ಬೆಳಗಿನ ಜಾವ ಹಿತ್ತಲ ಬಾಗಿಲಿನಲ್ಲಿ ಗೊಣಗುತ್ತಾ ಬಂದ ಕೆಲಸದಾಕೆಯನ್ನು ಏನೆಂದು ಪ್ರಶ್ನಿಸಿದಾಗ ಆಕೆ ಹೇಳಿದ್ದು…. ಮನೆ ಕೆಲಸ ನಾನೇ ಮಾಡಬೇಕು, ಮಕ್ಕಳನ್ನು ನಾನೇ ಜೋಪಾನ ಮಾಡಬೇಕು, ಹಣಕಾಸಿನ ಎಲ್ಲಾ ವ್ಯವಸ್ಥೆಗಳನ್ನು ನಾನೇ ಮಾಡಿಕೊಳ್ಳಬೇಕು, ಗಂಡ ಏನನ್ನು ಮಾಡದ, ನೆವ ಹೇಳಿ ಕೆಲಸ ತಪ್ಪಿಸಿಕೊಳ್ಳುವನು ಎಂದು. ನಕ್ಕು ಆಕೆಗೆ ಸಮಾಧಾನಿಸಿದ ನಾನು ನನ್ನ ಕೆಲಸದಲ್ಲಿ ತೊಡಗಿಕೊಂಡೆನಾದರೂ ಮನಸ್ಸು ಹೆಣ್ಣಿನ ಅಸ್ತಿತ್ವದ ಕುರಿತು ಪ್ರಶ್ನಿಸತೊಡಗಿತು.

ಹೆಣ್ಣು ಯಾರು… ಹುಟ್ಟಿದ ಮನೆಯಲ್ಲಿ ತನ್ನ ಜೀವಿತದ ಐದನೇ ಒಂದು ಭಾಗವನ್ನು ತಂದೆ ತಾಯಿಯ ಜೊತೆ ಕಳೆಯುವ, ವಿದ್ಯಾಭ್ಯಾಸ ಪಡೆಯುವ ಹೆಣ್ಣನ್ನು ತಂದೆ ತಾಯಿ ಮತ್ತೊಬ್ಬರ ಮನೆಗೆ ಹೋಗುವವಳು ಪರಕೀಯಳು ಎಂಬಂತೆಯೇ ಬೆಳೆಸುತ್ತಾರೆ. ಯಾವುದೇ ಸಾಮಾಜಿಕ ಹಿನ್ನೆಲೆಯಲ್ಲಿದ್ದರೂ ಕೂಡ ಪ್ರತಿಯೊಂದು ಮನೆಯಲ್ಲಿಯೂ ಕೊಟ್ಟ ಮನೆಗೆ ಹೋಗುವ, ಹೋದ ಮೇಲೆ ಅಲ್ಲಿ ಹೇಗೆ ನಡೆದುಕೊಳ್ಳಬೇಕು ಎಂದು ಬೋಧಿಸುವ ಸಮಾಜದ ಬಹು ದೊಡ್ಡ ವರ್ಗವೇ ಇದೆ. ಇದರ ಅರ್ಥ ಇಷ್ಟೇ, ಹೆಣ್ಣು ಮಕ್ಕಳು ತವರಿಗೆ ಮದುವೆಯಾದ ನಂತರ ಆಗಾಗ ಬಂದು ಹೋಗುವ ಅತಿಥಿಗಳು ಮಾತ್ರ, ಅವರಿಗೆ ತವರು ಮನೆಯಲ್ಲಿ ಯಾವುದೇ ಅಧಿಕಾರ ಇರುವುದಿಲ್ಲ ಎಂದು.

