ಮೊದಲ ಕವಿತೆಯ ಹುಟ್ಟು

ಮೊದಲ ಕವಿತೆಯ ರೋಮಾಂಚನ

ಅರ್ಪಣಾ ಮೂರ್ತಿ

ಸುಮಾರು ಮೂರು ವರ್ಷಗಳ ಹಿಂದಿರಬಹುದು, ಸ್ಮಾರ್ಟ್ ಫೋನ್ ಬಳಸಲು ಬಾರದ ದಿನಗಳಲ್ಲಿ ಅಚಾನಕ್ಕಾಗಿ ಉಡುಗೊರೆಯಾಗಿ ಸಿಕ್ಕಿದ ಸ್ಮಾರ್ಟ್ ಫೋನ್ ಮಂತ್ರದಂಡ ಕೈಗೆ ಸಿಕ್ಕಷ್ಟೇ ಖುಷಿ ತಂದಿತ್ತು. ಸಾಮಾಜಿಕ ಜಾಲತಾಣಗಳ ಬಳಕೆ ಅಭ್ಯಾಸವಿಲ್ಲದ ನನಗೆ ಎಫ್ಬಿಯ ಕುರಿತು ಒಂದು ಸಣ್ಣ ಕುತೂಹಲವನ್ನು ನನ್ನೊಳಗೆ ಮೂಡಿಸಿತ್ತು. ಪರಿಚಯದ ಗೆಳೆಯರ ಮಾತಿನಂತೆ ಕೆಲವೇ ಕೆಲವು ಬರಹಗಾರರ ಕವಿಗಳ ಸ್ನೇಹಪಟ್ಟಿಯಲ್ಲಿ ನಾನೂ ಸಹ ಸ್ಥಾನ ಗಿಟ್ಟಿಸಿದ್ದೆ. ಎಫ್ಬಿ ಲೋಕದಲ್ಲಿ ಗುರುತಿಸಿಕೊಂಡಿದ್ದ ಕವಿಗಳ ಸಾಲಿನಲ್ಲಿ ನಾ ಕಾಣದ ಬಿಂದುವಿನಂತಿದ್ದರೂ, ಅವರುಗಳು ಕವಿತೆ ಕಟ್ಟುವ ಪರಿ ನನಗಂತೂ ಅತೀ ಸೋಜಿಗ, ಕವಿತೆಯೆಡೆಗಿನ ಕುತೂಹಲ ತಣಿಸಿಕೊಳ್ಳಲಾದರೂ ಅವರುಗಳನ್ನ ಮಾತನಾಡಿಸಿಬಿಡಲೇ ಎಂದು ಅದೆಷ್ಟೋ ಬಾರಿ ಅನಿಸಿದ್ದರೂ ಅವರ ಹಮ್ಮು ಬಿಮ್ಮುಗಳ ನಡುವೆ ನನ್ನ ಸಂಕೋಚ ದುಪ್ಪಟ್ಟಾಗಿತ್ತು. ಈ ನಡುವೆ ಅತೀ ಹೆಚ್ಚು ಪ್ರೇಮಕವಿತೆಗಳ ನವಿರಾಗಿ ಹೆಣೆಯುತ್ತಿದ್ದ ಕವಿಮಿತ್ರರೊಬ್ಬರನ್ನು ಕೇಳಿಯೇ ಬಿಟ್ಟಿದ್ದೆ, ಇಷ್ಟು ಚೆಂದದ ಪದಗಳ ಹೆಣಿಕೆ ಹೇಗೆ ಸಾಧ್ಯ ಸರ್ ಅಂತ, ಆ ಕವಿಮಿತ್ರರಂತೂ ಅವರ ಕವಿತೆಯಷ್ಟೇ ಸರಳ ವ್ಯಕ್ತಿ, ಎಷ್ಟು ಮುಕ್ತವಾಗಿ ಮಾತಿಗಿಳಿದರೆಂದರೆ ಒಂದು ಆತ್ಮೀಯತೆಯ ಪರಿಧಿಯೊಳಗೆ ಸೇರಿದ ಅನುಭವವಾಯ್ತು. ಅವರು ಹೇಳಿದ್ದಿಷ್ಟು, ನೋಡು ಹುಡುಗಿ ಕವಿತೆ ಕಟ್ಟುವುದು ಕಷ್ಟವಲ್ಲ, ನೀ ಕೂಡ ಚೆಂದವಾಗಿ ಪದ ಕಟ್ಟಬಹುದು, ಸುತ್ತಲಿನ ಲೋಕ ಅವಲೋಕಿಸು, ನಂತರ ಅದನ್ನೆಲ್ಲ ಕಣ್ಮುಚ್ಚಿ ಧ್ಯಾನಿಸು, ಮನದೊಳಗೆ ಮೂಡಿದ ಪದಗಳ ಒಂದಕ್ಕೊಂದು ನಾಜೂಕಾಗಿ ಸೇರಿಸು ಇದಿಷ್ಟೇ ಕವಿಯ ಗುಟ್ಟು ಅಂದಿದ್ರು. ನಾ ನಕ್ಕು ಸುಮ್ಮನಾಗಿದ್ದೆ. ನಾನೋ ಕಾಲೇಜು ದಿನಗಳಲ್ಲಿ ಓದಿದ ಪದ್ಯಗಳ ಹೊರತಾಗಿ ಕವಿತೆಯ ಗಂಧಗಾಳಿಯೇ ಅರಿಯದವಳು ಇನ್ನು ಕವಿತೆ ಕಟ್ಟುವುದಂತೂ ಅಸಾಧ್ಯ ಎನ್ನುತ್ತಲೇ ಸುಮ್ಮನಾಗಿದ್ದೆ. ಅಪರೂಪಕ್ಕೊಮ್ಮೆ ಮಾತಿಗಿಳಿಯುತ್ತಿದ್ದ ಕವಿಮಿತ್ರರ ಮೊದಲ ಪ್ರಶ್ನೆ, ಏನಾದರೂ ಬರೆಯಲು ಪ್ರಯತ್ನಿಸಿದಿರಾ ಎನ್ನುವುದೇ ಆಗಿತ್ತು. ಇಲ್ಲ ಗುರುಗಳೇ ನನ್ನಿಂದ ಆಗದ ಕೆಲಸ ಎಂದು ನಾ ಕೂಡ ಸುಮ್ಮನಾಗುತ್ತಿದ್ದೆ. ಈ ನಡುವೆ ಪದವಿ ಕಾಲೇಜಿನ ಪರೀಕ್ಷೆಗಳು ಶುರುವಾಗಿತ್ತು, ಇನ್ನೂ ನೆನಪು ಹಸಿಯಿದೆ, ಡಿಸೆಂಬರ್ ಎರಡನೇ ತಾರೀಖು ಮಧ್ಯಾಹ್ನದ ಪರೀಕ್ಷಾ ಕರ್ತವ್ಯ ನನ್ನದಿತ್ತು. ಪರೀಕ್ಷೆ ಶುರುವಾಗಿ ವಿದ್ಯಾರ್ಥಿಗಳು ಬರೆಯಲು ತೊಡಗಿದ ಅರ್ಧ ಗಂಟೆಗೆಲ್ಲಾ ಧೋ ಎಂದು ಮಳೆ ಶುರುವಾಗಿತ್ತು. ಮಳೆಯೆಂದರೆ ಯಾವಾಗಲೂ ಹೀಗೆ ಮನದೊಳಗೆ ಸಣ್ಣ ಪುಳಕ ಹುಟ್ಟಿಸದೇ ಇರಲಾರದೇನೋ, ಕೊಠಡಿಯಲ್ಲಿ ಅಡ್ಡಾಡುತ್ತಾ ಕಿಟಕಿ ಎದುರು ಬಂದು ನಿಂತಿದ್ದೆ. ಗುಬ್ಬಿ ಗಾತ್ರಕ್ಕಿಂದ ಸ್ವಲ್ಪವೇ ದೊಡ್ಡದಿದ್ದ ಒಂದು ಚೆಂದದ ಹಕ್ಕಿ, ವಿದ್ಯುತ್ ತಂತಿಯ ಮೇಲೆ ವೈರಾಗ್ಯ ತಳೆದಂತೆ ಮಳೆಯಲ್ಲಿ ತೊಯ್ದು ಮುದ್ದೆಯಂತೆ ಕೂತಿತ್ತು. ಅರೇ ಇದೇನಾಯ್ತು ಈ ಹಕ್ಕಿಗೆ ಎಂದು ಕೌತುಕದಲ್ಲೇ ಅದರತ್ತ ದೃಷ್ಟಿ ನೆಟ್ಟು ನಿಂತಿದ್ದೆ, ಸುಮಾರು ಎರಡು ಗಂಟೆಗಳ ಕಾಲ ಕುಂಭದ್ರೋಣ ಮಳೆಯಂತೆ ಸುರಿದ ಮಳೆಯಲ್ಲಿ ಅಲುಗದೇ ಕುಳಿತ ಆ ಹಕ್ಕಿ ನನ್ನ ಮನಸ್ಸನ್ನು ಅಲುಗಿಸಿದ್ದು ಸುಳ್ಳಲ್ಲ. ಮಳೆ ನಿಂತಂತೇ ಆ ಹಕ್ಕಿ ಅದೆತ್ತಲೋ ಹಾರಿತ್ತು. ಆಗಲೇ ಕವಿಮಿತ್ರರ ಮಾತು ನೆನಪಾಗಿತ್ತು, ಸುತ್ತ ಕಂಡದ್ದು ಅವಲೋಕಿಸು, ಧ್ಯಾನಿಸು, ಪದ ಪೋಣಿಸು…

