ʼಮುಜುಗರʼ-ಟಿ ಎಸ್ ಶ್ರವಣ ಕುಮಾರಿ ಅವರ ಹೊಸ ಕಥೆ

 

ಮಿಮಿ ಹೈಪರ್‌ ಮಾರ್ಕೆಟ್ಟಿನೊಳಗೆ ಕಾಲಿಟ್ಟ ವೈದೇಹಿಗೆ ಒಂದು ರೀತಿಯ ಅಚ್ಚರಿಯೂ, ದಿಗಿಲೂ ಒಟ್ಟಿಗೇ ಉಂಟಾಯಿತು. ಇಷ್ಟು ದೊಡ್ಡಲೋಕದಲ್ಲಿ ಅವಳು ತಲುಪಬೇಕಾಗಿದ್ದ ಮಳಿಗೆಯನ್ನು ಹೇಗೆ ಹುಡುಕುವುದು ಎಂದು ಗಲಿಬಿಲಿಯಾಯಿತು. ಮಗಳು ರಮ್ಯಾಳೇನೋ “ನೀನು ಸೀದಾ ಮೂರನೆಯ ಪ್ರವೇಶದಿಂದ ಮಾರ್ಕೆಟ್ಟಿನ ಒಳಹೋಗು; ಬಲಪಕ್ಕಕ್ಕೆ ಹೊರಳಿ ನೋಡಿದರೆ ʻಲಿಫ್ಟಿಗೆ ದಾರಿʼ ಫಲಕ ಕಾಣುತ್ತದೆ. ಹಾಗೇ ಹೋದರೆ ಬಲಪಕ್ಕದಲ್ಲಿ ಲಿಫ್ಟಿದೆ. ನಾಲ್ಕನೆಯ ಮಹಡಿಗೆ ಹೋಗು. ಬಾಗಿಲು ತೆರೆದ ತಕ್ಷಣ ಎಡಪಕ್ಕಕ್ಕೆ ಹೋದರೆ ಏಳನೆಯ ಮಳಿಗೆಯೇ ʻಲಕಿʼ ಬ್ಯೂಟಿ ಪಾರ್ಲರ್.‌ ಬೆಳಗ್ಗೆ ಹನ್ನೆರೆಡು ಗಂಟೆಗೆ ಅಪಾಯಿಂಟ್ಮೆಂಟ್‌ ತೊಗೊಂಡಿದೀನಿ. ಮರ್ಲಿನ್‌ ಅಂತ ಪರಿಚಯದವಳಿದ್ದಾಳೆ. ಅವಳಿಗೆಲ್ಲಾ ಹೇಳಿದೀನಿ. ಸೀದಾ ಹೋಗಿ ಅವಳೇ ಬೇಕೂಂತ ಕೇಳಿ, ನನ್ನ ಹೆಸರು ಹೇಳು. ಎಲ್ಲಾನೂ ಮಾಡಿ ಕಳಿಸ್ತಾಳೆ” ಎಂದಿದ್ದಳು. “ಎಷ್ಟು ದುಡ್ಡು? ಇಲ್ಲಾಂದ್ರೆ ಡೆಬಿಟ್‌ ಕಾರ್ಡ್‌ ಕೊಡಬಹುದಾ?” ಎಂದಿದ್ದಕ್ಕೆ ದುಡ್ಡಿನ ಬಗ್ಗೆ ತಲೆ ಕೆಡಿಸ್ಕೋಬೇಡ. ಅಲ್ಲಿ ನನ್ನ ಅಕೌಂಟ್‌ ಇದೆ. ಅದಕ್ಕೆ ಹಾಕಿರ‍್ತಾರೆ. ಇದು ನಿನ್ನ ಹುಟ್ಟುಹಬ್ಬಕ್ಕೆ ನನ್ನ ಗಿಫ್ಟು. ವಾಪಸ್ಸು ಬರುವಾಗ ನನ್ನಮ್ಮ ಹತ್ತು ವರ್ಷ ಚಿಕ್ಕವಳಾಗಿರಬೇಕು” ಎಂದು ಪ್ರೀತಿಯಿಂದ ನಕ್ಕಿದ್ದಳು. ಪ್ರತಿಯೊಂದು ಅಂಶವನ್ನೂ ನೆನಪಿನಲ್ಲಿಟ್ಟುಕೊಂಡಿದ್ದು, ಅಂತೂ ಪಾರ್ಲರ್‌ ತಲುಪಿದ ವೈದೇಹಿ ತಾನು ತಲುಪಬೇಕಿರುವ ಜಾಗ ಅದೇ ಎಂದು ಖಚಿತಪಡಿಸಿಕೊಂಡು ಮುಂದೆ ನಿಂತಳು.

ಮುಚ್ಚಿದ್ದ ಕಪ್ಪುಗಾಜಿನ ಬಾಗಿಲಿನ ಹಿಡಿಕೆಯನ್ನು ತಳ್ಳಿ ಒಳಗೆ ಹೋಗುವುದೋ, ಇಲ್ಲವೇ ಎಳೆದುಕೊಂಡು ಒಳನುಸುಳುವುದೋ ಅರ್ಥವಾಗದೇ ಹಿಡಿಯಮೇಲೇ ಕೈಯಿಟ್ಟುಕೊಂಡು ಒಂದುನಿಮಿಷ ನಿಂತಳು. ಬ್ಯಾಂಕಿನಲ್ಲಿ ಮ್ಯಾನೇಜರ್‌ ರೂಮಿನ ಒಳಹೋಗುವುದಾದರೆ ಬಾಗಿಲಲ್ಲಿ ನಿಂತು ʻಮೇ ಐ ಕಮಿನ್‌ʼ ಎಂದು ಶಿಷ್ಟಾಚಾರಕ್ಕೆ ಕೇಳಿ ಒಳನುಗ್ಗುವುದಿತ್ತು. ಇಲ್ಲೂ ಹಾಗೆಯೇ ಕೇಳಬೇಕೇ? ಇಲ್ಲಾ… ಸೀದಾ ಒಳನುಗ್ಗುವುದೋ? ತಳ್ಳುವುದೋ… ಎಳೆದುಕೊಳ್ಳುವುದೋ… ಛೇ! ರಮ್ಯಾ ಇದನ್ನು ಹೇಳಲಿಲ್ಲವಲ್ಲ ಎಂದು ಗೊಂದಲಕ್ಕೊಳಗಾಗಿ ಪರಿತಪಿಸುತ್ತಿರುವಾಗ ಬಾಗಿಲು ತಾನೇ ತೆರೆದು ನಿಂತ ಒಬ್ಬ ಸುಂದರಾಂಗಿ ಮೇಲಿಂದ ಕೆಳಗಿನತನಕ ನೋಡುತ್ತಾ “ಅಪಾಯಿಂಟ್ಮೆಂಟ್‌ ಇದೆಯಾ” ಎಂದಳು. ಒಂದು ಗೊಂದಲ ಪರಿಹಾರವಾದ ಖುಷಿಯಲ್ಲಿ “ಹ್ಞಾಂ ಇದೆ… ನನ್ನ ಮಗಳು ರಮ್ಯಾಂತ, ಅವಳೇ ತೊಗೊಂಡಿರೋದು… ಮರ್ಲಿನ್‌ ಅನ್ನೋವ್ರನ್ನ ನೋಡು ಅಂದಿದಾಳೆ…” ತಡೆತಡೆದು ಅಂತೂ ಹೇಳಿದಳು. “ಓ… ಸರಿ, ಒಳಗ್ಬನ್ನಿ. ಮರ್ಲಿನ್ ಇನ್ನೊಬ್ರನ್ನ ಅಟೆಂಡ್‌ ಮಾಡ್ತಿದಾಳೆ; ಬರ‍್ತಾಳೆ. ನೀವಿಲ್ಲಿ ಕಾಯಬಹುದು” ಎನ್ನುತ್ತಾ ಅಲ್ಲಿದ್ದ ಸೋಫಾ ಕಡೆಗೆ ಕೈತೋರಿ ಒಳನಡೆದಳು.

