ವೃತ್ತಿಯಿಂದ ನಿವೃತ್ತರಾಗಲು ಒಂದು ನಿರ್ದಿಷ್ಟ ವಯಸ್ಸಿದೆ… ಆದರೂ ಕೂಡ ನಾವು ಬಹಳಷ್ಟು ಬಾರಿ ನಮ್ಮ ವಯಸ್ಸಿಗೆ ಮೀರಿದ ಕೆಲ ವಿಷಯಗಳಲ್ಲಿ ವಿ ರಿಸ್ಕ್ ತೆಗೆದುಕೊಳ್ಳುತ್ತೇವೆ ಎಂಬುದು ಕೂಡ ಅಷ್ಟೇ ನಿಜ.
 ಅನಿರೀಕ್ಷಿತಗಳ ಸಂತೆಯಾಗಿರುವ ಇಂದಿನ ಬದುಕಿನಲ್ಲಿ ನಾವು ಕೆಲ ಮುಂಜಾಗ್ರತೆಗಳನ್ನು ವಹಿಸುವುದು ಬಹಳ ಒಳ್ಳೆಯದು. ಏನಾದರೂ ಆಕಸ್ಮಿಕಗಳು ಸಂಭವಿಸಿದಾಗ ನಮ್ಮೊಂದಿಗೆ ಯಾರಾದರೂ ಇದ್ದಾರೆ ಎಂಬ ಧೈರ್ಯವೇ ನಮ್ಮನ್ನು
 ಕಾಯುತ್ತದೆ.
 ನಾವು ಹುಟ್ಟುವಾಗಲೂ ಒಬ್ಬರೇ… ಸಾಯುವಾಗಲು ಒಬ್ಬರೇ ಆದರೆ ಸಂಘಜೀವಿಯಾಗಿರುವ ಮನುಷ್ಯ
 ಜೀವನದ ಬಹಳಷ್ಟು ಹಾದಿಯನ್ನು ಒಬ್ಬನೇ ಸವೆಸಲಾರ…. ಸವೆಸಬಾರದು ಕೂಡ. ಅಂತಹ ಕೆಲ ಉಪಯುಕ್ತ ಸಲಹೆಗಳನ್ನು 50ರ ನಂತರ ವ್ಯಕ್ತಿಯು ತೆಗೆದುಕೊಳ್ಳಬಹುದಾದ ಕೆಲ ನಿರ್ದಿಷ್ಟ ಮುನ್ನೆಚ್ಚರಿಕೆಗಳು ಇಂತಿವೆ.
ಸಾಧ್ಯವಾದಷ್ಟು ಏಕಾಂಗಿಯಾಗಿ ಪಯಣಿಸಬಾರದು. ಯಾವುದೇ ಹೊತ್ತಿನಲ್ಲಿ ಆರೋಗ್ಯದ ಸಮಸ್ಯೆ, ವ್ಯತ್ಯಯಗಳು ಉಂಟಾಗಬಹುದಾದ ಸಾಧ್ಯತೆಗಳು ಇರುವುದರಿಂದ ಜೊತೆಯಲ್ಲಿ ಯಾರಾದರೊಬ್ಬರು ಇರುವುದು ಒಳಿತು.ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಓಡಾಡುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು,
 ಜಾತ್ರೆಯಂತಹ ಜನಜಂಗುಳಿಯಲ್ಲಿ ಸಿಲುಕದೆ ಇರಬೇಕು.

 ಅತಿಯಾದ ಆಹಾರ, ಅತಿ ಬಿರುಸಾದ ನಡಿಗೆ, ಅತ್ಯಂತ ಕ್ಲಿಷ್ಟಕರ ವ್ಯಾಯಾಮಗಳನ್ನು ಮಾಡಬಾರದು. ಪ್ರಾಣಾಯಾಮಗಳನ್ನು ಮಾಡುವಾಗ ಕೂಡ (ಬಸ್ರಿಕಾ ಮತ್ತು  ಕಪಾಲಬಾತಿ)  ಅತಿಯಾದ ಓದುವಿಕೆ ಮೊಬೈಲ್ ಬಳಕೆ ಮತ್ತು ಟಿವಿ ವೀಕ್ಷಣೆಗಳು ಕೂಡ ವರ್ಜ್ಯ.

