ಕಿರುಗಥೆ
ಕೆ. ಎ. ಎಂ. ಅನ್ಸಾರಿ
ಅಮ್ಮಿಣಿಗೆ ಒಂದೇ ಚಿಂತೆ…
ಸೂರ್ಯೋದಯಕ್ಕೆ ಮೊದಲೇ ಹೊರಡುವ ಗಂಡ ಸುಂದ ವಾಪಸ್ಸು ಬರುವಾಗ ಕತ್ತಲೆಯಾಗುತ್ತದೆ. ಖಂಡಿತಾ ಅವನು ಹೆಚ್ಚಿನ ಸಮಯ ಲಚ್ಚಿಮಿ ಯ ಗುಡಿಸಲಲ್ಲೇ ಕಳೆಯುತ್ತಿರಬಹುದು. ರಾತ್ರಿ ತನ್ನ ಗುಡಿಸಲು ಸೇರಿದರೆ ಗದ್ದಲ ಬೇರೆ. ಸಾರಾಯಿ ಏರಿಸದೆ ಒಂದು ದಿನವೂ ಬಂದದ್ದಿಲ್ಲ. ಹಾಗೆಂದು ಮನೆ ಖರ್ಚಿಗೆ ಕೊಡುವುದಿಲ್ಲ ಎಂದಲ್ಲ.
ಮಕ್ಕಳ ಮೇಲೆ ಪ್ರೀತಿಯಿದೆ .. ಆದರೂ ಆ ಲಚ್ಚಿಮಿ ಯ ಗುಡಿಸಲಲ್ಲಿ ಅವನಿಗೆ ಏನು ಇಷ್ಟು ಕೆಲಸ .. ?
ಸೌಂದರ್ಯ ದಲ್ಲಿ ನಾನು ಅವಳಿಗಿಂತ ಕಮ್ಮಿಯೂ ಇಲ್ಲ
ಅವಳಾದರೂ ಕರ್ರಗೆ ಕೋಲು ಮುಖದವಳು… ಗಂಡ ಸತ್ತ ಮೇಲೆ ಕೂಲಿ ನಾಲಿ ಮಾಡಿ ಜೀವಿಸುವವಳು. ಇರುವ ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ಆ ಸಂಪಾದನೆ ಸಾಕೇ ..?
ತನ್ನ ಗಂಡ ಸುಂದ ಅವಳಿಗೂ ಖರ್ಚಿಗೆ ಕೊಡುತ್ತಿರಬಹುದೋ… ?ಅಮ್ಮಿಣಿ ಹೊಸ್ತಿಲಲ್ಲಿ ಕೂತು ಚಿಂತಿಸುತ್ತಲೇ ಇದ್ದಳು.
ಅಂಗಳದಲ್ಲಿ ಹಾಸಿದ್ದ ಓಲೆಬೆಲ್ಲವನ್ನು ಕೋಳಿ ಬಂದು ತಿನ್ನದೊಡಗಿದ್ದು ಅಮ್ಮಿಣಿಗೆ ಗೊತ್ತೇ ಆಗಲಿಲ್ಲ. ಪಕ್ಕದ ಮನೆ ಜಾನಕಿ ಬಂದು ಕೋಳಿಯನ್ನು ಸುಯ್ ಸುಯ್ ಎಂದು ಓಡಿಸುತ್ತಲೇ .. ಅಮ್ಮಿಣಿ ನೀನು ಏನು ಯೋಚನೆ ಮಾಡ್ತಾ ಇದ್ದೀಯಾ … ಓಲೆ ಬೆಲ್ಲ ಅರ್ಧವೂ ಕೋಳಿ ತಿಂದಾಯಿತು ಎನ್ನುವಾಗಲೇ ಎಚ್ಚರಗೊಂಡು ಎದ್ದು ಬಂದಳು.
ಇಬ್ಬರೂ ಮಣೆ ಹಾಕಿ ಕುಳಿತು ಮಾತಿಗೆ ತೊಡಗಿದರು.
