ಕಸಾಪಗೆ ಮಹಿಳಾ ಅಧ್ಯಕ್ಷರು

ಕರ್ನಾಟಕ ಸಾಹಿತ್ಯ ಪರಿಷತ್ ಎಂಬ ಹೆಸರಿನೊಂದಿಗೆ 1915 ರಲ್ಲೇ ಕನ್ನಡ ನಾಡು ನುಡಿಯ ರಕ್ಷಣೆ ಹಾಗೂ ಕನ್ನಡ ಲೇಖಕ ಲೇಖಕಿಯರನ್ನು ಪ್ರೋತ್ಸಾಹಿಸಲೆಂದೇ ಹುಟ್ಟಿಕೊಂಡ ಸಂಸ್ಥೆ, ನಂತರದಲ್ಲಿ 1935ರಲ್ಲಿ ಅರ್ಥಪೂರ್ಣವಾಗಿ ಕನ್ನಡ ಸಾಹಿತ್ಯ ಪರಿಷತ್ ಎಂದು ಮರು ನಾಮಕರಣಗೊಂಡಿದ್ದು ಕನ್ನಡ ಭಾಷೆಯ ಗರಿಮೆಗೆ ಸಾಕ್ಷಿ. ಇಲ್ಲಿಯವರೆಗೂ ಅನೇಕ ಕನ್ನಡ ಸಾಹಿತ್ಯ ಸಮ್ಮೇಳನಗಳು , ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಜರುಗುವುದರೊಂದಿಗೆ ಎಲ್ಲೆಡೆ ಕನ್ನಡ ಸಾಹಿತ್ಯದ ಘಮ ಪಸರಿಸಿದ ಹಿರಿಮೆ ಕನ್ನಡ ಸಾಹಿತ್ಯ ಪರಿಷತ್ ಗೆ ಸೇರಿದೆ ಎಂದರೆ ತಪ್ಪಾಗಲಾರದು. ಸುಮಾರು ನೂರು ವರ್ಷಗಳ ಕನ್ನಡ ಸಾಹಿತ್ಯ ಪರಿಷತ್ ನ ಯಾನದಲ್ಲಿ ಹೆಚ್.ವಿ.ನಂಜುಂಡಯ್ಯನವರಿಂದ ಮುಂದುವರಿದು ಮನು ಬಳಿಗಾರ್ ರವರೆಗೆ ಸರಿ ಸುಮಾರು ಇಪ್ಪತ್ತೈದು ಅಧ್ಯಕ್ಷರುಗಳನ್ನು ಕನ್ನಡ ಸಾಹಿತ್ಯ ಪರಿಷತ್ ಕಂಡಿದೆ. ಮುಖ್ಯವಾಗಿ ಕನ್ನಡದ ಮಹಿಳಾ ಸಾಹಿತಿಗಳಿಗೆ ಪ್ರೋತ್ಸಾಹ ನೀಡಿ ಮಹಿಳಾ ದನಿಗಳನ್ನು ಎತ್ತರಿಸುವ ಉದ್ದೇಶ ಹೊಂದಿದ ಪರಿಷತ್ ನಲ್ಲಿ ಈವರೆಗೂ ಒಬ್ಬ ಮಹಿಳಾ ಸಾಹಿತಿ ಅಧ್ಯಕ್ಷರ ಗಾದಿ ಏರದಿರುವುದು ಕನ್ನಡ ಸಾಹಿತ್ಯ ಪರಿಷತ್ ನ ಕಪ್ಪು ಚುಕ್ಕೆ ಎಂದರೆ ತಪ್ಪಾಗಲಾರದು. ಇಷ್ಟಕ್ಕೂ ನಮ್ಮ ಕನ್ನಡ ನಾಡಿನ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳಾ ದನಿಗಳ ಕೊರತೆಯುಂಟೇ ಎನ್ನುವುದನ್ನೊಮ್ಮೆ ಒರೆ ಹಚ್ಚಿ ನೋಡಬೇಕಾಗಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಇತ್ತೀಚಿನದ್ದೇನಲ್ಲ ಸರಿಸುಮಾರು 1500 ವರ್ಷಗಳ ಹಿಂದಿನಿಂದಲೇ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯ ಗುರುತುಗಳಿವೆ. ಹನ್ನೆರಡನೆಯ ಶತಮಾನದ ವಚನಕಾಲದಲ್ಲಿ ಮೊದಲ ಬಂಡಾಯ ಲೇಖಕಿಯಾಗಿ ಅಕ್ಕಮಹಾದೇವಿ ಕಂಡುಬಂದರೂ ಸಹ ಅವರೊಟ್ಟಿಗೆ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಸುಮಾರು ಮೂವತ್ತಾರು ವಚನಕಾರ್ತಿಯರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮೆರಗು ತುಂಬಿದವರೇ, ವಿಶೇಷವೆಂದರೆ ಈ ಕಾಲಘಟ್ಟದಲ್ಲಿ ದಲಿತ ಸ್ತ್ರೀಯರಾದ ಸಂಕವ್ವೆ ಗುಡ್ಡವ್ವೆ ಕೇತಲದೇವಿಯಂತವರೂ ವಚನ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ನೀಡುವುದರೊಂದಿಗೆ ದಲಿತಸಾಹಿತ್ಯದ ದನಿಯಾಗಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ಸಾರ್ವಜನಿಕ ಜೀವನಕ್ಕೆ ತೆರೆದುಕೊಳ್ಳಲಾರದ ಮಹಿಳೆಯರು ಮುಖ್ಯವಾಹಿನಿಗೆ ಬರುವುದು ತಡವಾಯಿತಾದರೂ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ತಮ್ಮದೇ ಛಾಪು ಮೂಡಿಸಿದ್ದಾರೆ. ಪುರುಷ ಪ್ರಧಾನ ಸಮಾಜವನ್ನು ಪ್ರಶ್ನಿಸುವುದರೊಂದಿಗೆ ಸಾಹಿತ್ಯ ಸೃಷ್ಟಿ ಸಾಂಸ್ಕೃತಿಕ ಬದಲಾವಣೆಗೆ ಲೇಖಕಿಯರು ಕಾರಣರಾಗಿದ್ದಾರೆ. ದಾಸ ಸಾಹಿತ್ಯದಲ್ಲೂ ಮಹಿಳೆಯರು ರಚಿಸಿದ ಕೀರ್ತನೆಗಳ ಕುರುಹಿದೆ. ಜನಪದ ಗೀತೆಗಳ ರಚನೆಯಲ್ಲಿ ಮಹಿಳೆಯರ ಪಾತ್ರ ಮಹತ್ತರವಾದುದು ಎಂದರೆ ತಪ್ಪಾಗಲಾರದು. ಕಾಲದಿಂದಲೂ ಪುರುಷ ಪ್ರಧಾನ ವ್ಯವಸ್ಥೆಯಡಿ ಮರೆಯಾಗಿದ್ದಂತಹ ಬಹಳಷ್ಟು ಲೇಖಕಿಯರ ನಡುವೆ ಇಪ್ಪತ್ತನೆಯ ಶತಮಾನದಲ್ಲಿ ಮುಕ್ತವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಪುರುಷ ಪ್ರಾಬಲ್ಯವುಳ್ಳ ಕನ್ನಡ ಸಾಹಿತ್ಯ ಲೋಕದಲ್ಲಿ ತ್ರಿವೇಣಿ ಇಂದಿರಾ ರಂತಹ ಕಾದಂಬರಿಗಾರ್ತಿಯರು ಮಿನುಗು ಚುಕ್ಕೆಯಂತೆ ಮಿನುಗಿದ್ದಾರೆ. 1970ರ ನಂತರ ದಲಿತ ಸಾಹಿತ್ಯದ ರಚನೆಯಲ್ಲಿ ತೊಡಗಿಸಿಕೊಂಡಿರುವ ಲೇಖಕಿಯರಾದ ಗೀತಾ ನಾಗಭೂಷಣ, ಅನುಪಮಾ ನಿರಂಜನ್ ಮುಂತಾದವರನ್ನು ಕಾಣಬಹುದು, ಸ್ತ್ರೀ ಸಮಾನತೆ ಎತ್ತಿ ಹಿಡಿದು, ಸ್ತ್ರೀ ಶೋಷಣೆಗಳ ವಿರುದ್ಧ ಲೇಖನಿಯಾಗಿರುವ ಅನೇಕ ಮಹಿಳಾ ಲೇಖಕಿಯರು ಕವಯಿತ್ರಿಯರು ನಮ್ಮ ನಡುವೆ ಇದ್ದಾರೆ. ಕನ್ನಡ ಸಾಹಿತ್ಯಕ್ಕೆ ಇಷ್ಟೆಲ್ಲಾ ಕೊಡುಗೆ ನೀಡಿರುವ ಮಹಿಳೆಯರು ಇದ್ದಾಗಿಯೂ ಸಹ ಕನ್ನಡ ಸಾಹಿತ್ಯ ಪರಿಷತ್ ಮಹಿಳೆಯರಿಗೆ ಸ್ಥಾನಮಾನ ದೊರಕಿಕೊಡದಿರುವುದು ವಿಷಾದನೀಯ. 1985ರಲ್ಲೇ ಸರೋಜಿನಿ ಮಹಿಷಿಯವರು ಮಹಿಳೆಯರಿಗಾಗಿಯೇ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಸಿ ಮಹಿಳಾ ಸಾಹಿತಿಗಳಿಗೆ ಪ್ರೋತ್ಸಾಹಿಸುವ ಕೆಲಸ ಮಾಡಿರುವುದು ಪ್ರಶಂಸಾರ್ಹ. ಇದೆಲ್ಲದರ ನಡುವೆಯೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಾದಿಗೆ ಮಹಿಳೆಯರನ್ನು ಕಡೆಗಣಿಸಿರುವುದು ಕನ್ನಡ ಸಾಹಿತ್ಯದಲ್ಲಿ ಪುರುಷರ ಪ್ರಾಬಲ್ಯವನ್ನು ಎತ್ತಿ ತೋರಿಸಿದೆ. ನೂರು ವರ್ಷಗಳನ್ನು ಪೂರೈಸಿರುವ ನಮ್ಮ ಕನ್ನಡ ಸಾಹಿತ್ಯ ಪರಿಷತ್ ಇನ್ನಾದರೂ ಕನ್ನಡ ಸಾಹಿತ್ಯ ಲೋಕದಲ್ಲಿ ಮಹಿಳೆಯರಿಗೆ ದೊರೆಯಬೇಕಾದ ಸ್ಥಾನಮಾನ ಹಾಗೂ ಪ್ರಾತಿನಿಧ್ಯ ನೀಡುವುದರೊಂದಿಗೆ ಸಮಾನತೆ ಎತ್ತಿ ಹಿಡಿಯಲಿ, ಮಹಿಳಾ ಲೇಖಕಿಯರಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಕನ್ನಡದ ತೇರು ಒಟ್ಟಾಗಿ ಎಳೆಯುವಂತಾಗಲಿ.

