ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಥಾ ಸಂಗಾತಿ

ವಾಡಿಕೆ

ಶ್ರಮ ಕುಮಾರ್

Village life India Painting by Namrata Patel

ಇದುವರೆಗು ನೋಡಿದ ಇಪ್ಪತ್ತು ಹುಡುಗಿಯರನ್ನು ಸಾರಾಸಗಟ್ಟಾಗಿ ಯಾವುದೇ ಕಾರಣ ನೀಡದೆ ತಿರಸ್ಕಾರ ಮಾಡಿದ್ದ‌ ಮಗನ ಮೇಲೆ ನರಸಯ್ಯನಿಗೆ ತಡೆಯಿಡಿಯಲಾರದಷ್ಟು ಕೋಪ್ವ ತರಿಸಿದ್ದರು ಹಲ್ಲು ಕಚ್ಚಿ ದೂರದ ಸಂಭಂದದಲ್ಲಿ ಸರಿಯೊಂದುವ ಒಂದು ಹುಡುಗಿ ನೋಡಿ ಬಂದಿದ್ದರು

‘ನಾಳೆ ಹೋರಡೋಕ್ ಹೇಳು ಒಳ್ಳೆಯ ಸಂಬಂಧ ಬಿಟ್ರೆ ಮೂರ್ ವರ್ಷ ಕಂಕಣಬಲ ಇಲ್ವಂತೆ ಬತ್ತ ಅಯ್ನೋರ್ನು ಮಾತಾಡ್ಸಿ ಬಂದಿವ್ನಿ ತಿದ್ದೇಳು ಅವ್ನ್ಗೆ’  ಎಂದೇಳಿ ನರಸಯ್ಯ ಹೊರಡುವಾಗ ಎಷ್ಟು ಹೇಳಿದರು ಕಿವಿಗಾಕಿಕೊಳ್ಳುವ ಜಯಮಾನ ಮಾದೇವನದಲ್ಲವೆಂದು ಗೊತ್ತಿದ್ದರೂ ತಲೆದೂಗಿದಳು ಲಕ್ಷಮ್ಮ

ಎಮ್ಮೆಕೊಪ್ಪಲಿನಿಂದ ಪಾದಯಾತ್ರೆಯಲ್ಲೇ

ಮಾದಪ್ಪನ ಬೆಟ್ಟವ ಅತ್ತಿಬಂದಮೇಲೆ ಮಾದೇಶ್ವರನ ವರಪ್ರಸಾದದಿಂದ ಹುಟ್ಟಿದ್ದನೆಂದು ಹುಟ್ಟಿ ಅಳುವ ಧ್ವನಿಯಲ್ಲೇ ಗಂಡು ಮಗು ನನಗೆಂದು ನರಸಯ್ಯ ಮನಸಲ್ಲೇ ಚೀರಿ ಮೂರುಬಾರಿ ಮಾದೇವ ಮಾದೇವ ಮಾದೇವನೆಂದು ಊರ ದಿಕ್ಕುಗಳಿಗು ಕೇಳುವ ಹಾಗೆ ಕೂಗಿದ್ದಾಗಿನಿಂದ ಮಾದೇವ,ಮಾದು,ಮಾದನಾಗಿ ಕರೆಸಿಕೊಳ್ಳುತ್ತಿದ್ದ ಮಾದೇವನದ್ದು ಒಣಕು  ದೇಹವಾದರು ನರಸಯ್ಯ ಹೊಡೆದು ಬಡಿದು ಹೊಲ ಮನೆಯಲ್ಲಿ ಮಾಡಿಸುತ್ತಿದ್ದ ಗ್ಯೈಮೆಯ ದೆಸೆಯಿಂದ ಗಟ್ಟಿಮುಟ್ಟಾಗಿ ಕಾಣುತ್ತಿದ್ದ ಮೆಕ್ಕೆ ಜೋಳದ ಸಾಲಿನಂತಿದ್ದ ಹಲ್ಲು,ಕಪ್ಪು ಬಿಳಿ ತಿಕ್ಕಾಡುವ ಬಣ್ಣ, ಎಡಕ್ಕೆ ಬಾಚುವ ಕೂದಲಿನ ತುದಿಯಲ್ಲಿ ಮಿಂಚುತಿದ್ದ ಕೆಂಚು ಅವನಂದವನ್ನ ಹೆಚ್ಚಿಸಿದ್ದರು ಅವನಿಗದು ನಗಣ್ಯ ಅಪ್ಪನಿಗೆ ಹೆಚ್ಚುಗೆಯೇ ಎದರಿ ಅಮ್ಮನ ಸೆರಗೊಳಗೆ ಕವುಚುತಿದ್ದ ಮಾದೇವನಿಗೆ ಅದ್ಯಾವ ಗರ ಬಡಿದಿತ್ತೊ ಅವತ್ತು ಅಪ್ಪನಿಗೇ ತಿರುಗಿ ಮಾತಾಡಿ ಅವರ ಮಾತನ್ನು ಕೇಳದೇ ಇದ್ದದ್ದು ನರಸಯ್ಯನಿಗೆ ಸಹಿಸದೇ ಹೋಗಿ ಅವತ್ತಿನಿಂದು ಅವನೊಟ್ಟಿಗೆ ಮಾತು ಬಿಟ್ಟವರು ಇವತ್ತಿನ ವರೆಗೂ ಮಾತಾಡಿಲ್ಲದ ಬಗೆಯನ್ನು ಬಟ್ಟೆ ಹೋಗೆಯುವಾಗ ಪಕ್ಕದ ಮನೆಯ ಶಾಂತನೊಂದಿಗೋ ಹಾಚೆ ಬೀದಿಯ ಕಪ್ಪೆಚನ್ನಿಯೊಂದಿಗೋ ಹೇಳುವುದು ಲಕ್ಷಮ್ಮನಿಗೆ ದಿನದ ಮಾತಿನಲ್ಲಿ ಬೆರೆಯುತ್ತಿತ್ತು,  ಮಾದೇವ ಹೆಚ್ಚಿಗೆ ಮಾತನಾಡುವವನಲ್ಲ ಲಕ್ಷಮ್ಮ ಒಂದೋ ಎರಡೋ ಮಾತು ಅವನೊಂದಿಗಾಡಿದರೆ ಹೆಚ್ಚು ಅಂಗೂ ಅವನನ್ನು ತಡೆದು  ನಿಲ್ಲಿಸಿಕೊಂಡು’ಮಗ ಮಾದು ನೀನು ಪಿಯುಸಿ ಆದ್ಮೇಲೆ ಮುಂದಿಕ್ಕೆ ಓದಲ್ಲ ಅಂದೆ ಅಪ್ಪ ಬಡಿದರೂ ಓದ್ಲಿಲ್ಲ ಬೇಸಾಯ ಮಾಡ್ತೀನಿ ಅಂದೆ ಮಾಡ್ದೆ  ಒಳ್ಳೆದಾಗಿ ಬೆಳ್ದೆ ಒಳ್ಳೆ ಮಗ ನೀನು ಅಪ್ಪ ನೋಡೋ ಹುಡ್ಗೀನ ಮದುವೆ ಹಾಗಿ ಅಪ್ಪನ ನೆಮ್ದಿ ಉಳ್ಸು ಮಾದು’ಎಂದೇಳಿದ ಲಕ್ಷಮ್ಮನ ಮಾತಿಗೆ ಸಬ್ಯಸ್ತನಂತೆ ‘ಆಗ್ಲಿ’ ಎಂದೇಳಿ ಹಾಗದೇ ಹೋಗಿದ್ದ.

