ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ವೀಣಾ-ವಾಣಿ

“ಒಂಟಿ ಧ್ವನಿಗೆ… ಜಂಟಿಯಾದ ನೂರಾರು ಧ್ವನಿಗಳು”ವೀಣಾ ಹೇಮಂತ್‌ ಗೌಡ ಪಾಟೀಲ್

ಮಹಿಳಾ ಸಂಗಾತಿ ವೀಣಾ ಹೇಮಂತ್ ಗೌಡ ಪಾಟೀಲ್ ಒಂಟಿ ಧ್ವನಿಗೆ… ಜಂಟಿಯಾದ ನೂರಾರು ಧ್ವನಿಗಳು(ಶಾ ಬಾನು ಹಾಗೂ ತೀನ್ ತಲಾಕ್ ಮೊಕದ್ದಮೆ ) ಒಂಟಿ ಧ್ವನಿಗೆ… ಜಂಟಿಯಾದ ನೂರಾರು ಧ್ವನಿಗಳು(ಶಾ ಬಾನು ಹಾಗೂ ತೀನ್ ತಲಾಕ್ ಮೊಕದ್ದಮೆ ) ನನಗೆ ವಯಸ್ಸಾಗಿರಬಹುದು ಆದರೆ ನನ್ನ ಧ್ವನಿ ಉಡುಗಿಲ್ಲ…. ಎಂದು ಆಕೆ ಹೇಳಿದಾಗ ಆಕೆಯ ದುರ್ಬಲವಾದ ಕೈಗಳು ನಡುಗುತ್ತಿದ್ದರೂ ಧ್ವನಿಯಲ್ಲಿ ಹರಿತವಾದ ಪ್ರಖರತೆ ಇತ್ತು ಕಾರಣ… ಆಕೆಯ ಉದ್ದೇಶ ಅತ್ಯಂತ ಸ್ಥಿರವಾಗಿತ್ತು. ಇಂದೋರ್ ನ ಆ ಹೆಣ್ಣು ಮಗಳ ವಯಸ್ಸು 62 ವರ್ಷವಾಗಿದ್ದು ತನ್ನ ಬದುಕಿನ ಬಹು ಭಾಗವನ್ನು ಮನೆಯ ನಾಲ್ಕು ಗೋಡೆಗಳ ಒಳಗೆ ಆಕೆ ಕಳೆದಿದ್ದಳು. ಮದುವೆಯಾಗಿ ಹಲವಾರು ದಶಕಗಳ ನಂತರ ಆಕೆಯ ಪತಿ ಆಕೆಗೆ ವಿಚ್ಛೇದನ ನೀಡಿದ್ದಲ್ಲದೆ ಆಕೆಗೆ ಯಾವುದೇ ರೀತಿಯ ಸಹಾಯವನ್ನು ನೀಡಲು ನಿರಾಕರಿಸಿದನು. ಆಕೆಯ ಮನದ ಮೂಲೆಯಲ್ಲಿನ ಅಗೋಚರ ಭಾವವೊಂದು ಮಿಸುಕಿತ್ತು. ದಾಂಪತ್ಯದ ಹಲವಾರು ದಶಕಗಳನ್ನು ಕಳೆದ ಆಕೆ ಅತಿಯಾದ ತಿರಸ್ಕಾರದ ಭಾವದಿಂದ ನೊಂದು ತನ್ನ ಕಾಲ ಕೆಳಗಿನ ನೆಲವೇ ಕುಸಿದು ಹೋದಂತೆ ಭಾಸವಾಗಿ ಒದ್ದಾಡಿದಳು.  ತನ್ನ ಬದುಕಿನಲ್ಲಿ ಒಂದು ದಿನ ತಾನು ನ್ಯಾಯಾಲಯದ ಕಟ-ಕಟೆಯಲ್ಲಿ ನಿಲ್ಲಬಹುದು, ನ್ಯಾಯಾಧೀಶರ ಮುಂದೆ ಮೈಕ್ರೋಫೋನ್ ಗಳ ಮುಂದೆ ತನ್ನ ಅಹವಾಲನ್ನು ಮಂಡಿಸುತ್ತೇನೆ  ಎಂಬ ಯೋಚನೆಯನ್ನೇ ಆಕೆ ಮಾಡಿರಲಿಲ್ಲ.ತನ್ನ ಹೆಸರು ಮನೆಯ ನಾಲ್ಕು ಗೋಡೆಗಳ, ತಾನಿರುವ ಪರಿಸರದ ಆಚೆಗೆ ದೇಶದ ಮೂಲೆ ಮೂಲೆಯನ್ನು ತಲುಪಬಹುದು ಎಂದು ಆಕೆ ಖಂಡಿತವಾಗಿಯೂ ಭಾವಿಸಿರಲಿಲ್ಲ. ಆದರೆ ಹಸಿವಿಗೆ ಎಲ್ಲರನ್ನೂ, ಎಲ್ಲವನ್ನು ನಡುಗಿಸುವ ಶಕ್ತಿ ಇದೆ. ಬಡತನಕ್ಕೆ ಅದರದ್ದೇ ಆದ ಅಂತಃಶಕ್ತಿ ಇದೆ.ಆಕೆಯ ಬಳಿ ಹಣವಿರಲಿಲ್ಲ, ಭದ್ರತೆ ಇರಲಿಲ್ಲ ಹಾಗೂ ಒಬ್ಬಳೇ ದುಡಿದುಕೊಂಡು ತಿಂದು ಬದುಕಬಲ್ಲೆ ಎಂದು ಹೇಳಲು ಸಾಧ್ಯವಾಗುವ ದೈಹಿಕ ಶಕ್ತಿಯಂತೂ ಮೊದಲೇ ಇರಲಿಲ್ಲ.ಆದ್ದರಿಂದಲೇ ಆಕೆ ತನ್ನ ತಲೆಮಾರಿನ ಜನರು ಯೋಚಿಸಲು ಸಾಧ್ಯವಾಗದ ರೀತಿಯಲ್ಲಿ ಪ್ರತಿಕ್ರಿಯಿಸಿದಳು… ಆಕೆ ತನ್ನ ಹಕ್ಕಿಗಾಗಿ ಹೋರಾಡಿದಳು. ತನ್ನ ಕುಟುಂಬದ ನಿರ್ವಹಣೆಗಾಗಿ ಅದರಲ್ಲೂ ಮುಖ್ಯವಾಗಿ ತನ್ನ ಔಷಧಿಯ ಖರ್ಚಿಗಾಗಿ ಪ್ರತಿ ತಿಂಗಳು ತನಗೆ ಇಂತಿಷ್ಟು ಹಣವನ್ನು ದೊರಕಿಸಿಕೊಡಿ ಎಂದು ಆಕೆ ನ್ಯಾಯಾಲಯದ ಮೊರೆ ಹೋದಳು. ತನ್ನ ವೃದ್ದಾಪ್ಯದ ವಯಸ್ಸಿನಲ್ಲಿ ದುಡಿಯಲು ಸಾಧ್ಯವಿಲ್ಲದ ಕಾರಣ ಗೌರವಯುತವಾಗಿ ಬದುಕಲು ಅತ್ಯವಶ್ಯಕವಾದ ಆರ್ಥಿಕ ಅನುಕೂಲವನ್ನು ಮಾತ್ರ ಆಕೆ ಬಯಸಿದ್ದಳು.. ಆದರೆ ಆಕೆಯ ಈ ಬಯಕೆ ಇಡೀ ದೇಶದ ಸಮಾಜದ ಹೆಣ್ಣು ಮಕ್ಕಳ ಅಸ್ತಿತ್ವದ ಪ್ರಶ್ನೆಯಾಗಿ ಬದಲಾಯಿತು. ಆಕೆಯ ಕೌಟುಂಬಿಕ ನಿರ್ವಹಣೆಯ ಪ್ರಶ್ನೆ ಇಡೀ ಭಾರತ ದೇಶದ ರಾಷ್ಟ್ರೀಯ ವಿಷಯವಾಗಿ ಬದಲಾಯಿತು. ಆಕೆಯ ಕೇಸ್ ಸುಪ್ರೀಂ ಕೋರ್ಟ್ ನ ಮೆಟ್ಟಿಲನ್ನು ಏರಿತು. ಪ್ರತಿಯೊಂದು ಪತ್ರಿಕೆಯಲ್ಲಿಯೂ ಆಕೆಯ ಹೆಸರು ಹಾಗೂ ಕೇಸಿನ ವಿವರಗಳು ಪ್ರಕಟವಾದವು. ರಾಜಕೀಯ ನೇತಾರರು ಆಕೆಯ ಬದುಕು ತಮಗೆ ಸಂಬಂಧಿಸಿದ ವಿಷಯ ಎಂಬಂತೆ ಆಕೆಯ ಕುರಿತು ಮಾತನಾಡಿದರು. ಮಾಧ್ಯಮಗಳಲ್ಲಿ ಚರ್ಚೆಗಳು, ವಾಗ್ವಾದಗಳು ಕಾಳ್ಗಿಚ್ಚಿನಂತೆ ಹರಡಿದವು. ಇದೆಲ್ಲದರ ಹಿಂದೆ ಇದ್ದ ವ್ಯಕ್ತಿ ಕೇವಲ ತನಗೆ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡಲು ಕೇಳಿಕೊಂಡಿದ್ದಳುಶಾ ಭಾನು ಎಂಬ ಆಕೆ ಅತ್ಯಂತ ಸ್ಥಿತಪ್ರಜ್ಞತೆಯಿಂದ ತನ್ನ ಸುತ್ತ ಹರಡುತ್ತಿದ್ದ ಈ ಎಲ್ಲ ವಿದ್ಯಮಾನಗಳನ್ನು ಗಮನಿಸುತ್ತಿದ್ದಳು… ದಿಗ್ಬ್ರಮೆಗೊಂಡ, ದಣಿದ ಮನಸ್ಥಿತಿಯಲ್ಲೂ ಕೂಡ ಆಕೆ ಹಿಂದೇಟು ಹಾಕಲಿಲ್ಲ. ಆಕೆ ತನ್ನ ಮನೆಯ ಕಿಟಕಿಯಲ್ಲಿ ಕುಳಿತುಕೊಂಡು ಪಕ್ಕದಲ್ಲಿಯೇ ಹರಡಿರುವ ನ್ಯಾಯಾಲಯದ ಕಾಗದ ಪತ್ರಗಳನ್ನು ಆಗಾಗ ನಿರುಕಿಸುತ್ತಿದ್ದ ಆಕೆ ತನಗೆ ತಾನೇ ಹೇಳಿಕೊಳ್ಳುತ್ತಿದ್ದುದು ಕೇವಲ ಒಂದೇ ಒಂದು ಮಾತು ಈಗ ನಾನು ಮಾತನಾಡದಿದ್ದರೆ, ನನ್ನಂತಹ ಹೆಣ್ಣು ಮಕ್ಕಳ ಪರವಾಗಿ ಮತ್ತಿನ್ನಾರು ಮಾತನಾಡಲು ಸಾಧ್ಯ ಎಂದು.  