ಅಲ್ಲ ಜಾನಕಿ .. ಈ ಸುಂದ ಹೋಗಿ ಹೋಗಿ ಆ ಮುಂಡೆ ಲಚ್ಚಿಮಿಯ ಹತ್ತಿರ ಕೂರುತ್ತಾನಲ್ಲ .. ಇದನ್ನು ಹೇಗೆ ತಡೆಯುವುದು ಎನ್ನುವ ಪ್ರಶ್ನೆಗೆ ಈ ಮೊದಲೇ ವಿಷಯ ಗೊತ್ತಿದ್ದ ಜಾನಕಿ ಏನೂ ಉತ್ತರಿಸಲಿಲ್ಲ.
ಲಚ್ಚಿಮಿ ಏನೂ ಅಪರಿಚಿತೆಯಲ್ಲ . ಜಾನಕಿಗೆ ದೂರದ ಸಂಬಂದಿ ಕೂಡಾ ಹೌದು. ಸುಂದ ಮತ್ತು ಲಚ್ಚಿಮಿಯ ನಡುವಿನ ಸಂಬಂಧ ಊರಲ್ಲಿ ಕೂಡಾ ಎಲ್ಲರಿಗೂ ಗೊತ್ತಿರೋ ವಿಷಯವೇ..
ಬೆಳ್ಳಂಬೆಳಿಗ್ಗೆ ತಾಳೆಗೆ ಏರಲೆಂದು ಸುಂದ ಕತ್ತಿ, ಕೊಡ ತೋಳಿಗೇರಿಸಿ ನಡೆದರೆ ವಾಪಸಾಗುವುದು ಸಂಜೆ ಆರರ ನಂತರವೇ.. ಮಧ್ಯಾಹ್ನದ ಊಟ ಕೂಡಾ ಅಲ್ಲಿಯೇ ..
“ಅಮ್ಮಿಣಿ … ನಾನೊಂದು ವಿಷಯ ಹೇಳುತ್ತೇನೆ. ನಿನಗದು ಬೇಜಾರು ಆಗಬಹುದು ಆದರೆ ನಾಳೆಯಾದರೂ ನಿನಗೆ ತಿಳಿದೇ ತಿಳಿಯುತ್ತದೆ ಮಾತ್ರವಲ್ಲ ತಿಳಿದಿರಲೇ ಬೇಕು ” … ತಾ ಕೂತಿದ್ದ ಮಣೆಯನ್ನು ಎಡಗೈಯಿಂದ ಲಚ್ಚಿಮಿಯ ನೂಕಿ ಇನ್ನೂ ಹತ್ತಿರ ಕುಳಿತಳು ಜಾನಕಿ.
ಅಮ್ಮಿಣಿಗೂ ಕುತೂಹಲ …
ಆಕೆ ಮೆತ್ತಗೆ ಕಿವಿಯಲ್ಲಿ .. “ಆ ಲಚ್ಚಿಮಿಗೆ ಈಗ ತಿಂಗಳು ಒಂಭತ್ತು ಅಂತೆ. ನಿನ್ನೆ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದಳಂತೆ. ಈ ತಿಂಗಳ ಕೊನೆಗೆ ಹೆರಿಗೆಯ ತಾರೀಕು ಕೊಟ್ಟಿದ್ದಾರಂತೆ … “
ಅಮ್ಮಿಣಿಗೆ ದುಃಖ ಉಮ್ಮಳಿಸಿ ಬಂತು.
ದಿನವೂ ರಾತ್ರಿ ಜಗಳ ಮಾಡುವುದೊಂದೇ ಬಂತು. ತನ್ನ ಯಾವ ಮಾತನ್ನೂ ಕೇಳಿಸಿಕೊಳ್ಳುವ ಗೋಜಿಗೂ ಹೋಗದ ನೀಚ ನನ್ನ ಸುಂದ ಎನ್ನುತ್ತಾ ಕಣ್ಣೀರು ಹಾಕಿದಳು.
ಇಂದು ರಾತ್ರಿ ತೀರ್ಮಾನಕ್ಕೆ ಒಂದು ಬರಲೇ ಬೇಕು … ಒಂದೋ ನಾನು ಇಲ್ಲ ಅವಳು ..
