ಮೌನಯುದ್ಧ

ಪುಸ್ತಕ ಪರಿಚಯ

ಮೌನ ಯುದ್ದ(ಕವನಸಂಕಲನ)

ಕವಿ: ಸುರೇಶ್ ಎಲ್. ರಾಜಮಾನೆ

ಪ್ರಕಾಶನ: ವಿಶ್ವ ಖುಷಿ ಪ್ರಕಾಶನ,

ನವನಗರ ಬಾಗಲಕೋಟ.

ಪುಟಗಳು: 92

 ಬೆಲೆ: 120/-

ಪ್ರಕಟಿತ ವರ್ಷ: 2018

ಕವಿಯ ಸಂಪರ್ಕ ಸಂಖ್ಯೆ: 8105631055

         ಗಂಭೀರ ಕಾವ್ಯಾಧ್ಯಯನ ಮೂಲಕ ನಿರಂತರ ಅನುಸಂಧಾನದಲ್ಲಿ ತೊಡಗಿ ಕಾವ್ಯ ರಚನೆ ಕೃಷಿಗೆ ಮುಂದಾಗಿರುವ ರನ್ನಬೆಳಗಲಿಯ ಯುವಕವಿ ಸುರೇಶ್ ರಾಜಮಾನೆಯವರು “ಸುಡುವ ಬೆಂಕಿಯ ನಗು” ಎನ್ನುವ ಕೃತಿಯನ್ನು ಪ್ರಕಟಿಸುವ ಮೂಲಕ ಸಾಹಿತ್ಯ ಲೋಕವನ್ನು ಪ್ರವೇಶಿಸಿದರು. ಈಗ “ಮೌನಯುದ್ಧ”ದ ಮೂಲಕ ನಮ್ಮೊಂದಿಗೆ ಮಾತಿಗಿಳಿದಿದ್ದಾರೆ.

         ಇಲ್ಲಿ ಕವಿ ಹೇಳುವಂತೆ ‘ನನ್ನ ಭಾವನೆಗಳೊಂದಿಗೆ ಮತ್ತೊಬ್ಬರ ಭಾವನೆಗಳನ್ನು ಮನಸ್ಸಿಗೆಳೆದುಕೊಂಡು ಮಾತಾಗುತ್ತೇನೆ, ಕವಿತೆಯ ಜೊತೆ ನಾನು ನಾನಾಗಿ ಹೋಗುತ್ತೆನೆ. ಭಾವವನ್ನು ಪ್ರೀತಿಸುವಷ್ಟೆ ಭಾವೊದ್ವೇಗವನ್ನು, ಸಂತೋಷವನ್ನು ಪ್ರೀತಿಸುವಷ್ಟೆ ಸಂಕಟವನ್ನು ಪ್ರೀತಿಸಬೇಕೆಂದು’ ಹೇಳುವ ಕವಿಯ ಮಾತು ಹೃದಯಸ್ಪರ್ಶಿಯಾಗಿದೆ.

‘ಬಾಚಿದಷ್ಟು ಅಗಲವಾದ ಹೆಗಲು

ಬಗೆದಷ್ಟು ಭಾರವಾದ ಭಾವನೆಗಳ ಒಡಲು

ನನ್ನ ಕವಿತೆ’

ಎನ್ನುವ ಕವಿ ಮನಸ್ಸು

‘ಅಂಗಳದಿ ಮಲ್ಲಿಗೆ ಬಾಡಿ ನಿಂತಿದೆ

ಮೆಲ್ಲಗೆ ವಿಷದ ನೀರೆರೆದವರು ಯಾರು?’

ಎಂದು ಪ್ರಶ್ನಿಸುತ್ತದೆ.

‘ಬೆಳಗಲಿ ದೀಪ ಬಡವರ ಬಾಗಿಲಲಿ ಗುಡಿಸಲಿನಲಿ’ ಎಂದು ನಿರೀಕ್ಷಿಸುತ್ತದೆ.

