ಭಾರತಿ ಅಶೋಕ್ ಅವರ ಕವಿತೆ-ಜೀವ ಬಿಟ್ಟೇವು …

ಹೊಟ್ಟಿಯೊಳಗ ಕೆಂಡ
ಹತ್ತಿ ಉರಿವಾಗ
ಮ್ಯಾಗಿಂದ ತಣ್ಣೀರು ಸುರಿದ್ರ
ಒಳಗಿನ ಕಿಚ್ಚು ಆರಬಲ್ಲದ ಧಣಿ.

ಸೂರ್ಯ ಚಂದ್ರ ಚುಕ್ಕೆಯ ಜಾತ್ರೆ ತೋರ್ಸಿ
ಭೂಮ್ತಾಯಿ ಕಿತ್ಕಂಡ್ರಿ
ನೀವ್ ತೋರಿಸಿದ ಆಕಾಶ ನೋಡಿದ್ರ ಬದುಕಿನ ಹೊಟ್ಟೆ ಕಿಚ್ಚು ಆರ್ತದ ಧಣಿ.

ನೆಲದಾಗ ಕಾಲೂರಿದ್ವಿ
ನಮ್ಮವ್ವ ನಮ್ಮನ್ನ ಗಟ್ಯಾಗಿ ಅಪ್ಕೊಂಡಿದ್ಳು
ಹಸಿದ ಹೊಟ್ಟೆಗೆ ರೊಟ್ಟಿ ಅರಳ್ಸಿ
ಕಣ್ಣಾಗ ಚಂದ್ರಾಮನ್ ಇಟ್ಟಿದ್ಳು.

ನೀವು ಬಂದ್ರಿ ಕಾಲು ತೆಗಿಸಿದ್ರಿ
ಅಷ್ಟ ಯಾಕ ತಾಯಿ ಸುತ್ತ ಬೇಲಿ ಬಡದು
ನಿಮ್ಮವ್ವ ನಮಗೂ ಅವ್ವ ಅಂದ್ರಿ.
ಮೂಗಿಗೆ ತುಪ್ಪ ಸವರಿ
ನಾಲಿಗೆನಾ ಕತ್ತರಿಸಿದ್ರಿ
ಚಂದ್ರಾಮ ಮೋಡಕ್ಕ ಬಲಿ.
ರೊಟ್ಟಿ ಕನಸಾತು.

ಸವರಿದ ತುಪ್ಪ ಒಣಗೈತಿ
ನಮ್ ನಾಲಿಗೆ ಮ್ಯಾಲೆ ಆಡೋ ಮಾತು ನೀವ ಆಡಿದ್ರಿ
ಹಸಿವು ಬಿತ್ತಿದ್ರಿ
ಕರುಳ ರಸ ಹಿಂಗಿ ದೇಹನ ಯಲುಬಿನ ಹಂದ್ರ ಮಾಡಿದ್ರಿ.

ಅನ್ನ ಇಕ್ಕುವ
ಭೂಮ್ತಾಯಿ ಕರುಳ
ಭದ್ರ ಬೇಲಿಯೊಳಗ ಬಂಧಿಸಿ
ತಾಯಿ ಮಕ್ಕಳ ಒಡಲ ಬರಡಾಗಿಸಿದ್ರಿ

ಆದರೂ ತಿಳ್ಕಳ್ಳಿ
ಧರ್ಮ ಮರೆತ ನಿಮಗೆ
ನೇಗಿಲ ಕುಳದಾಗೀನ ಧರ್ಮ ಅರ್ಥಾ ಆಗಿಲ್ಲ
ನಿಮ್ಮಂಗ ಅರಮನ್ಯಾಗಿಲ್ಲ ನಮ್ಮ ಕರ್ಮ
ಜೀವ ಬಿಟ್ಟೇವು ನಾವು
ನಮ್ಮ ಭೂಮ್ತಾಯಿಯನ್ನಲ್ಲ


Leave a Reply

Back To Top