ಹೌದು,

ಆಗ ಹುಟ್ಟಿದ ನನ್ನ ಮೊದಲ ಕವಿತೆಯ ಮೊದಲ ಸಾಲು “ಅದಾವ ಮುನಿಸೋ ಇಲ್ಲ ಕಲ್ಲಾದ ಮನಸೋ, ಗೌತಮನ ಹಾದಿ ಕಾದ ಅಹಲ್ಯೆಯ ಕಂಗಳ ಕಾಯುವಿಕೆಯೋ, ಇಲ್ಲ ಕಲ್ಲೊಳಗಿನ ಮನದ ವೇದನೆಯೋ”

ಬಾಲಿಶವೋ, ಅಪಕ್ವವೋ ಒಟ್ಟಿನಲ್ಲಿ ಮೊದಮೊದಲು ಮನದೊಳಗೆ ನಾ ಕಟ್ಟಿದ ಪದಗಳ ಸಾಲು ಈಗಲೂ ನವಿರು ನೆನಪುಗಳ ಸಾಲಿನಲ್ಲಿ ಸೇರಿ ಹೋಗಿದೆ. ಕೊನೆಗೂ ಪೂರ್ಣಗೊಳಿಸಿದ ಈ ಕವಿತೆಯನ್ನು ಅತಿ ಹಿಂಜರಿಕೆಯಿಂದಲೇ ಮುಖಪುಸ್ತಕದ ಗೋಟೆಗಂಟಿಸಿದ್ದೆ. ಎಲ್ಲರ ಪ್ರತಿಕ್ರಿಯೆ ಹೇಗಿರಬಹುದೆಂದು ನೆನೆದು, ನೆನೆದು ಮುದ್ದೆಯಾದ ಹಕ್ಕಿಗಿಂತಲೂ ಹೆಚ್ಚಿಗೆ ಸಂಕೋಚದಿಂದಲೇ ಮುದ್ದೆಯಾಗಿದ್ದೆ. ನನ್ನ ನಿರೀಕ್ಷೆ ಹುಸಿಗೊಳಿಸುವಂತೆ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ಬಂತು. ಮೊದಲ ಕವಿತೆ ನನ್ನ ಉಳಿದ ಕವಿತೆಗಳಿಗೆ ಅಡಿಪಾಯವಾಯ್ತು, ಬರೆಯುವ ಉತ್ಸಾಹ ಹೆಚ್ಚಿದಂತೆಲ್ಲಾ ಈಗೀಗ ಮತ್ತಷ್ಟು ಪಕ್ವವಾಗಿ ಪದಗಳನ್ನು ಜೋಡಿಸಲು ಕಲಿಯುತ್ತಿದ್ದೇನೆ. ಅದೆಷ್ಟೇ ಕವಿತೆಗಳನ್ನು ಬರೆದರೂ, ಧೋ ಎಂದು ಸುರಿವ ಮಳೆ ನನ್ನ ಮೊದಲ ಕವಿತೆಯ ರೋಮಾಂಚನ ಇಮ್ಮಡಿಗೊಳಿಸುತ್ತದೆ ಈಗಲೂ.

************************************************************

2 thoughts on “ಮೊದಲ ಕವಿತೆಯ ಹುಟ್ಟು

  1. ಬಹಳ ಚೆನ್ನಾಗಿದೆ. ನಿಮ್ಮ ಅನುಭವ, ಹಾಗೂ ಆ ಮೊದಲ ಕವಿತೆಯ ಸಾಲುಗಳು..

Leave a Reply

Back To Top