ವೈಜ್ಞಾನಿಕ ವಿಸ್ಮಯಗಳು, ತಂತ್ರಜ್ಞಾನದ ಸುಧಾರಿತ ವಸ್ತುಗಳು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಇಂದಿನ ಸಮಾಜದಲ್ಲಿ ಸಾಹಿತ್ಯದ ಓದಿನ ಕುರಿತು ಜನರಲ್ಲಿ ಒಂದು ರೀತಿಯ ಅಸಡ್ಡೆಯನ್ನು ನಾವು ಕಾಣುತ್ತಿದ್ದೇವೆ. ಅಯ್ಯೋ! ಪುಸ್ತಕ ಓದುವುದಕ್ಕೆ ಸಮಯ ಎಲ್ಲಿದೆ ರೀ? ನಾವು ತುಂಬಾ ಬ್ಯುಸಿ ಎಂಬಂತೆ ತೋರಿಸಿಕೊಳ್ಳುವ ಜನರೇ ನಮ್ಮಲ್ಲಿ ಬಹಳವಾಗಿದ್ದಾರೆ. ಅರ್ಥಪೂರ್ಣವಾಗಿ ವ್ಯಸ್ತರಾಗಿದ್ದರೆ ಓಕೆ… ಸಮಯ ಸಿಗುವುದಿಲ್ಲ ಎಂದು ಹೇಳಬಹುದು. ಆದರೆ ದಿನದ 18 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಘಟಾನುಘಟಿ ಉದ್ಯಮಿಗಳು, ಆಟಗಾರರು, ಯಶಸ್ವಿ ವ್ಯಕ್ತಿಗಳು ಪುಸ್ತಕದ ಓದು ತಮ್ಮನ್ನು ಹೆಚ್ಚು ಪ್ರೇರೇಪಿಸುತ್ತದೆ ಎಂದು ಹೇಳುವುದನ್ನು ನಾವು ಅಲ್ಲಲ್ಲಿ ಕೇಳಿಯೇ ಇದ್ದೇವೆ. ಅವರಷ್ಟು ನಾವು ವ್ಯಸ್ತರಾಗಿಲ್ಲವಲ್ಲ ಎಂದು ಯೋಚಿಸಿದಾಗ ಕನಿಷ್ಠ ದಿನಕ್ಕೆ ಎರಡು ಮೂರು ಪುಟಗಳಷ್ಟಾದರೂ ಗಂಭೀರವಾದ ಓದಿನಲ್ಲಿ ತೊಡಗಿಸಿಕೊಳ್ಳುವ ಅವಶ್ಯಕತೆ ಇದೆ.
 ಇತ್ತೀಚೆಗೆ ಪೇಸ್ಬುಕ್ ನಲ್ಲಿ ಓರ್ವ ಹೆಣ್ಣು ಮಗಳು  ತನ್ನ ಮನೆ ಕೆಲಸ ಆಫೀಸ ಕೆಲಸ, ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತ ಒಂದು ವರ್ಷದಲ್ಲಿ ಮುನ್ನೂರ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಓದಿರುವುದಲ್ಲದೆ ಅವುಗಳ ಕುರಿತು ಪ್ರತಿದಿನ ಲೇಖನಗಳನ್ನು ಪ್ರಕಟಿಸುತ್ತಾ ಬಂದಿದ್ದಾರೆ ಎಂದರೆ ಅವರ ಓದಿನ  ಮತ್ತು ಬರಹದ ತೀವ್ರತೆ ಎಷ್ಟಿರಬಹುದು ಎಂದು ಊಹಿಸಿ! ಬಹುಶಹ ಮನುಷ್ಯ ಬಯಸಿದ್ದೇ ಆದರೆ ಅಸಾಧ್ಯ ಎಂಬುದು ಯಾವುದೂ ಇಲ್ಲ ಎಂಬುದಕ್ಕೆ ಮೇಲಿನ ವ್ಯಕ್ತಿ ಉದಾಹರಣೆಯಾಗಿ ಕಾಣಸಿಗುತ್ತಾರೆ.

