ಧಾರಾವಾಹಿ ಸಂಗಾತಿ–129
ರುಕ್ಮಿಣಿ ನಾಯರ್

ಒಬ್ಬ ಅಮ್ಮನ ಕಥೆ
ಬೆಂಗಳೂರು ತಲುಪಿದ ಸುಮತಿ

ಸುಮತಿಯ ಎರಡನೇ ಮಗಳು ತನ್ನ ದೊಡ್ಡಮ್ಮನ ಮನೆಗೆ ಹೋಗಿ ಬೆಂಗಳೂರಿನಲ್ಲಿರುವ ಮಾವನ ವಿಳಾಸವನ್ನು ಪಡೆದುಕೊಂಡು ಬಂದಳು. ಹೆಚ್ಚು ತಡ ಮಾಡಿದರೆ ಸುಮತಿಯ ಆರೋಗ್ಯದಲ್ಲಿ ಮತ್ತೆ ಇನ್ನೇನು ಏರುಪೇರು ಆಗುವುದೋ ಎಂದು ಆದಷ್ಟು ಬೇಗ ಒಂದೆರಡು ದಿನಗಳಲ್ಲಿ ಬೆಂಗಳೂರಿಗೆ ಹೋಗುವ ತಯಾರಿಯನ್ನು ಸುಮತಿಯ ಕುಟುಂಬ ಮಾಡತೊಡಗಿತು. ತನ್ನ ತಾಯಿಗೆ ಹೆಚ್ಚು ನಡೆದಾಡಲು ಕಷ್ಟವಾಗುತ್ತದೆ. ಹಾಗಾಗಿ ಊರಿಗೆ ಕರೆದುಕೊಂಡು ಹೋಗುವುದು ಕಷ್ಟ ಸಾಧ್ಯ ಎಂಬುದನ್ನು ಅರಿತ ಎರಡನೇ ಮಗಳು ಅನಾಥಾಶ್ರಮದ ಸೆಕ್ರೆಟರಿಯವರ ಅನುಮತಿಯನ್ನು ಪಡೆದು ತನ್ನ ಜೊತೆಯಲ್ಲಿ ತನ್ನ ಕೋಣೆಯಲ್ಲಿ ಇರಿಸಿಕೊಳ್ಳುವ ತೀರ್ಮಾನ ಮಾಡಿದಳು. ಮಾರನೇ ದಿನ ಎಸ್ಟೇಟಿನ ಸಾಹುಕಾರರು ತಮ್ಮ ಕಾರು ಹಾಗೂ ಚಾಲಕನನ್ನು ಅನಾಥಾಶ್ರಮಕ್ಕೆ ಕಳುಹಿಸಿ, ಸುಮತಿಯನ್ನು ಸುರಕ್ಷಿತವಾಗಿ ಬೆಂಗಳೂರಿನ ಸುಮತಿಯ ತಮ್ಮನ ಮನೆಗೆ ತಲುಪಿಸುವಂತೆ ತಿಳಿಸಿದರು.
ಸುಮತಿಯ ಎರಡನೇ ಮಗಳ ಕೈಲಿ ಹೆಚ್ಚು ಹಣವಿರಲಿಲ್ಲ. ಇದನ್ನು ಅರಿತ ಆಶ್ರಮದಲ್ಲಿ ಇತರೆ ಕೆಲಸಗಳಿಗೆ ಸಹಾಯಕ್ಕೆ ಬಂದಿದ್ದ ಹುಡುಗಿ ತನ್ನ ಗೆಳತಿಯ ಸ್ಥಿತಿಯನ್ನು ಗಮನಿಸಿ, ತಾನು ಮುಂದಿನ ವರ್ಷದಲ್ಲಿ ನರ್ಸಿಂಗ್ ತರಬೇತಿಗೆ ಸೇರಬೇಕೆಂದು ಕೂಡಿಟ್ಟಿದ್ದ ಹಣವನ್ನು ತಂದು ತನ್ನ ಸ್ನೇಹಿತೆಯ ಕೈಯಲ್ಲಿ ಇಟ್ಟು…. “ನೀನು ಮೊದಲು ನಿನ್ನ ತಾಯಿಗೆ ಚಿಕಿತ್ಸೆಯನ್ನು ಕೊಡಿಸು…. ಮುಂದಿನ ವರ್ಷ ತಾನೇ ನಾನು ತರಬೇತಿಗೆ ಸೇರಿಕೊಳ್ಳುವುದು… ಅಷ್ಟರ ಒಳಗಾಗಿ ನೀನು ನಿಧಾನವಾಗಿ ಈ ಹಣವನ್ನು ನನಗೆ ಹಿಂತಿರುಗಿ ಕೊಡುವಿಯಂತೆ”….. ಎಂದು ಹೇಳಿದಳು.
