ʼಆಣೆ ಮಾಡಿ ಹೇಳತಿನಿ ನಾನು ನಿನ್ನವಳುʼ ಜಯಶ್ರೀ.ಜೆ.ಅಬ್ಬಿಗೇರಿ ಅವರ ಲಹರಿ

ಹೇ, ತುಂಟ ಕೃಷ್ಣ
ನಾನು ನೀನು  ಬೇರೆ ಅಲ್ಲ ಇನ್ನು ಅಂತ ಅದು ಯಾರನ್ನು ಕೇಳಿ ನಿರ್ಧರಿಸಿದೆನೋ ನನಗೆ ತಿಳಿಯುತ್ತಿಲ್ಲ.  ನಾನೇ ನೀನು ನೀನೇ ನಾನು ಆಗುವ ಸಮಯ ಬಂದಿದೆ ಇನ್ನು. ಹೃದಯ ಎರಡಿದ್ದರೂ ಮಿಡಿತ ಒಂದೇ. ಕಡಲು ನೀನಾದರೆ ದಡಕ್ಕೆ ಅಪ್ಪಳಿಸುವ ಅಲೆ ನಾನು. ನಿನ್ನ ಮಾತೇ ನನಗೆ ಕೊನೆ ಮಾತು. ಅದೆಲ್ಲೋ ನಿನ್ನ ದನಿ ಕೇಳಿದರೆ ಮೋಡ ಕಂಡ ನವಿಲಿನಂತೆ ಕುಣಿಯುವುದು ಮನ. ಒಮ್ಮೊಮ್ಮೆ ಕೇಳುವೆನು ನನ್ನಷ್ಟಕ್ಕೆ  ನಾನೇ ಅದೆಲ್ಲಿದ್ದೆ ನೀ ಇಷ್ಟು ದಿನ. ಅರಳಿದ ಹೂಗಳ ನಡುವೆ ಹೂವಿನಂತೆ ಕಾಮನ ನಗು ಮಿಂಚುತ್ತಿತ್ತು. ಕರೆದೆ. ಕಣ್ಮಿಟುಕಿಸಿ ಸನ್ನೆ ಮಾಡಿದ್ದು ಕಣ್ಣಿಗೆ ಬಿದ್ದಾಗಲೇ ದಕ್ಕಿತು ಎನಗೆ ಪುಣ್ಯ ದಿನ. ಆ ಕ್ಷಣದಲ್ಲೇ ಶೃತಿ ಮಾಡಿಟ್ಟ ವೀಣೆಯಂತೆ ಆದೆನು.

ಏಳೇಳು ಜನುಮದಲ್ಲಿ ಜನುಮದ ಜೋಡಿಗಳಾಗಿದ್ದೇವೆನೋ ಎನ್ನುವಂತೆ ಆ ಪೂರ್ಣ ಚಂದಿರ ರಾತ್ರಿಯಲ್ಲಿ ಕೈಯಲ್ಲಿ ಕೈ ಹಾಕಿ ನಸುನಗುತ್ತ ತುಸುದೂರ ಸಾಗಿದೆವು. ನೀ ಹೇಳಿದ ಗಪದ್ಯದಲ್ಲಿ ‘ನಲ್ಮೆಯ ನಲ್ಲೆ ನೀನಿಲ್ಲದಿದ್ದರೆ ನಾ ಇಲ್ಲವೆಂದು ತಿಳಿದುಕೊಳ್ಳೆ. ನಲುಮೆಯ ಕ್ಷಣಗಳೆಲ್ಲ ಕಳೆಯೋದು ನಿನ್ನೊಂದಿಗೆನೆ ಕೇಳಿಸಿಕೊಳ್ಳೆ. ನಾ ಕೊಟ್ಟ ಸಿಹಿ ಮುತ್ತುಗಳ ಲೆಕ್ಕವಿಡದೇ, ಎಣಿಸದೇನೆ ಕೊಡುವಿಯೇನೆ ಮರಳಿ? ಇಂತಹ  ಸಿಹಿ ಸಿಹಿ ನೂರಾರು ಕವಿತೆ ಕೇಳಿ ಮನದಲ್ಲಿ ಕಚಗುಳಿ ಇಟ್ಟಂತಾಯಿತು ಅದೇ ಗಳಿಗೆಗೆ ನಿನ್ನಿಂದ ಮೊದಲ ಸ್ಪರ್ಶ. ಆಹಾ! ದೇಹದಲ್ಲಿನ ಪ್ರತಿಯೊಂದು ನರನಾಡಿಗಳು ಬೀಸುವ ತಂಗಾಳಿಗೆ ನವಿರಾಗಿ ಅಲ್ಲಾಡಿದವು ಹೂವಿನಂತೆ.  ಸುತ್ತಮುತ್ತ ಮುತ್ತಿಕ್ಕುತ್ತಿದ್ದ ತೋಳುಗಳ ಬಂಧ  ಕಂಡು ಬಾನಲ್ಲಿ ಚಂದಮಾಮ ನಾಚಿ ಮೋಡದಲ್ಲಿ ಮರೆಯಾದ.
ಮೃದುವಾದ ಬೆರಳುಗಳಿಂದ ನಿನ್ನ ಬೆರಳುಗಳ ಸ್ಪರ್ಶ ಅನುಭವಿಸಿದೆ. ಕೈ ಬಿಸಿಗೆ  ಹಣೆ ಪೂರ್ತಿ ಬೆವರಿ ಹೋಯಿತು.

