ಕಥಾ ಸಂಗಾತಿ
ಜಯಲಕ್ಷ್ಮಿ ಕೆ.
“ಕಾಯಬೇಕು…. ಮಾಗುವವರೆಗು”
ಕಾಯಬೇಕು…. ಮಾಗುವವರೆಗೂ..
ಈ ದಿನ ಸುಜಾತಾಳ ಬಾಳಿಗೆ ಸಾರ್ಥಕತೆ ತಂದುಕೊಟ್ಟಸುದಿನ.ಅಂಗಳದಲ್ಲಿ ಅರಳಿದ ಹೂಗಳ ಚೆಲುವು ಇಂದು ಆಕೆಯ ಕಣ್ತುಂಬಿಕೊಂಡಿದೆ. ಎಲ್ಲೋ ಕುಳಿತು ಹಾಡುತ್ತಿರುವ ಕೋಗಿಲೆಯ ಇಂಪಾದ ಗಾನ ಕೂಡಾ ಇಂದು ಆಕೆಯ ಕಿವಿದೆರೆಗೆ ಬಿದ್ದು ಮನಸಿಗೆ ಆಹ್ಲಾದ ನೀಡುತ್ತಿದೆ. ಹಳೆಯ ಹೆಂಚಿನ ಮನೆಯ ಚಾವಡಿಯಲ್ಲಿ ಕುಳಿತು ಕಟ್ಟಿದ ಕನಸುಗಳೆಲ್ಲ ನನಸಾಗಿವೆ. ಎಂಥ ನಿರಾಳತೆ! ಎಂಥ ನೆಮ್ಮದಿ… ಈ ಹಂತ ತಲುಪಲು ತಾನು ಪಟ್ಟ ಪಾದೇನೂ…. ಅನುಭವಿಸಿದ ಗೋಳೇನೂ… ಎದುರಾದ ಬವಣೆಗಳು ಒಂದೇ… ಎರಡೇ… ಈ ನೆಮ್ಮದಿಯ ದಿನಕ್ಕಾಗಿ ತಾನು ಮಾಡಿದ ತ್ಯಾಗಗಳೇನು? ತಪ್ಪಿ ಹೋದ ಹಬ್ಬ ಹರಿದಿನ, ಜಾತ್ರೆ ಸಂಭ್ರಮ… ಮದುವೆ ಮಹೋತ್ಸವ ಉಹೂ0…ಯಾವುದಕ್ಕೂ ತಲೆಕೆಡಿಸಿಕೊಂಡವಳಲ್ಲ.ಸರಿ ಸುಮಾರು ಮೂವತ್ತು ವರ್ಷಗಳ ಕಾಲ ಗುರಿ ಮುಟ್ಟುವವರೆಗೆ ಯಂತ್ರದಂತೆ ದುಡಿಯುವುದಾಗಲೀ, ಒಂಟಿ ಇಟ್ಟಿನಂತೆ ಸಂಸಾರದ ನೊಗ ಹೊರುವುದಾಗಲೇ, ಸುಲಭದ ಮಾತೇನಲ್ಲ. ಅದೊಂದು ತಪಸ್ಸು. ಕಷ್ಟ -ನಷ್ಟಗಳನ್ನು ಮೆಟ್ಟಿ ನಿಲ್ಲುವ ತಾಕತ್ತು… ಹೆಣ್ಣು ಮನಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲಳು ಎಂಬುದಕ್ಕೆ ಉದಾಹರಣೆಯಾಗಿ ನಿಂತವಳೇ ಸುಜಾತಾ. ಅದೆಲ್ಲಿತ್ತೋ ಸಹನೆ…. ಎಲ್ಲಿ ಮಡುಗಟ್ಟಿತ್ತೋ ಆ ಸಂಯಮ.. ಅಪ್ಪ, ಅಮ್ಮನನ್ನು ದೂರುತ್ತಾ ಕೂರಲಿಲ್ಲ, ಗಂಡನನ್ನು ನಿಂದಿಸುತ್ತಾ ಕಾಲ ಕಳೆಯಲಿಲ್ಲ… ಅಂಗವಿಕಲ ಮಗುವನ್ನು ನೀಡಿದ್ದಕ್ಕಾಗಿ ದೇವರ ಮುಂದೆ ಅತ್ತು ಗೋಳಾಡಲಿಲ್ಲ.. ವಿಧಿಯನ್ನು ಹಳಿಯಲಿಲ್ಲ… ಅಪಹಾಸ್ಯ ಮಾಡಿದ ಜನಕ್ಕೆ ಎದುರಾಡಲಿಲ್ಲ. ಮಾಡಿದ್ದು ಒಂದೇ… ಅದೇ ಸಾಧನೆ. ಛಲ ಬಿಡದೆ ಅಂದುಕೊಂಡಿದ್ದನ್ನು ಮಾಡಿದ್ದು.. ಅದೇ ಸಾಧನೆ. ಹೇಗಿತ್ತು ಸುಜಾತಾಳ ಜೀವನ ಸಾಗಿ ಬಂದ ಪರಿ…..