ʻಅವಳೇಕೆ ಹಾಗೆ ತನ್ನನ್ನು ಮೇಲಿಂದ ಕೆಳತನಕ ಅಳತೆಹಾಕಿದಳುʼ ಎಂದು ವೈದೇಹಿಗೆ ಒಂದು ರೀತಿಯೆನಿಸಿತು. ʻನನ್ನನ್ನು ಇದೊಂದು ಗೊಡ್ಡುಗೂಬೆ ಎಂದುಕೊಂಡಳಾ?! ಸೀರೆಯುಡದೆ ಯಾವುದಾದರೂ ಡ್ರೆಸ್ಸೋ, ಪ್ಯಾಂಟೋ ಹಾಕಿಕೊಂಡು ಬಂದಿದ್ದರೆ ಅವಳ ಪ್ರತಿಕ್ರಿಯೆ ಬೇರೆಯಾಗಿರುತ್ತಿತ್ತಾ?!ʼ ಎನ್ನುವ ಯೋಚನೆ ಬಂತು. ಹೊರಡುವಾಗ ತೋಚಲಿಲ್ಲ. ಇಲ್ಲದಿದ್ದರೆ ಯೋಗ ಕ್ಲಾಸಿಗೆ ಹಾಕಿಕೊಂಡು ಹೋಗುತ್ತಿದ್ದ ಚೂಡಿದಾರ್‌ನ್ನೇ ಇಸ್ತ್ರಿ ಮಾಡಿ ಹಾಕಿಕೊಂಡು ಬಂದಿರಬಹುದಿತ್ತು. ರಮ್ಯಾ ಒಂದು ಸುಳಿಹು ಕೊಟ್ಟಿದ್ದರೆ ಚೆನ್ನಾಗಿತ್ತು ಅನ್ನಿಸುತ್ತಿರುವಾಗ ಒಳಗಿಂದ ಬಂದ ಗೌರವರ್ಣದ ಸುಂದರಿ ಕೈಚಾಚುತ್ತಾ “ಹಲೋ! ನಾನು ಮರ್ಲಿನ್.‌ ನೀವು ರಮ್ಯಾ ತಾಯಿ ವೈದೇಹಿ ಅಲ್ವಾ. ಅವರೆಲ್ಲಾ ಹೇಳಿದಾರೆ. ಒಬ್ರನ್ನ ಅಟೆಂಡ್‌ ಮಾಡ್ತಿದೀನಿ. ಇನ್ನೊಂದು ಅರ್ಧಗಂಟೆ ಆಗ್ಬೋದು. ನಿಮ್ಗೆ ಪರ‍್ವಾಗಿಲ್ವಲ್ಲ. ಏನಾದ್ರೂ ತೊಗೋತೀರ? ಟೀನೋ… ಕಾಫೀನೋ… ತಂದುಕೊಟ್ಟು ಹೋಗ್ತೀನಿ” ಎನ್ನುತ್ತಾ ನಕ್ಕಳು. ದಿನವೂ ಟೀ ಕುಡಿಯುವ ಸಮಯವೇ; ನಿಜಕ್ಕೂ ಬೇಕೆನಿಸಿದ್ದರೂ ತಕ್ಷಣ ʻಕೊಡಿʼ ಅನ್ನೋದು ಸರಿಯೋ, ತಪ್ಪೋ ಅರ್ಥವಾಗದ ವೈದೇಹಿ, “ಪರವಾಗಿಲ್ಲ, ಏನೂ ಬೇಡ. ನೀವು ಬನ್ನಿ ನಾನು ಕಾಯ್ತೀನಿʼ ಎಂದಳು. “ಸರಿ, ಒಂದರ್ಧ ಗಂಟೆ ಅಷ್ಟೇ. ಮ್ಯಾಗಜ಼ೀನ್‌ಗಳಿವೆ. ನೋಡ್ತಾ ಇರಿ” ಎಂದು ಔಪಚಾರಿಕ ನಗೆಬೀರಿ ಒಳಸರಿದಳು. ಸುತ್ತಲೂ ಒಮ್ಮೆ ಕಣ್ಣಾಡಿಸಿ ಅಲ್ಲಿನ ವೈಭವಕ್ಕೆ ಬೆರಗಾಗಿ ʻನಾನೇ ನಾನಾಗಿ ನಮ್ಮಪ್ಪನಾಣೆ ಇಂಥಲ್ಲಿ ಕಾಲಿಡ್ತಿರ‍್ಲಿಲ್ಲ. ನನಗೆ ಬೇಕಿರೋ ಕೂದಲ ಬಣ್ಣಕ್ಕೆ, ಹುಬ್ಬು, ಮೇಲ್ದುಟಿ, ಗದ್ದ ತಿದ್ದಕ್ಕೆ ಇಷ್ಟೆಲ್ಲಾ ಬೇಕಾʼ ಎಂದುಕೊಂಡಳು. ಪಕ್ಕದ ರ‍್ಯಾಕ್‌ನಲ್ಲಿ ಕೈಯಾಡಿಸಿದರೆ ಎಲ್ಲವೂ ಸೌಂದರ್ಯವರ್ಧನೆಗೆ ಸಂಬಂಧಪಟ್ಟ ಇಂಗ್ಲಿಷ್‌ ನಿಯತಕಾಲಿಕಗಳು. ಆಸಕ್ತಿ ಹುಟ್ಟದಿದ್ದರೂ, ಸುಮ್ಮನೆ ಒಂದೆರೆಡನ್ನು ತೆಗೆದುಕೊಂಡು ಪುಟ ತಿರುಗಿಸತೊಡಗಿದಳು…

ಅಷ್ಟರಲ್ಲಿ ದಡಕ್ಕನೆ ಮುಂಬಾಗಿಲು ತೆರೆದುಕೊಂಡು ಒಬ್ಬ ಧಡೂತಿ ಆಧುನಿಕ ಮಹಿಳೆ “ಹಲೋ ಗ್ರೇಟಾ” ಎಂದು ಕೂಗುಹಾಕುತ್ತಾ ಒಳನುಗ್ಗಿದಳು. ಮೊದಲು ಬಾಗಿಲು ತೆರೆದಿದ್ದ ಸುಂದರಾಂಗಿ ಹೊರಬಂದು “ಹಲೋ ಮ್ಯಾಡಂ” ಎನ್ನುತ್ತಾ ಸನಿಹಕ್ಕೆ ಬಂದು ಹಗುರಾಗಿ ತಬ್ಬಿಕೊಂಡು “ವೆಲ್‌ಕಂ” ಎನ್ನುತ್ತಾ ಎದುರಿನ ಸೋಫಾ ಮೇಲೆ ಕುಳ್ಳಿರಿಸಿ, ತಾನೂ ಪಕ್ಕಕ್ಕೆ ಕುಳಿತು “ನೀವು ಬಂದು ಬಹಾ..ಳ… ದಿನವಾಗಿತ್ತು… ಒಂದು ಮೂರ‍್ನಾಲ್ಕು ತಿಂಗ್ಳಾದ್ರೂ ಆಗಿರ‍್ಬೇಕಲ್ವಾ? ಎಲ್ಲಾದ್ರೂ ಅಬ್ರಾಡ್‌ ಹೋಗಿದ್ರಾ?” ಎಂದುಲಿದಳು ರಾಗವಾಗಿ. “ಹೌದು ಗ್ರೇಟಾ ಡಿಯರ್.‌ ಮಗಳ ಮನೆಗೆ ಯು.ಎಸ್‌.ಗೆ ಹೋಗಿದ್ದೆ ಯು ನೋ. ಮೂರುದಿನ ಆಯ್ತಷ್ಟೇ ವಾಪಸ್ಸು ಬಂದು. ಬರಕ್ಮುಂಚೆ ಅಲ್ಲಿ ಪಾರ್ಲರ್‌ಗೆ ಹೋಗಕ್ಕೆ ಸಮಯವಾಗ್ಲಿಲ್ಲ; ಇವತ್ತು ನಿನ್ನ ಹತ್ರಾನೇ ಬಂದ್ಬಿಡೋಣ ಅಂತ ಬಂದ್ಬಿಟ್ಟೆ. ತೊಗೋ, ಚಾಕ್ಲೇಟ್‌… ನಾಪಾವ್ಯಾಲಿ ವೈನ್… ನಿಂಗೇಂತ ತಂದಿದ್ದು. ಇವತ್ತು ನಂಗೆ ಸ್ಲಾಟ್‌ ಸಿಗತ್ತಾ… ಇಲ್ಲಾ…” ಉಡುಗೊರೆಯ ಚೀಲ ಕೊಡುತ್ತಾ ಕೇಳಿದಳು. “ನಿಮ್ಗೆ ಸ್ಲಾಟಿಲ್ದೆ ಇರತ್ತಾ ಮ್ಯಾಡಂ. ಅಡ್ಜಸ್ಟ್‌ ಮಾಡೋಣ” ಎನ್ನುತ್ತಾ ಖುಷಿಯಿಂದ ತೆಗೆದುಕೊಂಡು ಒಳಗಿಟ್ಟುಕೊಂಡು ಕಂಪ್ಯೂಟರಿನಲ್ಲಿ ಸ್ಲಾಟ್‌ಗಾಗಿ ಹುಡುಕತೊಡಗಿದಳು. ಯಾವುದೋ ಒಂದು ನಂಬರ್‌ಗೆ ಕರೆಮಾಡಿ. “ಮೇಡಂ, ಇವತ್ತು ನಾನು ಅಕಸ್ಮಾತಾಗಿ ರಜೆ ಹಾಕಬೇಕಾಗಿ ಬಂತು.‌ ನಿಮ್ಮನ್ನ ಅಟೆಂಡ್‌ ಮಾಡಕ್ಕಾಗಲ್ಲ. ಶುಕ್ರವಾರ ಇದೇ ಹೊತ್ತಿಗೆ ಬರಕ್ಕಾಗತ್ತಾ ಪ್ಲೀಸ್” ಎಂದಳು ಜೇನು ಉಲಿದಂತೆ. ಆಕಡೆಯ ಯಾವುದೋ ಬಕರಾ ʻಹ್ಞೂಂʼ ಎಂದಿರಬೇಕು…

ಖುಷಿಯಾಗಿ “ಯೆಸ್‌ ಮ್ಯಾಡಂ, ನಿಮ್ಮ ಸ್ಲಾಟ್‌ ರೆಡಿಯಾಯ್ತು. ಕಾಫೀನೋ, ಟೀನೋ, ಕೋಕ್‌ ಏನು ತೊಗೋತೀರಿ” ಎಂದು ನಗುತ್ತಾ ಬಂದಳು. “ಗ್ರೇಸಿ, ನಿಮ್ಮಲ್ಲಿ ಕಾಫಿ, ಟೀ ಬಿಟ್ಟು ಬೇರೇನೂ ಸಿಗಲ್ಲ. ಯಾವ್ದಾದ್ರೂ ಹಾಟ್‌ ಡ್ರಿಂಕ್ಸ್‌ ಇಡಿ ಅಂತ ಅದೆಷ್ಟು ಸಲ ಸಜೆಸ್ಟ್‌ ಮಾಡಿದೀನಿ ನಿಮಗೆ; ಅಟ್ಲೀಸ್ಟ್‌ ಬೀರ್” ಎನ್ನುತ್ತಾ ಹ…ಹ…ಹಾ… ಎಂದು ನಕ್ಕಳು. ಗ್ರೇಸಿಯೂ ಮರುನಗುತ್ತಾ “ಓ… ಅದಕ್ಕೆಲ್ಲಾ ಪರ‍್ಮಿಶನ್‌ ಇಲ್ಲ ಮ್ಯಾಡಂ. ಬೇಕಾದ್ರೆ ಯಾವ್ದಾದ್ರೂ ಪ್ರೂಟ್‌ಜ್ಯೂಸ್‌ ತರಿಸಿಕೊಡ್ಲಾ?” ಎಂದಳು. “ಹಾಗೇ ಮಾಡು. ಮೊದ್ಲು ಶುರು ಮಾಡಿಬಿಡೋಣ. ಅದರ ಪಾಡಿಗೆ ಅದು” ಎನ್ನುತ್ತಾ ಒಳಹೊಕ್ಕಳು.