ಮಧ್ಯಾಹ್ನ ದ ಊಟವೂ ಹೊಟ್ಟೆಗೆ ಹತ್ತಲಿಲ್ಲ ….
ಅಂಗಳದಲ್ಲೇ ತಾಳೆಬೆಲ್ಲ ಒಣಗಿಸುತ್ತಾ ಕೂತಿದ್ದಳು .
ಮುಸ್ಸಂಜೆಯ ಹೊತ್ತು ಸುಂದ ಅಂಗಳಕ್ಕೆ ಕಾಲಿಟ್ಟ .. ಸಾರಾಯಿ ವಾಸನೆ ಮೂಗಿಗೆ ಬಡಿಯುತ್ತಲೇ ಇತ್ತು. ಸುಂದನನ್ನು ಒಮ್ಮೆಲೇ ಪ್ರಶ್ನಿಸುವಷ್ಟು ಧೈರ್ಯ ಅಮ್ಮಿಣಿಗೆ ಇರಲಿಲ್ಲ.
ಅಮ್ಮಿಣಿ .. ನಾಳೆ 250 ಬೆಲ್ಲ ಪೇಟೆಯ ನಾಯ್ಕರ ಅಂಗಡಿಗೆ ಬೇಕು..
ಕಟ್ಟ ಒಂದಕ್ಕೆ ಹತ್ತರಂತೆ 25 ಕಟ್ಟ ಮಾಡಿಡು.
500 ರೂಪಾಯಿ ಕೊಟ್ಟಿದ್ದಾನೆ. ಉಳಿದದ್ದು ಅಂಗಡಿಯಲ್ಲಿ ಕೊಡುತ್ತಾನೆ. ಈ ಐನೂರು ನೀನೇ ಇಟ್ಟುಕೋ ನನ್ನಲ್ಲಿ ಇಟ್ಟರೆ ಖರ್ಚಾಗಬಹುದು ಎನ್ನುತ್ತಾ ಐನೂರರ ಗರಿ ನೋಟು ಅಮ್ಮಿಣಿಯ ಕೈಗಿಟ್ಟ …
ಅಮ್ಮಿಣಿಯ ಕೋಪ ಒಮ್ಮೆಲೇ ಇಳಿಯಿತು.
ಇಂದು ಕೇಳುವುದು ಬೇಡ ಎಂದು ತೀರ್ಮಾನಿಸಿ ರಾತ್ರಿಯ ಊಟಕ್ಕೆ ತಯಾರಿ ಮಾಡಲು ಅಡುಗೆ ಮನೆಯತ್ತ ಹೊರಟಳು.
ಅಮ್ಮಿಣಿಯ ಚಿಂತೆ ಇನ್ನೂ ದೂರವಾಗಲಿಲ್ಲ.
ರಾತ್ರಿ ಊಟವೂ ಆಯಿತು. ಮಕ್ಕಳಿಬ್ಬರೂ ಉಂಡು ಮಲಗಿಯೂ ಆಯಿತು…
ಅವನಾಗಿ ಕರೆಯದೆ ಎಂದೂ ಅಮ್ಮಿಣಿ ಆತನ ಬಳಿ ಹೋದವಳಲ್ಲ. ಇಂದು ಸುಂದ ಕರೆಯದಿದ್ದರೂ ಮೆಲ್ಲನೆ ಆತನ ಬಳಿ ಮಲಗಿದಳು ಅಮ್ಮಿಣಿ.
ಆತ ಗೊರಕೆ ಹೊಡೆಯುತ್ತಲಿದ್ದ.
ಹೇಗೆ ಆರಂಭಿಸುವುದು ಎಂದು ತಿಳಿಯದೆ ಮೆತ್ತಗೆ ಆತನ ಎದೆಯನ್ನು ಸವರತೊಡಗಿದಳು.