‘ಹಳೆ ಕಾಲಾನೆಲ್ಲ ಶಪಿಸ್ಕೊಂಡು ಮೂರೊತ್ತು ಚಿಂತೆಯೊಳಗೇ ಇದ್ಬುಡಕೇಳು ನಿನ್ಮಗಂಗೆ ಹೆಣ್ಗಿಣ್ಣೆಲ್ಲ ಯಾಕೆ’ ನರಸಯ್ಯನ ಆಪ್ತ ಜಲ್ಲ ಮಾದೇವನ ಮದುವೆಯ ಮಾತು ಬಂದಾಗಲೆಲ್ಲ ಕೆಣಕಿದರೆ ‘ಊ ಕನಂತ್ ಹೋಲ ನಮ್ಮಯ್ದ ಗೊಡ್ಡಸ ಹಾಗಿದ್ರೆ ನೀನೆಲ್ದಂಗೆ ಮಾಡುವೆ’ ಅನ್ನುತ್ತ ಹೋಗೆಸೊಪ್ಪನ್ನು ಬೋರ್ಡಿಗಾಕುವುದರ ಇಲ್ಲ ಬಿತ್ತನೆ ತರುವುದರ ವಿಚಾರಗಳ ತೆಗೆದು ಮಾತು ಬದಲಾಯಿಸಿ ಜಮೀನನ್ನು ಎಳೆದು ತರುತ್ತಿದ್ದ.

ಮಾದೇವ ತೋರಿಸುವ ಯಾವೊಂದು ಹುಡುಗಿಯರ ಒಪ್ಪದೇ ಇರುವುದ ತಿಳಿಯಲೇ ಬೇಕೆಂದು ಒಂದುಪಾಯ ಮಾಡಿ ನರಸಯ್ಯ ಮಾದೇವನ ಸ್ನೇಹಿತ ಚಂದ್ರುನನ್ನು ಬಿಟ್ಟು ಅವನ ಮನಸ್ಸಲ್ಲಿ ಯ್ಯಾರಾದರು ಇದ್ದಾರ ಕೇಳಿ ಏಳಪ್ಪ ಅಂದರು ‘ಕೇಳಿ ಹೇಳ್ತೀನಪ್ಪ’ ಎಂದ ಚಂದ್ರು ಕೊಟ್ಟ ಮಾತಿನಂತೆ ಅವನೊಳಗಿನ ಹುಡುಗಿಯನ್ನು ಕೆಣಕಿ ಕೆಣಕಿ ತೆಗೆಯಲು ನೋಡಿದ ಹುಹೂ ಅಳ್ಳಾಡದ ಮಾದೇವ ಇದೆ ಅಥವ ಇಲ್ಲ ಯಾವುದೂ ತೋರಗೊಡಲಿಲ್ಲ ಚಂದ್ರುವಿಗೆ  ಗೆಲುವಾಗದೆ ‘ಇಲ್ಲ ಅವ್ನು ಏನನ್ನು ಹೇಳ್ತಾ ಇಲ್ಲ’ ಎಂದೇಳಿ ನರಸಯ್ಯನ ಮುಂದೆ ತಲಾಬಾಗಿ ಸಪ್ಪಗಾದ ‘ಚಂದ್ರು ಅದ್ಬುಡಪ್ಪ ನಿಮ್ನಪ್ಪ ಹೊಲ್ತಾಕ್ ಬರಕ್ ಹೇಳ್ದ ಹೋಗಿ ಅದೇನು ಕೇಳೋಗು’ ಎಂದೇಳಿ ಚಂದ್ರುನನ್ನು ಕಳುಹಿಸಿ ಜಲ್ಲಯ್ಯನಿಗಾಗಿ ಊರ ಕುರ್ಜಿನ ಬಳಿ ಕಾಯುತ್ತ ಅವನು ಬಂದೊಡನೆ

‘ಇವತ್ತು ಎರಡ್ರಲೊಂದು ತಿರ್ಮಾನ ಮಾಡ್ಲಾ ಜಲ್ಲ ಅವ್ನು ನಮ್ಮ್ ಕೈಗೆ ಸಿಗಂಗ್ ಕಾಣ್ತಾ ಇಲ್ಲ ಯಾರೇನೆ ಹೇಳುದ್ರು ಕೇಳ್ದಿದ್ಮೇಲೆ ಏನ್ಮಾಡದು ಹೇಳು’ ಮುಂತಾಗಿ ಹೇಳುತ್ತ ಮನೆಯ ದಾರಿಯಲ್ಲಿ ನಡೆಯುತ್ತಿದ್ದವರಿಗೆ ಮದುವೆಯಾಗದ ಚೆಂದುಳ್ಳಿ ಹೆಣ್ಣುಗಳು ಬಗೆ ಬಗೆಯಾಗಿ ಕಾಣುತ್ತಿದ್ದವು.

ನರಸಯ್ಯನನೊಂದಿಗೆ ಜಲ್ಲಯ್ಯ ಬಂದದ್ದನ್ನು ಹರೆಗಣ್ಣಲ್ಲಿ ಕಂಡೊಡನೆ ಹಳೆಯ ಟೀವಿಯೊಳಗೆ ಮೂಡಿದ್ದ ತನ್ನ ಮುಖವನ್ನೇ ನೋಡುತ್ತ ಕುಂತಲ್ಲಿಂದ ಎದ್ದುನಿಂತ ಮಾದೇವ. ಲಕ್ಷಮ್ಮನನ್ನು ಹುಣಸೇಕುಪ್ಪೆಯಿಂದ ಮದುವೆಯಾಗಿ ಕರಕೊಂಡು ಬರುವ ದಿನವನ್ನು ಗುರುಹಿರಿಯರು ಗೊತ್ತುಮಾಡುವ ದಿನ ಗೊತ್ತಾದಾಗ ನರಸಯ್ಯನು ಎತ್ತಿನಗಾಡಿಯಲ್ಲಿ ಕೆಮ್ಮಣ್ಣೊಡೆದು ಎಮ್ಮೆಕೊಪ್ಪಲಲ್ಲಿದ್ದ ಎರಡೊಕ್ಕುಲು ಕುಂಬಾರರನ್ನು ಮೀರಿಸುವವನಂತೆ ಗುಡ್ಡೆಮಾಡಿ ನೀರಿನಲ್ಲಿ ಉನಿಸಿ ಚೆನ್ನಾಗಿ ತುಳಿದು ಅದಮಾಡಿ ಒಂದಿಬ್ಬರು ಕೈಯಾಳುಗಳೊಂದಿಗೆ ಕಟ್ಟಿದ ಮನೆ ಬೆಳಕಲ್ಲು ಗೌ ಗುಡುವುದು ಅದಿದ್ದ  ಎತ್ತರದ ಕಾರಣಕ್ಕೊ ಅಥವ ಉದ್ದ ಅಗಲ ಜಾಸ್ತಿಯಾದ ಕಾರಣಕ್ಕೋ ನರಸಯ್ಯನಿಗೂ ತಿಳಿಯದು.  ಸಮವಿಲ್ಲದ ಮಣ್ಣಿನ ಗೋಡೆಗೆ ಬಳಿದ ಗುಲಾಬಿ ಬಣ್ಣದ ನೇರಕ್ಕೆ ತಿದ್ದಿದ್ದ ಪೋಟೋಗಳ ಸಾಲಿನಲ್ಲಿ ಈಶ್ವರ ಪಾರ್ವತಿಯರು ಮುಗುಳ್ನಗುತ್ತ ನೋಡುವ ಕಡೆಯಲ್ಲಿ ಇದ್ದ ಮರದ ಕುರ್ಚಿಯಲ್ಲ ಜಲ್ಲ,ನರಸ ಕೂತವರು ಮಾತು ಶುರುಮಾಡಲು ತಡವರಿಸುವವರಂತೆ ಬೀಡಿ ಕಚ್ಚಿ ಬೆಂಕಿ ತಾಕಿಸಿದರು, ಕಳ್ಳುಗಳನ್ನ ಬಳಸಿ ಹೊಗೆ ಹೋರಗೆ ಬರುತಿದ್ದರು ಮಾತಾಡಲೊಲ್ಲದೆ ಅಲ್ಲಿ ಎಲ್ಲವು ಶಬ್ದದಿಂದ ದೂರವಾದಂತಿದ್ದವು.

