ಧಾರಾವಾಹಿ ಸಂಗಾತಿ-22
ಅರ್ಜುನ ಉವಾಚ
ವಿಶ್ವನಾಥ್ ಎನ್ ನೇರಳೆಕಟ್ಟೆ
ಸುಧನ್ವನ ಸಾಹಸವದು
ಸೂರೆಗೊಂಡಿತು ನಮ್ಮ ಸೇನೆಯನು


ಈಗ ಪಶ್ಚಾತ್ತಾಪ ಭಾವ ಮೂಡಿತು ಪುರೋಹಿತ ಲಿಖಿತನಲ್ಲಿ. ಕೃಷ್ಣಭಕ್ತನಾದ ಸುಧನ್ವನಿಗೆ ತೊಂದರೆ ಆಗಲೆಂದು ಬಯಸಿದ ತನಗೆ ಮರಣವೇ ಸರಿಯಾದ ಶಿಕ್ಷೆ ಎಂಬ ಭಾವನೆ ಮೂಡಿತ್ತು ಅವನಲ್ಲಿ. ಸುಧನ್ವನಿದ್ದ ಆ ಎಣ್ಣೆ ಕೊಪ್ಪರಿಗೆಗೆ ಜಿಗಿದ. ಕೃಷ್ಣಭಕ್ತನ ಸಂಗದ ಘನಪರಿಣಾಮದಲಿ ಉಷ್ಣಾತಿಉಷ್ಣ ತೈಲದಲಿ ಬಿದ್ದರೂ ಸಹ ಲಿಖಿತ ಉಷ್ಣರಹಿತ ಸ್ಥಿತಿಯನ್ನು ಅನುಭವಿಸಿದ. ತಂಪುತಂಪಾದ ಕೊಳದಂತೆ ಭಾಸವಾಯಿತು ಆ ಕೊಪ್ಪರಿಗೆಯ ಒಳಗು ಅವನಿಗೆ.
ಅರಸ ಹಂಸಧ್ವಜನಿಗೆ ನಂಬಲಸಾಧ್ಯವಾದ ವಿಸ್ಮಯವಾಯಿತು. ಒಡನೆ ಬಂದವನು ಸುಧನ್ವ ಲಿಖಿತ ಇಬ್ಬರನ್ನೂ ಪ್ರೀತಿಯಿಂದ ಆಲಂಗಿಸಿಕೊAಡ. “ನಿನ್ನ ಮಗನ ದೆಸೆಯಿಂದ ನಮ್ಮ ಈ ನಗರ ಧನ್ಯವಾಯಿತಿಂದು” ಎಂದು ಹಂಸಧ್ವಜನಲ್ಲಿ ಸುಧನ್ವನನ್ನು ಮನಸಾರೆ ಹೊಗಳಿದ ಲಿಖಿತ.
ಕೃಷ್ಣಲೀಲೆಗೆ ಪಾತ್ರನಾದ ಸುಧನ್ವ ಈಗ ವೀರಾಗ್ರಣಿಯ ಪಾತ್ರ ಧರಿಸಿ ರಣರಂಗಪ್ರವೇಶ ಮಾಡಿದ. ಈ ಮೊದಲು ಮಗನನ್ನು ತೆಗಳಿದ್ದ ಹಂಸಧ್ವಜನಲ್ಲಿ ಈಗ ಅದೇ ಮಗನ ಬಗೆಗೆ ಹೆಮ್ಮೆಯ ಭಾವನೆಯಿತ್ತು. ಮಕ್ಕಳಾದವರ ಬದುಕಿನ ನಿಜ ಸಾರ್ಥಕತೆಯಿದು ಎನಿಸಿತು ನನಗೆ ಆ ಕ್ಷಣದಲ್ಲಿ. ತಂದೆ ತಾಯಿ ಅವರಿವರಲ್ಲಿ ಹೇಳಿಕೊಂಡು ಹೆಮ್ಮೆಪಡುವಂತಹ ರೀತಿಯಲ್ಲಿ ಬದುಕುವುದಕ್ಕಿಂತ ಮಿಗಿಲಾದದ್ದು ಏನಿದೆ ಮಕ್ಕಳ ಪಾಲಿಗೆ! ಹಂಸಧ್ವಜನ ಆ ಪ್ರೌಢ ಮೊಗದಲ್ಲಿ ಸಂತಸದ ಭಾವ ತಾಂಡವವಾಡುತ್ತಿತ್ತು.