ಇನ್ನು ಗಂಡನ ಮನೆಯಲ್ಲಿ ಹೆಣ್ಣು ಮಕ್ಕಳು ತಮ್ಮ ಜೀವಿತದ  ಉಳಿದೆಲ್ಲ ಸಮಯವನ್ನು ಕಳೆಯುತ್ತಾರೆ. ತಂದೆಯ ಮನೆಯಲ್ಲಿ ಆಡಿ ಹಾಡಿ ನಲಿಯುತ್ತ ವಿದ್ಯಾಭ್ಯಾಸ ಮಾಡಿದ ಹೆಣ್ಣು ಮಗಳು ಗಂಡನ ಮನೆಗೆ ಬರುತ್ತಲೇ ಆಕೆಗೆ ಸೊಸೆ ಎಂಬ ಪಟ್ಟಗಟ್ಟಿ ಮನೆಯ ಸಮಸ್ತ ಜವಾಬ್ದಾರಿಯನ್ನು ಕೈಗಿಡಲಾಗುತ್ತದೆ. ಜವಾಬ್ದಾರಿ ಎಂದರೆ ಹಣಕಾಸಿನದಲ್ಲ ….ಮನೆಯ ಸಮಸ್ತ ಸದಸ್ಯರ ಬೇಕು ಬೇಡಗಳನ್ನು ನೋಡಿಕೊಳ್ಳುವ ಅವರಿಗೆ ಕಾಲಕಾಲಕ್ಕೆ ಊಟ-ತಿಂಡಿ, ಬಟ್ಟೆ- ಬರೆ ಹೀಗೆ ಬೇಕಾಗುವ ಎಲ್ಲವನ್ನು ಎಲ್ಲರಿಗೂ ಒದಗಿಸುವ ಕೆಲಸ. ಒಂದು ರೀತಿಯಲ್ಲಿ ಇದು ಥ್ಯಾಂಕಲೆಸ್ ಜಾಬ್.

 ಮುಂಜಾನೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗುವವರೆಗೆ ಮೂರು ಹೊತ್ತಿನ ಅಡುಗೆ ತಿಂಡಿ ಚಹಾ ಸರಬರಾಜು ಅದೂ ಅವರು ಕುಳಿತಲ್ಲಿಯೇ. ಮನೆಗೆ ಬರುವ ಹೋಗುವ ಅತಿಥಿಗಳ ತಿಂಡಿ ತೀರ್ಥದ ವ್ಯವಸ್ಥೆ ನೋಡಿಕೊಳ್ಳುವುದು, ಮನೆಯ ಹೆಣ್ಣು ಮಕ್ಕಳು ಬಂದರೆ ಅವರಿಗೆ ಎಲ್ಲ ಉಪಚಾರಗಳನ್ನು ಮಾಡುವುದು ಇದರ ಜೊತೆಗೆ ಆರ್ಥಿಕ ಅನುಕೂಲವಿಲ್ಲದಿದ್ದಲ್ಲಿ ಪಾತ್ರೆ, ಬಟ್ಟೆ ತೊಳೆಯುವ, ಮನೆಯನ್ನು ಓರಣವಾಗಿರಿಸುವ, ಕಸಗುಡಿಸಿ ನೆಲ ಒರೆಸುವ ಕೆಲಸವು ಕೂಡ ಹೆಣ್ಣು ಮಕ್ಕಳದೇ.

ಎಲ್ಲವೂ ನೇರವಾಗಿ ಇದ್ದರೆ ಹೆಣ್ಣು ಮಕ್ಕಳು ಎಲ್ಲ ಕೆಲಸವನ್ನು ಅದೆಷ್ಟೇ ಕಷ್ಟವಾದರೂ ಲೀಲಾ ಜಾಲವಾಗಿ ಪೂರೈಸಿಕೊಂಡು ಹೋಗಿಬಿಡುತ್ತಾರೆ… ಅದು ಅವರ ತಾಕತ್ತು.

 ಒಂದೆಡೆ ಏನು ಸರಿಯಾಗಿರದಿದ್ದರೂ ಕೂಡ ಅನಿವಾರ್ಯವಾಗಿಯಾದರೂ ಎಲ್ಲವನ್ನು ಸರಿದೂಗಿಸಿಕೊಂಡು ಮನೆ ನಡೆಸುವುದು ಹೆಣ್ಣು ಮಕ್ಕಳೇ ಇದು ಅವರ ಹಿಮ್ಮತ್ತು.