ಇಬ್ಬರೂ ಮಾತಾಡಲೂ ಮಾತಿಲ್ಲದವರಂತೆ ಇದ್ದದ್ದನ್ನು ಕಾಣಲಾಗದೆ ಮಾತುಮುರಿದ ಲಕ್ಷ್ಮಮ್ಮ

‘ಮಾದು, ಅಪ್ಪ ಸರಿಯಾಗಿ ಊಟ ಮಾಡ್ತಾ ಇಲ್ಲಪ್ಪ ನಿಂದೇ ಯೋಚ್ನೆ ಮೂರೊತ್ತು,ಮೇಲಷ್ಟೇ ನಿನ್ಕಂಡ್ರೆ ಅಂಗಾಡೋದು ಒಳಗೊಳಗೆ ನೀನಂದ್ರೆ ಜೀವನಪ್ಪ ಅವ್ರ್ಗೆ ,ಮನ್ಸ ನೋಯಿಸ್ದೆ ಅವ್ರೇಳೋ ಹಾಗ್ ಕೇಳಿ ತಲೆಬಾಗಪ್ಪ ನಿನ್ನ್ದಮ್ಮಯ್ಯ ಅಂತೀನಿ ‘ಎರಡನಿ ಕಣ್ಣೀರ ತಂದುಕೊಂಡ ಅಂಗಲಾಚಿದಳು. ಬಂಡೆಯಂತೆ ಅಲ್ಲಾಡದೆ ನಿಂತವನು ‘ನನ್ಗಾಗಿ ಅಳ್ಬೇಡ ನೀನು ಅಪ್ಪನ್ಗು ಹೇಳು ನನ್ಗಾಗಿ ಕೊರ್ಗೊದು ಬೇಡ ಅಂತ’ಮಾದೇವನ ಮಾತು ಕನಿಕರದ ಬದಲು ಕಡ್ಡಿ ತುಂಡಾಗುವಂತಿದ್ದವು ಅದ ಕೇಳಿ ಲಕ್ಷಮ್ಮನು ಬಾಯಿ ಕಟ್ಟಿದವಳಂತಾದಳು ನರಸಯ್ಯನು ಸೇದುತಿದ್ದ ಬೀಡಿಯ ಹೊಗೆಯ ಜೊತೆಗೆ ಕೊಪವನ್ನು ತುಂಬಿಕೊಂಡು ಬುಸುಗುಟ್ಟಿದಾಗ ಮೂಗಿನೆಳ್ಳೆಯಿಂದ ಕೋಪವು ಹೊಗೆಯನ್ನು ಹೊರಗೆ ತಂದು ಕರಗಿಸಿತ್ತು.

ಮಾವನ ಮಗಳು ಬೇಡವಾದ್ಲು,ನಿನ್ನಪ್ಪನ ಸಂಬಂದಿಗಳ ಮಕ್ಳು ಬೇಡವಾದ್ರು,ಬೇರೆ ಊರಿನ ಹೆಣ್ಣುಗಳು ಸುದ ಬೇಡವಾದ್ರು ನಿನ್ಗೆ ಇನ್ನೆಲ್ಲಿಂದಪ್ಪ ತರುವ ಹೇಳು’ಜಲ್ಲಯ್ಯ ಕೇಳಲು ಮಾದೇವ ಉಸ್ರಾಡಲಿಲ್ಲ

‘ಮಾದು ನಿನ್ನ್ ಮನ್ಸಲ್ಲಿ ಅದೆನದೆ ಹೇಳು ಇಂಗೆ ಮೂಖ್ನಂಗೆ ನಿಂತ್ಕಂಡ್ರೆ ನಾವು ಏನ್ ತಿಳ್ಕಳಾದು’ಎಂದು ಬೇಸರದಲ್ಲಿ ಹೇಳಿದಾಗಲು ಅಲ್ಲಾಡಲಿಲ್ಲ ಮಾದೇವ ‘ನಿನ್ಗೆ ಬುದ್ದಿ ತಿಳ್ದಂಗೆ ಮಾಡಪ್ಪ’ಕೂತಲ್ಲಿಂದ ಮೇಲೇಳುತ್ತ ಕೊನೆಯದಾಗಿ ಹೇಳಿ ಹೊರಟನು ಜಲ್ಲಯ್ಯ ಬೀಡಿ ಎಳೆಯುತ್ತ ಹೊಗೆಯ ಬಿಡುತ್ತ ಮೌನವನ್ನೇ ದ್ಯಾನಿಸಿದ ನರಸಯ್ಯ.

‘ಮಾದೇವಂಗೆ ಗಾಳಿ ತಾಕಿರಬೇಕು’

‘ಯಾವ್ ಮಾದೇವನ್ಲ’

‘ಅದೇ ಕೆಳಮನೆ ನರಸಯ್ಯನ ಮಗ’

‘ಒಬ್ನೇ ಮಗ ಕುಂತಲ್ಲೇ ಕುರೋದಂತೆ ನಿಂತಲ್ಲೇ ನಿಲ್ಲೊದಂತೆ’

‘ಹೊಲ್ದಲ್ ಮಾತ್ರ ಚುರ್ಕು ಬಡ್ದಿದು ಆದ್ರೆ ಯಾವ್ ಹುಡ್ಗೀರ್ನು ಒಪ್ತಿಲ್ವಂತೆ’

ಊರಲ್ಲೆಲ್ಲ ಮಾದೇವನದ್ದೆ ಸುದ್ದಿಯಾಗಿದ್ದು ನರಸಯ್ಯನಿಗೆ ಹೌಹಾರಿ ಬಂತು ‘ಜನ್ರೆಲ್ಲ ಇಲ್ಲಸಲ್ಲದ್ದು ಮಾತಾಡೋಕ್ ಸುರುಮಾಡೋರೆ ಇವನ್ಗೆ ಇನ್ನ ಹೆಣ್ಣು ಕೊಟ್ಟಂಗೆ ಎತ್ತೋರು,ಹಾಳಾದೋನು ಇದ್ದು ನಮ್ಮ್ ಹೊಟ್ಟೆ ಉರ್ಸೊಬದ್ಲು ಕಟ್ಟೆಹಾರಿ ಜೀವಹೋದ್ರೆ …’ ಮುಂದೇನು ಆಡದೆ ಗೋಡೆ ಹೊರಗಿ ಚಿಂತಿಸ ಹತ್ತಿದನು ಲಕ್ಷ್ಮಮ್ಮ ಮಲಗಿದಲ್ಲೇ ಬಿಕ್ಕಿ ಬಿಕ್ಕಿ ಅತ್ತಳು ಮಗನ ನಡವಳಿಕೆ ಒಗಟಿನ ರೀತಿಯಾಗಿ ಕಾಣತೊಡಗಿತವರಿಗೆ ತುಂಬಾ ಚುರುಕಿನ ಹುಡುಗ ಒಂದಲ್ಲ ಒಂದು ಕ್ಯಾತೆ ಮಾಡದೇ ನಿದ್ದೆಮಾಡಿದವನಲ್ಲ ಅಪ್ಪನಿಗೆ ಹೆದರಿದಷ್ಟು ಅವನು ಬೇರ್ಯಾರಿಗು ಹೆದರಿದವನಲ್ಲ ಅಂತ ಮಗ ಬಿಡಿಸಲಾಗದವನಂತೆ ಆಡುತ್ತಿದ್ದದ್ದು ಲಕ್ಷಮ್ಮನಿಗೆ ಕಣ್ಣೀರ ನಿಲ್ಲಿಸುತ್ತಿರಲಿಲ್ಲ.