ಬೆಂಗಳೂರಿಗೆ ಹೋಗಿ ಬರುವ ಖರ್ಚಿಗಾಗಿ ಹಣವನ್ನು ಹೇಗೆ ಹೊಂದಿಸುವುದು ಎಂಬ ಚಿಂತೆಯಲ್ಲಿದ್ದ ಸುಮತಿಯ ಮಗಳಿಗೆ ಆಕೆಯ ಗೆಳತಿಯೇ ಆಪದ್ಬಾಂಧವಳಾಗಿ ಬಂದು ಸಹಾಯವನ್ನು ಮಾಡಿದ್ದಳು. ತನ್ನ ಪರಿಸ್ಥಿತಿಯನ್ನು ಅರಿತು ಕಷ್ಟಕ್ಕೆ ನೆರವಾದ ಗೆಳತಿಯನ್ನು ಅಪ್ಪಿಕೊಂಡು ಆ ಹುಡುಗಿ ಗದ್ಗದಿತಳಾದಳು…. ₹ನಿನ್ನ ಈ ಉಪಕಾರವನ್ನು ನಾನು ಈ ಜನ್ಮದಲ್ಲಿ ಮರೆಯುವುದಿಲ್ಲ…. ನೀನು ಹೀಗೆ ನನಗೆ ಸಹಾಯ ಮಾಡುತ್ತೀಯಾ ಎಂದು ನಾನು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ…. ನಿನ್ನ ಅಂತಃಕರಣ ದೊಡ್ದದು…..ಯಾವ ರೀತಿಯಲ್ಲಿ ನಿನಗೆ ಕೃತಜ್ಞತೆ ಸಲ್ಲಿಸಲಿ ಎಂದು ತಿಳಿಯುತ್ತಿಲ್ಲ”…ಎಂದು ಹೇಳುತ್ತಾ ಅತ್ತುಬಿಟ್ಟಳು. ತನ್ನ ಗೆಳತಿಯ ತಲೆಯನ್ನು ನೇವರಿಸುತ್ತಾ…..”ನಿನ್ನ ತಾಯಿ ಮತ್ತು ನನ್ನ ತಾಯಿ ಬೇರೆ ಬೇರೆಯಲ್ಲ…. ಇಬ್ಬರೂ ಒಂದೇ ಎಂದು ನಾನು ತಿಳಿದಿದ್ದೇನೆ… ನನ್ನ ಕೈಲಿ ಆದ ಪುಟ್ಟ ಸಹಾಯವನ್ನು ನಾನು ನಿನಗೆ ಮಾಡಿದ್ದೇನೆ….. ನೀನು ಮಾಡಬೇಕಾಗಿದ್ದು ಇನ್ನೂ ಇದೆ…. ಆದಷ್ಟು ಬೇಗ ನಿನ್ನ ತಾಯಿಗೆ ಚಿಕಿತ್ಸೆ ಕೊಡಿಸು….ಇಲ್ಲಿನ ಕೆಲಸಗಳನ್ನು ಮಾಡಲು ನಾನಿದ್ದೇನೆ….ಈಗ ಹೇಗಿದ್ದರೂ ಮಕ್ಕಳಿಗೆ ವಾರ್ಷಿಕ ಪರೀಕ್ಷೆ ಮುಗಿದಿದೆ…. ಶಾಲೆಗೆ ರಜೆಯೂ ಇದೆ….ಹಾಗಾಗಿ ನೀನು ನಿಶ್ಚಿಂತೆಯಿಂದ ಹೋಗಿ ಬಾ”…. ಎಂದು ಹೇಳುತ್ತಾ ತನ್ನ ಗೆಳತಿಗೆ ಸಾಂತ್ವನ ಹೇಳಿ ಬೀಳ್ಕೊಟ್ಟಳು. ಅಳಿಯ ಹಿಂದಿನ ರಾತ್ರಿಯೇ ಬಂದು ಸುಮತಿಯ ಜೊತೆಯೇ ಉಳಿದುಕೊಂಡಿದ್ದರಿಂದ ಬೆಳಗ್ಗೆ ಬೇಗನೇ ಬೆಂಗಳೂರಿಗೆ ಹೊರಡಲು ಅನುಕೂಲವಾಯಿತು.
