ಪುಟ್ಟಿ ಅನ್ನೊ ಮೊದಲ ಪದ್ಯ

ಮೊದಲ ಕವಿತೆಯ ರೋಮಾಂಚನ

ಚೈತ್ರಾ ಶಿವಯೋಗಿಮಠ

Taranga : January 24,2019, magazine in Kannada by Udayavanionline ...

ಮೊದಲ ಸಾರಿ ಚೆಂದದ ಪದ್ಯ ಇದು ಅಂತ ಬರೆದದ್ದು ನನಗೆ ಅಷ್ಟು ನೆನಪಿಲ್ಲ. ಆದರೆ ಮೊದಲ ಸಲ ನಾನು ಪದ್ಯ ಬರೆದದ್ದು ಏಳನೇ ಕ್ಲಾಸಿನಲ್ಲಿ. ಆಗ ಪದ್ಯ ಅಂದರೆ ಏನು ಅಂತ ಸಹ ತಿಳಿದಿರಲಿಲ್ಲ. ಮನೆಗೆ ಪ್ರತಿ ವಾರ ತರಂಗ ವಾರಪತ್ರಿಕೆ ಖಾಯಂ ಬರುತ್ತಿತ್ತು. ಮತ್ತು ಮನೆಯ ಬಳಿಯ ನಗರ ಕೇಂದ್ರ ಗ್ರಂಥಾಲಯದ ಸದಸ್ಯತ್ವವೂ ಇತ್ತು. ಪ್ರತಿ ವಾರ ಪುಸ್ತಕಗಳನ್ನ ತಂದು ಓದೋದು ನನ್ನಿಷ್ಟದ ಕೆಲಸಗಳಲ್ಲೊಂದು. ತರಂಗದಲ್ಲಿ ಬರುವ ಮಕ್ಕಳ ಸಣ್ಣ ಪದ್ಯಗಳು ಹಾಗೂ ಪುಸ್ತಕಗಳಲ್ಲಿ ಓದುತ್ತಿದ್ದ ಮಕ್ಕಳ ಪದ್ಯಗಳನ್ನ ನೋಡಿ ನಾನೂ ಯಾಕೆ ನನ್ನ ಭಾವನೆಗಳಿಗೆ ಅಕ್ಷರ ರೂಪ ಕೊಡಬಾರದು ಅನ್ನಿಸಿತು. ಒಂದಷ್ಟು ಸಣ್ಣ ಸಣ್ಣ ಪದ್ಯಗಳನ್ನ ಒಂದು ನೋಟ್ಬುಕ್ ನಲ್ಲಿ ಬರೆದೆ. ಅಜ್ಜಿ, ಪುಟ್ಟಿ, ನಾಯಿ ಬೆಕ್ಕು ಅಂತೆಲ್ಲ ಕಣ್ಣಿಗೆ ಕಂಡದ್ದು, ಮನಸ್ಸಿಗೆ ಅನ್ನಿಸಿದ್ದನ್ನ ಅಕ್ಷರ ರೂಪಕ್ಕಿಳಿಸಿದೆ. ಬರೆದದ್ದನ್ನ ನನ್ನ ಹಿರಿಯ ಅಣ್ಣನಿಗೆ ತೋರಿಸಿ ಹೇಗಿದೆ ಓದಿ ಹೇಳು ಅಂದೆ. ಸಣ್ಣವಳು ಬರೆದಿದ್ದಾಳೆ ಅಂತ ಹುರಿದುಂಬಿಸಲು, ಅಣ್ಣ ನನ್ನ ಒಂದೆರಡು ಪದ್ಯಗಳನ್ನ ಆಯ್ದು ಇವು ಚೆನ್ನಾಗಿವೆ ಹೀಗೆ ಬರಿತಿರು ಅಂತ ಪ್ರೋತ್ಸಾಹಿಸಿದ. ಜೊತೆಗೆ ಇವನ್ನ ತರಂಗಕ್ಕೆ ಯಾಕೆ ಕಳುಹಿಸಬಾರದು ಅನ್ನೋ ಯೋಚನೆಯನ್ನೂ ಹುಟ್ಟು ಹಾಕಿದ. ತಡ ಮಾಡದೆ ಪದ್ಯಗಳನ್ನ ಒಂದು ಬಿಳಿಹಾಳೆಯಲ್ಲಿ ದುಂಡಗಿನ ಅಕ್ಷರಗಳಲ್ಲಿ ಬರೆದು ಲಕೋಟೆ ಒಳಗೆ ಹಾಕಿ, ವಿಳಾಸ ಬರೆದು ಅಂಚೆ ಕಳುಹಿಸಿಯೇ ಬಿಟ್ಟೆ. ನಂತರ ಅದರ ಬಗ್ಗೆ ಮರೆತೂ ಹೋಯಿತು. ಒಂದಿನ ತರಂಗದಿಂದ ಒಂದು ಮನಿ ಆರ್ಡರ್ ಬಂತು ೧೨೫ ರೂಪಾಯಿಯದು, ನಿಮ್ಮ ಪದ್ಯ ಪ್ರಕಟವಾಗಿದೆ ಇಂತಹ ವಾರದ ತರಂಗವನ್ನ ಗಮನಿಸಿ ಅಂತ ಮೆಸೇಜ್ ಇತ್ತು. ನನಗೆ ಆದ ಸಂಭ್ರಮ ಅಷ್ಟಿಷ್ಟಲ್ಲ. “ಪುಟ್ಟಿ” ಅನ್ನೋ ಪದ್ಯ ಪ್ರಕಟವಾಗಿತ್ತು, ಜೊತೆಗೆ ಸಂಭಾವನೆ ಬೇರೆ. ಕೊನೆಯ ಸಾಲನ್ನ ಕೊಂಚ ಬದಲಾಯಿಸಿ ಪ್ರಕಟಿಸಿದ್ದರೂ ಬೇಸರವೆನಿಸಲಿಲ್ಲ.