ರಾಗಿಕೂಯ್ಲಿನಲ್ಲಿ ಜಯಳೊಂದಿಗೆ ಮಾದೇವನು ನಗ್ನಾಟವಾಡುತಿದ್ದದ್ದು ನರಸಯ್ಯನಿಗೆ ಎಲ್ಲಿಲ್ಲದಷ್ಟು ಕೋಪ ತರಿಸಿತ್ತು,ಅವಳಿಗೆ ಆದಷ್ಟು ಬೈದು ಅವಳು ಕ್ಯುಯ್ಲು ಕೂಯ್ಯವುದನ್ನೆ ನಿಲ್ಲಿಸಿದ್ದನು,ಅವಳೊಬ್ಬಳೇ ಅಲ್ಲ ಊರಿನ ಯಾವ ಹೆಣ್ಣುಮಕ್ಕಳು ಅವನೊಂದಿಗೆ ಮಾತನಾಡುವುದು ನಿಷಿದ್ಧವಾಗಿತ್ತು ಮಾತಾಡಿಸುವ ಹೆಣ್ಣನ್ನ ಮಾದೇವ ಮಾಡ್ಕೊತಾನೆ ಎಂಬುದೊಂದಿತ್ತು ದಿಗಿಲು ನರಸಯ್ಯನಿಗೆ,ಈಗವನೇ ಅಕ್ಕಪಕ್ಕದ ಹುಡುಗಿಯರ ಬಿಟ್ಟು ಮಾತ್ನಾಡಿಸಿ ನಗ್ನಾಡಿಸಿ ಅವನೊಳಗೇನಿದೆ ತಿಳ್ಕೊಳ್ಳಿ ಇವೇ ಮುಂತಾದ ಸೂಚನೆ ಕೊಟ್ಟು ಕಳುಹಿಸುತ್ತಿದ್ದರು ತಿಳಿಯಗೊಡುತ್ತಿಲ್ಲ ಮಾದೇವ,ರಾತ್ರೆಯಲ್ಲ ಎದ್ದೇ ಇದ್ದು ಬೆಳಗೆಲ್ಲ ಮಲಗೇ ಇರುತಿದ್ದ ಅವನ ವರ್ತನೆಗಳ ಗಮನಿಸಿ ಬೈಲಿನಲ್ಲಿ ಗಾಳಿ ಬಡಿದಿರಬೇಕೆಂದು ಜಲ್ಲ ಹೇಳಿದ್ದು ನಿಜವೆಂದು ನಂಬಿದನು,ಮನೆದೇವರಾದ ಮಾದೇಶ್ವರರ ಮುಂತಾಗಿ ಯಾವ ದೇವರನ್ನು ಬಿಡದೆ ಎಲ್ಲ ದೇವರಿಗು ಅರಕೆ ಕಟ್ಟಿ ನನ್ಮಗ ಮೊದಲಿನಂತಾದರೆ ಅರ್ದ ಎಕ್ಕರೆ ಜಮೀನನ್ನೆ ಬಿಡುವುದಾಗಿ ಕುರ್ಜಿನ ಮಧ್ಯ ಮೂಡಿದ್ದ ಗ್ರಾಮ ದೇವತೆಯ ಬೇಡಿಕೊಂಡರು ಜಗ್ಗುತ್ತಿಲ್ಲ ಮಾದೇವ ಹಿಂದಿಗಿಂತಲೂ ಹೆಚ್ಚಾಗೇ ಬದಲಾಗುತ್ತಲೇ ಇದ್ದ.

ಒಂದು ರಾತ್ರಿ ವೊಲದಲ್ಲಿ ಮುಳ್ಳಿನ ಮೇಲೆ ಕೂತವನಂತೆ ಕೂತು ಭಾರವಾಗಿದ್ದ ಅಲ್ಲಿನ ಶಬ್ದವನ್ನೇಲ್ಲ ಕೇಳುತ್ತಿದ್ದ ಮಾದೇವ,ತಂಗಾಳಿಯಲ್ಲಿ ಸಂಕ್ರಾಂತಿಯ ಚಳಿಗೂ ನಡುಗುತ್ತಿಲ್ಲ ಅವನ ಮೈಯ್ಯಿ ಗಟ್ಟಿಯಾಗಿ ಬೇರು ಬಿಟ್ಟವನಂತೆ ಭೂಮಿಯಲ್ಲಿ ಕೂಡಿಕೊಂಡು ಉತ್ತು ಬಿತ್ತ ಕ್ಷಣವನ್ನು ನೆನೆದ, ಇದ್ದಕ್ಕಿದ್ದಂತೆ ನರಸಯ್ಯನು ಲಕ್ಷಮ್ಮನ ಕೈಯಿಡಿದೆಳೆದು ತಂದು ಗೆರೆ ಮೂಡಿಸಿ ಒಂದಷ್ಟು ಹುಡುಗಿಯರನ್ನು ಸಾಲಾಗಿ ನಿಲ್ಲಿಸಿದನು ಅವರೆಲ್ಲರ ಕೈಯ್ಗಳಿಗೆ ಕಡಕತ್ತಿ ಕೊಟ್ಟು ಕಿವಿಯಲ್ಲಿ ಏನನ್ನೋ ಹೇಳಿದೊಡನೆ ಮಾದೇವನ ಬುಡದಲ್ಲಿನ ಬೇರನ್ನು ಕತ್ತಿರಿಸಲು ಮುಂದಾದರು ‘ನೀವು ಕೂಯ್ದಾಕುದ್ರು ನಾನು ಚಿಗ್ರುತೀನಿ ಸಾವಿಲ್ಲ ನನ್ನ ಬುಡಕ್ಕೆ’‌ಎಂದು ಮಾದೇವ ಒಂದೇ ಉಸಿರಿನಲ್ಲಿ ಹೇಳಿದಾಗ ಅವರೆಲ್ಲರು ಸಾಲಾಗಿ ನರಸಯ್ಯನ ಮುಂದಾಗಿ ಒಬ್ಬೊಬ್ಬರಾಗೇ ಕಡಕತ್ತಿ‌ಯ ತೂಗುತ್ತ ಮಾದೇವನ ಮುಂದೆ ಹಾದು ಹೋದರು ಅವೆಲ್ಲಕ್ಕು ಕದಡಿ ಹೋದವನಂತೆ ಅಲ್ಲಿಂದೆದ್ದು ಕಟ್ಟೆಯ ಮೇಲೊಗಿ ಕೂತು ಕೈ ಉಜ್ಜಿದ ಶಾಕದಲ್ಲಿ ಕೆನ್ನೆಗಳಿಗೆ ತಾಕಿಸಿದ ಚಳಿ ಹೆಚ್ಚುತ್ತಿತ್ತು ಗಾಳಿಯು ಇನ್ನಷ್ಟು ತಂಪಾಯಿತು ಸಣ್ಣ ಮಂಜಿನನಿಗಳು ಬೀಳತೊಡಗಿದವು ಅವನ್ನು ಸರಿಸುತ್ತ ಊರ ಹೆಂಗಸರೆಲ್ಲರು ಕಟ್ಟೆಯ ನೀರಿನಲ್ಲಿ ಈಜಿಬಂದರು ಅವರಲ್ಲೊಬ್ಬ ಹೆಂಗಸು ಮಾದೇವನೊಂದಿಗೆ ಮಾತಿಗಿಳಿದಳು

