ವಿಮರ್ಶೆ

ದೇವರದೇನು ದೊಡ್ಡಸ್ತಿಕೆ ಬಿಡು ನನ್ನ ಗಂಡನ‌ ಮುಂದ


(ಆನಂದ ಕಂದರ ಪದ್ಯವೊಂದರ ಅನ್ವಯಿಕ ವಿಮರ್ಶೆ)

ನಲ್ವಾಡುಗಳು ಆನಂದ ಕಂದರ(ಬೆಟಗೇರಿ ಕೃಷ್ಣಶರ್ಮರ) ಕವಿತಾ ಸಂಕಲನ. ಹೊಸಗನ್ನಡದ ಶ್ರೇಷ್ಠ ಸಂಕಲನಗಳಲ್ಲೊಂದು.ಇ ದರಲ್ಲಿ‌ ಇಪ್ಪತ್ತೊಂದು ಗೀತಗಳಿವೆ.ಇವುಗಳನ್ನು ಜನಪದ ಪ್ರೀತಿಗೀತಗಳು ಎಂದು ಅವರೇ ಕರೆದಿದ್ದಾರೆ.ಹೆಸರೇ ಹೇಳುವಂತೆ ಸಂಕಲನದ ತುಂಬ ಇರುವದು ಹಳ್ಳಿಗರ ಪ್ರೀತಿ‌ಲೋಕವೇ.ಜಾನಪದ ಮುಗ್ಧ ಗಂಡು ಹೆಣ್ಣುಗಳ ಸಹಜ ಪ್ರೀತಿ,ಅವರ ದಾಂಪತ್ಯ ಅಲ್ಲಿನ ಸಹಜ ಸುಂದರ ಲೋಕ ಈ ಕವಿತೆಗಳ ವಸ್ತು.
ಗಂಡು ಹೆಣ್ಣು ಪರಸ್ಪರ ಆಕರ್ಷಣೆಗೊಳಗಾಗುವ ಚಿತ್ರದಿಂದ ಹಿಡಿದು ಅವರ ಮದುವೆ, ಸುಂದರ ದಾಂಪತ್ಯ, ಗಂಡನನ್ನು ಬಿಟ್ಟು ತವರಿಗೆ ಬಂದ ಹೆಣ್ಣುಮಗಳ ವಿರಹ,ಗಂಡನ‌ ಪ್ರೀತಿ‌, ಇನ್ನಿತರ ಹೆಂಗಳೆಯರ ಗಂಡ ಬೆನ್ನು ಹತ್ತಿದಾಗ ಹೆಣ್ಣುಮಗಳು ಪಡುವ ನೋವು,ಹಳ್ಳಿಯ ಹಬ್ಬ ಜಾತ್ರೆಗಳ ಚಿತ್ರ,ತಮ್ಮ ಊರನ್ನು ಜನಪದ ಹೆಣ್ಣುಮಗಳು ಚಿತ್ರಿಸುವ ವೈಭವ ಹೀಗೆ ಅಪ್ಪಟ ಜಾನಪದಿಯ ಲೋಕವೊಂದನ್ನು ಕಟ್ಟಿಕೊಡುವ ಈ ಸಂಕಲನ ಕನ್ನಡದ ಒಂದು ಅಪರೂಪದ ಸಂಕಲನವಾಗಿದೆ.
ಈ ಸಂಕಲನದೊಳಗಿನ ಒಂದು‌ಪದ್ಯ ‘ದೇವರ ದೇವರು ‘ ಎಂಬುದು. ದೇವರ ದೇವರು ಎಂದರೆ ದೇವರಿಗೇ ದೇವರು ಎಂದರ್ಥ. ಯಾವುದೇ ಗರತಿ ತನ್ನ ಗಂಡ ತನ್ನ‌ ಪ್ರೀತಿಯನ್ನು ಇನ್ನೊಂದು ಹೆಣ್ಣಿಗೆ ಹಂಚುವದನ್ನು ಸಹಿಸಲಾರಳು.ಗಂಡನ‌ ಅಖಂಡ ಪ್ರೀತಿಯ ಮುಂದೆ ಲೋಕದ ಯಾವ ಸಿರಿವಂತಿಕೆಯೂ ದೊಡ್ಡದಲ್ಲ.ಬಹುಶಃ ‘ನಿನ್ನ ಗಂಡ ಅಲ್ಲೊಬ್ಬಳ ಕೂಡ ನಗತಿದ್ದ ‘ ಎಂಬ ಹಿರಿಯಳೊಬ್ಬಳ ಮಾತಿಗೆ

ನಕ್ಕರೆ ನಗಲೆವ್ವ ನಗಿ‌ಮುಖದ ಕ್ಯಾದಿಗಿ‌
ನಾ ಮುಡಿದ ಹೂವು ಅವಳೊಂದು
ಗಳಿಗಿ ಮುಡಿಯಲಿ

ಎಂದಿರುವ ಮಾತು ಗರತಿಯೊಬ್ಬಳ‌ ಮಾತಾಗಿರದೆ ಯಾರೋ ಪುರುಷರೇ ಬರೆದು ಸೇರಿಸಿದ ಪದ್ಯ ವಾಗಿರಬೇಕು. ಏಕೆಂದರೆ ಮದುವೆಯಾದ ಯಾವ ಹೆಣ್ಣು ತನ್ನ ಗಂಡನ ಪ್ರೇಮ ಇನ್ನೊಂದು‌ ಹಂಚಿಕೆಯಾಗುವದನ್ನು ಸಹಿಸಲಾರಳು.

ದೇವರ ದೇವರು ಕವಿತೆ ಹೀಗೆ ಆರಂಭವಾಗುತ್ತದೆ.

ದೇವರದೆಂತಾ ದೊಡ್ಡಸ್ತಿಕೆ ಬಿಡು‌
ನನ್ನ ಗಂಡನ ಮ್ಯಾಲ
ನನ್ನ ಹೊರತು ಇನ್ನೊಂದು ಹೆಣ್ಣ ಮ್ಯಾ
ಲಿಲ್ಲ ಅವಗ ಖ್ಯಾಲ

ಹೀಗೆ ತನ್ನಗಂಡನೇ ಶ್ರೇಷ್ಠ ಎನ್ನುವ ಹೆಣ್ಷುಮಗಳು ಆತ ಏಕೆ ಶ್ರೇಷ್ಠ ಎನ್ನುವದನ್ನು ಮುಂದಿನ ಪದ್ಯ ಭಾಗದಲ್ಕಿ ವಿವರಿಸುವದು ಬಹು ಸುಂದರವಾಗಿದೆ.

ಬ್ರಹ್ಮ‌ ನಮ್ಮ ಪರಂಪರೆಯ ಕಥೆಗಳ ಪ್ರಕಾರ ಲೋಕದ ಸೃಷ್ಟಿಕರ್ತ.ಆದರೆ ಆತನಿಗೆ ಸರಸ್ವತಿಯೊಬ್ಬಳೇ ಹೆಂಡತಿಯಲ್ಲ,ಮೂವರೊಂದಿಗೆ ತನ್ನ ಪ್ರೀತಿಯನ್ನು ಆತ ಹಂಚಿಕೊಂಡವನೆಂದು ಜನಪದ ಗರತಿಗೆ ಕೋಪ.ಅಂತೆಯೇ ಆಕೆ

ಬ್ರಹ್ಮದೇವನು ಬಹಳ ಹಿರಿಯನಂತ
ಬುದ್ದಿ ಐತೆ ಅವಗ?
ಮೂರುಜನಾ ಹೆಂಡರು ಬೇಕಾತ್ಯಾಕ
ಪ್ರೀತಿಯ ಬಗಿ ಹ್ಯಾಂಗ?

