ಧಾರಾವಾಹಿ ಸಂಗಾತಿ-20
ಅರ್ಜುನ ಉವಾಚ
ವಿಶ್ವನಾಥ ಎನ್ ನೇರಳೆಕಟ್ಟೆ
ರಣರಂಗ ಪ್ರವೇಶಿಸದಂತೆ
ರಾಜಕುವರನನ್ನು ತಡೆದಿತ್ತು
ರತಿಕಾಮನೆ


ಹಂಸಧ್ವಜ ಕಾಯುತ್ತಿದ್ದದ್ದು ಪ್ರೀತಿಯ ಮಗ ಸುಧನ್ವನ ಬರುವಿಕೆಗಾಗಿ. ಅವನು ವಿಳಂಬ ಮಾಡಿದ್ದಾನೆ ಎಂಬ ಕೋಪ ಹಂಸಧ್ವಜನಲ್ಲೀಗ ಮೂಡತೊಡಗಿತ್ತು. ರಣವೀರ ಸುಧನ್ವ ರಣರಂಗದೆಡೆಗೆ ಬರಲು ವಿಳಂಬವಾದುದಕ್ಕೆ ಸಕಾರಣವಿತ್ತು. ಸೈನಿಕರು ಯುದ್ಧಕ್ಕೆ ಸಿದ್ಧರಾಗಿ ಹೋಗುತ್ತಿದ್ದುದನ್ನು ಕಂಡ ಸುಧನ್ವ ತಾನೂ ತಯಾರಾದ. ವೇಷಭೂಷಣಗಳನ್ನು ಧರಿಸಿಕೊಂಡ. ಮನವನ್ನು ರಣಶೌರ್ಯಕ್ಕೆ ಸಿದ್ಧವಾಗಿಸಿಕೊಂಡ. ಹೋಗಿ ಸಾಷ್ಟಾಂಗ ವಂದಿಸಿದ್ದು ತಾಯಿಯ ಚರಣಕಮಲಗಳಿಗೆ. “ಕುದುರೆಯನ್ನು ಕಟ್ಟಿ ಕದನವನ್ನು ಮಾಡಹೊರಟಿರುವ ನನ್ನ ಮೇಲೆ ನಿನ್ನ ಪೂರ್ಣ ಆಶೀರ್ವಾದವಿರಲಿ ತಾಯೇ” ಎಂದು ಬೇಡಿದ.
ಮಗನ ಮನವನ್ನು ವೀರತ್ವದಿಂದ ಹರಿದಾಸತ್ವದೆಡೆಗೆ ಸೆಳೆವ ಪರಮವಾಣಿ ಮೊಳಗಿತು ಆ ಕ್ಷಣದಲ್ಲಿ ಮಾತೆಯ ಮನದಾಳದಿಂದ. “ಅರ್ಜುನನ ಯಾಗದ ಕುದುರೆಯದು ನಾಲ್ಕಡಿಯ ದೇಹವನ್ನು ಹೊಂದಿದೆಯಷ್ಟೇ. ಅದರ ಗೊಡವೆಗಿಂತಲೂ ಆ ಪೊಡವೀಪತಿ ಶ್ರೀಕೃಷ್ಣನನ್ನು ಒಲಿಸುವ ಬುದ್ಧಿಯದು ನಿನಗೆ ಒಲಿಯಬೇಕಿದೆ. ನಿನ್ನ ಸಾಹಸವನ್ನು ಮೆಚ್ಚಿ ಆ ಅಸುರಾರಿ ಇಂದು ಪ್ರತ್ಯಕ್ಷನಾದರೆ ನಾವೆಲ್ಲರೂ ಸಾಕ್ಷಾತ್ ಕಾಣಬಹುದು ಅವನ” ಎಂದಳು ಸುಧನ್ವ ಮಾತೆ.