………,.
ಸುಜಾತ ಹೆಚ್ಚು ಓದಿದವಳಲ್ಲ. ಹತ್ತನೇ ತರಗತಿ ಪಾಸು ಮಾಡುವಷ್ಟರಲ್ಲೇ ಹದಿನಾರರ ಬಾಲೆಯ ಹೆಗಲೇರಿತ್ತು ತಮ್ಮ -ತಂಗಿಯರ ಜವಾಬ್ದಾರಿ. ಅಪ್ಪ -ಅಮ್ಮ ಕೂಲಿ ಕಾರ್ಮಿಕರು. ಅನಾರೋಗ್ಯ ಪೀಡಿತ ಅಪ್ಪ ಒಂದು ದಿನ ದುಡಿದರೆ ನಾಲ್ಕು ದಿನ ಮಲಗುತ್ತಿದ್ದ. ಸುಜಾತ ಬಹಳ ಜಾಣೆ. ಶಾಲೆ ಬಿಟ್ಟ ಮೇಲೆ ಮೊದ ಮೊದಲು ಬಚ್ಚಲು ಒಲೆಗೆ ಬೆಂಕಿ ಹಾಕಿ ನೀರು ಕಾಯಿಸಿ ಇಡುವುದಲ್ಲದೆ, ಅಪ್ಪ ಅಮ್ಮ ಕೆಲಸದಿಂದ ಬರುವ ಮೊದಲೇ ತಮ್ಮ ತಂಗಿಯರಿಗೆ ಸ್ನಾನ ಮಾಡಿಸಿ ಅವರನ್ನು ಓದಲು ಕೂರಿಸುತ್ತಿದ್ದಳು.ಕಾಲ ಕ್ರಮೇಣ ಅಡುಗೆ ಮನೆ ಓಲೆ ಹಚ್ಚಿ, ಕಾಫಿ ಕಾಯಿಸುವ, ಅನ್ನ ಬೇಯಿಸುವ ಎಲ್ಲ ಕೆಲಸಗಳನ್ನು ಕಲಿತಳು. ಆಕೆಯ ಕೆಲಸ ಕಾರ್ಯಗಳೆಲ್ಲ ಅಚ್ಚುಕಟ್ಟು.ಪ್ರತಿ ದಿನ ಅಪ್ಪ -ಅಮ್ಮ ಕೆಲಸ ಮುಗಿಸಿ ಬರುವರು.. ಬಿಸಿ ಬಿಸಿ ಸ್ನಾನ ಮಾಡಿ ಬಿಸಿ ಕೂಳು ಉಂಡು ಮಲಗುವರು.