ಬೇಲೂರಿನಲ್ಲಿರುವ ಶಿಲಾಬಾಲಿಕೆಯನ್ನು ಮೀರಿಸುವ ಚೆಲುವಿಗಿಂತ ಚೆಲುವೆ. ಹೊಳೆಯುವ ಕಂಗಳು, ನಕ್ಕಾಗ ಗುಳಿ ಬೀಳುವ ಕೆನ್ನೆಗಳು, ಅಚ್ಚು ಬಿಳುಪಿನ ಸೆಲ್ವಾರಿನಲ್ಲಿ, ಕಿವಿಯಲ್ಲಿರುವ ಕೆಂಪು ವಜ್ರದ ಸಿಂಗಾರದ ಲೋಲಕುಗಳು, ತುಟಿಯಂಚಿನಲ್ಲಿರುವ ತುಂಟ ನಗೆ ನಿನಗೆಂದೇ ಹೇಳಿ ಮಾಡಿಸಿದಂತಿವೆ ಎಂದೆ. ಆಹಾ! ಆ ದೇವಲೋಕದ ಅಪ್ಸರೆಯನ್ನು ಮೀರಿದ ನಿನ್ನಂದ ಹೊಗಳಲು ಪದಕೋಶಗಳಲ್ಲಿ ಪದಗಳು ಇಲ್ಲವೆ ಇಲ್ಲ. ಎನ್ನುತ್ತ ನಿಧಾನಕ್ಕೆ ನಡೆದುಕೊಂಡು ಬಂದು ನನ್ನೆದುರು ನಿಂತುಕೊಂಡು ನನ್ನನ್ನೇ ದಿಟ್ಟಿಸುತ್ತಿದ್ದ ಕಂಗಳ ನೋಟ ಇನ್ನು ಸ್ವಲ್ಪ ಕೆಳಗೆ ಜಾರಿತು. ಬೆಕ್ಕಿನ ಕಣ್ಣಿನ ಆ ನೋಟಕ್ಕೆ ನಾಚಿ ನಾನು ದುಪ್ಪಟ್ಟಾದಿಂದ ಎದೆಯನ್ನು ಮುಚ್ಚಿಕೊಂಡೆ.

