ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಒಳನೋಟ

ಭೂಮಿ ಗೀತ ಕವಿತೆ ಕುರಿತು ಒಂದು ಒಳನೋಟ;


ಪುರುಷಾಹಂಕಾರಕ್ಕೆ ಪ್ರತ್ಯುತ್ತರ

ಭೂಮಿ ಗೀತ

..

ಒಡಲು ನಡುಗಿದ್ದಷ್ಟೇ ಗೊತ್ತು

ಉಳುಕಲ್ಲ ಚಳುಕಲ್ಲ

ತುಳಿದ ನೋವೆಂದು ಗೊತ್ತಾಗುವುದರೊಳಗೆ

ಹಸಿ ಕುಡಿಯೊಂದು ಹಸಿರಾಗಿ

ಎಲೆಯಾಗಿ,ಎರಡಾಗಿ, ತಲೆತೂಗಿ ತಲೆಬಾಗಿ

ನೋಡ ನೋಡುತ್ತ ಮರವಾಗಿ ಎದ್ದಾಗ

ಮೈತುಂಬಾ ಹೂ ಹಣ್ಣು ಹೊದ್ದಾಗ

ಅಂದು ಕೊಂಡಳು ಭೂಮಿ

ಮೆಟ್ಟು ಮೆಟ್ಟಿನಡಿಗೆಲ್ಲ ಇನ್ನೂ….

ಹಸಿರನ್ನೇ ಹೆರುವೆನೆನೆಂದು.

ಬಯಲ ಬಿಸಿಲಲಿ

ಸುಡುವ ಉರಿಯಲಿ

ಧಗ್ಗನೆದ್ದ ಕಾಡ್ಗಿಚ್ಚಿನ ಕಿಚ್ಚಿನಲಿ

ಕರುಳೇ ಕರಕಲಾಗುವ ಹೊತ್ತಲ್ಲಿ

ಮಾತು ಕೊಟ್ಟಿತು ಮುಗಿಲು

ಮಳೆಯಾಗಿ ಜೊತೆ  ಬರುವೆನೆಂದು!

ಹೇಳಿದಷ್ಟು ಸಲೀಸೆ ಜೊತೆಯಾಗುವುದು?

ಗುಡುಗು ಸಿಡಿಲುಗಳ

ಚಾಟಿ ಸಹಿಸುವುದು

ಮತ್ತೆ ಸುಲಭವೇ?

ಕನ್ನೆಭೂಮಿಯೊಡಲಲ್ಲಿ

ಜೀವ ಜೀಕಾಡುವುದು

ಮಿಂದ ನೀರು ನಿಂತು

ಒಡಲ ಗರ್ಭ ಕಟ್ಟಿ

ಕರುಳು ಕರುಳೆಲ್ಲ ಬೆಸೆದು

ಒಮ್ಮೆ ಸತ್ತು ಒಮ್ಮೆ ಹುಟ್ಟಿ

ಮತ್ತೆ ಮರುಜನ್ಮ ಎತ್ತಿ

ಮಣ್ಣ ಕಣಕಣದಲ್ಲೂ ಹಾಲುಗೆಚ್ಚಲುಕ್ಕುವಾಗ

ಲೆಕ್ಕಕ್ಕುಂಟೇ

ಭೂಮಿ ಅತ್ತಿದ್ದು

ಹೆತ್ತಿದ್ದು.?