ಅದೊಂದು ದಿನ ಕೆಲಸ ಮುಗಿಸಿ ಬಂದ ಚಿದಾ, ವೇದಾ ಬರೆಯುತ್ತಾ ಕುಳಿತಿದ್ದ ಮಕ್ಕಳ ಚಾಪೆಯಲ್ಲಿ ಬಂದು ಕುಳಿತರು. ಎಂದಿನಂತೆ ” ಊಟಕ್ಕೆ ತಟ್ಟೆ ಇಡಲೇ ” ಕೇಳಿದಳು ಸುಜಾತ. ” ಬೇಡ, ಈಗಲೇ ಬೇಡ ” ಒಟ್ಟಿಗೇ ನುಡಿದ ಅಪ್ಪ ಅಮ್ಮನ ಮಾತಿನ ವರಸೆ ಸುಜಾತಾಳಿಗೆ ಹೊಸದೆನಿಸಿತು. ಹಾಗೇ ಅವಳೂ ಬಂದು ಆ ಚಾಪೆಯಲ್ಲಿ ಕುಳಿತಳು.ಆಕೆಯೊಂದಿಗೆ ಅವಳ ಸಂಗಾತಿ ಮಿನ್ನು ಕೂಡಾ ಬಂದು ಕುಳಿತಿತು. ಮಕ್ಕಳು ಪುಸ್ತಕ ಮುಚ್ಚಿಟ್ಟು ಬೆಕ್ಕಿನ ಜೊತೆಗೆ ಆಟ ಆರಂಭಿಸಿದರು.
ಅಮ್ಮ ವೇದಾ ಮಾತಿಗೆ ಶುರುಹಚ್ಚಿಕೊಂಡಳು. ” ಸುಜಾತಾ, ನಿನಗೆ ಪರಮೇಶಿ ಗೊತ್ತಾ? “
” ಗೊತ್ತು ಯಾಕಮ್ಮಾ ಈಗ ಅವನ ವಿಚಾರ? “” ಯಾಕಿಲ್ಲ… ಇತ್ತೀಚಿಗೆ ಒಂದೆರಡು ಬಾರಿ ಪರಮೇಶಿ ದಾರಿಯಲ್ಲಿ ಸಿಕ್ಕಿ ಮಾತಾಡಿದ್ದ… ಅವನಿಗೆ ನೀನೆಂದರೆ ಬಹಳ ಇಷ್ಟವಂತೆ… ಇವತ್ತಂತೂ ” ಸುಜಾತಾಳನ್ನು ನನಗೆ ಮದುವೆ ಮಾಡಿ ಕೊಡ್ತೀರಾ “ಅಂತ ಕೇಳಿಯೇ ಬಿಟ್ಟ! ನೀನೇನು ಹೇಳ್ತಿ ಮಗಳೇ “ಸುಜಾತಾ ಉತ್ತರಿಸಲಿಲ್ಲ.
ಇದೀಗ ಅಪ್ಪ ಚಿದಾ ನ ಸರದಿ ” ಅಲ್ಲ ಸುಜಾತಾ.. ನೀನಾದರೂ ಈ ಮನೆಯಲ್ಲಿ ನಮ್ಮೆಲ್ಲರ ಚಾಕರಿ ಮಾಡುತ್ತಾ ಎಷ್ಟು ದಿನ ಅಂತ ಇರಲಿಕ್ಕಾಗುತ್ತೆ? ನಾನು ಚೆನ್ನಾಗಿ ಇರುವಾಗಲೇ ನಿನಗೊಂದು ಮದುವೆ ಮಾಡಿ ಬಿಟ್ಟರೆ….. ಇನ್ನು ಈ ಮಕ್ಕಳು ಇನ್ನೂ ಸಣ್ಣವು.. ಹೇಗೋ ಓದಿಕೊಂಡು ಹೋಗ್ತವೆ “
……
” ಹೌದು ಸುಜಾತಾ, ನಿನಗೂ ಹದಿನೆಂಟು ತುಂಬಿದೆ. ಪರಮೇಶಿ ಏನೂ ದೂರದ ಊರಿನವನಲ್ಲ. ಕಾಲೇಜು ಮೆಟ್ಟಲೇರಿದ ಹುಡುಗ ಕೂಡಾ. ಸ್ವಂತ ಮನೆಯಿದೆ . ಅವನೊಂದಿಗೆ ನಿನ್ನ ಮದುವೆ ಮಾಡಿಸಿದರೆ ನೀನು ಸುಖವಾಗಿರಬಹುದು.