ಇದರ ಜೊತೆಗೆ ಮದುವೆಯಾದ ನಂತರ ಬಸಿರಿನ ಬಯಕೆ, ಬಾಣಂತನ, ಮಕ್ಕಳ ಲಾಲನೆ ಪಾಲನೆ, ಮುಂದೆ ಶಾಲೆ ಕಾಲೇಜುಗಳ ಪ್ರವೇಶ, ಪ್ರತಿದಿನ ಅವರಿಗಾಗಿ ಅಡುಗೆ ಮಾಡಿ ಡಬ್ಬ ಕಟ್ಟುವುದು ಓದಿಸುವುದು, ಮನೆ ಪಾಠ ಮಾಡಿಸುವುದು ಅವರ ಪರೀಕ್ಷೆಗೆ ಅವರಿಗಿಂತ ಮುಂಚೆ ಎದ್ದು ಅವರ ಎಲ್ಲ ಚಟುವಟಿಕೆಗಳಿಗೆ ಕೈಗೂಡುವುದು ಬೆಳಗಿನ ಜಾವದಲ್ಲಿಯೇ ಎದ್ದು ಅವರಿಗೆ ಬೇಕಾದ ತಿಂಡಿ ತೀರ್ಥಗಳನ್ನು ಮಾಡಿ ಡಬ್ಬಕ್ಕೆ ಕಟ್ಟಿ ಅವರಿಗೆ ಸ್ನಾನ ಮಾಡಿಸಿ ನೀಟಾಗಿ ಐರನ್ ಮಾಡಿದ ಬಟ್ಟೆಗಳನ್ನು ತೊಡಿಸಿ, ತಲೆ ಬಾಚಿ, ತಿಂಡಿ ತಿನಿಸಿ ಅವರನ್ನು ಸ್ಕೂಲ್ ಬಸ್ಸಿಗೆ ಇಲ್ಲವೇ ಆಟೋಕ್ಕೆ ಕಳುಹಿಸಿ ಬಂದರೆ ಒಂದು ಹಂತದ ಕಾರ್ಯ ಮುಗಿದಂತೆ. ನಂತರ ಕೊಂಚ ಸುಧಾರಿಸಿಕೊಂಡು ತಿಂಡಿ ತಿಂದು ಮನೆಯ ಉಳಿದೆಲ್ಲ ಕೆಲಸಗಳತ್ತ ಗಮನಹರಿಸಿದರೆ ಮಕ್ಕಳು ಬರುವ ಹೊತ್ತಿಗೆ ಮತ್ತೆ ಅದೇ ಕೆಲಸಗಳ ಸರಮಾಲೆ. ಇದರ ಮಧ್ಯ ಪತಿಗೆ ಬೇಕಾಗುವ ಫೈಲ್, ಕರ್ಚಿಫು, ವಾಚ್, ಮೊಬೈಲ್ ಗಳನ್ನು ಅವರಿದ್ದ ಸ್ಥಳಕ್ಕೆ ಅವರಿಗೆ ದೊರಕಿಸಿಕೊಟ್ಟು ಅವರು ತಮ್ಮ ಕೆಲಸದ ಸ್ಥಳಕ್ಕೆ ಹೋಗುವವರೆಗೆ ಅವರ ಹಿಂದೆ ಮುಂದೆ ಸುತ್ತಾಡಿ ಅವರ ಅವಶ್ಯಕತೆಗಳನ್ನು ಪೂರೈಸಬೇಕು. ಅಬ್ಬಾ!!  ಕೇವಲ ತಮ್ಮ ವೈಯುಕ್ತಿಕ ಕೆಲಸಗಳನ್ನು ತಾವು ಮಾಡಿಕೊಳ್ಳಲಾಗದ ಗಂಡ ಮಕ್ಕಳು ಕೆಲವೇ ದಿನಗಳಲ್ಲಿಯೇ  ತಮ್ಮ ಪತ್ನಿಗೆ, ತಾಯಿಗೆ ಮನೆಯಲ್ಲಿಯೇ ಕುಳಿತು ಏನು ಮಾಡುತ್ತಿರುವೆ?? ಇಷ್ಟು ಕೂಡ ಮಾಡಲಾಗದೆ ನಿನಗೆ?? ಎಂದು ಪ್ರಶ್ನಿಸುವಂಥಾಗುವುದು ಕಾಲದ ವೈಪರೀತ್ಯವೆ ಸರಿ.!! ಕೆಲವರು ಮನೆಯ ಹೆಣ್ಣು ಮಕ್ಕಳನ್ನು ಪುಸಲಾಯಿಸಿ ಕೆಲಸ ಮಾಡಿಸಿದರೆ, ಇನ್ನು ಕೆಲವರು ರೋಪು ಹಾಕಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಅವರ ಕೆಲಸವಾದರಾಯಿತು… ಮಾಡುವವರ ಪಾಡು ಅವರಿಗೆ ಗೊತ್ತಿಲ್ಲ… ಗೊತ್ತು ಮಾಡಿಕೊಳ್ಳುವುದೂ ಇಲ್ಲ. ಹೀಗೆ ಗಂಡನ ಮನೆಯಲ್ಲಿ ಜೀವನ ಸವೆಸುವ ಹೆಣ್ಣು ಮಕ್ಕಳು ಮನೆಯ ಜವಾಬ್ದಾರಿಯ ಭಾರದಿಂದ ಕಂಗೆಟ್ಟು, ರೋಸಿ ಹೋಗಿ ಬಿರುಸಿನಿಂದ ಏನನ್ನಾದರೂ ಮಾತನಾಡಿದಾಗ ಅವರಿಗೆ ನಿನಗೆ ಈ ಮನೆಯಲ್ಲಿ ಮಾತನಾಡಲು ಯಾವುದೇ ಹಕ್ಕಿಲ್ಲ, ನೀನು ಬೇರೊಂದು ಮನೆಯಿಂದ ಬಂದವಳು ಎಂಬಂತೆ ಮಾತನಾಡಿ ಬಾಯಿ ಮುಚ್ಚಿಸುತ್ತಾರೆ. ಆಕೆಯ ಅಸ್ತಿತ್ವದ ಬೇರನ್ನೇ ಅಲುಗಾಡಿಸಿ ಬಿಡುತ್ತಾರೆ.