ಇಷ್ಟು ಹೊತ್ತೂ ಈ ಪ್ರಹಸನ ನೋಡುತ್ತಾ ಕುಳಿತಿದ್ದ ವೈದೇಹಿಗೆ ತನಗೆ ಅಪಾಯಿಂಟ್‌ಮೆಂಟ್‌ ತೆಗೆದುಕೊಳ್ಳಬೇಕಾದರೆ ರಮ್ಯಾ ಮೂರ‍್ನಾಲ್ಕು ಬಾರಿ ಪ್ರಯತ್ನಪಟ್ಟಿದ್ದು ಗೊತ್ತಿತ್ತು. ನಾಲ್ಕನೆಯ ಪ್ರಯತ್ನದಲ್ಲಿ ಇವತ್ತಿಗೆ ಸಿಕ್ಕಿತ್ತು. ಈ ಹೆಂಗಸಿಗೆ ಬಂದ ತಕ್ಷಣದಲ್ಲೇ…! ಯಾವ ಛೂಮಂತ್ರ! ಇಲ್ಲಾ, ಉಡುಗೊರೆಯ ಪವಾಡ!! ಪಾಪದ ಇನ್ನೊಂದು ಹೆಂಗಸು ಯಾರೋ ಮುಂದಿನವಾರದವರೆಗೆ ಕಾಯಬೇಕಾಯ್ತಲ್ಲ ಅನ್ನಿಸುತ್ತಿರುವಾಗಲೇ ಮರ್ಲಿನ್‌ ಹೊರಬಂದು ಇವಳನ್ನು ಕರೆದಳು. ಒಳಹೋದವಳಿಗೆ ಒಮ್ಮೆಲೇ ಬೆಚ್ಚಿಬೀಳುವಂತಾಯಿತು. ಆರು ಆರಾಮ ಕುರ್ಚಿಗಳು. ಅದರಲ್ಲಿ ವಿವಿಧ ಭಂಗಿಗಳಲಲ್ಲಿ ಒರಗಿರುವ ಹೆಂಗಳೆಯರು. ಕೂದಲನ್ನು ಕತ್ತರಿಸಿಕೊಳ್ಳುತ್ತಿರುವವಳು; ಕೈಯನ್ನು ಉಜ್ಜಿಸಿಕೊಳ್ಳುತ್ತಿರುವವಳು; ಕಾಲನ್ನು ಉಜ್ಜಿಸಿಕೊಳ್ಳುತ್ತಿರುವವಳು. ಮುಖಕ್ಕೆಲ್ಲಾ ಏನನ್ನೋ ಹಚ್ಚಿಕೊಂಡು ಕಣ್ಣಮೇಲೆ ಒದ್ದೆ ಹತ್ತಿಯನ್ನಿಟ್ಟುಕೊಂಡು ಆರಾಮಾಗಿ ಮಲಗಿರುವವಳು ಇನ್ನೊಂದೆಡೆ. ಈಗಷ್ಟೇ ಒಳಬಂದಿದ್ದ ಧಡೂತಿ ಹೆಂಗಸೂ ಒಂದರಲ್ಲಿ ಕನಿಷ್ಠ ಉಡುಪಿನಲ್ಲಿ ಹಾಯಾಗಿ ಮೈಚೆಲ್ಲಿದ್ದಳು. ಖಾಲಿಯಾಗಿದ್ದ ಪಕ್ಕದ ಕುರ್ಚಿಗೆ ವೈದೇಹಿಯನ್ನು ಕರೆದೊಯ್ದಳು ಮರ್ಲಿನ್.‌

ಕಂಪ್ಯೂಟರಿನಲ್ಲಿ ಒಮ್ಮೆ ನೋಡಿಬಂದು “ರಮ್ಯಾ ನಿಮಗೆ ಫೇಷಿಯಲ್‌, ವ್ಯಾಕ್ಸಿಂಗ್‌, ಮ್ಯಾನಿಕ್ಯೂರ್‌, ಪೆಡಿಕ್ಯೂರ್‌ ಮಾಡಿ, ತಲೆಕೂದಲಿಗೆ ಬಣ್ಣ ಹಚ್ಚಿ ಟ್ರಿಮ್‌ ಮಾಡಿ ಕಳಿಸಲು ಹೇಳಿದ್ದಾರೆ. ಇನ್ನೇನಾದರೂ ಬೇಕಿತ್ತೇ ಮೇಡಮ್?” ಕೇಳಿದಳು. “ಹುಬ್ಬು, ಗದ್ದ‌, ಮೇಲ್ದುಟಿ… ಅದೇ ಮುಖ್ಯ” ಎಂದು ವೈದೇಹಿ ಇನ್ನೂ ತಡವರಿಸುತ್ತಿರುವಾಗಲೇ “ಅದೆಲ್ಲಾ ಕಾಂಪ್ಲಿಮೆಂಟರಿ ಬಿಡಿ. ಈಗ ಶುರುಮಾಡೋಣವೇ” ಎನ್ನುತ್ತಾ “ನೀವು ಸೀರೆಯಲ್ಲಿದ್ದರೆ ಫೇಷಿಯಲ್‌ ಮಾಡಕ್ಕೆ ಆಗಲ್ಲ. ನಾನೊಂದು ಗೌನ್‌ ಕೊಡ್ತೀನಿ. ಆ ಕೋಣೆಗೆ ಹೋಗಿ ಚೇಂಜ್‌ ಮಾಡ್ಕೊಂಡು ಬಂದ್ಬಿಡಿ; ಇಲ್ಲಾಂದ್ರೆ ಇವರ ತರ…” ಎನ್ನುತ್ತಾ ಪಕ್ಕದ ಕುರ್ಚಿಯ ಧಡೂತಿ ಮಹಿಳೆಯನ್ನು ತೋರಿದಳು. ತನ್ನನ್ನು ಆ ಅವತಾರದಲ್ಲಿ ಕಲ್ಪಿಸಿಕೊಂಡ ವೈದೇಹಿಗೆ ಮೈಯೆಲ್ಲಾ ನಡುಕ ಬಂದು ಮರುಮಾತನಾಡದೇ ಗೌನನ್ನು ತೆಗೆದುಕೊಂಡು ಕೋಣೆಗೆ ಹೋದಳು. ಅದೋ ತೋಳುಗಳೇ ಇಲ್ಲದ ಮೇಲ್ಭಾಗದಲ್ಲಿ ಎಲಾಸ್ಟಿಕ್‌ ಇದ್ದ ಮೊಣಕಾಲವರೆಗಿನ ಗೌನ್.‌ ಹೇಗೆ ಹಾಕಿಕೊಳ್ಳಬೇಕೆಂದು ತಿಳಿಯದೆ ಇಣುಕಿ ಮರ್ಲಿನ್‌ಳನ್ನು ಕರೆದಾಗ ಅವಳು ಬಂದು ಎದೆಯ ಭಾಗದಿಂದ ಮಂಡಿಯವರೆಗೆ ಮುಚ್ಚುವಂತೆ ಸರಿಸಿದಳು. ನಾಚಿಕೆಯಿಂದ ಹಿಡಿಯಾಗಿ “ಸೀರೆ ಉಟ್ಕೊಂಡೇ…” ಎನ್ನುತ್ತಿರುವಾಗಲೇ “ಅಯ್ಯೋ ಇಲ್ಲೆಲ್ಲಾ ಹೆಂಗಸ್ರೇ ಇರೋದು ಪರವಾಗಿಲ್ಲ ಬನ್ನಿ; ಅಷ್ಟು ನಾಚಿಕೆಯೆನಿಸಿದ್ರೆ ಪರದೆ ಸರಿಸಿಬಿಡ್ತೀನಿ” ಎನ್ನುತ್ತಾ ಕುರ್ಚಿಯಲ್ಲಿ ಕೂರಿಸಿ ಪರದೆ ಸರಿಸಿದಂತೆ ಮಾಡಿ ಶುರುಹಚ್ಚಿಕೊಂಡಳು