 ವೈದ್ಯರ ಅನುಮತಿ ಇಲ್ಲದೆ ಯಾವುದೇ ಔಷಧಿ, ಮಾತ್ರೆಗಳನ್ನು ಸೇವಿಸಬಾರದು. ನಿಗದಿತ ಸಮಯಕ್ಕೆ ವೈದ್ಯರನ್ನು ಭೇಟಿಯಾಗಿ ನಿಯಮಿತವಾಗಿ ತಪಾಸಣೆಗೆ ಒಳಪಡಬೇಕು.
 ಆಸ್ತಿ ಪಾಸ್ತಿಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ನಿಮ್ಮೆಲ್ಲಾ ದಾಖಲಾತಿಗಳು ಮನೆಯವರ ಕೈಗೆ ಸಿಕ್ಕುವಂತೆ ಸುರಕ್ಷಿತ ಜಾಗದಲ್ಲಿ ಇಡಬೇಕು.ನೀವು ಮಾಡಿದ ಆಸ್ತಿ ಪಾಸ್ತಿಗಳ ವಿವರಗಳನ್ನು ಬೇರೆಯವರೊಂದಿಗೆ ಚರ್ಚಿಸುವುದು ಸಲ್ಲದು.ನಿಮ್ಮ ಸಾಧನೆಗಳನ್ನು ನೀವೇ ಹೇಳಿಕೊಂಡು ಬೇರೆಯವರ ಮುಂದೆ ನಗೆ ಪಾಟಲಿಗೀಡಾಗಬೇಡಿ. ನೀವು ಮಾಡುವ ಕೆಲಸಗಳು ಪ್ರಕೃತಿಯ ನಿಲುವಿನಂತೆ ಸದ್ದಿಲ್ಲದೇ ಆಗಬೇಕು  

 ಯಾವಾಗಲೂ ನಿಮ್ಮ ಗುರುತಿನ ಚೀಟಿ ಮತ್ತು ಮುಖ್ಯವಾದ ಫೋನ್ ನಂಬರ್ಗಳನ್ನು ಹೊಂದಿರುವ ಕಿರು ಪುಸ್ತಕ ನಿಮ್ಮೊಂದಿಗೆ ಇರಬೇಕು.  
 ನೆನ್ನೆಯ ಕಹಿ ವಿಷಯಗಳನ್ನು ಮರೆಯಬೇಕು ಮತ್ತು ನಾಳೆಯ ಕುರಿತು ಅತಿ ಹೆಚ್ಚು ಚಿಂತಿಸಬಾರದು…ನೆನ್ನೆ ಮತ್ತು ನಾಳೆಗಳ ಗೋಜಲಿನಲ್ಲಿ ನಿಮ್ಮ ವರ್ತಮಾನವನ್ನು ಕೆಡಿಸಿಕೊಳ್ಳಬಾರದು.

 ನಿಮ್ಮ ಆರೋಗ್ಯಕ್ಕೆ ಹಿತವಾಗುವಂತಹ  ಒಳ್ಳೆಯ ಆಹಾರವನ್ನು ಮಾತ್ರ ಸೇವಿಸಬೇಕು. ಮಿತವಾದ ಆಹಾರ ಸೇವನೆ ಹಿತಕರ ಎಂಬುದು ನೆನಪಿನಲ್ಲಿರಲಿ.
ನಿಧಾನವಾಗಿ ಅಗಿದು ಪ್ರೀತಿಯಿಂದ ಆಹಾರವನ್ನು ಸೇವಿಸಬೇಕು.

 ಧೂಮ್ರ ಪಾನ ಮತ್ತು ಮಧ್ಯಪಾನದ ಚಟಗಳು ನಿಮಗಿದ್ದರೆ ಸಾಧ್ಯವಾದಷ್ಟು ಕಡಿಮೆ ಮಾಡಿ… ಕ್ರಮೇಣ ಸಂಪೂರ್ಣವಾಗಿ ನಿಲ್ಲಿಸುವುದು ಉತ್ತಮ. ಸುಸ್ತಿರ ಮನೋದೈಹಿಕ ಆರೋಗ್ಯ ಲಭಿಸಲು ಮತ್ತು ಜೇಬಿನ ಆರೋಗ್ಯ ಕಾಯ್ದುಕೊಳ್ಳಲು ಜೇಬು ಕೂಡ ಖಾಲಿ ಆಗದು
 ಬಚ್ಚಲು ಮನೆ ಮತ್ತು ಟಾಯ್ಲೆಟ್ ಗಳಲ್ಲಿ ಜಾಗರೂಕರಾಗಿರಬೇಕು… ಬಹಳಷ್ಟು ಜನ ವಯಸ್ಸಾದವರು ಬಿದ್ದು ಮೂಳೆ ಮುರಿದುಕೊಳ್ಳುವುದು ಬಚ್ಚಲಿನಲ್ಲಿ ಕಾಲು ಜಾರಿ ಎಂಬುದು ನೆನಪಿರಲಿ.

 ಅತಿ ಉತ್ಸಾಹದಲ್ಲಿ ಯೋಗ ಮತ್ತು ವ್ಯಾಯಾಮ ಮಾಡುವಾಗ ಸ್ಥೂಲ ವ್ಯಾಯಾಮಗಳನ್ನು ಮಾಡದೆ ಕ್ಲಿಷ್ಟ ವ್ಯಾಯಾಮಗಳಿಗೆ ಕೈ ಹಾಕಬೇಡಿ. ಅಧಿಕ ರಕ್ತದೊತ್ತಡ ಮತ್ತು ಹೃದಯದ ತೊಂದರೆ ಇದ್ದರೆ ಕಪಾಲ ಬಾತಿ ಮತ್ತು ಬಸ್ತ್ರಿಕ ಪ್ರಾಣಾಯಾಮಗಳನ್ನು ಮಾಡಬಾರದು.

 ಅತಿಯಾದ ಭಾವುಕತೆ ಒಳ್ಳೆಯದಲ್ಲ. ಅವಶ್ಯಕತೆಗೂ ಮೀರಿ ಯಾರೊಂದಿಗೂ ಹಣದ ವ್ಯವಹಾರವನ್ನು ಮಾಡಬೇಡಿ. ಕೇಳದ ಹೊರತು ಹಣಕಾಸಿನ ಸಲಹೆಗಳನ್ನು ನೀಡದಿರಿ. ಅವಶ್ಯಕತೆ ಇಲ್ಲದ ಹೊರತು ಹೆಚ್ಚಿನ ಹಣ ಸಂಪಾದನೆ ಮಾಡಬೇಡಿ. ಬೇರೆಯವರ ಸಮಯಕ್ಕೆ ಗೌರವ ನೀಡಿ. ಕೇಳದ ಹೊರತು ಮುಂದಿನ ತಲೆಮಾರಿನ ಮಕ್ಕಳಿಗೆ ಸಲಹೆ ನೀಡಬೇಡಿ. ನಿಮ್ಮದೇ ಆದ ಸ್ವಂತಿಕೆ ಮತ್ತು ಗೌರವವನ್ನು ಉಳಿಸಿಕೊಳ್ಳಿ.
 ಊಟವಾದ ತಕ್ಷಣ ಮಲಗಬೇಡಿ… ಮಧ್ಯಾಹ್ನ ಗಂಟೆಗಟ್ಟಲೆ ನಿದ್ದೆ ಮಾಡಿ ರಾತ್ರಿಯ ಹೊತ್ತು ನಿದ್ದೆ ಬರುವುದಿಲ್ಲ ಎಂದು ಅತ್ತಿತ್ತ ಹೊರಳಾಡುತ್ತಾ ಒದ್ದಾಡುತ್ತ ಬೇರೆಯವರ ನಿದ್ದೆಯನ್ನು ಹಾಳು ಮಾಡಬೇಡಿ…ಬದಲಾಗಿ ಮಧ್ಯಾನದ ನಿದ್ದೆಯನ್ನು ತ್ಯಜಿಸಿ ಖಂಡಿತವಾಗಿಯೂ ರಾತ್ರಿ ಸೊಂಪಾದ ನಿದ್ದೆ ನಿಮ್ಮನ್ನು ಆವರಿಸುತ್ತದೆ.

 ನಿವೃತ್ತಿಯ ನಂತರ ನಿಮ್ಮ ನಿವೃತ್ತಿಯ ಹಣವನ್ನು ನಿಮ್ಮ ಮಕ್ಕಳಿಗೆ ನೀಡಬೇಡಿ. ನೀವು ಆಸ್ತಿ ಪಾಸ್ತಿಯನ್ನು ಹೊಂದಿದ್ದರೆ ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಿ ಉಯಿಲು ಮಾಡಿ ರಿಜಿಸ್ಟರ್ ಮಾಡಿಸಿಡಿ.

 ನಿವೃತ್ತಿಯ ನಂತರ ಒಳ್ಳೆಯ ಆರಾಮದಾಯಕ ಜೀವನವನ್ನು ನಡೆಸಲು ಯೋಗ ವ್ಯಾಯಾಮ ನಡಿಗೆಗಳನ್ನು ಸಂಗಾತಿಯೊಂದಿಗೆ ಕೈಗೊಳ್ಳಿ. ನಿಗದಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ಹೇಳಿದ ಮಾತ್ರೆ, ಔಷಧಿಗಳನ್ನು ತಪ್ಪದೇ ಸೇವಿಸಿ. ಮನೆಯಲ್ಲಿ ತಯಾರಿಸಿದ ಆರೋಗ್ಯಕರ ಆಹಾರ ಸೇವನೆ, ಹಣ್ಣು ತರಕಾರಿಗಳ ಸೇವನೆ ಒಳ್ಳೆಯದು. ಮನೆ ಕೆಲಸಗಳಲ್ಲಿ ಕೈಜೋಡಿಸಿ. ನಿಮ್ಮ ಆರೋಗ್ಯದ ಕುರಿತು ಬೇರೆಯವರೊಂದಿಗೆ ಅನವಶ್ಯಕ  ಚರ್ಚೆ ಬೇಡ.

