ಕಾವ್ಯಯಾನ

ಅಂಬೇಡ್ಕರ್ ಸ್ವಗತ ಮಧುಕುಮಾರ ಸಿ ಎಚ್ ಯಾವುದು ಆಗಬಾರದೆಂದು ನಾ ಎಣಿಸಿದೆನೋ ಅದು ಆಗಿಯೇ ತೀರಿದೆ ಅದಕ್ಕಾಗಿ ವಿಷಾದಿಸುತ್ತೇನೆ. ವ್ಯಕ್ತಿಪೂಜೆ ಬೇಡವೆಂದ ಮಾತು ಹಳ್ಳ ಹಿಡಿದು ಇಲ್ಲಿ ಈ ದಿನ ಪ್ರತಿಮೆಗೆ ಹಾರ ತುರಾಯಿ ಹಾಕಿ ಜೈಕಾರ ಮೊಳಗಿಸಿ ಅಭಿಮಾನ ತೋರುವ ಆಚರಣೆ ವಿಜೃಂಭಣೆಯಿಂದಲೇ ನಡೆದಿದೆ. ನಾಲ್ಕು ತಿಂಗಳು ಕಳೆದ ಬಳಿಕ ಅಲ್ಲಲ್ಲಿ ‘ಗಣೇಶನ’ ಕೂರಿಸಿ ಮತ್ತದೇ ಹಾರ ತುರಾಯಿ ಹಾಕಿ ಜೈಕಾರ ಮೊಳಗಿಸಿ ಕುಡಿದು ಕುಣಿದು ಕುಪ್ಪಳಿಸುವುದು ತಪ್ಪದೇ ನಡೆಯುವುದಿದೆ. ಎಡ-ಬಲ ಎರಡೆರಡು ಹೋಳಾಗಿ ಒಳಗೊಳಗೊಂದು ಬಣ ಕಟ್ಟಿ ಒಣ ಪ್ರತಿಷ್ಟೆ ಹೆಚ್ಚಾಗಿ ಗದ್ದುಗೆಗಾಗಿ ಸ್ವಾಭಿಮಾನ ಬದಿಗೆ ತಳ್ಳುತ ಹಲ್ಲು ಕಿಸಿಯುವವರ ಮಧ್ಯೆ ಒಂದಷ್ಟು ಜನರ ಕೂಗಾಟ ಹೆಣಗಾಟ ಇದ್ದೇ ಇದೆ. ಅಂಟು ಜಾಡ್ಯದ ಮಂಕು ಕವಿದು ಮೇಲೆ ನಗು ಒಳಗೆ ಕಿಚ್ಚು ಒಬ್ಬರನ್ನೊಬ್ಬರು ಬೀಳಿಸುವ ಹುಚ್ಚು ಹೊಟ್ಟೆ ತುಂಬಿದವರಿಗೆ ನಿದ್ರೆಯ ಮಂಪರು ಹಸಿದವರಿಗೆ ನಿದ್ರೆ ಬಾರದ ತೊಡರು ಮುಂದೆ ಒಂದು ದಿನ ದೇಗುಲ ಕಟ್ಟಿ ಹಾಲು ಅಭಿಷೇಕ ಜಾತ್ರೆ ರಥೋತ್ಸವ ಅನ್ನಸಂತರ್ಪಣೆ ನೃತ್ಯ ಕಾರ್ಯಕ್ರಮ ಒಂದಷ್ಟು ಗುಣಗಾನ ಸನ್ಮಾನ ಮತ್ತಿನ್ನೇನೋ……? ********

ಕಾವ್ಯಯಾನ

ಬಾಬಾರವರ ನೆನಪಲ್ಲಿ ಹೆಚ್ ರಾಠೋಡ ಬಾಬಾ ನಿನ್ನ ನೆರಳಿನಲ್ಲಿಭರತಖಂಡ ನಡೆದಿದೆ ಶ್ರೇಷ್ಠ ಭಾರತದೇಶ ಎಂಬ ಹೆಗ್ಗಳಿಕೆಯು ಪಡೆದಿದೆ ಭರತ ಭೂಮಿ ನಿತ್ಯ ನಿನ್ನ ನೆನೆದು ಹೆಜ್ಜೆ ಇಡುತ್ತಿದೆ ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ಧನ್ಯ ಸಾರ್ಥಕತೆ ಮೆರೆದಿದೆ ನೀನುಹಾಕಿಕೊಟ್ಟ ದಾರಿಯಲ್ಲೇ ಇಂದು ದೇಶ ಸಾಗಿದೆ ನಿನ್ನ ಜ್ಞಾನ ಪಾಂಡಿತ್ಯಕ್ಕೆ ವಿಶ್ವವೇ ತಲೆದೂಗಿದೆ ಸಮಾನತೆಯ ಭಾವದಲ್ಲಿ ಸಂವಿಧಾನ ರಚಿಸಿದೆ ಶ್ರೇಷ್ಠ ಸಂವಿಧಾನ ರಚಿಸಿದ ಶಿಲ್ಪಿ ಎಂದೆನಿಸಿದೆ ಭಾರತೀಯರ ಎದೆಯಲ್ಲಿ ನಿನ್ನ ಪ್ರತಿಮೆ ನಿಂತಿದೆ ಅಂಬೇಡ್ಕರ್ ಎಂಬ ನಾಮ ಅಜರಾಮರವಾಗಿದೆ ಭೀಮನೆಂಬ ನಾಮ ಸ್ಮರಣೆ ನಾಲಿಗೆಯಲಿನಲಿತಿದೆ ದೀನ ದಲಿತರುಳವಿಗಾಗಿ ಕಾನೂನು ರೂಪ ನೀಡಿದೆ ಹಲವು ದೇಶ-ಕೋಶ ಓದಿ ಜ್ಞಾನ ಕಣಜ ಎನಿಸಿದೆ ಲೆಕ್ಕವಿಲ್ಲದಷ್ಟು ಪದವಿ ಪುರಸ್ಕಾರ ಗಳಿಸಿದೆ ತೋರು ಬೆರಳು ತೋರಿ ಪ್ರತಿಮೆ ಕೈ ಎತ್ತಿ ನಿಂತಿದೆ ತಮ್ಮ ಪಡೆದ ಭರತಮಾತೆ ವಿಶ್ವಮಾತೆಯ ಎನಿಸಿದೆ ಪುಟಕ್ಕಿಟ್ಟ ಬಂಗಾರವಾಗಿ ಭಾರತ ರತ್ನ ಎನಿಸಿದೆ ಸದಾ ಜೈ ಭೀಮ ಎಂಬ ಘೋಷವಾಕ್ಯ ಮೊಳಗಿದೆ ********

ಕಾವ್ಯಯಾನ

ಬಡವರ ಆಕರ ರಾಹು ಅಲಂದಾರ ಓ ಬಡವರ ಆಕಾರ ದೀನ ದಲಿತರ ಸಾಹುಕಾರ ಜಗಜ್ಯೋತಿ ಅಂಬೇಡ್ಕರ್ ಹಾಕುವೆ ನಿಮಗೆ ನಮಸ್ಕಾರ ಬಡವರ ಉತ್ತರಕ್ಕಾಗಿ ದುಡಿದೆ ದೀನ ದಲಿತರ ಹಿತಕ್ಕಾಗಿ ನಡೆದೆ ಸಮಾನತೆಯನ್ನೇ ನುಡಿದೆ ಜನತೆಯ ಏಳಿಗೆಗಾಗಿ ಮಡಿದೆ ರಚಿಸಿದೆ ನೀ ಸಂವಿಧಾನ ಆಯಿತು ಸರ್ವರಿಗೂ ಅನುದಾನ ಕನಸಿಟ್ಟೆ ನೀ ಎಲ್ಲರಲ್ಲೂ ಸಮಾನ ನಮಗೆಲ್ಲಾ ನೀ ಆಶಾಕಿರಣ ಉಳಿದೆ ಎಲ್ಲರ ಮನದಲ್ಲಿ ಸಮಾನತೆಯನ್ನೋ ಬೆಳಕು ಚೆಲ್ಲಿ ನೆನಪಿಸುವರು ಜನತೆ ಬಾಳಲ್ಲಿ ಹುಟ್ಟಿ ಬಾ ಇನ್ನೊಮ್ಮೆ ಜಗದಲ್ಲಿ **********