 ‘ಏನಾಯ್ತು ನಿಂಗೆ ಮಾದ’

‘ನನ್ಗೆ ದೆವ್ವ ಹಿಡ್ದದೆ’

‘ದೆವ್ವನಾ’

‘ಹೂ ಅದಕ್ಕೆ ನಾನು ಯಾವ್ ಹುಡ್ಗೀನು ಒಪ್ತಿಲ್ಲ,ಅದಕ್ಕೆ ನಾನು ಯಾರ್ನು ಸರಿಯಾಗಿ ಮಾತಾಡ್ಸ್ತ ಇಲ್ಲ’

 ‘ಅಂಗಾದ್ರೆ ನೀನು ಮದ್ವೆ ಆಗಲ್ವ’

‘ನಾನಾಗಲೇ ಮದ್ವೆ ಆಗಿದ್ದು ಗೊತ್ತಾಗಿಲ್ವ ನಿಂಗೆ ಅವರ್ಗೇನೋ ಗೊತ್ತಿಲ್ಲ ಅಂತ ಅನ್ಕೊಂಡಿದ್ದೆ ನಿನ್ಗು ಗೊತ್ತಿಲ್ವ’ ಎಂದೇಳಿ ಮಾದೇವ ಜೋರಾಗಿ ನಕ್ಕ ತಕ್ಷಣವೇ

ಅವಳು ಮೊಕ ಸಿಂಡರಿಸಿಕೊಂಡದ್ದ ನೋಡಲಾಗದವನಂತೆ

‘ ಹೇಳ್ತೀನಿ ಕೇಳು,ಅವರು ತೋರುವ ಹುಡುಗಿಯರಂತಲ್ಲ ಅವ್ಳು ನಾಚಲ್ಲ ಹೆದ್ರಲ್ಲ ಎದುರು ನಿಂತು ಕಣ್ಣಲ್ಲಿ ಕಣ್ಣಿಟ್ಟು ಮಾತಾಡ್ತಾಳೆ,ಅವರಿಗೆ ಅವ್ಳ ಬಗ್ಗೆ ಗೊತ್ತಾಗೋದಿಲ್ಲ ಯಾಕಂದ್ರೆ ನಿನ್ನಂತೆ ಅವ್ರು ಕೇಳ್ಸ್ಕೊಳ್ಳೋ ಮನುಷ್ರಲ್ಲ ಒಂದ್ವೇಳೆ ಕೇಳಿಸ್ಕೊಂಡ್ರು ಅವರ್ಯಾರ್ಗು ಅವ್ಳು ಇಡ್ಸೊದಿಲ್ಲ,ಇಡಿಸುದ್ರು ಒಪ್ಪೋದೂ ಇಲ್ಲ , ಇನ್ನೊಂದ್ ತಿಳ್ಕೊ ಅವಳಂತ ಅವಳು ಇನ್ನೆಲ್ಲಿದಾಳು ಅವ್ರು ನಂಗೆ ಕಟ್ಟಾಕೆ’ಪ್ರತೀ ಮಾತನ್ನು ಹಿಡಿದೇಳಿ ಸುಮ್ಮನಾದ. ‘ಮುಂದೇನ್ಮಾಡ್ತೀಯ’ ಅವಳು ಕೇಳಿದಳು, ‘ಮುಂದೇನ್ಮಾಡ್ತೀಯಾ….ಕೇಳುತ್ತಲೇ ಇದ್ದವಳು ಅವನು ಏನನ್ನು ಹೇಳದ್ದ ಕಂಡು’ನೀನ್ ಹೇಳ್ದಿದ್ರೆ ಅಷ್ಟಾಯ್ತು ಹೋಗು’ಎಂದು ಮಿಕ್ಕ ಹೆಂಗಸರ ಕೂಡಿ ಈಜಿಹೋದಳು.