ಮೂರು‌ ಜನರೊಂದಿಗೆ ಹಂಚಿಕೊಂಡ ಪ್ರೀತಿ ಪ್ರೀತಿಯೇ? ಇದು ಅವಳ ಪ್ರಶ್ನೆ.ಹೃದಯದಲ್ಲಿ ಜಾಗ ಇರುವದೇ ಒಬ್ಬಳಿಗೆ. ಹೆಚ್ಚು ಜನ ಹೇಗೆ ನಿಂತಾರು? ಒಬ್ನಳು ಹೃದಯದಲ್ಲಿ ನೆಲೆಸಿದ ಮೇಲೆ ಇನ್ನಿಬ್ಬರು ನಿಟ್ಟುಸಿರು ಹಾಕುತ್ತಾ ಇರಲೇಬೇಕಲ್ಲವೆ? ತುಂಬ ವಾಸ್ತವಿಕ ಪ್ರಶ್ನೆ ಎತ್ತುವ ಗರತಿಯ ಪ್ರಶ್ನೆ ವೈಜ್ಞಾನಿಕವಾಗಿದೆ.ಒಂದೇ ಸಮಯಕ್ಕೆ ಇಬ್ಬಿಬ್ಬರಿಗೆ ಹೃದಯದಲ್ಲಿ ಜಾಗ ಕೊಡುವ ಗಂಡು ಇರಬಹುದೇ?

 ರಾಮನನ್ನು ಮರ್ಯಾದಾ ಪುರುಷೋತ್ತಮನೆಂದು ಕರೆದ ಸಂಸ್ಕೃತಿ ನಮ್ಮದು.ಆದರೆ ಜನಪದ ಗರತಿಗೆ ರಾಮನೂ ಮೆಚ್ಚಿಕೆಯಿಲ್ಲ .ಏಕೆಂದರೆ ಆತ‌ಮಾಡಿದ ತಪ್ಪು‌ಇದು.

ರಾಮ ರಾಮನಂತ ಹೊಗಳೆ ಹೊಗಳತಾರ
ರಾಮನೇನು ಸುದ್ದ
ಯಾರಮಾತ ಕೇಳಿ ಪ್ರೀತಿಯ ಸತಿಯನ
ಅಡವಿಗೆ ಅಟ್ಟಿದ್ದ

ವಾವ್ ! ಗರತಿಯ ಪ್ರಶ್ನೆಗೆ ವಾಲ್ಮಿಕಿಯೂ ನಿರುತ್ತರ! ಹೌದು, ತುಂಬು ಬಸಿರಿ ಸೀತಯನ್ನು ಕಾಡಿಗೆ ಕಳಿಸಿದ್ದು ಎಂಥ ಮಾನವೀಯ ನಡೆ? .ಅದಕ್ಜೆ ಲಕ್ಷ್ಮೀಶ ಕವಿ ” ಕರುಣಾಳು ರಾಘವ ನಲಿ ತಪ್ಪಿಲ್ಲ” ಎಂದು ವ್ಯಂಗ್ಯವಾಡಿದ್ದು! ಆದರೆ ಸೀತೆ ಬಿಸಿಲು ಬಿಸಿಲು ಎಂದು ಕಾಡಲಿ ಬಳಲುವಾಗ ವಾಲ್ಮೀಕಿ ತಂದೆಯಾಗಿ ಕಾಯ್ದಿದ್ದನ್ನು ಸ್ಮರಿಸುತ್ತಾಳೆ.

ಕೃಷ್ಣನಂತೂ ಹದಿನಾರು ಸಾವಿರ ಹೆಂಡಿರ ! ಅವನ ಬಗೆಗಂತೂ ಗರತಿಗೆ ಗೌರವ ವಿರಲು ಸಾಧ್ಯವಿಲ್ಲ. ಅಂತೆಯೇ ಕೃಷ್ಣನನ್ನು ಖೊಟ್ಟಿ ಎಂತಲೇ ಆರಂಬಿಸುತ್ತಾಳೆ.

