ʼಜೀವನ ಎಂದರೆ ಹೊಂದಾಣಿಕೆಯಲ್ಲ ಅದೊಂದು ಬಿಡಿಸಲಾಗದ ಪವಿತ್ರ ಬಂಧʼ ಡಾ.ಯಲ್ಲಮ್ಮನವರ ಲೇಖನ

ಜೀವನ ಎಂದರೆ ಹೊಂದಾಣಿಕೆ, ಹೊಂದಾಣಿಕೆಯೇ ಜೀವನ ಎಂಬುದು ಸಾಮಾನ್ಯವಾಗಿ ಎಲ್ಲರೂ ಒಪ್ಪಿತ ಅಂಶವಾಗಿದೆ. ಇಲ್ಲಿ ಯಾರೊಬ್ಬರ ಜೀವನವೂ ಹೂವಿನ ಹಾಸಿಗೆಯಂತಿಲ್ಲ, ಆಗಿದ್ದರೆ ಅಂತಹ ಜೀವನಕ್ಕೆ ಕವಡೆಕಾಸಿನ ಕಿಮ್ಮತ್ತು ಇರುತ್ತಿರಲಿಲ್ಲ, ಬದುಕಿನ ಹಾದಿಯುದ್ದಕ್ಕೂ ಕಲ್ಲು-ಮುಳ್ಳುಗಳು ಎಡತಾಕುತ್ತಿರುತ್ತವೆ, ಸುಖ-ದುಃಖಗಳು ಸಮ್ಮಿಳತವಾಗಿರುತ್ತವೆ, “ಜೀವನ ಅಂದರೆ ಕೆಲವೊಬ್ಬರಿಗೆ ಕೊಬ್ಬರಿ ಮಿಠಾಯಿ ಇಲ್ಲವೇ ಕಲ್ಲುಸಕ್ಕರೆ ಇದ್ದಹಾಗೆ ಯಾವತ್ತೂ ಸವಿಸವಿ, ಇನ್ಕೆಲವರಿಗೆ ಅಗೆದು ಅಗೆದು ದವಡೆ ನೋವು ತರಿಸುವಂತಹ ಚೂಯಿಂಗ್ ಗಮ್ ತರಹ ತೀರಾ ಸಪ್ಪೆಸಪ್ಪೇ, ಇತ್ತ ಉಗಿಯೋಕು ಆಗದೆ ಅತ ನುಂಗೋಕೆ ಆಗದೆ ಇಬ್ಬದಿತನದಿ ಸಿಲುಕಿರುತ್ತಾರೆ..!” ಶ್ರೀಮಂತಿಕೆ ಇದ್ದಕೂಡಲೇ ಸುಖದಿಂದ್ದಾರೆ ಎಂದು ತಿಳಿಯುವುದು ಶುದ್ಧ ಮೂರ್ಖತನವಾದೀತು! ದೀಪದಡಿ ಕತ್ತಲು ಎನ್ನುವ ಹಾಗೆ ಅವರೂ ಕೂಡ ನೆಮ್ಮದಿಯನ್ನು ಅರಸುತ್ತಾ ಅಂಡಲೆಯುತ್ತಾರೆ.