ಆಗ ನೀನು ಒಂದಡಿ ಮುಂದಿಟ್ಟು ಬರಸೆಳೆದೆ. ಒಂದಿಂಚೂ ಜಾಗ ಬಿಡದಷ್ಟು ಹತ್ತಿರವಾದೆ, ಇಬ್ಬರ ಹೃದಯ ಬಡಿತಗಳ ಡವಡವ ಏರಿತ್ತು. ಕಿವಿಗೆ ಕೇಳಿಸುವಷ್ಟು ಜೋರಾಗಿತ್ತು. ಮೈಗೆ ಪೂಸಿದ ಸುಗಂಧದ ಸುವಾಸನೆ ಘಮ್ಮೆಂದು ಬರುತ್ತಿತ್ತು. ನಿಶ್ಚಲ ಹಸಿರಿನ ಹಾಲು ಬೆಳದಿಂಗಳಿನ ಆವರಣದಲ್ಲಿ ಕೆಲಕ್ಷಣ ವಿಶಿಷ್ಟ ತಾಜಾತನ, ಜೀವಂತಿಕೆಯನ್ನು ಸೂಸುವ ಬಿಸಿ ಅನುಭವ ಕಲುಕಿತು. ನನ್ನ ದಟ್ಟವಾದ  ನೀಳ ಕೇಶ ರಾಶಿಯಲ್ಲಿ ಕೈ ಹಾಕಿದಾಗ ತೋಳಲ್ಲಿ ಬಂಧಿಯಾಗಿ ನಿನ್ನನ್ನೇ ನೋಡುತ್ತ ದಂಗಾದೆ.
ಹಿತವಾದ ಅಪ್ಪುಗೆ ಸಿಹಿ ಚುಂಬನ ಇನ್ನು ಬೇಕೆನಿಸಿತ್ತಾದರೂ ಇನ್ನಷ್ಟು  ಮುಂದುವರೆದರೆ ನಿಯಂತ್ರಣ ಕಳೆದುಕೊಳ್ಳುತ್ತೇನೆ ಎಂದೆನಿಸಿತು. ಇದೆಲ್ಲ ಹೆಣ್ಣು ಜೀವಕ್ಕೆ ತಾನೆ ಅಪಾಯ ಎನ್ನುತ್ತ ಸೌಮ್ಯವಾಗಿ ತೋಳ ತೆಕ್ಕೆಯಿಂದ ಬಿಡಿಸಿಕೊಂಡೆ. ಅಲ್ಲಿಂದ ಹೊರಡುವುದಕ್ಕೆ ಅನುವಾದೆ. ಕೂಲಾಗಿ ನನ್ನ ಹತ್ತಿರ ಬಂದು ನನ್ನನ್ನು ತಡೆಯಲೆತ್ನಿಸಿದೆ. ಏನು ಮಾಡಬೇಕೆಂದು ತಿಳಿಯದೆ ಕೆನ್ನೆಗೆ ಲೊಚ ಲೊಚ ಸಿಹಿ ಮುದ್ರೆಗಳನ್ನೊತ್ತಿ ಅಲ್ಲಿಂದ ಪಾರಾದೆ.

ಅದೆಲ್ಲ ನೆನೆದರೆ ಈಗಲೂ ಮೈ ತುಂಬ ಸೌಮ್ಯವಾದ ನಡುಕ ಹುಟ್ಟಿಕೊಳ್ಳುತ್ತದೆ.
ನೀನು ಐದು ಮುಕ್ಕಾಲು ಅಡಿ ಎತ್ತರದ ಹುಡುಗ. ಕ್ವೆಟ್ ಹ್ಯಾಂಡಸಮ್ ಆ್ಯಂಡ್ ಚಾರ್ಮಿಂಗ್ ಯಂಗ್ ಬಾಯ್. ಮುಂಜಾನೆ ಹೊಳಪಿನಂತೆ ಮುಸುಕಿನ ಮುಸ್ಸಂಜೆಯಂತೆ. ಶುದ್ಧ ಅಮೃತಶಿಲೆಯಂತೆ ಇರುವ ನೀನು ಯೌವನದ ಉತ್ತುಂಗದಲ್ಲಿರುವ ಹುಡುಗಿಯರಿಗೆ  ಕಾಡುವ ಮಧುರ ಸೌಂದರ್ಯದಂತಿರುವೆ.