ಇಷ್ಟೊಂದು ಜನರ ನಡುವೆ ಈ ಅವತಾರದಲ್ಲಿ ಗೌನಿನಲ್ಲಿ ಮಲಗಿರುವಾಗ ವೇದೇಹಿಗೇಕೋ ಹೆರಿಗೆಯ ಸಮಯದಲ್ಲಿ ಡಾಕ್ಟರು, ಸಹಾಯಕರು, ನಾಲ್ಕಾರು ದಾದಿಯರ ನಡುವೆ ಆಸ್ಪತ್ರೆಯಲ್ಲಿ ಮಲಗಿದ್ದ ಅನುಭವ ನೆನಪಿಗೆ ಬಂದು ಮುಜುಗರವಾಯಿತು. ಹೊಟ್ಟೆಯಲ್ಲೇನೋ ತಳಮಳ. ರಮ್ಯಾ ಹೇಳಿದ್ದಂತೆ ತಾನು ಊಟ ಮಾಡಿಕೊಂಡೇ ಬಂದಿದ್ದರೆ ಚೆನ್ನಾಗಿತ್ತೇನೋ. ಇದು ಹಸಿವೋ, ಕಲಮಲವೋ ತಿಳಿಯುತ್ತಿಲ್ಲ. ಮರ್ಲಿನ್‌ “ಮೊದಲು ನಿಮ್ಮ ಕೈಗಳನ್ನು ಮೇಲೆತ್ತಿ; ಕಂಕುಳು ಮತ್ತು ಕಾಲಿನ ವ್ಯಾಕ್ಸಿಂಗ್‌ ಮುಗಿಸಿಕೊಂಡುಬಿಡೋಣ. ಆಮೇಲೆ ಫೇಷಿಯಲ್” ಎನ್ನುತ್ತಾ ಕೈಗಳನ್ನು ಮೇಲಕ್ಕೆತ್ತಿದವಳು “ನೀವು ಯಾವಾಗಲೂ ವ್ಯಾಕ್ಸಿಂಗ್‌ ಮಾಡಿಸಿಕೊಂಡೇ ಇಲ್ವಾ” ಕೇಳಿದಳು. ವೈದೇಹಿಗೆ ತುಂಬಾ ಅವಮಾನವೆನಿಸಿ ಮಾತೂ ಹೊರಡದೆ ಸುಮ್ಮನೆ ತಲೆಯಾಡಿಸಿದಳು. ಯಾವಾಗಾದರೊಮ್ಮೆ ಮನೆಯಲ್ಲೇ ಆ‍್ಯನಿಫ್ರೆಂಚ್‌ ಉಪಯೋಗಿಸುತ್ತಿದ್ದುದಷ್ಟೇ. ಕಾಲಿಗದೂ ಇಲ್ಲ. ಈಗವಳು ಕಂಕುಳು, ಕಾಲಿಗೆಲ್ಲಾ ವ್ಯಾಕ್ಸ್‌ ಮೆತ್ತಿ ಬಟ್ಟೆಯನ್ನೊತ್ತಿ ಪರಪರ ಎಳೆಯುತ್ತಿದ್ದರೆ ನೋವಾಗತೊಡಗಿತು. ಬಾಯ್ಬಿಡುವಂತಿಲ್ಲ. ಹಲ್ಲುಕಚ್ಚಿ ನೋವನ್ನು ತಡೆದಳು. ಅಂತೂ ಕೊನೆಗೊಮ್ಮೆ ಆ ಕರ್ಮಕಾಂಡ ಮುಗಿದು ಅಬ್ಭಾ! ಎಂದು ನಿಟ್ಟುಸಿರು ಬಿಡುವಂತಾಯಿತು.

ಈಗ ಕುರ್ಚಿಯನ್ನು ಆರಾಮಾಗುವಂತೆ ಇಳಿಸಿ ಹೊಂದಿಸಿಕೊಂಡು ಮುಖದ ತುಂಬಾ ಪರಿಮಳದ ಕ್ರೀಮನ್ನು ಧಾರಾಳವಾಗಿ ಬಳಿದು ಹಿತವಾಗುವಂತೆ ಮತ್ತೆಮತ್ತೆ ಮುಖ, ಭುಜ, ಕತ್ತು… ಮಸಾಜ್‌ ಮಾಡುತ್ತಿದ್ದರೆ ನಿಧಾನವಾಗಿ ನಿದ್ರೆ ಬರುವಂತಾಗತೊಡಗಿತು. ನಿದ್ರೆಯಲ್ಲಿ ತಾನು ಕನವರಿಸುತ್ತೇನೆ. ಗೊರಕೆ ಹೊಡೆಯುತ್ತೇನೆಂದು ಗಂಡನ ತಕರಾರು. ಇಷ್ಟು ಜನರ ನಡುವೆ ಮಲಗಿ ಕನವರಿಸುವುದೋ, ಗೊರೆಯುವುದೋ ಮಾಡಿದರೆ?! ಎಂತಹ ಅವಮಾನ!! ಇವರೆಲ್ಲಾ ಆಡಿಕೊಂಡು ನಗಬಹುದು ಎನ್ನಿಸಿ ನಿದ್ರೆ ಮೈಮೇಲೇರೇರಿ ಬರುತ್ತಿದ್ದಷ್ಟೂ ಕಷ್ಟಪಟ್ಟು ಅದನ್ನು ದೂರದೂರ ತಳ್ಳತೊಡಗಿದಳು. ಇದನ್ನೇ ರಮ್ಯಾ ಹೇಳಿದ್ದಿದ್ದು ʻತುಂಬಾ ಆರಾಮವಾಗಿರತ್ತೆ, ಬೇಕಾದ್ರೆ ಮಲಗ್ಬಿಡುʼ ಅಂತ. ಶಾರದಾನೂ ಹೇಳಿದ್ದಳಲ್ಲ! ತಿಂಗಳಿಗೊಮ್ಮೆ ಮನೆಗೇ ಬಂದು ತನ್ನ ಮುಖವನ್ನೊಂದಿಷ್ಟು ತಿದ್ದುವ ತಮ್ಮೂರಿನ ಹುಡುಗಿ ಶಾರದಾ ಹಲವು ಬಾರಿ ಹೇಳಿದ್ದಳು “ಆಂಟಿ, ಪ್ರತಿಸಲವೂ ನೀವು ಬರೀ ಹುಬ್ಬು, ತುಟಿ ಮತ್ತು ಗದ್ದಗಳನ್ನು ಮಾಡಿಸಿಕೊಂಡು ಕೂದಲಿಗೆ ಬಣ್ಣ ಹಚ್ಚಿಸಿಕೊಳ್ತೀರಿ ಅಷ್ಟೇ. ಚರ್ಮವೆಲ್ಲಾ ಒಣಗಿ ದೊರಗಾಗಿದೆ. ಒಂದ್ಸಲ ಫೇಷಿಯಲ್‌ ಮಾಡಿಸಿಕೊಳ್ಳಿ. ಎಷ್ಟು ಆರಾಮಾಗತ್ತೆ ಗೊತ್ತಾ. ಇಲ್ಲೇ ನಿಮ್ಮ ಬೆಡ್‌ ಮೇಲೇ ದಿಂಬುಗಳನ್ನು ಜೋಡಿಸಿ, ನಿಮಗಾಗಿ ಡಿಸ್ಕೌಂಟ್‌ನಲ್ಲಿ ಮಾಡಿಕೊಡ್ತೀನಿ. ಒಂದ್ಸಲ ಪ್ಲೀಸ್…”. ಅವಳಂದಂತೆ ಮನೆಯಲ್ಲೇ ಮಾಡಿಸಿಕೊಂಡಿದ್ದರೆ ಆರಾಮಾಗಿ ಮಾಡಿಸಿಕೊಳ್ಳಬಹುದಿತ್ತೇನೋ. ಎಷ್ಟೋ ವರ್ಷಗಳಿಂದ ನೋಡಿರುವವಳು… ತಾನು ಗೊರೆದರೂ, ಕನವರಿಸಿದರೂ ಸಂಕೋಚ ಪಡಬೇಕಾದ ಪ್ರಮೇಯವಿರಲಿಲ್ಲ. ʻಆದರೆ ಈಗಿಲ್ಲಿ ನಿದ್ರೆಗೆ ಜಾರಿಬಿಟ್ಟರೆ!ʼ ಭಯವಾಗತೊಡಗಿತು. ಮುಖಕ್ಕೆಲ್ಲಾ ಯಾವುದೋ ಮಣ್ಣನ್ನು ಮೆತ್ತಿ, ಕಣ್ಣಮೇಲೆ ತಣ್ಣನೆಯ ಹತ್ತಿಯನ್ನಿಟ್ಟು ಮರ್ಲಿನ್ ಭುಜ, ತೋಳುಗಳನ್ನು ಮೃದುವಾಗಿ ಉಜ್ಜಲಾರಂಭಿಸಿದಳು… ‌
*
ಶಾರದಳೇನೋ ಹೇಳುತ್ತಿದ್ದಳು. ಆದರೆ ಅಷ್ಟು ಪುರಸೊತ್ತಾದರೂ ಎಲ್ಲಿ ಸಿಗುತ್ತಿತ್ತು? ಮೂರುತಿಂಗಳ ಹಿಂದಿನತನಕ ಮನೆಯಲ್ಲಿ ಹದಿನೈದು ವರ್ಷಗಳಿಂದ ಪೆರಾಲಿಸಿಸ್‌ನಿಂದಾಗಿ ಹಾಸಿಗೆ ಹಿಡಿದಿದ್ದ ಅತ್ತೆ; ತಾನು ಮನೆಗೆ ಬರುವುದನ್ನೇ ಕಾಯುತ್ತಿದ್ದು, ಡ್ಯೂಟಿ ಮುಗಿಯಿತೆಂದು ತಕ್ಷಣವೇ ಬ್ಯಾಗನ್ನೆತ್ತಿಕೊಂಡು ಮನೆಗೆ ಹೊರಡುತ್ತಿದ್ದ ದಾದಿ! ಕೋಪಬಂದು “ಮನೆಗೆ ಬಂದ ಮೇಲೆ ಫ್ರೆಶ್‌ ಆಗುವಷ್ಟಾದರೂ ಸಮಯ ಕೊಡು ಮಾರಾಯ್ತಿ. ಮುಖ ತೊಳೆದು ನಿಶ್ಚಿಂತೆಯಾಗಿ ಟೀಯನ್ನಾದರೂ ಕುಡೀತೀನಿ. ನಿನ್ನಹಾಗೆ ನಾನೂ ಬೆಳಗ್ಗೆ ಹತ್ತುಗಂಟೆಯಿಂದ ಇಲ್ಲಿನವರೆಗೂ ದುಡಿದು, ಸಿಟಿಬಸ್ಸಿನಲ್ಲಿ ತಳ್ಳಿಸಿಕೊಂಡು, ದೂಡಿಸಿಕೊಂಡು ಬಂದಿಳಿದಿದ್ದೀನಿ. ರಾತ್ರಿ ಕೆಲಸ ರಾಶಿಬಿದ್ದಿದೆ. ಹತ್ತುನಿಮಿಷ ಕೂತಿರು. ನಿನಗೂ ಟೀ ಕೊಡ್ತೀನಿ” ಎಂದು ಜಬರಿಸಿ ಕುಳ್ಳಿರಿಸಿಕೊಂಡದ್ದಿದೆ. ಹಾಗೆ ಹೇಳಿದೆನೆಂದು ಅವಳೆಂದೂ ಸಮಾಧಾನವಾಗಿ ಕೂತವಳಲ್ಲ. ಮುಳ್ಳಿನಮೇಲೇ ಕುಳಿತಂತಿದ್ದು, ಲೋಟ ಕೆಳಗಿಟ್ಟ ತಕ್ಷಣ ಚಪ್ಪಲಿ ಮೆಟ್ಟಿಕೊಳ್ಳುತ್ತಿದ್ದಳು. ಎಷ್ಟೋ ಬಾರಿ ಹೊರಡುವ ಮುಂಚೆ ಅತ್ತೆಯ ಡೈಪರನ್ನೂ ಬದಲಿಸಿರುತ್ತಿರಲಿಲ್ಲ. ಮರುದಿನ ಕೇಳಿದರೆ ಕಾಲುಗಂಟೆಯ ಮುಂಚೆ ಏನೂ ಆಗಿರಲಿಲ್ಲ ಎನ್ನುವ ಮಾಮೂಲಿ ಉತ್ತರ. ಕೆಲಸದಿಂದ ಬಂದ ನಂತರ ಡೈಪರ್‌ ನೋಡುವುದೇ ತನ್ನ ಮೊದಲ ಕೆಲಸವಾಗಿತ್ತು. ನಂತರ ಅಡುಗೆ, ಅತ್ತೆಯ ಊಟ, ಔಷಧಿ, ಉಪಚಾರ. ಗಂಡ-ಮಗ ಬಂದಮೇಲೆ ತನ್ನ ಊಟವಾಗುತ್ತಿದ್ದದ್ದು ಹತ್ತು ಹೊಡೆದ ನಂತರವೇ.

