ಅಂಬೇಡ್ಕರ್ ಸ್ವಗತ
ಮಧುಕುಮಾರ ಸಿ ಎಚ್
ಯಾವುದು ಆಗಬಾರದೆಂದು ನಾ ಎಣಿಸಿದೆನೋ ಅದು ಆಗಿಯೇ ತೀರಿದೆ
ಅದಕ್ಕಾಗಿ ವಿಷಾದಿಸುತ್ತೇನೆ.
ವ್ಯಕ್ತಿಪೂಜೆ ಬೇಡವೆಂದ ಮಾತು ಹಳ್ಳ ಹಿಡಿದು ಇಲ್ಲಿ ಈ ದಿನ
ಪ್ರತಿಮೆಗೆ ಹಾರ ತುರಾಯಿ ಹಾಕಿ
ಜೈಕಾರ ಮೊಳಗಿಸಿ
ಅಭಿಮಾನ ತೋರುವ ಆಚರಣೆ
ವಿಜೃಂಭಣೆಯಿಂದಲೇ ನಡೆದಿದೆ.
ನಾಲ್ಕು ತಿಂಗಳು ಕಳೆದ ಬಳಿಕ
ಅಲ್ಲಲ್ಲಿ
‘ಗಣೇಶನ’ ಕೂರಿಸಿ
ಮತ್ತದೇ ಹಾರ ತುರಾಯಿ ಹಾಕಿ
ಜೈಕಾರ ಮೊಳಗಿಸಿ
ಕುಡಿದು ಕುಣಿದು ಕುಪ್ಪಳಿಸುವುದು
ತಪ್ಪದೇ ನಡೆಯುವುದಿದೆ.
ಎಡ-ಬಲ ಎರಡೆರಡು ಹೋಳಾಗಿ
ಒಳಗೊಳಗೊಂದು ಬಣ ಕಟ್ಟಿ
ಒಣ ಪ್ರತಿಷ್ಟೆ ಹೆಚ್ಚಾಗಿ
ಗದ್ದುಗೆಗಾಗಿ ಸ್ವಾಭಿಮಾನ ಬದಿಗೆ ತಳ್ಳುತ
ಹಲ್ಲು ಕಿಸಿಯುವವರ ಮಧ್ಯೆ
ಒಂದಷ್ಟು ಜನರ ಕೂಗಾಟ ಹೆಣಗಾಟ
ಇದ್ದೇ ಇದೆ.
ಅಂಟು ಜಾಡ್ಯದ ಮಂಕು ಕವಿದು
ಮೇಲೆ ನಗು ಒಳಗೆ ಕಿಚ್ಚು
ಒಬ್ಬರನ್ನೊಬ್ಬರು ಬೀಳಿಸುವ ಹುಚ್ಚು
ಹೊಟ್ಟೆ ತುಂಬಿದವರಿಗೆ ನಿದ್ರೆಯ ಮಂಪರು
ಹಸಿದವರಿಗೆ ನಿದ್ರೆ ಬಾರದ ತೊಡರು
ಮುಂದೆ ಒಂದು ದಿನ
ದೇಗುಲ ಕಟ್ಟಿ
ಹಾಲು ಅಭಿಷೇಕ
ಜಾತ್ರೆ ರಥೋತ್ಸವ
ಅನ್ನಸಂತರ್ಪಣೆ
ನೃತ್ಯ ಕಾರ್ಯಕ್ರಮ
ಒಂದಷ್ಟು ಗುಣಗಾನ
ಸನ್ಮಾನ ಮತ್ತಿನ್ನೇನೋ……?
********