 ನಮ್ಮ ಬದುಕಿನ ನೂರಾರು ಪ್ರಶ್ನೆಗಳಿಗೆ ಉತ್ತರ ಸಾಹಿತ್ಯ ಪುಸ್ತಕಗಳಲ್ಲಿದೆ, ನಮ್ಮ ಜ್ಞಾನದ ದಾಹವನ್ನು ತಣಿಸುವ, ರೋಚಕ ವಿಷಯಗಳಿಂದ ಮನರಂಜಿಸುವ, ನುಡಿದಂತೆ ನಡೆದು ಸಮಾಜವನ್ನು, ನಾಡನ್ನು ಕಟ್ಟಿದ ತಮ್ಮ ಬದುಕನ್ನೇ ಮುಡಿಪಾಗಿಸಿದ ಸಹಸ್ರ ಲಕ್ಷ ಜನರ ಬದುಕನ್ನು ಬದುಕುವ,ಆತ್ಮಾವಲೋಕನ ಮಾಡಿಕೊಳ್ಳುವ, ಅವರೊಂದಿಗೆ ಏಕತ್ರವಾಗಿ ಜೀವಿಸುವ ಅವಕಾಶ ನಮಗೆ ದೊರೆಯುವುದು ಸಾಹಿತ್ಯದಿಂದಲೇ.

 ಜಗತ್ತಿನ ಎಲ್ಲ ಜಂಜಡಗಳನ್ನು ಮರೆಸುವ ಶಕ್ತಿ, ತನ್ನೊಳಗೆ ತಾದಾತ್ಮಗೊಳಿಸುವ, ಮನದ ನೋವು, ಸಂಕಟ ಕ್ಲೇಶಗಳನ್ನು ಮರೆಸುವ, ಅತಿಯಾದ ಸಂತಸ ಸಂಭ್ರಮಗಳನ್ನು ನಿರ್ಲಿಪ್ತವಾಗಿ ಸ್ವೀಕರಿಸುವ ಮನಸ್ಥಿತಿಗೆ ನಮ್ಮನ್ನು ಒಡ್ಡಿಕೊಳ್ಳುವಂತೆ ಮಾಡುವ ಶಕ್ತಿ  ಸಾಹಿತ್ಯಕ್ಕೆ ಇದೆ.


 ಸಾಹಿತ್ಯ ಎಂದರೆ ಕೇವಲ ಕಪೋಲ ಕಲ್ಪಿತ ಕಥೆ ಕವನಗಳ ಗುಚ್ಛವಲ್ಲ. ಪುಸ್ತಕಗಳ ಸಂಗ್ರಹವಲ್ಲ, ಅತಿ ಮಾನುಷ ಕ್ರಿಯೆಗಳ ವರದಿಯಲ್ಲ. ಮಾನವ ಬದುಕಿನ ಅನುಭವಗಳ ಬೃಹತ್ ಹೆಬ್ಬಾಗಿಲು ಸಾಹಿತ್ಯವಾಗಿದೆ. ನಮ್ಮ ಸುಖ ದುಃಖ ನೋವು ನಲಿವುಗಳ ಕನ್ನಡಿ ಸಾಹಿತ್ಯ ಎಂದರೆ ತಪ್ಪಿಲ್ಲ.

 ಸಾಹಿತ್ಯ ಎಂದರೇನು? ಬದುಕಿನ ಮೌಲ್ಯಗಳನ್ನು ಕಟ್ಟಿಕೊಡುವಲ್ಲಿ ಸಾಹಿತ್ಯದ ಪಾತ್ರ ಏನು ಎಂದು ನಾವು ಕೇಳಿಕೊಳ್ಳುವುದಾದರೆ ಸಾಹಿತ್ಯ ಎಂದರೆ ಕೇವಲ ಬರೆದು ಎತ್ತಿರಿಸಿದ ಪದಗಳ ಗುಚ್ಛವಲ್ಲ, ಅನುಭವಿಸಿದ ನೋವುಗಳ ಕಥನವಲ್ಲ, ಪ್ರೀತಿ ಪ್ರೇಮದ ಕಾವ್ಯ, ಕವನಗಳಲ್ಲ, ಯುದ್ಧಭೀತಿ, ರೋಗ ಬಾಧೆಯ ವರ್ಣನೆ ಅಲ್ಲ, ಜ್ಞಾನ ಪ್ರಸಾರದ  ವೈಜ್ಞಾನಿಕ ಕೌತುಕಗಳ ಮಾಹಿತಿ ಅಲ್ಲ …. ಆದರೆ ಅವೆಲ್ಲವನ್ನು ಒಳಗೊಂಡ ನಮ್ಮನ್ನು ನಾವು ಸುಂದರವಾಗಿ, ಆಳವಾಗಿ,ಮನಮುಟ್ಟುವ ಹಾಗೆ ಅಭಿವ್ಯಕ್ತಿಸುವ ಮಾಧ್ಯಮ. ನಮ್ಮೊಳಗನ್ನು ಮುಕ್ತವಾಗಿ ತೆರೆದಿಡುವ ಒಂದು ಕಲೆ ಸಾಹಿತ್ಯ. ಎಲ್ಲರಿಗೂ ಈ ಕಲೆ ಒಲಿಯುವುದಿಲ್ಲ ಒಲಿದವರು ಇನ್ನಿಲ್ಲದಂತೆ ನಿರಂತರ ಶ್ರದ್ಧೆಯಿಂದ ಈ ಕಲೆಯನ್ನು ಬದುಕಿನ ಭಾಗವನ್ನಾಗಿಸಿಕೊಳ್ಳಲೇಬೇಕು ಎಂಬಂತಹ ಅತ್ಯಾಪ್ತತೆ ಮೂಡಿಸುವ ಈ ಕಲೆ, ಸಾಹಿತ್ಯವಿಲ್ಲದೆ ಬದುಕಿಲ್ಲ ಎಂಬ ಸತ್ಯವನ್ನು ಅನಾವರಣಗೊಳಿಸುತ್ತದೆ. ಈ ಕಲೆಯ ಮಾಧ್ಯಮ ಕಥೆ, ಕವನ, ಕಾವ್ಯ, ಪುರಾಣ, ಭಾಗವತ, ನಾಟಕ, ಗದ್ಯ, ಪದ್ಯ, ಜಾನಪದ ಹೀಗೆ ಹತ್ತು ಹಲವು ಪ್ರಕಾರಗಳಲ್ಲಿ ಹರಡಿದೆ