ತಂದೆಯ ಚರಣಕ್ಕೆ ನಮಿಸಿದ ಸುಧನ್ವ ಯುದ್ಧಕ್ಕೆ ಸಿದ್ಧನಾಗಿ ಚತುರಂಗ ಬಲವನ್ನು ನಮ್ಮೆಡೆಗೆ ಮುನ್ನಡೆಸಿದ. ಮುಂದೆ ಮುಂದೆ ಬಂದ ಸೇನೆ ನಮ್ಮ ಕುದುರೆಯನ್ನು ಹಿಡಿಯಿತು. ತಕ್ಷಣವೇ ಪದ್ಮವ್ಯೂಹವನ್ನು ರಚಿಸಿದರು ಚಂಪಕಾಪುರಿಯ ಸೈನಿಕರು. ಆ ವ್ಯೂಹದೊಳಗೆ ಬಂಧಿಯಾಯಿತು ನಮ್ಮ ಕುದುರೆ.
ಈ ವಿಚಾರ ತಿಳಿದ ತಕ್ಷಣವೇ ನಾನು ಹೊರಳಿದ್ದು ಶ್ರೀಕೃಷ್ಣ ಸುತನೆಡೆಗೆ. ವಿಷಯ ತಿಳಿಸಿದೆ. ಮಾಡಬಹುದೇನೀಗ ಎಂದು ಕೇಳಿದೆ. ಕೆಲವೊಮ್ಮೆ ಹಾಗೆಯೇ, ಬದುಕೆಂಬ ಯುದ್ಧರಂಗದಲ್ಲಿ ಅನುಭವಕ್ಕಿಂತಲೂ ಕಿರಿಯರ ತಕ್ಷಣದ ಸಲಹೆಯೇ ಮುಖ್ಯ ಎನಿಸಿಬಿಡುತ್ತದೆ. ತಾನೊಬ್ಬನೇ ಪದ್ಮವ್ಯೂಹವನ್ನು ಹೊಕ್ಕು ಕುದುರೆಯನ್ನು ಬಿಡಿಸಿ ತರುತ್ತೇನೆ ಎಂಬ ಧೀರನುಡಿಯನ್ನಾಡಿದ ಪ್ರದ್ಯುಮ್ನ. ಅವನಿಗೊಂದು ಅವಕಾಶ ಕೊಟ್ಟುನೋಡುವುದು ಒಳ್ಳೆಯದು ಎನಿಸಿತು.
ಅಷ್ಟರಲ್ಲಿ ಬಳಿಬಂದ ಕರ್ಣಸುತ ವೃಷಕೇತು “ಇಂದಿನ ಯುದ್ಧವಿದು ನನ್ನನ್ನು ಸೆಳೆಯುತ್ತಿದೆ. ಶತ್ರುಸೇನೆಯನ್ನು ಪುಡಿಗಟ್ಟಿ ಕುದುರೆಯನ್ನು ತಾರದೇ ಹೋದರೆ ನಾನು ಕರ್ಣನಿಗೆ ಜನಿಸಿದವನೇ ಅಲ್ಲ” ಎಂದ. ಪ್ರದ್ಯುಮ್ನನ ಮಾತಿಗಿಂತಲೂ ಇವನ ಮಾತಿನಲ್ಲಿ ಬಿರುಸು ಅಧಿಕವಿದೆ ಎನಿಸಿತು. ಅವನನ್ನೇ ಕಳುಹಿಸಿಕೊಟ್ಟೆ ಸುಧನ್ವನಿಗೆ ಎದುರಾಗಿ.
ಯುದ್ಧಕ್ಕೆ ಹೋದ ವೃಷಕೇತುವಿನ ಗುರುತು ಮೊದಲಿಗೆ ಸಿಗಲಿಲ್ಲ ಸುಧನ್ವನಿಗೆ. ಕೇಳಿದ. “ನೀನಾರು? ಯಾರ ಮಗ? ಯಾವ ಕುಲ ನಿನ್ನದು?”