ಥಟ್ಟನೆ ಎದ್ದು ಕೂತ ಸುಂದ…
ಆಹಾ.. ಇವತ್ತೇನು ವಿಷ್ಯಾ…
ಸೂರ್ಯ ಪಶ್ಚಿಮದಲ್ಲಿ ಮೂಡಿದ್ದಾನೋ.. ಅಥವಾ ಐನೂರಕ್ಕೆ ಋಣವೋ… ಎಂದು ಮೆತ್ತಗೆ ನಕ್ಕ.
“ಅಲ್ಲ ಸುಂದ .. ನನಗೂ ತಾಳೆ ಮರ ಏರುವುದು ಗೊತ್ತು..
ನಾಳೆಯಿಂದ ನಾನೂ ನಿನ್ನೊಂದಿಗೆ ಬರಲಾ …”
ಕೂತಿದ್ದ ಸುಂದ ಒಮ್ಮೆಲೇ ನಿಂತು… ನೀ ನನ್ನೊಟ್ಟಿಗೆ ಬಂದ್ರೆ ಮಕ್ಕಳನ್ನು ನಿನ್ನಪ್ಪ ಬಂದು ನೋಡ್ತಾನಾ ಎಂದು ಗುಡುಗಿದ.
ಅಮ್ಮಿಣಿ ಶಾಂತವಾಗಿ…
“ಮಕ್ಕಳನ್ನು ಸಂಜೆ ತನಕ ನೋಡಿಕೊಳ್ಳುವೆ ಎಂದು ಅಮ್ಮ ಒಪ್ಪಿದ್ದಾಳೆ,,”. ಎಂದಾಗ ಕೋಪ ಇನ್ನೂ ನೆತ್ತಿಗೇರಿತ್ತು.
ಅಮ್ಮಿಣಿ ಯನ್ನು ತಳ್ಳಿ ಹಾಕಿ ಚಾವಡಿಯಲ್ಲಿ ಕೂತು ಬೀಡಿಗೆ ಬೆಂಕಿ ಹಚ್ಚಿ ಬಯ್ಯುತ್ತಾ ಕುಳಿತ..
ಅಮ್ಮಿಣಿ ಒಬ್ಬಳೇ ಮಕ್ಕಳ ಬಳಿ ಹೋಗಿ ಮಲಗಿ ಅಳುತ್ತಲೇ ನಿದ್ದೆಗೆ ಜಾರಿದಳು.
ಬೆಳಗ್ಗೆ ಸುಂದ ಚಾವಡಿಯಲ್ಲೇ ಮಲಗಿದ್ದ.
ಆತನ ಕೋಪ ಇಳಿದಿತ್ತು.
ಬೆಳಗ್ಗಿನ ತಿಂಡಿ ತಿನ್ನುತ್ತಲೇ ಮಕ್ಕಳನ್ನು ತನ್ನ ಹತ್ತಿರ ಕುಳ್ಳಿರಿಸಿ ಅವರಿಗೂ ತಿನ್ನಿಸುತ್ತಾ … ಅಮ್ಮಿಣಿ ಎಂದು ಪ್ರೀತಿಯಿಂದ ಕರೆದ.
ಅಮ್ಮಿಣಿಗೂ ಆಶ್ಚರ್ಯ..
ಎಂದೂ ಹೀಗೆ ಪ್ರೀತಿಯಿಂದ ಕರೆದವನೋ ಮಾತನಾಡಿಸಿದವನೋ ಅಲ್ಲ.
ಸಂಜೆಯಾದರೆ ಬೈಗುಳ. ಮಕ್ಕಳೊಡನೆ ಮಾತ್ರ ಮಾತುಕತೆ.. ಅಮ್ಮಿಣಿ ಒಲೆಗೆ ನಾಲ್ಕು ಸೌದೆ ತುರುಕಿಸಿ ಸೆರಗನ್ನು ಸರಿಮಾಡುತ್ತಾ… ” ಹಾ ಬಂದೆ” ಎಂದು ಆತನ ಬಳಿ ಹೋಗಿ ಕುಳಿತಳು.
ಸುಂದ ಏನೋ ಖುಷಿಯಲ್ಲಿದ್ದ.