ತವರು ಮನೆ, ಗಂಡನ ಮನೆ ಎರಡೂ ಆಕೆಯವಲ್ಲ ಅಂತಾದಾಗ ಹೆಣ್ಣು ಮಕ್ಕಳು ಕುಸಿಯುತ್ತಾರೆ. ಅಕಸ್ಮಾತ್ ಅವರೇನಾದರೂ ತಂದೆಯ ಮನೆಯ ಆಸ್ತಿಯಲ್ಲಿ ಪಾಲು ಕೇಳಿದರೆ ಮುಗಿದೇ ಹೋಯಿತು. ಆಕೆ ಅವರ ಪಾಲಿನ ಖಳನಾಯಕಿ. ಇನ್ನು ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ ಎಂಬಂತೆ ಎಲ್ಲಾ ಅಪವಾದಗಳು ಹೆಣ್ಣು ಮಕ್ಕಳ ತಲೆಯ ಮೇಲೆಯೇ. ಮನೆಯ ಯಾವುದೇ ಆಕಸ್ಮಿಕಗಳು, ದುರ್ಘಟನೆಗಳು, ತೊಂದರೆಗಳಿಗೆ ಕಾರಣ ಮನೆಯ ಹೆಣ್ಣು ಮಕ್ಕಳೇ… ಬುದ್ಧಿ ಹೇಳಿ ತಿದ್ದುವುದು, ಸೈರಿಸಿಕೊಂಡು ಹೋಗಲು ಹೇಳುವುದು ಮನೆಯ ಹೆಣ್ಣು ಮಕ್ಕಳಿಗೆ ಮಾತ್ರ.

ಹಾಗಾದರೆ ಹೆಣ್ಣು ಮಕ್ಕಳಿಗೆ ನಿಜವಾಗಿಯೂ ಸ್ವಾತಂತ್ರ್ಯವಿಲ್ಲವೇ?? ಕೆಲವೊಮ್ಮೆ ಖಂಡಿತವಾಗಿಯೂ ಇಲ್ಲ. ಆಕೆಯ ಅನಿಸಿಕೆಗಳನ್ನು ಬಿಡುಬೀಸಾಗಿ ಹೇಳಿಕೊಳ್ಳಲು, ಆಕೆ ಬಯಸಿದ ಬಟ್ಟೆ ಬರೆಗಳನ್ನು ತೊಡಲು ಆಕೆಯ ಇಷ್ಟದ ಜೀವನ ನಡೆಸಲು ನಮ್ಮ ಹಿರಿಯರು ಹಾಕಿಕೊಟ್ಟ ಕೆಲ ಸಂಪ್ರದಾಯಗಳು ಬಿಡುವುದೇ ಇಲ್ಲ. ಇದಕ್ಕೆಲ್ಲ ಕಾರಣ ಏನು??