ಕುಲದ ಪ್ರಶ್ನೆಯೆತ್ತಿದ್ದಕ್ಕೆ ಘಟಾನುಘಟಿಗಳ ಎದುರೇ ಸಿಡಿದುನಿಂತವನು ಕರ್ಣ. ಅವನ ಮಗನಾದ ವೃಷಕೇತುವಿನಲ್ಲಿಯೂ ಕಾಣಿಸಿಕೊಂಡಿತು ಅದೇ ಬಗೆಯ ಅಸಮಾಧಾನ, ಸುಧನ್ವ ಪ್ರಶ್ನೆ ಕೇಳಿದಾಗ. “ನಯನಕ್ಕೆ ಅಗೋಚರವಾಗಿರುವ ಹೂವೊಂದು ಪರಿಮಳವನ್ನು ಪಸರಿಸುತ್ತದೆ. ಕುಲ ಯಾವುದು ಎನ್ನುವುದು ಅರಿವಿಗೆ ಬರಬೇಕಾದದ್ದು ಪೌರುಷದಿಂದಲೇ ಹೊರತು ಬೇರಾವುದರಿಂದಲೂ ಅಲ್ಲ. ನಿನಗೆ ನನ್ನ ಗುರುತು ಇಲ್ಲವೆಂದ ಮಾತ್ರಕ್ಕೆ ನಾನು ಪರಾಕ್ರಮ ತೋರಿಸದೇ ಇರುವವನಲ್ಲ” ಎಂದ ಕರ್ಣತನಯ.
ನನಗವನ ಮಾತು ಸರಿಯೆಂದು ತೋರಿತು. ಕುಲದ ಪ್ರಶ್ನೆಯನ್ನು ಮುಂದಿಟ್ಟುಕೊAಡು ಅವಕಾಶವನ್ನು ಕೊಡುವುದಾಗಲೀ, ಅವಕಾಶವನ್ನು ನಿರಾಕರಿಸುವುದಾಗಲೀ ಸರಿಯಲ್ಲ. ಕುಲವನ್ನು ಇನ್ನೊಬ್ಬರು ಹೇಳಿಕೊಳ್ಳಬೇಕಾದ ಅಗತ್ಯವೂ ಇಲ್ಲ.
ಯುದ್ಧಕ್ಕಿಳಿದರು ಸುಧನ್ವ ವೃಷಕೇತು. ಇದ್ದವರೆಲ್ಲರೂ ಅಚ್ಚರಿಯಿಂದ ನೋಡುವ ತೆರದಲ್ಲಿ ಶೌರ್ಯಭರಿತವಾಗಿ ಕದನ ನಡೆಯಿತು. ಹಂಸಧ್ವಜಸುತ ಪ್ರಯೋಗಿಸಿದ ಬಾಣಗಳು ಕರ್ಣಸುತನ ಶರೀರದೆಲ್ಲೆಡೆ ನಾಟಿ ಅವನನ್ನು ಅತೀವವಾಗಿ ಜರ್ಜರಿತಗೊಳಿಸಿದವು. ಪ್ರಜ್ಞೆ ಕಳೆದುಕೊಂಡ ವೃಷಕೇತು. ಸುಧನ್ವನ ಗೆಲುವಿಗೆ ಪ್ರಜ್ಞೆಬಂತು. ರಥವನ್ನು ತಿರುಗಿಸಿದ ಸಾರಥಿ ವೃಷಕೇತುವಿನ ಜೀವವನ್ನು ಉಳಿಸಿದ.
