ಧಾರಾವಾಹಿ ಸಂಗಾತಿ-23
ಅರ್ಜುನ ಉವಾಚ
ವಿಶ್ವನಾಥ ಎನ್ ನೇರಳೆಕಟ್ಟೆ
ನನ್ನ ಆತ್ಮಬಂಧು ಕೃಷ್ಣ ಬಂದನಂದು


ನಾನೀಗ ಸುಧನ್ವನ ಎದುರು ನಿಂತಿದ್ದೆ. ಅವನ ಹೋರಾಟದ ಪರಿಯನ್ನು ಇದುವರೆಗೂ ಕಂಡಿದ್ದ ನಾನು ಈಗ ಅವನನ್ನು ತೀರಾ ಸನಿಹದಿಂದ ಕಂಡೆ. ನನಗೆ ಎಷ್ಟರವನಿವನು ಎನಿಸಿತು. ನನ್ನ ಯುದ್ಧಾನುಭವವೇನು! ಇವನ ವಯಸ್ಸೇನು! ಹೋರಾಡಬೇಕೇ ನಾನಿವನಲ್ಲಿ! ನಾನು ಗೆಲುವನ್ನು ಪಡೆಯುವುದಂತೂ ದಿಟ. ಗೆದ್ದರೂ ಸಣ್ಣವನೆದುರು ಗೆದ್ದಂತಾಗುತ್ತದಷ್ಟೇ. ಒಂದು ವೇಳೆ ಅಪ್ಪಿತಪ್ಪಿ ಸೋತೆನೆಂದಾದರೆ ಯುದ್ಧಾನುಯುದ್ಧಗಳನ್ನು ಗೆದ್ದ ಆ ಕಲಿ ಪಾರ್ಥ ಕದನದಭನುವವೇ ಇಲ್ಲದವನ ಎದುರು ಸೋತನಂತೆ ಎಂಬ ಸುದ್ದಿ ಹಬ್ಬುತ್ತದೆ. ಈ ಯುದ್ಧ ನನ್ನ ಯೋಗ್ಯತೆಗೆ ಸಲ್ಲುವಂಥದ್ದಲ್ಲ. ಇವನನ್ನು ಬೆದರಿಸಿಯೇ ಇಲ್ಲಿಂದ ತೊಲಗಿಸುವುದೊಳಿತು ಎನಿಸಿತು. ಅದು ನನ್ನೊಳಗಿನ ಅಹಂಕಾರದಿಂದ ಉದ್ಭವಿಸಿದ ಯೋಚನೆಯೋ, ನನಗದರ ಅರಿವಿಲ್ಲ.
ದೊಡ್ಡ ಧ್ವನಿಯಲ್ಲಿ ಆರ್ಭಟಿಸಿದೆ ಸುಧನ್ವನಲ್ಲಿ. “ನನ್ನೊಡನೆ ಯುದ್ಧವನ್ನೇಕೆ ಬಯಸಿರುವೆ! ನೀನು ನಿಜಕ್ಕೂ ಅಪ್ರಬುದ್ಧ. ನನ್ನಂಥ ಪ್ರಸಿದ್ಧನೆದುರು ನಿನ್ನ ಹೋರಾಟವೇತಕ್ಕೆ! ನಿಮ್ಮ ಪಾಳಯದಲ್ಲಿ ಯಾರಾದರೂ ರಣ ಪರಾಕ್ರಮಿಗಳಿದ್ದರೆ ಅವರನ್ನು ಕಳುಹಿಸು ನನ್ನೆದುರು. ದ್ರೋಣ, ಭೀಷ್ಮ, ಕರ್ಣ ಮೊದಲಾದ ಘಟಾನುಘಟಿಗಳೇ ನನ್ನೆದುರು ಸೋತುಹೋಗಿದ್ದಾರೆ. ಈಗಲಾದರೂ ಇಲ್ಲಿಂದ ಹೊರಟುಹೋಗು. ಪ್ರಾಣ ಉಳಿಸಿಕೋ” ಎಂದು ಹೀಯಾಳಿಸಿದೆ.