ಅಪ್ಪ -ಅಮ್ಮ ಪೂರ್ವ ತಯಾರಿ ಮಾಡಿಯೇ ಮಾತನಾಡುತ್ತಿದ್ದಾರೆ ಎಂಬುದು ಜಾಣೆ ಸುಜಾತಾ ಗೆ ಗೊತ್ತು. ಆದರೂ ” ಅಮ್ಮಾ, ಪರಮೇಶಿಗೆ ಜವಾಬ್ದಾರಿ ಇಲ್ಲಮ್ಮಾ.. ನಾನು ಹೈಸ್ಕೂಲ್ ಓದುತ್ತಿರುವಾಗ ಅವನ ಉಡಾಫೇ ವರ್ತನೆ – ನಡವಳಿಕೆಗಳನ್ನು ಕಂಡಿದ್ದೇನೆ. ಒಬ್ಬ ರೈತನನ್ನು ನೀವು ಆಯ್ಕೆ ಮಾಡಿದ್ದರೂ ಕೂಡಿ ದುಡಿದು ಬದುಕು ಕಟ್ಟಿಕೊಳ್ಳಬಹುದಿತ್ತು… ಆದರೆ ಪರಮೇಶಿ…… ” ಈಗ ವೇದಾಳಿಗೆ ಸ್ವಲ್ಪ ಸಿಟ್ಟು ಬಂತು.” ಯಾರು ಕೂಡಾ ಹುಟ್ಟುವಾಗಲೇ ಜವಾಬ್ದಾರಿಯನ್ನು ಹೊತ್ತುಕೊಂಡು ಬರುವುದಿಲ್ಲ. ಬದುಕು ಸಾಗಿಸ್ತಾ.. ಸಾಗಿಸ್ತಾ ಜವಾಬ್ದಾರಿ ಬರ್ತದೆ. ಮದುವೆ ಅಂತ ಒಂದಾದ್ರೆ ಹೊಣೆಗಾರಿಕೆ ತಾನಾಗೇ ಬರುತ್ತೆ. ಅಷ್ಟಕ್ಕೂ ಮದುವೆಯಾದ ಮೇಲೆ ಎಡಬಿಡಂಗಿ ತರಹ ಸುತ್ತುತ್ತಿದ್ದರೆ ಪರಮೇಶಿಯ ಅಪ್ಪ ಕಾಳಯ್ಯ ಸುಮ್ಮನೆ ಇರುತ್ತಾನೆಯೇ? ನಾಲ್ಕು ತದಕಿ ಬುದ್ಧಿ ಹೇಳ್ತಾನೆ. ಊರಿಗೆಲ್ಲ ಬುದ್ಧಿ ಹೇಳುವ ಕಾಳಯ್ಯ ಮಗನನ್ನು ಬಿಟ್ಟಾನೇ? ಸುಮ್ಮನೆ ಮದುವೆಗೆ ಒಪ್ಪಿಕೋ “ಹತ್ತನೇ ತರಗತಿಗೆ ಓದು ಸಾಕು ಎಂದರು… ಒಪ್ಪಿಕೊಂಡಳು. ಮನೆ ಕೆಲಸ ಕಲಿತು ಮಾಡು ಎಂದರು, ಒಪ್ಪಿಕೊಂಡಳು… ಈಗ ಮದುವೆಗೆ ಒಪ್ಪಿಕೋ ಎನ್ನುತ್ತಿದ್ದಾರೆ! ಮಿತಿ ಮೀರಿ ಯೋಚಿಸುವ ಪ್ರಾಯ ಅವಳಿಗೆ ಆಗಿಲ್ಲ.
” ಹೌದು ಸುಜಾತಾ.. ಹೇಗಿದ್ದರೂ ಮದುವೆ ಆಗಲೇಬೇಕಲ್ಲ ನೀನು.? ಕಾಣದೂರಿಗೆ ನಿನ್ನನ್ನು ಮದುವೆ ಮಾಡಿ ಕಳುಹಿಸಲು ನಮಗೂ ಮನಸಿಲ್ಲ.. ಈಗ ನಮ್ಮೂರಿನ ಹುಡುಗನೇ ಮುಂದೆ ಬಂದು ತಾನಾಗಿ ಕೇಳುತ್ತಿದ್ದಾನೆ. ಅವನಿಗೇ ನಿನ್ನನ್ನು ಧಾರೆ ಎರೆದು ಕೊಟ್ಟರೆ ನಮಗೂ ನೆಮ್ಮದಿ. ” ಅಪ್ಪನ ಕೊನೆ ಮಾತು. ಸುಜಾತಾ ಮರು ಮಾತಾಡಲಿಲ್ಲ. ಅಪ್ಪ ಅಮ್ಮನಿಗೆ ಖುಷಿಯಾಯ್ತು.