ಹಲವಾರು ವರ್ಷಗಳ ಕಾಲ ವಾದ ವಿವಾದಗಳು ನಡೆದು ಅಂತಿಮವಾಗಿ ಆಕೆಯ ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ ತೀರ್ಪು ಬಂತು. ವಿಚ್ಛೇದನದ ನಂತರವೂ ಕೂಡ ಆಕೆಯ ಪೋಷಣೆಯ ಜವಾಬ್ದಾರಿಯನ್ನು ಆಕೆಯ ಪತಿ ತೆಗೆದುಕೊಳ್ಳಬೇಕು ಎಂಬ ಸುಪ್ರೀಂ ಕೋರ್ಟ್ ನ ನಿರ್ಣಯವನ್ನು ಅತ್ಯಂತ ಸ್ತಬ್ದವಾಗಿ ಇಡೀ ದೇಶದ ಜನರು ಆಲಿಸಿದರು. ಓರ್ವ ವೃದ್ಧ, ಅಸಹಾಯಕ ಮುಸ್ಲಿಂ ಹೆಣ್ಣು ಮಗಳು  ಹೆಣ್ಣು ಮಕ್ಕಳ ಸಂಭಾಷಣೆಯ, ಮಾತುಕತೆಯ ದಿಕ್ಕನ್ನೇ ಬದಲಾಯಿಸಿ ಹೆಣ್ಣು ಮಕ್ಕಳ ಹಕ್ಕುಗಳ ಹೋರಾಟದ ರಕ್ಷಕಿಯಾಗಿ ನಿಂದಳು. ತನ್ನ ವೈಯುಕ್ತಿಕ ಆರ್ಥಿಕ ನಿರ್ವಹಣೆಯ ಕುರಿತಾಗಿ ಆಕೆ ಹಚ್ಚಿದ ಪುಟ್ಟದೊಂದು ಕಿಡಿ ಬೆಂಕಿಯಾಗಿ ಪ್ರಜ್ವಲಿಸಿತ್ತು. ಬಹಳಷ್ಟು ಜನ ಇದನ್ನು ವಿರೋಧಿಸಿದರು. ಧಾರ್ಮಿಕ ಮುಖಂಡರು ಒಂದೆಡೆ ಸೇರಿ ಭಾಷಣಗಳನ್ನು ಮಾಡಿದರು. ಸರ್ಕಾರವು ಕೂಡ ಒತ್ತಡದಲ್ಲಿ ಸಿಲುಕಿತು ಆದರೆ ಇನ್ನೇನು ಗೆಲುವು ಆಕೆಯ ಕೈಗೆ ದೊರಕಿತು ಎಂಬಷ್ಟರಲ್ಲಿ ಅದು ಆಕೆಯ ಕೈಯಿಂದ ನುಣುಚಿಕೊಳ್ಳಲಾರಂಭಿಸಿತು  ತನ್ನ ಮನೆಯ ಪುಟ್ಟ ಕೋಣೆಯಲ್ಲಿ ಶಾ ಬಾನು ಅತ್ಯಂತ ಮೌನವಾಗಿ ಕುಳಿತಿದ್ದ ಸಮಯದಲ್ಲಿ ಇಡೀ ಜಗತ್ತು ಆಕೆಯ ಬದುಕಿನ ಕುರಿತು ಚರ್ಚೆಯಲ್ಲಿ ತೊಡಗಿತು. ಯಾರೊಬ್ಬರೂ ಆಕೆಯ ಕಣ್ಣಲ್ಲಿ ಕಣ್ಣಿಟ್ಟು ಆಕೆಯ ನೋವು ಏನಿರಬಹುದು ಎಂಬುದನ್ನು ಅರಿಯುವ ಪ್ರಯತ್ನ ಮಾಡಲಿಲ್ಲ. ತಾನು ಒಬ್ಬಂಟಿ ಮೋಸ ಹೋದ ಹಾಗೂ ಭಯ ಪಟ್ಟ ಏಕೈಕ ಹೆಣ್ಣುಮಗಳು ಎಂಬ ಭಾವ ಮಾತ್ರ ಆಕೆಯನ್ನು ಸತಾಯಿಸುತ್ತಿತ್ತು…. ಇದೇ ಸಮಯದಲ್ಲಿ ಚಮತ್ಕಾರದ ರೀತಿಯಲ್ಲಿ ಇಡೀ ಭಾರತ ದೇಶದಾದ್ಯಂತ ಹಿಂದೂ ಮಹಿಳೆಯರ ಗುಂಪುಗಳು ಆಕೆಯನ್ನು ಬೆಂಬಲಿಸಲು ಆರಂಭಿಸಿದವು.  ಶಿಕ್ಷಕರು, ಸಾಮಾಜಿಕ ಕಾರ್ಯಕರ್ತರು, ನ್ಯಾಯವಾದಿಗಳು, ಕಾಲೇಜ್ ವಿದ್ಯಾರ್ಥಿನಿಯರು ಹೀಗೆ ಆಕೆ ಎಂದೂ ಭೇಟಿಯಾಗದ ನೂರಾರು ಸಾವಿರಾರು ಸಂಖ್ಯೆಯ ಮಹಿಳೆಯರು ಆಕೆಯ ಬೆಂಬಲಕ್ಕೆ ನಿಂತರು. ಬೇರೊಂದು ಧರ್ಮದ, ಬೇರೊಂದು ಜಗತ್ತಿನ ಹೆಣ್ಣು ಮಕ್ಕಳು ಆಕೆಯ ಚಿತ್ರವನ್ನು ಅಂಟಿಸಿದ ಭಿತ್ತಿ ಪತ್ರಗಳನ್ನು ಹಿಡಿದು ಆಕೆಯ ಪರವಾಗಿ ಘೋಷಣೆ ಕೂಗಿದರು. ಕೋರ್ಟ್ ನಲ್ಲಿ ಪಿಟಿಷನ್ ಕರೆಯಲಾಯಿತು ಹಾಗೂ ಸಾಮೂಹಿಕ ನಡಿಗೆಯ ಮೂಲಕ ತಾಲೂಕಿನ ತಹಸೀಲ್ದಾರ್ ಕಚೇರಿಗಳಲ್ಲಿ ಆಕೆಯ ಪರವಾಗಿ ನ್ಯಾಯ ದಾನ ಮಾಡಲು ಕೇಳಿಕೊಳ್ಳಲಾಯಿತು. ಆಕೆಯ ಹೆಸರಿನಲ್ಲಿ ಜಾತಾಗಳನ್ನು ಹಮ್ಮಿಕೊಳ್ಳಲಾಯಿತು. ಆಕೆಯ ಪರವಾಗಿ ನ್ಯಾಯದ ಹೋರಾಟ ನಡೆಯಿತು. ಮೊಟ್ಟ ಮೊದಲ ಬಾರಿ ತಿಂಗಳುಗಟ್ಟಲೆ ಏಕಾಂತ ವಾಸದ ನಂತರ ಕೂಡ ಶಾ ಬಾನು ತಾನು ಒಬ್ಬಂಟಿ ಎಂಬ ಭಾವವನ್ನು ತೊರೆದು ಹಾಕಲು ಜನರ ಈ ಸಂಘಟಿತ ಪ್ರಯತ್ನ ಕಾರಣವಾಯಿತು.  ಅದೊಮ್ಮೆ ತನ್ನನ್ನು ಭೇಟಿಯಾಗಲು ಬಂದ ವ್ಯಕ್ತಿಗೆ ಆಕೆ ಹೇಳಿದ್ದು ಹೀಗೆ ನಾನು ನನ್ನ ವೈಯುಕ್ತಿಕ ನ್ಯಾಯಕ್ಕಾಗಿ ಹೋರಾಡಲು ಕಾರಣ ನನಗೆ ಬೇರೆ ಯಾವುದೇ ಆಯ್ಕೆಗಳು ಇರಲಿಲ್ಲ… ಯಾವೊಬ್ಬ ವ್ಯಕ್ತಿಯು ಕೂಡ ಹೋರಾಟದಲ್ಲಿ ಹಿಂದೆ ಉಳಿಯಬಾರದು ಎಂಬ ಕಾರಣಕ್ಕಾಗಿ ಅವರೆಲ್ಲರೂ ಮಹಿಳೆಯಾದರೂ ಕೂಡ ನನ್ನನ್ನು ಬೆಂಬಲಿಸಿದರು…. ಉಳಿಯುವಿಕೆಗಾಗಿನ ನನ್ನ ಹೋರಾಟಕ್ಕಿಂತ, ನನ್ನ ಉಳಿಯುವಿಕೆಗಾಗಿ ಅವರು ಮಾಡಿದ ಹೋರಾಟ ದೊಡ್ಡದು ಎಂದು ಆಕೆ ಹೇಳಿದಳು.  ಧರ್ಮ, ಜಾತಿ, ರಾಜಕೀಯಗಳಿಂದ ವಿಭಾಗಿಸಲ್ಪಟ್ಟ ಭಾರತ ದೇಶದಲ್ಲಿ ಆಕೆಗೆ ಪರಿಚಯವೇ ಇಲ್ಲದ ಅಪರಿಚಿತ ಜನರ ಗುಂಪು ಮಾನವೀಯ ಪ್ರಜ್ಞೆಯಿಂದಆಕೆಯ ರಕ್ಷಣೆಗಾಗಿ ಮಂಚೂಣಿಯಲ್ಲಿ ನಿಂತದ್ದು ಆಕೆಗೆ ಹೆಮ್ಮೆಯ ವಿಷಯವಾಗಿ ತೋರಿತು. ಅವರಾರೂ ಆಕೆಯ ರಕ್ತ ಹಂಚಿಕೊಂಡು ಹುಟ್ಟಿದ ಒಡಹುಟ್ಟಿದವರಲ್ಲ, ಆಕೆಯ ಭಾಷೆಯನ್ನು ಅರಿಯದವರು ಆಕೆಯ ಸಂಸ್ಕೃತಿಯ ಗಂಧ ದಾಳಿ ತಿಳಿಯದವರು ಹಾಗೂ ಆಕೆಯ ಪ್ರಾರ್ಥನೆಯ ಅರಿವನ್ನು ಹೊಂದಿರದ ಆದರೆ ಆಕೆಯ ಮೂಕವೇದನೆಯನ್ನು ಅತ್ಯಂತ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಲ್ಲ ಶಕ್ತಿ, ಸಾಮರ್ಥ್ಯಗಳು ಅವರಲ್ಲಿತ್ತು. ಕೆಲವೊಮ್ಮೆ ಯಾವುದೇ ಕಾನೂನಿಗೆ ಸಾಧ್ಯವಾಗದ ಅತ್ಯಂತ ಬಲವಾದ ಬಂಧವನ್ನು ಮಾನವೀಯ ಬಂಧನ ಉಂಟುಮಾಡುತ್ತದೆ ಎಂಬುದಕ್ಕೆ ಇದುವೇ ಸಾಕ್ಷಿ. ತಾನಂದುಕೊಂಡ ರೀತಿಯಲ್ಲಿ ಶಾ ಬಾನು ಗೆಲ್ಲಲಿಲ್ಲ ನಿಜ ಕಠಿಣ ಕಾನೂನುಗಳು ಬದಲಾಗುವುದಿಲ್ಲ. ಆಕೆಯ ಸಾಮಾಜಿಕ ಗೆಲುವು ಮುಂದಿನ ದಿನಗಳಲ್ಲಿ ಮತ್ತೆ ಹಿಂತೆಗೆದುಕೊಳ್ಳಲಾಯಿತು… ಆದರೆ ಶಾಶ್ವತವಾಗಿ ಉಳಿದದ್ದು ಆಕೆ ಸೋಲದಂತೆ ಆಕೆಯ ವಾದವನ್ನು ಎತ್ತಿ ಹಿಡಿಯಲಾಗಿದ್ದು. ಇಂದೋರ್ ನಂತಹ ಪುಟ್ಟ ಶಹರದಲ್ಲಿ ವಾಸಿಸುತ್ತಿರುವ  ಓರ್ವ ವೃದ್ಧ ಹೆಣ್ಣು ಮಗಳು ತನ್ನ ಅಚಲ ವಿಶ್ವಾಸದಿಂದ ಇಡೀ ದೇಶದ ಕಾನೂನನ್ನು ಪ್ರಶ್ನಿಸಬಲ್ಲಳು ಎಂಬ ಸಂದೇಶ ಇಡೀ ಜಗತ್ತಿಗೆ ಸಾರಲ್ಪಟ್ಟಿತು. ಅದಷ್ಟೇ ಏಕೆ ? ಹುಟ್ಟಿ ಬೆಳೆದ ಆಕೆಯದ್ದೇ ಧರ್ಮದ ಸಮಾಜವು ಆಕೆಯನ್ನು ಮೌನವಾಗಿರಿಸಲು ಪ್ರಯತ್ನಿಸಿ ಆಕೆಯ ಮೇಲೆ ಒತ್ತಡವನ್ನು ಹೇರಿದರೂ ಕೂಡ ಇಡೀ ಜಗತ್ತಿನ ಮಹಿಳೆಯರು ಆಕೆಯ ಬೆಂಬಲಕ್ಕೆ ನಿಂತದ್ದು ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕೆ ಕಾರಣವಾಯಿತು.  