ಬದುಕಿನ ಕುರಿತಾಗಿ ಅನೇಕರು ತಮ್ಮತಮದೇ ಆದ ಅರಿವಿನ ನೆಲೆಯಲ್ಲಿ ವ್ಯಾಖ್ಯಾನಿಸುತ್ತಾ ಬಂದಿರುವುದನ್ನು ಕಾಣಬಹುದಾಗಿದೆ. ಹೀಗೆ ಬಂದು ಹಾಗೇ ಹೋಗುವ ಬದುಕಿಗೆ ನಿಜಕ್ಕೂ ಒಂದು ಅರ್ಥ ಇದೆಯಾ? ನೆನ್ನೆಯ ಕೊರಗಿನಲಿ, ನಾಳೆಯ ಚಿಂತೆಯಲಿ ಇಂದನ್ನು ಬಲಿಗೊಡುತ್ತ ಇಡೀ ಜೀವನ ಅಸಂತುಷ್ಟಿಯಿಂದ ಬದುಕಿ-ಬಾಳಿ ಸತ್ತಮೇಲೆ ಸಿಗುವ ನಿರಾಳ ಭಾವಕ್ಕೆ ಮುಕ್ತಿ ಎನ್ನಬಹುದೇ? ನಾನು ನನ್ನದು ಎಂದು ಬಡಿದಾಡುತ್ತಾ.., ಎಂಜಲು ಗೈಯಲ್ಲಿ ಕಾಗೆಯನ್ನೂ ಓಡಿಸದ ಲೋಭಿತನಕ್ಕೆ ಸಿಲುಕಿ, ಕೊನೆಗೊಂದು ದಿನ ಎಲ್ಲವನ್ನು ಬಿಟ್ಟು ಹೊರಟಾಗ – ಇದ್ದಾಗಂತೂ ತಾನೂ ನೆಮ್ಮದಿ ಕಾಣಲಿಲ್ಲ, ಇನ್ನೊಬ್ಬರನ್ನೂ ನೆಮ್ಮದಿಯಿಂದ ನಿದ್ದೆಮಾಡೋಕೆ ಬಿಡಲಿಲ್ಲ, ಎಂದು ಹಿಡಿಶಾಪಹಾಕುತ್ತಾ.., ಎಲ್ಲರೂ ಆತ್ಮಕ್ಕೆ ಶಾಂತಿ [ರೆಸ್ಟ್ ಇನ್ ಪೀಸ್] ಕೋರುವುದು!
ಆಡಿಸುವಾತ ಬೇಸರ ಮೂಡಿ ಆಟ ಮುಗಿಸಿ ಮಣ್ಣಾಗಿಸುವ ಮುನ್ನವೇ ಮಣ್ಣಾದವರನ್ನು ನಾವು ಹೆಚ್ಚಾಗಿ ಕಾಣುತ್ತೇವೆ, ಅವನ ಹಣೆಬರ ಅಷ್ಟಿತ್ತು ಅಂತ ಕಾಣಿಸುತ್ತೆ, ಅವನ ಅನ್ನದ ಋಣ ತೀರಿತು, ದೇವರಿಗೆ ತುಂಬಾ ಪ್ರೀತಿ ಇತ್ತಂತೆ ಕಾಣಿಸುತ್ತೆ ಅದಕ್ಕೆ ಬಹುಬೇಗನೇ ತನ್ನೆಡೆಗೆ ಕರೆದುಕೊಂಡುಬಿಟ್ಟ, ಏನೆಲ್ಲ ಸಾಂತ್ವಾನ ಮಾತುಗಳನ್ನು ಆಡುತ್ತೇವೆ ; ದೇವರು ನಮ್ಮ ಮನೆ ಮುರಿದುಬಿಟ್ಟಾ, ದೀಪಕ್ಕೆ ದಿಕ್ಕಲ್ಲದಂತೆ ಮಾಡಿಬಿಟ್ಟಾ, ಎಂತೆಂತವು ಇನ್ನೂ ಗುಡ್ಡ  ಕುಂತಂಗೆ ಕುಂತವೆ ಅವಕ್ಕೆ ಎನೂ ಬರವಲ್ತು ಹೊತಗೊಂಡು ಹೋಗುವಂತದ್ದು, ನನ್ನ ಮಗನೇ ಬೇಕಿತ್ತಾ? ನನ್ನ ಗಂಡಾನೇ ಬೇಕಿತ್ತಾ? ಎಂದೆಲ್ಲಾ ದೇವರನ್ನು ಹಳಿಯುವುದನ್ನು