ಅದು ಆ ಕ್ಷಣಕ್ಕೆ ನಾನು ಪ್ರಯೋಗಿಸಿದ ಯುದ್ಧತಂತ್ರವೂ ಹೌದು. ಹಿಂದಣ ಸಾಧನೆಯನ್ನು ಮುಂದಿಟ್ಟುಕೊAಡು ಶತ್ರು ಸುಧನ್ವನ ಎದೆಬಲವನ್ನು ಕುಂದಿಸುವ ಯತ್ನ ಮಾಡಿದೆ. ನನ್ನ ಮಾತುಗಳಷ್ಟೂ ನಿಷ್ಪçಯೋಜಕವೆನಿಸಿದವು ಅವನ ಎದುರಲ್ಲಿ. ಶೌರ್ಯವದು ಅವನದು ಕಿರಿದಾಗಲಿಲ್ಲ. ಇಮ್ಮಡಿಸಿತು.
ಪ್ರತಿಮಾತಿನಿಂದ ನನ್ನನ್ನು ಚುಚ್ಚಿದ. “ಕೌರವ ಸೇನೆಯ ವೀರರನ್ನು ನೀನು ಗೆದ್ದದ್ದು ನಿನ್ನ ಶಕ್ತಿಯಿಂದಲ್ಲ; ನಿನ್ನ ಸಾರಥಿಯಾಗಿದ್ದ ಆ ಶ್ರೀಕೃಷ್ಣನ ಬಲದಿಂದ. ಅವನಿಲ್ಲದೆ ನಿನಗಾವ ಗೌರವವಿದೆ ಈ ಧರೆಯಲ್ಲಿ! ಮೊದಲು ಕೃಷ್ಣನನ್ನು ಕರೆಸಿಕೋ. ನನ್ನನ್ನು ಜಯಿಸುವುದು ನಿನ್ನಿಂದ ಆಗುವಂಥದ್ದಲ್ಲ. ಗೆಲ್ಲುವ ಆಸೆಯನ್ನು ತೊರೆದುಬಿಡು” ಎಂದ.
ಅಬ್ಬಾ! ಎಂತಹ ದಿಟ್ಟತನವಿತ್ತು ಆ ಮಾತಿನಲ್ಲಿ. ನನ್ನ ಅಸ್ತಿತ್ವದ ಮೂಲಬೇರಿಗೇ ಕೈಹಾಕಿ ಕೆದಕಿದ್ದ ಆ ಸುಧನ್ವ ಆ ಕ್ಷಣದಲ್ಲಿ. ಹೌದು! ನಾನು ಕೃಷ್ಣಸಖ. ಅವನಿಂದಲೇ ಬೆಳೆದವನು ಈ ಬದುಕಿನಲ್ಲಿ. ಶತ್ರುಗಳಾಗಿ ಮುಂದೆ ನಿಂತ ಬಂಧುಗಳನ್ನೂ, ಗುರು ಹಿರಿಯರನ್ನೂ ಎದುರಿಸಲಾರೆ ಎಂಬ ಖಿನ್ನತೆ ನನ್ನನ್ನು ಆವರಿಸಿದ ಆ ಕುರುಕ್ಷೇತ್ರ ರಣಕಣದಲ್ಲಿ ಜೀವನತತ್ವವನ್ನು ಬೋಧಿಸಿದವನು ಶ್ರೀಕೃಷ್ಣ. ನನ್ನ ಸಾಹಸ ಪ್ರದರ್ಶನಕ್ಕೆ ಪ್ರೇರಣೆಯಾದವನು ಶ್ರೀಕೃಷ್ಣ. ಅವನಿಂದಲೇ ನನ್ನ ಅಸ್ತಿತ್ವ. ಅವನ ನೆರವಿಲ್ಲದೆ ನಾನಿಷ್ಟು ಸಾಧಿಸುತ್ತಿರಲಿಲ್ಲ. ಅದು ಸರ್ವವೇದ್ಯ.
