ಕಾವ್ಯ ಸಂಗಾತಿ
ಡಾ. ಹೆಚ್. ನಟರಾಜ್ ಆರ್ಯ
“ಹೊನ್ನೆರಳು”


ಹುಣ್ಣಿಮೆಯ ಹೊನ್ನೆರಳು
ಸಾಗರ ಮೈಮೇಲೆ ಹರಿದು,
ಅಲೆಗಳ ಮೌನ ನಿದ್ರೆಯಲಿ
ಚಂದ್ರ ಕನಸಾಗಿ ಕರಗಿತು.
ನೀರಿನ ತುಟಿಯ ನಡುಕದಲಿ
ಬೆಳ್ಳಿಯ ತೇವ ಮೊಳಗಿತು,
ದೂರದ ವಿರಹ ಉಪ್ಪಾಗಿ
ಎದೆಯ ಆಳದಲಿ ನೆಲಸಿತು.
ನೀಲಿಯ ಶಂಖ ಊದಿದ ಗಾಳಿ
ರಾತ್ರಿಯ ಕೂದಲು ಸವರಿತು,
ಅಲೆಗಳ ರಕ್ತನಾಳದಲಿ
ಮೌನ ಬೆಳಕು ಹರಿಯಿತು.
ತೀರ ಮುಟ್ಟದ ಅಲೆಗಳಲಿ
ಹಂಬಲ ಹಕ್ಕಿ ತೇಲಿತು,
ನೀರೊಳ ಮುರಿದ ಚಂದ್ರಬಿಂಬ
ಪ್ರೀತಿಯ ಗಾಯವಾಯಿತು.
ಬೆಳದಿಂಗಳ ಮೃದುವೆರಳು
ಅಲೆಗಳ ಬೆನ್ನಲಿ ಜಾರಿತು,
ಸಾಗರದ ಕತ್ತಲ ಗರ್ಭದಲಿ
ಮೌನ ಕಮಲ ಅರಳಿತು.
ನೀ ಇಲ್ಲದ ಕಪ್ಪು ರಾತ್ರಿ
ಸಾಗರ ಶಿಲೆಯಾಗಿ ನಿಂತು,
ನೀ ಬಂದ ಬೆಳ್ಳಿ ಹುಣ್ಣಿಮೆ
ಉಪ್ಪಿನ ದೀಪವಾಗಿ ಹೊತ್ತು.
ಮರಳ ತೀರದ ಮಡಿಲೊಳಗೆ
ಹೆಜ್ಜೆಯ ದಾಹ ಮಲಗಿತ್ತು,
ಅಲೆಗಳ ಮರುಳು ಕರೆಯೊಳಗೆ
“ಬರುವೆಯಾ…” ತೇವ ಉಳಿಯಿತು.
ಆಕಾಶ ತಗ್ಗಿ ಮುತ್ತಿಟ್ಟ
ಸಾಗರದ ಉಪ್ಪು ನೆತ್ತಿಗೆ,
ಪ್ರಕೃತಿ ಬೆಳ್ಳಿ ಮಸಿಯಲಿ
ಪ್ರೀತಿ ಬರೆದು ಹೋಯ್ತು ರಾತ್ರಿಗೆ.
ಹುಣ್ಣಿಮೆ ದೂರ ಸರಿದರೂ
ಚಂದ್ರಗಂಧ ಉಸಿರಾಯಿತು,
ಸಾಗರದ ನೀಲಿ ಎದೆಯೊಳಗೆ
ಮೌನ ಬೆಳಕು ತೇಲಿತು.
ಪ್ರೀತಿ
ಒಮ್ಮೆ ತಾಕಿದ ಚಂದ್ರತಂಪು,
ಜೀವಪೂರ್ತಿ ಅಲೆಯುವ ಉಪ್ಪು.
ಡಾ. ಹೆಚ್. ನಟರಾಜ್ ಆರ್ಯ




Very nice comparison sir. Tumba chennagi moodiness bandide