ಅತ್ತು ಅತ್ತು ಲಕ್ಷಮ್ಮನ ಕಣ್ಣುಗಳು ಬತ್ತಿವೆ ಸರಿಯಾಗಿ ಊಟಮಾಡದೆ ನರಸಯ್ಯನ ಮಯ್ಯಿ ಒಣಗಿದೆ ಇದೆಲ್ಲವನ್ನ ನೋಡಲಾಗದೆ ನೆರೆಹೊರೆಯವರೆಲ್ಲ ಮಾದೇವನಿಗೆ ಬುದ್ದಿಹೇಳಲು ಮುಂದಾದರು ಒಂದು ವಾರವಾಗಿತ್ತು ಅವನು ಮನೆಬಿಟ್ಟು ಹೊಲದಲ್ಲೇ ಗುಡಿಸಲಾಕಿ ಅಲ್ಲೇ ಮಲಗುತ್ತಿದ್ದ ಊಟ ಎಲ್ಲಿ ಮಾಡಿತ್ತಿದನೋ ಅವನಿಗೇ ತಿಳಿಯದು, ಅಕ್ಕ ಪಕ್ಕದ ಜಮೀನಿನವರು ಕರೆದು ಕೊಟ್ಟರೆ ಸ್ವಲ್ಪ ತಿಂದು ಅವರು ಹೇಳುವ ಬುದ್ದಿಮಾತಿಗೆ ಪ್ರತಿಕ್ರಿಯಿಸದೇ ಅಲ್ಲಿಂದೆದ್ದು ಮತ್ತೆಲ್ಲಿಗೋ ಹೊರಟು ಬಿಡುತ್ತಿದ್ದ ಅದಾಗೇ ನಡೆಯುವಾಗ ಸಂಜೆ ಇಳಿಯುವ ಹೊತ್ತಿಗೆ ಮನೆಗೆ ಬಂದ ಮಾದೇವ ತೊಳೆಯದೇ ಇದ್ದ ಗುಡ್ಡೆ ಪಾತ್ರೆಗಳ ತೊಳೆದು ತೊಡೆಯದೇ ಇದ್ದ ರಾಸಿ ನಂಜ್ಗಸ ತೊಡೆದು ಒಲೆ ಅಚ್ಚಿದ, ಕನ್ಸಲ್ಲಿದ್ದೀನ ಅಂದುಕೊಂಡ ಲಕ್ಷಮ್ಮನಿಗೆ ನನಸೆಂದು ತೋರಿದಾಗ ಅಷ್ಟಿಷ್ಟಲ್ಲ ಅವಳು ಖುಷಿಪಟ್ಟಿದ್ದು, ನರಸಯ್ಯ ನೆಮ್ಮದಿಯ ಉಸಿರ ಬಿಟ್ಟಿದ್ದು ಕಾಲಿಯಂತಿದ್ದ ಮನೆಯ ಹಂಚಿನ ಸಂದಿಯಿಂದ‌ ತೂರಿಬಂದಿದ್ದ ಬೇಳಕಲ್ಲಿ ತೇಲಿತು ‘ಮಗ ಮಾದು ಎಲ್ಲಪ್ಪ ಹೋಗಿದ್ದೆ ನಮ್ನ ಬಿಟ್ಟು’ದುಃಖ ತುಂಬಿಕೊಂಡು ಲಕ್ಷಮ್ಮ ಕೇಳಿದಾಗ ಕೆಲಹೊತ್ತು ಶಬ್ಧವೇ ಕಾಲಿಯಾಯ್ತು ‘ಮಾದು ಮಾತಾಡಪ್ಪ ನಿನ್ಗೆ ಹೇಗ್ ಬೇಕು ಹಾಗಿರಪ್ಪ ಎಲ್ಗೂ ಹೋಗ್ಬೇಡ’ ತಡೆಯದೇ ಲಕ್ಷ್ಮಮ್ಮ ಅತ್ತಾಗ ನರಸಯ್ಯನ ಕಣ್ಣುಗಳಲ್ಲು ನೀರು ತುಂಬಿದವು ‘ಅವ್ವಾ..ಅಳ್ಬೇಡ ಅಂತ ಅವತ್ತೆ ಹೇಳಿಲ್ವ ನಿಂಗೆ ಮತ್ಯಾಕ್ಕಳ್ತೀಯ ನಾನೇನು ಸತ್ತೋಗಿದ್ದಿನ ಬದ್ಕೇ ಇವ್ನಲ್ಲ’ಮಗನ ಮಾತ ಕೇಳಿದೊಡನೆ ‘ಮಾದೇವ ನೀ ಸತ್ರೆ ನಾವು ಬದ್ಕಿವೇನ್ಲ ಅದ್ಕ ಮಗ ನಿನ್ನ ಸಾಕಿ ಬೆಳ್ಸಿದ್ದು’ಇಷ್ಟೇಳುವಾಗ ನರಸಯ್ಯನ ಕಣ್ಣಿನಿಂದಲೂ ನೀರು ಬಂದವು ‘ಅಪ್ಪ ನಾನು ನಿಮ್ಗೆ ಏನು ಹೇಳಕ್ಕಾಗ್ತಾ ಇಲ್ಲ ಹೇಳುದ್ರು ನೀವು ಒಪ್ಪಲ್ಲ’ ‘ಇಲ್ಲ‌ ಮಗ ಅದೇನ್ ಹೇಳ್ತೀಯೋ ಹೇಳು ನಾವು ಕೇಳ್ತೀವಿ’ಗಟ್ಟಿ ನಿರ್ಧಾರ ಮಾಡಿದವನಂತೆ ನರಸಯ್ಯ ಹೇಳಿದ, ಕೆಲವೊತ್ತು ಮೌನ ಚಾಚಿತು ಅಲ್ಲಿ ಯಾರಿಗು ಆ ನಿಶಬ್ದವನ್ನು ಕೆಡಿಸಲು ಇಷ್ಟವಿಲ್ಲದವರಂತೆ ಕುಂತರು, ಒಲೆ ಉರಿಯುತ್ತಲೇ ಇತ್ತು ಅತ್ತ ಮಾದೇವನ ಗಮನವರಿದು ಅಕ್ಕಿಯಾಕಲು ಮುಂದಾದ ಅಡುಗೆಯಾಗುವವರೆಗು ಅಲ್ಲೇ ಇದ್ದು ಸಿದ್ಧವಾದಮೇಲೆ ಅವ್ವ ಅಪ್ಪರನ್ನು ಕೈಯಿಡಿದೇಳಿಸಿ ತುತ್ತು ಮಾಡಿ ತಿನ್ನಿಸಿದ ‘ಕಳಚಿ ಬೀಳಲಿಲ್ಲ ನನ್ನ ಮಾದೇವ’ ಮನಸಲ್ಲೇ ಅಂದುಕೊಂದನು ನರಸಯ್ಯ. ‘ಮಗ ಮಾದು ಇನ್ಮುಂದೆ ನೀನ್ನ್ವಿರುದ್ಧ ನಾವು ಮಾತಾಡಲ್ಲ ನಿನ್ನಿಷ್ಟಾನೆ ನಮ್ಮಿಷ್ಟ ಕಣ್ಮಗ ನಮ್ಜೊತೆ ಇಂಗೆ ಇದ್ಬುಡಪ್ಪ ‘ಮಾದೇವನ ಮುಖವನ್ನ ಸವರುತ್ತ ಲಕ್ಷಮ್ಮ ಹೇಳಿದಾಗ ಅವರೆಲ್ಲ ಆತಂಕವನ್ನು ದೂರವಾಗಿಸುವವನಂತೆ ಮಾದೇವ ಅವರನ್ನೊಮ್ಮೆ ನೋಡಿದ.

ಹೊಲದ ಮದ್ಯ ಯಾರಿಗೋ ಕಾಯುವವನಂತೆ ಕಂಡ ಮಾದೇವ,ಬಿಸಿಲು ಅವನ ದೇಹದಿಂದ ಬೆವರ ತರಿಸಿ ಇಂಗಿಸುತ್ತಿದ್ದರು ಅಲ್ಲೇ ಚಿಗುರುವವನಂತೆ ಕೂತಿದ್ದ ಅಂಗೆ ಕಳೆಯುವಾಗ ಅಳಿದುಳಿದ ಹೆಂಗಸರು ಅವನ ಸುತ್ತುಬಂದರು ಒಬ್ಬರ ಮೇಲೆ ಒಬ್ಬರು ಅವನ ಮೇಲೆ ಬೀಳಲು ಬಂದರು ಹಾಗೆ ಬಂದವರನ್ನು ದೂರ ತಳ್ಳಿದರು ಬರುತಿದ್ದರು ಅದು ಹಾಗೆ ನಡೆಯುತ್ತಲೇ ಇರುವಾಗ ಅವರಲ್ಲೊಬ್ಬಳು ಮೇಲೆ ಬೀಳದೆ ಅವನ ಪಕ್ಕ ಕುಳಿತು ಕೇಳಿದಳು ‘ಮುಂದೇನ್ಮಾಡ್ತೀಯ….:ಮಾದೇವನಲ್ಲಿ ಮಾತಿಲ್ಲ ಅವಳು ಅವನ ಕಣ್ಣಲ್ಲಿ ಕಣ್ಣಿಟ್ಟಿ ಕೇಳಿದಳು ‘ಮುಂದೇನ್ಮಾಡ್ತೀಯ ಹೇಳು ಮಾದ’

‘ಎಲ್ರು ಮುಂದೆ ಅವಳ್ನ ಮದ್ವೆ ಹಾಗ್ತೀನಿ’ಎಂದವನು ಥಟ್ಟನೆ ಹೇಳಿದ್ದ ಕೇಳಿ ಗೊಂದಲಕ್ಕೊಳಗಾದವಳಂತೆ ಕುತ್ತಿಗೆಯ ಮುಂದೆಚಾಚಿ

‘ಮದ್ವೆ ಹಾಗ್ತೀಯಾ…. ಅವರ್ಯಾರು ಒಪ್ಪಲ್ಲ ಅಂತ ಹೇಳ್ತಿದ್ದೆ’