ಮುಂದೆ ಬರೆಯೋದನ್ನ ಬಹುತೇಕ ಕಡಿಮೆ ಮಾಡಿದೆ‌. ವಿದ್ಯಾಭ್ಯಾಸದ ಒತ್ತಡದಲ್ಲಿ ಹೆಚ್ಚು ಬರೆಯಲಾಗಲಿಲ್ಲ. ಮುಂದೆ ಪಿ.ಯುಸಿ ಓದೋವಾಗ ಮತ್ತೊಮ್ಮೆ ಹೊಸದಾಗಿ ಪದ್ಯವನ್ನ ಬರೆದೆ. ಯಾರಿಗಾದರೂ ತೋರಿಸಿ ಹೇಗಿದೆ ಅಂತ ಕೇಳಲೇ ಬೇಕೆನಿಸಿತು‌. ನಾನು ಓದುತ್ತಿದ್ದದು ಶೇಷಾದ್ರಿಪುರಂ ಕಾಲೇಜಿನಲ್ಲಿ. ಆಗ ಸ್ನಾತಕೋತ್ತರ/ಪಿ.ಎಚ್.ಡಿ ವಿಭಾಗದಲ್ಲಿ ಡಾ. ದೊಡ್ಡರಂಗೇಗೌಡರು ವಿಭಾಗದ ಮುಖ್ಯಸ್ಥರಾಗಿದ್ದರು. ಒಂದಿನ ಗೆಳತಿಯನ್ನ ಕರೆದುಕೊಂಡು ಅವರ ಚೇಂಬರ್ ಗೆ ಹೋದೆ. ಅಲ್ಲಲ್ಲಿ ಬಿಳಿಯ ಕೂದಲು, ಕನ್ನಡಕ, ಜುಬ್ಬಾ ಪೈಜಾಮಾ ಮೇಲೊಂದು ಖಾದಿ ವೇಸ್ಟ್ ಕೋಟ್ ಧರಿಸಿ ಬಗಲಿಗೆ ಬಟ್ಟೆಯ ಕೈಚೀಲವನ್ನ ಹಾಕಿಕೊಂಡ ಅವರನ್ನ ನೋಡಿದ ಕೂಡಲೆ ಆಗೆಲ್ಲಾ ಕವಿಗಳ ಬಗ್ಗೆ ಕೇಳಿದ ವಿವರಣೆ ಸಾಕ್ಷಾತ್ಕರಿಸಿದಂತಾಯ್ತು. ಇನ್ನೇನು ಹೊರಡೋಕೆ ಅಣಿಯಾಗಿದ್ದರು. ನಮ್ಮನ್ನ ನೋಡಿ, ಅವರನ್ನೇ ಭೇಟಿಯಾಗೋಕೆ ಬಂದಿದ್ದು ಅಂತ ತಿಳಿದು ಬಹಳ ಸೌಜನ್ಯದಿಂದಲೇ ಬರಮಾಡಿಕೊಂಡು ಕುಳಿತುಕೊಳ್ಳೋಕೆ ಹೇಳಿದರು. ಅವರನ್ನ ನೋಡಿ ನನಗೆ ಪದ್ಯಗಳನ್ನ ಹೇಗೆ ತೋರಿಸಲಿ ಅನ್ನೋ ಕಸಿವಿಸಿಯ ಜೊತೆ ಭಯವೂ ಆಗಿ ನಾಲಿಗೆ ಒಣಗಿತು. ಏನೇನೋ ಮಾತಾಡಿ ಕೊನೆಗೆ ವಿಷಯಕ್ಕೆ ಬಂದೆ. “ಸರ್ ನಾನು ನಿಮ್ಮ ಬಳಿ ನನ್ನ ಪದ್ಯಗಳನ್ನ…..‌” ಅಂತ ರಾಗ ಎಳೆದೆ. ಅವರು ನಸುನಕ್ಕು “ಅದಕ್ಯಾಕೆ ಹೆದರ್ತೀರಿ. ತೋರಿಸಿ ನೋಡೋಣ” ಅಂದ್ರು. ನಾನು ಬಹಳಷ್ಟು ಅಳುಕಿನಿಂದಲೇ ಪುಸ್ತಕವನ್ನ ಅವರ ಕೈಗಿಟ್ಟೆ. ಸ್ವಲ್ಪ ಹೊತ್ತು ಅವರು ಓದಿ. “ಒಳ್ಳೆಯ ಪ್ರಯತ್ನ ರೀ. ಆದರೆ ನೀವು ಬಹಳಷ್ಟು ಇವನ್ನ ಟಚ್ ಅಪ್ ಮಾಡಬೇಕು. ಕೊಂಚ ಅರೆ ಬರೆ ಬೆಂದ ಹಾಗೆ ಅನ್ನಿಸ್ತವೆ.” ಅಂತ ಹೇಳಿ ಪದ್ಯವನ್ನ ಹೇಗೆ ಬರಿಬೇಕು, ಪ್ರಾಸಗಳನ್ನ ಹೇಗೆ ಸರಾಗವಾಗಿ ಬಳಸಬೇಕು ಅನ್ನೋದನ್ನ ಬಹಳಷ್ಟು ಹೊತ್ತು ಹೇಳಿದರು. ಮುಖ್ಯವಾಗಿ ಕವಿ ಒಳಗಣ್ಣ ತೆರೆದಿರಬೇಕು, ಸುತ್ತಲೂ ನಡೆಯುವುದನ್ನ ಸೂಕ್ಷ್ಮವಾಗಿ ಅವಲೋಕಿಸಬೇಕು, ಎಂದು ಹೇಳಿ ಒಂದು ಸಣ್ಣ ಪ್ರಾಸವನ್ನ ಬರೆದು ತೋರಿಸಿದರು:

