ಯುವ ಸಂಗಾತಿ
ʼಅಭಿವ್ಯಕ್ತಿ ಸ್ವಾತಂತ್ರ್ಯವು
ಯುವಜನತೆಯ ರೆಕ್ಕೆಯಾಗಲಿʼ
ಮೇಘ ರಾಮದಾಸ್ ಜಿ

ಅಭಿವ್ಯಕ್ತಿ ಸ್ವಾತಂತ್ರ್ಯವು ಯುವಜನತೆಯ ರೆಕ್ಕೆಯಾಗಲಿ
ಯುವಜನತೆಯೆಂದರೆ ದೇಶದ ಪ್ರಗತಿ, ಭಾರತ ಯುವ ದೇಶ, ದೇಶದ ಸಮಗ್ರ ಬೆಳವಣಿಗೆ ಸಶಕ್ತ ಯುವಜನರ ಕೈಲಿದೆ. ಯುವಜನತೆ ಓದು, ಉದ್ಯೋಗ ಅಷ್ಟೇ ಅಲ್ಲದೆ ಸಾಮಾಜಿಕವಾಗಿಯೂ ಸಹಾ ಸಕಾರಾತ್ಮಕವಾಗಿ ತೊಡಗಿಸಿಕೊಳ್ಳುವ ಅಗತ್ಯವಿದೆ. ಇದೀಗ ದೇಶ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಹಲವು ಘಟನೆಗಳಿಗೆ ಯುವಜನರು ತಮ್ಮ ಪ್ರಕ್ರಿಯೆಗಳನ್ನು ಸಾಮಾಜಿಕ ಜಾಲತಾಣಗ
ಯುವಜನತೆಯೆಂದರೆ ದೇಶದ ಪ್ರಗತಿ, ಭಾರತ ಯುವ ದೇಶ, ದೇಶದ ಸಮಗ್ರ ಬೆಳವಣಿಗೆ ಸಶಕ್ತ ಯುವ ಳಲ್ಲಿ ಹಂಚಿಕೊಳ್ಳುತ್ತಿರುವುದು ಶ್ಲಾಘನೀಯ. ಇದು ಅವರ ಅಭಿವ್ಯಕ್ತಿ ಸ್ವತಂತ್ರದ ಒಂದು ಭಾಗವಾಗಿದೆ. ಆದರೆ ಈ ಸ್ವತಂತ್ರವನ್ನು ದಮನ ಮಾಡುವ ಎಲ್ಲಾ ಪ್ರಯತ್ನಗಳು ಇಂದು ನಡೆಯುತ್ತಿವೆ. ಇದು ರಾಜಕಾರಣಿಗಳಿಂದ, ಹಣವಂತರಿಂದ, ಪ್ರಭಾವಿತರಿಂದ, ಕೊನೆಗೆ ಪ್ರಶ್ನಿಸುವ ಮನೋಭಾವ ಬೆಳಸಬೇಕಿರುವ ಶಿಕ್ಷಣ ಸಂಸ್ಥೆಗಳೇ ಯುವಜನತೆಯ ವಾಕ್ ಸ್ವತಂತ್ರ ಹರಣ ಮಾಡುತ್ತಿವೆ. ಇದೇ ಕಾರಣಕ್ಕೆ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹಂಚಿಕೊಳ್ಳಲು ಹಲವು ವೇದಿಕೆಗಳು ಇದ್ದರೂ ಸಹಾ ಯುವಜನತೆ “ನಮಗ್ಯಾಕೆ” ಎನ್ನುವ ಧೋರಣೆ ತಾಳಿದ್ದಾರೆ. ಇದು ದೇಶದ ಭವಿಷ್ಯದ ಮೇಲೆಯೂ ಸಹಾ ನಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.