ಕೃಷ್ಣನದಂತೂ ಖೊಟ್ಟಿತನವು ನೋ
ಡೆಷ್ಟು ಹೆಂಡರವಗ?
ಹೊಟ್ಟಿ ಉರಿದ ನಾರಿಯರು ಸುಮ್ಮನ$
ಬಿಟ್ಟಾರೆನು ಹಾಂಗ?

ಅವರ ಹೊಟ್ಟೆಯುರಿಯೇ ಅವನ ಸುಖವನ್ನು ಸುಟ್ಟಿರಬೇಕು ಎಂದವಳ ಊಹೆ.

ಶಿವನದಂತೂ ಲೋಕವೇ ಬಲ್ಲ ಕಥೆ.ತಲಿ ಮ್ಯಾಲೊ ಬ್ಬಳು,ತೊಡಿ‌ಮ್ಯಾಲೊಬ್ಬಳು! ಗೌರಿ ಎಂಥ ಚಲುವಿ! ಆದರೂ ಗಂಗೆಯನ್ನು ಶಿವ ತಂದಿಟ್ಟುಕೊಂಡದ್ದು ಗರತಿಗೆ ಅಕ್ಷಮ್ಯ ಅಪರಾಧ .ಅದಕ್ಜೇ ಆಕೆ-

ಹೇಳಬ್ಯಾಡ ಶಿವನೇಳಿಗಿ ಗೌರಿಯ
ಗೋಳು ಗೋಳಿಸಿ ಬಿಟ್ಟಾ
ಹೇಳದೆ ಕೇಳದೇ ತನ್ಬ ಜಡಿಯೊಳಗ
ಗಂಗಿಯ ತಂದಿಟ್ಟಾ

ಗೌರಿಯ ದುರ್ದೈವಕ್ಕೆ ಮರುಗುವ ಜನಪದ ಗರತಿ ಅಂತಹ ಹೆಣ್ಣಿಗೂ ಸವತಿಯನ್ನು ತಂದ ಶಿವನನ್ನು ಜಾಲಾಡಿಸುತ್ತಾಳೆ..ಇನ್ನು ಇಂದ್ರ ನಂತೂ ದೇವಲೋಕದ ಸುಂದರಿಯರನೆಕರನ್ನು ಉಪಪತ್ನಿಯಾಗಿಸಿಕೊಂಡಿದ್ದ.ಆತನದು ಗರತಿಯ ಮಾತಿನಲ್ಲಿ “ಸೂಳೆಯರ ಮ್ಯಾಳ” ! ದೇವೆಂದ್ರನ‌ ಲೋಕಕ್ಕೆ ಗರತಿ ಕೊಟ್ಟ ಹೆಸರು! ಚಂದ್ರನ ಹಾದರದಾಟಕ್ಜೆ ಅವನ ಹೆಂಡತಿ ನಿತ್ಯ ಕಣ್ಣಿರಿಡತಿರಬೇಕು !ಎನ್ನುತ್ತಾಳೆ.

ಇವರೆಲ್ಲ ದೇವರುಗಳು! ಪಾಪ ಅವರ ಹೆಂಡತಿಉರ ಬವಣೆ ಎಂತಹದು ! ಅವರಿಗಿಂತ ತಾನೇ ಪರಮ ಸುಖಿ! ಏಕೆಂದರೆ ತನ್ನ‌ಗಂಡ ಅವರ ಮುಂದೆ ಅಪ್ಪಟ ಚಿನ್ನ. ಗರತಿಯ ಮಾತು ಕೇಳಿ.

ದೇವರಂತ ದೇವರ ಹೆಂಡರಿಗೂ
ಯಾವ ಬವಣೆ ಗೆಳತೀ
ಅವರಿಗೆಲ್ಲ ದೊರೆತಿಲ್ಲ ನನ್ಹಾಂಗ
ಪತಿಯ ಪೂರ್ಣ ಪ್ರೀತಿ!