ಕಾಲೇಜಿಗೆ ಹೋಗುತ್ತಿದ್ದ ಮಗ; ಪ್ರೈವೇಟ್‌ ಕಂಪನಿಯಲ್ಲಿದ್ದು ಹೇಳಿಕೊಳ್ಳುವಂತಹ ಸಂಬಳವಿಲ್ಲದ ಗಂಡ. ಮಗಳ ಓದಿಗೆ, ಮದುವೆಗೆ, ಮಗನ ಓದಿಗೆ, ಮಾವ ಬದುಕಿರುವ ತನಕ ಅವರ ಖಾಯಿಲೆಗೆ, ಜೊತೆಜೊತೆಗೇ ಅತ್ತೆಯ ಖಾಯಿಲೆಗೆ ಒಂದೇ ಎರೆಡೇ ಖರ್ಚು! ತಾನು ಕೆಲಸ ಬಿಡುವ ಪರಿಸ್ಥಿತಿಯಂತೂ ಇಲ್ಲವೇ ಇಲ್ಲ. ಇಷ್ಟೊಂದು ಖರ್ಚುಗಳ ನಡುವೆ ಇಂತಹ ಐಷಾರಾಮಿ ಪಾರ್ಲರ್! ಕನಸಿನಲ್ಲೂ ಸಾಧ್ಯವಿರಲಿಲ್ಲ. ಶಾರದಾಳನ್ನು ಊರಿನವರೊಬ್ಬರು ಪರಿಚಯ ಮಾಡಿಕೊಟ್ಟಿದ್ದು. ಇಲ್ಲಿ ಯಾವುದೋ ಬ್ಯೂಟಿಪಾರ್ಲರಿನಲ್ಲಿ ಒಂದಷ್ಟು ವರ್ಷ ಕೆಲಸ ಮಾಡಿ ಅನುಭವ ಗಳಿಸಿಕೊಂಡವಳು; ಅವಳ ತಾಯಿಯೂ ಹಾಸಿಗೆ ಹಿಡಿದಮೇಲೆ, ಪುರಸೊತ್ತಿನಲ್ಲಿ ಮನೆಮನೆಗೆ ಹೋಗಿ ಕೆಲಸಮಾಡಲು ಶುರುಮಾಡಿದ್ದಾಳೆ. ಅವಳಿಗೆ ನನ್ನಂತವರೇ ಗಿರಾಕಿಗಳು. ನಾವು ಕೊಡುವ ಐನೂರೋ, ಆರುನೂರೋ… ಅಂತೂ ಅದರಲ್ಲೇ ಜೀವನ ಸಾಗಿಸುತ್ತಾಳೆ. ಈ ತಿಂಗಳು ಪಾಪ! ಅದೂ ಅವಳಿಗೆ ತಪ್ಪಿಹೋಯಿತಲ್ಲ ಎಂದು ಮನದಲ್ಲಿ ವ್ಯಥೆಯೇ ಆಯಿತು…
*
ಭುಜದ ಮೇಲೆ, ಮಂಡಿಯ ಕೆಳಗೆ ಬಟ್ಟೆಯಿಲ್ಲ. ತಾನೀಗ ಯಾವ ಅವತಾರದಲ್ಲಿದ್ದೇನೋ… ಅಕ್ಕಪಕ್ಕದಲ್ಲಿ ಯಾರ‍್ಯಾರು ನೋಡಿ ಮನಸ್ಸಿನಲ್ಲೇ ಏನೇನು ಆಡಿಕೊಳ್ಳುತ್ತಿರಬಹುದು?! ಪೋಷಣೆಯಿಲ್ಲದ ಸುಕ್ಕುಸುಕ್ಕಾಗಿರುವ ನನ್ನ ಮೈಚರ್ಮ ಅವರಿಗೆ ಅಸಹ್ಯವನ್ನು ಹುಟ್ಟಿಸುತ್ತಿರಬಹುದೇ? ತಾನೊಬ್ಬಳೇ ಮಾತಿಲ್ಲದೆ ಸುಮ್ಮನೇ ಮಲಗಿರುವುದು. ಮಾಡಿಸಿಕೊಳ್ಳುತ್ತಿರುವವರು, ಮಾಡುತ್ತಿರುವವರು ಎಲ್ಲರೂ ಆಗಾಗ ಏನೇನೋ ಮಾತನಾಡುತ್ತಾ ಜೋರಾಗಿ ಗಹಗಹಿಸಿ ನಗುತ್ತಿದ್ದಾರೆ. ಅದರಲ್ಲಿ ಒಬ್ಬಳಂತೂ ಏನೇನೋ ಪೋಲಿ ಜೋಕುಗಳನ್ನೆಲ್ಲಾ ಅದೆಷ್ಟು ಸಲೀಸಾಗಿ ಪುಂಕುತ್ತಿದ್ದಾಳೆ! ಅವಳ ಮಾತಿಗೆ ಎಲ್ಲರೂ ಬಿದ್ದುಬಿದ್ದು ನಗುತ್ತಿದ್ದಾರೆ. ಅವರೊಂದಿಗೆ ತಾನು ನಗಬೇಕೋ, ಸುಮ್ಮನಿರಬೇಕೋ ಅರ್ಥವಾಗದೆ ವೈದೇಹಿ ಕಕ್ಕಾಬಿಕ್ಕಿಯಾದಳು…

ಫೇಷಿಯಲ್‌ ಮುಗಿದ ಮೇಲೆ ಕುರ್ಚಿಯನ್ನು ಸ್ವಲ್ಪ ನೇರವಾಗಿಸಿ “ಸ್ನಾಕ್ಸ್‌ ಏನನ್ನಾದರೂ ತಿಂತೀರಾ ಮೇಡಮ್.‌ ತಲೆಗೆ ಬಣ್ಣ ಹಚ್ಚಬೇಕು ತೊಳೆದ ನಂತರ ಕೂದಲು ಟ್ರಿಮ್‌ ಮಾಡಬೇಕು. ಮ್ಯಾನಿಕ್ಯೂರ್‌, ಪೆಡಿಕ್ಯೂರ್‌ ಆಗಬೇಕು, ಆಮೇಲೆ ಹುಬ್ಬು ಗದ್ದ… ಲೇಟಾಗತ್ತೆ” ಮರ್ಲಿನ್‌ ಕೇಳಿದಳು. ಕಣ್ಣುಬಿಟ್ಟು ಸುತ್ತಲೂ ನೋಡಿದಳು. ಯಾರೂ ಏನೂ ತಿನ್ನುತ್ತಿಲ್ಲ. ಹಸಿವಿನಿಂದಾಗಿ ಹೊಟ್ಟೆಯಲ್ಲಿ ನಡುಕ ಬಂದಿದ್ದರೂ, ತಾನೊಬ್ಬಳೇ ತಿನ್ನಲು ಸಂಕೋಚವೆನಿಸಿ “ತಿನ್ನಕ್ಕೇನೂ ಬೇಡ… ಸಾಧ್ಯವಾದರೆ ಒಂದು ಲೋಟ ಟೀ?” ಎಂದಳು ನಿಧಾನವಾಗಿ. “ಖಂಡಿತವಾಗಿ” ಎನ್ನುತ್ತಾ ಮಾರಿ ಬಿಸ್ಕತ್ತಿನೊಂದಿಗೆ ಟೀಯನ್ನು ತಂದಳು. ಹೇಗೋ ಕಷ್ಟಪಟ್ಟುಕೊಂಡು ಟೀಯನ್ನು ಕುಡಿಯಲು ಆರಂಭಿಸಿದಳು. ಆಯಾಸದಿಂದ ಕೈಗಳು ನಡುಗತೊಡಗಿ ಟೀ ಗೌನಿನ ಮೇಲೆ ಚೆಲ್ಲಿತು! ವಿಪರೀತ ಅವಮಾನವಾದಂತೆನಿಸಿ ಮರ್ಲಿನ್‌ಳ ಮುಖವನ್ನೇ ನೋಡಿದಳು. ಅವಳೇನೋ ಏನೂ ಆಗದವಳಂತೆ “ಪರವಾಗಿಲ್ಲ ಬಿಡಿ. ಹೇಗೂ ಅದನ್ನ ಒಗೆಯೋದೇ ತಾನೇ. ನೀವು ಆರಾಮಾಗಿದೀರಾ? ಇನ್ನೊಂದು ಲೋಟ ಟೀ ಕೊಡಲಾ” ಎಂದಳು ವಿಶ್ವಾಸ ತೋರುತ್ತಾ. ಆದರೂ ಅವಳೇನಂದುಕೊಂಡಳೋ ಎನ್ನುವುದು ವೈದೇಹಿಯ ಮನದಲ್ಲಿ ಕಟೆಯತೊಡಗಿ ಇವೆಲ್ಲಾ ರಂಪ ರಗಳೆ ಮುಗಿದು ಇಲ್ಲಿಂದ ಓಡಿಹೋದರೆ ಸಾಕು ಎನ್ನಿಸತೊಡಗಿತು.