ಹಿಂದಿನ ದಿನವೇ ಹಿರಿಯ ಮಗಳು, ಮೊಮ್ಮಕ್ಕಳು, ಮೂರನೇ ಮಗಳು ಸುಮತಿಯನ್ನು ನೋಡಲು ಬಂದಿದ್ದರು. ಕೊನೆಯ ಮಗಳು ಮಧ್ಯ ಪ್ರದೇಶದ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದುದರಿಂದ ಅವಳು ಬರಲು ಸಾಧ್ಯವಿರಲಿಲ್ಲ. ಹಾಗಾಗಿ ಪತ್ರದ ಮೂಲಕ ತಾಯಿಯ ಯೋಗಕ್ಷೇಮದ ವಿವರಗಳನ್ನು ತಿಳಿಸಲಾಗುತ್ತಿತ್ತು. ಅವಳು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದುದರಿಂದ ಅವಳ ವ್ಯಾಸಂಗಕ್ಕೆ ತೊಂದರೆಯಾಗದೆ ಇರಲೆಂದು ತನ್ನ ಆರೋಗ್ಯ ತೀರಾ ಹದಗಟ್ಟಿದೆ ಎಂಬ ವಿಚಾರವನ್ನು ಅವಳಿಗೆ ತಿಳಿಸುವುದು ಬೇಡ ಎಂದು ಸುಮತಿ ತಾಕೀತು ಮಾಡಿದ್ದಳು. ತಾಯಿಯ ಅಣತಿಯಂತೆ ಮಕ್ಕಳು ನಡೆದುಕೊಂಡರು.
ಸುಮತಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ಬೆಳಗ್ಗೆ ಕಾರು ಬರುವುದೆಂದು ಹಿಂದಿನ ದಿನ ಟೆಲಿಫೋನ್ ಮುಖಾಂತರ ಸಾಹುಕಾರರ ಜೊತೆಗೆ ಎರಡನೇ ಮಗಳು ಮಾತನಾಡಿದಾಗ ತಿಳಿಸಿದ್ದರು. ಹಾಗಾಗಿ ಬೆಳಗ್ಗೆಯೇ ಸುಮತಿ,ಅಳಿಯ ಮತ್ತು ಎರಡನೇ ಮಗಳು ತಯಾರಾದರು. ಅವರಿಗೆ ಚಿರಪರಿಚಿತನಾದ ಚಾಲಕನಾದ ಕಾರಣ ದಾರಿಯಲ್ಲಿ ಅವರಿಗೆ ಯಾವುದೇ ತೊಂದರೆಯಾಗಲಿಲ್ಲ. ಸುಮತಿಗೆ ಯಾವುದೇ ರೀತಿಯಲ್ಲೂ ಆಯಾಸವಾಗದಂತೆ ನಿಧಾನ ಗತಿಯಲ್ಲಿ ಚಾಲಕನು ಕಾರಿನ ಚಾಲನೆ ಮಾಡುತ್ತಿದ್ದ. ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನದ ಊಟಕ್ಕೆ ಉತ್ತಮವಾದ ಹೋಟೆಲ್ ಗಳಿಗೆ ಕರೆದುಕೊಂಡು ಹೋಗಿ ಊಟ ಮಾಡಲು ಅನುಕೂಲ ಮಾಡಿಕೊಟ್ಟು ಅವರಿಗೆ ಯಾವುದೇ ತೊಂದರೆ ಆಗದಂತೆ ಕಾಳಜಿ ವಹಿಸುತ್ತಿದ್ದ. ಸುಮತಿಗೆ ಡಯಾಬಿಟಿಸ್ ಇರುವ ಕಾರಣ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕಿತ್ತು.
ಮಧ್ಯಾಹ್ನದ 3:00 ಹೊತ್ತಿಗೆ ಕಾರು ಸುಮತಿಯ ತಮ್ಮನ ಮನೆಯನ್ನು ತಲುಪಿತು. ಅಕ್ಕನ ಮಗಳು ಪತ್ರದ ಮೂಲಕ ಬರೆದು ತಿಳಿಸಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಅಕ್ಕ ಬೆಂಗಳೂರಿಗೆ ಬರುವುದು ತಮ್ಮನಿಗೆ ತಿಳಿದಿತ್ತು. ಸುಮತಿಯನ್ನು ಕಂಡು ಅವಳ ತಮ್ಮನ ಕುಟುಂಬದ ಎಲ್ಲರಿಗೂ ಸಂತಸವಾಯಿತು. ತಮ್ಮನ ಹೆಂಡತಿ ಮತ್ತು ಮಕ್ಕಳು ಬಂದು ಜಾಗ್ರತೆಯಿಂದ ಸುಮತಿಯನ್ನು ಮನೆಯ ಒಳಗೆ ಕರೆದುಕೊಂಡು ಹೋದರು. ಸಕಲೇಶಪುರದಿಂದ ಸುಮತಿಯನ್ನು ಕರೆದುಕೊಂಡು ಬಂದ ಚಾಲಕನನ್ನು ಮನೆಯ ಒಳಗೆ ಕರೆದು ಆತನಿಗೆ ಕಾಫಿ ತಿಂಡಿಯನ್ನು ಕೊಟ್ಟು ಉಪಚರಿಸಿ, ಕೃತಜ್ಞತೆಗಳನ್ನು ತಿಳಿಸಿ ಕಳುಹಿಸಿಕೊಟ್ಟರು. ಸುಮತಿಯ ತಮ್ಮ ಮೊದಲೇ ಆಸ್ಪತ್ರೆಯ ಬಗ್ಗೆ ಕೂಲಂಕುಶವಾಗಿ ಕೇಳಿ ತಿಳಿದುಕೊಂಡಿದ್ದ. ಮಾರನೇ ದಿನ ಬೆಳಗ್ಗೆ ಬೇಗನೆ ಆಸ್ಪತ್ರೆಗೆ ಹೋಗುವುದು ಎಂದು ತೀರ್ಮಾನಿಸಲಾಯಿತು. ಅಂದು ರಾತ್ರಿ ತಮ್ಮನ ಹೆಂಡತಿ ಸುಮತಿಗೆ ಇಷ್ಟವಾದ ವಿಶೇಷ ಅಡಿಗೆಯನ್ನು ಮಾಡಿ ಬಡಿಸಿದಳು. ಎಲ್ಲರೂ ಸಂತೋಷದಿಂದ ರಾತ್ರಿ ಊಟ ಮಾಡಿ ಮಾತನಾಡುತ್ತಾ ಕಾಲ ಕಳೆದರು.
ಅತ್ತೆಯೆಂದರೆ ತಮ್ಮನ ಮಕ್ಕಳಿಗೆ ಅಚ್ಚುಮೆಚ್ಚು. ಅತ್ತೆ ಹೇಳುವ ಕಥೆಯು ಅವರಿಗೆ ಪ್ರಿಯ. ತಮ್ಮನ ಮಕ್ಕಳ ಜೊತೆ ಕಾಲ ಕಳೆಯುವುದೆಂದರೆ ಸುಮತಿಗೂ ಖುಷಿ. ಆದರೆ ಸುಮತಿಯ ಆರೋಗ್ಯ ಸರಿ ಇಲ್ಲದೇ ಇರುವುದನ್ನು ಅರಿತ ಮಕ್ಕಳು ಅತ್ತೆಗೆ ತೊಂದರೆ ಕೊಡುವುದು ಬೇಡವೆಂದು ಸುಮ್ಮನಾದರು. ಅಕ್ಕನ ಆರೋಗ್ಯ ತೀರಾ ಹದಗಟ್ಟಿರುವುದನ್ನು ಅರಿತ ತಮ್ಮ ಬಹಳ ಚಿಂತಿತನಾದನು.