‘ಹಾಗೆಲ್ಲ ನನ್ಮಾತ ನಮ್ಮಪ್ಪ ಅಮ್ಮ ಕೇಳೋ ಸ್ಥಿತಿಲಿ ಇರ್ಲಿಲ್ಲ ಈಗ ಅವರು ಅವರಾಗಿಲ್ಲ ನಾನಾಗೋಗಿದ್ದೀನಿ ನಾನೇಳೋ ಮಾತ ಕೇಳ್ತಾರೀಗ ನಾನೋಡೊ ಹುಡ್ಗೀನೂ ಒಪ್ತಾರೆ’ಇದನೇಳುವಾಗ ಅವನ ಮುಖದಲ್ಲಿ ಮಿಂಚು ಮೂಡಿದಂತಿತ್ತು ಅದ ಕಂಡು ‘ನಿನ್ನ ಪ್ರತಿಭಟನೆ ಗೆಲ್ತು ಅನ್ನು’ಎಂದೇಳಿ ಅಣಕಿಸಿದಳು ‘ಬೇರ್ಯಾವ ರೀತಿಯಲ್ಲು ಅವರ್ಗೆ ಅರ್ಥಮಾಡ್ಸೋ ಆಗಿರ್ಲಿಲ್ಲ,ಅವ್ರು ಅರ್ಥಮಾಡ್ಕೋತಾನೂ ಇರ್ಲಿಲ್ಲ ಇದ್ದದ್ದು ಒಂದು ಅದು ನನ್ನ ಜೀವ ನನ್ಗೊತ್ತು ಜಾತಿಗಿಂತ ಜೀವಕ್ಕೆ ಹೆದ್ರುತಾನೆ ನನ್ನಪ್ಪ ಒಬ್ನೆ ಮಗ ಅಲ್ವ ಒಪ್ದ’ಅಂದಾಗ ಅವಳು ತುಟಿಬೀರಿ ‘ಯಂಗೋ ಒಳ್ಳೆದಾದ್ರೆ ಸರಿ’‌ ಎಂದೇಳಿ ಅವನ ಮೈಯಲ್ಲಿ ಬೆರಳುಗಳಾಡಿಸುತ್ತ ‘ನೀನಿಗ ತಕ್ಕೊಂಡ ನಿರ್ದಾರ ಸಣ್ಣದಲ್ಲ ಇಡೀ ಊರಾಂದ್ ಊರೆ ನಿನ್ನ ಮೇಲೆ ಬೀಳುತ್ತೆ ಸಿದ್ಧನಾಗು’

‘ನಂಗೊತ್ತದು’

‘ಗೊತ್ತಿದ್ಮೇಲೆ ನಾನೇಳೋದ್ ಏನಿಲ್ಲ ಒಳ್ಳೆದಾದ್ರೆ ಸಾಕು’ಅಂತೇಳುತ್ತಲೇ ದೂರದಲ್ಲಿ ಕನಿಯುತ್ತಿದ್ದ ಬಿಸಿಲೊಳಗೆ ಹಾದು ಹೋದಳು.ಚಿಗುರು ಹೆಮ್ಮರವಾದಂತೆ ಕುಂತೇ ಇದ್ದ ಮಾದೇವ, ಬಿಸಿಲು ಮಂಕಾಗುತ್ತ ಕಡೆಗೆ ಕರಗಿದರೂ ಅವ ಕದಡಲಿಲ್ಲ.

ಊರ ಜನರೆಲ್ಲ ಸೇರಿ ನ್ಯಾಯಕ್ಕೆ ಕರೆದರು,ಮಾದೇವ ಮಾಡಿದ್ದ ಕೆಲಸಕ್ಕೆ ಎಲ್ಲರು ಕೆಂಡದ ಮೇಲೆ ನಿಂತವರಂತೆ ಕುಣಿದಾಡಿದರು ನರಸಯ್ಯ ತಲೆಬಾಗಿ ನಿಂತ ‘ಏನಪ್ಪ ಹೇಳ್ತಿ ನರ್ಸ’ ಜಾತಿಯ ಮುಖ್ಯಸ್ಥ ಕೇಳಿದರು ಬಾಯ್ಬಿಡಲಿಲ್ಲ ನರಸಯ್ಯ ‘ಅವ್ನೆಲ್ ಮಾತಾಡನು ಊರಿಂದ ಒರಗಾಕಿ ಅವ್ರ್ನ’ ಗುಂಪಿನ ಮಧ್ಯ ಒಬ್ಬ ಕೂಗಿದ ‘ಇಲ್ಲ ಊರಿಂದ ಬೇಡ ಕುಲದಿಂದ ಹೊರ್ಗ್ ಕಳಿಸುದ್ರು ಸಾಕು’ಗುಂಪೊಳಗಿದ್ದ ಜಲ್ಲಯ್ಯ ಹೇಳಿದ, ನರಸಯ್ಯ ತುಟಿ ಬಿಚ್ಚಲಿಲ್ಲ ‘ಕೊನೆದಾಗಿ ಏನೇಳ್ತೀ ಹೇಳು ನರ್ಸ ಇಲ್ಲಂದ್ರೆ ತಪ್ಪಾಯ್ತದೆ ನಿನ್ಮಗ ಮಾಡಿದ ತಪ್ಗೆ ಹಿಡೀ ಕುಲಕ್ಕೆ ಕಳಂಕ ಅದಲ್ದೆ ಗಂಡಿಲ್ದ ಗರ್ತಿ ಅವ್ಳು ನಾವು ಇದ್ನೆಲ್ಲ ಸಹಿಸ್ಕೋತೀವಿ ಅಂತ ತಿಳ್ದಿದ್ದೀಯ….’ ಮುಖ್ಯಸ್ಥ ಮಾತು ಮುಗಿಸುವ ಮುಂಚೆ ‘ಇಲ್ಲ ಗೌಡ್ರೆ ನೀವು ಹೇಳ್ತಾ ಇರೋದು ಸರಿ ಐತೆ ಆದ್ರೆ ನನ್ಗೆ ನನ್ಮಗ ಸಿಕ್ಕವ್ನೆ ಮತ್ತೆ ಕಳ್ಕೊಳಕ್ಕೆ ಇಷ್ಛ ಇಲ್ಲ ಅದೇನ್ ಹೇಳ್ತೀರೋ ಹೇಳಿ ಕೇಳ್ತೀವಿ’ ಗಂಭೀರವಾಗಿ ಹೇಳುವ ನರಸಯ್ಯನ ನಿಲುವಿಗೆ ಎಲ್ಲರೂ ಆಶ್ಚರ್ಯಗೊಂಡರು ನಮ್ಜಾತಿ ಉಳ್ದಿರೋದೆ ನನ್ನಿಂದ ಅಂತ ಊರ್ತುಂಬ ಬೀಗ್ತಿದ್ದವ ಮಗ ಎಸ್ಸಿ ಹೆಂಗ್ಸ ಕಟ್ಕ ಬಂದ್ರು  ಮಗನ ಪರವೇ ಮಾತಾಡೋದನ್ನ ನರಸಯ್ಯನ ವಾರ್ಗೆಯವನೊಬ್ಬ ಆತಂಕದಿಂದ ಪಿಸುಗುಟ್ಟಿದ ಮಿಕ್ಕ ಜನ ಮಂಕಿಡಿದವರಂತೆ ಕುಂತಿದ್ದರು ‘ಕಾನೂನಿದೆ ಅಂತೇಳಿ ನಮ್ಜಾತಿಗೆ ಬೆಲೆ ಇಲ್ದಂಗ್ಮಾಡುದ್ರೆ ಎಂಗೇಳಿ’ ಮುಖ್ಯಸ್ಥ ವಾದಿಸಿದ ‘ಅಂಗೆ ಹಾಗೋಗದೆ ರಾಜ್ಯ’ ಕೆಲವರು ವಾದ ಮುಂದುವರಿಸಿದರು ವಾದ ವಿವಾದ ಅವರವರಲ್ಲೇ ಹೆಚ್ಚಿದವು ಅಲ್ಯಾರು ನರಸಯ್ಯನ ಪರವಿಲ್ಲ‌ ಆದರೂ ಪರ ವಿರೋಧದ ಮಾತುಗಳು ಹುಟುತಿದ್ದವು ಒಮ್ಮೆಲೆ ಎಲ್ಲರು ಮಾತು ಬಿಟ್ಟರು ಒಟ್ನಟ್ಟಿ ಮನೆಯೇ ಗಪ್ಪ್ ಚುಪ್ ಮಾದೇವ ಬಂದ ಅವನ ಹಿಂದೆ ಜಯ ಬಂದಳು ಇಬ್ಬರ ಮುಖದಲ್ಲಿ ಭಯವಿಲ್ಲ ಅಲ್ಲಿ ಇದ್ದವರೆಲ್ಲರ ಮೂತಿಗಳು ಮಂಗನ ಮೂತಿಗಳಾಗೆ ಕಂಡಿತವರಿಗೆ ನೋಡುತ್ತಲೇ ಜೋರಾಗಿ ನಕ್ಕರು ಇಬ್ಬರು ಎಷ್ಟು ಜೋರಾಗಿ ನಕ್ಕರು ಎಂದರೆ ಒಟ್ನಟ್ಟಿ ಮನೆಯ ತುಂಬಾ ಅವರ ನಗುವೇ ಬೇರಿರಲಿಲ್ಲ.