ಮರ್ಲಿನ್‌ “ಡೈ ಹಚ್ಬೇಕು. ಇದುವರೆಗೂ ಯಾವ ನಂಬರ್ರಿನದ್ದನ್ನು ಬಳಸ್ತಿದ್ರಿ?” ಕೇಳಿದಳು. ಅದ್ಯಾವ ನಂಬರ್ರೋ, ತನಗೆ ಗೊತ್ತಿದ್ರೆ ತಾನೇ! ಪ್ರತಿಸಲವೂ ಶಾರದಾನೇ ತರುತ್ತಿದ್ದದ್ದು. ಮೂರನೆ ನಂಬರ್‌ ಎಂದೇನೋ ಒಮ್ಮೆ ಹೇಳಿದ ನೆನಪು. “ಡಾರ್ಕ್‌ ಬ್ರೌನ್‌, ಮೂರನೆಯ ನಂಬರ್‌ ಇರಬೇಕು” ಎಂದಳು. ಅವಳು ತನ್ನ ತಲೆಕೂದಲನ್ನು ಹಿಡಿದು ಮ್ಯಾಚ್‌ ಮಾಡಿಕೊಳ್ಳುತ್ತಿರುವಾಗ ಅವಳ ಮುಖವನ್ನೇ ನೋಡತೊಡಗಿದಳು. ಉತ್ತರದ ನಿರೀಕ್ಷೆಯಿಲ್ಲದೆ “ಯಾವಾಗ ತಲೆ ತೊಳೆದಿದ್ರಿ?” ಎಂದಳು ಪೋಷಣೆಯೇ ಇಲ್ಲದ ತನ್ನ ತಲೆಕೂದಲನ್ನು ನೋಡುತ್ತಾ. ಅವಳ ಮುಖ ಸ್ವಲ್ಪ ಗಂಟಾಗಿತ್ತೆ, ಅಸಮಾಧಾನವಿತ್ತೇ ಅಥವಾ ತನ್ನ ಭ್ರಮೆಯೇ?! ಅರ್ಥವಾಗಲಿಲ್ಲ. ʻಸಾಯಲಿ; ಬಂದಿದ್ದಾಗಿದೆ. ರಮ್ಯಾ ದುಡ್ಡನ್ನೂ ಕೊಟ್ಟಾಗಿದೆ. ಏನೇನು ಮಾಡ್ತಾರೋ ಎಲ್ಲಾನೂ ಮಾಡಿಸಿಕೊಂಡೇ ಹೋಗಬೇಕಲ್ಲʼ ಎನ್ನಿಸಿ ತಟಸ್ಥವಾಗಿ ಕುಳಿತಳು. ಬಣ್ಣ ಕಲೆಸಿಕೊಂಡ ಬಂದ ಮರ್ಲಿನ್‌ ಕೂದಲನ್ನು ಬಿಡಿಸಿಕೊಳ್ಳುತ್ತಾ ಒಂದೊಂದು ಕೂದಲಿಗೂ ಹಚ್ಚುತ್ತಿದ್ದಾಳೇನೋ ಎನ್ನುವಂತೆ ಜಾಗರೂಕತೆಯಿಂದ ನಯವಾಗಿ ಎಷ್ಟೋ ಹೊತ್ತು ಹಚ್ಚುತ್ತಲೇ ಇದ್ದಳು. ಶಾರದನ ಕೆಲಸದಲ್ಲಿ ಇಂತಹ ನಯಗಾರಿಕೆ ಇಲ್ಲ…

“ಈಗ ಡೈ ಒಣಗುವಷ್ಟರಲ್ಲಿ ಮ್ಯಾನಿಕ್ಯೂರ್‌, ಪೆಡಿಕ್ಯೂರ್‌ ಮುಗಿಸಿಕೊಂಡು ಬಿಡೋಣ” ಎನ್ನುತ್ತಾ ಪಕ್ಕದಲ್ಲಿ ಕುಳಿತು ಅವಳ ಕೈಗಳನ್ನು ತನ್ನತ್ತ ಎಳೆದುಕೊಂಡಳು. ಊರಿಗೆ ಹೋಗಿರುವ ನಿಂಗಿ ಹದಿನೈದು ದಿನಗಳಿಂದ ಬಂದಿಲ್ಲ. ಬಟ್ಟೆ ಒಗೆದು, ಪಾತ್ರೆ, ಅಡುಗೆಕಟ್ಟೆ, ಬಚ್ಚಲು ತಿಕ್ಕಿ ಒರಟಾಗಿರುವ ಕೈಗಳನ್ನು ತೋರಿಸಲೇ ನಾಚಿಕೆಯೆನ್ನಿಸಿತು. “ಕೈಚರ್ಮ ತುಂಬಾ ಸೂಕ್ಷ್ಮವಾಗಿರತ್ತೆ. ಆದಷ್ಟು ಗಡುಸಾದ ಪಾತ್ರೆ ಸೋಪು, ಬಟ್ಟೆ ಸೋಪು ಸೋಕಿಸಬೇಡಿ. ಮಲಗುವ ಮುಂಚೆ ಕೈಕಾಲು, ಮುಖಕ್ಕೆ ಯಾವುದಾದರೂ ಕ್ರೀಂ ಹಚ್ಚಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ. ವಯಸ್ಸಾದ್ಮೇಲೆ ಚರ್ಮ ತೇವವನ್ನು ಕಳೆದುಕೊಳ್ಳತ್ತೆ” ಎನ್ನುತ್ತಾ ಮರ್ಲಿನ್‌ ಬೆರಳುಗಳನ್ನು ಉಜ್ಜುತ್ತಿದ್ದರೆ ವೈದೇಹಿಗೆ ಕೂತಲ್ಲೇ ಕುಸಿದುಹೋಗುವಂತಾಗಿತ್ತು. ಅವಳನ್ನು ನೋಡಲು ನಾಚಿಕೆಯೆನ್ನಿಸಿ ಕಣ್ಣುಗಳನ್ನು ಮುಚ್ಚಿಕೊಂಡು ಹಿಂದಕ್ಕೊರಗಿದಳು. “ನಿಮ್ಮ ಉಗುರುಗಳು ಶೇಪ್‌ ಕೊಡಲು ಬರುವಹಾಗಿಲ್ಲ; ನೀಟಾಗಿ ಕತ್ತರಿಸಿ ನೈಲ್‌ ಪಾಲೀಶ್‌ ಹಚ್ಚಿಕೊಡ್ತೀನಿ. ಯಾವ ಕಲರ್‌ ಹಾಕಲಿ?” ಎಂದಾಗ ಕಕ್ಕಾಬಿಕ್ಕಿಯಾದಳು. “ಇದಾದ್ರೆ ಎಲ್ಲಾ ಕಲರ್‌ಗೂ ಹೊಂದತ್ತೆ. ಇದನ್ನು ಹಾಕ್ಲಾ” ಎಂದಾಗ ಸುಮ್ಮನೆ ತಲೆಯಾಡಿಸಿದಳು. ಪಾದ, ಕಾಲು, ಬೆರಳುಗಳನ್ನು ಹಿತವಾಗುವಂತೆ ಉಜ್ಜುತ್ತಿದ್ದರೆ ಅಲ್ಲಿಲ್ಲಿ ಒಡೆದಿರುವ ಹಿಮ್ಮಡಿಯನ್ನು ನೋಡಿ ಇನ್ನೇನೇನು ಬೈದುಕೊಳ್ಳುತ್ತಿದ್ದಾಳೋ ಎನ್ನಿಸತೊಡಗಿತು.

ಅಕ್ಕ ಪಕ್ಕದ ಕುರ್ಚಿಯಲ್ಲಿ ಯಾರೋ ಬಂದು ಕುಳಿತುಕೊಳ್ಳುತ್ತಿದ್ದರು. ಇನ್ಯಾರೋ ಎದ್ದು ಹೋಗಿರುತ್ತಿದ್ದರು. ಬಂದವರೊಡನೆ ಮತ್ತೆ ಹೊಸ ಸಂಭಾಷಣೆ, ಸಂವಾದ, ನಗು… ಎಲ್ಲರೂ ಇಲ್ಲಿಗೆ ಸದಾ ಬಂದು ಹೋಗುತ್ತಿದ್ದವರೇ ಇರಬೇಕು. ಒಬ್ಬರಿಗೊಬ್ಬರು ಬಲು ಆತ್ಮೀಯರಾಗಿ ಮಾತನಾಡುತ್ತಿದ್ದರು. ಇವರಿಷ್ಟರ ಮಧ್ಯೆ ತಾನೊಬ್ಬಳೇ ಇಲ್ಲಿಗೆ ಸಲ್ಲದವಳು ಎನ್ನಿಸಿಬಿಟ್ಟಿತು. ʻಈ ವಾತಾವರಣ ನನ್ನದಲ್ಲ; ಈ ಜಗತ್ತು ನನ್ನದಲ್ಲ; ನನ್ನ ಸುತ್ತಲೂ ನಡೆಯುತ್ತಿರುವುದೆಲ್ಲಾ ನಾಟಕ. ಈ ನಾಟಕದಲ್ಲಿ ಇವರೆಲ್ಲಾ ನನ್ನನ್ನೊಂದು ಕೋಡಂಗಿಯನ್ನಾಗಿ ಮಾಡಿಕೊಂಡು ಮಜಾ ತೆಗೆದುಕೊಳ್ಳುತ್ತಿದ್ದಾರೆ. ಇವರೊಂದಿಗೆ ಒಂದಾಗಿ ಬೆರೆಯಲು ನನಗೆ ಸಾಧ್ಯವೇ ಇಲ್ಲ. ಈ ಮಾತು, ಕತೆ, ಸನ್ನಿವೇಶʼ ಇದ್ಯಾವುದೂ ನನ್ನದಲ್ಲ ಎನ್ನಿಸಿ ವೈದೇಹಿಗೆ ಅಸಹನೀಯ ವೇದನೆಯೆನಿಸಿತು.