 ಸಾಹಿತ್ಯವನ್ನು ಓದುವುದರಿಂದ ಆಗುವ ಪ್ರಯೋಜನಗಳು…
ಇತಿಹಾಸದಲ್ಲಿ ನಡೆದು ಹೋದ ಘಟನೆಗಳು ಕಣ್ಣಿಗೆ ಕಟ್ಟುವಂತೆ ಕಟ್ಟುವಂತೆ ವಿವರಿಸಲ್ಪಟ್ಟಿದ್ದು ನಡೆದು ಹೋದ ಘಟನೆಗಳ ಪರಾಮರ್ಶೆಗೆ, ಗತಕಾಲದ ಇತಿಹಾಸದ ವೈಭವದ ಜೊತೆ ಜೊತೆಗೆ ನಮ್ಮನ್ನು ಆಳಿದ ರಾಜ ಮಹಾರಾಜರ ಕಾಣಿಕೆಗಳು ಜನಸಾಮಾನ್ಯರ ಜೀವನ ಶೈಲಿಗಳು, ವಾಸ್ತುಶಿಲ್ಪ, ಸಂಗೀತ, ಸಾಹಿತ್ಯ ಮುಂತಾದ ಕಲೆಗಳಿಗೆ ಅವರು ನೀಡಿರುವ ಪ್ರಾಮುಖ್ಯತೆಗಳನ್ನು ನಾವು ಅರಿಯುತ್ತೇವೆ..
 ವಿಭಿನ್ನ ಕಾಲಮಾನಗಳಲ್ಲಿ ಜನರು ಬದುಕಿದ ರೀತಿ ನೀತಿಗಳನ್ನು ಅಳವಡಿಸಿಕೊಂಡ ಮೌಲ್ಯಗಳ ಅಧ್ಯಯನದ ಜೊತೆ ಜೊತೆಗೆ ಜೀವನ ಶೈಲಿಯ ಕುರಿತ ಅರಿವು ಮೂಡುತ್ತದೆ.

 ಸಾಹಿತ್ಯವನ್ನು ಓದುವಾಗ ವ್ಯಕ್ತಿಯು ತಾನು ಓದುತ್ತಿರುವ ಕೃತಿಯ ಭಾವಗಳನ್ನು ತಾನೇ ಅನುಭವಿಸುವ ಮೂಲಕ ಮಾನವೀಯ ಸಂವೇದನೆಗಳನ್ನು ಅರಿಯುತ್ತಾನೆ. ಇಂಗ್ಲಿಷ್ ನಲ್ಲಿ ಹೇಳುವಂತೆ ‘ಸ್ಟೆಪ್ಪಿಂಗ್ ಇನ್ ಟು ಅದರ್ಸ್ ಶೂಸ್’ ಎಂಬಂತೆ ಬೇರೆಯವರು ಅನುಭವಿಸುವ ಭಾವನೆಗಳ  ತಾಕಲಾಟಗಳನ್ನು, ಬದುಕಿನ ಕುರಿತಾದ ಗ್ರಹಿಕೆಗಳನ್ನು ಖುದ್ದು ತಾನೇ ಅನುಭವಿಸುತ್ತಾನೆ. ಇದು ಸಂಕೀರ್ಣವಾದ ಜಗತ್ತಿನಲ್ಲಿ ಬದುಕಲು ಅವಶ್ಯಕವಾದ ಉನ್ನತ ಮೌಲ್ಯಗಳಾದ ಧೈರ್ಯ, ನಂಬಿಕೆ, ಆತ್ಮವಿಶ್ವಾಸ, ಕರುಣೆ, ಪ್ರೀತಿ, ಮಮತೆ, ಮಮಕಾರ  ಮತ್ತು ಸಹಾನುಭೂತಿಯನ್ನು ಸೃಷ್ಟಿಸುತ್ತದೆ.  