ಪ್ರಸ್ತುತ

ಡಾ.ಬಿ.ಆರ್.ಅಂಬೇಡ್ಕರ್..! ಎಲ್ಲಾ ಜನಾಂಗೀಯ ನಾಯಕ ಮತ್ತು ಸರ್ವರ ಅದರಲ್ಲೂ ದಲಿತರ ಏಳಿಗೆಗಾಗಿ ದುಡಿದ ಡಾ.ಬಿ.ಆರ್.ಅಂಬೇಡ್ಕರ್..! ಏಪ್ರಿಲ್ 14 ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ. ಆ ನಿಮಿತ್ತವಾಗಿ ಈ ಪುಟ್ಟ ಲೇಖನ… ಅಂದು ಆ ಬಾಲಕ ಅಸ್ಪೃಶ್ಯತೆ, ಬಡತನವನ್ನು ಮೆಟ್ಟಿ ನಿಂತು ವಿದ್ಯಾಭ್ಯಾಸ ಮಾಡದೆ ಹೋಗಿದ್ದರೆ ಇವತ್ತು ಈ ಅಖಂಡ ಭಾರತದಲ್ಲಿ ಮರೆಯಲಾರದ ಚೇತನವೊಂದು ಸೃಷ್ಟಿಯಾಗುತ್ತಿರಲಿಲ್ಲವೇನೋ? ಆ ಬಾಲಕ ಯಾರೆಂದು ಕ್ಷಣಮಾತ್ರದಲ್ಲಿ ಊಹಿಸಬಹುದು. ಅದೇ ಡಾ. ಬಿ.ಆರ್. ಅಂಬೇಡ್ಕರ್. ಈ ಹೆಸರು ಹೇಳುತ್ತಿದ್ದಂತೆಯೇ ಮೈ ರೋಮಾಂಚನಗೊಳ್ಳುತ್ತದೆ… ಭೀಮರಾವ್ ರಾಮ್‍ಜಿ ಅಂಬೇಡ್ಕರ್ ಅವರು ಬಾಲ್ಯದಲ್ಲಿ ಅನುಭವಿಸಿದ ನೋವುಗಳು ಒಂದೇ-ಎರಡೇ? ಅದನ್ನು ಹೇಳುತ್ತಾ ಹೋದರೆ ನಿಜಕ್ಕೂ ಮನಸ್ಸಿಗೆ ನೋವಾಗುತ್ತದೆ… ಆಗಿನ್ನೂ ಅಂಬೇಡ್ಕರ್ ಅವರಿಗೆ ಏಳೆಂಟು ವರ್ಷ. ಒಂದು ದಿನ ಆ ಪುಟ್ಟ ಬಾಲಕ ತನ್ನ ತಂದೆಯನ್ನು ನೋಡಲು ಎತ್ತಿನಗಾಡಿಯಲ್ಲಿ ಕುಳಿತು ಸಾಗುತ್ತಿದ್ದ. ಗಾಡಿ ಸ್ವಲ್ಪ ದೂರ ಹೋಗಿತ್ತು. ಎತ್ತಿನ ಗಾಡಿಯವನಿಗೆ ಆ ಹುಡುಗ ದಲಿತ ಎಂಬುದು ತಿಳಿದು ಕೂಡಲೇ ಗಾಡಿಯನ್ನು ನಿಲ್ಲಿಸಿ ಆ ಪುಟ್ಟ ಬಾಲಕನನ್ನು ಕೆಳಕ್ಕೆ ತಳ್ಳಿ ಮುಂದೆ ಸಾಗಿಬಿಟ್ಟ. ಆ ಕ್ಷಣ ಆ ಪುಟ್ಟ ಹುಡುಗನ ಮನಸ್ಸಿಗೆ ಅತ್ಯಂತ ಆಘಾತವಾಯಿತು… ಇನ್ನೊಮ್ಮೆ ಕೆರೆಯಲ್ಲಿ ನೀರು ಕುಡಿದ ಎಂಬ ಕಾರಣಕ್ಕೆ ಗ್ರಾಮಸ್ಥರೆಲ್ಲ ಸೇರಿ ಬಾಲಕನಿಗೆ ಥಳಿಸಿದರು. ಆಕಸ್ಮಿಕವಾಗಿ ಮಳೆ ಬಂದಿದ್ದರಿಂದ ರಸ್ತೆ ಬದಿಯಲ್ಲಿದ್ದ ಮನೆಯೊಂದರ ಜಗಲಿಯ ಮೇಲೆ ನಿಂತಿದ್ದಕ್ಕೆ ಮನೆಯ ಯಜಮಾನಿ ಕೋಪದಿಂದ ಜಗಲಿಯಿಂದ ತಳ್ಳಿದ್ದಳಂತೆ… ಕ್ಷೌರಿಕ ಕ್ಷೌರ ಮಾಡದೆ ಹಿಂದಕ್ಕೆ ಕಳುಹಿಸಿದ್ದನಂತೆ. ಹೀಗೆ ಒಂದೇ ಎರಡೇ? ನೂರಾರು ಅವಮಾನ, ಹಿಂಸೆ ಆ ಬಾಲಕನನ್ನು ಇನ್ನಿಲ್ಲದಂತೆ ಕಾಡಿದವು. ನಾವೂ ಮನುಷ್ಯರೇ, ಹಿಂದುಳಿದ ಜನಾಂಗದಲ್ಲಿ ಹುಟ್ಟಿದ್ದೇ ತಪ್ಪಾಯಿತಾ? ಎಂಬ ಭಾವನೆ ಆಗ ಆ ಬಾಲಕನನ್ನು ಕಾಡಿತ್ತು. ಅದಕ್ಕೆಲ್ಲಾ ಹೆದರಿ ಆ ಬಾಲಕ ಮುದುರಿ ಕೂತಿದ್ದರೆ ಇವತ್ತು ಜಗತ್ತೇ ಹೆಮ್ಮೆಯಿಂದ ಕೊಂಡಾಡುವ ಚೇತನವೊಂದು ಇರುತ್ತಿರಲಿಲ್ಲ… ಆದರೆ, ಎಲ್ಲವನ್ನೂ ಗೆದ್ದು ನಿಂತಿದ್ದರಿಂದಲೇ ಇವತ್ತು ದೇಶ ಮರೆಯಲಾರದ ಚೇತನವಾಗಿ, ಸಂವಿಧಾನಶಿಲ್ಪಿಯಾಗಿ ಡಾ.ಬಿ.ಆರ್. ಅಂಬೇಡ್ಕರ್ ನಿಲ್ಲುವಂತಾಯಿತು… ಡಾ.ಬಿ.ಆರ್.ಅಂಬೇಡ್ಕರ್ ಜನಿಸಿದ್ದು 1891ರ ಏಪ್ರಿಲ್ 14ರಂದು ಮಹರ್ ಎಂಬ ದಲಿತ ಜನಾಂಗದಲ್ಲಿ. ಮಹಾರಾಷ್ಟ್ರದ ರತ್ನಗಿರಿ ಜಿ¯್ಲÉಯ ಅಂಬವಾಡೆ ಗ್ರಾಮದಲ್ಲಿ ಸುಭೇದಾರ್ ರಾಮ್ಜೀ ಸಕ್ಬಾಲ್, ತಾಯಿ ಭೀಮಾಬಾಯಿ ಅವರ ಪುತ್ರರಾಗಿ ಜನಿಸಿದರು… ಅಂದಿನ ದಿನದಲ್ಲಿ ಕೆಳಜಾತಿಯ ಹುಡುಗನೊಬ್ಬ ಶಾಲೆಗೆ ಹೋಗಿ ಅಕ್ಷರ ಕಲಿಯುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಆದರೆ, ಅಂಬೇಡ್ಕರ್‍ರಿಗೆ ಚಿಕ್ಕಂದಿನಿಂದಲೇ ಓದಬೇಕು, ಏನನ್ನಾದರೂ ಸಾಧಿಸಬೇಕು ಎಂಬ ಛಲ ಇತ್ತು. ಇದಕ್ಕೆ ಹೆತ್ತವರು ನೀರೆರೆದು ಪೋಷಿಸಿದರು. ಇದರ ಜತೆಗೆ ಸಂಸ್ಕøತ ಕಲಿಯಬೇಕೆಂಬ ಮಹದಾಸೆಯಿತ್ತು. ಇದಕ್ಕೆ ಮೇಲ್ಜಾತಿಯವರು ಅಡ್ಡಿಪಡಿಸಿದರು. ಆದರೆ, ಇವರು ಬಗ್ಗಲಿಲ್ಲ… ಬದಲಿಗೆ ಹಠತೊಟ್ಟವರಂತೆ ಸಂಸ್ಕøತ ಕಲಿತು, ಅದರಲ್ಲಿ ಸಂಪೂರ್ಣ ಪಾಂಡಿತ್ಯಗಳಿಸಿ, ತಾವೇ ಹಲವಾರು ವಿಚಾರ ಕ್ರಾಂತಿ ಕೃತಿಗಳನ್ನು ರಚಿಸುವುದರ ಮೂಲಕ ಆಧುನಿಕ ಮನು ಎಂಬ ಕೀರ್ತಿಗೆ ಪಾತ್ರರಾದರು. ಇದನ್ನು ಮಾತ್ರ ಯಾರಿಂದಲೂ ತಡೆಯಲು ಸಾಧ್ಯವಾಗಲೇ ಇಲ್ಲ. ಏಕೆಂದರೆ ಹಠವಾದಿ ಅಂಬೇಡ್ಕರ್‍ರ ಭೀಮಶಕ್ತಿ ಅಂಥದ್ದು… 1907ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಅಂಬೇಡ್ಕರ್ ತೇರ್ಗಡೆಯಾದರು. ಅವರಿಗೆ ಆ ವರ್ಷವೇ ರಮಾಬಾಯಿಯೊಂದಿಗೆ ವಿವಾಹವಾಯಿತು. ಆ ನಂತರ ಅವರು ಮುಂಬೈನ ಎಲ್ಫಿನ್‍ಸ್ಟನ್ ಕಾಲೇಜಿನಲ್ಲಿ ಇಂಟರ್‍ಮೀಡಿಯಟ್ ಮುಗಿಸಿ 1921ರಲ್ಲಿ ಬಿಎ ಪದವೀಧರರಾದರು. ನಂತರ ಬರೋಡಾ ಮಹಾರಾಜರ ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡರು… ಆದರೆ, ಆಗ ಬರೋಡ ಮಹಾರಾಜರೇ ಇವರ ಬುದ್ಧಿಶಕ್ತಿಗೆ ಮಾರುಹೋಗಿ ವಿದೇಶದಲ್ಲಿ ವ್ಯಾಸಂಗ ಮಾಡಿ ಬಂದ ನಂತರ ತಮ್ಮ ಹತ್ತು ವರ್ಷಗಳ ಕಾಲ ಕೆಲಸ ಮಾಡಬೇಕೆಂಬ ಕರಾರಿನೊಂದಿಗೆ ಉನ್ನತ ವ್ಯಾಸಂಗಕ್ಕೆ ಅಂಬೇಡ್ಕರ್ ಅವರನ್ನು ಅಮೇರಿಕಾಕ್ಕೆ ಕಳುಹಿಸಿದರು… ಅಲ್ಲಿ ಎಂಎ ಪದವಿಯೊಡನೆ ಪಿಎಚ್‍ಡಿಯನ್ನು ಗಳಿಸಿ 1917ರ ಆಗ 21ರಂದು ಮತ್ತೆ ಭಾರತಕ್ಕೆ ಮರಳಿದರು. ಇಷ್ಟಾದರೂ ಅವರ ಶಿಕ್ಷಣ ದಾಹ ಇಂಗಿರಲಿಲ್ಲ. ಹಾಗಾಗಿ ಪುನಃ 1920ರಲ್ಲಿ ಮತ್ತಷ್ಟು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್‍ಗೆ ಹೋದ ಇವರು 1922ರಲ್ಲಿ ಬ್ಯಾರಿಸ್ಟರ್ ಎಂಬ ಪದವಿಯೊಡನೆ ಭಾರತಕ್ಕೆ ವಾಪಸಾದರು… ವಿದೇಶದಲ್ಲಿ ಕಲಿತು, ಒಂದು ಸಾಲದು ಅಂತ ಹಲವಾರು ಡಾಕ್ಟರೇಟ್ ಪದವಿಗಳನ್ನು ಗಳಿಸಿ ಅಂಬೇಡ್ಕರ್ ಅವರು ಸ್ವದೇಶಕ್ಕೆ ಬಂದಿದ್ದರೂ, ಇಲ್ಲಿ ಮಾತ್ರ ಅದೇ ಅಸ್ಪೃಶ್ಯತೆ ಅವರನ್ನು ಅಪಮಾನಿಸುತ್ತಿತ್ತು. ಆಗ ಅಂಬೇಡ್ಕರ್ ಮೂಕನಾಯಕ ಎಂಬ ಪತ್ರಿಕೆ ಆರಂಭಿಸಿ ಅದರ ಮುಖೇನ ಅಸ್ಪೃಶ್ಯತೆಯ ವಿರುದ್ಧ ಜನ ಜಾಗೃತಿಗೆ ನಿಂತರು… ಬಹಿಷ್ಕೃತ ಹಿತಕಾರಿಣಿ ಎಂಬ ಸಭಾದಂತಹ ಸಂಘಟನೆಗಳನ್ನು ಕಟ್ಟಿ ಅಸ್ಪೃಶ್ಯತೆ ವಿರುದ್ಧ ಸಮಾನತೆಗಾಗಿ ಬೀದಿಗಿಳಿದು ಹಲವು ಹೋರಾಟ ಮಾಡುವ ಮೂಲಕ ದಲಿತರ ಪಾಲಿಗೆ ಅಕ್ಷರಶಃ ತೋರುಬೆರಳಾಗಿದ್ದರು. ಇವರ ಚೌದರ್ ಕೆರೆ ಚಳವಳಿಯಂತೂ ಭಾರತದ ಇತಿಹಾಸದಲ್ಲಿ ದಾಖಲಿಸುವಂಥದ್ದು… ಹೀಗೆ ದಲಿತರ ಪರ ಕ್ರಾಂತಿ ಕಹಳೆ ಪ್ರಾರಂಭವಾಗಿ ನಿಧಾನವಾಗಿ ದೇಶದೆಲ್ಲಾಡೆ ಮೊಳಗತೊಡಗಿತು. ಈ ಸಂದರ್ಭದಲ್ಲಿ ಎರಡನೆ ಮಹಾಯುದ್ಧ ಪ್ರಾರಂಭವಾಗಿತ್ತು. ಆ ಸಂದರ್ಭದಲ್ಲಿ ಬ್ರಿಟಿಷರು ಕೆಲವು ಭಾರತೀಯರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಂಡಾಗ ಪ್ರಥಮ ಪ್ರಾಶಸ್ತ್ಯದಲ್ಲಿ ಅಂಬೇಡ್ಕರ್ ಅವರಿಗೆ ಸ್ಥಾನ ದೊರಕಿತ್ತು… ಭಾರತ ಸ್ವಾತಂತ್ರ್ಯ ಗಳಿಸಿದ ನಂತರ ನೆಹರೂ ಸರ್ಕಾರದಲ್ಲಿ ಪ್ರಥಮ ಕಾನೂನು ಸಚಿವರಾಗಿದ್ದ ಹೆಗ್ಗಳಿಕೆ ಹೊಂದಿದ್ದ ಅಂಬೇಡ್ಕರ್, ಭಾರತ ದೇಶಕ್ಕೆ ಸಶಕ್ತ ಸಂವಿಧಾನ ನೀಡಿದ ಶಿಲ್ಪಿಯಾದರು. ಇದು ಇಡೀ ವಿಶ್ವಕ್ಕೇ ಮಾದರಿ ಸಂವಿಧಾನವಾಗಿರುವುದು ಇವರಿಗೆ ಸಂದ ಮಹಾಗೌರವವೇ ಸರಿ… ಅಧಿಕಾರ ಇರಲಿ, ಇಲ್ಲದಿರಲಿ ಅಂಬೇಡ್ಕರ್ ಅವರು ಹೆಜ್ಜೆ ಇಟ್ಟಲ್ಲೆಲ್ಲಾ ಅಸ್ಪೃಶ್ಯತೆ ನಿವಾರಣೆಗಾಗಿಯೇ ಅವರ ಹೃದಯ ತುಡಿಯುತ್ತಿತ್ತು. ಅಂತೆಯೇ ದಲಿತರ ಪುರೋಭಿವೃದ್ಧಿಗಾಗಿಯೇ ಅವರ ಜೀವ ಸದಾ ಮಿಡಿಯುತ್ತಿತ್ತು. ಭಾರತ ದೇಶದಲ್ಲಿ ಅಂಬೇಡ್ಕರ್ ಎಂಬ ಕ್ರಾಂತಿ ಪುರುಷ ಜನಿಸಿದ್ದರಿಂದಲೇ ದೇಶದ ಅರ್ಧ ಭಾಗದಂತಿರುವ ಉತ್ತರ ಪ್ರದೇಶ ಕಾನ್ಷಿರಾಂರಂಥ ದಲಿತ ನಾಯಕನ ಹಿಡಿತಕ್ಕೆ ಸಿಕ್ಕಿದ್ದು. ಮಾಯಾವತಿಯಂತಹ ದಲಿತ ಮಹಿಳೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲು (ಈಗ ಮಾಜಿ) ಸಾಧ್ಯವಾದದ್ದು… ಅಂಬೇಡ್ಕರ್ ಅವರ ಇಡೀ ಜೀವನ ಅಸ್ಪೃಶ್ಯರೆನಿಸಿಕೊಂಡವರಿಗೆ ನ್ಯಾಯವನ್ನೂ, ಸಮಾನತೆಯನ್ನೂ ದೊರಕಿಸಿಕೊಡುವುದಕ್ಕೆ ಮುಡಿಪಾಗಿತ್ತು. ಇದರಲ್ಲಿ ಅವರು ಸಾಕಷ್ಟು ಯಶಸ್ಸನ್ನೂ ಸಾಧಿಸಿದ್ದರು. ಆದರೂ ಹಿಂದೂ ಧರ್ಮದ ಅಸಮಾನತೆಯಿಂದ ರೋಸಿಹೋಗಿದ್ದ ಅವರು ಬುದ್ಧನ ಕಾರುಣ್ಯದಲ್ಲಿ ಆಕರ್ಷಿತರಾಗಿ 1956ರ ಅಕ್ಟೋಬರ್ 14ರಂದು ನಾಗಪುರದಲ್ಲಿ ನಡೆದ ಬೃಹತ್ ಸಮಾರಂಭವೊಂದರಲ್ಲಿ ತಮ್ಮ ಪತ್ನಿ ಡಾ.ಶಾರದಾ ಸೇರಿದಂತೆ ತಮ್ಮ ಅಪಾರ ಅಭಿಮಾನಿಗಳೊಡನೆ ಬೌದ್ಧಧರ್ಮಕ್ಕೆ ಸೇರಿದರು… 1956ರ ಡಿಸೆಂಬರ್ 6ರಂದು ಇಡೀ ದೇಶವನ್ನು ಅನಾಥವಾಗಿಸಿ ಕಾಣದ ಊರಿನತ್ತ ಪಯಣಿಸಿದ ಅಂಬೇಡ್ಕರ್ ಅವರಿಗೆ ಮರಣೋತ್ತರವಾಗಿ ಭಾರತ ಸರ್ಕಾರ 1991ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಅಂಬೇಡ್ಕರ್ ಇಂದು ನಮ್ಮ ಮುಂದೆ ಇಲ್ಲದಿರಬಹುದು. ಆದರೆ, ಅವರು ಮಾಡಿದ ಮಹತ್ ಸಾಧನೆಯಿಂದ ನೆನಪಾಗುತ್ತಲೇ ಇರುತ್ತಾರೆ… ******* ಕೆ.ಶಿವು.ಲಕ್ಕಣ್ಣವರ