ಸಾಧನೆಯ ಏಣಿಯನ್ನು ಹತ್ತುತ್ತಾ ಹತ್ತುತ್ತಾ ಹತ್ತನೆಯ ಮೆಟ್ಟಿಲಲ್ಲಿ ನಿಂತವನು ನಾನು. ಹತ್ತನೆಯ ಸಂಖ್ಯೆಯೇ ಆದವನು ನಾನು. ಕೃಷ್ಣನೆಂಬ ಒಂದು ಜೊತೆಗಿರಲು ನಾನು ಸಿಂಧು. ಇಲ್ಲವಾದರೆ ನಾನು ಬರಿಯ ಶೂನ್ಯ, ಬಿಂದು. ಸುಧನ್ವ ಕೋಪದಲ್ಲಾಡಿದ ಮಾತಿನಲ್ಲಿ ನನ್ನ ಬದುಕಿನ ನಿಜಸತ್ವವಿದೆ ಎನಿಸಿತು.
ಅವನ ಮಾತನ್ನು ನಾನು ಈ ಬಗೆಯಲ್ಲಿ ಅರಗಿಸಿಕೊಳ್ಳುತ್ತಿದ್ದಾಗಲೇ ಅವನು ಪ್ರಯೋಗಿಸಿದ ಬಾಣವೊಂದು ಬಂದಪ್ಪಳಿಸಿತು ನನ್ನ ರಥಕ್ಕೆ. ತರ್ರನೆ ತಿರುಗಿತು ರಥ, ಬುಗುರಿಯನ್ನೂ ನಾಚಿಸುವಂತೆ. ನಿಜಕ್ಕೂ ಅವನ ಆ ಕೌಶಲ್ಯ ವಿಶಿಷ್ಟವಾದದ್ದೆನಿಸಿತು. ಎದುರಾಳಿಗಳ ರಥವನ್ನು ತಿರುಗುವಂತೆ ಮಾಡುವ ಸಾಮರ್ಥ್ಯ ಇದ್ದವರನ್ನು ನಾನು ಮೂರು ಲೋಕಗಳಲ್ಲಿಯೂ ಕಂಡಿರಲಿಲ್ಲ. ಅದ್ಭುತ ಭಾವ ನನ್ನೊಳಗೆ ಮೂಡಿತು. ಆದರೂ ಅದನ್ನು ತೋರಗೊಡದೆ “ನೀನಿನ್ನೂ ಹುಡುಗ. ಏಕೆ ಅಳಿವೆ ನನ್ನಿಂದ. ನಿನ್ನ ತಂದೆಯನ್ನು ಬರಹೇಳು. ಕುದುರೆಯನ್ನು ಬಿಟ್ಟುಬಿಡು” ಎಂದೆ.
ಅವನು ಒಪ್ಪಿಕೊಳ್ಳಲಿಲ್ಲ. ಅದೆಷ್ಟೋ ಸಮಯ ನಮ್ಮ ನಡುವೆ ಕದನ ನಡೆಯಿತು. ನನ್ನ ಸಾರಥಿಯನ್ನೇ ಕೊಂದುಹಾಕಿದ ಸುಧನ್ವ. ಆ ಕ್ಷಣದಲ್ಲಿ ರಥವನ್ನೂ ನಾನೇ ನಡೆಸಬೇಕಾಯಿತು. ‘ಇವನನ್ನು ಎದುರಿಸಲಾರದ ತನ್ನದೂ ಒಂದು ಜನ್ಮವೇ!’ ಎಂಬ ವೈರಾಗ್ಯ ಭಾವ ನನ್ನನ್ನು ಆವರಿಸಿತು. ಅಶ್ವಮೇಧ ಯಾಗಕ್ಕೆ ಬಂದ ಬಹುದೊಡ್ಡ ತೊಡಕಿದು ಎನಿಸಿತು. ಆಪದ್ಬಾಂಧವ ಕೃಷ್ಣನನ್ನು ಕರೆಯದೆ ಬೇರೇನೂ ದಾರಿಯಿಲ್ಲ ಎನ್ನುವುದು ಖಚಿತವಾಯಿತು.
ನೆನೆದೆ ಕೃಷ್ಣನನ್ನು. ಸ್ಮರಿಸಿದೆ ಹರಿಯನ್ನು. ಕಡುಗಾಲದಲ್ಲಿ ಬಿಡದೆ ಕಾಪಾಡುವ ಪೊಡವಿಗೊಡೆಯ ನಾನಿದ್ದೆಡೆಯಲ್ಲಿ ತಕ್ಷಣವೇ ಪ್ರತ್ಯಕ್ಷನಾದ. ಅದೇನೋ ನೂತನ ಶಕ್ತಿ ನನ್ನೊಳಗೆ ಪಸರಿಸಿದಂತಾಯಿತು. ಕೃಷ್ಣನ ದಿವ್ಯ ಚರಣಗಳಿಗೆ ಮಣಿದೆ. ಆಶೀರ್ವದಿಸಿದ. ಬಿಗಿದಪ್ಪಿಕೊಂಡ.