ಹಲವಾರು ವರ್ಷಗಳ ನಂತರ ಇಂದಿಗೂ ಕೂಡ ಆಕೆಯ ಕುರಿತು ತರಗತಿಯ ಕೋಣೆಗಳಲ್ಲಿ ನ್ಯಾಯಾಲಯದ ಚರ್ಚೆಗಳಲ್ಲಿ ಮಹಿಳೆಯರ ಹಕ್ಕುಗಳ ಕುರಿತಾದ ಸಭೆಗಳಲ್ಲಿ ಮಾತನಾಡಲಾಗುತ್ತದೆ.. ಇದಕ್ಕೆ ಕಾರಣ ಆಕೆ ಮಹಿಳೆಯರ ಹಕ್ಕುಗಳ ಕುರಿತಾಗಿ ಮಾತನಾಡಿದ್ದಲ್ಲ ಅದೆಷ್ಟೇ ತೊಂದರೆಯಾದರೂ ಕೂಡ ಒಬ್ಬಂಟಿಯಾಗಿ ನಿಂತು ಆಕೆ ಈ ಸಮಾಜವನ್ನು ಎದುರಿಸಿದ್ದು.  ರಾಜಕೀಯದ ಗಂಧ ಕೂಡ ಸೋಕದ ಇಂದೋರ್ ನ ಪುಟ್ಟ ಮನೆಯಲ್ಲಿ ಕುಳಿತಿದ್ದ ಆ ವೃದ್ಧ ಹೆಣ್ಣು ಮಗಳು ತನ್ನ ಎರಡು ಕೈಗಳನ್ನು ಜೋಡಿಸಿ ಅತ್ಯಂತ ಸೌಮ್ಯವಾಗಿ ಹೇಳಿದ್ದಳು “ನ್ಯಾಯಾಲಯದಲ್ಲಿ ನಾನು ಸಂಪೂರ್ಣವಾಗಿ ಗೆಲುವನ್ನು ಸಾಧಿಸಿಲ್ಲ ನಿಜ ಆದರೆ ನಾನು ಸೋತಿಲ್ಲ ಕೂಡ ” ಎಂದು. ನೋಡಿದಿರಾ ಸ್ನೇಹಿತರೆ, ಪ್ರತಿಯೊಂದು ನದಿಯು ತನ್ನ ಉಗಮದಲ್ಲಿ ಪುಟ್ಟ ಝರಿಯಾಗಿ ಇರುತ್ತದೆ. ಅಂತೆಯೇ ಪ್ರತಿ ಸೂರ್ಯೋದಯವೂ ಕೂಡ ಚಿಕ್ಕದೊಂದು ಕಿರಣದ ಹರಡುವಿಕೆಯಿಂದ ಆರಂಭವಾಗುತ್ತದೆ ಅಂತೆಯೇ ಪ್ರತಿಯೊಂದು ದೊಡ್ಡ ಹೋರಾಟಕ್ಕೆ ಚಿಕ್ಕದೊಂದು ನೋವಿನ, ಅಸಮಾನತೆಯ ಕುರಿತಾದ ಅಸಹಾಯಕ ಅತೃಪ್ತಿಯ ಕಿಡಿ ಕಾರಣವಾಗುತ್ತದೆ. ಇಂದಿಗೂ ಕೂಡ ನಮ್ಮ ಸಮಾಜದಲ್ಲಿ ಶಾ ಬಾನುವಿನಂತಹ ನೂರಾರು ಸಾವಿರಾರು ಜನರನ್ನು ನಾವು ಕಾಣುತ್ತಿದ್ದೇವೆ. ಒಂದಷ್ಟು ಪರಿಹಾರದ ಹಣವನ್ನು ನೀಡಿ ಕೈ ತೊಳೆಯುವ ಇಲ್ಲವೇ ಕೇಸನ್ನು ಮುಚ್ಚಿ ಹಾಕುವ ಮುನ್ನ ಸಾಮಾಜಿಕ ನ್ಯಾಯವನ್ನು ನಿರೀಕ್ಷಿಸುವ ಪ್ರತಿಯೊಬ್ಬರಿಗೂ ಅವರವರ ಧಾರ್ಮಿಕ, ಸಾಮಾಜಿಕ ನ್ಯಾಯಗಳು ದೊರೆಯಲೇಬೇಕು ಎಂಬ ಆಶಯದೊಂದಿಗೆ ವೀಣಾ ಹೇಮಂತ್ ಗೌಡ ಪಾಟೀಲ್

“ಒಂಟಿ ಧ್ವನಿಗೆ… ಜಂಟಿಯಾದ ನೂರಾರು ಧ್ವನಿಗಳು”ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

“ಸಾವಿರದ ಶರಣರು ಮಾಲಿಕೆ” ಗುರುವಿನ ಗುರು ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳು

ಶರಣರ ಸಂಗಾತಿ ಸಾವಿಲ್ಲದ ಶರಣರು ಶಶಿಕಾಂತ್‌ ಪಟ್ಟಣ ರಾಮದುರ್ಗಾ ಗುರುವಿನ ಗುರು ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳು  ಯಳಂದೂರು ಶ್ರೀ  ಬಸವಲಿಂಗ ಶಿವಯೋಗಿಗಳು ಚಾಮರಾಜನಗರ ಜಿಲ್ಲೆಯ ಕಾರಾಪುರದ ಗ್ರಾಮದ. ಮಧ್ಯಮ ವ್ಯಾಪಾರ ಕಾಯಕದ ಲಿಂಗಾಯತ ಬಣಜಿಗ ಕುಟುಂಬದಲ್ಲಿ ಜನಿಸಿದರು.  ಬಾಲ್ಯದಲ್ಲಿ ಶ್ರೀ ಯಳಂದೂರು ಬಸವಲಿಂಗ ಶಿವಯೋಗಿಗಳು ಶ್ರೀ ಸಿದ್ಧಾರೂಢರ ಕೃಪೆ ಕಟಾಕ್ಷಕ್ಕೆ ಒಳಗಾದರು. ಮುಂದೆ ಗದುಗಿನ ತೋಂಟದಾರ್ಯ ಮಠದ ಅಧಿಪತಿಯಾದರು.  ಒಬ್ಬ ಪ್ರಮುಖ ಲಿಂಗಾಯತ  ಆಧ್ಯಾತ್ಮಿಕ ನಾಯಕರು ಮತ್ತು ವ್ಯಕ್ತಿ, ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ ಗುರುಗಳು  ಮತ್ತು ಪೂಜ್ಯರು, ತಮ್ಮ ಆಧ್ಯಾತ್ಮಿಕ ಕೊಡುಗೆಗಳಿಂದ ಶ್ರೀ ಹಾನಗಲ್ ಕುಮಾರ ಸ್ವಾಮೀಜಿಗೆ ಚೈತನ್ಯ ದೀಕ್ಷೆ ನೀಡಿ ತಮ್ಮ ಬಳಿಗೆ 12 ವರುಷ ವಿದ್ಯಾರ್ಜನೆಗೆ ಇಟ್ಟು ಕೊಂಡಿದ್ದರು.  ಶ್ರೀ ಶಿವಯೋಗ ಮಂದಿರ ಮತ್ತು ಲಿಂಗಾಯತ  ಧರ್ಮದ ಬೆಳವಣಿಗೆಗೆ ಕಾರಣರಾದರು, ಇವರನ್ನು “ಗುರುವಿನ ಗುರು” ಎಂದು ಗೌರವಿಸಲಾಗುತ್ತದೆ.   *ಬದುಕು ಮತ್ತು  ಕೊಡುಗೆಗಳು:* _____________________ ಆಧ್ಯಾತ್ಮಿಕ ನಾಯಕತ್ವ: ಯಳಂದೂರು ತಾಲ್ಲೂಕಿನ ಕಾರಾಪುರ ವಿರಕ್ತಮಠದ ಪ್ರಮುಖ ಗುರುಗಳಾಗಿದ್ದರು. ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ ಗುರುಗಳಾಗಿ, ಅವರ ಆಧ್ಯಾತ್ಮಿಕ ಪರಂಪರೆಯನ್ನು ಮುಂದುವರಿಸಿದರು. ಮಹಾಸಭೆಯಲ್ಲಿ ಪಾತ್ರ: ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿ ಮಹಾಸಭೆಯ ಸ್ಥಾಪನೆ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಶ್ರೀ ಶಿವಯೋಗ ಮಂದಿರ:  ಶ್ರೀ ಶಿವಯೋಗ ಮಂದಿರದ ರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ಅವರ ಕೊಡುಗೆ ಮಹತ್ವದ್ದು. ಮಂದಿರದ ತಾಳೆ ಗ್ರಂಥಗಳ ರಕ್ಷಣೆ ಮತ್ತು ಗ್ರಂಥಾಲಯ ಸ್ಥಾಪನೆಯಲ್ಲಿ ಅವರ ಪ್ರಭಾವವಿತ್ತು. *ಧಾರ್ಮಿಕ ಮತ್ತು ಸಾಮಾಜಿಕ ಕೊಡುಗೆ:*  ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಾ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ನೀಡಿದರು.  , ಯಳಂದೂರು ಬಸವಲಿಂಗ ಶಿವಯೋಗಿಗಳು ಲಿಂಗಾಯತ  ಧರ್ಮದ ಜಾಗೃತಿ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಒಬ್ಬ ಮಹಾನ್ ಶಿವಯೋಗಿಗಳು.  ಪರಮ ಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳು. * *ಅಖಿಲ ಭಾರತ ವೀರಶೈವ ಮಹಾಸಭೆ ಸ್ಥಾಪನೆ*  ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆ  ಹಾನಗಲ್ಲ ಶ್ರೀ ಕುಮಾರಸ್ವಾಮಿಗಳು ಶ್ರೀ ಬಿದರಿ  ಸದಾಶಿವ ಮಹಾಸ್ವಾಮಿಗಳು  ಪರಮ ಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳು. ವೈರಾಗ್ಯದ ಮಲ್ಲಣ್ಣಾರ್ಯರ ನಿರಂತರ ಪ್ರಯತ್ನ ಮತ್ತು ವಾರದ ಮಲ್ಲಪ್ಪನವರ ಆರ್ಥಿಕ ಸಹಾಯ ಅರಟಾಳ ರುದ್ರಗೌಡರ ನಿರಂತರ ಯೋಜನೆ ಮುಖ್ಯ ಕಾರಣ.   *ಗುರುವಿನ ಗುರು ಶ್ರೀ ಯಳಂದೂರು ಬಸವಲಿಂಗ ಶಿವಯೋಗಿಗಳು* ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳು  ಕಾರಾಪುರ ವಿರಕ್ತಮಠ ಚಾಮರಾಜನಗರ ಜಿಲ್ಲೆ ಅಂದು ಶ್ರೀ  ಹಾನಗಲ್ ಕುಮಾರ ಸ್ವಾಮೀಜಿ ಅವರು  ಯಳಂದೂರು ಶ್ರೀ ಬಸವಲಿಂಗ  ಶಿವಯೋಗಿಗಳ ಲಿಂಗ ಹಸ್ತದಿಂದ ಗುರು ಕಾರುಣ್ಯ ಚೈತನ್ಯ ದೀಕ್ಷೆ ಪಡೆದರು. ಮುಂದೆ ಹಾನಗಲ್ ಶ್ರೀ  ಕುಮಾರ ಶಿವಯೋಗಿಗಳು ಶಿವಯೋಗ ಮಂದಿರ ನಿರ್ಮಾಣಕ್ಕೆ ಮುಂದಾಗಿ ತಮ್ಮ ದೀಕ್ಷಾ ಗುರುಗಳಾದ ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳ ಆಶ್ರಯಕ್ಕೆ ನಿಂತರು. ಶಿವಯೋಗ ಮಂದಿರದ ವಟುಗಳಿಗೆ ಶ್ರೀ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ ಸಾಕ್ಷಾತ್ ದೇವರು ಅರುವಿನ ಗುರು.ಹೀಗಾಗಿ  ಇಂತಹ ದೊಡ್ಡ ಕುಮಾರ ಶಿವಯೋಗಿಗಳ ಗುರುಗಳು ಭಕ್ತ ವರ್ಗದ ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳು   ಯಳಂದೂರು ತಾಲ್ಲೂಕಿನ ಶ್ರೀ ಕಾರಾಪುರ ವಿರಕ್ತಮಠವು ಕರ್ನಾಟಕ ಧಾರ್ಮಿಕ ಇತಿಹಾಸಕ್ಕೆ ಮಹತ್ತರ ಕೊಡುಗೆ ನೀಡಿದೆ  *ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳ ಲಿಂಗ ಸಮಾಧಿ* ಮೂವತ್ತಾರು  ವರ್ಷಗಳ ಹಿಂದೆ ನಾನು  ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳ ಚರಿತ್ರೆ ಹುಟ್ಟು ಬಾಲ್ಯ ಮತ್ತು ಅವರ ಶಿಷ್ಯ ಪರಂಪರೆಯನ್ನು ಹುಡುಕುತ್ತಾ ಮೊದಲು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠಕ್ಕೆ ಹೋಗಿದ್ದೆ. ಅಲ್ಲಿನ ಅನೇಕ ಹಿರಿಯರ ಮೌಖಿಕ ಚರ್ಚೆಗಳನ್ನು ಆಧರಿಸಿ ಗದಗ ತೋಂಟದಾರ್ಯ ಮಠದಲ್ಲಿ ಅವರ ಚರಿತ್ರೆಗೆ ಶೋಧ ನಡೆಸಿದೆ. ಆಶ್ಚರ್ಯ ಎಂದರೆ  ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳು ಗದಗ ತೋಂಟದಾರ್ಯ ಮಠದ ಜಗದ್ಗುರುಗಳಾಗಿದ್ದರು.  ಇವರ ಲಿಂಗೈಕ್ಯವಾದ ಸಮಾಧಿಯ ಕುರುಹು ನನಗೆ ಸಿಗಲಿಲ್ಲ ಆಗ ಒಬ್ಬ ವಯೋವೃದ್ಧರು ನನಗೆ ಸರ್ ಅಣ್ಣಿಗೇರಿಯಲ್ಲಿ ಒಬ್ಬ ಒಂದು ಲಿಂಗಾಯತ ಧರ್ಮದ ಗದ್ದುಗೆ ಇದೆಯೆಂದು ಹೇಳಿದರು. ಅವರ ಮಾತಿನ ಜಾಡು ಹಿಡಿದುಕೊಂಡು ಅಣ್ಣಿಗೇರಿಗೆ ಹೋಗುವ ಪ್ರಯತ್ನ ಮಾಡಿದೆ.  ನನ್ನ ತಾಯಿಯ ತವರು ಮನೆ ಮುಳುಗುಂದ ವಾಲಿ ಮನೆತನ. ಅಲ್ಲಿಂದ ನಾನು ಶ್ರೀ ಬಸವರಾಜ ವಾಲಿ ಎಂಬ ನನ್ನ ಮಾವನವರೊಂದಿಗೆ ಅಣ್ಣಿಗೇರಿಗೆ ಬಂದೆನು. ಆಗ ತೋಂಟದಾರ್ಯ ಮಠದ ಒಂದು ಗದ್ದುಗೆ ಕಣ್ಣಿಗೆ ಬಿತ್ತು. ಆ ಗದ್ದುಗೆಯ ಗುಡಿಯ ಸುತ್ತಲೂ ಕುರುಳು ಬೆರಣಿ ಉರುವಲು ತಟ್ಟುತ್ತಿದ್ದರು. ಅಣ್ಣಿಗೇರಿ ಗ್ರಾಮಸ್ಥರು ಇದು ನಮ್ಮ ಹಿಂದಿನ ಅಜ್ಜಾರ ಗದ್ದುಗೆ ಎಂದು ಹೇಳಿದರು. ಗ್ರಾಮೀಣ ಭಾಗದ ಜನರಿಗೆ ಅಷ್ಟೊಂದು ಹೆಸರುಗಳು ನೆನಪಿಗೆ ಇರಲಿಲ್ಲ. ಆಗ ನನಗೆ ಇವರು ಗದುಗಿನ ತೋಂಟದಾರ್ಯ ಮಠದ ಪರಂಪರೆ ಜಗದ್ಗುರು ಆಗಿದ್ದರು ಎಂಬ ಸಾಕ್ಷಿ ಸಿಕ್ಕಿತ್ತು. ಇದನ್ನು ಅವಲಂಬಿತವಾಗಿ ಇಟ್ಟು ಕೊಂಡು ಇದು ತೋಂಟದಾರ್ಯ ಮಠದ ಪರಂಪರೆ ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳ ಗದ್ದುಗೆ ಎಂದು ತೀರ್ಮಾನ ಮಾಡಲು ಅನುಕೂಲವಾಯಿತು. ಇದನ್ನು ಗದುಗಿನ ಅಂದಿನ ಜಗದ್ಗುರುಗಳು ಅಪ್ಪಟ ಬಸವ ಪ್ರೇಮಿ  ಶ್ರೀ ಡಾ ಸಿದ್ಧಲಿಂಗ ಸ್ವಾಮೀಜಿ ಅವರಿಗೆ  ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳ ಗದ್ದುಗೆ ವಿಷಯ ಪ್ರಸ್ತಾಪ ಮಾಡಿದೆ. ಆಗ ಶ್ರೀ ಡಾ ಸಿದ್ಧಲಿಂಗ ಸ್ವಾಮೀಜಿ ಅವರು ಅಣ್ಣಿಗೇರಿಯ ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳ ಗದ್ದುಗೆ ಸ್ವಚ್ಛ ಮಾಡಲು ಹೇಳಿ ಮುಂದೆ ಬೋರ್ಡ್ ಹಚ್ಚಿಸುವ ವ್ಯವಸ್ಥೆ ಮಾಡಿ ಐತಿಹಾಸಿಕ ಪ್ರಜ್ಞೆಯನ್ನು ಮೆರೆದರು. ಇದನ್ನು ಮುಂದೆ ತೋಂಟದಾರ್ಯ ಮಠದ ಶ್ರೀ ಎಸ್ ಎಸ್ ಪಟ್ಟಣಶೆಟ್ಟಿ ಆಡಳಿತಾಧಿಕಾರಿಗಳು ಅವರಿಗೆ ಹೇಳಿದ್ದು ನೆನಪಿದೆ. ಇದನ್ನು ಸ್ವತಃ  ಎಸ್ ಎಸ್ ಪಟ್ಟಣಶೆಟ್ಟಿ ಆಡಳಿತಾಧಿಕಾರಿಗಳು ನನಗೆ ಹೇಳಿದರು.  ಅಸ್ಪಷ್ಟವಾಗಿದ್ದ ಸಂಗತಿ ಮತ್ತು ಕೆಲವರಿಗೆ ಮಾತ್ರ ಗೊತ್ತಿದ್ದ ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳ ಗದ್ದುಗೆ ಅಧಿಕೃತವಾಗಿ ದಾಖಲಾಗುವಲ್ಲಿ ಲಿಂಗೈಕ್ಯ ಡಾ ಸಿದ್ಧಲಿಂಗ ಸ್ವಾಮಿಗಳು ಮತ್ತು ಅದನ್ನು ಮುಕ್ತ ಮನಸ್ಸಿನಿಂದ ಹೇಳಿಕೊಳ್ಳುತ್ತಿದ್ದರು. ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

“ಸಾವಿರದ ಶರಣರು ಮಾಲಿಕೆ” ಗುರುವಿನ ಗುರು ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳು Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಅಂಕಣ ಸಂಗಾತಿ ಧಾರಾವಾಹಿಕಂತು=106 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಪಾರಾಗಿ ಬಂದ ಮಕ್ಕಳು ತನ್ನನ್ನು ಬಲವಾಗಿ ಹಿಂದಿನಿಂದ ಹಿಡಿದುಕೊಂಡವನು ಯಾರೆಂದು ಅವಳಿಗೆ ಊಹಿಸಲು ಸಾಧ್ಯವಿರಲಿಲ್ಲ. ಈ ದಿನ ತನಗೆ ಆಪತ್ತು ಖಂಡಿತ ಹಾಗಾಗಿ ಹೇಗಾದರೂ ಮಾಡಿ ಇವನಿಂದ ಬಿಡಿಸಿಕೊಳ್ಳಬೇಕು. ಎಂದು ಮನದಲ್ಲೇ ಅಂದುಕೊಂಡು “ಕೃಷ್ಣಾ ನನಗೆ ಶಕ್ತಿ ಕೊಡು” ಎಂದು ಕೇಳಿಕೊಂಡಳು. ಕೈಯಲ್ಲಿ ಪುಸ್ತಕ ಹಾಗೂ ಮಡಚಿಟ್ಟಿದ್ದ ಕೊಡೆ ಇತ್ತು. ಅವಳು ಪುಸ್ತಕವನ್ನು ಎದೆಗಾನಿಸಿಕೊಂಡು ನಡೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಳು. ವಸ್ತ್ರವನ್ನು ಧರಿಸಿದ್ದರೂ ಶಲ್ಯವನ್ನು ಹೊದ್ದುಕೊಂಡಿದ್ದರೂ ಕ್ಯಾಮರಾ ಕಣ್ಣುಗಳಿಂದ ವಕ್ಷಸ್ಥಳವನ್ನೇ ದಿಟ್ಟಿಸಿ ನೋಡುವ ಲಂಪಟರ ನೋಟಕ್ಕೆ ಬೇಸತ್ತು ಪುಸ್ತಕವನ್ನು ಎದೆಗವಚಿಕೊಂಡು ನಡೆಯುತ್ತಿದ್ದಳು. ತನ್ನನ್ನು ಬಲವಾಗಿ ಹಿಡಿದುಕೊಂಡವನ ಕರಗಳಿಂದ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ಕೈಯಲ್ಲಿದ್ದ ಕೊಡೆಯ ಹಿಡಿಯಿಂದ ಬಲವಾಗಿ ಒತ್ತಿದಳು. ಬಹುಶಃ ಆತನಿಗೆ ಹೊಟ್ಟೆಗೆ ಏನೋ ಚುಚ್ಚಿದಂತ ಅನುಭವ ಆಗಿರಬೇಕು ಹಿಡಿತವನ್ನು ಸ್ವಲ್ಪ ಸಡಿಲಿಸಿದ. ಇದು ಗಮನಕ್ಕೆ ಬಂದ ಕೂಡಲೇ ಆ ಹುಡುಗಿ ಹಿಂತಿರುಗಿ ನೋಡದೆ ಮಡಚಿದ್ದ ಕೊಡೆಯನ್ನು ಹಿಡಿದುಕೊಂಡು ಅದರ ಹಿಡಿಯಿಂದ ಮತ್ತೊಮ್ಮೆ ಬಲವಾಗಿ ಹೊಟ್ಟೆಗೆ ಗುದ್ದಿದಳು. ಬಹುಶಃ ಅವಳನ್ನು ಹಿಡಿದುಕೊಂಡಾತ ಹೆಚ್ಚು ಎತ್ತರವಿಲ್ಲದವನಿದ್ದಿರಬೇಕು. ಅವನ ಮರ್ಮಾಂಗಕ್ಕೆ ಕೊಡೆಯ ಹಿಡಿಯ ಹೊಡೆತ ಬಲವಾಗಿ ಬಿದ್ದುದರಿಂದ ಅಮ್ಮಾ ಎಂದು ಜೋರಾಗಿ ಕಿರುಚಿಕೊಂಡು ಆತ ಅವಳನ್ನು ಬಿಟ್ಟು ನೆಲದ ಮೇಲೆ ದೊಪ್ಪನೆ ಕುಳಿತುಬಿಟ್ಟ.  ಆತನ ಸ್ನೇಹಿತ …”ಏನಾಯ್ತೋ ನಿನಗೆ”….ಎನ್ನುತ್ತಾ ಆತನನ್ನು ಹಿಡಿಯುವ ಪ್ರಯತ್ನ ಮಾಡಿದಾಗ ಟಾರ್ಚ್ ಕೈಯಿಂದ ಕೆಳಗೆ ಬಿದ್ದ ಸದ್ದು ಕೇಳಿಸಿತು. ಕೂಡಲೇ ಆ ಹುಡುಗಿ ಜಾಗ್ರತಳಾಗಿ ಪುಸ್ತಕವನ್ನೆಲ್ಲ ಅಲ್ಲಿ ಬಿಸಾಡಿ ತನ್ನ ತಂಗಿಯ ಕೈ ಹಿಡಿದು ಮಾತಾಡದೆ ಎಳೆದುಕೊಂಡು ನೆಲಗೇಟಿನ ಗ್ರಿಲ್ ಮೇಲೆ ಹೆಜ್ಜೆ ಇಟ್ಟು ವೇಗವಾಗಿ ಓಡಲು ಶುರು ಮಾಡಿದಳು. ತಂಗಿಯು ತನ್ನ ತೋಳಲ್ಲಿದ್ದ ಪುಸ್ತಕದ ಚೀಲವನ್ನು ಕೆಳಗೆ ಬಿಸಾಡಿ ಅಕ್ಕನೊಂದಿಗೆ ಓಡಿದಳು. ಎಲ್ಲಿ ತಮ್ಮ ಹಿಂದೆ ಅವರು ಬರುತ್ತಿವರೋ ಎಂದು ಹೆದರುತ್ತ ಎಷ್ಟು ಸಾಧ್ಯವೋ ಅಷ್ಟು ವೇಗದಲ್ಲಿ ಓಡುವ ಪ್ರಯತ್ನವನ್ನು ಮಾಡಿದರು. ಮಣ್ಣಿನ ಕಚ್ಚಾ ದಾರಿಯಲ್ಲಿ ಅಲ್ಲಲ್ಲಿ ಕಲ್ಲುಗಳು ಎದ್ದಿದ್ದವು. ಜೊತೆಗೆ ಕತ್ತಲು ಬೇರೆ, ಓಡುತ್ತಿರುವಾಗ ತಂಗಿ ಎಡವಿ ಬಿದ್ದಳು. ಬಿದ್ದ ತಂಗಿಯನ್ನು ಹಿಡಿದೆತ್ತಿ….”