ಖಂಡಿತವಾಗಿಯೂ ಹೆಣ್ಣು ಮಕ್ಕಳು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲೆ, ಭಾವನಾತ್ಮಕವಾಗಿ ಕೋಮಲೆ, ಕೆಲಸ ಮಾಡುವಲ್ಲಿ ಮಾತ್ರ ಸಬಲೆ ಎಂದು ಗುರುತಿಸುವ ಈ ಸಮಾಜ ಆಕೆಯನ್ನು ಕೂಡ ಓರ್ವ ವ್ಯಕ್ತಿ ಆಕೆಗೂ ಒಂದು ವ್ಯಕ್ತಿತ್ವವಿದೆ, ಆಕೆಯ ವ್ಯಕ್ತಿತ್ವಕ್ಕೆ ಒಂದು ಘನತೆ ಇದೆ  ಎಂಬ ಅರಿವನ್ನು ಹೊಂದಿಲ್ಲದೆ ಇರುವುದು ಅವರ ಜಾಣ ಕುರುಡನ್ನು ಮಾತ್ರವಲ್ಲ, ಕಿವುಡುತನ ಮೂಕತನವನ್ನು ಕೂಡ ಸೂಚಿಸುತ್ತದೆ. ಹೆಣ್ಣು ಸಬಲಳಾ ದರೆ ಆಕೆಯನ್ನು  ದೂಷಿಸಿ ಕೆಲಸ ಮಾಡಿಸಿಕೊಳ್ಳಲಾಗದು…. ಸ್ವಭಾವತಃ ಮೈಗಳ್ಳತನವನ್ನು ಮೈಗೂಡಿಸಿಕೊಂಡಿರುವ ಗಂಡು ಜಾತಿ ಹೆಣ್ಣನ್ನು ಪರಾವಲಂಬಿ ಎಂದು ಹೀಗಳೆಯುತ್ತಲೇ ಆಕೆಯ ಮೇಲೆ  ಅವಲಂಬಿತರಾಗಿರುತ್ತಾರೆ.

ಇನ್ನು ಮನೆಯಲ್ಲಿ ವಯಸ್ಸಾದ ಹಿರಿಯರ ಚಾಕರಿ ಮಾಡಲು ಹೆಣ್ಣು ಮಕ್ಕಳೇ ಸರಿ. ಗಂಡಸಾಗಿ ನಾನು ಈ ಕೆಲಸಗಳನ್ನೆಲ್ಲ ಮಾಡಬೇಕೇ ಎಂಬ ಒಣ ಅಹಂಭಾವ ಪುರುಷರನ್ನು ಕಾಡಿದರೆ ಸಮಾಜದ ಮತ್ತು ಸಂಬಂಧಿಗಳ ಭಯಕ್ಕೆ, ಮಾಡಲೇಬೇಕಾದ ಅನಿವಾರ್ಯತೆಗೆ ಹೆಣ್ಣು ಮಕ್ಕಳು ಈಡಾಗುತ್ತಾರೆ.

ಹಾಗಾದರೆ ನಾವು ತಪ್ಪಿರುವುದೆಲ್ಲಿ???
ವೇದಗಳ ಕಾಲದಿಂದ ಅವಲೋಕಿಸುತ್ತಾ ಬಂದರೆ ಹೆಣ್ಣು ಮಕ್ಕಳನ್ನು ಮಧ್ಯಕಾಲದಲ್ಲಿ ಹತ್ತಿಕ್ಕಲಾರಂಭಿಸಿದರು. ಅವರನ್ನು ದುರ್ಬಲರೆಂಬಂತೆ ಬಿಂಬಿಸಿ ಸಾಮಾಜಿಕ ಕಟ್ಟುಪಾಡುಗಳನ್ನು ಅವರ ಮೇಲೆ ಹೇರಿದರು. ಸಂಸಾರದ ಉಳಿವಿಗಾಗಿ, ಸಾಮಾಜಿಕ ಪ್ರಗತಿಗಾಗಿ ಉತ್ತಮ ಸಂಸ್ಕೃತಿಯ ನಿರ್ಮಾಣಕ್ಕಾಗಿ ಹೆಣ್ಣಿನ ತ್ಯಾಗದ ಅವಶ್ಯಕತೆ ಇತ್ತು ನಿಜ ಆದರೆ ಆಕೆಯ ಅಸ್ತಿತ್ವದ ಬೇರನ್ನೇ ಅಲುಗಾಡಿಸಿದಾಗ ಆಕೆ ಹೋಗಬೇಕು ಎಲ್ಲಿಗೆ??