ಕೃಷ್ಣನನ್ನು ದರ್ಶಿಸುತ್ತಿದ್ದ ಸುಧನ್ವನೊಳಗೂ ಭಕ್ತಿಭಾವ ಮೂಡಿತು. ಅವನು ಪುಳಕಿತನಾಗಿದ್ದ. ಅವನಿದ್ದ ಸ್ಥಳದಿಂದಲೇ ಸಾಷ್ಟಾಂಗ ಪ್ರಣಾಮ ಮಾಡಿದ. ತನ್ನ ಶೌರ್ಯಕ್ಕೆ ಸಾಕಿದು ಕೃಷ್ಣದರ್ಶನ! ಏನು ನೆನೆಸಿದ್ದೆನೋ ಅದು ಕೈಗೂಡಿದೆ ಎಂದು ಹಿರಿಹಿರಿ ಹಿಗ್ಗಿದ ಹಂಸಧ್ವಜಸುತ.
ಕೃಷ್ಣನೀಗ ನನ್ನ ಜೊತೆಗಿದ್ದಾನೆ ಎಂಬ ಅಸೀಮ ಧೈರ್ಯ ಮೂಡಿತು ನನ್ನಲ್ಲಿ. ಅದೇ ಹುಮ್ಮಸ್ಸಿನಿಂದ ಸುಧನ್ವನ ಶಿರವನ್ನು ಇನ್ನು ಮೂರು ಬಾಣಗಳನ್ನಷ್ಟೇ ಪ್ರಯೋಗಿಸಿ ಕತ್ತರಿಸಿಹಾಕುವ ಪ್ರತಿಜ್ಞೆ ಮಾಡಿದೆ. ನನ್ನನ್ನೂ ಮೀರುವ ಹುಮ್ಮಸ್ಸಿನಲ್ಲಿ ಸುಧನ್ವ “ನೀನು ಬಿಡುವ ಸರ್ವಶಕ್ತ ಮೂರು ಬಾಣಗಳನ್ನು ನಡುವೆಯೇ ಕತ್ತರಿಸಿಹಾಕದಿದ್ದರೆ ಕಡುಪಾತಕಿಗೊದುವ ಗತಿ ನನಗೆ ಒದಗಲಿ” ಎಂದು ಪ್ರತಿಜ್ಞೆ ಮಾಡಿದ.
ಹೀಗೆ ಮಾತನ್ನು ಮುಗಿಸಿದ ಅವನು ಬಿಟ್ಟ ಬಾಣದಿಂದ ಕೃಷ್ಣನಿದ್ದ ನನ್ನ ರಥ ನಾಲ್ಕುನೂರು ಮೊಳಗಳಷ್ಟು ದೂರ ಹಾರಿಹೋಯಿತು. ತಕ್ಷಣವೇ ಕೃಷ್ಣನಿಗೆ ಸುಧನ್ವನ ಅಂತಃಶ್ಶಕ್ತಿಯ ಅರಿವಾಯಿತು ಎನಿಸುತ್ತದೆ. ನನ್ನಲ್ಲಿ “ಯಾರೆದುರೂ ಸೋಲುವವನಲ್ಲ ಈತ. ಇವನೊಡನೆ ಯುದ್ಧ ಮಾಡುವವರಿಲ್ಲ. ನೀನು ನನ್ನಲ್ಲಿ ಸಮಾಲೋಚಿಸದೆ ಪ್ರತಿಜ್ಞೆ ಮಾಡಬಾರದಿತ್ತು” ಎಂದ. ಕೃಷ್ಣನೇ ಈ ಮಾತನ್ನು ಆಡಿದ ಮೇಲೆ!… ನನ್ನಲ್ಲೀಗ ಅಳುಕು ಮೂಡತೊಡಗಿತು…
ಡಾ. ವಿಶ್ವನಾಥ ಎನ್ ನೇರಳಕಟ್ಟೆ