ಮತ್ತೂ…

ತುಳಿಸಿ ಕೊಂಡಿದ್ದು, ಒದ್ದು ನಡೆದದ್ದು

ಗುದ್ದಿ ತೆಗೆದದ್ದು, ಬಗೆದು ನೋಡಿದ್ದು

ಅಗೆದು ಮುಚ್ಚಿದ್ದು, ಒಡಲನ್ನೇ ಸುಟ್ಟಿದ್ದು

ಎಲ್ಲಾ ನೆನಪಿಟ್ಟಿದ್ದರೆ ಆಕೆ

ಮೊಳಕೆಯೊಡೆಯುತಿತ್ತೇ

ಉತ್ತಿದ್ದು

ಬಿತ್ತಿದ್ದು

ಶೋಭಾ  ನಾಯ್ಕ.ಹಿರೇಕೈ

 ಶೋಭಾ ನಾಯ್ಕ ಹಿರೇಕೈ ಈ ನೆಲದ ಕವಯತ್ರಿ. ಆಕೆಯ ಕವನಗಳಲ್ಲಿ ಬಂಡಾಯದ ಬನಿ ಇದೆ. ಆಕೆಯ ಕವಿತೆಗಳ ಬೇರು ವಚನ ಸಾಹಿತ್ಯದಲ್ಲಿದೆ .

ಶೋಭಾ ಪ್ರಕೃತಿಯನ್ನು ಕಾಣುವ ಬಗೆ ನವೋದಯ ಕಾಲದ ಕವಿಗಳಂತೆಯೇ  ಇದೆ. ಕುವೆಂಪು ,ಬೇಂದ್ರೆ ಪ್ರಕೃತಿಯನ್ನು ಹೆಣ್ಣಾಗಿ, ತಾಯಿಯಾಗಿ ಕಂಡವರು. ಶೋಭಾ ಹೆಣ್ಣಿನ ತಳಮಳ, ನೋವು, ಕನಸು, ಸಂಭ್ರಮ, ಕರುಣೆ ,ತ್ಯಾಗ ಹಾಗೂ ಛಲವನ್ನು ಸಹ ಪ್ರಕೃತಿಯ ಜೊತೆ ಹೊಸೆಯಬಲ್ಲರು.‌ಬೇಂದ್ರೆ ಬದುಕಿದ್ದರೆ ಮೆಚ್ಚವಂತಹ ಕವಿತೆಯನ್ನು ಶೋಭಾ ಕನ್ನಡ ಸಾಹಿತ್ಯಕ್ಕೆ ನೀಡಿದ್ದಾಳೆ.

ಇಡೀ ಜಗತ್ತು ಕೋವಿಡ್ ನಿಂದ ತಲ್ಲಣಿಸಿದ ಕ್ಷಣವದು.

ಇಂತಹ ವೇಳೆ ಕವಯಿತ್ರಿ  ಹತ್ತು ಹಲವು ಆತಂಕಗಳನ್ನು , ಭಯವನ್ನು ತನ್ನೊಡಲಲ್ಲಿಟ್ಟುಕೊಂಡೇ “ಭೂಮಿಗೆ ” ಎಂಬ ಕವಿತೆ ಬರೆಯುತ್ತಾಳೆ.

ಒಡಲು ನಡುಗಿದ್ದಷ್ಟೇ ಗೊತ್ತು

ಉಳುಕಲ್ಲ ಚಳುಕಲ್ಲ

ತುಳಿದ ನೋವೆಂದು

ಗೊತ್ತಾಗುವುದರೊಳಗೆ ಹಸಿ

ಕುಡಿಯೊಂದು ಹಸಿರಾಗಿ ಎಲೆಯಾಗಿ, ಎರಡಾಗಿ,ತಲೆತೂಗಿ ತಲೆಬಾಗಿ

ನೋಡನೋಡುತ್ತಾ ಮರವಾಗಿ ಎದ್ದಾಗ

ಮೆಟ್ಟು ಮೆಟ್ಟಿನಡಿಗೆಲ್ಲ ಇನ್ನೂ

ಹಸಿರನ್ನೇ ಹೆರುವೆನೆಂದು

ಎಂಬ ಆಶಯ ಕವಯಿತ್ರಿಯದು.