ಇಂತಹ ಸಮಯದಲ್ಲಿ ತಮ್ಮ ಹಕ್ಕಿಗಾಗಿ ಹೋರಾಡಿದವರು ಮಹಿಳಾವಾದಿಗಳೆನಿಸಿದರು, ಮನೆ ಮುರುಕರೆನಿಸಿದರು. ಅವರು ಸಮಾನತೆಯ ಹಕ್ಕಿನ ಮಾತನಾಡಿದಾಗ ಅವರ ಜೊತೆಗಿರುವ ಹೆಣ್ಣು ಮಕ್ಕಳೇ ಅವರನ್ನು ತನ್ನ ಮನೆಯನ್ನೆ ಸರಿ ಮಾಡಿಕೊಳ್ಳಲಾಗದವಳು, ಸಮಾಜ ತಿದ್ದಲು ಹೊರಟಳು ಎಂಬಂತೆ ಆಡಿಕೊಂಡು ನಕ್ಕರು. ಪರಿಣಾಮ ಹೆಣ್ಣು ಮಕ್ಕಳು ತಮ್ಮದೇ ಹೆಣ್ಣು ಮಕ್ಕಳ ಗುಂಪಿನಲ್ಲಿಯೂ ಕೂಡ ಪರಕೀಯ ಪ್ರಜ್ಞೆಯನ್ನು ಅನುಭವಿಸುತ್ತಿದ್ದಾರೆ.