ಮಾತೆ ಮಾತದು ಪ್ರೇರೇಪಿಸಿತು ಸುಧನ್ವನನು ಪ್ರತಿಜ್ಞಾಬದ್ಧತೆಯೊಂದರ ಕಡೆಗೆ. “ಅರ್ಜುನನಿಗೆ ನೋವಾದರೆ ಆ ಶ್ರೀಕೃಷ್ಣ ಬಾರದೇ ಇರುವನೇ! ಆಪ್ತರ ಆರ್ತನಾದವನ್ನು ಆ ಆಪದ್ಬಾಂಧವ ಸಹಿಸಿಯಾನೇ! ಇಂದ್ರಸುತನೊಡನೆ ಹೋರಾಡುವೆ ಶೌರ್ಯದಿಂದ. ತನ್ಮೂಲಕ ಆ ಹರಿಯನ್ನು ನಮ್ಮೀ ಧರಣಿಗೆ ಬರಗೊಡುವೆ. ನಂತರ ಆ ಕೃಷ್ಣನ ಮುಂದೆ ನನ್ನ ಪೌರುಷವನ್ನು ತೋರಿಸುವೆ” ಎಂದು ದಿಟ್ಟತನದಿಂದ ನುಡಿದನು ಸುಧನ್ವ.
ಶ್ರೀಕೃಷ್ಣ ಬಂದಾಗ ಮಗನೆಲ್ಲಿ ಯುದ್ಧಕ್ಕೆ ವಿಮುಖನಾಗುವನೋ ಎಂಬ ಭಾವ ಆ ತಾಯಿಯನ್ನು ಕಾಡಿತು. ಅದನ್ನೇ ಹೇಳಿದಳು ಮಗನಲ್ಲಿ. “ಕೃಷ್ಣಾಗಮನದ ಗಳಿಗೆಯಲ್ಲಿ ನೀನು ಯುದ್ಧಕ್ಕೆ ವಿಮುಖನಾದರೆ ಜನರ ಮುಂದೆ ಮರ್ಯಾದೆ ನಾಶವದು ಖಚಿತ” ಎಂಬ ಎಚ್ಚರಿಕೆ ನೀಡಿದಳು.
“ಕೃಷ್ಣನಿಗೆ ವಿಮುಖನಾಗಿ ಬಂದರೆ ನಿನ್ನ ಗರ್ಭದಲ್ಲಿ ಜನಿಸಿದವನೇ ನಾನಲ್ಲ” ಎಂಬ ಧೀರನುಡಿಯನಾಡಿದ ಸುಧನ್ವ, ಕದನದಲ್ಲಿ ಭರಪೂರ ಶೌರ್ಯವನ್ನು ತೋರಿಸುವ ಆಶ್ವಾಸನೆಯನ್ನು ಅವಳಿಗಿತ್ತನು.
ಅಷ್ಟರಲ್ಲಿ ಬಳಿಗೆ ಬಂದ ಅವನ ಸಹೋದರಿ ಕುವಲೆಯೆನ್ನುವವಳು “ಕೃಷ್ಣನಿಗೆ ವಿಮುಖನಾಗಿ ನೀನು ಬಂದರೆ ನನ್ನ ಗಂಡನ ಮನೆಯಲ್ಲಿ ನಾನು ತಲೆಯೆತ್ತಿ ನಡೆಯಲಾರೆ” ಎಂದು ಹೇಳಿ, ಅಣ್ಣ ಅಸಹಾಯ ಶೌರ್ಯ ತೋರಲಿ ಎಂದು ಹಾರೈಸಿ, ಆರತಿಯನೆತ್ತಿ, ಚಂದನದ ತಿಲಕವನ್ನಿಟ್ಟು, ಕರ್ಪೂರ ವೀಳ್ಯವನ್ನು ಕೊಟ್ಟು, ಅಕ್ಷತೆಯನ್ನು ಎರಚಿ ಕಳುಹಿಸಿಕೊಟ್ಟಳು ಸುಧನ್ವನನ್ನು.
ಹೀಗೆ ಯುದ್ಧಮುಖನಾಗಿ ಅರಮನೆಯಿಂದ ಹೊರಟುನಿಂತ ಸುಧನ್ವನಿಗೀಗ ಎದುರಾದವಳು ಪ್ರಭಾವತಿ. ಅವನ ಪ್ರಿಯ ರಾಣಿ. ಚಂದ್ರಮಂಡಲದಂತಿತ್ತು ಅವಳ ವದನ. ಹೊಸತು ಬೆಳದಿಂಗಳಂತೆ ಶೋಭಿಸುವ ಅವಳ ನಗು. ರೇಷ್ಮೆಯುಡುಗೆಯನ್ನು ತೊಟ್ಟು ಮೆರೆಯುತ್ತಿದ್ದಾಳೆ. ಅವಳ ಹಣೆಯ ಮೇಲಿನ ಕೆಂಬಣ್ಣದ ಸಿಂಧೂರ ತಿಲಕವದು ಅವಳ ಚಿತ್ತದ ಅನುರಾಗವನ್ನು ಸೂಚಿಸುವಂತಿದೆ. ಸೌಂದರ್ಯವನ್ನೇ ಹೊತ್ತುನಿಂತಿದ್ದಳು ಪ್ರಭಾವತಿ.
ಮಡದಿಯ ಬೆಡಗು ಬಿನ್ನಾಣಗಳನ್ನು ನೋಡಿ ಮುಗುಳುನಗುತ ಸುಧನ್ವ “ಇಂದು ಯುದ್ಧದಲ್ಲಿ ಅರ್ಜುನನ ಬಿಂಕವನ್ನು ಕೊನೆಗಾಣಿಸುತ್ತೇನೆ. ಕೃಷ್ಣ ಪ್ರತ್ಯಕ್ಷನಾದಾಗ ಅವನ ಮುಂದೆಯೂ ನನ್ನ ಪರಾಕ್ರಮದ ಪ್ರದರ್ಶನಗೈಯ್ಯುತ್ತೇನೆ. ಗೆಲುವನ್ನು ಪಡೆಯುತ್ತೇನೆ. ಅದಾಗದಿದ್ದರೆ ವೀರಮರಣವನ್ನು ಪಡೆದು ಮುಕ್ತಿಯನ್ನು ಗಳಿಸುತ್ತೇನೆ. ನನ್ನನ್ನು ಒಲವಿನಿಂದ ಕಳಿಸಿಕೊಡು ನೀನು” ಎಂದನು.
ರಾಣಿ ಪ್ರಭಾವತಿಯ ಆಕಾಂಕ್ಷೆಯದು ಬೇರೆಯದೇ ತೆರದಲ್ಲಿತ್ತು. ಕೃಷ್ಣನಿಗೆ ಯುದ್ಧದಲ್ಲಿ ಎದುರಾದ ಬಳಿಕ ಮೋಕ್ಷವಲ್ಲದೆ ಜಯ ದೊರೆಯಲು ಸಾಧ್ಯವಿಲ್ಲ ಎಂಬ ಅರಿವಿತ್ತು ಅವಳಿಗೆ. ಗಂಡ ಯುದ್ಧಕ್ಕೆ ಹೋಗುವುದಕ್ಕೂ ಮೊದಲು ತನ್ನನ್ನು ಕೂಡಿದರೆ ಆ ಬಳಿಕ ತಾನು ಸಂತಾನರಹಿತೆ ಎನಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಅವಳ ಯೋಚನೆ. ಕಾಮಾಸಕ್ತಿ ಅವಳಲ್ಲಿ ಗರಿಗೆದರಿತ್ತು. ತಾಯ್ತನದ ಹಂಬಲ ಅವಳನ್ನು ಕಾಡತೊಡಗಿತ್ತು. ತನ್ನನ್ನು ತೃಪ್ತಿಗೊಳಿಸಿ ಯುದ್ಧಕ್ಕೆ ತೆರಳು ಎಂದು ಕೇಳಿಕೊಂಡಳು ಸುಧನ್ವನನ್ನು.