ಮದುವೆ ಮಾತುಕತೆ ಮುಗಿದೇ ಹೋಯಿತು. ಹೊಸ ಹೊಸ ಕನಸುಗಳನ್ನು ಕಾಣುತ್ತಾ ಸುಜಾತಾ ಮದುವೆ ದಿನಕ್ಕೆ ಲೆಕ್ಕ ಹಾಕುತ್ತಿದ್ದಳು. ಅಷ್ಟಿಷ್ಟು ಹಣ ಕೂಡಿಸಿದ ಚಿದಾ ವೇದಾ ದಂಪತಿಗಳು ಮಗಳು ಸುಜಾತಾಳಿಗೆ ಎರಡು ಪವನ್ ಚಿನ್ನದಲ್ಲಿ ಒಂದು ಜೊತೆ ಕಿವಿಯೋಲೆ ಹಾಗೂ ಪುಟ್ಟ ಚೈನ್ ಮಾಡಿಸಿ ಹಾಕಿ ಪರಮೇಶಿಗೆ ಧಾರೆ ಎರೆದು ಕೊಟ್ಟರು. ಅಲ್ಲಿಗೆ ಮುಗಿಯಿತು ಅವಳ ಬದುಕಿನ ಒಂದು ಘಟ್ಟ. ಸ್ವತಂತ್ರ ಬದುಕಿಗೆ ಬಿತ್ತು ಪೂರ್ಣ ವಿರಾಮ.
ಮದುವೆಯಾಗಿ ಗಂಡನ ಮನೆ ಸೇರಿದ ಸುಜಾತಾಳಿಗೆ ಅತ್ತೆ ಮನೆಯಲ್ಲಿ ಕೆಲಸಗಳ ಹೊರೆ ಹೆಚ್ಚಾಯಿತೇ ಹೊರತು ಪ್ರೀತಿಯ ಆಸರೆ ಸಿಗಲಿಲ್ಲ. ಅಡುಗೆ ಕೆಲಸ,ಮನೆ ಕೆಲಸ, ಹಾಸಿಗೆ ಹಿಡಿದಿದ್ದ ಅತ್ತೆಯ ಚಾಕರಿ ಎಲ್ಲ ಮುಗಿಸುವ ವೇಳೆಗೆ ಊರೆಲ್ಲ ಅಡ್ಡಾಡಿ ಬರುತ್ತಿದ್ದ ಪರಮೇಶಿ. ಆಕೆಯ ದೇಹ ಸುಖಕ್ಕಾಗಿ ಹಾತೊರೆಯುತ್ತಿದ್ದನೇ ಹೊರತು ಅವಳ ಸುಖ ದುಃಖಗಳಿಗೆ ಕಿವಿಯಗುತ್ತಿರಲಿಲ್ಲ. ದಲ್ಲಾಳಿ ವೃತ್ತಿ ಮಾಡುತ್ತಿದ್ದ ಕಾಳಯ್ಯ ಹೃದಯಾಘಾತದಿಂದ ಕೊನೆ ಉಸಿರೆಳೆದ ಬಳಿಕ ಆ ಮನೆಯ ನಿಜವಾದ ಸಮಸ್ಯೆಯ ಅರಿವು ಸುಜಾತಾಳಿಗೆ ಆಗತೊಡಗಿತ್ತು. ಕಾಲ ಸರಿಯಿತು… ಪರಮೇಶಿ ಸರಿ ಹೋಗಲಿಲ್ಲ. ಗೆಳೆಯರು, ಪಾರ್ಟಿ, ಅವನದೇ ಲೋಕ. ಯಾವುದೇ ಜವಾಬ್ದಾರಿ ಇಲ್ಲ. ಅಷ್ಟರಲ್ಲೇ ಸುಜಾತಾ ಮೂರು ಮಕ್ಕಳ ತಾಯಿಯಾಗಿದ್ದಳು. ದೊಡ್ಡವಳು