“ಅಮ್ಮಿಣಿ… ನೋಡು ಕುಟ್ಟಿಗೌಡ ತನ್ನ ಎಂಟು ತಾಳೆಗಳನ್ನು ನನಗೆ ಕೆತ್ತಲು ವಹಿಸಿಕೊಟ್ಟಿದ್ದಾನೆ. ಬರುವ ವಾರದಿಂದ ಕೆಲಸ ಜಾಸ್ತಿ ಇರಬಹುದು. ಎಲ್ಲಾ ತಾಳೆಗೂ ಇವತ್ತಿಂದಲೇ ಬಿದಿರ ಏಣಿ ಕಟ್ಟಲು ತೊಡಗುತ್ತೇನೆ. ಪೇಟೆಯಲ್ಲೂ ತಾಳೆ ಬೆಲ್ಲಕ್ಕೆ ಡಿಮಾಂಡು ಈಗೀಗ ಜಾಸ್ತಿ ಆಗುತ್ತಿದೆ.
ಬರುವ ವಾರದಿಂದ ನಿನ್ನನ್ನೂ ಕರಕೊಂಡು ಹೋಗುತ್ತೇನೆ..”.
ಅಮ್ಮಿಣಿ ನಕ್ಕಳು…
ಅವಳ ಉತ್ತರಕ್ಕೂ ಕಾಯದೆ ಚಾ ಹೀರುತ್ತಾ ಸುಂದ ಹೊರಡಲು ನಿಂತ.
ಲೋಟ ಖಾಲಿಯಾಗುತ್ತಲೇ ಗೋಡೆಯಲ್ಲಿ ತೂಗು ಹಾಕಿದ್ದ ಕತ್ತಿ, ಕೊಡವನ್ನು ಎತ್ತಿ ಹೆಗಲಿಗೇರಿಸಿ ಸುಂದ ಅಂಗಳ ದಾಟಿ ಹೊರಟೇ ಬಿಟ್ಟ.
ಅಮ್ಮಿಣಿ ಚಾವಡಿಯಲ್ಲಿ ಕೂತು ಆತನ ನಡಿಗೆಯನ್ನೇ ನೋಡುತ್ತಾ ಕುಳಿತಳು.
ದಿನಗಳುರುಳಿತು…
ಸುಂದನೊಂದಿಗೆ ಅಮ್ಮಿಣಿಯೂ ಕೆಲಸಕ್ಕೆ ಹೋಗಲು ಶುರುಮಾಡಿದ್ದಳು. ಹೋಗುವ ದಾರಿಯಲ್ಲೇ ಲಚ್ಚಿಮಿಯ ಮನೆ. ಅಮ್ಮಿಣಿಯ ಕಣ್ಣು ಆ ಕಡೆ ನೋಡುತ್ತಲೇ ಇತ್ತು.
ಗುಡಿಸಲಿಗೆ ಬೀಗ ಜಡಿದಿತ್ತು.
ಸಂಜೆಯ ಒಳಗಡೆ ಇಬ್ಬರೂ ಜೊತೆಯಾಗಿ ವಾಪಸ್ಸಾಗುತ್ತಿದ್ದರು.
ಸಂಜೆ ಬಂದು ಬಾಣಲೆಗೆ ಹಾಕಿ ಕಳ್ಳು ಬೇಯಿಸತೊಡಗಿದರೆ ಮಧ್ಯರಾತ್ರಿಯ ವರೆಗೂ ಮುಂದುವರಿಯುತ್ತಿತ್ತು.
ಅಮ್ಮ ಬಂದು ಸಹಾಯಕ್ಕೆ ನಿಂತಿದ್ದ ಕಾರಣ ಬೆಲ್ಲ ಒಣಗಿಸುವ ಮತ್ತು ಮಕ್ಕಳನ್ನು ನೋಡುವ ಜವಾಬ್ದಾರಿ ಆಕೆಯೇ ವಹಿಸಿಕೊಂಡಂತಾಗಿತ್ತು.