ಬಾ ಆದಷ್ಟು ಬೇಗ ಹೋಗೋಣ ….ಇಲ್ಲದಿದ್ದರೆ ನಮಗೆ ಆಪತ್ತು ಖಂಡಿತ”… ಎಂದಾಗ ಮಂಡಿ ತರಚಿ ಹೆಬ್ಬೆರಳು ಕೂಡ ನೋಯುತ್ತಿದ್ದರೂ ಅಕ್ಕನ ಮಾತಿಗೆ ಸರಿ ಎಂದು ಜೊತೆಗೆ ತಾನೂ ಓಡಿದಳು. ಇಳಿಜಾರು ದಾಟಿದ ನಂತರ ತಿರುವಿನ ಪಕ್ಕದಲ್ಲಿಯೇ ರೈಟರ್ ಮನೆ ಇತ್ತು. ಅಕ್ಕ ಓಡುತ್ತಲೇ ಹೋಗಿ ರೈಟರ್ ಮನೆಯ ಬಾಗಿಲನ್ನು ತಟ್ಟಿದಳು…” ಸರ್ ದಯವಿಟ್ಟು ಬಾಗಿಲು ತೆಗೆಯಿರಿ”… ಎಂದು ಜೋರಾಗಿ ಬಾಗಿಲನ್ನು ಬಡಿದಳು. ಆಗತಾನೆ ರಾತ್ರಿಯ ಊಟ ಮುಗಿಸಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲೆಂದು ಕುಳಿತಿದ್ದ ರೈಟರ್ ಬಾಗಿಲು ಜೋರಾಗಿ ಬಡಿಯುವ ಸದ್ದಿಗೆ ಬೇಗನೆ ಬಂದು ಬಾಗಿಲು ತೆರೆದರು. ನೋಡಿದರೆ ಸುಮತಿಯ ಇಬ್ಬರು ಮಕ್ಕಳೂ ಏದುಸಿರು ಬಿಡುತ್ತಾ ನಿಂತಿದ್ದರು. ಬಹಳ ಹೆದರಿದಂತೆ ಕಂಡರು.  “ಏನಾಯ್ತು ಮಕ್ಕಳೇ?…. ಯಾಕೆ ಹೀಗೆ ಹೆದರುತ್ತಾ ನಿಂತಿರುವಿರಿ?… ಎಂದು ರೈಟರ್ ಕೇಳಿದಾಗ ಹೇಳಲು ಬಾಯಿ ತೆರೆದಳಾದರೂ ಅವಳಿಂದ ಮಾತು ಬರಲಿಲ್ಲ ಬಾಯಿ ಒಣಗಿ ಹೋಗಿತ್ತು. ಅದನ್ನರಿತ ರೈಟರ್ ತನ್ನ ಪತ್ನಿಯನ್ನು ಕೂಗಿ ಸ್ವಲ್ಪ ನೀರು ತೆಗೆದುಕೊಂಡು ಬಾ ಎಂದು ಹೇಳಿದರು. ಒಂದು ಗುಟುಕು ನೀರು ಕುಡಿದ ಹುಡುಗಿ ನಡುಗುತ್ತಲೇ ಎಲ್ಲಾ ವಿವರವನ್ನು ತಿಳಿಸಿದಳು. ತಂಗಿಯು ಹೆದರಿ ಗಾಬರಿಯಿಂದ ನಿಂತಿದ್ದಳು ಜೊತೆಗೆ ಅವಳಿಗೆ ಕಾಲು ಕೂಡ ತುಂಬಾ ನೋಯುತ್ತಿತ್ತು. ಸುಮತಿಯ ಮಗಳ ಮಾತನ್ನು ಆಲಿಸಿದ ರೈಟರ್ ಒಳಗೆ ಹೋಗಿ ಟಾರ್ಚ್ ತಂದು…”ನಡೆಯಿರಿ ಮಕ್ಕಳೇ ನಾನು ನಿಮ್ಮ ಜೊತೆ ಬರುತ್ತೇನೆ…. ನೋಡೋಣ ನೆಲಗೀಟಿನ ಬಳಿ ಯಾರಿದ್ದರೆ ನೋಡೋಣ?….. ಎಂದು ಹೇಳುತ್ತಾ ಮಕ್ಕಳ ಜೊತೆ ಅವರು ಅಲ್ಲಿಯವರೆಗೆ ಹೋದರು. ಅಲ್ಲಿ ಯಾರೂ ಇರಲಿಲ್ಲ. ಬಹುಶಃ ತಮ್ಮಿಂದ ಬಿಡಿಸಿಕೊಂಡು ಓಡಿದ ಮಕ್ಕಳು ಯಾರನ್ನಾದರೂ ಕರೆದುಕೊಂಡು ಬರಬಹುದು ಎನ್ನುವ ಅರಿವಿದ್ದುದರಿಂದ ಅವರಿಬ್ಬರೂ ಅದಾಗಲೇ ಅಲ್ಲಿಂದ ಹೊರಟಿದ್ದರು. ಮಕ್ಕಳ ಪುಸ್ತಕ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಎಲ್ಲಾದರೂ ತೋಟದೊಳಗೆ ಅಡಗಿ ಕುಳಿತಿರಬಹುದು ಎನ್ನುವ ಗುಮಾನಿಯಿಂದ ರೈಟರ್ ಒಂದಷ್ಟು ದೂರದವರೆಗೂ ಟಾರ್ಚ್ ಲೈಟ್ ಹಾಕಿ ಹುಡುಕಿದರು. ಅಲ್ಲಿ ಯಾರೂ ಇರಲಿಲ್ಲ. ಮಕ್ಕಳಿಗೆ ಧೈರ್ಯ ಹೇಳುತ್ತಾ ಜೊತೆಗೆ ಕರೆದುಕೊಂಡು ಮನೆಯ ಕಡೆಗೆ ಹೊರಟರು. ರೈಟರ್ ಮನೆಯ ಒಂದು ತಿರುವಿನ ನಂತರವೇ ಸುಮತಿ ವಾಸಿಸುತ್ತಿದ್ದ ಮನೆ ಇದ್ದಿದ್ದು. ಹಾಗಾಗಿ ಮಕ್ಕಳು ರೈಟರ್ ರವರಿಗೆ ಧನ್ಯವಾದ ಹೇಳಿ ಅಲ್ಲಿಂದ ಹೊರಟರು. ಅಕ್ಕ ತಂಗಿಯರಿಬ್ಬರೂ ಆತಂಕದಲ್ಲಿದ್ದರು. ಯಾವುದೋ ಒಂದು ದುರ್ಘಟನೆಯಿಂದ ಕೂದಲೆಳೆಯಲ್ಲಿ ಪಾರಾದ ಸಮಾಧಾನವೂ ಇತ್ತು. ಮಕ್ಕಳು ಇಷ್ಟೊತ್ತಾದರೂ ಮನೆಗೆ ಬರದ ಕಾರಣ ಸುಮತಿ ಮನೆಯಿಂದ ಆಚೆ ಬಂದು ನಲ್ಲಿಯ ಕಟ್ಟೆಯ ಬಳಿ ನಿಂತು ದಾರಿಯೆಡೆಗೆ ನೋಡುತ್ತಿದ್ದಳು. ಎರಡು ನೆರಳು ತನ್ನಡೆಗೆ ಬರುತ್ತಿರುವುದು ಕಾಣಿಸಿತು. ಅಕ್ಕ-ತಂಗಿಯರಿಬ್ಬರು ದಾರಿಯಲ್ಲಿ ನಡೆದು ಬರುವಾಗ ನಗುತ್ತಾ, ತಮಾಷೆ ಮಾಡುತ್ತಾ ಬರುವವರು, ಇಂದು ಮೌನವಾಗಿ ನಡೆದು ಬರುತ್ತಿದ್ದರು. ಅವರ ಮೌನವನ್ನು ನೋಡಿ ಸುಮತಿ ತಾನು ಒಂದೆರಡು ಹೆಜ್ಜೆ ಮುಂದೆ ನಡೆದಳು. ಕತ್ತಲಿನಲ್ಲೂ ಅಮ್ಮನ ಆಕೃತಿ ಮಕ್ಕಳಿಗೆ ಗೋಚರಿಸಿತು. ಇಬ್ಬರೂ ಓಡೋಡಿ ಬಂದು ಅಮ್ಮನನ್ನು ಬಿಗಿಯಾಗಿ ಅಪ್ಪಿಕೊಂಡರು. ಮಕ್ಕಳ ಈ ಚರ್ಯೆ ಸುಮತಿಗೆ ಹೊಸದೆನಿಸಿತು. ಅವ್ಯಕ್ತ ಭಯವೊಂದು ಮನವನ್ನು ಕಾಡಿ ಗಾಬರಿಯಾದಳು….”ಏನಾಯ್ತು ಮಕ್ಕಳೇ, ಏಕೆ ಇಂದು ಇಷ್ಟು ಮೌನವಾಗಿದ್ದೀರಿ?!!.. ಎಂದು ಕೇಳಿದಾಗ ಎರಡನೇ ಮಗಳು ಸಣ್ಣಗೆ ಬಿಕ್ಕುತ್ತಿರುವುದು ಸುಮತಿಯ ಅರಿವಿಗೆ ಬಂತು. ಅವಳ ಬಿಕ್ಕುವಿಕೆ ಕೇಳಿ ಸುಮತಿಯ ಹೃದಯ ಸಣ್ಣಗೆ ನಡುಗಿತು. ಮೂರನೇ ಮಗಳು….,”ಅಮ್ಮಾ ಕಾಲು ನೋಯುತ್ತಿದೆ…. ನಡಿ ಬೇಗ ಮನೆಗೆ ಹೋಗೋಣ…. ಅಲ್ಲಿ ಹೋಗಿ ಮಾತನಾಡೋಣ”…. ಎಂದಳು. ಮಕ್ಕಳು ದಾರಿಯಲ್ಲಿ ಬಿದ್ದಿರಬಹುದು. ಹೆಚ್ಚು ಪೆಟ್ಟಾಗಿರಬಹುದು. ಹಾಗಾಗಿ ಎರಡನೇ ಮಗಳು ಬಿಕ್ಕುತ್ತಿರಬಹುದು. ಎಂದು ತಿಳಿದ ಸುಮತಿ….. “ಬನ್ನಿ ಮಕ್ಕಳೇ, ಅಡುಗೆ ಮಾಡಿದ್ದೇನೆ ಬಿಸಿಯಾದ ಊಟವನ್ನು ತಿನ್ನುವಿರಂತೆ”….ಎಂದು ಮೂರನೇ ಮಗಳ ಕೈ ಹಿಡಿದು ನಿಧಾನವಾಗಿ ಮೆಟ್ಟಲುಗಳನ್ನು ಇಳಿದಳು. ಎರಡನೇ ಮಗಳು ಬಿಕ್ಕುತ್ತಲೇ ಅವರಿಬ್ಬರನ್ನು ಹಿಂಬಾಲಿಸಿದಳು. 