***********************************************************

ಅರ್ಪಣಾ ಮೂರ್ತಿ

3 thoughts on “ಕಸಾಪಗೆ ಮಹಿಳಾ ಅಧ್ಯಕ್ಷರು

  1. ಮಹಿಳಾ ಧ್ವನಿ ನೂರ್ಮಡಿಸಲಿ…ಪರಿಷತ್ ಬಗ್ಗೆ ಪೂರಕ‌ ಮಾಹಿತಿಗಳಿವೆ…

  2. ಖಂಡಿತ ಆಗಲಿ, ತಾಯಿಯೊಬ್ಬಳು ಕನ್ನಡ ತಾಯಿಯ ಸೇವೆ ಮಾಡಲಿ, ಸುಂದರ ಲೇಖನ, ಸೊಗಸಾಗಿದೆ ಅಭಿಪ್ರಾಯ

  3. ಮಹಿಳೆಯರ ಚೈತನ್ಯ ಶಕ್ತಿಯನ್ನು ಗುರುತಿಸಿದ ಸಮಗ್ರ ಲೇಖನ ಸಾಕಷ್ಟು ಸಮರ್ಥ ಮಹಿಳಾ ಸಾಹಿತಿಗಳು ನಮ್ಮಲ್ಲಿದ್ದಾರೆ ಈ ಸ್ಥಾನ ಮಾನ ಅವರಿಗೆ ಸಿಗಬೇಕಾದದ್ದು ಈ ಧ್ವನಿ ಈಗ ಜಾಗ್ರತ ವಾಗಿರುವುದು ಸಂತೋಷ ದಾಯಕ ವಿಚಾರ

Leave a Reply

Back To Top