ಅದೊಂದು ದಿನ ಬೆಳಿಗ್ಗೆ ಹೊರಟಾಗ ಲಚ್ಚಿಮಿಯ ಗುಡಿಸಲು ತೆರೆದಿತ್ತು. ಮನೆಯಲ್ಲಿ ಪುಟ್ಟ ಮಗುವಿನ ಅಳುವೂ ಕೇಳಿಸುತ್ತಿತ್ತು.
ಸುಂದ ಒಂದು ನಿಮಿಷ ಅಲ್ಲೇ ನಿಂತ.
ಅಮ್ಮಿಣಿ ಕೋಪದಿಂದ ನಡೀರಿ ಮುಂದೆ ಎನ್ನುತ್ತಾ ದೂಡಿದಳು.
ಸುಂದ ಮನಸ್ಸಿಲ್ಲದ ಮನಸ್ಸಿನಿಂದ ಮುಂದೆ ನಡೆಯುತ್ತಿದ್ದ.
ಸುಂದ ಮಂಕಾಗಿದ್ದ.
ನಾಲ್ಕು ತಾಳೆಮರಕ್ಕೆ ಏರಿದವನು ಸುಸ್ತಾಗಿ ಕೆಳಗೆ ಮಲಗಿದ್ದ.
ನಂತರ ಈಗ ಬರುತ್ತೇನೆ ಎಂದು ಹೋದವ ಒಂದು ಗಂಟೆ ಕಾದರೂ ವಾಪಸ್ಸಾಗಲಿಲ್ಲ.
ಅಮ್ಮಿಣಿಯ ಕೋಪ ನೆತ್ತಿಗೇರಿತ್ತು…
ನೇರವಾಗಿ ಲಚ್ಚಿಮಿಯ ಮನೆಗೆ ಹೆಜ್ಜೆ ಹಾಕಿದಳು.
ಸುಂದ ಅದೇ ಗುಡಿಸಲಲ್ಲಿದ್ದ… !!!.
ಒಂದುವಾರದ ಹಾಲುಗಲ್ಲದ ಮಗು ತೊಟ್ಟಿಲಲ್ಲಿ ನಿದ್ರಿಸುತ್ತಿತ್ತು.
ಬಾಣಂತಿ ಲಚ್ಚಿಮಿ ಕೂತಿದ್ದಳು.
ಅಮ್ಮಿಣಿ ಜೋರಾಗಿ ಕಿರುಚಲು ಪ್ರಾರಂಭಿಸಿದಳು.
ಮುಂಡೆ.. ನಿನಗೆ ಇಟ್ಟುಕೊಳ್ಳಲು ನನ್ನ ಗಂಡ ಮಾತ್ರ ಸಿಕ್ಕಿದ್ದಾ…
ಹಿಡಿಶಾಪ ಹಾಕುತ್ತಾ ಸುಂದನ ಕೈ ಹಿಡಿದು ಎಳೆಯುತ್ತಾ ಕರೆತಂದಳು.
ಲಚ್ಚಿಮಿ ಮಾತನಾಡಲಿಲ್ಲ.
ಆದರೆ ಅಳುತ್ತಲೇ ಇದ್ದಳು.
ಬಾಣಂತಿ ಹೆಣ್ಣು.. ತನ್ನವರೆಂದು ಆಕೆಗೆ ಯಾರೂ ಇರಲಿಲ್ಲ.
ಸುಂದನ ಸಾರಾಯಿ ಹುಚ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇತ್ತು.
ಅಮ್ಮಿಣಿಗೆ ಈಗ ಇದೊಂದು ಚಿಂತೆ ಬೇರೆ.
ಜೊತೆಯಾಗಿ ಹೋಗುವುದೇನೋ ಸರಿ ಆದರೆ ಮಾತಿಲ್ಲ.
ಎಲ್ಲವೂ ಕಳೆದುಕೊಂಡವನಂತೆ ಆಲೋಚನೆ ಮಾಡುತ್ತಲೇ ಇರುತ್ತಿದ್ದ.
ಒಂದು ಬೆಳಿಗ್ಗೆ ಸುಂದ ಏಳಲೇ ಇಲ್ಲ… !.
ಮಾತಿಲ್ಲ.