 ಇದುವರೆಗೂ ಉದ್ಯೋಗದ ನಿಮಿತ್ತ ಭೇಟಿಯಾಗದೆ ಹೋದ ಹಲವಾರು ಸಂಬಂಧಿಗಳನ್ನು ಸ್ನೇಹಿತರನ್ನು ಭೇಟಿಯಾಗುವ ಸಂದರ್ಭಗಳನ್ನು ಸೃಷ್ಟಿಸಿಕೊಳ್ಳಿ. ಅಲ್ಲಿಯೂ ಕೂಡ ರಾಜಕೀಯದ, ಧಾರ್ಮಿಕವಾದದ  ವಿಷಯಗಳನ್ನು ಮಾತನಾಡದಿರಿ… ಅಕಸ್ಮಾತ್ ಮಾತನಾಡಿದರೂ ಭಿನ್ನಮತ ತಲೆದೋರದಂತೆ ಎಚ್ಚರ ವಹಿಸುವುದು ಒಳ್ಳೆಯದು. ಬೇರೆಯವರು ಮಾತನಾಡಲು ಅವಕಾಶ ನೀಡಿ.

 ಇದುವರೆಗೂ ನಿಮ್ಮ ಗೈರು ಹಾಜರಿಯಲ್ಲಿ ಮನೆಯನ್ನು, ಮನೆಯ ಸದಸ್ಯರನ್ನು, ಮಕ್ಕಳನ್ನು ಅವರ ವಿದ್ಯಾಭ್ಯಾಸದ ಎಲ್ಲಾ ಆಗು ಹೋಗುಗಳನ್ನು  ಸಂಭಾಳಿಸಿದ ಪತ್ನಿಗೆ ಋಣಿಯಾಗಿರಿ. ನಿಮ್ಮ ಜೀವನದ ಏರಿಳಿತಗಳಲ್ಲಿ ನಿಮಗೆ ಜೊತೆಯಾಗಿ ಸಾಗಿರುವ, ಯಾವಾಗಲೂ ನಿಮ್ಮ ಬೆಂಬಲಕ್ಕೆ ನಿಲ್ಲುವ ಆಕೆಯೊಂದಿಗೆ ಕ್ಷುಲ್ಲಕ ಕಾರಣಗಳಿಗಾಗಿ ಜಗಳವಾಡದಿರಿ, ಆಕೆಯೊಂದಿಗೆ ಹೆಚ್ಚು ಸಮಯ ಕಳೆಯಿರಿ, ಪ್ರತಿದಿನ ಸಂಜೆ ವಾಕಿಂಗ್ ತಪ್ಪಿಸದಿರಿ. ದೇವಸ್ಥಾನಗಳಿಗೆ ಹೋಗಿ.  ಆಕೆಯೊಂದಿಗೆ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಿ ಆದರೆ ಅಂಧ ವಿಶ್ವಾಸ ಬೇಡ. ಒತ್ತಡ ರಹಿತ ಜೀವನವನ್ನು ಸಾಗಿಸಿ  

 ಮೇಲಿನ ಎಲ್ಲ ಸಲಹೆಗಳನ್ನು ದೇಶದ  ಹಿರಿಯ ನಾಗರಿಕರ ಹಿತಾಸಕ್ತಿಯನ್ನು ಕಾಯುವ ನಿಟ್ಟಿನಲ್ಲಿ ನೀಡಲಾಗಿದ್ದು, ವೃದ್ಧಾಪ್ಯ ಜೀವನವನ್ನು ಸುಖಕರವಾಗಿ ಮತ್ತು ಸಮಾಧಾನಕರವಾಗಿ ಕಳೆಯಲು ಈ ಸಲಹೆಗಳು
ಉಪಯುಕ್ತವಾಗಿದ್ದು ತಮ್ಮ ಜೀವನದ ಕೊನೆಯ ದಿನಗಳನ್ನು ಭಾವನೆಗಳಿಗೆ ಬಲಿಪಶುವಾಗಿ, ವಿವೇಚನಾ ರಹಿತ ನಿರ್ಧಾರಗಳನ್ನು ಕೈಗೊಂಡು ಯಾವೊಬ್ಬ ಹಿರಿಯ ನಾಗರಿಕರು ಒದ್ದಾಡಬಾರದು ಎಂಬ ಆಶಯದಿಂದ ಸಂಗ್ರಹಿಸಲಾಗಿದ್ದು ಎಲ್ಲ ಹಿರಿಯ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಲಿ ಎಂಬ ಆಶಯದೊಂದಿಗೆ


Leave a Reply

Back To Top