ಒಬ್ಬೊಬ್ಬರೇ ಎದ್ದರು ಒಂದೊಂದು ಕೈ ಬೀಸಿದರು ತಲೆ ಎತ್ತುತ್ತಿಲ್ಲ ನರಸಯ್ಯ , ತಲೆ ಬಾಗಿಸುತ್ತಿಲ್ಲ ಮಾದೇವ, ಜಯ ನಗುವುದ ನಿಲ್ಲಿಸುತ್ತಿಲ್ಲ ನಗುತ್ತಲೇ ಇದ್ದಾಳೆ ಮಾದೇವನೆಂದ ‘ನಿಮ್ಮ್ ಜಾತಿ ಯಾವ್ ಸಾಟುಕ್ ಬೇಕು ನೀವೆ ಇಟ್ಕಳಿ’ ಜಯ ಮತ್ತಷ್ಟು ನಕ್ಕಳು ಎಲ್ಲರ ಕೈ ಸೋತರು ರೋಶ ಏರುತ್ತಲೇ ಇತ್ತು ಥೂ ಎಂದು ಉಗಿದರು ಇದ್ದಷ್ಟು ಸಾಪ ಹಾಕಿದರು ಅವೆಲ್ಲವನ್ನು ಕೇಳಿ ಮಾದೇವನಂದ ‘ಹೊಲನಂಬಿ ಬದುಕೋನು ನಾನು ಜಾತಿನೋಡಿ ಅಲ್ಲ’ಮಗನ ಮಾತಿಗೆ ನರಸಯ್ಯ ಒಳಗೊಳಗೇ ತಳಮಳಗೊಂಡ ಜೊತೆಗೆ ಗೌರವದ ಭಾವ ಮೂಡಿತಾದರು ತಲೆ ಎತ್ತದೆ ಭೂಮಿಮೇಲೆ ಕಣ್ಣ ಬಿಗಿಯಾಗಿ ನೆಟ್ಟಿದ್ದ.

ಮುಗಿತಲ್ಲಿ ನ್ಯಾಯ ಮಾದೇವನು ಜಯನ ಕೈಯಿಡಿದು ಬಂದ ಭಂಗಿಯಲ್ಲೇ ಒರಟನು, ನರಸಯ್ಯ ಭೂಮಿಯನ್ನೇ ನೋಡುತ್ತ ಹೊಲದ ದಾರಿ ಉದ್ದಕ್ಕು ಅವರಿಂದೆಯೇ ನಡೆದನು, ಅಲ್ಲೇ ಮಧ್ಯದಲ್ಲಿ ಲಕ್ಷಮ್ಮನು ಕೂಡಿಕೊಂಡಳು ನಾಲ್ವರು ಒಟ್ಟಾಗಿ ನಡೆದರು.

ಹೊಲದೊಳಗಿನ ನೆರ್ಕೆಯು ದಿನ ಕಳೆದಂತೆ ಇಟ್ಟಿಗೆಯ ಮನೆಯಾಯಿತು ಅದಾದರು ಊರವರು ಇವರನ್ನ  ಹಬ್ಬ ಅರಿದಿನಕ್ಕೆ ಕರೆಯಲಿಲ್ಲ ತಲೆಕೆಡಿಸಿಕೊಳ್ಳದ ಇವರು ಅವರಿಗಿಂತಲೆ ಹೆಚ್ಚಾಗೆ ಬದುಕ ಬದುಕಿದರು.

ಆ ಊರಿನ ಅಂಗಡಿಯೋ ಅರಟೆ ಕಟ್ಟೆಯೋ ಎಲ್ಲಾದರು ‌ಜನ ಸೇರಿ ಅರಟುವಾಗ ಮಾದೇವನನ್ನು ಮಧ್ಯ ತಂದು ಬೈಯುವುದು ರೂಡಿಯಾಗಿ ಉಳಿಯಿತ್ತಲ್ಲಿ ಅಕ್ಕ ಪಕ್ಕದ ಜಮೀನಿನವರು ದಿನ ಕಳೆದಂತೆ ಮಾತಾಡಿಸಲು ಮುಂದಾದರು ಒಂಟಿ ಮನೆಯಿದ್ದದ್ದು ವರ್ಷಗಳು ಕಳೆದಂತೆ ಮನೆ ಹೆಚ್ಚಿದವು ವಾಡಿಕೆ ಮುರಿಯದೆ ಮಾದೇವನೊಂದಿಗೆ ಜನ ಬೆರೆಯೋದು ಕಮ್ಮಿ, ಆದರಿವನು ಹೊಲದಲ್ಲಿ ಬೆಳೆಯುವಂತ ಬೆಳೆಯ ಸುತ್ತಲೆಲ್ಲೂ ಬೆಳೆಯುವವರಿಲ್ಲದಂತಾಯಿತು, ಅದನ್ನು ಬೈಯುತ್ತಲೇ ಹೇಳುವುದುಂಟು ಜನ.

ಒಂದು ರಾತ್ರಿ ಕಳೆದು ಹಗಲು ಮುಳುಗಿ ಮುಗಿಲು ಕೆಂಪಗಿದ್ದಾಗ ಹೊಲದೊಳಕ್ಕೆ ಕಾಲಿಟ್ಟ ಮಾದೇವ,

ಅವನೊಟ್ಟಿಗೆ ನರಸಯ್ಯ,ಲಕ್ಷಮ್ಮ,ಜಯ ಜಯಳ ಕಂಕುಳಲ್ಲಿದ್ದ ಮಗು ಬಾಯಲ್ಲಿ ಬೆರಳಿಟ್ಟು ಚೀಪುತ್ತ ಜೊಲ್ಲ ಸುರಿಸುತ್ತ ಪಿಳಿಪಿಳಿ ಕಣ್ಣ ಮಿಟುಕಿಸಿ ಕಿಲಕಿಲನೆ ನಗುತ್ತಲಿದೆ ಆ ಮಗು ಹೊಲದೊಳಗಿನ ಹಸಿರ ಕಂಡು.


About The Author

1 thought on “ವಾಡಿಕೆ”

  1. ಈ ಕಥೆಯು ಈಗಿನ ಯುವಕರಿಗೆ ಪ್ರೇರಣೆಯಾಗಿದೆ. ಈ ಕಥೆ ಜಾತಿ ಎಂದು ಬಡಿದಾಡುವ ಜನಕ್ಕೆ ಒಳ್ಳೆಯ ಸಂದೇಶ ಸಾರಿದೆ.

Leave a Reply

You cannot copy content of this page

Scroll to Top