ಆಗಲೇ ಸುಧನ್ವನೆದುರು ಹೋಗಿ ಕದನಕ್ಕೆ ಮನಮಾಡಿದ ಪ್ರದ್ಯುಮ್ನ. ಎಂಟು ಬಾಣಗಳು ಸಿಡಿದು ಬಂದವು ಕೃಷ್ಣಪುತ್ರನೆಡೆಗೆ, ಹಂಸಧ್ವಜಪುತ್ರನ ಬಿಲ್ಲಿನಿಂದ. ಪ್ರದ್ಯುಮ್ನನೂ ಅದೇ ಬಗೆಯ ಉತ್ತರವಿತ್ತ. ಅವನ ಪ್ರತಿಕ್ರಿಯೆಯನ್ನು ಸಹಿಸುವುದಕ್ಕಾಗಲಿಲ್ಲ ಸುಧನ್ವನಿಗೆ. “ಕೃಷ್ಣಸುತ ನೀನೆಂದು ಇದುವರೆಗೂ ಸಹಿಸಿದೆ. ಇನ್ನು ನಾನು ಸಹಿಸುವವನಲ್ಲ. ನನ್ನ ಬಾಣವದು ಬಾಯಾರಿದೆ. ನಿನ್ನೊಡಲಲ್ಲಿ ಕೆಂಪುಜಲವಿದೆ. ನನ್ನ ಬಾಣಕ್ಕೆ ಆ ಜಲವನ್ನು ಕುಡಿಸದೆ ಬಿಡುವವನಲ್ಲ” ಎಂದು ಹೇಳುತ್ತಲೇ ಪ್ರದ್ಯುಮ್ನನ ಬಾಣವನ್ನು ಏಳು ತುಂಡುಗಳಾಗಿ ಕತ್ತರಿಸಿದ. ಸುಧನ್ವ ಶೌರ್ಯದ ಮುಂದೆ ಪ್ರದ್ಯುಮ್ನ ಪರಾಕ್ರಮವದು ಕಳೆಗುಂದಿತು.
ಸುಧನ್ವನನ್ನು ಸೋಲಿಸದೆಯೇ ಮರಳುವವರಲ್ಲ ಎಂದು ವೀರಾವೇಷದಿಂದ ಹೋದ ಕೃತವರ್ಮ ಸೋಲಿನ ಮುಖ ಹೊತ್ತು ಮರಳುವಂತಾಯಿತು. ಅನುಸಾಲ್ವನ ಸಾಮರ್ಥ್ಯವದು ಸಾಲದೇ ಹೋಯಿತು. ನಮ್ಮ ಸೇನೆಯನ್ನು ಸಂಪೂರ್ಣವಾಗಿ ಸೂರೆಗೊಳ್ಳುವ ಹುಮ್ಮಸ್ಸಿನಲ್ಲಿದ್ದಾನೆ ಆತ ಎನ್ನುವುದು ಗೊತ್ತಾಗುತ್ತಿತ್ತು. ನಮ್ಮ ಕಡೆಯ ವೀರಾಧಿವೀರರನ್ನು ಬಹುಬೇಗ ಕೊನೆಗಾಣಿಸಿ ಕ್ಷಿಪ್ರವಾಗಿ ಕೃಷ್ಣದರ್ಶನಗೈಯ್ಯುವ ಉತ್ಸುಕತೆ ಸುಧನ್ವನಲ್ಲಿ ಇದ್ದಂತಿತ್ತು.
ಜೀವ ಕಳೆದುಕೊಂಡು ನೆಲದ ಮೇಲೆ ಬಿದ್ದಿದ್ದ ನಮ್ಮ ಸೇನೆಯ ಆನೆ ಕುದುರೆ ರಥ ಸೈನಿಕರು ಎಲ್ಲವೂ ಎಲ್ಲರೂ ಸಾರಿ ಸಾರಿ ಹೇಳುತ್ತಿದ್ದುದು ಗಗನದೆತ್ತರವಾಗಿದ್ದ ಸುಧನ್ವ ಪರಾಕ್ರಮವನ್ನು. ಬರಿಯ ಕೃಷ್ಣಭಕ್ತ ಇವನಲ್ಲ, ಯುದ್ಧದಲ್ಲಿ ಸರ್ವಶಕ್ತ ಎಂದೆನಿಸಿತು ನನಗೆ. ಆದರೂ ನನ್ನ ಶಕ್ತಿಗೆ ಸಮನಲ್ಲ ಎಂಬ ಮೇಲರಿಮೆಯ ಭಾವವೂ ಮೂಡಿತು.
ಇನ್ನು ನಾನು ಯುದ್ಧರಂಗವನ್ನು ಪ್ರವೇಶಿಸದಿದ್ದರೆ ಗೆಲುವು ದೊರೆಯುವಂಥದ್ದಲ್ಲ ಎಂದು ಹೇಳುತ್ತಿತ್ತು ನನ್ನ ಅಂತರಂಗ. ಸುಧನ್ವನನ್ನು ಎದುರಿಸಲು ಸಜ್ಜಾದೆ…
ಡಾ. ವಿಶ್ವನಾಥ ಎನ್ ನೇರಳಕಟ್ಟೆ




