ಮೊದಲ ಕವಿತೆಯ ರೋಮಾಂಚನ
ಫಾಲ್ಗುಣ ಗೌಡ ಅಚವೆ.
ಮನೆಯ ಅಂಗಳದಲ್ಲಿ ಅಪ್ಪನ ಆರಾಮ ಕುರ್ಚಿಯಲ್ಲಿ ನಕ್ಷತ್ರ ರಾಶಿಯನ್ನು ನೋಡುತ್ತ ಕೂತಿದ್ದೆ.ಹುಣ್ಣುಮೆಯ ಎರಡು ದಿನ ನಂತರದ ಚಂದ್ರ ನನಗೆ ವಿಶೇಷವಾಗಿ ಕಂಡ.ಅವನ ಕಾಂತಿಯಲ್ಲಿ ಬೆಳದಿಂಗಳು ಮೀಯುತ್ತಿತ್ತು.ನಕ್ಷತ್ರದಾಚೆಗಿನ ನೀಲಿ ಪರದೆಯ ಗುಂಟ ಹರಿವ ಅವಳ ಮುಗ್ಧ ಪ್ರೀತಿ ಮನಸೊಳಗೆ ಒಲವಿನ ಭಾಷ್ಯ ಬರೆಯುತ್ತಿತ್ತು.ತೆಂಗು ಗರಿಗಳ ನಡುವೆ ಆ ತುಂಬು ಚಂದಿರ ಬಂದು ನನ್ನೊಳಗೆ ಎಂಥದೋ ಮಿಂಚಿಸಿ ಹೋಗಿದ್ದ.ಆ ಮಿಂಚು ನನ್ನ ಮನಃಪಟಲದ ನರ ನಾಡಿಗಳಲ್ಲಿ ಸಂಚರಿಸಿ ಇಂಪಿನ ನಾದಗೈದು ನನ್ನನ್ನು ಚಂದಿರನ ಇರುವಿಕೆ ನನ್ನ ಸುತ್ತಲೇ ಇದೆಯೇನೋ ಎನ್ನುವಂತೆ ಅವನ ಪ್ರಭಾವಲಯ ನನ್ನೊಳಗೂ ಹೊರಗೂ ಹರಡಿಕೊಂಡಿತು.ಜೇನವರ್ಣದ ಬೆಳದಿಂಗಳು ಸುಧೆಯಂತೆ ಇಳಿಯುವಾಗ ನನ್ನ ಹೃದಯದ ಬಾಗಿಲಿನಿಂದ ಒಳಸೇರಿ ಸ್ವಾತಿ ಹನಿ ಚಿಪ್ಪು ಸೇರಿದಂತೆ ಭಾಸವಾಯಿತು.ಆ ಬಿಳ್ಳಿ ಮಿಂಚು ಬಂದದ್ದೇ ತಡ ಅಂಗಳದ ಹಾಲು ಬೆಳಕು, ಅರಳಿಯೇ ಇರುವ ಅಬ್ಬಲಿ ಹೂಗಳು, ನಾಳೆ ಅರಳುವ ಖುಷಿಯಿಂದ ನಿದ್ದೆಗೆ ಜಾರದ ದಾಸಾಳದ ಹೂಗಳು,ಚಂದಿರನ ಮರೆಮಾಡಿದ ತೆಂಗು ಗರಿಗಳು, ಅಸಂಖ್ಯ ನಕ್ಷತ್ರಗಳು ಮಾಯ..
ನನಗೆ ಚಂದ್ರ ಮಾತ್ರ ಕಾಣುತ್ತಿದ್ದುದು ಅಚ್ಚರಿಯೆನಿಸಿತು.ನನ್ನ ಎದೆ ಬಯಲಿಗೆ ಬಂದ ಚಂದ್ರ ನನ್ನೊಳಗನ್ನು ಸೇರಿಯಾಗಿತ್ತು.ದೂರದ ಬಯಲಲ್ಲಿ ಇಡೀ ಬೆಟ್ಟ ಕಾಡು ಪ್ರದೇಶಗಳ ಒಂದು ಮಾಡುವಂತೆ ಟಿಟ್ಟಿಭ ಟಿsssಟೀsssಟಿರ್ಯಾsssss ಕೂಗಿದರೂ ನನ್ನ ಕಿವಿಗೆ ಪೂರ್ತಿಯಾಗಿ ತಲುಪಲಿಲ್ಲ..
ಇದು ಆಗಷ್ಟೇ ಪಿಯುಸಿ ಮುಗಿಸಿ ಡಿಗ್ರಿಗೆ ಕಾಲಿಟ್ಟ ಹೊತ್ತು.ಹರೆಯ ಗರಿಗೆದರಿ ಮುಗಿಲಿಗೆ ಹಾರುವ ಕಾಲ.. ಏನನ್ನು, ಯಾರನ್ನು ನೋಡಿದರೂ ಚಂದವಾಗಿ ಕಾಣುವ ವಯಸ್ಸು. ನನ್ನೂರಿನಿಂದ ನಮ್ಮದೇ ಕ್ಲಾಸಿಗೆ ಬರುವ ಹುಡುಗಿಯಲ್ಲಿ ಕ್ರಷ್ ಆಗಿತ್ತು. ಚಂದಿರನಂತೆ ನಗುವ ಅವಳ ಕಣ್ಣುಗಳು ನನ್ನಲ್ಲಿ ಕಾವ್ಯ ಭಾವನೆಯನ್ನು ಸ್ಪುರಿಸುತ್ತಿದ್ದವು.ಅವಳನ್ನು ಚಂದಿರನಿಗೆ ಹೋಲಿಸಿ ತಕ್ಷಣ ಪಟ್ಟಿ ತಗೆದುಕೊಂಡು ಬಂದು ‘ ಚಂದ್ರ ಮತ್ತು ನಾನು’ ಪದ್ಯ ಬರೆದೆ. “ನನ್ನ ಭಾವನೆಯ ಚಂದ್ರನಿಗೆ ಮೋಡ ಮುಸುಕಿದರೆ ನನಗೆ ಖಗ್ರಾಸ! ಯಾಕೆಂದರೆ,
ಆತ ಬೆಳಗುವವ ನಾನು ಬೆಳಗಲ್ಪಡುವವ
ತಾರೆಗಳನ್ನು ನಾನು ಲಕ್ಷಿಸುವುದಿಲ್ಲ ಅವುಗಳಲ್ಲಿ ಹೊಳಪಿದ್ದರೂ
ಬೆಳಗುವ ಶಕ್ತಿಯಿಲ್ಲ.
