಿಷ್ಣು, ಅಂಬಿಯರಂಥ ನಟರತ್ನರನು ಚಿತ್ರ
ರಂಗಕೆ ನೀಡಿದ ಹೆಮ್ಮೆ
ದಿಗ್ಗಜ ನಿರ್ದೇಶಕ ಪುಟ್ಟಣ್ಣ ಕಣಗಾಲರಿಗೆ ಮರುಜನ್ಮವನಿತ್ತ ಹಿರಿಮೆ..

ಶಬ್ದಮಾಂತ್ರಿಕ ಬಿ ಎಲ್ ವೇಣು ದುರ್ಗದ ಕಥೆಯನಾಗಿಸಿಹರು ಜೀವಂತ
ವೀರಭೂಮಿಯ ಗಂಧ ಪಸರಿಸಿಹ ಅವರ
ಅದ್ಭುತ ಶೈಲಿ ಸದಾ ಜ್ವಲಂತ

ಜೋಳದ ಮುದ್ದೆ ಸೊಪ್ಪಿನ ಸಾರು ಹಪ್ಪಳ ಉಪ್ಪಿನಕಾಯಿ ಊಟ
ಪಂಚತಾರಾ ಹೋಟೆಲಿನಲೆಲ್ಲೂ ಸಿಗದಿಂಥಾ ಆತ್ಮೀಯ ಕೂಟ..

ನನ್ನ ತವರೂರು ದಿವ್ಯ ಭವ್ಯ ಇತಿಹಾಸದ
ಸುಂದರ ಚಿತ್ರದುರ್ಗ
ಕೋಟೆ, ಕಣಿವೆ‌, ಕೊತ್ತಳಗಳಿಂದ ಆವೃತ
ಭುವಿಯ ಮೇಲಿನ ಸ್ವರ್ಗ..


About The Author

Leave a Reply

You cannot copy content of this page

Scroll to Top