ರಮ್ಯಾ ಹೇಳಿದ್ದಕ್ಕೆ ಒಪ್ಪಿಕೊಳ್ಳಬಾರದಿತ್ತೇನೋ ಎಂದುಕೊಳ್ಳತೊಡಗಿದಳು. ಅವಳು ಹೇಳಿದ್ದು ಅದೆಷ್ಟನೆಯ ಸಲವೋ?! “ಅದೇನು, ಅಭಿಮಾನಕ್ಕೆ ಬಿದ್ದು ಆ ಶಾರದನ್ನ ಕರೆಸಿಕೊಳ್ತೀಯ. ಎಂಥೆಂಥಾ ಪಾರ್ಲರ್‌ಗಳಿವೆ. ಒಂದ್ಸಲ ಹೋಗಿ ಆ ಸುಖ ಅನುಭವಿಸು. ಅಲ್ಲಿ ಮಲಗಿ ಒಂದು ಫೇಷಿಯಲ್‌ ಮಾಡಿಸಿಕೊಂಡ್ರೆ ಎಂಥಾ ಹಿತವಾಗಿರತ್ತೆ ಗೊತ್ತಾ. ನಿನ್ನ ಬೆರಳುಗಳು ನೋಡು ಹೇಗಾಗಿದೆ. ಒಂದ್ಸಲ ಉಜ್ಜಿಸಿಕೊಂಡು ಬಾ. ಜೀವನಾ ಎಲ್ಲಾ ಬರೀ ದುಡಿಯೋಕೆ ಅಂತಾನೇ ಹುಟ್ಟಿದೀಯಾ? ಇಷ್ಟರವರೆಗೂ ಅಜ್ಜಿ ಇದ್ರು; ಜವಾಬ್ದಾರಿ ಇತ್ತು. ಈಗ ಸುರೇಂದ್ರಂದೂ ಓದು ಮುಗಿದು ಕೆಲಸಕ್ಕೆ ಸೇರಿದ್ದಾಗಿದೆ. ಇನ್ನಾದರೂ ಸುಖಪಡು. ಒಬ್ಬಳಲ್ದಿದ್ರೆ ಇಬ್ಬರು ಕೆಲಸದವರನ್ನು ಇಟ್ಟುಕೋ. ಮೇಮೇಲೆ ಎಳ್ಕೊಂಡು ಎಲ್ಲಾನೂ ಮಾಡಕ್ಕೆ ಹೋಗ್ಬೇಡ. ನಾನು ನಿನ್ನನ್ನ ಒಂದೊಳ್ಳೆ ಪಾರ್ಲರ್‌ಗೆ ಕರ‍್ಕೊಂಡು ಹೋಗಿ ತಿದ್ದಿಸಿಕೊಂಡು ಬರ‍್ತೀನಿ ನೋಡು. ಹತ್ತು ವರ್ಷ ಸಣ್ಣವಳ ಹಾಗೆ ಕಾಣ್ಬೇಕ್‌ ನೀನು” ಒಂದೇ ವರಾತ. “ಆಯ್ತಾಯ್ತು ನೋಡೋಣ” ಎಂದು ಮಾತು ಹಾರಿಸುತ್ತಿದ್ದವಳನ್ನು ಬಿಡದೆ, ನನ್ನಿಂದ ರಜಾ ಹಾಕಿಸಿ ಇವತ್ತಿಗೆ ಅಪಾಯಿಂಟ್‌ಮೆಂಟ್‌ ತೆಗೆದುಕೊಂಡೇಬಿಟ್ಟಳು. ತಾನೂ ಬರುತ್ತೇನೆಂದಿದ್ದವಳಿಗೆ ಕಡೆಯ ಘಳಿಗೆಯಲ್ಲಿ ಏನೋ ಅರ್ಜೆಂಟ್‌ ಮೀಟಿಂಗ್‌ ಬಂದು ತಾನೊಬ್ಬಳೇ ಬರುವಂತಾಯಿತು.

ಕೈಕಾಲು ಉಜ್ಜಿ ಮುಗಿಸುವ ಹೊತ್ತಿಗೆ ನಾಲ್ಕರ ಹತ್ತಿರಕ್ಕೆ ಬಂದಿತ್ತು. ಕೂದಲು ತೊಳೆಯಬೇಕು. ಸಧ್ಯಕ್ಕೆ ಅಲ್ಲಿ ಬ್ಯುಸಿಯಾಗಿದೆ. ಕಾಲುಗಂಟೆ ಕಾಯಿರಿ. ಅಷ್ಟ್ರಲ್ಲಿ ಒಬ್ರನ್ನ ಅಟೆಂಡ್‌ ಮಾಡಿಬರ‍್ತೀನಿ ಎನ್ನುತ್ತಾ ಮೂರನೆಯ ಕುರ್ಚಿಯತ್ತ ನಡೆದಳು. ಬಹುಕಾಲದ ಪರಿಚಯವೇನೋ; ಇಬ್ಬರ ಮುಖಚಹರೆಯೂ ಬದಲಾಗಿಹೋಯಿತು. ಐದುನಿಮಿಷ ಹರಟೆಯಲ್ಲೇ ಕಳೆದು ಕೆಲಸವನ್ನು ಶುರುಮಾಡಿಕೊಂಡಳು. ನಡುನಡುವೆಯೂ ಅದೆಷ್ಟೊಂದು ಮಾತು, ನಗು! ರಮ್ಯಾನೂ ಇಲ್ಲಿ ಹೀಗೇ ಇರ‍್ತಾಳ?! ಅದೆಷ್ಟೋ ಹೊತ್ತು ಇಬ್ಬರೂ ಮಾತಾಡುತ್ತಲೇ ಇದ್ದಾರೆ. ಬೇಗ ಬಂದು ನನ್ನ ತಲೆ ತೊಳೆದು ಕಳಿಸಬಾರದಾ? ಆಗಲೇ ಸಂಜೆ ನಾಲ್ಕು ಗಂಟೆಯಾಗಿದೆ. ಹೊಟ್ಟೆಯ ಹಸಿವು ಸತ್ತು ನಿತ್ರಾಣವೆನ್ನಿಸುತ್ತಿದೆ. ರಮ್ಯನಿಗೆ ಹೇಳಿದರೆ, ʻಏನಾದ್ರೂ ತರಿಸಿಕೊಡಿ ಅನ್ನಕ್ಕೆ ನಿಂಗೇನಾಗಿತ್ತು? ಹಸ್ಕೊಂಡು ಯಾಕೆ ಕೂತಿದ್ದೆʼ ಎಂದು ತನ್ನನ್ನೇ ಬೈಯುತ್ತಾಳೆ. ʻಎಂದೂ ಅನ್ನ ಕಂಡಿಲ್ಲದವರಂತೆ ಕೇಳುವುದಾದರೂ ಹೇಗೆ?!ʼ ʻಮನೆಗೆ ಹೋದರೆ ಸಾಕುʼ ಎನ್ನಿಸಿ ಅವಳತ್ತಲೇ ನೋಡತೊಡಗಿದಳು.

ಅಂತೂ ಬಂದವಳು “ಕೂದಲು ತೊಳೆಯೋಣ ಬನ್ನಿ” ಎನ್ನುತ್ತಾ ಕರೆದೊಯ್ದು ತಲೆಯನ್ನು ನೀರಿನ ಬೇಸಿನ್ನಿಗೊರಗಿಸಿ ತೊಳೆಯತೊಡಗಿದಳು. ಕುಳ್ಳಾದ್ದರಿಂದಲೋ ಏನೋ, ಬೆನ್ನಮೇಲೆಲ್ಲಾ ನೀರಿಳಿದು ಒದ್ದೊದ್ದೆಯಾಗಿ ಹಿಂಸೆಯಾಗತೊಡಗಿತು. ಅನ್ನುವಂತಿಲ್ಲ ಆಡುವಂತಿಲ್ಲ; ಶಾಂಪೂ ಹಾಕಿ ಕಾಲುಗಂಟೆ ತೊಳೆದೇ ತೊಳೆದಳು. ಅಂತೂ ಕಡೆಗೊಮ್ಮೆ ಮುಗಿಸಿ ಡ್ರೈಯರ್‌ನಿಂದ ಒಣಗಿಸಿದಳು. ಅಲ್ಲಿಂದೇಳುವಾಗ “ಅಯ್ಯೋ ನಿಮ್ಮ ಬೆನ್ನೆಲ್ಲಾ ನೆಂದುಹೋಗಿದೆ. ಹೇಳಬಾರದಿತ್ತೆ. ಕೆಳಗೊಂದು ದಿಂಬು ಹಾಕಿ ಸ್ವಲ್ಪ ಎತ್ತರ ಮಾಡ್ತಿದ್ದೆ” ಎಂದಳು. “ಪರವಾಗಿಲ್ಲ ಬಿಡಿ. ನಾನು ಸೀರೆ ಬದಲಾಯಿಸಿಕೊಂಡು ಬಂದ್ಬಿಡ್ತೀನಿ” ಎಂದಾಗ “ಹಾಗೇ ಮಾಡಿ ಕೂದಲು ಟ್ರಿಮ್‌ ಮಾಡಿ ಹುಬ್ಬು ತೀಡೋದಷ್ಟೇ ತಾನೇ” ಎನ್ನುತ್ತಾ ತನ್ನ ಜಾಗಕ್ಕೆ ನಡೆದಳು.