ಬಂದೆ ನೀನು

ಕಂಡೆ ನಾನು

ನಮ್ಮ ಬಾಳು

ಹಾಲು ಜೇನು

ಇಷ್ಟೇ! ಸರಾಗವಾಗಿ ಸುರಿಯಬೇಕು ಪದಗಳನ್ನ ಅಂತ ಹೇಳಿ ನನಗೆ ಏನೂ ತಿಳಿಯದ ವಿಷಯಗಳನ್ನ ಮಗುವಿಗೆ ಕಲಿಸುವ ಹಾಗೆ ತಿಳಿಸಿಕೊಟ್ಟರು.

ಒಂದು ರೀತಿಯ ಹೊಸ ಪ್ರಪಂಚ ಕಂಡಂತಹ ಅನುಭವದ ಜೊತೆಗೆ ನನ್ನಷ್ಟಕ್ಕೆ ನಾನು, “ಚೇ ನಾನು ಬರೆದರೆ ಚೆನ್ನಾಗಿ ಬರಿಯಬೇಕು‌. ಭಾವನೆಗಳನ್ನ ಪದಗಳ ರೂಪದಲ್ಲಿ ಸರಿಯಾಗಿ ವ್ಯಕ್ತ ಪಡಿಸೋಕೆ ಪ್ರಯತ್ನ ಮಾಡಬೇಕು” ಎಂದು ಮನಸಲ್ಲೇ ಅಂದ್ಕೊಂಡೆ. ಈ ಘಟನೆ ನನ್ನ ಮನದಲ್ಲಿ ಅಚ್ಚಳಿಯದಂತೆ ಉಳಿದು ಬಿಟ್ಟಿದೆ.

***************************

8 thoughts on “ಪುಟ್ಟಿ ಅನ್ನೊ ಮೊದಲ ಪದ್ಯ

  1. ನಿಮ್ಮ ಅನುಭವ ಕುರಿತು ತುಂಬಾ ಚೆನ್ನಾಗಿ ಹೇಳಿರುವಿರಿ.

Leave a Reply

Back To Top