         “ಮೌನಯುದ್ಧ” ಕವನ ಸಂಗ್ರಹದಲ್ಲಿ ಓಟ್ಟು 56 ಕವಿತೆಗಳಿವೆ. ಕವಿ ಡಾ. ಟಿ. ಯಲ್ಲಪ್ಪ ಅವರ ಮೌಲಿಕವಾದ ಮುನ್ನುಡಿ ಹಾಗೂ ಗುರುಮಾತೆ ಲಲಿತಾ ಹೊಸಪ್ಯಾಟಿ ಅವರ ಬೆನ್ನುಡಿ ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ. ಸಾಮಾಜಿಕ ವ್ಯವಸ್ಥೆಯಲ್ಲಿ ದಮನಿತರ ನೋವು, ನಿರಾಶೆ, ಹಸಿವು, ಬಡತನ, ಪ್ರೀತಿ-ಪ್ರೇಮ ಹಾಗೂ ಮಾನವೀಯ ಸಂವೇದನೆಗಳು ಕವಿಯ ಜೀವನ ಸಂಗ್ರಾಮದ ಏರಿಳಿತಗಳು ಇಲ್ಲಿನ ಕವಿತೆಗಳ ವಸ್ತು-ವಿಷಯಗಳಾಗಿವೆ.

          ವರಕವಿ ಬೆಂದ್ರೆ ಅವರ ಗಾಢ ಪ್ರಭಾವಕ್ಕೆ ಒಳಗಾದ ಎಲ್ಲಾರ್ ಸೂರ್ಯ ಅವರು ‘ನನ್ನೊಳಗಿನ ನಾನು’ ಕವಿತೆಯಲ್ಲಿ ಅಪ್ಪನ ಹಸಿವು ಬಡತನದ ನೆನಪುಗಳನ್ನು ಕವಿತೆಯಾಗಿ ಹಸಿರಾಗಿಸಿದ್ದಾರೆ.

‘ಮಗುವಿನ ನಗುವಿನ ಗೆದ್ದಷ್ಟು ಖುಷಿ

ಹಸಿವಿನ ಹೊಟ್ಟೆಗೆ ಉಂಡಷ್ಟು ಖುಷಿ’

ಎನ್ನುವ ಕವಿ ನೈಜ ಬದುಕಿನ ವಾಸ್ತವಿಕತೆಯನ್ನು ಓದುಗರೆದುರು ಬಿಚ್ಚಿಡುತ್ತಾರೆ. ಹಾಗೆಯೇ ನೀರಾಭರಣ ಸುಂದರಿ, ಸ್ವರಭಾರ, ಹೊಟ್ಟೆಯೊಳಗಿನ ಉರಿ ಹಾಗೂ ನನ್ನವ್ವ ಕವಿತೆಗಳು ಓದುಗರನ್ನು ಚಿಂತನೆಗೆ ತೊಡಗಿಸುತ್ತವೆ.

         ಸಾಮಾಜಿಕ ವ್ಯವಸ್ಥೆಯಲ್ಲಿನ ಅವ್ಯವಸ್ಥೆಯ ವಿರುದ್ಧ ಕವಿಹೃದಯ “ಮೌನಯುದ್ಧ”ಕ್ಕೆ ಸಿದ್ಧವಾಗಿದೆ.

‘ಸಾಹಸ ಭೀಮ ಶಕ್ತಿಯನು ಸಾಗರವಾಗಿಸಿ

ವಿಜಯದ ಕಹಳೆಯ ಮುಗಿಲ ಮುಟ್ಟಿಸಿ’

ಎನ್ನುವಲ್ಲಿ ಶಕ್ತಿಕವಿ ರನ್ನನ ಪ್ರಭಾವ ಎದ್ದು ಕಾಣುತ್ತದೆ.‍

         ಕಾವ್ಯದ ಅಂತಃಸತ್ವವನ್ನು ಹೀರಿ ಮೌಲಿಕ ಕವಿತೆಗಳನ್ನು ಬರೆಯುವ ಕವಿ ಸುರೇಶ್ ರಾಜಮಾನೆಯವರಿಗೆ ಬರುವ ನಾಳೆಗಳಲ್ಲಿ ಉಜ್ವಲ ಭವಿಷ್ಯವಿದೆ.

************************

ಬಾಪು ಖಾಡೆ

Leave a Reply

Back To Top