ಕಾಣುತ್ತೇವೆ ; ಮುಂದುವರೆದು ಏನಾಗಿತ್ತು ಅಂದರೆ? ಏನಾಗಿತ್ತು? ಏನು ಆಗಬಾರದಿತ್ತೋ ಅದೆಲ್ಲಾ ಆಗಿತ್ತು! ಡಾಕ್ಟರು ಏನಂತ ಹೆಸರಿಟ್ಟುರು? ಅವರಿಗೆನು ಆರಾಮಿಲ್ಲ ಅಂತ ಹೋದ್ರೆ ಸಾಕು ನೂರು ಹೆಸರಿಟ್ಟು, ಲಕ್ಷಗಟ್ಟಲೇ ಪೀಕ್ತಾರೆ! ಒಟ್ಟನಲ್ಲಿ ದೇವರು ತನ್ನ ಮೇಲೆ ಏನೂ ಹಾಕೊಳ್ಳಲ್ಲ ನೋಡು! ಕುಂತಕುಂತಲ್ಲೇ, ಮಕ್ಕಂಡಲ್ಲೇ ತಣ್ಣಗೆ ಹೋದರು ಆಟಾಟ್ಯಾಕ್ ಅಂತಾರೆ, ಜಡ್ಡು-ಜಾಪತ್ರೆ ಬಂದ್ರೆ ದೊಡ್ಡಬ್ಯಾನಿಗೆಲ್ಲ ಬಗೆಬಗೆ ಹೆಸರಿಡ್ತಾರೆ, ನಮ್ಮ ಕಾಲದಲ್ಲಿ ಇಂಗ ಇರಲಿಲ್ಲ ಅನ್ನು.., ಎಂದು ಬೇಸರಿಸಿ ನುಡಿಯುವದನ್ನು ಕಾಣುತ್ತೇವೆ.
ಪ್ರಸ್ತುತ ದಿನಮಾನಗಳಲ್ಲಿ ಅಪಘಾತ, ಅನಾರೋಗ್ಯ, ಪ್ರಕೃತಿ ವಿಕೋಪದಂತಹ ಸನ್ನಿವೇಶಗಳಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿದೆ. ಜನನದರ ಹೆಚ್ಚಿ, ಮರಣದರ ಕಮ್ಮಿಯಾದರೆ ಅದು ಜನಸಂಖ್ಯಾ ಸ್ಫೋಟದಂತಹ ಸಾಮಾಜಿಕ ಪಿಡುಗಿಗೆ ನಾಂದಿಹಾಡಿತೆನ್ನಬಹುದು! ಹಾಗಾದರೆ ದೇವರು ಎಲ್ಲರನ್ನೂ ಒಂದಲ್ಲ ಒಂದು ನೆಪ ಒಡ್ಡಿ ಕೊಂಡೊಯ್ಯುವನಾದರೆ, ಆ ನೆಪಗಳು ನಿಮಿತ್ತ ಮಾತ್ರವೇ? ಅವನು ಆಡಿಸಿದಂತೆ ಆಡುವ ಗೊಂಬೆಗಳೇ ನಾವುಗಳೆಲ್ಲ? ಸಾವಿನ ಕುರಿತಾಗಿ ನಮ್ಮಲ್ಲಿ ಸ್ವಯಂಕೃತ ಅಪರಾಧಗಳೇನು ಇಲ್ಲವೇ? ಹೀಗೆ ಸುಖಾಸುಮ್ಮನೆ ದೇವರನ್ನು ಹಳಿಯುವುದೇಕೆ? ಈ ಬಗೆಗೆ ನಾವು ಸ್ವಲ್ಪ ಯೋಚಿಸಬೇಕಲ್ಲವೇ? ಹೀಗೆ ಯೋಚನಾ- ಚಿಂತನಾ ಲಹರಿ ಎತ್ತೆತ್ತಲೋ ಸಾಗಿ ತಳಬುಡವಿಲ್ಲದ, ಆದಿ-ಅಂತ್ಯವಿಲ್ಲದೆ, ಗೊತ್ತು-ಗುರಿಯಿಲ್ಲದೆ ಸಾಗುವ ಬದುಕಿನ ಪಯಣದ ಕುರಿತಾಗಿ ಕಟ್ಟಿದ ಅಂಕಣ ಬರಹವಾಗಿದೆ.
