́ಬುದ್ಧಿ ಭೂಲೋಕ ಆಳಂದ್ರ, ಅದೃಷ್ಟ..?́ವಿಶೇಷ ಬರಹ ಡಾ.ಯಲ್ಲಮ್ಮ ಕೆ

 ಬುದ್ಧಿ ಭೂಲೋಕ ಆಳಂದ್ರ, ಅದೃಷ್ಟ..?

ನನ್ನ ಬಾಲ್ಯದ ಸ್ನೇಹಿತೆಯೊಬ್ಬಳು ನನ್ನ ಹಾಗೇ ಬಡತನದಲ್ಲಿಯೇ ಮಿಂದೆದ್ದವಳು, ಹಾಗೆ ನೋಡಿದ್ರೆ ನನಗಿಂತಲೂ ಕಡುಜಾಣೆ! ತರಗತಿಯಲ್ಲಿ ಯಾವತ್ತೂ ಮುಂದೆ ಇರತಾ ಇದ್ಲು, ವಿದ್ಯೆ ಬುದ್ಧಿ ಜೊತೆಗೆ ಅರಗಿಣಿಯಂತ ಮೂಗು, ನೋಡೋಕೆ ಬೆಳ್ಳಗೆ, ಸದಾ ನಗೆ ತುಂಬಿಕೊಂಡು ಎಲ್ಲರನ್ನೂ ನಗೆಗಡಲಲ್ಲಿ  ತೇಲಸ್ತಾ ಇದ್ಲು, ಹಾಗಾಗಿ ಎಲ್ಲರೂ ಆಕೆಯನ್ನು ಹಿಂಬಾಲಿಸ್ತಾ ಇದ್ದರು. ಉನ್ನತ ಹಂತದ ವ್ಯಾಸಾಂಗದಲ್ಲೂ ಮುಂದಿದ್ದು ಅಧ್ಯಾಪಕರ ಮೆಚ್ಚುಗೆಯನ್ನು ಪಡೆದಿದ್ದಳು.

ಕಟ್ಟಿ ಕಾಡುವ ಬಡತವನ್ನು ಮೆಟ್ಟಿ ನಿಲ್ಲುವ ಮೂಲಕ ಸಮಾಜದಲ್ಲಿ ತಲೆ ಎತ್ತಿ ನಡೆಯುಬೇಕು, ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕೆಂಬ, ಅದಮ್ಯ ವಿಶ್ವಾಸ ಅವಳದ್ದು, ಅಂತೆಯೇ ಹೊಟ್ಟೆ, ಬಟ್ಟೆ, ನಿದ್ದೆ ಕಟ್ಟಿ ಓದಿ ಸರ್ಕಾರದ ವಿವಿಧ ಹುದ್ದೆಗಳಿಗೆ ಬೇಕಾದ ಎಲ್ಲ ಅರ್ಹತೆಗಳನ್ನು ಗಳಿಸಿದ್ದಾಗ್ಯೂ ಹತ್ತಾರು ಹುದ್ದೆಗಳು ಕೂದಲೆಳೆ ಅಂತರದಿ ಕೈತಪ್ಪಿದಾಗಲೂ ಹತಾಶೆ ಹೊಂದದೆ ಹೊಟ್ಟೆ ಪಾಡಿಗೆ ಯಾವುದೋ ಒಂದು ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ, ಆಕೆಯ ಮುಖದಲ್ಲಿ ವಿಷಾದ ಕಂಡಿಲ್ಲ, ಕಗ್ಗತ್ತಲ ರಾತ್ರಿಯಲ್ಲಿ ಹಾರುವ ಮಿಂಚ್ಹುಳುವಿನ ಮಿಣುಕು ಬೆಳಕು ಕೂಡ ಅವಳ ಭರವಸೆಯನ್ನು ಇಮ್ಮಡಿಸುತ್ತೆ, ಅಂತಹ
ಸದೃಢ ಮನಸ್ಸು ಅವಳದ್ದು.

ಅವಳ ಮಾತು ಅಂದ್ರೆ ಹಂಚಿನ ಮೇಲೆ ಅಳ್ಹುರಿದಂಗೆ, ಪಟ ಪಟ ಅಂತ ಮಾತು ಆಡೋಳು, ಅವಳು ಮಾತು ಒಂದೇ ಏಟಿಗೆ ಅರ್ಥ ಆಗೋದು ಕಷ್ಟ, ಒಗಟ ಒಗಟಾಗಿ, ಗಾದೆಮಾತು, ಪಡೆನುಡಿಗಳನ್ನು ಸೂಜಿಗೆ ದಾರ ಪೋಣಿಸಿದಂತೆ, ಬಿತ್ತಿಗಿ ಹಿಂದ್ಹಿಂದೆಯೇ ಅಕ್ಕಡಿಕಾಳು ಹಾಕಿದಂತೆ,  ಅಷ್ಟೊಂದು ಸೊಗಸಾಗಿ ಮಾತಾಡ್ತಾ ಇದ್ದಳು, ನಾವು ಬೇಕು ಬೇಕು ಅಂತಲೇ ಅವಳನ್ನ ಮಾತಿಗೆ ಎಳೆತ್ತಿದ್ದಿವಿ.