ನಿನ್ನ ಚಿನ್ನದ ಮೈ ಬಣ್ಣಕ್ಕೆ ಹತ್ತಾರು ವರ್ಷ ಜಿಮ್ ಮಾಡಿದ ಕಟ್ಟುಮಸ್ತಾದ ದೇಹಕ್ಕೆ ಫಟ್ ಅಂತ ಯಾವ ಹುಡುಗಿಯಾದರೂ ಬೀಳುತ್ತಿದ್ದಳು. ಅಂತಹ ಮಾಯಗಾರ ಸೊಗಸುಗಾರ ನೀನು.  ಜಲಪಾತದಂತಹ ನಿನ್ನ ಕೂದಲಿಗೆ ಮರುಳಾಗದವರಿಲ್ಲ. ನಗು ತುಂಟತನ ನೀ ಜೊತೆಗಿದ್ದರೆ.ಕಣ್ಣೆದುರಿಗೆ ಹುಣ್ಣಿಮೆ ಚಂದಿರನಿದ್ದಂತೆ. ಚಂದ್ರನಿಗಿಂತ ಹೆಚ್ಚು ಆರಾಧ್ಯ. ಹದಿಹರೆಯದ ವಯಸ್ಸು ದಾಟಿದರೂ ನಿನ್ನಂತವನನ್ನು ಇನ್ನು ನೋಡಿಲ್ಲ ಈ ಕಣ್ಣು.

ಒಂದೇ ಒಂದು ಸಲ ಮನ್ನಿಸಿ ಬಿಡು. ನೀನೇ ಹೇಳಿದಂತೆ ಅರಿಯದೇ ಕಳೆದ ಮರೆಯದೇ ಇರುವ ಆ ನಲುಮೆಯ ಕ್ಷಣಗಳ ಮರಳಿ ಕೊಡುವೆಯಾ ಜೀವದ ಗೆಳೆಯ? ತಿರುಗಿ ಬರುವೆಯಾ ಇನಿಯ? ಮುಗಿಯದ ಪ್ರಣಯದ ಪುಸ್ತಕಕ್ಕೆ ಮುನ್ನುಡಿ ಬರೆದು ಮುಂದಿನ ಪುಟಗಳಲ್ಲಿನ ದೀರ್ಘ ಆಲಿಂಗನ, ಪ್ರೀತಿಯ ರೋಮಾಂಚನ, ಸಣ್ಣ ನಡುಕದ ಪುಳಕಕ್ಕೆ ಕುತೂಹಲ ಮೂಡಿಸಿ ಅದೆಲ್ಲಿ ಮಾಯವಾಗಿರುವೆ ಮಾಯಗಾರ?

ಈ ಹೆಣ್ಣು ಜೀವ ನಾಚಿ ಮೊಗ್ಗಾಗಿದೆ. ಈ ಮೊಗ್ಗನ್ನು ಹೂವಾಗಿಸೆಂದು ಕೇಳದೆ ಈ ಒಲವಿನೋಲೆ ಮುಗಿದಿದೆ. ಚಂದಿರ ಮೋಡದ ಮರೆಯಲ್ಲಿ ಅವಿತು ಕಪ್ಪು ಕವಿದಿದೆ ಎದೆಯ ಕದ ತೆರೆದಿದೆ. ಬೆಂಬಿಡದ ನೆನಪು ಹಿತವಾಗಿ ಕಾಡುತಿದೆ.
ತಿರುವಿನಲ್ಲಿ ಹೀಗೆ ಮರೆಯಾದರೆ ಹಿತವಾದ ವಿರಹದ ಯಾತನೆ ತಡೆಯುವುದಾದರೂ ಹೇಗೆ ಹೇಳು ಕೃಷ್ಣ. ನಿನ್ನೊಂದಿಗೆ ಕಳೆದ ಸವಿನೆನಪುಗಳ ಹೆಕ್ಕಿ ಹೆಕ್ಕಿ ನೆನಪಿಸುತ್ತಿದೆ ನೆನಪು.

ಸಾವಿರ ಮೈಲಿ ನಡೆದರೂ ಮನದ ಚೀಲದಲ್ಲಿ ನಿನ್ನ ತುಂಬಿಕೊಂಡೇ, ನಿನ್ನ ಸ್ಪಷ್ಟವಾದ ಹೆಜ್ಜೆಗಳ ಸದ್ದು ಕೇಳಿಯೇ ನಡೆದಿದ್ದೇನೆ. ನೆನಪುಗಳ ಪೆಟ್ಟಿಗೆ ನಿರಂತರ ಸದ್ದಿನ ಕದಲಿಕೆ ತಡೆಯಲಾರೆ ಗೆಳೆಯ.