ಖುಷಿ. ಎರಡನೇಯವಳು ವಿದ್ಯಾ. ಇಬ್ಬರೂ ಓದಿನಲ್ಲಿ ಬಹಳ ಚುರುಕು. ಸರಸ್ವತೀ ಪುತ್ರಿಯರೇ ಆಗಿದ್ದರು. ಆದರೆ ಕೊನೆಯ ಮಗಳು ಕುಸುಮ ಮಾತ್ರ ತುಸು ಮಂದ ಬುದ್ಧಿ, ಜೊತೆಗೆ ಆಸರೆ ಇಲ್ಲದೆ ಹೆಜ್ಜೆ ಕೂಡಾ ಇಡಲಾಗದ ಸ್ಥಿತಿ ಅವಳದ್ದು. ಅತ್ತೆ ಮಾವ ಗತಿಸಿದ ಬಳಿಕ ಸುಜಾತಾ ಗೆ ಉಳಿದದ್ದು ಒಂದು ಸೂರು… ಗಂಡ ಎಂದು ಹೇಳಿಕೊಳ್ಳಲು ಪರಮೇಶಿ ಎನ್ನುವ ಹೆಸರು, ಮೂವರು ಮಕ್ಕಳು, ಅವರ ಜವಾಬ್ದಾರಿ… ರಾಂಕ್ ಗಳಿಸುತ್ತಲೇ ಮೆಡಿಕಲ್ ಕಾಲೇಜು ಸೇರಿ ಎಂ ಬಿ ಬಿ ಎಸ್ ಓದತೊಡಗಿದಳು. ವಿದ್ಯಾ ಬಿ ಕಾಂ ಮುಗಿಸಿ, ಸ್ಪರ್ಧಾತ್ಮಕ ಪರೀಕ್ಷೆ ಬರೆದು ಬ್ಯಾಂಕ್ ನಲ್ಲಿ ಆಫೀಸರ್ ಹುದ್ದೆ ಗಿಟ್ಟಿಸಿಕೊಂಡಳು. ಇದೆರಡು ವಿಚಾರ ಸುಜಾತಾಳ ಪಾಲಿಗೆ ದೊಡ್ಡ ಸಾಧನೆ ಅಲ್ಲವೇ ಅಲ್ಲ. ವಿಕಲ ಚೇತನ ಕುಸುಮಾಳನ್ನು ಕೂಡಾ ಓದಿಸಿ ಅಂಚೆ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿಸುವವರೆಗೆ ಅವಳ ಕೈ ಬಿಡದೆ ಏಕಾಂಗಿ ಹೋರಾಟ ನಡೆಸಿದಳಲ್ಲ, ಅದು.. ಅದು..ಅವಳ ಸಾಧನೆ. ಅದೊಂದು ಸುಜಾತಾಳ ದೀರ್ಘ ಕಾಲದ ಕಠಿಣ ಶ್ರಮದ ಫಲ.. ತಪಸ್ಸಿಗೆ ದಕ್ಕಿದ ವರ! ಬೆಳಗ್ಗೆ ಎದ್ದು ಮನೆ ಕೆಲಸ ಮುಗಿಸಿ ಮಕ್ಕಳಿಬ್ಬರನ್ನು ಶಾಲೆಗೆ ಕಳುಹಿಸಿ, ಗಂಡನನ್ನೂ ಸುಧಾರಿಸಿಕೊಂಡು ಬಳಿಕ ತನಗೂ ಮಗಳು ಕುಸುಮಾಳಿಗೂ ಬುತ್ತಿ ಕಟ್ಟಿಕೊಂಡು ಸ್ವಸ್ಥ ಶಾಲೆಗೆ ಮಗಳನ್ನು ಕರೆದುಕೊಂಡು ಹೋಗುವಳು. ಅಲ್ಲಿ ಅವಳನ್ನು ಶಿಕ್ಷಕರ ವಶಕ್ಕೆ ಒಪ್ಪಿಸಿ ಅವಳ ತರಗತಿ ಮುಗಿವವರೆಗೂ ಅಲ್ಲೇ ಕಾಯುವಳು. ಬಳಿಕ ಅವಳಿಗೆ ಊಟ ಕೊಟ್ಟು ಅಲ್ಲೇ ತಾನೂ ಉಣ್ಣುವಳು.. ಸ್ವಸ್ಥ ಶಾಲೆಯ ಹೊರ ಆವರಣದಲ್ಲಿ ಅವಳಿಗಾಗಿ ಕಾಯುವಳು. ಮತ್ತೆ ಅವಳನ್ನು ಮನೆಗೆ ಕರೆತಂದು ಇನ್ನು ಇಬ್ಬರು ಮಕ್ಕಳ ಕಡೆಗೆ ಗಮನ ಹರಿಸುತ್ತಾ ಮನೆ ಕೆಲಸ ಮಾಡುವಳು. ಇದು ಒಂದೆರಡು ದಿನದ ಕತೆಯಲ್ಲ… ದೀರ್ಘ ಕಾಲದ ತಪಸ್ಸು.. ಮೂರು ಮಕ್ಕಳಲ್ಲಿ ಒಬ್ಬರು ಕೂಡಾ ಹಿಂದೆ ಬೀಳಬಾರದು ಎನ್ನುವುದು ಅವಳ ಹಠ… ಅದನ್ನು ಸಾಧಿಸಿಯೇ ಬಿಡುವೆನೆಂಬ ಛಲ., ಯಾರ ಬೆಂಬಲವೂ ಇಲ್ಲದೆ ಗುರಿ ಸಾಧಿಸಿಯೇ ಬಿಟ್ಟಿದ್ದಳು ಸುಜಾತಾ. ಮಗಳೊಂದಿಗೆ ಬುತ್ತಿ ಕಟ್ಟಿಕೊಂಡು ಹೋಗುವಾಗ ಅಣಕಿಸುತ್ತಾ ನೋಡುತ್ತಿದ್ದ ಕಣ್ಣುಗಳಿಂದು ಬೆರಗುಗೊಂಡಿವೆ. ಧೈರ್ಯ ಕುಗ್ಗಿಸುವ ಮಾತುಗಳನ್ನು ಆಡಿದ ಬಾಯಿಗಳು ಮೌನಕ್ಕೆ ಶರಣಾಗಿವೆ. ಸುಜಾತಾ ಯಾರಿಗೂ ಎದುರಾಡಲಿಲ್ಲ, ಮರು ಮಾತಾಡಲಿಲ್ಲ. ಅವಳ ಕಾರ್ಯ ಇಂದು ಮಾತಾಡುತ್ತಿದೆ, ಮಾತಾಡಿಸುತ್ತಿದೆ. ” ತಾಯಿಯೇ ದೇವರು : ಯಾರೇ ಕೈ ಬಿಟ್ಟರೂ ತಾಯಿ ಕೈ ಬಿಡುವುದಿಲ್ಲ ” ಎನ್ನುವ ಮಾತಿಗೆ ಮಾದರಿಯಾಗಿ ನಿಂತಳು ಸುಜಾತಾ…..
…….
” ಸಾಧಿಸಿಬಿಟ್ಟೆ “
ಸುಜಾತಾಳಿಗೆ ಅರಿವಿಲ್ಲದಂತೆ ಪದವೊಂದು ಆಕೆಯ ಬಾಯಿಂದ ಹೊರಬಿತ್ತು.