Read Post »

ಅಂಕಣ ಸಂಗಾತಿ, ಭಾರತದಮಹಿಳಾ ಮುಖ್ಯಮಂತ್ರಿಗಳು

ಅಂಕಣ ಸಂಗಾತಿ
ಭಾರತದಮಹಿಳಾ ಮುಖ್ಯಮಂತ್ರಿಗಳು
ಸುರೇಖಾ ರಾಠೋಡ್

ಬಿಹಾರದ ಮೊದಲ ಮಹಿಳಾ ಮುಖ್ಯಮಂತ್ರಿ ರಾಬ್ರಿ ದೇವಿ
(ಅಧಿಕಾರ ಅವಧಿ: ೭ವರ್ಷ ೧೯೦ ದಿನಗಳು)

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಜಯದೇವಿ ತಾಯಿ ಲಿಗಾಡೆ
ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ
ಅವರಜೀವನಗಾಥೆ ಸವಿತಾ ದೇಶಮುಖ

Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ,”ಕನ್ನಡದ ಕಟ್ಟಾಳು ಗಡಿ ಕಾಯ್ದ ಯೋಧ ಡೆಪ್ಯೂಟಿ  ಚನ್ನಬಸಪ್ಪನವರು”-ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಶರಣ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ ಸಾವಿಲ್ಲದ ಶರಣರು ಮಾಲಿಕೆ, “ಕನ್ನಡದ ಕಟ್ಟಾಳು ಗಡಿ ಕಾಯ್ದ ಯೋಧ ಡೆಪ್ಯೂಟಿ  ಚನ್ನಬಸಪ್ಪನವರು”- ಕಿತ್ತೂರು ಸಂಸ್ಥಾನ ಪೇಶ್ವೆ ಮರಾಠರು ಹೀಗೆ ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳ ಸಾಂಸ್ಕೃತಿಕ ಸಂಬಂಧ ಹಲವು ಶತಮಾನಗಳಿಂದ ನಿರಂತರ ಸಾಗಿ ಬಂದಿವೆ. ಒಂದು ಅರ್ಥದಲ್ಲಿ ಮಹಾರಾಷ್ಟ್ರದ ಕುಲ ದೇವತೆ ಪಂಡರಾಪುರದ  ವಿಠ್ಠಲ ಹಂಪಿಯುವನು. ಹೀಗಾಗಿ ಮಹಾರಾಷ್ಟ್ರದ ಜನರು ಮತ್ತು  ವಾರಕರಿ ಪಂಥ ಈಗಲೂ ಕೂಡ ವಿಠಲನನ್ನು ಕಾನಡೋ ವಿಠ್ಠಲ.ಅಂದರೆ ಕನ್ನಡದ ವಿಠ್ಠಲ ಎನ್ನುತ್ತಾರೆ. ಅನೇಕ ಕರ್ನಾಟಕದ  ಅರಸು ಮನೆತನಗಳು  ಮಹಾರಾಷ್ಟ್ರದಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿವೆ.  ರಾಷ್ಟ್ರಕೂಟರ  ದಂತಿದುರ್ಗ ಅಜಂತಾ ಎಲ್ಲೋರ ಕೈಲಾಸ ದೇವಾಲಯವನ್ನು. ಮಹಾರಾಷ್ಟ್ರದಲ್ಲಿ ಸ್ಥಾಪಿಸಿದರು. ರಾಮದುರ್ಗ ನರಗುಂದ ಜಮಖಂಡಿ ಸಂಸ್ಥಾನಗಳನ್ನು ಮರಾಠಿ ಮೂಲದ ಕೊಂಕಣಿ ಬ್ರಾಹ್ಮಣರು ಸ್ಥಾಪಿಸಿದರು.ಮುಧೋಳ ಘೋರ್ಪಡೆ ಮನೆತನದ ಮರಾಠರು ಆಳಿದರು. ಹೀಗೆ ಮುಂದುವರೆದ ಕನ್ನಡ ಮರಾಠಿ ಭಾಷೆಗಳ ಸಾಂಸ್ಕೃತಿಕ ಸಂಬಂಧ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗೆ ಒಮ್ಮೆ ಕುತ್ತು ತರುವ ಹಾಗಾಯಿತು. ಇಂತಹ ಆಪತ್ತನ್ನು ಮುಕ್ತ ಗೊಳಿಸಿದ ದಿಟ್ಟ ಯೋಧ ಡೆಪ್ಯುಟಿ ಚೆನ್ನಬಸಪ್ಪನವರು. 19ನೆಯ ಶತಮಾನದ ಉತ್ತರಾರ್ಧವು ಮುಂಬೈ ಕರ್ನಾಟಕದಲ್ಲಿ ಮರಾಠಿಯ ಪ್ರಾಬಲ್ಯದ ಹಾಗೂ ಇಂಗ್ಲೀಷಿನ ಪ್ರಾರಂಭದ ಕಾಲ.  ಆಗ ಕನ್ನಡ ಭಾಷೆ, ಶಿಕ್ಷಣ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಮಹಾ ಕಾರ್ಯಕ್ಕೆ ನಾಂದಿ ಹಾಡಿದವರು ಡೆಪ್ಯುಟಿ ಚನ್ನಬಸಪ್ಪನವರು.  ಜನನ  ಚನ್ನಬಸಪ್ಪನವರು 1834 ವರ್ಷದ ನವೆಂಬರ್ 1ರಂದು ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ಜನಿಸಿದರು.  ತಂದೆ ಬಸಲಿಂಗಪ್ಪನವರು ಮತ್ತು ತಾಯಿ ತಿಮ್ಮಮ್ಮನವರು (ತಿಪ್ಪವ್ವ). ಚೆನ್ನಬಸಪ್ಪನವರ ತಂದೆಯವರು ತಮ್ಮ ಮನೆತನದ ಮೂಲ ಕಾಯಕವಾದ ವ್ಯಾಪಾರಕ್ಕಾಗಿ  ಧಾರವಾಡಕ್ಕೆ ಬಂದರು. ಶಿಕ್ಷಣ ಅವರ ಪ್ರಾರಂಭಿಕ ಶಿಕ್ಷಣ ನಡೆದಿದ್ದು ಧಾರವಾಡದಲ್ಲಿ.  ಕಲಿತದ್ದು ಕನ್ನಡ, ಮರಾಠಿ ಮತ್ತು ಗಣಿತ.  ಬಾಲಕ ಚನ್ನಬಸಪ್ಪನವರು ಇಂಗ್ಲಿಷ್ ಕಲಿಯುವ ಹಂಬಲದಿಂದ ಯಾರಿಗೂ ಹೇಳದೆ ಕೇಳದೆ, ಧಾರವಾಡದಿಂದ ಗೋಕಾಕಕ್ಕೆ ಬರಿಗಾಲಿನಿಂದ ನಡೆದುಕೊಂಡು ಹೋಗಿ ಅಲ್ಲಿ ತಮ್ಮ ಸಂಬಂಧಿಗಳ ಹತ್ತಿರ ಐವತ್ತು ರೂಪಾಯಿ ಕೂಡಿಸಿಕೊಂಡು ಮತ್ತೆ ಕಾಲ್ನಡಿಗೆಯಲ್ಲಿ   ಪುಣೆ ತಲುಪಿದರು. ಪುಣೆಯಲ್ಲಿ ಅವರಿಗೆ ಆಶ್ರಯ ನೀಡಿದವರು ಗೋವಿಂದರಾವ್ ಮೆಹಂಡಳೇಕರ ಅವರು. ಓದಿನಲ್ಲಿ ಪಾರಂಗತರೆನಿಸಿದ ಡೆಪ್ಯುಟಿ ಚೆನ್ನಬಸಪ್ಪನವರು ಅವರಿಗೆ  ಪ್ರತಿ ತಿಂಗಳೂ ಹತ್ತು ರೂಪಾಯಿ ವಿದ್ಯಾರ್ಥಿ ವೇತನ ಪಡೆಯುತ್ತಿದ್ದರಂತೆ.  ಅಂದಿನ ದಿನದಲ್ಲಿ ಕೆಲಸದಲ್ಲಿದ್ದವರಿಗೆ ಸಂಬಳ ಅಷ್ಟು ಬರುತಿದ್ದರೆ ಹೆಚ್ಚಿರುತ್ತಿದ್ದ ಕಾಲ.  ಈ ಸಮಯದಲ್ಲಿ ತಮ್ಮ  ತಾಯಿಯನ್ನು ತಮ್ಮ ಬಳಿ ವಾಸಕ್ಕೆ ಪುಣೆಗೆ ಕರೆಸಿಕೊಂಡಾಗ ತಿಪ್ಪಮ್ಮನಿಗೆ  ಅಪರಿಮಿತ ಸಂತೋಷ ಖುಷಿ ಆಗಿತ್ತು. ಚನ್ನಬಸಪ್ಪನಾವರು ಇಂಗ್ಲೆಂಡಿನಲ್ಲಿ ಅದೇ ತಾನೇ ತೆರೆದ ಕೂಪರ್ಸ್‌ಹಿಲ್ ಇಂಜಿನಿಯರಿಂಗ್ ಕಾಲೇಜಿಗೆ ಸೇರಲು ಆಯ್ಕೆಯಾದ ಐವರು ಪ್ರತಿಭಾವಂತ ವಿದ್ಯಾರ್ಥಿಗಳಲ್ಲೊಬ್ಬರಾಗಿದ್ದರು.  ದಾದಾಬಾಯಿ ನವರೋಜಿಯವರ ಈ ಯೋಜನೆ ಅಯಶಸ್ವಿಯಾಗಿ ಇಂಗ್ಲೆಂಡ್ ಪ್ರಯಾಣ ರದ್ದುಗೊಂಡಿತು.  ಆಗ ಅವರು ವಿಧಿಯಿಲ್ಲದೆ  1855ರಲ್ಲಿ ಮತ್ತೆ ಧಾರವಾಡಕ್ಕೆ ವಾಪಸ್ಸು ಬಂದರು.   ವೃತ್ತಿ ಜೀವನ ಕೆಲಕಾಲ ಅಂಚೆ ಕಚೇರಿಯಲ್ಲಿ ಕೆಲಸ ಮಾಡಿದರು.  