ವೈದೇಹಿ ಸೀರೆ ಬದಲಾಯಿಸಿ ಬರುವ ವೇಳೆಗೆ ಅವಳು ಇನ್ಯಾರೋ ಹುಡುಗಿಯ ಕೂದಲು ಕತ್ತರಿಸಲು ಶುರುಹಚ್ಚಿಕೊಂಡಿದ್ದಳು. ಅದಾಗುವ ಹೊತ್ತಿಗೆ ಇನ್ಯಾರೋ ಕರೆದರು. ಅಲ್ಲಿಗೆ ಹೋದಳು… ಅಂತೂ ಇಂತೂ ವಾಪಸ್ಸು ಬರುವಾಗ ನಾಲ್ಕೂಮುಕ್ಕಾಲು ದಾಟಿತ್ತು. ಬಂದವಳೇ ಚಕಚಕನೆ ಕೂದಲಿನ ಮೇಲೆ ಕತ್ತರಿಯಾಡಿಸುತ್ತಾ “ಈಗ ಐದೂಕಾಲು ಗಂಟೆಗೆ ಡೆಂಟಿಸ್ಟ್‌ ಅಪಾಯಿಂಟ್‌ಮೆಂಟ್‌ ಇದೆ ನಂಗೆ. ನಿಮ್ಮ ಕೂದಲು ಕತ್ತರಿಸಿದ ನಂತರ ಅಲ್ಲಿಗೆ ಹೋಗ್ಬೇಕು. ಐಬ್ರೋ, ಅಪ್ಪರ್‌ಲಿಪ್‌, ಚಿನ್‌ ಇವೆಲ್ಲಾ ಕಾಂಪ್ಲಿಮೆಂಟರಿ; ಆದ್ರೆ ನಂಗೀಗ ಟೈಮಿಲ್ಲ. ಪ್ಲೀಸ್‌, ಈ ವಾರದಲ್ಲಿ ಇನ್ಯಾವತ್ತಾದರೂ ಈ ಕಡೆ ಬಂದಾಗ ಸೀದಾ ಒಳಗ್ಬಂದ್ಬಿಡಿ. ಟೈಮ್‌ ಅಡ್ಜಸ್ಟ್‌ ಮಾಡಿಕೊಂಡು ಮಾಡಿ ಕಳಿಸ್ತೀನಿ” ಎನ್ನುತ್ತಾ ಸುಂದರವಾಗಿ ನಕ್ಕಳು. “ಇನ್ಯಾರಾದ್ರೂ…” ಎನ್ನುತ್ತಿರುವಾಗಲೇ “ಎಲ್ರೂ ಬ್ಯುಸಿ ಇದಾರೆ. ಈಗ ಆಫೀಸ್‌ ಮುಗಿಸ್ಕೊಂಡು ಬರೋವ್ರ ಅಪಾಯಿಂಟ್‌ಮೆಂಟ್‌ ಇರತ್ತೆ. ಸಾರಿ” ಎಂದಾಗ ವಿಧಿಯಿಲ್ಲದೇ ತಲೆಯಾಡಿಸಿ ಎದ್ದಳು. ಅಷ್ಟರಲ್ಲಿ ಯಾರೋ ಹುಡುಗಿ “ಮರ್ಲಿನ್‌, ಅವರದ್ದು ಎಂಟೂವರೆ ಸಾವಿರ ಆಗಿದೆ. ಪೇಮೆಂಟ್‌ ಕಾರ್ಡಲ್ಲಾ, ಕ್ಯಾಶಲ್ಲಾ” ಎಂದಳು. ಮರ್ಲಿನ್‌ “ಇಲ್ಲ, ಅದನ್ನು ರಮ್ಯಾ ಅಕೌಂಟಿಗೆ ಹಾಕು. ಹಾಗೇನೇ ಐಬ್ರೋ, ಅಪ್ಪರ್‌ಲಿಪ್‌, ಚಿನ್‌ ಡ್ಯೂ ಇದೆ ಅಂತ ನೋಟ್‌ ಮಾಡ್ಕೋ” ಎನ್ನುತ್ತಾ ವೈದೇಹಿಗಿಂತಲೂ ಮುಂಚಿತವಾಗಿಯೇ ತನ್ನ ಬ್ಯಾಗನ್ನೆತ್ತಿಕೊಂಡು ಬಾಗಿಲು ತಳ್ಳಿಕೊಂಡು ಹೊರಗೋಡಿದಳು.

ಹೊರಬರುವ ಮುಂಚೆ ಕನ್ನಡಿಯಲ್ಲಿ ತನ್ನನ್ನು ನೋಡಿಕೊಂಡ ವೈದೇಹಿಗೆ ʻಇಷ್ಟಕ್ಕೆ ಎಂಟೂವರೆ ಸಾವಿರ ರೂಪಾಯಾ? ರಮ್ಯಾಗೆ ದುಡ್ಡಿಗೆ ಬೆಲೆಯಿದೆಯಾ?ʼ ಅನ್ನಿಸಿಬಿಟ್ಟಿತು. ವರ್ಷವೆಲ್ಲಾ ಮಾಡಿಸಿಕೊಂಡರೂ ಶಾರದಂಗೆ ಇಷ್ಟು ಕೊಡಲ್ಲ. ಕೊಡುವ ಐನೂರೋ ಆರುನೂರೋ ತೆಗೆದುಕೊಳ್ಳುವಾಗ ಅವಳ ಮುಖದಲ್ಲಿ ಕಾಣುವ ತೃಪ್ತಿ ಬೇರೆಯೇ ಖುಷಿಕೊಡತ್ತೆ. ಇಲ್ಲಿ ಖುಷಿಗಿಂತ ಮುಜುಗರವಾಗಿದ್ದೇ ಜಾಸ್ತಿ. ಇಂತಹ ಪಾರ್ಲರ್‌ಗಳಿಗೆ ಹೋಗಿ ಬರುವ ತನ್ನ ಎಷ್ಟೋ ಸಹೋದ್ಯೋಗಿಗಳು ಹೇಳಿದಾಗಲೂ ತನಗೆಂದೂ ಹೋಗಬೇಕೆನಿಸಿರಲಿಲ್ಲ. ಇಷ್ಟಾಗಿ ಮಾಮೂಲಾಗಿ ಮಾಡಿಸಿಕೊಳ್ಳುತ್ತಿದ್ದ, ತನಗೆ ಅವಶ್ಯಕತೆಯಿದ್ದ ಹುಬ್ಬು, ಗದ್ದ, ಮೇಲ್ದುಟಿ ಉಳಿದೇಹೋಯಿತು. ಕಾಂಪ್ಲಿಮೆಂಟರಿ ಸಾಯಲಿ; ಆ ನೆಪದಲ್ಲಾದರೂ ಶಾರದನ್ನ ಕರೆದು ಮಾಡಿಸಿಕೊಂಡು ಐನೂರು ರೂಪಾಯಿ ಕೊಟ್ಟರೆ ಮನಸ್ಸಿಗೊಂದಿಷ್ಟು ಸಮಾಧಾನವಾಗತ್ತೆ ಎಂದುಕೊಳ್ಳುತ್ತಾ ಹೈಪರ್‌ ಮಾರ್ಕೆಟ್‌ನಿಂದ ಹೊರಗೆ ಕಾಲಿಟ್ಟಳು.


7 thoughts on “ʼಮುಜುಗರʼ-ಟಿ ಎಸ್ ಶ್ರವಣ ಕುಮಾರಿ ಅವರ ಹೊಸ ಕಥೆ

  1. ಕೃತಕ ಆಧುನಿಕ ಜೀವನ ಶೈಲಿಗೆ ಒಗ್ಗದ ಹೆಣ್ಣಿನ ಮಾನಸಿಕ ತಳಮಳದ ನೈಜ ಚಿತ್ರಣ

  2. ನನ್ನದೇ ಕತೆಯೇನೋ ಅನಿಸಿತು. ಮಧ್ಯಮ ವರ್ಗದವರ ನಮ್ಮ ಜೀವನ ಕೆಲಸ ಮಾಡುವುದರಲ್ಲಿ, ಅಗತ್ಯಕ್ಜೆ ಹಣ ಹೊಂದಿಸುವುದರಲ್ಲೇ ಹೋಗ್ತದೆ. ವೃದ್ಧಾಪ್ಯ ಸನ್ನಿಹಿತ ವಾದಾಗಲೇ ಕೆಲಸದಿಂದ ತುಸು ಪುರುಸೊತ್ತು,ಕೈಯಲ್ಲಿ ಹಣದ ಓಡಾಟ. ಈ ವಯಸ್ಸಿಗೆ ಇದೆಲ್ಲಾ ಬೇಕಾ ಅನಿಸ್ತದೆ.

  3. This story happens in all middle class families. Daughters want their mothers to enjoy the luxury but the mothers are content with their old habits & find this expensive treatment a sheer waste. This is a new subject which you have ventured. It’s a light story brought out well.

  4. ನಮಗೆ ಒಗ್ಗದ ವಿಷಯಗಳು ಎಷ್ಟು ಹಿಂಸೆಯಾಗುತ್ತದೆ… ಬಹಳ ಸಹಜವಾದ ಶೈಲಿಯ ಕಥೆ.

  5. ಮಧ್ಯಮ ವರ್ಗದ ಮಹಿಳೆಯ ಆತಂಕದ ಕ್ಣಣಗಳ ಚಿತ್ರಣ.ಸರಳ ಮತ್ತು ಸುಂದರ ನಿರೂಪಣೆ.
    ಕತೆಗಾರ್ತಿ ಮೇಡಂ ಶ್ರವಣಕುಮಾರಿ ಮೇಡಂ ಅವರಿಗೆ ಅಭಿನಂದನೆಗಳು

Leave a Reply

Back To Top