ಅಗಾಧವಾಗಿ ಪ್ರೀತಿಸಿದ ನೀನು ಯಾವ ಕ್ಷಣದಲ್ಲಿಯಾದರೂ
ಬಳಿ ಬಂದು ಬಿಡುವೆಯೆಂದು ಕಾಯುತ್ತಿರುವೆ.
ನೀನಂದು ಸಣ್ಣಗೆ ಗುನುಗುತ್ತಿದ್ದ ‘ಇನ್ನುನು ಬೇಕಾಗಿದೆ ಒಲವು ಇನ್ನುನು ಬೇಕಾಗಿದೆ. ಸೋಕಿ ನಿನ್ನ ಮೌನ ತಂಗಾಳಿನು ಹಾಡಾಗಿದೆ. ನನಗೆ ಇನ್ನುನು ಹೇಳೋದಿದೆ ನನಗೆ ಇನ್ನೂನು ಕೇಳೋದಿದೆ.’ ಹಾಡನ್ನು ಗುನುಗುತ್ತಲೇ ಇರುವೆ. ಸರಸ ವಿರಸ ಏನೇ ಇದ್ದರೂ ಜೊತೆಗೆ ನೀನೇ ಇರು. ನಿನ್ನ ನೆನಪಲ್ಲಿ ದಿಂಬನ್ನು ಅಪ್ಪಿಕೊಂಡು ನಿದ್ದೆಗೆ ಜಾರುವುದು ಅಭ್ಯಾಸವಾಗಿ ಹೋಗಿದೆ. ಕಬ್ಬಿಣದಂತಹ ನಿನ್ನ ತೋಳನ್ನು ತಲೆದಿಂಬು ಮಾಡಿಕೊಳ್ಳುವಾಸೆ ಬಲವಾಗಿದೆ.

ಆಣೆ ಮಾಡಿ ಹೇಳತಿನಿ ನಾನು ನಿನ್ನವಳು. ನೀನಿಲ್ಲದ ಅಪರಾ ತಪರಾ ಹೆಜ್ಜೆ ಸಾಕಾಗಿದೆ. ಮನಸೊಳಗೆ ರಿಂಗಣಿಸುವ ಪ್ರೀತಿ ಕುಣಿತ ಬೇಕಾಗಿದೆ. ತುಂಟತನ, ಛೇಷ್ಟೆ, ನಗು ಇನ್ನೂ ಬೇಕಾಗಿದೆ. ಜಗದ ಭಾರವಿಲ್ಲದ ಪ್ರೇಮದ ಹೂದೋಟದಲ್ಲಿ ಚೆಂದದ ಪ್ರಣಯಲೋಕದಲ್ಲಿ ರತಿಕ್ರೀಡೆಯಲ್ಲಿ ಪ್ರತಿ ರಾತ್ರಿ ನಳನಳಿಸುವ ಹುಟ್ಟುಡುಗೆಯಲ್ಲಿ ಸುಂದರ ಚಿಟ್ಟೆಗಳಂತೆ ಹಾರಾಡುವಾ. ಬಂದು ಬಿಡು ನಾನಿದ್ದಲ್ಲಿಗೆ ಏನೂ ನೆಪ ಹೇಳದೆ. ಒಂಟಿ ಹೃದಯದ ವ್ಯಥೆ ಸಾಕಾಗಿದೆ. ಜಂಟಿ ಮನಗಳ ಮಿಲನಕೆ ದೇಹಗಳ ಸಮ್ಮಿಲನಕೆ ಈ ಮೈಮನ ಕಾದಿದೆ. ಕೈಯಲ್ಲಿ ಮಲ್ಲಿಗೆ ಹಿಡಿದು ಬಂದು ಬಿಡು ನಿನ್ನ ನಲ್ಲೆ ಇರುವಲ್ಲಿಗೆ.                                 ನಿನಗಾಗಿ ಕಾಯುತಿರುವ ನಿನ್ನ ರಾಧೆ.  




.

Leave a Reply

Back To Top