ಎದ್ದೇಳಲೂ ಆಗುತ್ತಿಲ್ಲ..
ಬಲಗೈ ಮತ್ತು ಬಲಗಾಲು ಸ್ವಾಧೀನವನ್ನೂ ಕಳೆದುಕೊಂಡಿತ್ತು.. !.
ವೈದ್ಯರು ಬಂದು ಪರೀಕ್ಷೆ ಮಾಡಿಯಾಯಿತು. ದಿನ ಮೂರಾಯಿತು….
ಸುಂದ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದ ಎಂದು ಆತನ ಕಣ್ಣುಸನ್ನೆಯಿಂದ ಅರ್ಥವಾಗುತ್ತಿತ್ತು.
ಗಂಡ ಮಲಗಿದ್ದಾನೆ..
ತಾನೂ ಮನೆಯಲ್ಲಿ ಕೂತರೆ ಜೀವನ ರಥ ಸಾಗುವುದಾದರೂ ಹೇಗೆ.. ?
ಇಂದಿಗೆ ದಿನಗಳು ನಾಲ್ಕಾಯಿತು…
ಅಮ್ಮಿಣಿ ನೇರ ತಾಳೆ ಮರದತ್ತ ಹೊರಟಳು.
ದಾರಿಯಲ್ಲಿ ನಡೆವಾಗ ಲಚ್ಚಿಮಿಯ ಮನೆಯತ್ತ ನೋಡಲು ಮರೆಯಲಿಲ್ಲ.
ಬಾಣಂತಿ ಹೆಣ್ಣು ಅಂಗಳದಲ್ಲಿ ಭತ್ತ ಕುಟ್ಟುತ್ತಲಿದ್ದಳು.
ಅಮ್ಮಿಣಿ ಕಂಡೂ ಕಾಣದವಳಂತೆ ಮುಂದೆ ನಡೆದಳು.
ಮುಸ್ಸಂಜೆಯಾಯಿತು.
ಪೇಟೆಯಿಂದ ಸಾಮಾನು ಮತ್ತು ಒಂದಿಷ್ಟು ಬಟ್ಟೆ ಬರೆಗಳನ್ನೂ ಖರೀದಿಸಿ ಮನೆಗೆ ವಾಪಸ್ಸಾದಳು.
ಅಮ್ಮನಲ್ಲಿ ನಾಟಿಕೋಳಿಯೊಂದನ್ನು ಸಾರುಮಾಡಲು ತಿಳಿಸಿ ಹೋಗಲು ಮರೆಯಲಿಲ್ಲ.
ಸುಂದ ಅಸಹಾಯಕನಾಗಿ ಅಮ್ಮಿಣಿಯನ್ನೇ ನೋಡುತ್ತಲಿದ್ದ.
ಮುಸ್ಸಂಜೆಯಾಯಿತು.
ಅಮ್ಮಿಣಿ ಸುಂದನ ಬಳಿ ಬಂದು ಚಿಮಿಣಿ ದೀಪದ ಬೆಳಕು ಏರಿಸುತ್ತಾ…
“ಸುಂದ… ನೋಡು ಯಾರು ಬಂದಿದ್ದಾರೆ…,,,” ಎಂದಳು.
ಇವರೆಲ್ಲಾ ಇನ್ನು ನಮ್ಮೊಂದಿಗೇ ಇರುತ್ತಾರೆ ಎನ್ನುತ್ತಾ
ಹಾಲುಕಂದನನ್ನು ಎದೆಗಪ್ಪಿ ಮುದ್ದಿಸುತ್ತಾ ಸುಂದನ ಮಡಿಲಲ್ಲಿಟ್ಟು ನಗತೊಡಗಿದಳು.
ನಗುವಿನ ಹಿಂದೆ ನೂರಾರು ನೋವುಗಳಿತ್ತು.
ಸುಂದನ ಕಣ್ಣಿಂದ ಹರಿವ ನೀರು ಲಚ್ಚಿಮಿಗೂ ಸಮಾಧಾನ ಹೇಳುವಂತಿತ್ತು.
********