ಪುಸ್ತಕ

ಅಸಹಾಯಕ ಆತ್ಮಗಳು ಸಣ್ಣ ಕಥೆಗಳು ವೇಶ್ಯಾವಾಟಿಕೆಯ ನರಕದ ಬದುಕಿಗೆ ಯಾವ ಹೆಣ್ಣು ಮಗಳೂ ಸ್ವಇಚ್ಚೆಯಿಂದ ಅಡಿಯಿಡುವುದಿಲ್ಲ. ಬದುಕಿನ ಹಲವು ಅನಿವಾರ್ಯ ಘಟನೆಗಳು ಮತ್ತು ಅವರುಗಳ ಬದುಕಿನಲ್ಲಿ ಬರುವ ಅನಿರೀಕ್ಷಿತ ವ್ಯಕ್ತಿಗಳು ಅವರನ್ನು ವೇಶ್ಯಾವಾಟಿಕೆಯ ಕೂಪದೊಳಗೆ ಬೀಳುವಂತೆ ಮಾಡುತ್ತಿವೆ. ಇಂತಹ ಹತ್ತಾರು ಹೆಣ್ಣುಮಕ್ಕಳನ್ನು ಲೇಖಕರು ಖುದ್ದಾಗಿ ಭೇಟಿಯಾಗಿ ಅವರ ಬಾಯಿಂದಲೇ ಕೇಳಿ ತಿಳಿದ ಅವರ ಬದುಕಿನ ಕರುಣಾಜನಕ ಕತೆಗಳೇ ಈ ಪುಸ್ತಕದ ಒಳಗಿರುವ ಆತ್ಮಗಳು. ಪ್ರಿಯರೆ,ನನ್ನ ‘ಅಸಹಾಯಕ ಆತ್ಮಗಳು’ my lang ನಲ್ಲಿ e-book ರೂಪದಲ್ಲಿ ಪ್ರಕಟವಾಗಿದೆ.ಬೆಲೆ ಕೇವಲ99=00 ರೂಪಾಯಿಗಳು.ಪುಸ್ತಕ ಕೊಳ್ಳುವ ರೀತಿ.ನಿಮ್ಮಮೊಬೈಲಲ್ಲಿ mylang ಡೌನ್ ಲೋಡ್ ಮಾಡಿ ಲಾಗಿನ್ ಆಗಿ ನಿಮಗೆ ಅನುಕೂಲವಾದ ರೀತಿಯಲ್ಲಿ online ನಲ್ಲಿ ಹಣ ಸಂದಾಯ ಮಾಡಿ -ಪುಸ್ತಕ ಪಡೆಯಿರಿ.

ಕಾವ್ಯಯಾನ

ನನ್ನದಲ್ಲ ಬಿಡು ನೀ.ಶ್ರೀಶೈಲ ಹುಲ್ಲೂರು ಭಾರವಾದ ಹೆಜ್ಜೆಗಳಿಗೆ ಗೆಜ್ಜೆ ಏತಕೋ ನೊಂದುಬೆಂದ ಜೀವಕೀಗ ಅಂದವೇತಕೋ? ಕೋಪ ತಾಪ ಎಲ್ಲ ಬಿಡು ರೋಷವೇತಕೋ ನಮ್ಮ ಹಾಗೆ ಪರರ ತಿಳಿ ವಿರಸವೇತಕೋ? ನಮ್ಮ ನಡುವೆ ಕೊಳ್ಳಿ ಇಡುವ ಸುಳ್ಳು ಏತಕೋ ಅರಿತು ಬೆರೆವ ಮನಕೆ ಇರಿತ ದುರಿತವೇತಕೋ? ಅಳುವಿನಲೇ ನಲಿವ ಬದುಕು ಚಿಂತೆ ಏತಕೋ ನಾಕವಿಲ್ಲಿ ನರಕವಿಲ್ಲಿ ಕೊರಗು ಏತಕೋ? ನಾನು ನನದು ಎನುವ ಜನುಮ ಇನ್ನು ಏತಕೋ ಅವನ ಜೀವ ಅವನ ಕಾಯ ನನಗೆ ಏತಕೋ? *******

ಕಾವ್ಯಯಾನ

ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ನಾವೆಲ್ಲ ಕಂದಿಲ ಮಂದತೆಯಲಿ ಹೊಸ ಕನಸುಗಳ ಕಂಡಿರುವೆವು ಕತ್ತಲ ಕೂಪದಿಂದ ಹೊರಬರಲು ಕಂದಿಲು ಹಿಡಿದು ಬಂದಿರುವೆವು ನಾಳೆಗಳು ನಮಗೂ ಬರಬಹುದೆಂಬ ಹೊಸ ಆಸೆಯ ಹೊತ್ತು ಬದುಕು ಬೆಳಕಿನಾಟದಲಿ ಕಳೆದು ಹೋದ ದಿನಗಳ ನೊಂದಿರುವೆವು ಮರೆಯಲಾಗದು ಹಚ್ಚಿಟ್ಟ ಕಂದಿಲು ಆರುವ ಮುನ್ನ ಉಂಡ ದಿನಗಳ ಎಣ್ಣೆ ಮುಗಿದಿತೆಂಬ ಭಯದಿಂದ ದಿನವು ನೊಂದ್ದಿದ್ದು ಕಂಡಿರುವೆವು ಬಡತನ ಸಿರಿತನ ಹಂಗುಗಳಿಲ್ಲದ ಕಂದಿಲು ಕತ್ತಲೆಯ ಕಳೆದಿದೆ ಮುಸ್ಸಂಜೆಯ ಗುಡಿಸಲು ಅರಮನೆಗಳಲಿ ಚೆಲ್ಲುವುದ ನೋಡಿರುವೆವು ಭರವಸೆಯೊಂದಿಗೆ ಕರಿ ಕತ್ತಲೆಯ ಕಳೆದು ಬಿಡುವೇಯಾ ಸಾಕಿ ನಿನ್ನೊಂದಿಗೆ ನಮ್ಮ ಸಂಭಂಧ ಉಸಿರಿರುವ ತನಕ ಇರುವುದೆಂದು ನಂಬಿರುವೆವು ******