ಇಲ್ಲಿ ಬೇಂದ್ರೆ ಅವರ ಕವಿತೆ ” ಮೊದಲಗಿತ್ತಿಯೇ ನೀನು “

ಸ್ಮರಸಿಕೊಳ್ಳೊಣ…

ಕೊಡಲಿರಾಮನು ಎರೆದ ಕೆನ್ನೀರ ಜಳಕಕ್ಕೆ

                        ಕೂದಲು ನನೆಯಲಿಲ್ಲೆನುತಿಹೆ

ಅವತಾರಕೊಂದೊಂದು ಅಭಿಷೇಕ ಮಾಡಿದರು

                        ಎಣ್ಣೆಮಜ್ಜನ ಬೇರೆ ಬೇಕೆನುವೆ

ನೆತ್ತರ ಮೀಯಿಸುವ ಕೆಂಚರ ಕೈಯಿಳಿಸಿ

                        ಮೊದಲಗಿತ್ತಿಯೆ ನೀನು ಮೆರೆಯುತಿಹೆ.

ಹಾಲಿನ ಹೃದಯಕ್ಕೆ ಕುಬ್ಬುಸವನು ತೊಡಿಸಿ

            ಹೂಮುಡಿಸಿಕೊಂಡೆದು

ನೀನಲಿವೆ.

ಬಸಿರು ತುಂಬಲು ಹಸಿರುಡಿಗೆಯನುಟ್ಟೆಂದು

            ವನಮಾಸ ನವಮಾಸ ತೀರಿಸುವೆ.

ಬೇಂದ್ರೆ  ಭೂಮಿ ಮತ್ತು ಹೆಣ್ಣಿನ್ನು ಕಂಡ ಬಗೆ,ಕವಯಿತ್ರಿ  ಶೋಭಾ  ಹೆಣ್ಣನ್ನು ಕಂಡ ಕಾಣ್ಕೆ ಒಂದೇ…

ಮೆಟ್ಟು ಮೆಟ್ಟಿನಡಿಗೆಲ್ಲ ಇನ್ನು  ಹಸಿರನ್ನೇ ಹೆರುವೆನೆಂದು…

ಈ ಸಾಲುಗಳಲ್ಲಿನ

ಚಲನಶೀಲ ಸಹನೆ ದೊಡ್ಡದು. ತುಳಿದ ನೋವನ್ನು ಹೊದ್ದು ಹೂ ಹಣ್ಣು ಕೊಡುವೆ, ಹಸಿರನ್ನೇ ಹೆರುವೆ ಎಂಬುದು ಹೆಣ್ಣಿನ ಮೇಲಿನ ಕ್ರೌರ್ಯವನ್ನು ಸಹನಶೀಲತೆಯಿಂದ ಹೇಳುತ್ತಾ …ಕೊಂದವರಿಗೆ, ತುಳಿದವರಿಗೆ ಒಳ್ಳೆಯದನ್ನೇ ಹರಸುವೆ ಎಂಬ ನಿಲುವು ಔದಾರ್ಯದ್ದು. ಭೂಮಿಗೆ ಮತ್ತು ಹೆಣ್ಣಿಗೆ, ಅವ್ವನಿಗೆ ಮಾತ್ರ ಇಂತಹ  ಮಾತು ಆಡಿ ಬದುಕಲು ಸಾಧ್ಯ ಎಂಬುದನ್ನು ಕವಯಿತ್ರಿ ಜಗತ್ತಿನ ಮುಂದೆ ಮಂಡಿಸುತ್ತಾಳೆ. ಈ ಕವಯಿತ್ರಿ ಕಾಣ್ಕೆ ದೊಡ್ಡದು.

ಹೆರುವ ಸಂಭ್ರಮ ಸಂಕಟವನ್ನು ಎಷ್ಟು ಔಚಿತ್ಯ ಹಾಗೂ ಚೈತನ್ಯ ದಿಂದ ತರುತ್ತಾಳೆ ಎಂಬುದ ಗಮನಿಸಿ;

ಮಿಂದ ನೀರು ನಿಂತು

ಒಡಲ ಗರ್ಭಕಟ್ಟಿ

ಕರುಳ ಕರುಳೆಲ್ಲ ಬೆಸೆದು

ಒಮ್ಮೆ ಸತ್ತು ಒಮ್ಮೆ ಹುಟ್ಟಿ

ಮತ್ತೆ ಮರುಜನ್ಮವೆತ್ತಿ

ಮಣ್ಣ ಕಣಕಣದಲ್ಲೂ

ಹಾಲುಗೆಚ್ಚಲುಕ್ಕುವಾಗ

ಲೆಕ್ಕಕ್ಕೆ ಇಲ್ಲ

ಭೂಮಿ ಅತ್ತಿದ್ದು ಹೆತ್ತಿದ್ದು

ಮತ್ತೂ

ತುಳಿಸಿ ಕೊಂಡದ್ದು, ಒದ್ದು ನಡೆದದ್ದು

ಗುದ್ದಿ ತೆಗೆದದ್ದು, ಬಗೆದು ನೋಡಿದ್ದು

ಅಗೆದು ಮುಚ್ಚಿದ್ದು ಒಡಲನ್ನೇ ಸುಟ್ಟಿದ್ದು

ಎಲ್ಲಾ ನೆನಪಿಟ್ಟಿದ್ದರೆ ಆಕೆ..

ಮೊಳಕೆಯೊಡೆಯುತ್ತಿತ್ತೇ ?

ಉತ್ತಿದ್ದುಬಿತ್ತಿದ್ದು..

ಇಲ್ಲಿ ಇಡೀ ಕವಿತೆ ಓಘಕ್ಕೆ ದಕ್ಕುವ ಲಯ, ಕನ್ನಡದ ಪದಗಳ ಲಾಲಿತ್ಯ  ಕಾವ್ಯ  ಓದುಗರನ್ನು , ಸಹೃದಯರನ್ನು   ಗೆಲ್ಲದೆ ಇರಲಾರದು. ಭೂಮಿಯ ಸಹನೆ ಹತ್ತು ಹೆಣ್ಣಿನ ತಾಳ್ಮೆ ಮತ್ತು ಆಕೆಯ ಸಹನೆ ಹಾಗೂ ತನಗಾದ ಅನ್ಯಾಯವನ್ನು ಮರೆಯುವ, ಕ್ಷಮಿಯುವ ಗುಣ ದೊಡ್ಡದು. ಕ್ಷಮಾ ಧರೆಯಿತ್ರಿ ಎಂದು ಸರಳವಾಗಿ ಹೇಳಬಹುದಾದರೂ, ಆಕೆಯೊಳಗೆ ಆಗ್ನಿಕುಂಡ ಒಡಲೊಳಗೆ ಇದೆ ಎಂಬುದ ಮರೆಯಲಾಗದು. ಕ್ಷಮೆ ಎಂಬುದು ಭೂಮಿಯ ಔದಾರ್ಯ .ಅದು ಪಡೆಯುವವನ ಯೋಗ್ಯತೆಯೂ ಅಲ್ಲ, ಅರ್ಹತೆಯೂ ಅಲ್ಲ. ಭೂಮಿತಾಯಿಗೆ ಕೊಡುವುದಷ್ಟೇ ಗೊತ್ತು. ಪಡೆಯುವುದಾದರೂ ಏನನ್ನು.‌

ಆಕೆ ಬಯಲ ಬಿಸಿಲಲಿ ಸುಡುವ ಉರಿಯಲಿ ಬೇಯುವುದಷ್ಟೇ ಗೊತ್ತು. ಹಾಗೆ ಸುಟ್ಟರೂ, ಬೆಂದರೂ, ಧಗ್ಗನೆಯ ಕಾಡ್ಗಿಚ್ಚಲಿ ಕರುಳು ಕರಕಲಾಗುವಂತೆ ತನ್ನ ತಾನೇ ಸುಟ್ಟುಕೊಂಡರೂ , ಮಾತು ಕೊಟ್ಟಿತು ಮುಗಿಲು ಮಳೆಯಾಗಿ ಜೊತೆ ಬರುವೆನೆಂದು !