 ದೃಷ್ಟಿಕೋನದಲ್ಲಿನ ಬದಲಾವಣೆ… ಯಾವುದೇ ಒಂದು ವಿಷಯವನ್ನು ಹಲವಾರು ದೃಷ್ಟಿಕೋನಗಳಿಂದ ಅರಿಯುವ ಮೂಲಕ ತನ್ನ ಗ್ರಹಿಕೆಯ ಹರಹನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತದೆ.
 ಪುಸ್ತಕದ ಓದಿನಲ್ಲಿ ಮುಳುಗಿರುವಂತೆಯೇ ನಾವು ಸಮಯ ಕಾಲವನ್ನು ಮೀರಿದ ವಸ್ತು ವಿಷಯಗಳನ್ನು ಅರಿಯಲು ಮಾನಸಿಕವಾಗಿ ವಿಭಿನ್ನ ಪರಿಸರದಲ್ಲಿ ಪಯಣಿಸಿರುತ್ತೇವೆ. ವೈವಿಧ್ಯಮಯ ಸಂಸ್ಕೃತಿಯ ಅಧ್ಯಯನ ಮಾಡಿರುತ್ತೇವೆ, ಚಿತ್ರ ವಿಚಿತ್ರ ಸನ್ನಿವೇಶಗಳನ್ನು ಎದುರಿಸಿರುತ್ತೇವೆ, ಪ್ರೀತಿ ಪ್ರೇಮದ ಹೊಳೆಯಲ್ಲಿ ಮುಳುಗೇಳುತ್ತೇವೆ, ಸರಿ ತಪ್ಪುಗಳ ಚಿಂತನ ಮಂಥನದ ಜೊತೆಗೆ ವಿಭಿನ್ನ ದೃಷ್ಟಿಯ ಗ್ರಹಿಕೆಗಳನ್ನು ನಮ್ಮದಾಗಿಸಿಕೊಳ್ಳುತ್ತೇವೆ. ಇದು ನಮ್ಮ ಬದುಕನ್ನು ವಿಶಾಲವಾದ ದೃಷ್ಟಿಕೋನದಿಂದ ಗ್ರಹಿಸಲು ಸಾಧ್ಯವಾಗುತ್ತದೆ. ಬದುಕು ನಮಗೆ ಒಡ್ಡುವ ಸವಾಲುಗಳನ್ನು ಎದುರಿಸಲು, ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಲು ಸಾಹಿತ್ಯದ ಓದುವಿಕೆ ನಮಗೆ ಸಹಾಯಕವಾಗುತ್ತದೆ.

 ಓದುವಿಕೆ ನಮಗೆ ವಿಭಿನ್ನ ರೀತಿಯಲ್ಲಿ ಯೋಚಿಸುವ ಶಕ್ತಿಯನ್ನು ಉದ್ದೀಪಿಸುತ್ತದೆ. ವಿವಿಧ ರೀತಿಯ ಸಾಹಿತ್ಯವನ್ನು ಓದುವಾಗ ಸಾಹಿತ್ಯದ ಅಂತಃಸ್ಸತ್ವ ಅರಿವಾಗುತ್ತದೆ. ವಿವಾದಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಿಮರ್ಶೆ ಮಾಡಲು, ಚಿಂತನೆಗೊಳಪಡಿಸು ತ್ತದೆ. ಈ ರೀತಿಯ ವಿಮರ್ಶಾತ್ಮಕ ಚಿಂತನೆ ಬದುಕಿನ ಎಲ್ಲ ಭಾಗಗಳಲ್ಲಿಯೂ ಅಧ್ಯಯನ ಪೂರ್ಣವಾಗಿದ್ದು ಅತ್ಯುಪಯುಕ್ತವಾಗಿರುತ್ತದೆ.