ಸ್ವಾತ್ಮಗತ

ಶರಣೆ ನೀಲಾಂಬಿಕೆ..! ವಿಶಿಷ್ಟ ದಿಟ್ಟ ನಿಲುವಿನ ಚಿಂತಕಿ, ಅನುಭಾವಿ ಶರಣೆ ನೀಲಾಂಬಿಕೆ..! ಹನ್ನೆರಡನೆಯ ಶತಮಾನದಲ್ಲಿ ಅನೇಕ ಶರಣರು, ಸಾಧಕರು ತಮ್ಮ ಅನುಭಾವದಿಂದ ಕಲ್ಯಾಣ ಕ್ರಾಂತಿಗೆ ಕೊಡುಗೆಯಾದವರು. ಅವರಲ್ಲಿ ವಿಶಿಷ್ಟ, ಪ್ರಮುಖ ಚಿಂತಕಿ, ಅನುಭಾವಿ ದಿಟ್ಟ ನಿಲುವಿನ ಶರಣೆ ನೀಲಾಂಬಿಕೆ. ನೀಲಮ್ಮ ಬಸವಣ್ಣನವರ ಎರಡನೆಯ ಹೆಂಡತಿ. ಮೊದಲ ಪತ್ನಿ ಸೋದರ ಮಾವ ಬಲದೇವರ ಮಗಳು. ನೀಲಾಂಬಿಕೆ, ನೀಲಲೋಚನೆ, ನೀಲಮ್ಮ, ಮಾಯಾದೇವಿ ಎಂತೆಲ್ಲ ಹೆಸರಿರುವ ನೀಲಮ್ಮನ ಅಪ್ಪ ಅಮ್ಮ ಇವರ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಹರಿಹರ ಮತ್ತು ಭೀಮ ಕವಿಗಳು ಬಸವಣ್ಣನವರ ಮಡದಿ ನೀಲಾಂಬಿಕೆಯವರನ್ನು ಮಾಯಿದೇವಿ ಎಂದೂ ಕರೆದಿದ್ದಾರೆ. ಅಲ್ಲದೆ ಹರಿಹರನು ಸಿದ್ಧರಸ ಮಂತ್ರಿಗಳ ಆಸ್ತಿಗೆ ಬಸವಣ್ಣನೇ ವಾರಸುದಾರರಾದವರು ಎಂದು ಹೇಳಿದ್ದಾನೆ. ಲಕ್ಕಣ್ಣ ದಂಡೇಶನು ನೀಲಮ್ಮ ಬಿಜ್ಜಳನ ತಂಗಿ ಎಂದು ಹೇಳಿದ್ದಾನೆ. ಬಿಜ್ಜಳನ ತಾಯಿ ಸತ್ತ ಮೇಲೆ ಬಿಜ್ಜಳ ಮತ್ತು ಆತನ ತಮ್ಮ ಕರ್ಣದೇವನು ಸಿದ್ಧರಸ ಮತ್ತು ಪದ್ಮಗಂಧಿಯವರ ಮನೆಯಲ್ಲಿ ಬೆಳೆದರು ಎನ್ನುವ ಐತಿಹಾಸಿಕ ಸಂಗತಿಗಳಿವೆ. ಹೀಗಾಗಿ ನೀಲಮ್ಮ ಬಿಜ್ಜಳನ ಸಾಕು ತಂಗಿ ಎಂದು ಗೊತ್ತಾಗುತ್ತದೆ. ಬ್ರಾಹ್ಮಣ ಕುಟುಂಬದ ಗಂಗಾಂಬಿಕೆಯವರಿಗಿಂತ ಜೈನ ಧರ್ಮದ ನೀಲಾಂಬಿಕೆಯವರ ವಚನ ರಚನಾ ಶೈಲಿ, ಅನುಭಾವ ಅರ್ಥಪೂರ್ಣ ಮತ್ತು ಪ್ರಭಾವಿಶಾಲಿಯಾಗಿವೆ… ಗಂಗಾಂಬಿಕೆಯವರಿಗೆ ಸಿದ್ಧರಸನೆಂಬ ಹಾಗೂ ನೀಲಾಂಬಿಕೆಯವರಿಗೆ ಬಾಲಸಂಗಯ್ಯನೆಂಬ ಮಕ್ಕಳಿದ್ದರೆಂದು, ಗಂಗಾಂಬಿಕೆಯವರ ಮಗ ಬಾಲ್ಯದಲ್ಲಿಯೇ ತೀರಿಕೊಂಡನೆಂದೂ ತಿಳಿದುಬರುತ್ತದೆ. ಅಂತೆಯೇ ಗಂಗಾಂಬಿಕೆಯವರನ್ನು ಸಂತೈಸುತ್ತ ಬಸವಣ್ಣನವರು, “ಅವಳ ಕಂದ ಬಾಲ ಸಂಗಾ ನಿನ್ನ ಕಂದ ಚೆನ್ನಲಿಂಗ” ಎಂದಿದ್ದಾರೆ. “ಪೃಥ್ವಿದಗ್ಗಳ ಚೆಲುವೆ ನೀಲಲೋಚನೆ” ಎಂದು ಒಂದೆಡೆ ತಮ್ಮ ಪತ್ನಿ ನೀಲಾಂಬಿಕೆಯವರ ಬಗ್ಗೆ ಹೇಳಿದ್ದಾರೆ… ನೀಲಾಂಬಿಕೆ ಬಸವಣ್ಣನವರ ವಿಚಾರ ಕ್ರಾಂತಿಯಲ್ಲಿ ಸಹಧರ್ಮಿಣಿ. ಗಂಗಾಂಬಿಕೆ ಆಶ್ರಯದಲ್ಲಿ ಬಾಲ ಸಂಗಯ್ಯ ಬೆಳೆಯುತ್ತಾ ಅವರನ್ನೇ ಹೆಚ್ಚು ಅವಲಂಬಿಸುತ್ತಾನೆ. ನೀಲಾಂಬಿಕೆ ಮಹಾಮನೆಯ ಎಲ್ಲ ವ್ಯವಹಾರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುತ್ತಾರೆ. ಮಹಾಮನೆಯ ದಾಸೋಹ ಪ್ರಸಾದ ಸಿದ್ಧಪಡಿಸುವುದು, ಜಂಗಮರ ಸೇವೆ ಒಟ್ಟಾರೆ ಬಸವಣ್ಣನವರ ಎಲ್ಲ ಕಾರ್ಯಗಳಲ್ಲಿ ಸಂಪೂರ್ಣ ತೊಡಗಿಸಿಕೊಂಡಿರುತ್ತಾರೆ. ಬಸವಣ್ಣನವರ ಜೀವನದಲ್ಲಿ ಇವರ ಪಾತ್ರ ಬಹು ದೊಡ್ಡದು. ಅವರ ಹೆಜ್ಜೆ ಹೆಜ್ಜೆಯಲ್ಲಿ ನೀಲಮ್ಮ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ… ವರ್ಣ ಸಂಕರದಿಂದ ಕಲ್ಯಾಣದ ಐಕ್ಯತೆಗೆ ಧಕ್ಕೆ ಬರ ಹತ್ತಿತು. ಬಸವಣ್ಣನವರು ಕಲ್ಯಾಣ ತೊರೆದು ಕೂಡಲ ಸಂಗಮಕ್ಕೆ ಪಯಣ ಬೆಳೆಸಿದರು. ಮುಂದೆ ಕೆಲ ದಿನಗಳಲ್ಲಿ ಅಸ್ಥಿರತೆ ಅರಾಜಕತೆ ವ್ಯಾಪಿಸಿತು. ಬಸವಣ್ಣನವರು ಹಡಪದ ಅಪ್ಪಣ್ಣನವರ ಮೂಲಕ ನೀಲಮ್ಮನವರನ್ನು ಕರೆದುಕೊಂಡು ಬರಲು ಆಜ್ಞಾಪಿಸುತ್ತಾರೆ. ಆಗ ನೀಲಮ್ಮ ಬಸವಣ್ಣನಂತಹ ಮಹಾ ಘನಮಹಿಮ ತನ್ನನ್ನು ಕೊನೆಗಳಿಗೆಯಲ್ಲಿ ಕೂಡಲ ಸಂಗಮಕ್ಕೆ ಕರೆ ಹೇಳಿದರೆ? ಎಂದು ಅವರನ್ನೇ ಪ್ರಶ್ನಿಸಿದ್ದಾರೆ. ಬಸವಣ್ಣನವರ ಅನುಭಾವವನ್ನು ಕಂಡು ವಿಚಾರಪತ್ನಿಯಾದೆನು ಎಂದು ಹೇಳಿಕೊಂಡಿದ್ದಾರೆ. ಅನುಭಾವದ ಎತ್ತರ ಮತ್ತು ಅಭಿವ್ಯಕ್ತಿಯ ಬಿತ್ತರವನ್ನು ಏಕಕಾಲಕ್ಕೆ ವ್ಯಕ್ತಗೊಳಿಸುವ ಕಾವ್ಯ ಕೌಶಲ್ಯ ಅನುಪಮವಾದದ್ದು. “ಮಾತಿನ ಹಂಗೇಕೆ ಮನವೇಕಾಂತದಲ್ಲಿ ನಿಂದಬಳಿಕ ” ಎಂದೆನ್ನುವ ನೀಲಮ್ಮ ತಾಯಿಯ ವಚನದಲ್ಲಿ ಬಸವಣ್ಣನವರ ಸ್ತುತಿ ವರ್ಣನೆ ಮತ್ತು ಅವರ ಅಗಲುವಿಕೆಯ ನೋವು ಕಳವಳ ಕಾಣಬಹುದು… ಕೊನೆಯ ಆ ದಿನಗಳು…– ಹರಳಯ್ಯನವರ ಮಗ ಶೀಲವಂತನಿಗೂ ಬ್ರಾಹ್ಮಣರ ಮಧುವರಸರ ಲಾವಣ್ಯಳಿಗೂ ಮದುವೆ ಏರ್ಪಟ್ಟಾಗ ಆದ ಜಾತಿ ಸಂಕರವು ಕಲ್ಯಾಣದಲ್ಲಿ ತಲ್ಲಣವನ್ನು ಹುಟ್ಟು ಹಾಕಿತು. ನಾರಾಯಣ ಕ್ರಮಿತ ಮತ್ತು ವಿಷ್ಣು ಭಟ್ಟರ ಕಪಟತನದಿಂದ ಬಸವಣ್ಣನವರಿಗೆ ಕಲ್ಯಾಣದಿಂದ ಗಡಿಪಾರು ಮಾಡುವ ಘೋರ ಶಿಕ್ಷೆಗೆ ಆದೇಶಿಸಲಾಗುವುದು. ಹಡಪದ ಅಪ್ಪಣ್ಣನವರ ಜೊತೆಗೆ ಕೂಡಲ ಸಂಗಮಕ್ಕೆ ಪ್ರಯಾಣ ಬೆಳೆಸಿದ ಬಸವಣ್ಣನವರು ಅತ್ಯಂತ ನೋವಿನಿಂದ ತಾವು ಮಾಡಿದ ಕ್ರಾಂತಿಯ ಕಲ್ಯಾಣವು ತಮ್ಮ ಕಣ್ಣ ಮುಂದೆಯೇ ಹಾಳಾಗುತ್ತಿರುವುದನ್ನು ನೋಡಿ ಮುಮ್ಮಲ ಮರುಗಿದರು. ಕೂಡಲ ಸಂಗಮದಲ್ಲೊಮ್ಮೆ ಹಡಪದ ಅಪ್ಪಣ್ಣವರನ್ನು ಕರೆದು ತಮ್ಮ ವಿಚಾರ ಪತ್ನಿ ನೀಲಮ್ಮನವರನ್ನು ಬರಹೇಳುತ್ತಾರೆ… ಕಲ್ಯಾಣಕ್ಕೆ ಬಂದ ಅಪ್ಪಣ್ಣನವರು ನೀಲಮ್ಮನವರಿಗೆ ಬಸವಣ್ಣನವರ ಇಂಗಿತವನ್ನು ಅರಹುತ್ತಾರೆ. ಆ ಸಂದರ್ಭದಲ್ಲಿ ನೀಲಮ್ಮನವರು ಹೇಳುವ ಈ ವಚನಗೀತೆ ತುಂಬಾ ಅರ್ಥಪೂರ್ಣವಾದುದು… “ನೋಡು ನೋಡು ನೋಡು ನೋಡು ಲಿಂಗವೇ ನೋಡು ಬಸವಯ್ಯನವರು ಮಾಡುವಾಟವ ಸಂಗಮಕ್ಕೆ ಬಸವಯ್ಯನವರು ನಮ್ಮನು ಬರ ಹೇಳಿದರಂತೆ. ಅಲ್ಲಿರುವ ಸಂಗಯ್ಯ ಇಲ್ಲಿಲ್ಲವೇ?” ಈ ವೈಚಾರಿಕ ದಿಟ್ಟತನಕ್ಕೆ ಅವರ ಈ ನಿಲುವೇ ಸಾಕ್ಷಿ. ಅಲ್ಲಿ ಇಲ್ಲಿ ಎಂಬ ಉಭಯ ಭಾವವು ಶರಣರಿಗೆ ಸಲ್ಲದು. ಅದೇ ರೀತಿ ನೀಲಮ್ಮ ತಾಯಿಯವರು ಈ ವಚನದಲ್ಲಿ ಹೀಗೆ ಹೇಳಿದ್ದಾರೆ: “ನಾನಾರ ಸಾರುವೆನೆಂದು ಚಿಂತಿಸಲೇತಕ್ಕಯ್ಯಾ ಬಸವಾ ? ನಾನಾರ ಹೊಂದುವೆನೆಂದು ಭ್ರಮೆಬಡಲೇತಕ್ಕಯ್ಯಾ ಬಸವಾ ? ನಾನಾರ ಇರವನರಿವೆನೆಂದು ಪ್ರಳಾಪಿಸಲೇತಕ್ಕಯ್ಯಾ ಬಸವಾ ? ಪರಿಣಾಮಮೂರ್ತಿ ಬಸವನರೂಪು ಎನ್ನ ಕರಸ್ಥಲದಲ್ಲಿ ಬೆಳಗಿದ ಬಳಿಕ ಸಂಗಯ್ಯನ ಹಂಗು ನಮಗೇತಕ್ಕಯ್ಯಾ ಬಸವಾ ?” ತಾನು ಯಾರನ್ನಾದರೂ ಸೇರುವೆನೆಂದು ಚಿಂತಿಸುವರೇ, ತಾನು ಯಾರನ್ನಾದರೂ ಹೊಂದುವೆನೆಂದು ಬಸವಣ್ಣನವರು ಅನುಮಾನ ಪಡುವರೇ ? ಯಾರಾದರೂ ಆಶ್ರಯದಲ್ಲಿ ಬಂಧನದಲ್ಲಿ ಇರುವೆನೆಂಬ ಪ್ರಲಾಪವು ಬಸವಣ್ಣನವರನ್ನು ಕಾಡುತ್ತಿರುವುದೇ? ಬಸವಣ್ಣನವರ ರೂಪವು ತನ್ನ ಕರಸ್ಥಲದಲ್ಲಿರಲು ಕೂಡಲ ಸಂಗಯ್ಯನ ಹಂಗೇಕೆ ಎಂದು ಪ್ರಶ್ನಿಸುತ್ತಾರೆ. ದೇವರ ಹಂಗೂ ತನಗಿಲ್ಲವೆಂಬ ಅವರ ಗಟ್ಟಿಮಾತು ಅಚ್ಚರಿ ಮೂಡಿಸುವಂತಿದೆ… ತಾನು ಬಿಜ್ಜಳನ ಕುಟುಂಬದವಳು ಎಂದು ಸೂಕ್ಷ್ಮವಾಗಿ ಹೇಳುತ್ತಾ: “ನಾಡನಾಳಹೋದರೆ, ಆ ನಾಡು ಆಳುವ ಒಡೆಯಂಗೆ ನಾಡೆ ಹಗೆಯಾಯಿತ್ತು. ಹಗೆಯಳಿದು ನಿಸ್ಸಂಗವಾಯಿತ್ತು. ನಿಸ್ಸಂಗ ವೇದ್ಯವಾಗಿ ಸಂಗಯ್ಯನಲ್ಲಿ ಮುಕ್ತಳಾದೆನು ನಾನು.” ನಾಡನ್ನು ಆಳ ಹೋದರೆ ಅದು, ಆ ನಾಡಿನ ಕೋಪಕ್ಕೆ ಕೆಂಗಣ್ಣಿಗೆ ಗುರಿಯಾಗಿ ನಾಡು ಹಾಳಾಯಿತ್ತು ಎಂದು ಬಿಜ್ಜಳನ ವೈಫಲ್ಯವನ್ನು ಎತ್ತಿ ತೋರುತ್ತಾರೆ. ಹಗೆಯು ಅಳಿದು ನಿಸ್ಸಂಗವಾಯಿತ್ತು, ಮುಂದೆ ನಿಸ್ಸಂಗವೇ ವೇದ್ಯವಾಗಿ ಸಂಗಯ್ಯನಲ್ಲಿ ಮುಕ್ತಳಾದೆನು ಎಂದು ಹೇಳಿದ್ದಾರೆ… ಕೊನೆಕಾಲದಲ್ಲಿ ಬಸವಣ್ಣನವರನ್ನು ಭೇಟಿಯಾಗಿ ಅವರ ಮುಂದಿನ ಗೊತ್ತು ಗುರಿಗಳನ್ನು ಅರಿತು ಅದರಂತೆ ಸಮಾಜ ಕಟ್ಟುವ ಕೆಲಸಕ್ಕೆ ಬದ್ಧಳಾಗಬೇಕೆಂದು ನೀಲಮ್ಮ, ಹಿರಿಯ ಶರಣ ಹಡಪದ ಅಪ್ಪನವರ ಜೊತೆಗೆ ಕೂಡಲ ಸಂಗಮಕ್ಕೆ ಪಯಣ ಬೆಳೆಸುತ್ತಾರೆ. ಆದರೆ ರಕ್ಕಸ ತಂಗಡಗಿ ಮುಟ್ಟುವಷ್ಟರಲ್ಲಿ ಬಸವಣ್ಣನವರು ಸಂಗಮದಲ್ಲಿ ಐಕ್ಯರಾದ ಸುದ್ದಿ ಬರ ಸಿಡಿಲಿನಂತೆ ಅಪ್ಪಳಿಸುತ್ತದೆ. ನೀಲಮ್ಮನವರಿಗೆ ಅಗಾಧ ನೋವು ಕಳವಳ ಆತಂಕವಾಗುತ್ತದೆ… “ನಾಡಿನ ಹೆಣ್ಣುಗಳೆಲ್ಲಾ ಬನ್ನಿರೆ ಅಕ್ಕಗಳಿರಾ, ಅಕ್ಕನರಸ ಬಸವಯ್ಯನು ಬಯಲ ಕಂಡು ಬಟ್ಟಬಯಲಾದನು. ಅಕ್ಕನರಸನಿಲ್ಲದೆ ನಿರಕ್ಕರನಾದನು ಬಸವಯ್ಯನು. ನಮ್ಮ ಸಂಗಯ್ಯನಲ್ಲಿ ಬಸವಯ್ಯನೈಕ್ಯ ಬಯಲಿಲ್ಲದ ಬಯಲು.” ಸ್ತ್ರೀ ಕುಲೋದ್ಧಾರಕ ಬಸವಣ್ಣನವರು ಐಕ್ಯವಾದ ಸುದ್ದಿಯನ್ನು ನೀಲಮ್ಮ ತನ್ನ ವಚನದಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ. ನಾಡಿನ ಅಕ್ಕ ತಂಗಿಯರೆಲ್ಲರನ್ನು ಕೂಗಿ ಕರೆಯುತ್ತಾರೆ. ನೋಡ ಬನ್ನಿ, ಅಕ್ಕನರಸ ಅಂದರೆ ಗಂಗಾಂಬಿಕೆಯ ಒಡೆಯ ಬಸವಣ್ಣನವರು ಬಯಲ ಕಂಡು ಬಟ್ಟ ಬಯಲಾದರು. ನಮ್ಮ ಸಂಗಯ್ಯನಲ್ಲಿ ಬಸವಣ್ಣನವರ ಐಕ್ಯವು ಬಯಲಿಲ್ಲದ ಬಯಲು ಎಂದು ನೋವಿನೊಂದಿಗೂ ಅಷ್ಟೇ ಆಧ್ಯಾತ್ಮಿಕ ಪ್ರಬುದ್ಧತೆಯನ್ನು ತೋರಿದ್ದಾರೆ. ಬಯಲಿಲ್ಲದ ಬಯಲು ಎಂದಿರುವುದು ಅವರ ಸ್ಥಿತ ಪ್ರಜ್ಞೆಗೆ ಸಾಕ್ಷಿಯಾಗುತ್ತದೆ… “ನಾನಾರ ಹೆಸರ ಕುರುಹಿಡಲಯ್ಯಾ ಬಸವಾ ? ನಾನಾರ ರೂಪ ನಿಜವಿಡಲಯ್ಯಾ ಬಸವಾ ? ನಾನಾರ ಮಾತ ನೆಲೆಗೊಳಿಸಲಯ್ಯಾ ಬಸವಾ ? ನಾನಾರ ಮನವನಂಗೈಸಲಯ್ಯಾ ಬಸವಾ ? ಎನ್ನ ಸುಖಾಕಾರಮೂರ್ತಿ ಬಸವನಡಗಿದಬಳಿಕ ಎನಗೆ ಹೆಸರಿಲ್ಲ. ರೂಪು ನಿರೂಪವಾಯಿತ್ತಯ್ಯಾ ಸಂಗಯ್ಯಾ, ಬಸವನಡಗಿದಬಳಿಕ.” ಬಸವಣ್ಣನವರು ಐಕ್ಯವಾದ ಬಳಿಕ ತಾನು ಯಾರ ಹೆಸರನ್ನು ಕೂಗಿ ಕರೆಯಲಿ, ಬಸವಣ್ಣನವರಿಲ್ಲದ ಬದುಕಿನಲ್ಲಿ ಯಾರ ಭಾವ ರೂಪವನ್ನು ನಿಜ ಮಾಡಲಿ, ಬಸವಣ್ಣನಿಲ್ಲದ ಜೀವನದಲ್ಲಿ ತಾನು ಯಾರ ಮಾತನ್ನು ನೆಲೆಗೊಳಿಸಲು ಸಾಧ್ಯ? ಬಸವಣ್ಣನವರೇ ತನ್ನ ಸರ್ವಸ್ವವಾದ ಕಾರಣ ತಾನು ಯಾರ ಮನವನ್ನು ಅಂಗೈಸಲಿ ಎಂದು ಕಳವಳ ವ್ಯಕ್ತ ಪಡಿಸುತ್ತಾ ತನ್ನ ಸಾಕಾರಮೂರ್ತಿ ಸುಖ ದುಃಖ ಹಂಚಿಕೊಂಡ ಮಹಾಮಣಿಹನಿಲ್ಲದ ಬಳಿಕ ತನಗೆ ಹೆಸರಿಲ್ಲ ತನ್ನ ರೂಪು ನಿರೂಪವಾಯಿತ್ತು ಸಂಗಯ್ಯನೊಳಗೆ ಬಸವನಡಗಿದ ಬಳಿಕ ಎಂದಿದ್ದಾರೆ ನೀಲಮ್ಮ… ಪರಿವರ್ತನೆಯ ಹರಿಕಾರ ಬಸವಣ್ಣನವರು ಕೂಡಲ ಸಂಗಮದಲ್ಲಿ ಐಕ್ಯವಾದ ನೋವನ್ನು ನೀಲಮ್ಮ ತಮ್ಮ ಇನ್ನೊಂದು ವಚನದಲ್ಲಿ ಅತ್ಯಂತ ಅರ್ಥಬದ್ಧವಾಗಿ, ಮಾರ್ಮಿಕವಾಗಿ ನಿರೂಪಿಸಿದ್ದಾರೆ: “ಬಸವನರಿವು ನಿರಾಧಾರವಾಗಿತ್ತು ಬಸವನ ಮಾಟ ನಿರ್ಮಾಟವಾಗಿತ್ತು ಬಸವನ ಭಕ್ತಿ ಬಯಲನೆ ಕೂಡಿ ನಿರ್ವಯಲಾಯಿತ್ತು ಬಸವಾ ಬಸವಾ ಬಸವಾ ಎಂಬ ಶಬ್ದವಡಗಿ ನಿಶಬ್ದವಾಯ್ತಯ್ಯ ಸಂಗಯ್ಯಾ.” ಬಸವಣ್ಣನವರು ಅನುಭಾವದ ನೆಲೆಯಲ್ಲಿ ನೀಡಿದ ಕಾಯಕ ದಾಸೋಹದ ಸಿದ್ಧಾಂತಗಳು, ಅವರು ನೀಡಿದ ಅರಿವು ನಿರಾಧಾರವಾಯಿತ್ತು. ಎಲ್ಲೆಡೆ ಶೂನ್ಯ ಭಾವ ಆವರಿಸಿತ್ತು. ಬಸವಣ್ಣನವರು ಕಲ್ಯಾಣವನ್ನು ಒಂದು ಸಮತೆಯ ಸುಂದರ ಮಾಟವನ್ನಾಗಿ ಮಾಡಿದ್ದರು. ಬಸವಣ್ಣನವರಿಲ್ಲದ ಕಾರಣ ಆ ಸುಂದರ ಮಾಟವು ನಿರ್ಮಾಟವಾಗಿತ್ತು. ಮಹಾಮನೆ ಹಾಳಾಯಿತ್ತು, ಅನುಭವ ಮಂಟಪವು ಬೆಂಕಿಗೆ ಗುರಿಯಾಗಿತ್ತು ಎಂದು ಸೂಕ್ಷ್ಮವಾಗಿ ಹೇಳುತ್ತಾರೆ. ಬಸವಣ್ಣನವರು ಭಕ್ತಿ ಮಾರ್ಗದಲ್ಲಿ ಧರ್ಮವನ್ನು ಕಟ್ಟಿ, ಬಯಲು ಶೂನ್ಯ ಮಹಾಬೆಳಗು ಚಿದ್ಬೆಳಕು ಎಂಬರ್ಥದಲ್ಲಿ ನಿರೂಪಿಸಿ ಸಾಧಿಸಿದವರು. ಅವರಿಲ್ಲದ ಕಾರಣ ಅವರ ಭಕ್ತಿ ಬಯಲೊಳಗೆ ಕೂಡಿ ನಿರ್ವಯಲಾಯಿತ್ತು. ಬಸವಣ್ಣನವರ ಧರ್ಮದ ಧ್ಯೇಯ ಉದ್ದೇಶಗಳು, ಸಮತೆಯ ಪರಿಕಲ್ಪನೆ ಹಾಳಾದವೇ ಎಂದು ಆತಂಕವನ್ನೂ ವ್ಯಕ್ತಪಡಿಸುತ್ತಾರೆ ನೀಲಮ್ಮ… ಕಲ್ಯಾಣದ ತುಂಬೆಲ್ಲ ಬಸವಾ ಬಸವಾ ಬಸವಾ ಎಂಬ ಶಬ್ದವು ಅಧಿಕವಾಗಿತ್ತು. ಬಸವಾಕ್ಷರಗಳೆ ಮಂತ್ರವಾಗಿತ್ತು. ಇಂತಹ ಬಸವಾ ಬಸವಾ ಎಂಬ ಶಬ್ದವು ಅಡಗಿ ನಿಶಬ್ದವಾಯಿತ್ತು ಸಂಗಯ್ಯಾ ಎಂದು ಸಾಂದರ್ಭಿಕವಾಗಿ ತನ್ನ ಅಳಲನ್ನು ತೋಡಿಕೊಂಡ ನೀಲಮ್ಮನವರಿಗೆ ಬಸವಣ್ಣನವರೇ ಕರಸ್ಥಲದ ಲಿಂಗವಾಗಿದ್ದರು. ಬಸವಣ್ಣನವರಿಲ್ಲದ ಬದುಕು ತನಗೂ ಬೇಡವೆಂದು ತೀರ್ಮಾನಿಸಿ ನದಿಯ ಆಚೆಗೆ ಬಸವಣ್ಣನವರು ಐಕ್ಯವಾದರೆ ನೀಲಮ್ಮನವರು ಹಡಪದ ಅಪ್ಪಣ್ಣನವರ ಜೊತೆ ನದಿಯ ಈಚೆಗೆ ಇಂದಿನ ಮುದ್ದೇಬಿಹಾಳ ತಾಲೂಕಿನ ತಾಳಿಕೋಟೆ ಬಳಿಯಿರುವ ರಕ್ಕಸ ತಂಗಡಗಿಯಲ್ಲಿ ಐಕ್ಯರಾಗುತ್ತಾರೆ… ಮಹಾ ನಿಲುವಿನ ದಿಟ್ಟ ಶರಣೆ ಕಲ್ಯಾಣದ ಕ್ರಾಂತಿಯಲ್ಲಿ ಅಚ್ಚು ಹಾಕಿದ ಹೆಸರು, ಮಹಿಳೆಯರಿಗೆ ಸ್ಫೂರ್ತಿ ಚೇತನವಾದ ಸಾಕ್ಷಿ ಪ್ರಜ್ಞೆಯಾಗಿದ್ದಾರೆ ನೀಲಮ್ಮ. ರಕ್ಕಸ ತಂಗಡಗಿಯಲ್ಲಿ ಅವರ ಗದ್ದುಗೆಯಿದೆ. ಜಂಗಮ ಜ್ಯೋತಿಗೆ ಅರಿವಿನ ಸಾಕಾರಕ್ಕೆ ಹಚ್ಚಿದ ಅಮರ ಜ್ಯೋತಿ ನೀಲಮ್ಮ..! (ಲೇಖನ ಸಹಾಯ– ಡಾ.ಶಶಿಕಾಂತ ಪಟ್ಡಣ) ******* ಕೆ.ಶಿವು.ಲಕ್ಕಣ್ಣವರ                                      