” ಹೌದಮ್ಮಾ… ನೀನು ಸಾಧಿಸಿಬಿಟ್ಟೆ.. ಅದಕ್ಕಾಗಿಯೇ ಮಹಿಳಾ ಆಯೋಗದವರು ನಿನ್ನನ್ನು ” ಮಹಿಳಾ ಸಾಧಕಿ ” ಪ್ರಶಸ್ತಿ ಗೆ ಆಯ್ಕೆ ಮಾಡಿರುವುದು. ನೋಡು, ನಾನು ಪ್ರಾಕ್ಟಿಕಲ್ ಕ್ಲಾಸ್ ಬಿಟ್ಟು ನೀನು ಸನ್ಮಾನ ಸ್ವೀಕರಿಸುವ ಶುಭ ಗಳಿಗೆಯನ್ನು ಕಣ್ ತುಂಬಿಕೊಳ್ಳಲು ಮಂಗಳೂರಿನಿಂದ ಬಂದಿದ್ದೀನಿ ಅಮ್ಮಾ… ವಿದ್ಯಾ ಕೂಡಾ ಮ್ಯಾನೇಜರ್ ಪರ್ಮಿಷನ್ ತಗೊಂಡು ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಟ್ಯಾಕ್ಸಿ ಮಾಡ್ಕೊಂಡು ಬರ್ತಾಳೆ. ಕುಸುಮಾ ನೌಕರಿಗೆ ಸೇರುವ ಮುನ್ನಾ ದಿನವೇ ನಿನಗೆ ಸನ್ಮಾನ! ನೋಡಮ್ಮಾ… ಸಮಾಜ ಸೇವೆ ಮಾಡಿದವರು ಮಾತ್ರ ಸಾಧಕರಲ್ಲ, ಮಕ್ಕಳನ್ನು ದಡ ಸೇರಿಸುವ ತಾಯಿಯೂ ಬಹು ದೊಡ್ಡ ಸಾಧಕಿ…ಎಷ್ಟು ಅರ್ಥಪೂರ್ಣ! ಎಂಥ ಸಂಭ್ರಮ! ನೋಡು, ಕುಸುಮಾ ಡ್ರೆಸ್ ಮಾಡ್ಕೊಂಡು ಕೂತಿದ್ದಾಳೆ.. ಅಮ್ಮ ನ ಕೈ ಹಿಡಿದು ನಡೆಯಲು.. ನೀನು ರೆಡಿನಾ?” ಏನಿದೆ ರೆಡಿ ಆಗಲಿಕ್ಕೆ? ಒಂದು ಸೀರೆ ಉಟ್ಟುಕೊಂಡರೆ ಆಯ್ತು ಖುಷಿ. “”ಅಮ್ಮಾ… ಇವತ್ತಾದ್ರೂ ಚಂದದ ಸೀರೆ ಉಟ್ಟುಕೊಳ್ಳಮ್ಮ.. ಮೇಕಪ್ ನಾನೇ ಮಾಡ್ತೀನಿ, ಸರೀನಾ? ಪ್ಲೀಸ್ ಬೇಡ ಅನ್ನಬೇಡ. ” ಹಿರಿ ಮಗಳು ಖುಷಿಯ ಖುಷಿಯನ್ನು ಉತ್ಸಾಹವನ್ನು ನೋಡಿ ಅರ್ಧ ಶತಮಾನ ಕಳೆದ ಸುಜಾತಾ ಹದಿನಾರರ ಯುವತಿಯೇ ಆದಳು. ಪೆಟ್ಟಿಗೆಯಲ್ಲಿ ಒಪ್ಪವಾಗಿ ಇಟ್ಟಿದ್ದ ಕಾಟನ್ ಸೀರೆಯೊಂದನ್ನು ಉಟ್ಟುಕೊಂಡು ಮಗಳ ಎದುರು ಕುಳಿತಳು. ಮೇಕಪ್ ಗಾಗಿ! ” ಅಮ್ಮಾ… ಸನ್ಮಾನ ಸ್ವೀಕರಿಸಿದ ಸುಜಾತಾರವರಿಂದ ಎರಡು ಮಾತು… ಅಂತ ನಿರೂಪಕರು ಹೇಳುವಾಗ ಏನ್ ಮಾತಾಡ್ತೀ..? ” ಅದನ್ನು ನಾನು ಹೇಳಿ ಕೊಡುತ್ತೇನೆ ” ಹೊರಗಿನಿಂದ ಬಂದ ಪರಮೇಶಿಯ ಮಾತು ಕೇಳಿ ಎಲ್ಲರೂ ನಕ್ಕರು.
ಜಯಲಕ್ಷ್ಮಿ ಕೆ
ಕಥೆ ಚೆನ್ನಾಗಿದೆ. ಬರೆಯಿರಿ.ಒಳ್ಳೆಯದಾಗಲಿ
Very nice story ❤️ Keep writing
Wonderful story♥️ keep writing