ಮುದ್ದು ಮಗಳಿಗೆ ಮದುವೆಮಾಡಿ ಗಂಡನಮನೆಗೆ ಕಳುಹಿಸುವ ಮುನ್ನ ಹೊಸಮನೆ, ಹೊಸಜಾಗ ಹ್ಯಾಗೋ ಏನೋ ಎಂದು ಕಳವಳಿಸುವ ಮಗಳಿಗೆ ಅತ್ತೆ-ಮಾವ, ಮೈದುನ-ನೆಗಣ್ಣಿಯರೊಂದಿಗೆ ಹೊಂದಿಕೊಂಡು ಹೋಗು ಎಂದು ಬೋಧೆ ಮಾಡಲಾಗುತ್ತೆ ; ಗಂಡ-ಅತ್ತೆ-ಮಾವಂದಿರೊಂದಿಗೆ ಜಗಳವಾಡಿಕೊಂಡು ತೌರಿಗೆ ಬಂದ ಮಗಳಿಗೆ ಗಂಡ ಹೇಗೇ ಇರಲಿ? ಸಂಸಾರ ಅಂದ್ಮೇಲೆ ಒಂದಲ್ಲ ಹತ್ತುಮಾತು ಬರುತ್ತೆ ಹೋಗುತ್ತೆ ಅದಕ್ಕೆಲ್ಲ ಅಂಜಿದರೆ ಬಾಳ್ವೆ ಆಗ್ತದಾ? ಹುಚ್ಚಿ ಹೊಂದಿಕೊಂಡು ಹೋಗೋದು ಕಲಿ ಮೊದಲು ಎಂದು ಮರುಬೋಧನೆ ಇಲ್ಲವೇ  ಗಂಡ-ಹೆಂಡತಿ ಚೆಂದಾಗಿ ಬಾಳ್ವೆ ಮಾಡಿಕೊಂಡು ಹೊಗುವಂಗೆ, ಅತ್ತೆ-ಮಾತ ಉಸಿರೆತ್ತದಂಗೆ ಅಂತ್ರ, ಮಂತ್ರ, ಯಂತ್ರಗಳಹ ತಂತ್ರಗಳಾದಿಯಾಗಿ  ಪರಿಹಾರ ಬೋಧನೆಯನ್ನು ನೀಡಲಾಗುತ್ತದೆ, ಇದಕ್ಕೂ ಸರಿಹೋಗದಿದ್ದರೆ ಏನೋ ಕೆಟ್ಟ ಗ್ರಾಚಾರ ಬಡಿದಿರಬೇಕು, ತೌರಮನೆಯಲ್ಲಿದ್ದುಕೊಂಡು ಇಪ್ಪತ್ತೊಂದು ವಾರಮಾಡು, ಗಂಡಾದವನು ಬೇಕಾದರೆ ಬಂದೋಗೋದು ಮಾಡ್ಲಿ ಬೇಕಾದರೆ ಅಡ್ಡಿಯಿಲ್ಲ ಎಲ್ಲ ಸರಿಹೋಗುತ್ತೆ! ಮಗಳ್ನ ಬಾಳ ಮುದ್ದು ಮಾಡಿ ಬೆಳಿಸಿರೀ ಅಂತ ಕಾಣಿಸುತ್ತೆ! ಹೊಂದಿಕೊಂಡು ಹೋದ್ರೆ ಬಾಳ್ವೆ ಆಕತೀ, ಕಡ್ಡಿನ ಹೋಗಿ ಗುಡ್ಡ ಮಾಡ್ಬಾರದ್ದು ಅಂತ ನಿಮ್ಮ ಮಗಳಿಗೆ ಬುದ್ಧಿ ಹೇಳಿರಿ ಸ್ವಲ್ಪ ಅಂತ ಹಡದ್ತಪ್ಪಿಗೆ ಯಾರು ಯಾರಿಂದಲೋ ಬುದ್ಧಿಮಾತು ಕೇಳಬೇಕಾಗ್ತೈತಿ. ಇದು ಒಬ್ಬರ ಮನೆಯ ಪಾಡಲ್ಲ, ಎಲ್ಲರ ಮನೆ ದೋಸೆನೂ ಅಂತಾರಲ್ಲಾ ಹಾಗೆ ಎಲ್ಲರದ್ದೂ ಅದೇ ರಾಗ, ಅದೇ ಹಾಡು ಹಾಡು ಗೆಳತಿ! ಈ ಹಾಡು-ಪಾಡು ತಪ್ಪಿದ್ದಲ್ಲ.