ಕಾವ್ಯಯಾನ

ಒಂದಲ್ಲ—— ಎರಡು ಸೌಜನ್ಯ ದತ್ತರಾಜ ಹೇಳುತ್ತಾರೆಲ್ಲರೂ ನಾನು ನೀನು ಒಂದೇ ಎಂದು ಹೌದೆನಿಸುತ್ತದೆ ನೋಡಲು ಎದುರಿಗೆ ಇಬ್ಬರಿಗೂ ಇದೆ ಎರಡು ಕಣ್ಣು’ ಒಂದು ಮೂಗು ಒಂದು ಬಾಯಿ ಆದರೆ ಬಾಯೊಳಗಿನ ಹಲ್ಲುಗಳ ಲೆಕ್ಕ ಸಿಗುತ್ತಿಲ್ಲ ಮೆದುಳೊಳಗಿನ ಹುಳುಕುಗಳದ್ದು ಸಹ. ಈಗ ಹೇಗೆ ಹೇಳುವುದು ಮತ್ತೆ ಮತ್ತೆ ನಾನು ನೀನು ಒಂದೇ ಎಂದು!? ನಾನು ನೀನೂ ಒಂದೇ ಎನ್ನುತ್ತಲೇ ಇಬ್ಬರೂ ಒಂದಾಗಿ ಎರಡಾದವರು ನಾವು!…. ಇಬ್ಬರೂ ಒಂದಾಗಿದ್ದಾಗ ಸುತ್ತಲಿನವರೆಲ್ಲಾ ಹೇಳಿದರು ಇಬ್ಬರೂ ಒಂದಲ್ಲ ಬೇರೆ ಬೇರೆ ಎಂದರು ಈಗ ಹೇಳುತ್ತಿದ್ದಾರೆ ಬೇರೆ ಬೇರೆಯಾದರೂ ನೀವಿಬ್ಬರೂ ಒಂದೇ ಎಂದು. ನಾನು ಒಪ್ಪಿಸಲಾರೆ ಜಗದ ಜನತೆಯನ್ನು ಸಹಿಸಲಾರೆ ನಿನ್ನೊಳಗಿನ ನಿರ್ದಯತೆಯನ್ನು ಈಗ ಹೇಳುತ್ತಿದ್ದೇನೆ ಕೂಗಿ ಕೂಗಿ ಕೇಳು ಜಗದ ಹಂಗು ತೊರೆದು’ ಬಿಗುಮಾನವನ್ನು ಬಗೆದು ನಾನು ನೀನು ಎಂದೆಂದಿಗೂ ಒಂದಲ್ಲ ಎರಡೆಂದು *****

ಕಾವ್ಯಯಾನ

ಬದಲಾಗದ ಕ್ಷಣಗಳು… ಶಾಲಿನಿ ಆರ್. ಬದಲಾಗದ ಕ್ಷಣಗಳು, ನೀ’ ಬಂದು ಹೋದ ಘಳಿಗೆಗಳು, ಅದೇ ಚಳಿಗಾಳಿಯ ಇರುಳುಗಳು, ಚಂದ್ರಿಕೆಯ ಸುರಿವ ಬೆಳದಿಂಗಳು, ನಿನ್ನರಸುವ ಕಣ್ಣರೆಪ್ಪೆಗಳು, ಹ್ಞಾಂ, ಕಣ್ಣಂಚಿನಾ ಕೊನೆಯಲಿ ಕಂಡು ಕಾಣದ್ಹಾಂಗೆ ಜಿನುಗಿದ ಹನಿಗಳು, ಮತ್ತೇನಿಲ್ಲ,! ಮೌನದುಯ್ಯಾಲೆಯಲಿ ಬಿಗಿದ ಕೊರಳು, ಒಣನಗೆ , ದಾಹ! ಅಷ್ಟೇ, ಸಂಜೆಯ ಚಳಿಗಾಳಿಯಿರುಳಲಿ ನೀ ನಡೆದ ದಾರಿಯುದ್ದಕ್ಕೂ ಮಂಜುಮುಸುಕಿದ ಧೂಳ ಕಣಗಳು, ಮನದಾಳದಲ್ಲಿ ಅಲ್ಲ, ಮತ್ತೆ! ಯಾವುದು ಬದಲಾಗಿಲ್ಲ ನೀ ಬಂದು ಹೋದ ಘಳಿಗೆಗಳು, ಅದೇ ಚಳಿಯ ಇರುಳುಗಳು, ಚಂದ್ರಿಕೆಯ ಸುರಿವ ಬೆಳದಿಂಗಳು, ಸುಳಿಯದ ನಿದಿರೆಯ ಹೊರತು! *******

Back To Top