 ಸಾಹಿತ್ಯದ ಓದು ನಮ್ಮ ಬದುಕನ್ನು ಸಮೃದ್ಧವಾಗಿಸುತ್ತದೆ…. ಮನರಂಜನೆಯ ಸ್ಪೂರ್ತಿ ಮತ್ತು ಅತ್ಯದ್ಭುತ ಸೌಂದರ್ಯವನ್ನು ಹೊಂದಿರುವ ಸಾಹಿತ್ಯವು ನಮಗೆ ಸಂತಸ, ಪ್ರೀತಿ, ಕರುಣೆಯ ಸಮ್ಮಿಶ್ರ ಭಾವಗಳನ್ನು ಹೊಂದುವಂತೆ ಮಾಡಿ ನಮ್ಮ ಚಿಂತನಾ ಶಕ್ತಿಯನ್ನು, ಆಂತರಿಕ ಸಾಮರ್ಥ್ಯವನ್ನು  ಸಮೃದ್ಧಗೊಳಿಸುತ್ತದೆ. ಸಾಹಿತ್ಯದ ಓದು ಸಮಯವನ್ನು ವ್ಯರ್ಥಗೊಳಿಸುವುದಿಲ್ಲ… ನಮ್ಮ ವೈಯಕ್ತಿಕ ಬೆಳವಣಿಗೆ ಮತ್ತು ಅರ್ಥೈಸುವಿಕೆಗೆ ನಮ್ಮ ಸಮಯದ ಹೂಡಿಕೆಯ ಕುರಿತು ಅರಿವು ಮೂಡಿಸುತ್ತದೆ.

 ಸಾಹಿತ್ಯದ ಓದು ನಮಗೆ  ವೈವಿಧ್ಯಮಯ ವಿಷಯಗಳ ಕುರಿತ ಸಾಕಷ್ಟು ಮಾಹಿತಿಯನ್ನು ನೀಡುತ್ತದೆ. ಸಾಹಿತ್ಯದ ಓದು ನಮ್ಮ ಬದುಕಿನಲ್ಲಿ ಎಲ್ಲವನ್ನು ಎಲ್ಲರನ್ನೂ ಅವರಿರುವಂತೆಯೇ ಗ್ರಹಿಸಿ ಒಪ್ಪಿಕೊಳ್ಳಲು ಅನುವು ಮಾಡಿಕೊಡುತ್ತದೆ. ಸಾಹಿತ್ಯ ನಮ್ಮ ಬದುಕಿನ ಕಣಕಣಗಳಲ್ಲೂ ಸಮೃದ್ಧ ವೈಚಾರಿಕ ಅನುಭವವನ್ನು ತುಂಬಿ ರಕ್ತ, ಮಾಂಸ, ಮಜ್ಜೆಗಳನ್ನು ಒಳಗೊಂಡ  ಶರೀರವನ್ನು ಪ್ರೀತಿ, ಪ್ರೇಮ, ಮಮತೆ, ವಾತ್ಸಲ್ಯ, ಕರುಣೆ ಮುಂತಾದ ಉನ್ನತ ಮೌಲ್ಯ ಭಾವಗಳನ್ನು ಒಳಗೊಂಡ ವಿಶ್ವ ಮಾನವನನ್ನಾಗಿಸುತ್ತದೆ..


 ಆದ್ದರಿಂದ ಸ್ನೇಹಿತರೆ, ಪುಸ್ತಕ ನಮ್ಮ ಆತ್ಮಸಖ, ನಮ್ಮ ನೋವುಗಳನ್ನು ಮರೆಸುವ, ನಮ್ಮ ಅಪರಿಮಿತ ಸಂತಸಕ್ಕೆ ತಿಳುವಳಿಕೆಯ ಮೂಲಕ ನಿರ್ಲಿಪ್ತಿಯ
ಕವಚ ತೊಡಿಸುವ ಬದುಕಿನ ಹಲವು ಮುಖಗಳನ್ನು ತೋರಿಸುವ ಆತ್ಮ ಸಂಗಾತಿ.

 ಇಂತಹ ಸಾಹಿತ್ಯದ ಓದು ನಮ್ಮ ನಿಮ್ಮೆಲ್ಲರ ಬದುಕನ್ನು
 ಸಮೃದ್ಧಗೊಳಿಸಲಿ ಎಂಬ ಆಶಯದೊಂದಿಗೆ
———————————————————————

Leave a Reply

Back To Top