ಇಂತಹ ಅಚ್ಚರಿ ಮಾತ್ರ ಭೂಮಿಗೆ ಉಳಿದಿರುವುದು. ಸದಾ ಮುಗಿಲಿಗೆ ಮುಖ ಮಾಡಿರುವ ಭೂಮಿ ಬೆನ್ನು ತಿರುಗಿಸಿದ ಉದಾಹರಣೆಯಿಲ್ಲ. ತನ್ನನ್ನೇ ತಾನು ಸುತ್ತುತ್ತಾ ಸೂರ್ಯನ ಸುತ್ತುವ ಪೃಥ್ವಿ ಮಳೆ ಬಿಸಿಲು ಉಣ್ಣುತ್ತಾ , ತನ್ನ ಮಕ್ಕಳಿಗೆ ಹಾಲುಣಿಸುತ್ತಾ ಜೀವ ಜಗತ್ತನ್ನು  ಕಾಪಾಡುತ್ತಾ  ಬಂದಿದ್ದಾಳೆ‌ .

ಭೂಮಿಗೆ ಕವಿತೆ ಹೀಗೆ ಇಡೀ ಬದುಕಿನ ನೋವು ನಲಿವು ಕನಸು ನನಸುಗಳನ್ನು ಒಟ್ಟೊಟ್ಟಿಗೆ ಹೇಳುವ,‌ಮಹತ್ತರ ಆಶಾವಾದ ಬಿತ್ತುವ ಕವಿತೆಯಾಗಿದೆ. ಕನ್ನಡದ ಕವಯಿತ್ರಿಯರಿಂದ ತೀರಾ ಭಿನ್ನವಾಗಿ ನಿಲ್ಲುವ ಶೋಭಾ ನಾಯ್ಕ ಹಿರೇಕೈ ಕನ್ನಡದ ವಿಶಿಷ್ಟ ಬರಹಗಾರ್ತಿ. ಅಪರೂಪದಲ್ಲಿ ಅಪರೂಪಕ್ಕೆ ಬರೆಯುವ ಶೋಭಾ  ತುಂಬಾ ಪ್ರಾಮಾಣಿಕ ಮನಸ್ಸಿನವರು.

ಕೊನೆಯ ಮಾತು :

” ನನ್ನ ಕವಿತೆ ” ಯ ಮೂಲಕ , ಕವಿತೆ ಬರೆಯುವುದು ಪ್ರಶಸ್ತಿ ಸನ್ಮಾನಗಳಿಗಾಗಿ ಅಲ್ಲ. ಕೀರ್ತಿಗೂ ಅಲ್ಲ. ದುಡಿವ ಜನರಿಗಾಗಿ, ‌ಶ್ರಮಿಕ ವರ್ಗಕ್ಕೆ, ನೆಲದ ಜೀವಂತ ಕವಿತೆಗಳಿಗೆ ಎಂದು ತನ್ನ ಕಾವ್ಯದ ನಿಲುವನ್ನು ಸ್ಪಷ್ಟವಾಗಿ ಹೇಳಿದ್ದಾರೆ. “ದೊರೆಗೊಂದು ಪತ್ರ” ಎಂಬ ಶೋಭಾ ನಾಯ್ಕ ಕವಿತೆ ….ನನ್ನ ಕವಿತೆಯ ಮುಂದುವರಿದ ಭಾಗದಂತಿದೆ. ಕಾವ್ಯವನ್ನು ಪ್ರಾಮಾಣಿಕವಾಗಿ ಉಸಿರಾಡುವ ಶೋಭಾಗೆ ಕವಿತೆಯ ಹದ ದಕ್ಕಿದೆ.


– ನಾಗರಾಜ್ ಹರಪನಹಳ್ಳಿ

About The Author

1 thought on “”

Leave a Reply

You cannot copy content of this page

Scroll to Top