ಸಾಮಾಜಿಕ ಜಾಲತಾಣ
ನಮ್ಮೆಲ್ಲಾ ಅಭಿಪ್ರಾಯಗಳನ್ನು ಸಾರಾಸಗಟಾಗಿ, ನೇರವಾಗಿ ಹಂಚಿಕೊಳ್ಳಲು ಇರುವ ಒಂದು ಉತ್ತಮ ವೇದಿಕೆ ಸಾಮಾಜಿಕ ಜಾಲತಾಣಗಳು. ಇಲ್ಲಿ ಎಲ್ಲರಿಗೂ ಮುಕ್ತ ಅವಕಾಶ ಇದೆ ಹಾಗೂ ಎಲ್ಲರಿಗೂ ಸುಲಭವಾಗಿ ಲಭ್ಯವಿರುವ ವೇದಿಕೆಯಾಗಿವೆ. ಇಂಡಿಯಾ ಟುಡೆ 2024ರಲ್ಲಿ ಮಾಡಿರುವ ಸಮೀಕ್ಷೆಯ ಅನುಸಾರ ಭಾರತ ಒಂದರಲ್ಲಿಯೇ 398 ದಶಲಕ್ಷ ಯುವಜನತೆ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ. ಈಗಿರುವಾಗ ದೇಶದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಅವರ ಪರ ಅಥವಾ ವಿರೋಧ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳಲು ಅವರಿಗೆ ಎಲ್ಲಾ ರೀತಿಯಾದ ಸ್ವತಂತ್ರ ಇದೆ. ಇದು ಮುಖ್ಯವೂ ಹೌದು. ಆದರೆ ಇಂದು ಅದಕ್ಕೆ ಅವಕಾಶಗಳೇ ಇಲ್ಲದಂತೆ ಮಾಡುವ ಎಲ್ಲಾ ಪ್ರಯತ್ನಗಳೂ ನಡೆಯುತ್ತಿವೆ. ಸರ್ಕಾರದ ವಿರುದ್ಧ ಮಾತನಾಡಿದರೆ ಅವರ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗುತ್ತಿದೆ. ಅವರಿಗೆ ಸ್ವತಃ ರಾಜಕಾರಣಿಗಳಿಂದಲೆ ಬೆದರಿಕೆಗಳು ಬರುತ್ತಿವೆ. ಇನ್ನು ಹಣವಂತರ/ ಪ್ರಭಾವಿಗಳ ವಿರುದ್ಧ ದನಿಯಾದರೆ, ಆ ದನಿ ಅಡಗಿಸಲು ಸುಳ್ಳು ದೂರು ದಾಖಲಿಸುವುದು, ದಾಳಿ ಮಾಡಿಸುವುದು, ಚಾರಿತ್ರ್ಯ ಹರಣ ಮಾಡುವುದು ಇಂದು ಸರ್ವೇಸಾಮಾನ್ಯವಾಗಿಬಿಟ್ಟಿದೆ. ಈ ಎಲ್ಲಾ ಕಾರಣಗಳಿಗೆ ಯುವಜನತೆ ಮುನ್ನೆಲೆಗೆ ಬಂದು ದನಿ ಎತ್ತಲು ಹಿಂದೇಟು ಹಾಕುತ್ತಿದ್ದಾರೆ.
ಶಿಕ್ಷಣ ಸಂಸ್ಥೆಗಳು
ಯುವಜನತೆಗೆ ಸಾಮಾಜಿಕವಾಗಿ ಭಾಗವಹಿಸಲು ಮತ್ತು ಪ್ರಭುತ್ವವನ್ನು ಪ್ರಶ್ನಿಸುವ ಮಾರ್ಗವನ್ನು ಶಿಕ್ಷಣ ಸಂಸ್ಥೆಗಳು ಕಲಿಸಬೇಕಿದೆ. ಪುಸ್ತಕದ ಕಲಿಕೆ ಗಿಂತ ಈ ಜ್ಞಾನಗಳು ಯುವಜನತೆ ಸಾಮಾಜಿಕವಾಗಿ ತೆರೆದುಕೊಳ್ಳಲು ಮತ್ತು ತಮ್ಮನ್ನು ತಾವು ತೊಡಗಿಸಿಕೊಳ್ಳಲು ಬಹಳ ಮುಖ್ಯವಾಗಿವೆ. ಆದರೆ ವಿಪರ್ಯಾಸವೆಂದರೆ ಶಿಕ್ಷಣ ಸಂಸ್ಥೆಗಳು ತಮ್ಮ ನಿಲುವುಗಳನ್ನು, ಆಲೋಚನೆಗಳನ್ನು ಯುವಜನರ ತಲೆಯಲ್ಲಿ ತುಂಬಿ ಅವರ ಮನಸ್ಸನ್ನು ಕದಡುವ ಕೆಲಸ ಮಾಡುತ್ತಿವೆ. ಯುವ ಜನತೆ ಮುಕ್ತವಾಗಿ ಯೋಚಿಸುವ ಅವಕಾಶಗಳನ್ನೇ ನೀಡದೆ ತಮ್ಮದೇ ಪೂರ್ವಗ್ರಹ ಪೀಡಿತವಾದ ಅಭಿಪ್ರಾಯಗಳನ್ನು ಹೇರಲಾಗುತ್ತಿದೆ. ಒಂದು ವೇಳೆ ಯುವಜನತೆ ಶಿಕ್ಷಣ ಸಂಸ್ಥೆಗಳ ವಿರುದ್ಧದ ನಿಲುವನ್ನು ಯೋಚಿಸಿದರೆ ಅವರಿಗೆ ಶೈಕ್ಷಣಿಕವಾಗಿ ಹಿಂಸೆಗಳು ಆರಂಭವಾಗುತ್ತವೆ. ಇದೇ ಕಾರಣಕ್ಕೆ ಇಂದು ದೇಶದಲ್ಲಿ ಯುವಜನತೆಯ ಆತ್ಮಹತ್ಯೆಯ ಸಂಖ್ಯೆ ಹೆಚ್ಚಾಗುತ್ತಿದೆ. 2022ರ accidental death and suicides in India ವರದಿಯ ಅನುಸಾರ 18 ರಿಂದ 30 ವರ್ಷದ ವಯಸ್ಸಿನವರಲ್ಲಿ ಸರಿಸುಮಾರು 59 ಸಾವಿರ (38,259 ಯುವಕರು ಮತ್ತು 20,828 ಯುವತಿಯರು) ಯುವಜನತೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಜೀವ ಹರಣಗಳಿಗೆ ಹೊಣೆ ಯಾರು? ವಾಕ್ ಸ್ವಾತಂತ್ರ್ಯವನ್ನೇ ಕಸಿದುಕೊಂಡಾಗ ಯುವ ಜನತೆ ತಮ್ಮ ಕಷ್ಟ, ನೋವು – ನಲಿವು, ನಿಲುವು, ಅನಿಸಿಕೆಗಳನ್ನು ಹಂಚಿಕೊಳ್ಳುವುದಾದರೂ ಹೇಗೆ? ಶಿಕ್ಷಣ ಸಂಸ್ಥೆಗಳಲ್ಲಿನ ಈ ವ್ಯವಸ್ಥೆ ಬದಲಾಗಬೇಕಿದೆ.
ದೇಶದ ಯುವ ಜನತೆ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಲು ಹಾತೊರೆಯುತ್ತಿದ್ದಾರೆ. ವಿಶ್ವವೇ ನಮ್ಮನ್ನು ಗುರುತಿಸಬೇಕು, ಎಲ್ಲೆಡೆ ತಮ್ಮ ಹೆಸರು ಕೇಳುತ್ತಿರಬೇಕು ಎಂಬ ಮಹದಾಸೆ ಉಳ್ಳವರಾಗಿದ್ದಾರೆ. ಇದಕ್ಕೆ ಸಾತ್ ಕೊಡುವ ಸಂವಿಧಾನದ ಮೂಲಭೂತ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೋಟಕುಗೊಳಿಸುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ. ಆದರೆ ಯುವಜನತೆ ಇದ್ಯಾವುದಕ್ಕೂ ಅಂಜದೆ ತಮ್ಮ ಕನಸಿನತ್ತ ಸಾಗುತ್ತಾ, ಸಾಮಾಜಿಕ ಬದ್ಧತೆಯ ಪರವಾಗಿ ದನಿಯತ್ತುವುದು ಅನಿವಾರ್ಯವಾಗಿದೆ.
ಮೇಘ ರಾಮದಾಸ್ ಜಿ

ಮೇಘ ರಾಮದಾಸ್ ಜಿ
ಯುವಜನ ಕಾರ್ಯಕರ್ತರು
ಸಿರಾ, ತುಮಕೂರು.