ಹಾಗಾದರೆ ಇದಕ್ಕೆ ಕೊನೆಯಿಲ್ಲವೇ??
ಪ್ರತಿ ಆರಂಭಕ್ಕೂ ಒಂದು ಅಂತ್ಯ ಇದ್ದೇ ಇರುತ್ತದೆ ಅಲ್ಲವೇ? ಹೇಗಿದ್ದರೂ ಮನೆಯ ಮಕ್ಕಳ ಜವಾಬ್ದಾರಿಯನ್ನು ಹೆಣ್ಣು ಮಕ್ಕಳಿಗೆ ವಹಿಸಿದ್ದಾರೆ, ಹುಟ್ಟಿದ ಮಗುವಿನಿಂದ ಹಿಡಿದು ಹರೆಯಕ್ಕೆ ಬರುವ ಮಕ್ಕಳ ತನಕ ಎಲ್ಲಾ ಗಂಡು ಹೆಣ್ಣು ಮಕ್ಕಳು ತಾಯಿಯ ಕೈಯಲ್ಲಿ ಬೆಳೆಯುತ್ತಾರೆ. ಆಗ ತಾಯಿಯು ತನ್ನ ಮಕ್ಕಳಲ್ಲಿ ಗಂಡು ಹೆಣ್ಣೆಂಬ ಬೇಧವೆಣಿಸದೇ ಇಬ್ಬರನ್ನು ಬೆಳೆಸಬೇಕು. ತನ್ನ ಮಗಳಿಗೆ ಗಂಡನ ಮನೆಗೆ ಹೋದರೆ ಹೇಗಿರಬೇಕು ಎಂದು ಕಲಿಸುವ ತಾಯಂದಿರು ತನ್ನ ಮನೆಗೆ ಬರುವ ಪತ್ನಿಯನ್ನು ಹೇಗೆ ಗೌರವಿಸಬೇಕೆಂಬುದನ್ನು ಕೂಡ ತಮ್ಮ ಗಂಡು ಮಕ್ಕಳಿಗೆ ಕಲಿಸಿಕೊಡಬೇಕು. ಗಂಡು ಮಕ್ಕಳಲ್ಲಿ ಸೂಕ್ಷ್ಮ ಸಂವೇದನೆಗಳಿರುತ್ತವೆ ನಿಜ, ಅವುಗಳಿಗೆ ನೀರೆರೆದು ಪೋಷಿಸಬೇಕೆ ಹೊರತು, ಗಂಡಸಾಗಿ ಹೆಣ್ಣಪ್ಪಿ ಯಂತೆ ಇರುವೆ ಎಂದು ಆತನ ಗಂಡಸುತನಕ್ಕೆ ಸವಾಲು ಹಾಕುವಂತೆ ಬೆಳೆಸಬಾರದು.
ನಿಜವಾದ ಗಂಡಸುತನ ಎಂದರೆ ತನ್ನ ಎದುರಿಗಿನ ಹೆಣ್ಣು ಮಕ್ಕಳನ್ನು, ಅವರ ಭಾವನೆಗಳನ್ನು ಗೌರವಿಸುವುದು, ಅವರ ವೈಯುಕ್ತಿಕತೆಯನ್ನು ಒಪ್ಪಿಕೊಳ್ಳುವುದು ಅವರ ಬೆಳವಣಿಗೆಗೆ ಸಹಕಾರ ನೀಡದಿದ್ದರೆ ಪರವಾಗಿಲ್ಲ ಕೊಡಲಿ ಕಾವಾಗಬಾರದು. ನಿಜವಾದ ಗಂಡಸುತನ ತನ್ನ ಕೌಟುಂಬಿಕ ಜೀವನ ಪಯಣದಲ್ಲಿ ಜೊತೆಗಿರುವ ತಾಯಿ, ಪತ್ನಿ, ಮಗಳು, ಸೊಸೆ ಮತ್ತು ಮೊಮ್ಮಕ್ಕಳ ಜೊತೆಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿರುವ ಮತ್ತು ಅವರನ್ನು ಪ್ರೀತಿಸಿ ಗೌರವಿಸುವ ಮಾನಸಿಕತೆಯನ್ನು ಹೊಂದಿರಬೇಕು, ಸಾಮಾಜಿಕವಾಗಿ ತನ್ನ ಜೊತೆ ವ್ಯವಹರಿಸುವ ಎಲ್ಲ ಹೆಣ್ಣು ಮಕ್ಕಳೊಂದಿಗೂ ಗೌರವ, ವಿಶ್ವಾಸ ಸ್ನೇಹ ಭಾವನೆಯನ್ನು ಹೊಂದಿರಬೇಕು.

ಹಾಗಾದರೆ ತಾಯಂದಿರೇ, ನೀವು ಅನುಭವಿಸುತ್ತಿರುವ ಅಸ್ತಿತ್ವರಹಿತತೆಯ ಸಂಕಟವನ್ನು ನಿಮ್ಮ ಮುಂದಿನ ಪೀಳಿಗೆ ಅನುಭವಿಸದಿರುವಂತೆ ನಿಮ್ಮ ಮಕ್ಕಳನ್ನು ಬೆಳೆಸಿ, ಉಳಿಸಿ. ಸಾಮಾಜಿಕವಾಗಿ ಸಮಾನತೆಯ ಹರಿಕಾರರಾಗಿ.


One thought on “

  1. ಉತ್ತಮ ಲೇಖನ, ಹೆಣ್ಣು ಮಕ್ಕಳ ಕುಟುಂಬದೊಳಗಿನ ಅವತಾರ ಮತ್ತು ಅನುಭವಿಸುತ್ತಿರುವ ಆವಾಂತರಗಳ ಕುರಿತು ಸೂಕ್ಷವಾಗಿ ವಿಶ್ಲೇಶಿಸಲಾಗಿದೆ.ಹೆಣ್ತನ ಮತ್ತು ಗಂಡಸುತನದ ಕುರಿತಾಗಿ ಸ್ಪಷ್ಟವಾಗಿ ಅರ್ಥೈಸಲಾಗಿದೆ. ಸೊಗಸಾದ ಬರಹ. ಭಾವಕ್ಕೆ ತಾಗುತ್ತದೆ.

Leave a Reply

Back To Top