ನನ್ನ ಚಂದಿರ ನಕ್ಕರೆ ನನಗೆ ಬೆಳದಿಂಗಳು
ಇಲ್ಲದಿರೆ ಬರೀ ತಂಗಳು!
ಅವನಿದ್ದರೆ ಅವನಿಂದಲೇ ಪ್ರೀತಿ ಕಡಲ ಮೊರೆತ
ಕೆದಕುತ್ತದೆ ಕಾವ್ಯ ಭಾವನೆಯ
ಅವನ ಹಾಲು ಬಣ್ಣವ ಬೆಳಗುಗೆನ್ನೆಯ ನೋಡಿ
ಹಾರುತ್ತದೆ ಮನಸ್ಸು ಅವನೆತ್ತರಕ್ಕೆ!
ಆತ ಅಮವಾಸ್ಯೆಯತ್ತ ಸಾಗಿದರೆ
ಆ ಮಂದ ಬೆಳಕಲಿ ಮೆಲು ಗಾಳಿಗೆ
ಅಲುಗುವ ಆಶಾಲತೆಗಳ ಹಸಿರು ಮಾಯ
ಬೀಸುವ ತಂಗಾಳಿಯಲಿ
ನಾ ತೂರುತ್ತೇನೆ ನೋವ.
ಒಮ್ಮೊಮ್ಮೆ ಯೋಚಿಸುತ್ತೇನೆ,
ಅವನಿದ್ದರೆ ನನ್ನ ಕಾವ್ಯ ಹಾಡೆಷ್ಟು ರಮ್ಯ
ಅವನಿಲ್ಲದಿರೆ ಬರೀ ಶೂನ್ಯ!
ಈ ಮೊದಲ ಕವಿತೆ ‘ಕರ್ಮವೀರ’ ಪತ್ರಿಕೆಯಲ್ಲಿ ‘ಖಗ್ರಾಸ’ ಅನ್ನುವ ಹೆಸರಿನಲ್ಲಿ ಪ್ರಕಟವಾಯಿತು. ನಂತರ ತಾಲ್ಲೂಕಿನ, ಜಿಲ್ಲೆಯ ಬಹುತೇಕ ಕವಿಗೋಷ್ಟಿಗಳಲ್ಲಿ ಭಾಗವಹಿಸುವಂತಾಯಿತು.ಆಗ ನಾನು ‘ಕರ್ಮವೀರ’ದ ಓದುಗನಾಗಿದ್ದೆ.ನಂತರದ ದಿನಗಳಲ್ಲಿ ಕೆ.ಎಸ್.ನ, ಜಿ.ಎಸ್.ಎಸ್,ಲಂಕೇಶ್, ಅಡಿಗ,ಜಯಂತ ಕಾಯ್ಕಿಣಿ, ಕೆ.ವಿ.ತಿರುಮಲೇಶ,ಎಸ್.ಮಂಜುನಾಥ ಅಂತವರ ಪದ್ಯಗಳು ನನ್ನನ್ನು ಪ್ರಭಾವಿಸಿದವು.ಸದ್ಯ ಜಯಂತ ಕಾಯ್ಕಿಣಿ ನನ್ನ ಕಾವ್ಯ ಗುರು.. ಕ್ರೈಸ್ಟ್ ಕಾಲೇಜು, ಸಂಚಯ ಬಹುಮಾನಗಳ ಜೊತೆ ಇತ್ತೀಚೆಗೆ ಒಂದು ಸಿನಿಮಾಕ್ಕೆ ಹಾಡು ಬರೆದಿರುವುದು ಮೊದಲು ಬರೆದ ‘ಚಂದ್ರ ಮತ್ತು ನಾನು’ ಪದ್ಯ ನಡೆಸಿಕೊಂಡು ಬಂದ ರೀತಿಯೇ ಅಗಿದೆ.ನನ್ನ ಕಾವ್ಯದ ಪಯಣವನ್ನು ನೆನಪಿಸಿದ ‘ಸಂಗಾತಿ’ಗೆ ಧನ್ಯವಾದಗಳು.
********************************************
Lovely ಯಾಗಿದೆ , ನೆನಪುಗಳು…
ಇಡೀ ಬರಹವೇ ಒಂದು ಕಾವ್ಯದಂತಿದೆ..!
ಅಂತೂ ಆ ಚಂದ್ರಾಕ್ಷಿ ಹಿಡಿಸಿದ ಗ್ರಹಣ ಒಳ್ಳೆಯದೇ..
ಧನ್ಯವಾದಗಳು ಎಲ್ಲ ಹಿರಿಯರಿಗೆ..