ಆದ್ದರಿಂದಲೇ ಆಕೆಯ ಗಂಡ ದೇವರಿಗೂ‌ ಮಿಗಿಲು!

ನನ್ನ ರಾಯ ಸರಿ ದೇವರ ದೇವರು
ನಾನು ಅವನ ಗರತಿ –
ನಮ್ಮ ಬಾಳಿನಲಿ ಸ್ವರ್ಗವನ್ನು ಇಳಿ
ಸೇತಿಅವನ ಪ್ರೀತಿ!

ದೇವರಂತಹ ರಾಯನಿಗೇ ತಾನು‌ಗರತಿಯಂಬುದು ಅವಳ ಹೆಮ್ಮೆ! ಆಕೆ ಹೆಮ್ನೆ ಪಡುವದರಲ್ಲೂ ತಪ್ಪಿಲ್ಲ. ಅಂತೆಯೇ ಆಕೆ ಪ್ರಶ್ನಿಸುವದು’ ದೇವರದೆಂತಹ ದೊಡಗಡಸ್ತಿಕೆ ಬಿಡು ನನ್ನ ಗಂಡನ ಮುಂದ’ ಎಂದು! ಇಂತಹ ಅಖಂಡ ಪ್ರೀತಿಯನ್ನು ತಾವಿಬ್ಬರೇ ಹಂಚುಣ್ಣುವ ದಂಪತಿ ಜೋಡಿಗಳ ಸಂತತಿ ಸಾವಿರವಾಗಲೆಂಬುದು ಅವಳ. ಆಶಯ! ಹೆಣ್ಣಿನ ನಲಿವಿನ‌ ಜೊತೆಜೊತೆಗೆ ಗಂಡಂದಿರ ಪ್ರೀತಿಯನ್ನು ಮತ್ತೊಂದು ಹೆಣ್ಣಿನೊಂದಿಗೆ ಹಂಚಿಕೊಳ್ಳಬೇಕಾಗಿ ಬಂದ ದುರ್ದೈವಿ ಹೆಣ್ಣುಮಕ್ಕಳ ನೋವನ್ನು ಪದ್ಯ ಸೂಕ್ಷ್ಮವಾಗಿ ವಿವರಿಸಿದೆ.

ಮುಂಜಾನೆ ಪ್ರೀತಿಸಿ,ಸಂಜೆ ಮದುವೆಯಾಗಿ,ಮರುದಿನ ಡೈವೊರ್ಸಗೆ ನಿಲ್ಲುವ ,ಇಂದಿನ ಅತ್ಯಾಧುನಿಕ ಮನಸುಗಳು ಇಂಥಹ ಕವಿತೆಯನ್ನು ಓದಬೇಕು.ನಲ್ವಾಡುಗಳಲ್ಲೇ ಇರುವ ಗೌಡರ ಸೊಸೆ ಎಂಬ‌ ಪದ್ಯದಲ್ಲಿ ಹೆಣ್ಣಿಗೆ ಗಂಡನ‌ ಪ್ರೀತಿಯೇ ಹಂಚಿಕೆಯಾದ ಮೇಲೆ ಯಾವ ಸಿರಿವಂತಿಕೆ ಇದ್ದರೇನು ? ಎಂದು ಪ್ರಶ್ನಿಸುವ ಸಾಲುಗಳಿವೆ.
ಹೆಣ್ಣಿಗೆಗಂಡಿನ ,ಗಂಡಿಗೆ ಹೆಣ್ಣಿನ ಸಂಪೂರ್ಣ ಪ್ರೀತಿಯೊಂದೇ ಆಸರೆ ಎಂದು ಸಾರುವ ಇಂತಹ ಅಪರೂಪದ ಪದ್ಯ ಮತ್ತೆ ಮತ್ತೆ ಓದಬೇಕಲ್ಲವೇ?

**********

ಡಾ ವೈ.ಎಂ.ಯಾಕೊಳ್ಳಿ

Leave a Reply

Back To Top