ಯುದ್ಧರಂಗದೆಡೆಗೆ ಮುಖಮಾಡಿದ್ದ ಹಂಸಧ್ವಜಸುತನಿಗೆ ಮಡದಿಯ ಮಾತು ಸರಿದೋರಲಿಲ್ಲ. “ಕಾಮದಾಟಕ್ಕೆ ಇದು ಸಮಯವಲ್ಲ. ಕದನಭೇರಿ ನನ್ನನ್ನು ಕರೆಯುತ್ತಿದೆ. ನನ್ನ ತಂದೆ ಈಗಾಗಲೇ ರಣಭೂಮಿಯನ್ನು ಸೇರಿಯಾಗಿದೆ. ಸರಿಯಾದ ಸಮಯದಲ್ಲಿ ನಾನಲ್ಲಿ ಇರದಿದ್ದರೆ ಕ್ರಮವನ್ನು ಮೀರಿದಂತಾಗುತ್ತದೆ. ನೀನು ನನ್ನನ್ನೀಗ ತಡೆಯುವುದು ಸರಿಯಲ್ಲ. ನನ್ನನ್ನು ಹೋಗಲು ಬಿಡು” ಎಂದು ಹೇಳುತ್ತಾ ಅವನು ಮುಂದುವರಿಯುವ ಮನಸ್ಸು ಮಾಡಿದ.
ಆಗಲೇ ಅವಳು ಅವನ ಗಲ್ಲವನ್ನು ಹಿಡಿದು, ಮುದ್ದುಮಾಡಿ, ಅವನೆಡೆಗೆ ತನ್ನ ತನುವನ್ನು ನೂಕಿದಳು. ಮನ್ಮಥನ ರಣರಂಗವನ್ನು ಪ್ರವೇಶಿಸಬೇಕಾದ ನೀನು ಕುದುರೆಯನ್ನು ಗೆಲ್ಲಬೇಕಾದ ಯುದ್ಧರಂಗಕ್ಕೆ ಹೇಗೆ ಹೋಗುವೆಯೋ ನೋಡುತ್ತೇನೆ ಎಂಬಂತೆ ಅವಳು ತನ್ನೆರಡೂ ಮೊಲೆಗಳನ್ನು ಅವನ ದೇಹಕ್ಕೆ ಒತ್ತುತ್ತಾ, ಗಾಢವಾಗಿ ಆಲಿಂಗನಗೈದು ಶೃಂಗಾರ ಚೇಷ್ಟೆಗಳನ್ನು ತೋರಿದಳು. ಹಂಸಗಳ ತುಪ್ಪಳದಿಂದ ನಿರ್ಮಿಸಲಾದ ಹಾಸಿಗೆಯೆಡೆಗೆ ಅವನನ್ನು ಸೆಳೆದೊಯ್ದಳು.
ಮಡದಿಯ ಮೋಹದಾಟಗಳು ಯುದ್ಧರಂಗದೆಡೆಗೆ ಮುಖಮಾಡಿದ್ದ ಸುಧನ್ವನ ಅಂತರಂಗವನ್ನು ಇನ್ನೊಂದು ದಿಕ್ಕಿಗೆ ಹಾಯಿಸಿದವು. ಮನದನ್ನೆಯ ಮನದ ಕಾಮನೆಯನ್ನು ತಣಿಸಿ, ರಮಿಸುವುದರಲ್ಲೇನೂ ತಪ್ಪಿಲ್ಲ ಎಂದು ತೋರಿತು ಅವನಿಗೆ. ಸರಸದ ಮಾತುಗಳನ್ನಾಡಿದ. ಚುಂಬಿಸಿದ. ಪ್ರೀತಿಯಿಂದ ಅವಳೆದೆಯಲ್ಲಿ ಒರಗಿದ. ಕಾಮಿನಿಯ ಕಾಮದ ಕಡಲಲ್ಲಿ ಮುಳುಗಿಹೋದ ಸುಧನ್ವ.

ಡಾ. ವಿಶ್ವನಾಥ ಎನ್ ನೇರಳಕಟ್ಟೆ