ನನಗೆ ಜಾಬ್ ಆಗಿದ್ದು ಕಂಡು ಹೆಚ್ಚು ಖುಷಿ ಪಟ್ಟಿದ್ಲು, ನನ್ನ ಗೆಳತಿಯೊಬ್ಬಳು ಅಧ್ಯಾಪಕಿ ಆದದ್ದು ನನಗೆ ಹೆಮ್ಮೆ ಇದೆ ಸಾರಿ ಸಾರಿ ಹೇಳಿದ್ಲು, ನಿನ್ನದು ಜಾಬ್ ಆಗ್ಬೇಕಿತ್ತು ಕಣೇ, ಹಾಗೆ ನೋಡಿದ್ರೆ ನನಗಿಂತಲೂ ನೀನೇ  ಜಾಣೆ ಇದ್ದೆ ಕಣೇ, ಆ ಬಗ್ಗೆ ನನಗೆ ತುಂಬಾ ನೋವಿದೆ ಎಂದು ಹೇಳಿದರೆ, ಏನ್ ಮಾಡೋದೆ.., ‘ಬುದ್ಧಿ ಭೂಲೋಕ ಆಳಂದ್ರ, ಅದೃಷ್ಟ ಕತ್ತಿ ಕಾಯಿ ನನ್ನ ಮಗ್ನೇ ಅಂತಿತ್ತಂತೆ’ ಎಂದು ನಗೆಯಾಡಿದ್ಲು, ಆ ನಗುವಿನಲ್ಲಿ ನೋವಿತ್ತು ನಲಿವಿತ್ತು.

ಅದೃಷ್ಟ ದುರಾದೃಷ್ಟ ಎಂದರೆ ಯಾವತ್ತೂ ನಂಬದ, ಕಷ್ಟ ಪಟ್ಟು, ಪ್ರಯತ್ನಿಸಿದ್ದೇ ಆದರೆ ಫಲ ಕಟ್ಟಿಟ್ಟ ಬುತ್ತಿ ಎಂದು ಬಲವಾಗಿ ನಂಬಿದ್ದ ನಾನು, ಕತ್ತೆಗೂ ಒಂದು ಕಾಲ ಬರುತ್ತೆ ಅಂತಾದರೆ, ಅವಳ ವಿಷಯದಲ್ಲಿ ಸುಳ್ಳಾಯಿತು ಎಂಬ ಖೇದ ನನಗಿದೆ, ಎಲ್ಲೋ ಒಂದು ಕಡೆ ಅದೃಷ್ಟ ಅನ್ನೋದು ಕೈ ಹಿಡಿಬೇಕು ಅನಿಸುತ್ತೆ ಅಲ್ವಾ? ಕೆಲವೊಬ್ಬರ ವಿಷಯದಲ್ಲಿ ಅದೃಷ್ಟ ಕೈ ಏನು ಕಾಲು ಹಿಡಿದು ಬಿಡುತ್ತದೆ ನೋಡಿ! ಹೆಬ್ಬಟ್ಟನವರು ದೇಶ ಆಳೋವಂಗ್ಹ ಆಯ್ತು! ಅದಕ್ಕೆ ಅಂತಾರೇನು ‘ತಿಪ್ಪಿಯೋಗಿ ಉಪ್ಪರಗಿ ಆಯ್ತು, ಉಪ್ಪರಗಿ ತಿಪ್ಪಿ ಆಯ್ತು ಅಂತ’  

ಗಂಡ-ಹೆಂಡತಿ, ಮನೆ-ಮಕ್ಕಳು ಅಂತ ಎಲ್ಲರಂತೆ ತಾನೂ ಕೂಡ ಸಂಸಾರ ಸುಖವುಣ್ಣಬೇಕು ಅಂತ್ಹೇಳಿ ಮದುವೆ ಎಂಬ ಬಂಧದಿ ಸಿಲುಕಿ, ಮುದ್ದಾದ ಎರಡು ಮಕ್ಕಳು ಹೆತ್ತು, ಹೊತ್ತು ಆ ಮಕ್ಕಳ ಭವಿಷ್ಯತ್ತಿಗಾಗಿ ಹೆಣಗಾಡುತ್ತಾ ಬದುಕು ಮುಂದೂಡುತ್ತಿದ್ದಾಳೆ.

ಬೇಡುವುದನ್ನೇ ಕಾಯಕವನ್ನಾಗಿಸಿಕೊಂಡ ಭಕ್ತನಿಗೆ  
ಸರ್ವಶಕ್ತ ದೇವರಾದರೂ ಎಷ್ಟು ಎಷ್ಟಂತ ಕೊಟ್ಟಾನು? ಹಾಗೆ  ಬೇಡುವ ಭಕ್ತನ ಸ್ಥಿತಿ ನನ್ನದಾದರೆ ಅವಳದ್ದೋ ಹಂಗಿಲ್ಲದ ಬದುಕು, ಅವರಿವರಲ್ಲ ದೇವರಲ್ಲಿ ಕೂಡ ಅದು ಬೇಕು ಇದು ಬೇಕು ಎಂದು ಬೇಡಿದವಳಲ್ಲ, ಇರೋವರೆಗೂ ಯಾರಿಗೂ ಭಾರವಾಗದೆ, ನಾಲ್ಕು ಮಂದಿಗೆ ಬೇಕಾಗಿ ಬದುಕಿದರಾಯ್ತು ಎಂಬ ಮನೋಧೋರಣೆ ಅವಳದ್ದು.

ಶ್ರೀಮಂತಿಕೆ ಎನ್ನುವುದು ಕಾಲಡಿಯ ಕಸದಂತೆ ಕೊಳೆತಾ ಬಿದ್ದಿದ್ದವರಲ್ಲಿ ಇಲ್ಲದ  ಸಂತೃಪ್ತ ಭಾವದಿ – ನೆಮ್ಮದಿಯ ಜೀವನವನ್ನು ನಡೆಸುತ್ತ, ಧನಾತ್ಮಕ ಚಿಂತನೆಗೆ ಒಂದು ಉತ್ತಮ ಮಾದರಿಯಾಗಿದ್ದಾಳೆ ಎಂದು ಹೇಳಲು ಅಡ್ಡಿಯಿಲ್ಲ.


Leave a Reply

Back To Top