ಅಷ್ಟರಲ್ಲಿ ಧಾರವಾಡದಲ್ಲಿ ನೂತನವಾಗಿ ಆರಂಭಗೊಂಡ ನಾರ್ಮಲ್ ಶಾಲೆಯ ಮುಖ್ಯೋಪಾಧ್ಯಾಯರಾಗಿ ಆಯ್ಕೆಗೊಂಡರು.  ಶಿಕ್ಷಣ ಇಲಾಖೆಯನ್ನು ಪ್ರವೇಶಿಸಿ 1861ರಲ್ಲಿ  ಬೆಳಗಾಂ ಜಿಲ್ಲೆಯ ಡೆಪ್ಯೂಟಿ ಇನ್‌ಸ್ಪೆಕ್ಟರೆನಿಸಿದರು.  ಹೀಗಾಗಿ ಅವರ ಹೆಸರಿಗೆ  ಡೆಪ್ಯೂಟಿ  ವಿಶೇಷಣ ಅಂಟಿಕೊಂಡಿತು.  ಚನ್ನಬಸಪ್ಪನವರು ಅಧಿಕಾರಕ್ಕೆ ಬರುವ ಮುನ್ನ ಧಾರವಾಡ, ಬೆಳಗಾವಿ, ಬಿಜಾಪುರ ಜಿಲ್ಲೆಯ ಕನ್ನಡ ಶಾಲೆಯ ಸಂಖ್ಯೆ ಕೇವಲ 34 ಇತ್ತು.  ಚನ್ನಬಸಪ್ಪನವರ ಹತ್ತು ವರುಷದ ಆಡಳಿತದಲ್ಲಿ ಕನ್ನಡ ಶಾಲೆಗಳ ಸಂಖ್ಯೆ 668ಕ್ಕೆ ಏರಿತು.  ಚನ್ನಬಸಪ್ಪನವರು, ತಮ್ಮ ಸ್ನೇಹಿತರಾದ  ರಾಮಚಂದ್ರ ಚುರಮುರಿ, ಗಂಗಾಧರ ಮಡಿವಾಳೇಶ್ವರ ತುರಮರಿ ಮೊದಲಾದ ಕನ್ನಡ ಭಕ್ತರಿಗೆ ಕನ್ನಡದಲ್ಲಿ ಗ್ರಂಥ ರಚಿಸಲು  ಪ್ರೇರಣೆ, ಪ್ರೋತ್ಸಾಹ, ಬೆಂಬಲಗಳನ್ನು ಒದಗಿಸಿದರು. ಸ್ವಯಂ ತಾವೇ ಪಠ್ಯ ಪುಸ್ತಕಗಳನ್ನು ರಚಿಸಿದರು.  ಉಚಿತ ವಿದ್ಯಾರ್ಥಿ ನಿಲಯದ ಸ್ಥಾಪನೆ  ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಚಿತ್ರದುರ್ಗದ ನಿರಂಜನ ಜಗದ್ಗುರು ಬೃಹನ್ಮಠದ ಮಹಾಲಿಂಗ ಸ್ವಾಮಿಗಳ ( ಶಿರಸಂಗಿ) ಮನವೊಲಿಸಿ ಬೆಳಗಾವಿಯಲ್ಲಿ ವೀರಶೈವ ಉಚಿತ ವಿದ್ಯಾರ್ಥಿನಿಲಯವನ್ನು ತೆರೆದರು. ಸ್ವಾಮಿಗಳ ನಿಧನಾನಂತರ ತಾವೇ ಇದರ  ಆರ್ಥಿಕ ಹೊಣೆ ಹೊತ್ತರು.  ಹೆಂಡತಿ ಮೈಮೇಲಿನ ನಗ, ಆಭರಣ ಒಡವೆ ಮಾರಿದರು. ಸಾಲದ ಬಾಧೆಗೆ  ಮನೆ-ಮಠಮಾರಿ ವಿದ್ಯಾರ್ಥಿ ನಿಲಯದ ನಿರ್ವಹಣೆ ಮಾಡಿದರಂತೆ. ಸಾಹಿತ್ಯ ಕೃತಿಗಳು ಚನ್ನಬಸಪ್ಪನವರು ‘ಕಾಮೆಡಿ ಆಫ್ ಎರರ್ಸ್‌’ (ನಗದವರನ್ನು ನಗಿಸುವ ಕಥೆ) ಮತ್ತು ‘ಮ್ಯಾಕ್‌ಬೆತ್’ ಕೃತಿಗಳನ್ನು ಪ್ರಕಟಿಸಿದರು. ‘ಮ್ಯಾಕ್‍ಬೆತ್’ ಕೃತಿಯ ಮೂಲಕ ಶೇಕ್ಸಪಿಯರ್ ಅನ್ನು ಮೊದಲು ಕನ್ನಡಕ್ಕೆ ತಂದವರು ಚನ್ನಬಸಪ್ಪನವರು. ಚನ್ನಬಸಪ್ಪಾ ಇವರು ಹುಟ್ಟು ಹಾಕಿದ ಮತ್ತು ಶತಮಾನೋತ್ಸವವನ್ನು ಆಚರಿಸಿದ ಕನ್ನಡದ ಏಕಮೇವ ಶೈಕ್ಷಣಿಕ ಮಾಸಿಕ “ಜೀವನ ಶಿಕ್ಷಣ” ಪತ್ರಿಕೆ. ಈ ಪತ್ರಿಕೆ ಸ್ಥಾಪಕರಾಗಿ ಹಲವು ಆರ್ಥಿಕ ಸಂಕಷ್ಟಕೆ ಈಡಾದರೂ  ಮಕ್ಕಳ ಕಲಿಕೆಗೆ ತಮ್ಮ ಸರ್ವಸ್ವವನ್ನು ಮಾರಿದ ಸದಾ ಸ್ಮರಣೀಯರು.  ಮಕ್ಕಳ ಶಿಕ್ಷಣಕ್ಕಾಗಿ ತಮ್ಮನ್ನೇ ಅರ್ಪಿಸಿಕೊಂಡಿದ್ದ ಚನ್ನಬಸಪ್ಪನವರಿಗೆ ಜೀವನವೇ ಶಿಕ್ಷಣ ಶಾಲೆಯಾಗಿದ್ದರಲ್ಲಿ ಅಚ್ಚರಿಯಿಲ್ಲ. ಡೆಪ್ಯುಟಿ ಚೆನ್ನಬಸಪ್ಪನವರು ಧಾರವಾಡ ಟಿಸಿಏಚ್ ಕಾಲೇಜನ್ನು ಸ್ಥಾಪಿಸಿ ಕನ್ನಡ ಶಾಲಾ ಶಿಕ್ಷಕರ ತರಬೇತಿ ಕೇಂದ್ರ ಸ್ಥಾಪಿಸಿ ಅದರ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದ ಮಹಾನುಭಾವರು. ಡೆಪ್ಯುಟಿ ಚನ್ನಬಸಪಪ್ನವರು 1881 ವರ್ಷದ ಜನವರಿ 4 ರಂದು ಈ ಲೋಕವನ್ನಗಲಿದರು.  1981 ವರ್ಷದಲ್ಲಿ ಚನ್ನಬಸಪ್ಪನವರು ನಿಧನರಾದ ನೂರು ವರ್ಷಗಳಾದ ಸಂದರ್ಭದಲ್ಲಿ ಡೆಪ್ಯೂಟಿ ಚನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನವನ್ನು ಸ್ಥಾಪಿಸಲಾಯಿತು. ಇದು ಪ್ರಾಥಮಿಕ ಶಿಕ್ಷಣ ಹಾಗೂ ಶಿಕ್ಷಕ ತರಬೇತಿ ರಂಗದಲ್ಲಿ ಕಾರ್ಯನಿರ್ವಹಿಸುವ ಸೇವಾಸಂಸ್ಥೆಯಾಗಿದೆ. ಕನ್ನಡದ ಪುನರುಜ್ಜೀವನ ಮತ್ತು ಶಿಕ್ಷಣ ಪ್ರಸಾರ ಕಾರ್ಯದ ಶಕಪುರುಷಕ್ಕಾಗಿ ತಮ್ಮನ್ನೇ ಅರ್ಪಿಸಿಕೊಂಡ ಡೆಪ್ಯೂಟಿ ಚನ್ನಬಸಪ್ಪನವರ ನೆನಪು ಎಲ್ಲಕಾಲಕ್ಕೂ ಸ್ಪೂರ್ತಿದಾಯಕ. ತಮ್ಮ ಬದುಕಿನ ಕೇವಲ 47 ನೆಯ  ವಯಸ್ಸಿನಲ್ಲಿ ಅಗಾಧವಾದ ಕಾರ್ಯ ಮಾಡಿ ಗಡಿ ನಾಡು ವಿಜಯಪುರ ಧಾರವಾಡ ಬೆಳಗಾವಿ ಕಾರವಾರ ಬೀದರ ಮುಂತಾದ ರಾಜ್ಯಗಳಲ್ಲಿ ಕನ್ನಡ ಶಾಲೆಗಳನ್ನು ತೆರೆದು ಕನ್ನಡವ ಉಳಿಸಿ ಬೆಳೆಸಿದ ಕನ್ನಡದ ಕಟ್ಟಾಳು ಮತ್ತು ಗಡಿ ರಕ್ಷಣೆಗೆ ನಿಂತ ದಿಟ್ಟ ಯೋಧರು. ಕರ್ನಾಟಕ ರಾಜ್ಯ ಸರ್ಕಾರ ಇವರ ಹೆಸರಿನಲ್ಲಿ ಪ್ರತಿಷ್ಠಾನ ಮಾಡಲಿ ಮತ್ತು ಕರ್ನಾಟಕ ವಿಶ್ವ ವಿದ್ಯಾಲಯದ ಆವರಣದಲ್ಲಿ ಡೆಪ್ಯುಟಿ ಚೆನ್ನಬಸಪ್ಪನವರ ಅಧ್ಯಯನ ಪೀಠ ತೆರೆಯ ಬೇಕು. ಅಪ್ಪಟ ಬಸವ ಭಕ್ತ ಲಿಂಗಾಯತ ಧರ್ಮದ ಅನುಯಾಯಿ ತಮ್ಮ ನಿಸ್ವಾರ್ಥ ಸೇವೆಗೆ ಕನ್ನಡಿಗರ ಮನದಲ್ಲಿ ಚಿರಾಯುವಾಗಿದ್ದಾರೆ. ಇಂತಹ ಶರಣರಿಗೆ ನಮ್ಮ ಭಕ್ತಿ ಪೂರ್ವಕ ಶತ ಕೋಟಿ ನಮನಗಳು. __________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಸಾವಿಲ್ಲದ ಶರಣರು ಮಾಲಿಕೆ,”ಕನ್ನಡದ ಕಟ್ಟಾಳು ಗಡಿ ಕಾಯ್ದ ಯೋಧ ಡೆಪ್ಯೂಟಿ  ಚನ್ನಬಸಪ್ಪನವರು”-ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ Read Post »

You cannot copy content of this page

Scroll to Top