ಅನಾದಿಕಾಲದಿಂದಲೂ ನಮಗೆ ಹೀಗೆ ಬೋಧಿಸಿಕೊಂಡು ಬರಲಾಗಿದೆ, ನಾವು ಹಾಗೆ ಅಂದುಕೊಂಡು ಅದನ್ನೇ ರಾಗಬದ್ಧವಾಗಿ ಹಾಡಿಕೊಂಡು ಸಾಗುತ್ತಿದ್ದೇವೆಯೇ ಹೊರತು, ಮತ್ತೊಂದು ಬಗೆಯಲ್ಲಿ ಯೋಚಿಸುವ ಗೊಡವೆ ಬೇಕಿಲ್ಲ ನಮಗೆ! ಹೊಂದಿಕೊಂಡು ಹೋಗೋದು ಅಂದ್ರೆ ಏನು? ಎಲ್ಲಿವರಗೆ ಹೊಂದಿಕೊಳ್ಳುವುದು? ಅದಕ್ಕು ಒಂದು ಇತಿ-ಮಿತಿ ಬೇಡ್ವೇ? ಸರಿ.., ಸರಿ.., ಅಂದ್ರೆ ಎಲ್ಲಿವರೆಗೂ ಸರಿತಾರೆ ಹೇಳು? ಗೋಡೆ ಬರೋವರೆಗೂ ; ಆ ಮೇಲೆ ತಿರುಗಿ ಬೀಳೋದು ಅನಿವಾರ್ಯ ಆಗ್ಲೇ ಕದನ ಶುರುವಿಟ್ಟುಕೊಳ್ಳುತ್ತದೆ, ಮನೆ ಮತ್ತು ಮನಸ್ಸು ಒಡೆದು ಕೌಟುಂಬಿಕ ವಿಘಟನೆಗೊಳ್ಳುತ್ತದೆ.
ಜೀವನ ಎಂದರೆ ಹೊಂದಾಣಿಕೆಯಲ್ಲ ಅದೊಂದು ಬಿಡಿಸಲಾಗದ ಪವಿತ್ರ ಬಂಧ [“life is not a adjustment it is a attachment or Life is not a compromise, it is an unbreakable sacred bond”] ವಾಗಿದೆ. ಹೊಂದಾಣಿಕೆ ಒಂದು ಹಂತದವರೆಗೂ ಮಾತ್ರ ಸಹ್ಯವೆನಿಸುತ್ತದೆ, ನನ್ನೀ ಮಾತಿಗೆ ಪೂರಕವಾದ ಸರಳ ನಿದರ್ಶನವನ್ನು ನೀಡುತ್ತಾ ಮುಂದುವರೆಯುತ್ತೇನೆ ; ನೀವು ಬಸ್ ನಲ್ಲಿ ಓಡಾಡುವಾಗ ಸಾಮಾನ್ಯವಾಗಿ ಈ ಸಂಗತಿ ನಿಮ್ಮ ಗಮನಕ್ಕೆ ಬಂದಿರುತ್ತದೆ ಎಂದು ನಾನು ಭಾವಿಸುತ್ತೇನೆ – ಶಾಲಾ-ಕಾಲೇಜಿನ ವಿದ್ಯಾರ್ಥಿ/ನಿಯರು ಪ್ರಯಾಣದ ಸಂದರ್ಭದಿ ತಮ್ಮ ಆಪ್ತ ಗೆಳೆಯ/ತಿಯರು ಬಂದಾಗ ಇರುವ ತಾವು ಕೂತ ಸೀಟ್ ನಲ್ಲಿ ಸ್ವಲ್ಪ ಅಡ್ಜಸ್ಟ್ ಮಾಡಿಕೊಂಡು ಇಬ್ಬರು ಕೂಡುವಲ್ಲಿ ಮೂವರು, ಮೂವರು ಕೂಡುವಲ್ಲಿ ನಾಲ್ವರು ಕೂತು ಪ್ರಯಾಣಿಸುತ್ತಾರೆ ಇದು ಹೊಂದಾಣಿಕೆಯ ಸ್ವಭಾವವನ್ನು ಎತ್ತಿತೋರಿಸುತ್ತದೆ ; ಅದೇ ಸಮಯಕ್ಕೆ ಮತ್ತೊಬ್ಬ ಗೆಳೆಯ/ತಿ ಬಂದರೆ ಅಡ್ಜಸ್ಟ್ ಆಗದು, ಸೀಟ್ ಬಿಟ್ಟುಕೊಡಲು ಮನಸ್ಸು ಒಪ್ಪದು; ಅದೇ ಆ ತಮ್ಮ ಸಂಬಂಧಿ, ದೂರದ ನೆಂಟರು, ಊರಿನ ಗುರು-ಹಿರಿಯರು ಬಂದರೆ – ಪಕ್ಕದಿ ಕುಳಿತ ಗೆಳೆಯ/ತಿಗೆ ಹೇಳಿ ನಮ್ಮ ಬಂಧುಗಳು, ಗುರುಗಳು, ನೆಂಟರು ಇವರು ಎಂದ್ಹೇಳಿ ಇಬ್ಬರೂ ಎದ್ದು ನಿಂತು ಅವರಿಗೆ ಸೀಟ್ ಬಿಟ್ಟುಕೊಳ್ಳುತ್ತಾರೆ ಎಂದುಕೊಳ್ಳಿ, ಪರವಾಗಿಲ್ಲ ನೀವು ಕೂಡಿ ಅಂದರೆ ಇಲ್ಲ ಇಲ್ಲ ನೀವು ಕೂಡಿ ಎಂದು ತಾವು ಎದ್ದು ನಿಂತು ಅವರನ್ನು ಕೂಡಿಸುತ್ತಾರೆ, ಇಲ್ಲಿ ಕೆಲಸ ಮಾಡಿದ್ದು ಹೊಂದಾಣಿಕೆ ಅಲ್ಲ ಅದು ಪ್ರೀತಿ-ವಿಶ್ವಾಸದ ಬಂದವಾಗಿದೆ.
ಗಂಡ-ಹೆಂಡತಿ ದೂರಾಗಬಹುದು, ತಂದೆ-ತಾಯಿಯರನ್ನು ಮಕ್ಕಳು ದೂರಮಾಡಬಹುದು ಅವರಲ್ಲಿ ಹೊಂದಾಣಿಕೆಯ ಕೊರತೆಯಿದೆ, ತಂದೆ-ತಾಯಿ ಮಕ್ಕಳನ್ನು ಯಾವತ್ತೂ ದೂರಮಾಡಲಾರರು, ದೂರ ಮಾಡಿದ್ದು ಇತಿಹಾಸದಲ್ಲಿ ಇದುವರೆಗೂ ದಾಖಲಾಗಿಲ್ಲ ; ಯಾಕಂದರೆ ಅವರಲ್ಲಿ ಹೊಂದಾಣಿಕೆಯ ಜೊತೆಗೆ ಬಿಡಿಸಲಾಗದ ನಂಟಿದೆ, ಮಮತೆ ವಾತ್ಸಲ್ಯದ ಬಂಧವಿದೆ. “life is not a adjustment it is a attachment or Life is not a compromise, it is an unbreakable sacred bond based on love and affection”


Leave a Reply

Back To Top